*ಬಿಜೆಪಿ ಮತ್ತು ಡಾ.ಅಂಬೇಡ್ಕರ್*
-ಡಾ.ಚಮರಂ
—————————–
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸಾಕಷ್ಟು ದಲಿತರ ಮತಗಳನ್ನು ಸೆಳೆಯಲು ಬಿಜೆಪಿಯವರು ಬಹಳ ಕೀಳುತಂತ್ರವೊಂದನ್ನು ಅನುಸರಿಸುತ್ತಿದ್ದಾರೆ. ದಲಿತರನ್ನು ಭಾವನಾತ್ಮಕವಾಗಿ ಮರುಳು ಮಾಡಲು ಈಗ ಬಾಬಾಸಾಹೇಬರ ಕುರಿತು ಬಹಳ ಮೃಧುವಾಗಿ ಮಾತನಾಡತೊಡಗಿದ್ದಾರೆ. ಆದರೆ ಇತಿಹಾಸದ ಪ್ರತೀ ಘಟನೆಗಳನ್ನೂ ಅರಿತಿರುವ ದಲಿತ ಸಮುದಾಯದ ಮುಂದೆ ಬಿಜೆಪಿಯವರ ಈ ಆಟವು ಹಾಸ್ಯಾಸ್ಪದವಾಗಿ ಕಾಣುತ್ತಿದೆ.
ಬಾಬಾಸಾಹೇಬರಿಗೆ ಸಂಬಂಧಿಸಿದ ಜನ್ಮಸ್ಥಳ ಮಹೋ, ಅವರು ವಾಸಿಸಿದ್ದ ದೆಹಲಿಯ ನಂ.26, ಆಲಿಪುರ ರಸ್ತೆ ನಿವಾಸ, ಅವರು ಬೌದ್ದಧಮ್ಮಕ್ಕೆ ಮರಳಿದ ನಾಗಾಪುರದ ದೀಕ್ಷಾಭೂಮಿ ಮತ್ತು ಸಂಸ್ಕಾರ ನಡೆದ ಮುಂಬೈನ ಚೈತ್ಯಭೂಮಿ ಇವುಗಳನ್ನು ಪಂಚತೀರ್ಥಗಳೆಂದು ಹೆಸರಿಸಿ ಅವುಗಳನ್ನು ಅಭಿವೃದ್ಧಿ ಪಡಿಸಿದ ಕೀರ್ತಿ ಬಿಜೆಪಿಯದು. ಬಿಜೆಪಿ ಮಾತ್ರವೇ ಅಂಬೇಡ್ಕರ್ ಅವರನ್ನು ಗೌರವಿಸುತ್ತದೆ ಎಂಬುದನ್ನು ಬಹಳ ಭಾವನಾತ್ಮಕವಾಗಿ ಬಿಂಬಿಸುತ್ತಾ ದಲಿತರನ್ನು ಕೇವಲ ಮತಬ್ಯಾಂಕ್ ಗಾಗಿ ಮರುಳು ಮಾಡುವ ವಿಫಲ ಯತ್ನ ಮಾಡುತ್ತಿದೆ. ಅದರಲ್ಲೂ ಅಂಬೇಡ್ಕರ್ ಅವರನ್ನು ಇತಿಹಾಸದಲ್ಲಿ ಕಾಂಗ್ರೆಸ್ ಪಕ್ಷವು ಹೇಗೆಲ್ಲಾ ಸೋಲಿಸಿತು ಎಂಬ ವಿವರಣೆಗಳನ್ನು ನೀಡುತ್ತಾ ದಲಿತರೇ ನೀವು ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಕೋಟ್ಯಾಂತರ ಕರಪತ್ರಗಳ ಮೂಲಕ ಮನೆಮನೆಗೆ ಹಂಚುತ್ತಿದೆ. ಅದರೊಡನೆ ಇದೇ ವಿಷಯದ ರೀಲ್ಸ್ ಗಳನ್ನು ಮಾಡಿ, ಕೆಲವು ಅಡ್ನಾಡಿ ಬಿಜೆಪಿ ಬೆಂಬಲಿಸುವ ಸಂಘಿಗಳ ಮೂಲಕ, ಅಂಧಭಕ್ತರ ಮೂಲಕ ವೀಡಿಯೋಗಳನ್ನು ಮಾಡಿಸಿ ಸಾಮಾಜಿಕ ಜಾಲತಾಣದ ಮೂಲಕ ಹರಿಯಬಿಟ್ಟು ದಲಿತರಿಗೆ ಈ ಅಡ್ನಾಡಿಗಳು ಈಗ ಅಂಬೇಡ್ಕರ್ ಅವರನ್ನು ಕುರಿತ ಇತಿಹಾಸದ ಉಪದೇಶ ಮಾಡುತ್ತಿದ್ದಾರೆ!
