*ಪ್ರಜ್ವಲ್ ‘ಅಪರಾಧ’ ವೈಯಕ್ತಿಕವೂ ಅಲ್*.

*ಅಮಾನತ್ತು ಮಾಡಿದ ಮಾತ್ರಕ್ಕೆ ಉಳಿದವರು ಪಾಪಮುಕ್ತರಾಗುವುದೂ ಇಲ್ಲ*

ಆತ್ಮೀಯರೇ,

ಪ್ರಜ್ವಲ್ ಅವರನ್ನು ಜೆಡಿಎಸ್ ನಿಂದ ಅನಿವಾರ್ಯವಾಗಿ ಅಮಾನತ್ತು ಮಾಡಲಾಗಿದೆ. ಆದರೆ ವಿಷಯವು ಬಹಿರಂಗವಾಗದಿದ್ದರೆ ಕುಟುಂಬವಾಗಲೇ, ಪಕ್ಷವಾಗಲೀ, ಈ ಕ್ರಮ ತೆಗೆದುಕೊಳ್ಳುತ್ತಿತ್ತೆ?

ಪ್ರಜ್ವಲ್ ಅಮಾನತ್ತು ಮಾಡಿದ ಮಾತ್ರಕ್ಕೆ ದೇವೇಗೌಡರ ಕುಟುಂಬ ಹಾಗೂ ಬಿಜೆಪಿ ಈ ‘ಅಪರಾಧ’ ದಲ್ಲಿನ ತಮ್ಮ ಪಾತ್ರದಿಂದ ಮುಕ್ತರಾಗುವುದಿಲ್ಲ. ಆಗಬಾರದು.

ಏಕೆಂದರೆ ಈ ವಿಷಯಗಳೆಲ್ಲವೂ ಗೌಡರ ಕುಟುಂಬಕ್ಕೂ ಗೊತ್ತಿತ್ತು. ಬಿಜೆಪಿಯ ಗಮನಕ್ಕೂ ಬಂದಿತ್ತು. ಒಂದು ವೇಳೆ ಈ ವಿಷಯ ಬಹಿರಂಗಗೊಳ್ಳದಿದ್ದರೆ ಇಂಥಾ ಯಾವ ಕ್ರಮಗಳನ್ನು ತೆಗೆದುಕೊಳ್ಳುತ್ತಿರಲಿಲ್ಲ. ಹೀಗಾಗಿ ಇದು ಕಣ್ಣೊರೆಸುವ ಹಾಗೂ ಹಾನಿಯನ್ನು ಕಡಿಮೆ ಮಾಡಿಕೊಳ್ಳುವ ಕ್ರಮವೇ ಹೊರತು ಪ್ರಜ್ವಲ್ ‘ತಪ್ಪಿಗೂ’ ಉಳಿದವರ ಪ್ರತ್ಯಕ್ಷ ಹಾಗೂ ಪರೋಕ್ಷ ಪಾಲುದಾರಿಕೆಗೂ ಶಿಕ್ಷೆಯಲ್ಲ.

ಪ್ರಜ್ವಲ್ ನ ‘ಅಪರಾಧ’ ಆತನ ವೈಯಕ್ತಿಕ, ಕುಟುಂಬಕ್ಕೂ, ಪಕ್ಷಕ್ಕೂ, ಬಿಜೆಪಿಗೂ ಸಂಬಂಧವಿಲ್ಲ ಎಂದು ಹೇಳುವ ಮೂಲಕ ಎಚ್ಡಿಕೆ ಯವರೂ ಉಳಿದವರ ಪಾತ್ರವನ್ನು ಹಾಗೂ ಪ್ರಜ್ವಲ್ ಅಪರಾಧಕ್ಕೆ ಇರುವ ಸಾಮಾಜಿಕ ಮತ್ತು ರಾಜಕೀಯ ಬೇರುಗಳನ್ನು ರಕ್ಷಿಸಿಕೊಳ್ಳಲು ಹೊರಟಿದ್ದಾರೆ.

ಇದಾಗಕೂಡದು.

