ಕಾರ್ಯಕರ್ತರ ಕಣ್ಮಣಿಯಾಗಿದ್ದ ಡಾ ಜೀವರಾಜ್ ಆಳ್ವ ಇವರ 23ನೇ ಪುಣ್ಯ ಸ್ಮರಣೆ
ರಾಜಕೀಯ ಕ್ಷೇತ್ರದಲ್ಲಿ ಇರುವಂತಹ ನಾಯಕರುಗಳು ಕಾರ್ಯಕರ್ತರ ಕಷ್ಟ ಸುಖಗಳನ್ನ ಆಲಿಸುತ್ತಾ ಅವರ ನೋವಿನ ಸಂದರ್ಭದಲ್ಲಿ ಜೊತೆಯಲ್ಲಿ ನಿಂತು ಆತ್ಮವಿಶ್ವಾಸವನ್ನ ತುಂಬುವ ಕೆಲಸವನ್ನು ಮಾಡುವಂತಹ ವ್ಯಕ್ತಿತ್ವಗಳು ಹುಡುಕಿದರೂ ಸಿಗುತ್ತಿಲ್ಲ ಇಂತಹ ಸಂದರ್ಭದಲ್ಲಿ ಜೀವರಾಜ್ ರವರು ಮತ್ತೆ ಮತ್ತೆ ನೆನಪಾಗುತ್ತಾರೆ
ಅಧಿಕಾರ ಇರಲಿ ಬಿಡಲಿ ತಮ್ಮ ಮನೆಯ ಬಾಗಿಲಿಗೆ ತಮ್ಮನ ಭೇಟಿ ಮಾಡುವ ಸಲುವಾಗಿ ಬರುವಂತಹ ನಾಯಕರಿಂದ ಹಿಡಿದು ಕಾರ್ಯಕರ್ತರಿಗೂ ಸಹ ಪ್ರತ್ಯೇಕವಾದ ಕೊಠಡಿಯಲ್ಲಿ ಅವರೊಂದಿಗೆ ಮಾತನಾಡಿ ಅವರಿಗೆ ಬೇಕಾದಂತಹ ಸಹಾಯವನ್ನು ಮಾಡುವ ಮತ್ತು ಸಹಾಯವನ್ನು ಮಾಡಿಸುವ ಗುಣವಿದ್ದದ್ದು ಆಳ್ವಾರ ಅವರಲ್ಲಿ ಮಾತ್ರ
ಸಾಮಾನ್ಯವಾಗಿ ಕಾರ್ಯಕರ್ತರ ಮನೆಯಲ್ಲಿ ಶುಭ ಸಮಾರಂಭವಾಗಲಿ ಅಥವಾ ದುಃಖದ ಸಂದರ್ಭಗಳಲ್ಲಾಗಲಿ ಇವರು ಅವರ ನೆರವಿಗೆ ನಿಂತು ವಿಶ್ವಾಸವನ್ನು ತುಂಬಿ ಕಾರ್ಯಕರ್ತರ ಪಾಲಿಗೆ ಜೀವಕ್ಕೆ ಜೀವ ಎಂಬ ಮಾತಿನಂತೆ ನಡೆದುಕೊಳ್ಳುತ್ತಿದ್ದರು ಈ ಕಾರಣದಿಂದಾಗಿ ಇವರ ಮನೆಯ ಮುಂದೆ ಜಾತ್ರೆಯ ರೀತಿಯಲ್ಲಿ ಜನರು ಇರುತ್ತಿದ್ದರು. ಈ ಜನರಲ್ಲಿ ಶ್ರೀಮಂತರು ಇರುತ್ತಿದ್ದರು ಬಡವರು ಇರುತ್ತಿದ್ದರು ಸಾಹಿತಿಗಳು ಕಲಾವಿದರು ಮತ್ತು ಸಮಾಜದಲ್ಲಿ ಶೋಷಣೆಗೆ ಗುರಿಯಾಗಿದ್ದ ಕಡು ಬಡವರು ಇರುತ್ತಿದ್ದರು ಎಲ್ಲರಿಗೂ ಸಹ ಇವರ ಮನೆಯ ಬಾಗಿಲು ತೆರೆದಿರುತ್ತಿತ್ತು ಎಲ್ಲರನ್ನೂ ಇವರು ಆತ್ಮೀಯತೆಯಿಂದ ಪ್ರೀತಿಯಿಂದ ಮಾತನಾಡಿಸುತ್ತಿದ್ದರು
