*ಹನಿ ಟ್ರ್ಯಾಪ್ ಎಂಬ ನವಯುಗದ ದರೋಡೆ ಮತ್ತು ಸತ್ಯವಿಶ್ವಾಸಿಗಳು!*

 

“ಹನಿ ಟ್ರ್ಯಾಪ್” ಅಂದರೆ ಆ ಹೆಸರಲ್ಲೇ ನಿಮಗದು ಅರ್ಥವಾಗಬಹುದು. Honey ಅಂದರೆ ಜೇನು, Trap ಅಂದರೆ ಬಲೆ. ಅಂದರೆ ಜೇನಿನ ಬಲೆ ಎಂದರ್ಥ. ಓರ್ವ ಹೆಣ್ಣಿನ ಮೂಲಕ ನಿರ್ದಿಷ್ಟ ವ್ಯಕ್ತಿಯನ್ನು ಸವಿ ಮಾತು, ಮೋಹಕ ನಡೆಯಿಂದ ಪುಸಲಾಯಿಸಿ ಮರಳುಗೊಳಿಸಿ ಬಲೆಗೆ ಹಾಕಿ ವಶೀಕರಿಸುವುದನ್ನು “ಹನಿ ಟ್ರ್ಯಾಪ್” ಎನ್ನಲಾಗುತ್ತದೆ. ಆ ಬಳಿಕ ಬೋನಿಗೆ ಬಿದ್ದಿರುವುದನ್ನು ಪುರಾವೆ ತೋರಿಸಿ ಆತನನ್ನು ಬ್ಲ್ಯಾಕ್‌ಮೇಲ್ ಮಾಡಿ ಲೂಟಿ ಮಾಡಲಾಗುತ್ತದೆ. ಇನ್ನೂ ಸರಳವಾಗಿ ಹೇಳ ಬೇಕೆಂದಾದರೆ “ಹನಿ ಟ್ರ್ಯಾಪ್” ಅಂದರೆ ವ್ಯಭಿಚಾರಕ್ಕೆ ಪ್ರೇರೇಪಿಸುವ, ಝಿನಾಕ್ಕೆ ಮೆಲ್ಲಮೆಲ್ಲನೆ ಎಳೆದೊಯ್ಯುವ ಆರಂಭದ ಘಟ್ಟವದು. *ಅದರ ರೂಟ್‌ ಮೀನಿಂಗ್‌ ವ್ಯಕ್ತಿಯನ್ನು ಟಾರ್ಗೆಟ್ ಮಾಡಿ, ಹೆಣ್ಣಿನ ಮೂಲಕ ಆತನ ರಹಸ್ಯ, ಗುಟ್ಟನ್ನು ಸಂಗ್ರಹಿಸಿ, ಬಳಿಕ ಬ್ಲ್ಯಾಕ್‌ಮೇಲ್ ಮಾಡಿ ಲೂಟಿ ಮಾಡುವ ದಂಧೆಗೆ “ಹನಿ ಟ್ರ್ಯಾಪ್” ಎನ್ನಲಾಗುತ್ತದೆ.* ಅದರ ಬಲೆಗೆ ಬಿದ್ದರೆ ಅಥವಾ ಆ ಬೋನಿನಲ್ಲಿ ಸಿಲುಕಿದರೆ ಮನುಷ್ಯ ಅಪಮಾನಿತನಾಗಿ ಚಡಪಡಿಸುತ್ತಾನೆ. ಧಾರಾಳ ಲುಕ್ಸಾನು ಅನುಭವಿಸುತ್ತಾನೆ. ದುಷ್ಟ ಪಾತಕಿಗಳು ಪುರಾವೆ ಮುಂದಿಟ್ಟು ಆತನನ್ನು ಪದೇಪದೇ ಲೂಟಿ ಮಾಡಿ ದಿವಾಳಿ ಮಾಡುತ್ತಾರೆ. ಪಾಪ ಕೊನೆಗೆ ಆತ ಎಲ್ಲವನ್ನೂ ಕಳೆದುಕೊಂಡು, ಹತಾಶನಾಗಿ ಆತ್ಮಹತ್ಯೆಯ ಮೊರೆ ಹೋಗುತ್ತಾನೆ. ಇಂತಹ ದುರಂತಗಳು ಸಮಾಜದಲ್ಲಿ ಮರುಕಳಿಸುತ್ತಿರುವುದು ಬಹಳ ನೋವಿನ ವಿಚಾರ. ನಿಜವಾಗಿ ಈ ಹನಿ ಟ್ರ್ಯಾಪ್‌ನ ಉತ್ಪಾದಕ ಯಾರು ಎಂದು ಕೇಳಿದರೆ,