ದಲಿತರೇನು ದಡ್ಡರೇ?? ಬಿಜೆಪಿಯವರು ಪುಂಗುತ್ತಿರುವ ಈ
ಇತಿಹಾಸ ಅರಿಯದವರೇ??
ಈ ಎಲ್ಲಾ ಇತಿಹಾಸವೂ ದಲಿತರಿಗೆ ಸ್ಪಷ್ಟವಾಗಿ ಗೊತ್ತಿದೆ. ಬಿಜೆಪಿ ಎಂಬುದೇ ಇಲ್ಲದಿದ್ದ ಆಗ ಕಾಂಗ್ರೆಸ್ ಎಂಬ ಪಕ್ಷದಲ್ಲಿ ಬಹಳ ಪ್ರಮುಖ ಸ್ಥಾನಮಾನಗಳಲ್ಲಿದ್ದ ಎಲ್ಲರೂ ಬಹುತೇಕ ಮನುವಾದಿಗಳೇ ಆಗಿದ್ದರು. ಆಗ ಕಾಂಗ್ರೆಸ್ ನಲ್ಲಿದ್ದ ಈ ಮನುವಾದಿಗಳೇ ಅಂಬೇಡ್ಕರ್ ಅವರನ್ನು ಸೋಲಿಸಿದರು ಮತ್ತು ಅವಮಾನಿಸಿದ್ದರು. ಅದರಲ್ಲೂ ಸಂವಿಧಾನ ರಚನೆಗಾಗಿ ನಡೆದ 1946ರ ಚುನಾವಣೆಯಲ್ಲಿ ಬಾಬಾಸಾಹೇಬರು ಸಂವಿಧಾನ ರಚನಾ ಸಭೆಗೆ ಗೆದ್ದುಬಾರದಂತೆ ತಡೆಯುವಲ್ಲಿ ಎಲ್ಲಾ ಪಕ್ಷದ ಮುಖಂಡರೂ ಟೊಂಕಕಟ್ಟಿ ನಿಲ್ಲುವಂತೆ ಇದೇ ಮನುವಾದಿಗಳು ವ್ಯೂಹ ಹೆಣೆದಿದ್ದರು. ಅದರಲ್ಲೂ ಸರ್ಧಾರ್ ವಲ್ಲಭಬಾಯ್ ಪಟೇಲ್ ಅಂಬೇಡ್ಕರ್ ಅವರನ್ನು ಸೋಲಿಸುವಲ್ಲಿ ಮುಖ್ಯಪಾತ್ರ ವಹಿಸಿದ್ದರು ಎಂಬುದನ್ನು ಸ್ವತಃ ಅಂಬೇಡ್ಕರ್ ಅವರೇ ಬರೆದಿದ್ದಾರೆ. ಪಟೇಲ್ ಕಾಂಗ್ರೆಸ್ ನಾಯಕ. ಅದೇ ಪಟೇಲ್ ಅವರನ್ನು ಇಂದು ಬಿಜೆಪಿ ಏಕೆ ಅಷ್ಟೊಂದು ಹೊತ್ತು ಮೆರೆಸುತ್ತಿದೆ! ಬಾಬಾಸಾಹೇಬರ ಹೋರಾಟವನ್ನು ಹತ್ತಿಕ್ಕಿದ್ದಕ್ಕಾಗಿಯೇ?
