ದೇಶ ವಿಭಜನೆಯಾದಾಗ ಮಂಗಳೂರು ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಿದ್ದಾರೆಯೇ..?
ಪಾಕಿಸ್ತಾನ ಎನ್ನುವುದು ಧರ್ಮಾಧಾರಿತವಾಗಿ ಸ್ಥಾಪನೆಯಾದ ದೇಶ. ಆದರೆ ಅದನ್ನು ಅಂದು ಹಿಂದೂಗಳಿಗಿಂತಲೂ ಹೆಚ್ಚಾಗಿ ಮುಸಲ್ಮಾನರೇ ವಿರೋಧಿಸಿದ್ದರು. ದಕ್ಷಿಣ ಭಾರತದ ಕಡೆಯಿಂದ ಧರ್ಮಾಧಾರಿತ ದೇಶವಾದ ಪಾಕಿಸ್ತಾನಕ್ಕೆ ಹೋದವರು ತೀರಾ ಕಡಿಮೆ. ಅಂದು ಪಾಕಿಸ್ತಾನವನ್ನು ತಮ್ಮ ನೆಲೆಯಾಗಿ ಆಯ್ದುಕೊಂಡವರಲ್ಲಿ ದೊಡ್ಡ ಸಂಖ್ಯೆಯ ಮುಸ್ಲಿಮರು ಈಗಿನ ಪಾಕಿಸ್ತಾನದ ವ್ಯಾಪ್ತಿಯಲ್ಲಿ ಇದ್ದವರು ಮತ್ತು ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ಮಧ್ಯ ಪ್ರದೇಶದಂತಹ ರಾಜ್ಯದ ಮುಸ್ಲಿಮರು. ಅವರಲ್ಲಿ ಬಹುತೇಕರ ಆಯ್ಕೆ ಸಂತೋಷದ ಆಯ್ಕೆಯಾಗಿರಲಿಲ್ಲ. ಅಸಹಾಯಕತೆಯ ಆಯ್ಕೆಯಾಗಿತ್ತು.ಮೊದಲನೆಯದಾಗಿ ಅತ್ತ ಪಾಕಿಸ್ತಾನದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದ್ದಾಗ ಇತ್ತ ಇಂಡಿಯಾದಲ್ಲಿ ಮುಸ್ಲಿಮರ ಮೇಲೆ ದೌರ್ಜನ್ಯ ನಡೆಯುತ್ತಿತ್ತು. ಆದುದರಿಂದ ಮನುಷ್ಯರನ್ನು ಗಡಿಯಿಂದಾಚೆಗೆ ಮತ್ತು ಗಡಿಯಿಂದೀಚೆಗೆ ಸಾಗಿಸುವಂತಹ ಕ್ರೌರ್ಯ ನಡೆಯಿತು.ಯಾರಿಗೇ ಆದರೂ ತಾವು ಹುಟ್ಟಿದ ನೆಲ, ಮನೆ ಮಠ, ಜಮೀನು ಇತ್ಯಾದಿಗಳನ್ನೆಲ್ಲಾ ಏಕಾ ಏಕಿ ಬಿಟ್ಟು ಹೋಗಲು ಮನಸ್ಸಿರುವುದಿಲ್ಲ.
ಅಸಹಾಯಕರಾಗಿ ಪಾಕಿಸ್ತಾನಕ್ಕೆ ಹೋದ ಗಡಿನಾಡ ಗಾಂಧಿ ಖಾನ್ ಅಬ್ದುಲ್ ಗಫ್ಫಾರ್ ಖಾನ್ ಕೊನೆಯವರೆಗೂ ದ್ವಿರಾಷ್ಟ್ರ ಸಿದ್ದಾಂತವನ್ನು ವಿರೋಧಿಸಿದರು.ಇತ್ತ ನಮ್ಮ ಮೌಲಾನಾ ಅಬುಲ್ ಕಲಾಂ ಆಝಾದರೂ ತೀವ್ರವಾಗಿ ವಿರೋಧಿಸಿದ್ದರು. ಗಾಂಧೀಜಿಯ ನೀಲಿ ಕಣ್ಣಿನ ಹುಡುಗನಂತಿದ್ದ ಆಝಾದರು ಗಾಂಧಿ ಅಸಹಾಯಕರಾಗಿ ದೇಶ ವಿಭಜನೆಯ ಕರಾರಿಗೆ ಅಂಕಿತ ಹಾಕಿದ್ದಕ್ಕಾಗಿ ಗಾಂಧೀಜಿಯೊಂದಿಗೆ ಮುನಿಸಿಕೊಂಡಿದ್ದರು.ಕೆಲ ದಿನಗಳ ಕಾಲ ಗಾಂಧೀಜಿಯವರೊಂದಿಗೆ ಮಾತು ಬಿಟ್ಟಿದ್ದರು.ಆ ದಿನಗಳಲ್ಲಿ ಪಾಕಿಸ್ತಾನದತ್ತ ಹೋಗಲು ಸಜ್ಜಾಗಿದ್ದ ಮುಸ್ಲಿಮರನ್ನು ಪಾಕಿಸ್ತಾನಕ್ಕೆ ಹೋಗದಂತೆ ಆಝಾದರು ಹಲವು ತಿಂಗಳುಗಳ ಕಾಲ ಹಗಲೂ ರಾತ್ರಿ ಶ್ರಮಿಸಿ ಮನವೊಲಿಸಿದ್ದರು.ಪ್ರತೀ ಶುಕ್ರವಾರ ಜುಮಾ ನಮಾಝಿನ ನಂತರ ಮುಸ್ಲಿಮರನ್ನು ಪಾಕಿಸ್ತಾನಕ್ಕೆ ಹೋಗದಂತೆ ಮನವೊಲಿಸಲು ವಿವಿದೆಡೆಗಳಲ್ಲಿ ಸಾರ್ವಜನಿಕ ಭಾಷಣಗಳನ್ನು ಮಾಡಿದ್ದರು.ಅವರೊಂದು ಸಭೆಯಲ್ಲಂತೂ ಅಕ್ಷರಶಃ ಅತ್ತೇ ಬಿಟ್ಟಿದ್ದರು.
