ಮೇ 07, 2025 ರಂದು ಆಪರೇಷನ್ ಸಿಂಧೂರ್ ಕುರಿತು ಪತ್ರಿಕಾಗೋಷ್ಠಿಯಲ್ಲಿ, ಭಾರತವು ತನ್ನ ಪ್ರತಿಕ್ರಿಯೆಯನ್ನು ನಿರ್ದಿಷ್ಟ, ವಿವೇಚನಾಭರಿತ ಮತ್ತು ಉದ್ವಿಗ್ನತೆ ಹೆಚ್ಚಿಸುವ ಉದ್ದೇಶ ಇಲ್ಲದ್ದು ಎಂದು ಕರೆದಿತ್ತು. ಪಾಕಿಸ್ತಾನಿ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡಿಲ್ಲ ಎಂದೂ ನಿರ್ದಿಷ್ಟವಾಗಿ ಹೇಳಲಾಗಿದೆ. ಭಾರತದಲ್ಲಿನ ಸೇನಾ ನೆಲೆಗಳ ಮೇಲೆ ಯಾವುದೇ ದಾಳಿಗೆ ಸೂಕ್ತ ಪ್ರತ್ಯುತ್ತರ ನೀಡಲಾಗುವುದು ಎಂದು ಸಹ ಪುನರುಚ್ಚರಿಸಲಾಯಿತು.

2025ರ ಮೇ 07-08ರ ರಾತ್ರಿ, ಪಾಕಿಸ್ತಾನವು ಡ್ರೋನ್ ಗಳು ಮತ್ತು ಕ್ಷಿಪಣಿಗಳನ್ನು ಬಳಸಿಕೊಂಡು ಅವಂತಿಪುರ, ಶ್ರೀನಗರ, ಜಮ್ಮು, ಪಠಾಣಕೋಟ್, ಅಮೃತಸರ, ಕಪುರ್ತಲಾ, ಜಲಂಧರ್, ಲುಧಿಯಾನ, ಆದಂಪುರ, ಭಟಿಂಡಾ, ಚಂಡೀಗಢ, ನಲ್, ಫಲೋಡಿ, ಉತ್ತರಲೈ ಮತ್ತು ಭುಜ್ ಸೇರಿದಂತೆ ಉತ್ತರ ಮತ್ತು ಪಶ್ಚಿಮ ಭಾರತದ ಹಲವಾರು ಸೇನಾ ನೆಲೆಗಳ ಮೇಲೆ ದಾಳಿ ಮಾಡಲು ಪ್ರಯತ್ನಿಸಿತು. ಇವುಗಳನ್ನು ಇಂಟಿಗ್ರೇಟೆಡ್ ಕೌಂಟರ್ ಯುಎಎಸ್ ಗ್ರಿಡ್ ಮತ್ತು ವಾಯು ರಕ್ಷಣಾ ವ್ಯವಸ್ಥೆಗಳಿಂದ ನಾಶಪಡಿಸಲಾಯಿತು. ಪಾಕಿಸ್ತಾನದ ದಾಳಿಯನ್ನು ಸಾಬೀತುಪಡಿಸುವ ಈ ದಾಳಿಯ ಅವಶೇಷಗಳನ್ನು ಈಗ ಹಲವಾರು ಸ್ಥಳಗಳಿಂದ ವಶಪಡಿಸಿಕೊಳ್ಳಲಾಗುತ್ತಿದೆ.

ಇಂದು ಬೆಳಿಗ್ಗೆ ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನದ ಹಲವಾರು ಸ್ಥಳಗಳಲ್ಲಿ ವಾಯು ರಕ್ಷಣಾ ರಾಡಾರ್ ಗಳು ಮತ್ತು ವ್ಯವಸ್ಥೆಗಳನ್ನು ಗುರಿಯಾಗಿಸಿ ದಾಳಿ ಮಾಡಿದವು. ಭಾರತದ ಪ್ರತಿಕ್ರಿಯೆಯು ಪಾಕಿಸ್ತಾನದ ಮಾದರಿಯಲ್ಲೇ ತೀವ್ರತೆಯಿಂದ ಕೂಡಿತ್ತು. ಲಾಹೋರ್ ನಲ್ಲಿರುವ ವಾಯು ರಕ್ಷಣಾ ವ್ಯವಸ್ಥೆಯನ್ನು ನಾಶಪಡಿಸಲಾಗಿದೆ ಎಂದು ವಿಶ್ವಾಸಾರ್ಹವಾಗಿ ತಿಳಿದುಬಂದಿದೆ. ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ, ಬಾರಾಮುಲ್ಲಾ, ಉರಿ, ಪೂಂಚ್, ಮೆಂಧರ್ ಮತ್ತು ರಜೌರಿ ವಲಯಗಳಲ್ಲಿ ಪಾಕಿಸ್ತಾನವು ನಿಯಂತ್ರಣ ರೇಖೆಯುದ್ದಕ್ಕೂ ಮೋರ್ಟಾರ್ ಗಳು ಮತ್ತು ಭಾರೀ ಕ್ಯಾಲಿಬರ್ ಫಿರಂಗಿಗಳನ್ನು ಬಳಸಿ ಅಪ್ರಚೋದಿತ ಗುಂಡಿನ ದಾಳಿಯನ್ನು ತೀವ್ರಗೊಳಿಸಿದೆ.

ಪಾಕಿಸ್ತಾನದ ಗುಂಡಿನ ದಾಳಿಯಿಂದಾಗಿ ಮೂವರು ಮಹಿಳೆಯರು ಮತ್ತು ಐವರು ಮಕ್ಕಳು ಸೇರಿದಂತೆ ಹದಿನಾರು ಅಮಾಯಕ ಜೀವಗಳು ಬಲಿಯಾಗಿವೆ. ಇಲ್ಲಿಯೂ ಸಹ, ಪಾಕಿಸ್ತಾನದಿಂದ ಬಂದಿರುವ ಮೋರ್ಟಾರ್ ಮತ್ತು ಫಿರಂಗಿ ಗುಂಡಿನ ದಾಳಿಯನ್ನು ನಿಲ್ಲಿಸಲು ಭಾರತವು ಪ್ರತಿಕ್ರಿಯಿಸಬೇಕಾಯಿತು.

ಪಾಕಿಸ್ತಾನದ ಸೇನೆಯು ಗೌರವಿಸಿದರೆ, ಉದ್ವಿಗ್ನತೆಯನ್ನು ಹೆಚ್ಚಿಸುವುದಿಲ್ಲ ಎಂಬ ತಮ್ಮ ಬದ್ಧತೆಯನ್ನು ಭಾರತೀಯ ಸಶಸ್ತ್ರ ಪಡೆಗಳು ಪುನರುಚ್ಚರಿಸಿವೆ.

 

*****

(ಪ್ರಕಟಣೆ ಐ.ಡಿ.: 2127718)