*ಭಾರತದ ಮೊದಲ ದಲಿತ ಪ್ರಧಾನಿ ತೊಡಕು ಸಾಧ್ಯತೆಗಳು.*
– ಖಾಸಿಂ ಸಾಬ್. ಎ . ಬೆಂಗಳೂರು.
ಸಾವಿರಾರು ವರ್ಷಗಳ ಕಾಲದಿಂದ ವರ್ಣ ಜಾತಿಯ ಕಾರಣಕ್ಕಾಗಿ ಸಾಮಾಜಿಕನ್ಯಾಯ ಹಾಗು ಅಧಿಕಾರದ ಎಲ್ಲಾ ಅವಕಾಶಗಳಿಂದ ವಂಚಿತರಾಗಿರುವ ದಲಿತರು ನಾಗರಿಕಹಕ್ಕುಗಳು ಮತ್ತು ಹಳ್ಳಿಯಿಂದ ದಿಲ್ಲಿಯವರೆಗಿನ ಎಲ್ಲಾ ರಾಜಕೀಯ ಅವಕಾಶಗಳಿಂದ ಇಂದಿಗೂ ವಂಚಿತರಾಗಿದ್ದಾರೆ.
ಡಾ.ಬಾಬಾಸಾಹೇಬ್ ಅಂಬೇಡ್ಕರರ ಸಂಸದೀಯ ಪ್ರಜಾಪ್ರಭುತ್ವದ ಸಂವಿಧಾನದ ಮೂಲಕವೇ ದಲಿತ, ಶೋಷಿತರ ಸಾಮಾಜಿಕ ನ್ಯಾಯ ಸಾಧ್ಯ. ಈಮೂಲಕವೆ ರಾಜಕೀಯ ಪಾಲುದಾರಿಕೆ, ಹಂಚಿಕೆ ಸಾಧ್ಯ ಎಂಬ ಕಲ್ಪನೆಗೆ ಭಾರತಕ್ಕೆ ದಲಿತ ಪ್ರಧಾನಿಎಂಬ ಕೂಗು ಹಿಂಬು ನೀಡಿದೆ. ಸ್ವಾತಂತ್ರ್ಯ ಸಂಗ್ರಾಮದ ಫಲವಾಗಿ ಬ್ರಿಟಿಷರಿಂದ ರಾಜಕೀಯ ಸ್ವಾತಂತ್ರ್ಯವನ್ನು ಪಡೆದರೂ, ಅದು ರಾಜಕೀಯ ಹಸ್ತಾಂತರವಾಗಿಯೇ ಉಳಿದಿದೆಯೆ ಹೊರತು ದೇಶದ ದಲಿತರ, ಮಹಿಳೆಯರ, ಧಾರ್ಮಿಕ ಅಲ್ಪಸಂಖ್ಯಾತ ಮುಸ್ಲಿಮರ, ಶೋಷಿತ ಸಮುದಾಯಗಳ ಪಾಲಿಗೆ ಈ ಸ್ವತಂತ್ರ ಇನ್ನು ಸಾಧ್ಯವಾಗಿಲ್ಲ. ಅಸಮಾನತೆಯ ಸಿದ್ಧಾಂತಃಗಳಲ್ಲಿಯೆ ಇಂದಿಗೂ ಜೀವಿಸುತ್ತಿರುವ ದೇಶದ ಜಾತಿಗ್ರಸ್ಥ, ಧರ್ಮಗ್ರಸ್ಥ ಹಾಗು ಪಾಳೆಗಾರಿಕೆಯ ವ್ಯವಸ್ಥೆಯಿಂದ ಭಾರತೀಯ ರಾಜಕಾರಣ ಸ್ವಾತಂತ್ರ್ಯ ಪಡೆಯಲು ಸಾಧ್ಯವಾಗಲಿಲ್ಲ.