ಈ ಸಂಘಿಗಳು ಬಾಬಾಸಾಹೇಬರ ವಿಚಾರಗಳನ್ನು ದತ್ತೋಪಂಥ ಠೇಂಗಡಿ ಎಂಬ ಮರಾಠಿ ಸಂಘಪರಿವಾರದ ಮುಖಂಡ ಬರೆದಿರುವ “ಸಾಮಾಜಿಕ ಕ್ರಾಂತಿಸೂರ್ಯ” ಎಂಬ ಕೃತಿಯಿಂದಲೇ ಹೆಕ್ಕುತ್ತಾರೆ. ಆದರೆ ಆ ಕೃತಿಯಲ್ಲಿ ಬಹುತೇಕ ಸುಳ್ಳುಗಳನ್ನೇ ಸೃಷ್ಟಿಸಲಾಗಿದೆ! ಠೇಂಗಡಿ ಪ್ರಕಾರ ಬಾಬಾಸಾಹೇಬರು ಕೇಸರಿ ಧ್ವಜವನ್ನೇ ರಾಷ್ಟ್ರಧ್ವಜವಾಗಬೇಕು, ಸಂಸ್ಕೃತವೇ ರಾಷ್ಟ್ರಭಾಷೆಯಾಗಬೇಕು, ಆರೆಸ್ಸೆಸ್ ಸಮಾಜ ಸೇವಾ ಸಂಸ್ಥೆ ಎಂದಿದ್ದರು ಎಂಬ ಕಟ್ಟುಕತೆಗಳನ್ನು ಕುಟ್ಟುತ್ತಾರೆ. ಯಾಕೆ ಇವರಿಗೆ ಎಂದಿಗೂ ಬಾಬಾಸಾಹೇಬರ ಬರಹಗಳು ಮತ್ತು ಭಾಷಣಗಳ 22 ಸಂಪುಟಗಳು ಆಕರಗಳಾಗುವುದಿಲ್ಲ!?
ಯಾಕೆಂದರೆ ಅಲ್ಲಿ ಇವರು ಹೇಳುವ ಕಟ್ಟುಕತೆಗಳಿಗೆ ವ್ಯತಿರಿಕ್ತವಾದ ವಿಷಯಗಳಿರುತ್ತವೆ.
ಇರಲಿ,ಬಾಬಾಸಾಹೇಬರ ಆಶಯಗಳನ್ನು ನೆರವೇರಿಸಲು ಬಿಜೆಪಿ ಬದ್ದವಾಗಿದ್ದರೆ ಬಾಬಾಸಾಹೇಬರ ಸಂವಿಧಾನವನ್ನು ಬದಲಿಸುತ್ತೇವೆ ಎಂದವರನ್ನು ಇವರು ದೇಶದ್ರೋಹದಡಿಯಲ್ಲಿ ಬಂಧಿಸಲಿಲ್ಲ ಯಾಕೆ? ಇವರ ಆಡಳಿತದಲ್ಲೇ ದೆಹಲಿಯಲ್ಲಿ ಸಂವಿಧಾನದ ಪ್ರತಿ ಸುಟ್ಟ ಕಿಡಿಗೇಡಿಗಳನ್ನು ದೇಶದ್ರೋಹದಡಿ ಬಂಧಿಸಲಿಲ್ಲ ಏಕೆ??
ಬಾಬಾಸಾಹೇಬರು ರಾಮ ಮತ್ತು ಕೃಷ್ಣರ ವಿಚಾರಗಳನ್ನು ಕಟು ವಿಮರ್ಶೆಗೊಳಪಡಿಸಿದ್ದರು. ಬಿಜೆಪಿ ಏನು ಮಾಡಿತು? ರಾಮಮಂದಿರ ನಿರ್ಮಿಸಿತು ಇದು ಬಾಬಾಸಾಹೇಬರಿಗೆ ನೀಡಿದ ಗೌರವವಾಯ್ತೆ?