ಡಾಕ್ಟರ್ ಜೀವರಾಜ್ ರವರು ರಾಜಕಾರಣದ ಕುಟುಂಬಕ್ಕೆ ಸೇರಿದವರು ಇವರ ತಂದೆ ನಾಗಪ್ಪ ಆಳ್ವ ಈ ನಾಡಿನ ಮಂತ್ರಿಯಾಗಿ ಪ್ರಾಮಾಣಿಕವಾದ ಬದುಕನ್ನು ನಡೆಸಿ ಶುದ್ಧವಾದ ಜೀವನವನ್ನು ನಡೆಸಿದವರು ರಾಜಕಾರಣದಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡಿದ್ದ ಜೀವನವರು ವಿದ್ಯಾರ್ಥಿ ನಾಯಕರಾಗಿ ಯುವ ನಾಯಕರಾಗಿ ಯುವ ಜನತಾದಳದ ಪದಾಧಿಕಾರಿಯಾಗಿ 1978 ರಲ್ಲಿಯೇ ಜೈ ಮಹಲ್ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ 1983 ರಲ್ಲಿ ಮತ್ತು 1985ರಲ್ಲಿ ಇದೇ ಕ್ಷೇತ್ರದಿಂದ ಗೆದ್ದು ಹೆಗಡೆ ರವರ ಸಂಪುಟದಲ್ಲಿ ಕನ್ನಡ ಮತ್ತು ಸಂಸ್ಕೃತಿ ವಾರ್ತಾ ಇಲಾಖೆ ಯುವಜನ ಕ್ರೀಡೆ ಶಿಕ್ಷಣ ಇಲಾಖೆ ಹೀಗೆ ಅನೇಕ ಇಲಾಖೆಗಳ ಮಂತ್ರಿಗಳಾಗಿ ಜವಾಬ್ದಾರಿಯನ್ನ ನಿರ್ವಹಿಸಿದ್ದಾರೆ
ಕಲಾವಿದರ ಬಗ್ಗೆ ಇವರಿಗಿದ್ದ ಪ್ರೀತಿ ಕಾಳಜಿ ಇವರನ್ನು ಮತ್ತಷ್ಟು ಜನಪ್ರಿಯ ರನ್ನಾಗಿಸಿತು ನಾಟಕ ಸಂಗೀತ ಇವುಗಳಲ್ಲಿ ಆಸಕ್ತಿ ಇದ್ದ ಇವರು ಕಲಾವಿದರ ಎಲ್ಲ ವಿಚಾರಗಳಿಗೆ ಸ್ಪಂದಿಸುತ್ತಿದ್ದರು
ಜೀವರಾಜ್ ಎಂದರೆ ಸಂಘಟನೆಯ ಚತುರ ಎಂಬ ಮತ್ತೊಂದು ಮಾತಿದೆ ಒಂದು ಕಾರ್ಯಕ್ರಮವನ್ನು ಯಾವ ರೀತಿ ಮಾಡಬೇಕು ಎನ್ನುವುದಕ್ಕೆ ಇವರು ವಿಶ್ವವಿದ್ಯಾನಿಲಯವೆಯಾಗಿದ್ದರು ರಾಜಕೀಯ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕವಾದಂತಹ ಕಾರ್ಯಕ್ರಮಗಳನ್ನ ಮೊದಲ ಬಾರಿಗೆ ಪರಿಚಯಿಸಿದ್ದೇ ಇವರು ಪಕ್ಷದ ಕಾರ್ಯಕ್ರಮದಲ್ಲಿ ಭಾವಗೀತೆಗಳ ಮತ್ತು ಜನಪದ ತಂಡಗಳಿಗೆ ವೇದಿಕೆಯನ್ನು ಕಲ್ಪಿಸಿ ಕೊಟ್ಟವರು ಇವರು ಕಾರ್ಯಕ್ರಮಗಳಲ್ಲಿ ವೇದಿಕೆಯ ರೂಪ ವಿಭಿನ್ನವಾಗಿ ನಿರ್ಮಿಸಿ ಕೊಟ್ಟವರು ಇವರು