ಭಾರತ ಸ್ವಾತಂತ್ರದ ಎಂಟುವರೆ ದಶಕಗಳ ನಂತರದ ರಾಷ್ಟ್ರರಾಜಕಾರಣದ ಪ್ರಬಲ ಕೂಗು ದೇಶಕ್ಕೆ ದಲಿತ ಪ್ರಧಾನ ಮಂತ್ರಿಯೆಕೆ ಆಗಬಾರದು ಅಥವ ಆಗಬೇಕು ಎಂಬುದು.ಈ ಧ್ವನಿಯ ಹಿಂದೆಯೇ ಇದುವರೆಗೂ ಭಾರತ ಒಬ್ಬ ದಲಿತ ಅಸ್ಪೃಶ್ಯ ವ್ಯಕ್ತಿ / ಪ್ರತಿನಿದಿ ದೇಶದ ಪ್ರಧಾನಿಯ ಹುದ್ದೆಗೇರಲಿಲ್ಲ ಅಥವ ಈ ಸ್ಥಾನಪಡೆಯಲು ಬಿಟ್ಟಿಲ್ಲ ಅಥವಾ ಈ ಹುದ್ದೆ ಅಲಂಕರಿಸಲು ಭಾರತೀಯ ಜಾತಿ ಕೇಂದ್ರೀತ ರಾಜಕಾರಣ ಒಪ್ಪಿಲ್ಲ. ಎಂಬ ಕಟು ಸತ್ಯವೂ ಅಡಗಿದೆ. ಈ ನಗ್ನ ಸತ್ಯ ಕಾಂಗ್ರೆಸ್ ಪಕ್ಷವೂ ಸೇರಿ ದೇಶದ ಎಲ್ಲಾ ರಾಜಕೀಯಪಕ್ಷಗಳಿಗೂ ಅನ್ವಯವಾದ ರಾಜಕೀಯ ನೀತಿಯೆ ಆಗಿದೆ. ಭಾರತೀಯ ಸಾಮಾಜವು ಮೂಲತಃ ವರ್ಣ, ವರ್ಗ, ಜಾತಿಯಾದಾರಿತ ಮನಸ್ಥಿತಿಯುಳ್ಳದ್ದೆ ಆಗಿದ್ದು ಇಂತಹ ಸಾಮಾಜಿಕ ಸಂರಚನೆ ಯಿಂದ ಹುಟ್ಟಿದ ಎಲ್ಲಾ ರಾಷ್ಟೀಯ ಪ್ರಾದೇಶಿಕ ಪಕ್ಷಗಳೂ ಸಹ ದಲಿತ ಪ್ರಧಾನಿಯ ಕಲ್ಪನೆಯನ್ನು ಅಷ್ಟು ಸಹಜವಾಗಿ ಇದುವರೆಗೂ ಸ್ವೀಕರಿಸಲು, ಬೆಂಬಲಿಸಲು ಸಾಧ್ಯವಾಗಲಿಲ್ಲ. ಭಾರತದ ವರ್ತಮಾನದ ಅಸ್ಪೃಶ್ಯರ ರಾಜಕೀಯ ನಿರಾಳವೆಂಬಂತೆ ಇಂದು ದಲಿತ ಪ್ರಧಾನಿ ಎಂಬ ಮಾತು ಮೊನ್ನೆಲೆಗೆ ಬಂದಿದೆ. ಅದೂ ವಿಶೇಷವಾಗಿ ಕಾಂಗ್ರೆಸ್ ಪಕ್ಷದ ಒಕ್ಕೂಟವಾದ ಇಂಡಿಯ ವೇದಿಕೆಯಲ್ಲಿಯೆ ಪ್ರಸ್ತಾಪವಾಗಿದೆ.
ಖರ್ಗೆ ಹೆಸರಿನ ಮೂಲಕ ಇತಿಹಾಸದ ರಾಷ್ಟ ರಾಜಕಾರಣದಲ್ಲಿ ಇಂದು ಎರಡನೇಯ ಬಾರಿ ಒಬ್ಬ ದಲಿತ ರಾಜಕಾರಣಿಯ ಹೆಸರು ಪ್ರಧಾನಿ ಹುದ್ದೆಗಾಗಿ ಮುನ್ನಲೆಗೆ ಬಂದಿದೆ.