*ٱلشَّيۡطَٰنُ يَعِدُكُمُ ٱلۡفَقۡرَ وَيَأۡمُرُكُم بِٱلۡفَحۡشَآءِۖ*

“ಶೈತಾನನು ನಿಮಗೆ ಬಡತನ, ದಾರಿದ್ರ್ಯದ ಭೀತಿ ಹುಟ್ಟಿಸುತ್ತಾನೆ. ಯಾವ ನೀಚ ಮಾರ್ಗದಿಂದಾದರೂ ಹಣ ಸಂಪಾದಿಸುವಂತೆ ಒತ್ತುಕೊಡುತ್ತಾನೆ ಮತ್ತು ಅಶ್ಲೀಲತೆ, ಅನೈತಿಕತೆ, ವ್ಯಭಿಚಾರಕ್ಕೆ ಪ್ರಚೋಧಿಸುತ್ತಾನೆ, ನಂಗಾನಾಚ್‌ಗೆ ಆದೇಶಿಸುತ್ತಾನೆ.” ಒಟ್ಟಿನಲ್ಲಿ ಮನುಷ್ಯನನ್ನು ಅದರ ಬಲೆಯಲ್ಲಿ ಸಿಲುಕಿಸಿ, ಫಲ ಕೊಯ್ದು ಸಂಭ್ರಮಿಸುವುದು ಶೈತಾನನ ಬಹುದೊಡ್ಡ ಅಟ್ಟಹಾಸ, ಹಿಡನ್‌ ಅಜೆಂಡಾ. ಆದ್ದರಿಂದ ಹನಿ ಟ್ರ್ಯಾಪ್ ಅಥವಾ ಅದಲ್ಲದ ಅಡ್ಡ ಹಾದಿಯಲ್ಲಿ ವ್ಯಭಿಚಾರ, ಝಿನಾಕ್ಕೆ ಆಮಿಷ ಒಡ್ಡುವುದು ಸೈತಾನನ ನೀಚ ಸಂಸ್ಕಾರ. ಅದನ್ನು ಹರಡುವವರು ಮನುಷ್ಯ ರೂಪದ ಸೈತಾನನ ಸಂತತಿಗಳು. ಇಸ್ಲಾಮೀ ಶರೀಅತ್‌ನಲ್ಲಿ ಅದರ ಹಿಂದೆ ಕೆಲಸ ಮಾಡುವುದು, ಅದರ ಹಣಕ್ಕಾಗಿ ತನ್ನ ಹೆಂಡತಿಯನ್ನೋ ಬೇರೆ ಮಹಿಳೆಯರನ್ನೋ ಅಡವಿಡುವುದು ಅಥವಾ ಹರಾಜು ಹಾಕುವುದು ಎಲ್ಲವೂ ಘೋರ ಪಾಪವಾಗಿದೆ. ಅದರ ಕಮಾಯಿಯಂತೂ ಅತ್ಯಂತ ನೀಚ ಸಂಪಾದನೆಯಾಗಿದೆ. ಅದರ ಬ್ರೋಕರ್ ಕೆಲಸ ನಿರ್ವಹಿಸಿ, ಕಮೀಷನ್ ಪಡೆದು ತನ್ನ ಪತ್ನಿ-ಮಕ್ಕಳನ್ನು ಸಾಕುವುದೂ ಅಷ್ಟೇ ದೊಡ್ಡ ಪಾಪವಾಗಿದೆ. ಅದರ ಆದಾಯದ ಪ್ರತಿಯೊಂದು ಪೈಸೆಯೂ ಇಸ್ಲಾಮೀ ಶರೀಅತ್‌ನಲ್ಲಿ ನಿಷಿದ್ಧ. ವೇಶ್ಯಾವೃತ್ತಿಯ ಸಂಪಾದನೆ ಘೋರ ಪಾಪವೆಂದು ಹದೀಸ್‌ನ ಗ್ರಂಥದಲ್ಲಿ ಪ್ರತ್ಯೇಕ ಎಚ್ಚರಿಸಲಾಗಿದೆ.