ಏಕೆಂದರೆ ಪ್ರಜ್ವಲ್ ನ ಆರೋಪಿತ ಕುಕೃತ್ಯದಲ್ಲಿ ಕುಟುಂಬದ ಇತರರು ಪಾಲುದಾರರಾಗಿರದೆ ಇರಬಹುದು…..

….ಆದರೆ ಅವರುಗಳೇ ಬಾಯಿ ಬಿಡುತ್ತಿರುವಂತೆ ಇದು ಹಳೆಯ ವಿಷಯ. ಮತ್ತು ವಿಷಯ ಗೊತ್ತಿದ್ದರೂ ಅದನ್ನು ಮುಚ್ಚಿಹಾಕುವುದರಲ್ಲಿ ಇಡೀ ಕುಟುಂಬದ ಪಾತ್ರವಿದೆ.

*ಅಪರಾಧ ಮಾಡುವುದು ಎಷ್ಟು ತಪ್ಪೋ ಅಪರಾಧವನ್ನು ಮುಚ್ಚಿಡುವುದು ಹಾಗೂ ಅಪರಾಧಿಗೆ ಸಹಕರಿಸುವುದು ಅಷ್ಟೇ ದೊಡ್ಡ ಅಪರಾಧ*.

ಹೀಗಾಗಿ ಈ ಅಪರಾಧದಲ್ಲಿ ಅವರ ಇಡೀ ಕುಟುಂಬ ಕೇವಲ ನೈತಿಕವಾಗಿ ಮಾತ್ರವಲ್ಲ ಕಾನೂನಾತ್ಮಕವಾಗಿಯೂ ಅಪರಾಧಿಗಳೇ..

ಎರಡನೆಯದಾಗಿ….

ಪ್ರಜ್ವಲ್ ವಿಷಯ ಗೊತ್ತಿದ್ದೂ ಆತನನ್ನು ಸಂಸದನ್ನಾಗಿಸುವ ಮೂಲಕ ದೇವೇಗೌಡರ ಕುಟುಂಬ ಆರೋಪಿಗೆ ಇನ್ನಷ್ಟು ನೈತಿಕ ಹಾಗೂ ರಾಜಕೀಯ ಶಕ್ತಿ ಮತ್ತು ಅಧಿಕಾರ ಪಡೆದುಕೊಳ್ಳಲು ಸಹಕರಿಸಿದೆ.

ಆ ಮೂಲಕ ಸಂತ್ರಸ್ತರನ್ನು ಇನ್ನಷ್ಟು ಭಯ ಭ್ರಾಂತ ಗೊಳಿಸಿದ್ದು ಅಪರಾಧವನ್ನು ಮುಚ್ಚಿಹಾಕಲು ಸಹಕರಿಸಿದಷ್ಟೇ ದೊಡ್ಡ ಅಪರಾಧ.

ಆ ಕಾರಣಕ್ಕೂ ಇಡೀ ದೇವೇಗೌಡ ಕುಟುಂಬ ಈ ಅಪರಾಧದಲ್ಲಿ ಬಾಧ್ಯಸ್ತರು.

ಮೂರನೆಯದಾಗಿ ಹಾಗೂ ಅತಿಮುಖ್ಯವಾಗಿ…

ಪ್ರಜ್ವಲ್ ಹಗರಣ ಗಮನಕ್ಕೆ ಬಂದರೂ ಬಿಜೆಪಿ ಮತ್ತು ಮೋದಿ ಪಟಾಲಂ ಆ ವಿಷಯಗಳನ್ನು ಜನರಿಂದ ಮುಚ್ಚಿಟ್ಟು ಪ್ರಜ್ವಲ್ ಗೆ ಓಟು ಹಾಕಲು ಮನವಿ ಮಾಡಿದ್ದಾರೆ. ಇದು ಜನದ್ರೋಹ. ಸಂತ್ರಸ್ತ ಮಹಿಳೆಯರಿಗೆ ಮತ್ತು ಇಡೀ ಕರ್ನಾಟಕಕ್ಕೇ ಬಿಜೆಪಿ ಮಾಡಿರುವ ದ್ರೋಹ.