ಮೊದಲಬಾರಿಗೆ ಕಾಂಗ್ರೆಸ್ ಪಕ್ಷದಲ್ಲಿ 8 ಬಾರಿ ಚುಣಾವಣೆಯಲ್ಲಿ ಗೆದ್ದಿದ್ದ ಪ್ರಭಾವಿ ರಾಜಕೀಯ ಮುಸ್ಸದ್ದಿ ಬಾಬು ಜಗಜೀವನ್ ರಾಮ್ ರ ಹೆಸರು ಕೇಳಿ ಬಂದಿತ್ತು. 1977 ಮತ್ತು 1979ರಲ್ಲಿ ಎರಡು ಬಾರಿಯೂ ಇವರು ಪ್ರಧಾನಿಯಾಗುವ ಅವಕಾಶಗಳಿದ್ದರು ಕಾಂಗ್ರೆಸ್ ಪಕ್ಷದಲ್ಲಿದ್ದ ಜಾತಿಗ್ರಸ್ಥ ಮೇಲ್ಜಾತಿ ಮುಖಂಡರೇ ಅಡ್ಡಗಾಲಾದ ಪರಿಣಾಮ ಮೊದಲ ದಲಿತ ಪ್ರಧಾನಿಯಾಗುವ ಅವಕಾಶ ತಪ್ಪಿತ್ತು. ಇದರಿಂದ ಬೇಸತ್ತ ಜಗಜೀವನ್ ರಾಮ್ ಕೊನೆಗೆ ಪಕ್ಷದಿಂದ ಹೊರಬಂದು Congress for Democracy (CFD) ಎಂಬ ರಾಜಕೀಯ ಪಕ್ಷವನ್ನು ಸ್ಥಾಪಿಸಿ ಆನಂತರ ಇವರ ಪಕ್ಷವನ್ನು ಜನತಾ ಸರ್ಕಾರದೊಂದಿಗೆ ವಿಲೀನಗೊಳಿಸಿ ಕೊನೆಗೆ ಉಪಪ್ರಧಾನಿಯಾದರು.
ಜಗತ್ತಿನ ರಾಜಕೀಯ ಇತಿಹಾಸ ಕಂಡಾಗ, ವರ್ಣ ಶ್ರೇಷ್ಠತೆಯ ಗೀಳಿನಲ್ಲಿಯೇ ನೂರಾರು ವರ್ಷಗಳು ಅಧಿಕಾರನಡೆಸಿದ ಜ್ಯೋತೆಗೆ, ನೂರು ವರ್ಷಗಳು ಜಗತ್ತಿನ ದೊಡ್ಡಣ್ಣನಾಗಿ ಆಳಿದ ಅಮೇರಿಕಾದಂತ ದೇಶವುಸಹ ಬಾರಾಕ್ ಒಬಾಮಾರಂತ ಕರಿಯರನ್ನು ತನ್ನ ದೇಶದ ಅತ್ಯನ್ನತ ಸ್ಥಾನವಾದ ಅಧ್ಯಕ್ಷ ಪದವಿನೀಡಿ ಒಬ್ಬ ಕರಿಯ ಆಳುವ ಅವಕಾಶವನ್ನು ನೀಡಿತು . ಹಾಗೆಯೇ ಸೂರ್ಯ ಮುಳುಗದ ಸಾಮ್ರಾಜ್ಯವಾಗಿ, ಒಂದು ಕಾಲದಲ್ಲಿ ಭಾರತವನ್ನು ತನ್ನ ವಸಾಹತು ದೇಶವಾಗಿಸಿಕೊಂಡು ತನ್ನ ಆಡಳಿತಾವಧಿಯಲ್ಲಿ ತಮ್ಮ ಹೋಟಲ್ ಮತ್ತು ಕ್ಲಬ್ ಗಳಲ್ಲಿ ಭಾರತೀಯರು ಮತ್ತು ನಾಯಿ ಗಳಿಗೆ ಪ್ರವೇಶವಿಲ್ಲ ಎಂದು ನಾಮಫಲಕಗಳನ್ನು ಹಾಕಿ ತಮ್ಮ ವರ್ಣಶ್ರೇಷ್ಠತೆಯನ್ನು ಪ್ರದರ್ಶಿಸಿದ ಬ್ರಿಟಿಷರ ಬ್ರಿಟನ್ ದೇಶ ಕೂಡ ಇಂದು ಭಾರತೀಯನಾದ ಸುನಾಕ್ ರನ್ನು ತಮ್ಮ ದೇಶದ ಪ್ರಧಾನಿಯಾಗಿ ಆಯ್ಕೆ ಮಾಡಿಕೊಂಡಿತು . ಆದರೆ ಭಾರತದಲ್ಲಿ ಮಾತ್ರ ಸ್ವಾತಂತ್ರ್ಯನಂತರವೂ ಕೂಡ ಬಹುಪಕ್ಷಿಯ ಸಂಸದಿಯ ಪ್ರಜಾಪ್ರಭುತ್ವದಲ್ಲಿ ಇಂದಿಗೂ ದಲಿತ ಪ್ರಧಾನಿಯನ್ನು ನೋಡಲು ಸಾಧ್ಯವಾಗಲಿಲ್ಲ. ಅಲ್ಲದೆ, ಸಮಾಜವಾದ, ಮಾರ್ಸ್ ವಾದ, ಅಂಬೇಡ್ಕರ್ ವಾದ, ಪೆರಿಯಾರ್ ವಾದ, ಸಮಸಮಾಜವಾದ ಬಯಸುವ ಅನೇಕ ಪಕ್ಷಗಳು ಹಲವಾರು ರಾಜ್ಯಗಳಲ್ಲಿ ಅಧಿಕಾರಸ್ಥಾಪಿಸಿ ಆಡಳಿತನಡೆಸಲು ಸಾಧ್ಯವಾಗಿದ್ದರೂ ಇಂದಿನವರೆಗೂ ಯಾವುದೇ ಪಕ್ಷವು ತನ್ನದೆ ದೇಶದ ದಲಿತ, ಮುಸ್ಲಿಂ, ಮಹಿಳೆಯರಿಗೆ ದೇಶದ ಪ್ರಧಾನಿಯಾಗಲು ಬಿಟ್ಟಿಲ್ಲ.