ಈಗ ಕೃಷ್ಣಮಂದಿರ ನಿರ್ಮಿಸಲಿದೆ ಇದು ಬಾಬಾಸಾಹೇಬರಿಗೆ ನೀಡಿದ ಗೌರವವಾಯ್ತೆ?
ಬಾಬಾಸಾಹೇಬರು ಜಾತಿವ್ಯವಸ್ಥೆಯಿಂದ ನಾರುತ್ತಿರುವ ಹಿಂದೂತ್ವವನ್ನು ಕಟುವಾಗಿ ಟೀಕಿಸಿ “ಫಿಲಾಸಫಿ ಆಫ್ ಹಿಂದೂಯಿಸಂ” ಕೃತಿ ಬರೆದಾಗ ಅದನ್ನು ಕನಿಷ್ಟ ವಿಮರ್ಶೆಗೊಳಪಡಿಸದೆ ಆಗಲೇ ಇದೇ ಸಂಘಿಗಳು ಸುಟ್ಟುಹಾಕಿದರು! ಬಾಬಾಸಾಹೇಬರಿಗೆ ಕೊಲೆ ಬೆದರಿಕೆ ಹಾಕಿದರು ಮತ್ತು ಅಂತಹ ಒಂದೆರಡು ಪ್ರಯತ್ನಗಳನ್ನೂ ನಡೆಸಿದ್ದನ್ನು ಬಾಬಾಸಾಹೇಬರು ದಾಖಲಿಸಿದ್ದಾರೆ.
ಅಸಮಾನತೆ ಸಾರುವ/ತೋರುವ ಮನುಸ್ಮೃತಿ ಯನ್ನು ಬಾಬಾಸಾಹೇಬ್ ಸುಟ್ಟರು. ಆದರೆ, ಬಿಜೆಪಿ/ಸಂಘಪರಿವಾರಕ್ಕೆ ಅದೇ ಉಸಿರಾಗಿದೆ!!
ಜಾತಿವ್ಯವಸ್ಥೆಯಿಂದ ನಾರುತ್ತಿರುವ ಹಿಂದೂತ್ವವನ್ನು ಬಾಬಾಸಾಹೇಬ್ ತೊರೆದು ಬುದ್ದಧಮ್ಮದಲ್ಲಿ ನಡೆದರು. ಬಿಜೆಪಿ ಹಿಂದೂರಾಷ್ಟ್ರಕ್ಕಾಗಿ ಹಪಹಪಿಸುತ್ತಿದೆ!ಎಲ್ಲಿಯ ಬಿಜೆಪಿ? ಎಲ್ಲಿಯ ಅಂಬೇಡ್ಕರ್!
ಹೀಗೆ ಅಂಬೇಡ್ಕರ್ ಅವರಿಗೆ ಇತಿಹಾಸದ ಉದ್ದಕ್ಕೂ ಯಾರ್ಯರು ಎಷ್ಟೆಷ್ಟು ನೋವು ನೀಡಿದರು, ದ್ರೋಹ ಬಗೆದರು ಎಲ್ಲವನ್ನೂ ಅವರು ದಾಖಲಿಸಿದ್ದಾರೆ. ನಮಗೆ ಎಲ್ಲವೂ ಗೊತ್ತು!
ಕೋರೇಗಾಂವ್ ಯುದ್ದ ಯಾಕೆ ನಡೆಯಿತು? ಯಾರ ವಿರುದ್ದ ನಡೆಯಿತು!? ಮನುವಾದಿ ಪೇಶ್ವೆಗಳ ವಿರುದ್ದ ನಡೆಯಿತು? ಆ ಪೇಶ್ವೆಗಳೇ ಇಂದು ಸಂಘಪರಿವಾರದ ವಾರಸುದಾರರಾಗಿ ಇದೇ ಬಿಜೆಪಿ ಸರ್ಕಾರದ ಅಧಿಕಾರದಲ್ಲಿ 2014 ರಲ್ಲಿ ಕೋರೇಗಾಂವ್ ದಿನಾಚರಣೆ ಆಚರಿಸುವ ದಲಿತರ ಮೇಲೆ ಇದೇ ಸಂಘಿಗಳು ಗಲಭೆ ದೌರ್ಜನ್ಯ ನಡೆಸಿ ಸಾವುನೋವುಗಳಿಗೆ ಕಾರಣರಾದರು. ಈಗ ಅಂಬೇಡ್ಕರ್ ಅವರ ಕುರಿತು ಮಾತಾಡುತ್ತಿರುವುದು ಎಂಥಾ ವ್ಯಂಗ್ಯ!
