ಉಳ್ಳಾಲ ಉರೂಸ್ ವೇದಿಕೆಯಲ್ಲಿ ಭಾರತದ ಸೈನ್ಯಕ್ಕಾಗಿ ವಿಶೇಷ ಪ್ರಾರ್ಥನೆ
ಉಳ್ಳಾಲ ಮೇ 12: ಉಲ್ಲಾಲ ಸಯ್ಯದ್ ಮದನಿ ದರ್ಗಾ ಶರೀಫ್ ನಲ್ಲಿ ಕಳೆದ ಎರಡು ವಾರದಿಂದ ಉರೂಸ್ ಕಾರ್ಯಕ್ರಮ ನಡೆಯುತ್ತಿದೆ. ಈ ವಿಶೇಷ ಸಂದರ್ಭದಲ್ಲಿ ಭಾರತೀಯ ಸೈನ್ಯಕ್ಕಾಗಿ, ದೇಶದ ಐಕ್ಯತೆ ಮತ್ತು ಅಖಂಡತೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಸುನ್ನಿ ಯುವಜನ ಸಂಘಟನೆಯ ಮುಖಂಡ ಅಬೂಬಕ್ಕರ್ ಮೋಂಟುಗೋಲಿ ಅವರು ವಿಶೇಷ ಉಪನ್ಯಾಸ ನೀಡಿದರು. ಅವರು ಮಾತನಾಡುತ್ತಾ ದೇಶದ ಸುರಕ್ಷತೆ, ಏಕತೆ ಮತ್ತು ಅಖಂಡತೆಯನ್ನು ರಕ್ಷಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ನಮ್ಮ ಸೇನೆಯ ಜವಾನರು ಮತ್ತು ಅಧಿಕಾರಿಗಳು, ಬೇಹುಗಾರಿಕಾ ತಂಡ ದೇಶದ ರಕ್ಷಣೆಗಾಗಿ ಜೀವದ ಹಂಗು ತೊರೆದು ಹೋರಾಡುತ್ತಿದೆ. ಅವರೆಲ್ಲರನ್ನು ಸರ್ವಶಕ್ತನು ರಕ್ಷಿಸಲಿ ಎಂದರು.
ಸೈಯದ್ ಮದನಿ ಕಾಲೇಜಿನ ಪ್ರೊಫೆಸರ್ ನೌಮಾನ್ ನೂರಾನಿ ಉಸ್ತಾದ್ ರವರು ಮಾತನಾಡುತ್ತಾ ಭಾರತ ಪಾಕಿಸ್ತಾನ ಗಡಿಯಲ್ಲಿ ಈಗಲೂ ಸಂದಿಗ್ದ ವಾತಾವರಣವಿದೆ. ಈ ಭಾಗದಲ್ಲಿ ಶಾಶ್ವತವಾಗಿ ಶಾಂತಿ ನೆಲೆಸಲಿ ಎಂದು ಪ್ರಾರ್ಥಿಸಿದರು. ದೇಶದ ಯೋಧರಿಗೆ ಭಗವಂತನು ಶಕ್ತಿ ಸಾಮರ್ಥ್ಯ ನೀಡಲಿ ಎಂದರು.
ಅಧ್ಯಕ್ಷತೆ ವಹಿಸಿದ ಉಲ್ಲಾಳ ಸೈಯದ್ ಮದನಿ ದರ್ಗಾ ಶರೀಫ್ ಅಧ್ಯಕ್ಷರಾದ ಬಿಜೆ ಹನಿಫ್ ಹಾಜಿ ಅವರ ಮಾತನಾಡಿ. ಸೇನಾನಿಗಲು ದೇಶಕ್ಕಾಗಿ ಪ್ರತಿಬಾರಿ ಬಲಿದಾನ ನೀಡುತ್ತಿದ್ದಾರೆ. ದೇಶದ ಭದ್ರತೆಗಾಗಿ ಅವರ ತ್ಯಾಗ ಎಂದಿಗೂ ಮರೆಯಲಾಗದಂತವು. ದೇಶದ ಎಲ್ಲ ಧರ್ಮ ಬಾಂಧವರು ಅಖಂಡತೆಯನ್ನು ಉಳಿಸಲು ಕೈಜೋಡಿಸಬೇಕು. ಭಯೋತ್ಪಾದಕರ ವಿರುದ್ಧ ಹೋರಾಟದ ಬಗ್ಗೆ ಸರ್ಕಾರದ ತೀರ್ಮಾನಗಳನ್ನು ಬೆಂಬಲಿಸಬೇಕು. ದೇಶದ ಭದ್ರತೆ ವಿಷಯ ಬಂದಾಗ ಎಲ್ಲಾ ಪಕ್ಷಗಳು ಮತ್ತು ಸಂಘಟನೆಗಳು ಒಂದಾಗಿ ಒಂದೇ ದನಿಯಲ್ಲಿ ಈಗ ಮಾತನಾಡುತ್ತಿರುವುದು ಶ್ಲಾಘನೀಯ ಎಂದರು
ವೇದಿಕೆಯಲ್ಲಿ ದರ್ಗಾ ಶರೀಫ್ ಪದಾಧಿಕಾರಿಗಳು, ಊರಗಣ್ಯರು, ಧಾರ್ಮಿಕ ಮುಖಂಡರು ಸಹಿತ ಸಾವಿರಾರು ಜನರು ಯೋಧರಿಗಾಗಿ ಮಾಡಿದಂತಹ ಪ್ರಾರ್ಥನೆಯಲ್ಲಿ ಧ್ವನಿಗೂಡಿಸಿದರು. ದರ್ಗಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಸಿಹಾಬುದ್ದೀನ್ ಸಕಾಫಿಯವರು ಸ್ವಾಗತ ಭಾಷಣ ಮಾಡಿದರು.