ಇತ್ತೀಚೆಗೆ ನಡೆದ INDIA ಮೈತ್ರಿಕೂಟದ ಸಭೆಯಲ್ಲಿ ಪಶ್ಚಿಮ ಬಂಗಾಳದ TMCಯ ಮಮತ ಬ್ಯಾನರ್ಜಿ ಹಾಗು ಆಪ್ ನ ಕೇಜ್ರಿವಾಲ್ ರವರು ಮಲ್ಲಿಕಾರ್ಜುನ ಖರ್ಗೆ ಹೆಸರನ್ನು ಪ್ರಧಾನಿ ಹುದ್ದೆಗೆ ಸೂಚಿಸುವ ಮೂಲಕ ದಲಿತ ಪ್ರಧಾನಿ ಎಂಬ ಐತಿಹಾಸಿಕ ಕಲ್ಪನೆಗೆ ಮರು ಹುಟ್ಟು ನೀಡಿದ್ದಾರೆ.
ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಯವರನ್ನು ‘ಇಂಡಿಯಾ’ ಒಕ್ಕೂಟದ ಸಹ ಸದಸ್ಯಪಕ್ಷಗಳೇ ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡುವ ಮಾತುಗಳನ್ನು ಆ ಒಕ್ಕೂಟದ ವೇದಿಕೆಯ ನಾಯಕರಿಂದಲೇ ವ್ಯಕ್ತವಾಗಿವೆ. ದೇಶದ ರಾಜಕೀಯದ ಮಟ್ಟಿಗೆ ಇದು ಪ್ರಮುಖ ಹಾಗು ಮಹತ್ವದ ಬೆಳವಣಿಗೆ.
ಪ್ರಧಾನಿ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆಯವರ ಹೆಸರು ಪ್ರಸ್ತಾಪಗೊಂಡದ್ದು ಕಾಂಗ್ರೆಸೇತರ ಹಾಗು BSP, LJP, RPI, ದಲಿತ್ ಪ್ಯಾಂಥರ್ಸ್ ನಂತಹ ದಲಿತ ಮುಂದಾಳತ್ವದ ಪಕ್ಷಗಳಿಂದಲ್ಲ. ದಲಿತೆತರ ಪಕ್ಷ ಹಾಗು ನಾಯಕರಿಂದ ಎಂಬುದು ಗಮನರ್ಹ.