ನಾಗಾಪುರ ಧೀಕ್ಷಾಭೂಮಿಯನ್ನು ದೀಕ್ಷಾಭೂಮಿ ಟ್ರಸ್ಟ್ ನವರೇ ಅಭಿವೃದ್ಧಿ ಪಡಿಸಿದ್ದಾರೆ. ಚೈತ್ಯಭೂಮಿ ಇದ್ದೇ ಇದೆ.
ಉಳಿದಂತೆ ಮಹೋ ಮತ್ತು ದೆಹಲಿ ನಿವಾಸಗಳನ್ನು ಯಾವುದೇ ರಾಷ್ಟ್ರನಾಯಕರ ಸ್ಮಾರಕ ಅಭಿವೃದ್ಧಿ ಪಡಿಸಿವಂತೆ ಆಯಾ ಸರ್ಕಾರ ಅಭಿವೃದ್ಧಿ ಪಡಿಸಲೇಬೇಕಾದ್ದು ಅದರ ಕರ್ತವ್ಯ. ಮಾಡಲಿಲ್ಲ ಅಂದರೆ ನಾವೇ ಮುಂದೆ ಮಾಡಿಕೊಳ್ಳುತ್ತೇವೆ. ಆದರೆ ಅಷ್ಟಕ್ಕೆ ಇಡೀ ದೇಶದ ದಲಿತರ ಲಕ್ಷಕೋಟಿ ಮೌಲ್ಯದ ಮತಬ್ಯಾಂಕ್ ದೋಚುವ ಹುನ್ನಾರ ಮಾಡುತ್ತಿದ್ದೀರಲ್ಲ ನಾವು ದಡ್ಡರೆಂದುಕೊಂಡ್ರಾ?
ಹಾಗಾದರೆ, ಬಾಬಾಸಾಹೇಬರ ಇಡೀ ಇತಿಹಾಸವನ್ನು ಪ್ರತಿಮೆಗಳಲ್ಲಿ ಅದ್ದೂರಿಯಾಗಿ ವಿಜೃಂಭಿಸಿರುವ ಉತ್ತರ ಪ್ರದೇಶ ಬಿಎಸ್ಪಿಗಿಂತಲೂ ಬಿಜೆಪಿ ಕೊಡುಗೆ ದೊಡ್ಡದೇ!!? ಉತ್ತರ ಪ್ರದೇಶದ ಪರಿವರ್ತನ ಪಾರ್ಕ್ ಕುರಿತು ಸದಾ ಕೆಂಗಣ್ಣುಬೀರುವ ಬೀಜೆಪಿ ಜುಜುಬಿ ಪಂಚತೀರ್ಥದ ನೆಪದಲ್ಲಿ ದಲಿತರ ಮತಗಳನ್ನು ಕೊಳ್ಳೇಹೊಡೆಯಲು ಈಗ ಅಂಬೇಡ್ಕರ್ ಅವರನ್ನು ಹಾಡಿಹೊಗಳುವ ನಾಟಕ ಮಾಡಿದರೆ ನಂಬುತ್ತೇವೆಯೇ!?? ಈ ಕತೆಗಳನ್ನು ಹೇಳಿ ಮತಭಿಕ್ಷೆ ಪಡೆಯುವಂತೆ ನಿಮಗೆ ಐಡಿಯಾ ಕೊಟ್ಟವರೇ ನಿಮ್ಮೊಡನೆ ಅಧಿಕಾರದ ಎಂಜಲಿಗಾಗಿ ಸೇರಿಕೊಂಡಿರುವ ಕೆಲವು ದಲಿತ ನಾಯಿಗಳು ಎಂಬುದು ದಲಿತರಿಗೆ ಗೊತ್ತಿಲ್ಲದ ವಿಷಯವೇನಲ್ಲ. ಆ ನಾಯಿಗಳ ಮಾತು ನಂಬಿ ನೀವು ನಗೆಪಾಟಲಿಗೀಡಾಗಬೇಡಿ ಎಚ್ಚರ!