ಆದರೆ ದಕ್ಷಿಣ ಭಾರತದಲ್ಲಿ ದೇಶ ವಿಭಜನೆಯು ಅಂತಹ ದೊಡ್ಡ ಮಟ್ಟದ ಪರಿಣಾಮ ಬೀರಿರಲಿಲ್ಲ.ಇಡೀ ದಕ್ಷಿಣ ಭಾರತದಲ್ಲಿ ಸ್ವಲ್ಪ ಮಟ್ಟಿಗೆ ಗುಂಪು ಗುಂಪಾಗಿ ಮುಸ್ಲಿಮರು ಪಾಕಿಸ್ತಾನದತ್ತ ಹೋಗಿದ್ದರೆ ಅದು ಹೈದ್ರಾಬಾದಿನಿಂದ ಮಾತ್ರ.
ಹಾಗೆ ನಮ್ಮ ಮಂಗಳೂರಿಂದ ಸುಮಾರು ಇಪ್ಪತ್ತು ಮಂದಿ ದೇಶ ವಿಭಜನೆಯ ಕಾಲದಲ್ಲಿ ಇಂಡಿಯಾ ತೊರೆದು ಪಾಕಿಸ್ತಾನಕ್ಕೆ ಹೋಗಿದ್ದರೆಂದು ಹೇಳಲಾಗುತ್ತದೆ. ಆದರೆ ಅವರ್ಯಾರೂ ಬ್ಯಾರಿಗಳೋ, ಮಾಪ್ಲಾಗಳೋ, ದಃಖನಿ ಭಾಷಿಕ ಮುಸ್ಲಿಮರೋ ಆಗಿರಲಿಲ್ಲ. ಮತ್ತು ಅವರು ಮಂಗಳೂರಿನ ಮೂಲ ನಿವಾಸಿಗಳಾಗಿರಲಿಲ್ಲ.
ಹಾಗೆ ಪಾಕಿಸ್ತಾನಕ್ಕೆ ಹೋದವರೆಲ್ಲರೂ ಗುಜರಾತ್‌ನ ಕಛ್ ಪ್ರದೇಶದಿಂದ ಇಪ್ಪತ್ತನೆಯ ಶತಮಾನದ ಆದಿಭಾಗದಲ್ಲಿ ಮಂಗಳೂರಿಗೆ ಬಂದಿದ್ದ ಮೇಮನರಾಗಿದ್ದರು. ಅದೂ ಕೂಡಾ ಹೆಚ್ಚು ಕಡಿಮೆ ಒಂದೇ ಕುಟುಂಬದವರೆಂದು ಹೇಳಲಾಗುತ್ತದೆ.
ಶುಕೂರ್ ಸೇಟ್ ಎನ್ನುವವರು ಗುಜರಾತ್‌ನ ಕಛ್‌ನಿಂದ ಮಂಗಳೂರಿಗೆ ಬಂದು ಇಲ್ಲಿ ತನ್ನ ಉದ್ಯಮವನ್ನು ಬೆಳೆಸಿದವರು. ಅವರು ಮಂಗಳೂರಿನಲ್ಲಿ ಅದೆಷ್ಟು ಪ್ರಭಾವಿಯಾಗಿದ್ದರೆಂದರೆ 1945ರ ಹೊತ್ತಿಗೆ ಅವರು ಮಂಗಳೂರಿನ ಕೆನರಾ ಚೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರಿಯ ಉಪಾಧ್ಯಕ್ಷರಾಗಿದ್ದರು. ಅವರು ದೇಶವಿಭಜನೆಯ ಕಾಲಕ್ಕೆ ತನ್ನ ಕುಟುಂಬ ಸಮೇತ ಪಾಕಿಸ್ತಾನಕ್ಕೆ ಹೋದರು.ಆದರೆ ಮಂಗಳೂರಿನಲ್ಲಿದ್ದ ಬೇರೆ ಮೇಮನ್ ಮುಸ್ಲಿಮರ್ಯಾರೂ ಪಾಕಿಸ್ತಾನದತ್ತ ಒಲವು ತೋರಿಸಲೇ ಇಲ್ಲ.ಅವರು ಇಲ್ಲೇ ನೆಲೆ ನಿಂತರು.ಅವರ ಉದ್ಯಮಗಳನ್ನು ಬೆಳೆಸುತ್ತಾ ಹೋದರು. ಇಂದಿಗೂ ಅವರ ನಂತರದ ತಲೆಮಾರುಗಳಲ್ಲಿ ದೊಡ್ಡ ಸಂಖ್ಯೆಯವರು ಇಲ್ಲೇ ನೆಲೆ ನಿಂತು ಉದ್ಯಮಗಳನ್ನು ಬೆಳೆಸುತ್ತಾ ಮುಂದುವರಿದ್ದಾರೆ.
ಒಟ್ಟಿನಲ್ಲಿ ಮಂಗಳೂರು ಮೂಲದ ಯಾವೊಬ್ಬ ಮುಸ್ಲಿಮನೂ ಪಾಕಿಸ್ತಾನದತ್ತ ಒಲವು ತೋರಿಸಿ ಹೋಗಿಲ್ಲ.
-ಇಸ್ಮತ್ ಪಜೀರ್