ಅಲ್ಪಾವಧಿಯಲ್ಲಿ ಎಷ್ಟು ಜನರನ್ನು ಬೇಹಿಸಿದರೂ ಸಂಘಟಿಸಬಲ್ಲಂತಹ ಸಾಮರ್ಥ್ಯ ಮತ್ತು ಸಂಪರ್ಕ ಇವರಿಗೆ ಇತ್ತು ಜೀವರಾಜ್ ರವರು ನಿಜಕ್ಕೂ ಜಾತ್ಯತೀತವಾದ ಮನೋಭಾವದವರಾಗಿದ್ದರು ಇವರ ಬಳಗದಲ್ಲಿ ಎಲ್ಲ ಧರ್ಮದವರು ಎಲ್ಲ ಜಾತಿಯವರು ಇರುತ್ತಿದ್ದರು ಇವರ ಸ್ನೇಹ ವಿಶ್ವಾಸಕ್ಕೆ ಜಾತಿ ಮತ ಧರ್ಮಗಳ ತಾರತಮ್ಯವಿರಲಿಲ್ಲ
ಇಂದಿಗೂ ಸಹ ಜನತಾದಳದ ಜನತಾ ಪಕ್ಷದ ಕಾರ್ಯಕರ್ತರಷ್ಟೇ ಅಲ್ಲದೆ ಸಮಾಜದ ಬೇರೆ ಬೇರೆ ವರ್ಗದವರು ಸಹ ಇವರು ಮಾಡಿದ ಸಹಾಯವನ್ನು ಆರ್ಥಿಕ ನೆರವನ್ನ ಸ್ಮರಿಸಿಕೊಳ್ಳುತ್ತಲೇ ಇರುತ್ತಾರೆ
ಜೀವರಾಜ್ ರವರ ನಂತರ ಕಾರ್ಯಕರ್ತರಿಗಾಗಿ ಮನೆಯ ಬಾಗಿಲನ್ನ ತೆರೆದು ಪ್ರೀತಿಯಿಂದ ಮಾತನಾಡಿಸುವ ನಾಯಕರುಗಳ ಕೊರತೆ ಎಲ್ಲ ಪಕ್ಷದಲ್ಲಿಯೂ ಎದ್ದು ಕಾಣುತ್ತಿವೆ ಇಂದು ನಾಯಕರು ತಮ್ಮದೇ ಆದಂತಹ ಪಡೆಯನ್ನ ಕಟ್ಟಿಕೊಂಡು ಅವರಿಂದ ಸುತ್ತುವರಿಯಲ್ಪಟ್ಟಿರುತ್ತಾರೆ ಇನ್ನು ರಕ್ಷಣೆಯ ಹೆಸರಿನಲ್ಲಿ ಪೊಲೀಸರ ಸರ್ಪಗಾವಲು ಕಾರಿನಿಂದ ಇಳಿಯುವುದು ವೇದಿಕೆಯನ್ನ ಹತ್ತಿ ಬಾಷಣ ಮಾಡುವುದು ಮತ್ತೆ ಇಳಿದುಬಂದು ಕಾರಿನಲ್ಲಿ ಕುಳಿತು ಮುಂದೆ ಸಾಗುವುದು ಇದು ನಾಯಕರುಗಳ ಶೈಲಿಯಾಗಿದೆ ಇನ್ನೂ ಇವರನ್ನು ಸುತ್ತುವರಿರುವ ಅಂಗರಕ್ಷಕರ ಪಡೆಯಂತು ಯಾರನ್ನು ಹತ್ತಿರ ಹೋಗಲು ಬಿಡುವುದಿಲ್ಲ ನಾಯಕರುಗಳಿಗೂ ಸಹ ತಮ್ಮ ಬಳಿಗೆ ಯಾರು ಬರೆದಿದ್ದರೆ ಸಾಕು ಎನ್ನುವ ಸ್ಥಿತಿಯಲ್ಲಿದ್ದಾರೆ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ನಮ್ಮ ಆಳುವ ನಾಯಕರುಗಳ ಬೆಂಗಾಲಿನ ಕೋಟೆಯನ್ನ ನೋಡಿದಾಗ ಬೇಸರವಾಗುತ್ತದೆ ಜನಸಾಮಾನ್ಯರು ನಾಯಕರುಗಳ ಬಳಿಗೆ ಹೋಗಲು ಸಾಧ್ಯವೇ ಇಲ್ಲ ಇಂತಹ ಪರಿಸ್ಥಿತಿಯಲ್ಲಿ ಎಲ್ಲರೊಂದಿಗೆ ಬೆರೆಯುತ್ತಿದ್ದ ಜೀವರಾಜ್ ನೆನಪಾಗುತ್ತಾರೆ
ರಾಜಕಾರಣಿಯಾಗಿ ಸಂಘಟನೆ ವಿಚಾರಕ್ಕೆ ಒಂದು ಪಕ್ಷಕ್ಕೆ ಸೀಮಿತವಾಗಿದ್ದ ಇವರು ಸ್ನೇಹಿತರಾಗಿ ಎಲ್ಲರೊಂದಿಗೆ ಬೆರೆಯುತ್ತಿದ್ದರು ಸಹಾಯ ಮಾಡುವ ಸಂದರ್ಭದಲ್ಲಿ ಪಕ್ಷದ ಚೌಕಟ್ಟು ಮೀರಿ ಸ್ಪಂದಿಸುತ್ತಿದ್ದರು ಅದಕ್ಕಾಗಿಯೇ ಇವರ ಸ್ನೇಹಿತರ ಮತ್ತು ವಿಶ್ವಾಸಿಗರ ಬಳಗದಲ್ಲಿ ಎಲ್ಲ ಪಕ್ಷದವರು ಇರುತ್ತಿದ್ದರು
ಹುತ್ತಕ್ಕೆ ಕೈಹಾಕಿ, ಹಾವು ಹಿಡಿಯುವಂತಹ ಎದೆಗಾರಿಕೆ ಇವರ ರಾಜಕಾರಣದ ಬದುಕಿನಲ್ಲಿ ಸಾಕಷ್ಟು ಸಂಭವಿಸಿದೆ ಇವರು ನೆಲಕ್ಕೆ ಬಿದ್ದವರನ್ನು ಎತ್ತುವ ಸಲುವಾಗಿ ಮುಂದೆ ನಿಂತು ಮೇಲಕ್ಕೆ ಎದ್ದವರು ಇವರನ್ನು ತುಳಿದು ಮುಂದೆ ಹೋದ ಕಾರಣದಿಂದ ಜೀವರಾಜ್ ರವರು ಸಾಕಷ್ಟು ನೋವಿನ ಕ್ಷಣಗಳನ್ನು ರಾಜಕಾರಣದಲ್ಲಿ ಅನುಭವಿಸಿದರು ಈ ಯಾತನೆಗಳು ಅವರ ಮನಸ್ಸು ಮತ್ತು ದೇಹವನ್ನು ದುರ್ಬಲಗೊಳಿಸಿತು ಇವುಗಳ ಪರಿಣಾಮವೇ ಇನ್ನೂ ಬಾಳಿ ಬದುಕಬೇಕಾಗಿದ್ದ ರಾಜಕಾರಣದ ದಾರಿಯಲ್ಲಿ ಬಹುದೂರ ಸಾಗಬೇಕಾಗಿದ್ದ ಎತ್ತರಕ್ಕೆ ಏರಿ ನಿಲ್ಲಬೇಕಾಗಿದ್ದ ಇವರ ಬದುಕು 2001ರ ಫೆಬ್ರವರಿ 12ರಂದು ಮುಗಿದೆ ಹೋಯಿತು.
-ಕೆ.ಎಸ್ ನಾಗರಾಜ್