ನಿಜ. ದಲಿತರಿಗೆ ಬಾಬಾಸಾಹೇಬರೆಂದರೆ ಪ್ರಾಣ, ತ್ರಾಣ, ಸ್ಪೂರ್ತಿ ಎಲ್ಲವೂ ಹೌದು. ಆದರೆ ಅದಕ್ಕಾಗಿ ದೇಶದ ಅಖಂಡತೆ ಮತ್ತು ಅಭಿವೃದ್ಧಿಯನ್ನೂ ಧಿಕ್ಕರಿಸುವ ಕ್ರೂರಿಗಳಲ್ಲ ನಾವು.
ಬಿಜೆಪಿಯು ದೇಶದ ಬಹುಸಂಖ್ಯಾತ ಕೃಷಿಕರನ್ನು ಕಡೆಗಣಿಸಿದೆ. ಕೋಟ್ಯಾಂತರ ಯುವಜನತೆಗೆ ಉದ್ಯೋಗ ಕೊಡದೆ ಬೀದಿಪಾಲು ಮಾಡಿದೆ. ಅಗತ್ಯ ವಸ್ತುಗಳ ಬೆಲೆಯೇರಿಸಿ ಬಡಜನರು ಕಂಗಾಲಾಗುವಂತೆ ಮಾಡಿದೆ. ದೇಶದ ಆರ್ಥಿಕತೆಯನ್ನು ಹಳ್ಳಹಿಡಿಸಿದೆ. ಕೇಂದ್ರಸರ್ಕಾರದ ಸಂಸ್ಥೆಗಳನ್ನು ಕೈಗೊಂಬೆಯಾಗಿಸಿಕೊಂಡಿದೆ. ಎಲೆಕ್ಟೊರಲ್ ಬಾಂಡ್ ಗಳಿಗಾಗಿ ದುಷ್ಟಕೂಟದ ಸಂಸ್ಥೆಗಳು ಜನರನ್ನು ದೋಚುವಂತೆ ಮಾಡಿದೆ. ದಲಿತರು, ರೈತರು, ಹಣ್ಣುಮಕ್ಕಳ ಮೇಲೆ ವಿಪರೀತ ಎನಿಸುವಷ್ಟು ದೌರ್ಜನ್ಯ ದಬ್ಬಾಳಿಕೆಗಳನ್ನು ನಡೆಸಿ ದೇಶದ ಅಖಂಡತೆಯನ್ನು ದುರ್ಬಲಗೊಳಿಸಿದೆ. ಹೀಗಿರುವಾಗ ದೇಶ ಮತ್ತು ದೇಶವಾಸಿಗಳ ಹಿತವನ್ನು ಮರೆತು ನಾವು ಕೇವಲ ಅಂಬೇಡ್ಕರ್ ಅವರ ಪಂಚತೀರ್ಥಕ್ಕೆ ಮರುಳಾಗುವಷ್ಟು ಮೂರ್ಖರೂ ಅಲ್ಲ ಸ್ವಾರ್ಥಿಗಳೂ ಅಲ್ಲ.
ಇದಕ್ಕಾಗಿ ನಾವು ಬಿಜೆಪಿಯನ್ನು ಧಿಕ್ಕರಿಸುತ್ತೇವೆ.
(ಬಂಧುಗಳೇ ಇದನ್ನು ಹೆಚ್ಚೆಚ್ಚು ಶೇರ್ ಮಾಡಿ)
– *ಡಾ. ಚಮರಂ*