*وَلَا تَقْرَبُوا الزِّنَا ۖ إِنَّهُ كَانَ فَاحِشَةً وَسَاءَ سَبِيلًا*

“ನೀವು ವ್ಯಭಿಚಾರದ ಹತ್ತಿರಕ್ಕೂ ಸುಳಿಯಬೇಡಿ. ಖಂಡಿತವಾಗಿಯೂ ಅದು ಅಶ್ಲೀಲ ಕೃತ್ಯ ಮತ್ತು ಅತ್ಯಂತ ಕೆಟ್ಟಮಾರ್ಗ”ವೆಂದು ತಿಳಿಸಲಾಗಿದೆ. ಒಂದು ಮಿಸ್ಡ್‌ ಕಾಲ್‌, ಚಾಟಿಂಗ್‌ ಅಥವಾ ಹಾಯ್‌-ಭಾಯ್‌ಯಿಂದ ಆರಂಭಿಸಿದ ಪಯಣ, ಅಡ್ಡಾದಿಡ್ಡಿ ಎಲ್ಲೆಲ್ಲೋ ಎಳೆದೊಯ್ಯುತ್ತದೆ. *ಆದ್ದರಿಂದಲೇ ಹನಿ ಟ್ರ್ಯಾಪ್‌ಗೆ ಬಲೆ ಬೀಸುವುದು ಮಾತ್ರವಲ್ಲ ಅದರ ಸನಿಹಕ್ಕೆ ಹೆಜ್ಜೆ ಹಾಕುವುದೂ ಇಸ್ಲಾಮೀ ಶರೀಅತ್‌ನಲ್ಲಿ ನಿಷಿದ್ಧವಾಗಿದೆ.* ಅದು ಮನುಷ್ಯನ ಆಖಿರತನ್ನು ಮಾತ್ರವಲ್ಲ ದುನಿಯಾವಿನ ನೆಮ್ಮದಿಯನ್ನೂ ನಾಶ ಮಾಡುತ್ತದೆ. ಆತನ ಆರೋಗ್ಯ, ಸೌಂದರ್ಯವನ್ನೂ ಹಾಳು ಮಾಡುತ್ತದೆ. ಆತನ ದೈಹಿಕ ಕ್ರಿಯಾಶೀಲತೆಯನ್ನು ನಶಿಸುತ್ತದೆ. ಅಲ್ಲಿ ಅಪರಾಧಿಯ ಆತ್ಮ ಆತನನ್ನು ಸದಾ ಚುಚ್ಚುತ್ತಿರುತ್ತದೆ. *ನಾವೆಷ್ಟೇ ಅಡಗಿಸಿಟ್ಟರೂ ಒಂದಲ್ಲ ಒಂದು ದಿನ, ಜನರ ಮುಂದೆ ನಮ್ಮ ಮುಖವಾಡ ಕಳಚಿ ಬಿದ್ದು, ಅಸಲಿ ರೂಪ ಪ್ರಕಟವಾಗುತ್ತದೆ.* ನಿಜವಾಗಿ ಹನಿಟ್ರ್ಯಾಪ್‌ಗೆ ಸಿಲುಕಿ ಬಿದ್ದವರೆಲ್ಲ ಧಾರಾಳ ಕಳೆದುಕೊಂಡವರೇ. ಉಳ್ಳವರು ಕಾಸನ್ನು ಸುರಿದು ತಮ್ಮ ಮಾನವನ್ನು ಉಳಿಸಿಕೊಂಡಿದ್ದಾರಷ್ಟೇ. ವಿಚಿತ್ರವೇನೆಂದರೆ ನಮ್ಮನ್ನು ಆಳುವವರೂ “ಹನಿ ಟ್ರ್ಯಾಪ್‌”ನ ಬೋನಿಗೆ ಬೀಳುತ್ತಾರೆ. ಅವರ ಆಡಿಯೋ, ವೀಡಿಯೋ, ಫೋಟೋಗಳು ವೈರಲ್‌ ಆಗುತ್ತವೆ. ಮಾನಹಾನಿ ವರದಿ ಪ್ರಕಟವಾಗದಂತೆ, ಕೂಡಲೇ ನ್ಯಾಯಾಲಯದಿಂದ ತಡೆಯಾಜ್ಞೆ ತರುತ್ತಾರೆ. ಹಲವೊಮ್ಮೆ ಸಿ.ಡಿ., ಪೆನ್‌ರೈ ಎತ್ತಿಹಿಡಿದು ಅವರೇ ಪರಸ್ಪರ ಬ್ಲ್ಯಾಕ್‌ಮೇಲ್ ಮಾಡಿ, ಮಂತ್ರಿಗಿರಿಗಾಗಿ ಪಟ್ಟು ಹಿಡಿಯುತ್ತಾರೆ. ನಿನ್ನೆಯ ದೈನಂದಿನ ಪತ್ರಿಕೆಗಳ ಮುಖಪುಟಗಳನ್ನು ಪರಿಶೀಲಿಸಿ ನೋಡಿ. *ಓರ್ವ ಸಂತ್ರಸ್ತೆ ಪತ್ರಿಕಾಗೋಷ್ಠಿ ಕರೆದು, ತನ್ನಂತೆ ಹಲವು ಮಹಿಳೆಯರನ್ನು‌ ಹನಿಟ್ರ್ಯಾಪ್‌ಗೆ ಬಳಸಲಾಗಿದೆ. ನಾವು ಏಳೆಂಟು ಮಂದಿ ಸಂತ್ರಸ್ತೆಯರಿದ್ದು, ಅವರಲ್ಲಿ ನಾಲ್ವರು ಹೆಚ್‌ಐವಿ ಪೀಡಿತೆಯರೆಂಬ ಆಘಾತಕಾರಿ ವರದಿಯನ್ನೂ ಆಕೆ ನೀಡಿದ್ದಾಳೆ.* ಒಟ್ಟಿನಲ್ಲಿ ಸಮಾಜಕ್ಕೆ ತಿಳಿಯದಂತೆ ನಮ್ಮ ಅನೈತಿಕ ಚಟುವಟಿಕೆಗಳಿಗೆ ಪರದೆ ಹಾಕಬಹುದು. ಮರೆಮಾಚಿಸಿ ಬಹಳಷ್ಟನ್ನು ಡಿಲೀಟ್‌ ಮಾಡಬಹುದು. ಫೋರ್‌ಮೇಟ್‌ ಮಾಡಬಹುದು. ಆದರೆ,

*يَسْتَخْفُونَ مِنَ النَّاسِ وَلَا يَسْتَخْفُونَ مِنَ اللَّهِ*

“ಇವರು ತಮ್ಮ ಚಟುವಟಿಕೆಗಳನ್ನು ಮಾನವರಿಗೆ ತಿಳಿಯದಂತೆ ಅಡಗಿಸಿ ಬಿಡಬಲ್ಲರು. ಆದರೆ ಅಲ್ಲಾಹನಿಗೆ ತಿಳಿಯದಂತೆ ಅಡಗಿಸಲಾರರು.” ಈ ಗಂಭೀರ ಆಶಯ ಸತ್ಯವಿಶ್ವಾಸಿಗಳನ್ನು ಸರ್ವ ಕೆಡುಕುಗಳಿಂದ ದೂರ ಸರಿಸಿ, ಉನ್ನತ ಚಾರಿತ್ರ್ಯದ ಶಿಖರಕ್ಕೊಯ್ಯುತ್ತದೆ. ಆ ದೇವಭಯವನ್ನು ಬದುಕಲ್ಲಿ ಅಳವಡಿಸಿ ಕೊಳ್ಳಬೇಕಾಗಿದೆ…

 

*✍️ ಮುಹಮ್ಮದ್ ಸಿದ್ದೀಕ್‌, ಜಕ್ರಿಬೆಟ್ಟು*