*ರೋಶಿನಿ ನಿಲಯದಲ್ಲಿ ಅಪರಾಧ ದೃಶ್ಯ ವಿಶ್ಲೇಷಣೆ ಕುರಿತ ಕಾರ್ಯಾಗಾರ*

ಮಂಗಳೂರುಃ ಅಪರಾಧಶಾಸ್ತ್ರ ಮತ್ತು ವಿಧಿವಿಜ್ಞಾನ ವಿಜ್ಞಾನದ ಸ್ನಾತಕೋತ್ತರ ವಿಭಾಗ (ಸಿಎಫ್ಎಸ್)ದ ವಿಧಿವಿಜ್ಞಾನ ವೇದಿಕೆ ಮತ್ತು ಐಕ್ಯೂಎಸಿ, ಸ್ಕೂಲ್ ಆಫ್ ಸೋಶಿಯಲ್ ವರ್ಕ್ (ಸ್ವಾಯತ್ತ), ರೋಶಿನಿ ನಿಲಯ ಇವುಗಳ ಸಹಯೋಗದೊಂದಿಗೆ ದೇರಳಕಟ್ಟೆಯ ಯೆನೆಪೋಯ ವಿಶ್ವವಿದ್ಯಾನಿಲಯ (ಪರಿಗಣಿತ)ದ ಯೆನೆಪೋಯ ವೈದ್ಯಕೀಯ ಕಾಲೇಜಿನ ಫೋರೆನ್ಸಿಕ್ ಮೆಡಿಸಿನ್ ಮತ್ತು ಟಾಕ್ಸಿಕಾಲಜಿ ವಿಭಾಗ, “ಪೊಲೀಸ್ ಪ್ರೊಸೀಜರ್ಃ ದಿ ಆರ್ಟ್ ಆಫ್ ಕ್ರೈಮ್ ಸೀನ್ ಅನಾಲಿಸಿಸ್” ಎಂಬ ಕಾರ್ಯಾಗಾರವನ್ನು ರೋಶಿನಿ ನಿಲಯದ ಕಾಲೇಜು ಕ್ಯಾಂಪಸ್‌ನಲ್ಲಿ ಗುರುವಾರ ಆಯೋಜಿಸಲಾಗಿತ್ತು.

ಅಪರಾಧಶಾಸ್ತ್ರ ಮತ್ತು ವಿಧಿವಿಜ್ಞಾನ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥೆ ಡಾ. ಸರಿತಾ ಡಿಸೋಜಾ, ಅಪರಾಧಶಾಸ್ತ್ರದ ಮೂಲ ಪರಿಕಲ್ಪನೆ, ಅಪರಾಧ ನ್ಯಾಯ ವ್ಯವಸ್ಥೆಯ ಮೂರು ವಿಭಾಗಗಳಾದ ಪೊಲೀಸ್, ನ್ಯಾಯಾಲಯ ಮತ್ತು ತಿದ್ದುಪಡಿ ಸಂಸ್ಥೆಗಳು, ತನಿಖೆಯ ಮೂರು ʼಐʼ ಗಳು ಮತ್ತು ಅಪರಾಧ ಸ್ಥಳದ ವಿಶ್ಲೇಷಣೆಯ ಬಗ್ಗೆ ಮಾತನಾಡಿದರು.

ವಿಭಾಗದ ವಿದ್ಯಾರ್ಥಿಗಳು ಮತ್ತು ಪ್ರತಿನಿಧಿಗಳ ನಡುವೆ ಸಂವಾದ ನಡೆಯಿತು. ವಿಭಾಗದ ಉಪನ್ಯಾಸಕ, ವಿದ್ಯಾರ್ಥಿ ಕಲ್ಯಾಣ ಅಧಿಕಾರಿ ನಿಕೇತ್ ಪಿ.ಎಸ್, ಮತ್ತು ವಿಧಿವಿಜ್ಞಾನ ವೇದಿಕೆಯ ಬೋಧನಾ ವಿಭಾಗದ ಸಂಯೋಜಕಿ ನಶ್ವ ಇಕ್ಬಾಲ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು.

ಕಾರ್ಯಕ್ರಮದ ಸಂಯೋಜಕ, ಯೆನೆಪೋಯ ವೈದ್ಯಕೀಯ ಕಾಲೇಜಿನ ಫೋರೆನ್ಸಿಕ್ ಮೆಡಿಸಿನ್ ಮತ್ತು ಟಾಕ್ಸಿಕಾಲಜಿ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಮೊಹಮ್ಮದ್ ನಾಸಿರ್ ಅಹ್ಮದ್ ಕಾರ್ಯಾಗಾರದ ಯಶಸ್ಸಿಗೆ ಕಾರಣರಾದವರಿಗೆ ಕೃತಜ್ಞತೆ ಸಲ್ಲಿಸಿದರು.

ಒಟ್ಟು11 ಪ್ರತಿನಿಧಿಗಳು, 4 ಬೋಧಕರು, 2 ಬೋಧಕೇತರ ಸಿಬ್ಬಂದಿ ಮತ್ತು 32 ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಪ್ರಥಮ ವರ್ಷದ ಎಂ.ಎಸ್.ಸಿ.ಸಿ.ಎಫ್.ಎಸ್. ವಿದ್ಯಾರ್ಥಿನಿಯರಾದ ಕೀರ್ತನಾ ಲಾಲಸಾ, ಕ್ರೆಸಿಡಾ ಮಸ್ಕರೇನ್ಹಸ್, ಮಾಧ್ಯಮ ಸಂಯೋಜಕರಾಗಿ ಕಾರ್ಯನಿರ್ವಹಿಸಿದ ದ್ವಿತೀಯ ವರ್ಷದ ವಿದ್ಯಾರ್ಥಿನಿ ಅಧೀನಾ ಎಂ ಅವರೂ ಇದ್ದರು.