ಅಷ್ಟೇ ಮುಖ್ಯವಾದ ಮತ್ತೊಂದು ಪ್ರಶ್ನೆ:

ಈವರೆಗೆ ಕಾಂಗ್ರೆಸ್ ಪಕ್ಷಕ್ಕೂ ಇದರ ಮಾಹಿತಿ ಇರಲಿಲ್ಲವೇ? ಇದ್ದಿದ್ದಲ್ಲಿ ಏಕೆ ಸುಮ್ಮನಿತ್ತು?

ಹೀಗಾಗಿ ಪ್ರಜ್ವಲ್ ನ ಆರೋಪಿತ ಕುಕೃತ್ಯ ವೈಯಕ್ತಿಕವಾದುದಲ್ಲವೇ ಅಲ್ಲ.

ಅದರ ಹಿಂದೆ ಏನು ಮಾಡಿದರೂ ದಕ್ಕಿಸಿಕೊಳ್ಳಬಹುದೆಂಬ ಹಾಗೂ ಸಿಕ್ಕವರೆಲ್ಲರನ್ನು ಅನುಭೋಗಿಸಬೇಕೆಂಬ ಪುರುಷ ಪಾಳೇಗಾರಿ ಲಾಲಸೆ ಮತ್ತು ಸಾಮಾಜಿಕ ದರ್ಪವಿದೆ.

ಅದಕ್ಕೆ ಕಾರಣ ಕುಟುಂಬದ ಸಾಮಾಜಿಕ ಹಾಗೂ ರಾಜಕೀಯ ಹಿನ್ನೆಲೆ.
ಕುಟುಂಬದ ಸಂಪತ್ತು, ಅಧಿಕಾರ ಹಾಗೂ ಪಾಳೇಗಾರಿ ಧೋರಣೆ. ಏನೇ ತಪ್ಪು ಮಾಡಿದರೂ ಅದನ್ನು ಮುಚ್ಚಿಹಾಕಿ ಇನ್ನಷ್ಟು ಅಧಿಕಾರ ಪಡೆದುಕೊಳ್ಳುವಂತೆ ಮಾಡಿದ ಕುಟುಂಬಸ್ಥರ ರಾಜಕೀಯ ದುರಹಂಕಾರ. ಅಧಿಕಾರಕ್ಕಾಗಿ ಅದನ್ನು ಬೆಂಬಲಿಸುತ್ತಾ ಆರೋಪಿ ಕುಟುಂಬಕ್ಕೆ ಇನ್ನಷ್ಟು ಅಧಿಕಾರ ಬಲ ಒದಗಿಸುತ್ತಿರುವ ದೇಶದ ಪ್ರಧಾನಿ ಮತ್ತವರ ಪಕ್ಷ.

ಹೀಗಾಗಿ ಇದು ವೈಯಕ್ತಿಕ ಅಪರಾಧವಲ್ಲ. ಸಾಮಾಜಿಕ ರಾಜಕೀಯ ಅಪರಾಧ.

ಆದ್ದರಿಂದ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಈ ಕುಕೃತ್ಯದಲ್ಲಿ ಪಾಲಿರುವ ಎಲ್ಲರೂ ವಿಚಾರಣೆಗೆ ಒಳಪಡಲೇಬೇಕು. ಶಿಕ್ಷೆಯಾಗಲೇ ಬೇಕು.

ಇಂದಿನ ಸಂದರ್ಭದಲ್ಲಿ ಕಾನೂನು ಮೂಲಕ ಎಷ್ಟು ಸಾಧ್ಯವೋ ಅಷ್ಟು.

ಉಳಿದದ್ದು ಸಾಮಾಜಿಕ ಹಾಗೂ ರಾಜಕೀಯ ಶಿಕ್ಷೆ.

ಅದನ್ನು ಜನರೇ ಕೊಡಬೇಕು

ಅಲ್ಲವೇ?

-ಶಿವಸುಂದರ್
-shivasundar
9448659774