ಅನಿರೀಕ್ಷಿತವಾದರೂ, ಇದು ಒಂದು ರೀತಿಯಲ್ಲಿ ಬಿಜೆಪಿ ವಿರೋಧಿ ಒಕ್ಕೂಟಕ್ಕೆ ಅನಿವಾರ್ಯವೂ ಕೂಡ. ‘ಇಂಡಿಯಾ’ ಒಕ್ಕೂಟದಲ್ಲಿ ಕಾಂಗ್ರೆಸ್ ದೊಡ್ಡ ಪಕ್ಷವಾಗಿದೆ. ಬಿಜೆಪಿಯ ಮಟ್ಟಿಗೆ ಪ್ರಮುಖ ಪ್ರತಿಪಕ್ಷವೂ ಆಗಿದೆ. ದೇಶದಲ್ಲಿ ಈಗಾಗಲೇ ಸುಮಾರು 150 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿಗೆ ಕಾಂಗ್ರೆಸ್ ನೇರಾ ನೇರ ಪ್ರತಿರೋಧ ಒಡ್ಡುತ್ತಿದೆ. ಯಾವುದೇ ಒಕ್ಕೂಟದಲ್ಲಿ ದೊಡ್ಡ ಪಕ್ಷದವರೇ ಪ್ರಧಾನಿ ಅಭ್ಯರ್ಥಿಯಾಗುವುದು ಸ್ವಾಭಾವಿಕ. ಕಾಂಗ್ರೆಸ್ ಪಕ್ಷದ ಹೈಕಮಾಡ್ ಸೋನಿಯಾ ಗಾಂಧಿ ಹಾಗು ರಾಹುಲ್ ಗಾಂಧಿ ಕೂಡ ಖರ್ಗೆಯವರನ್ನು ಪ್ರಧಾನಿ ಅಭ್ಯರ್ಥಿಎಂದು ಒಪ್ಪುವ ಎಲ್ಲಾ ಸಾಧ್ಯತೆ ಕಾರಣಗಳು ದಟ್ಟವಾಗಿವೆ. ಇನ್ನು ಕಾಂಗ್ರೆಸ್ ನೊಳಗಿನ ಮೇಲ್ಜಾತಿ ಬಲಿಷ್ಠ ನಾಯಕರ ಒಪ್ಪಿಗೆ ಅಷ್ಟು ಸುಲಭವಲ್ಲದಿದ್ದರು ರಾಹುಲ್ ಗಾಂಧಿಯ ಶೃಜನಶೀಲ ಪ್ರಗತಿಪರ ನಿಲುವುಗಳೇ ಮುಂದಿನ ಕಾಂಗ್ರೆಸ್ ಪಕ್ಷದ ಭವಿಷ್ಯ ವಾಗುತ್ತಿರುವುದರಿಂದ ಪಕ್ಷದ ಖರ್ಗೆ ವಿರೋಧಿ ಒಳಗುದಿ ತಾತ್ಕಾಲಿಕವಾಗಿ ತಣ್ಣಗಾಗಬಹುದು. ಖರ್ಗೆ ಯಂತಹ ಹಿರಿಯ ರಾಜಕೀಯ ಮುಸ್ಸದ್ದಿ, ಪ್ರಖರ ವಾಗ್ಮಿಯನ್ನು ಸಹವಾಗಿಯೇ ಲೋಹಿಯ ಸಮಾಜವಾದದ ಸಿದ್ಧಾಂತಃಗಳನ್ನು ನಂಬಿರುವ ನಿತಿನ್ ಕುಮಾರ್, ಮೂಲಾಯಮ್ ಸಿಂಗ್ ಯಾದವ್, ಲಾಲು ಪ್ರಸಾದ್ ಯಾದವ್ ರವರು ಒಪ್ಪಿಕೊಳ್ಳಬೇಕಿದೆ. ದಕ್ಷಿಣದ ಎಡಪಂತಿಯರ ಅಧಿಕಾರವುಳ್ಳ ಕೇರಳ, ಪೆರಿಯಾರ್ ವಿಚಾರಪ್ರೇರಿತ ತಮಿಳುನಾಡು , ಕರ್ನಾಟಕ, ಆಂಧ್ರ ಪ್ರದೇಶ್ ಹಾಗು ತೆಲಂಗಾಣ ರಾಜ್ಯಗಳ ಅಧಿಕಾರಸ್ಥ ಪಕ್ಷಗಳು ಈಗಲೇ india ಒಕ್ಕೂಟದ ಸಹಭಾಗಿ ಪಕ್ಷಗಳಾಗಿವೆ. ಮುಖ್ಯವಾಗಿ ಈ ದಕ್ಷಿಣಭಾರತದ ರಾಜ್ಯಗಳು ಬಿಜೆಪಿ ಏತರ ಪಕ್ಷಗಳು ಅಧಿಕಾರದಲ್ಲಿದ್ದು ಸುಮಾರು 200 ಲೋಕಸಭಾ ಕ್ಷೇತ್ರಗಳನ್ನು ಹೊಂದಿವೆ. ದಕ್ಷಿಣ ಭಾರತದ ಕರ್ನಾಟಕದ ಖರ್ಗೆ ಪ್ರಧಾನಿ ಎಂದು ಬಿಂಬಿಸುವಮೂಲಕ, ದಲಿತ ಪ್ರಧಾನಿಎಂಬ ಪ್ರಚಾರದಿಂದ ರಾಷ್ಟ್ರದಂತ್ಯ ದಲಿತ ಮತಗಳ ಕೃಡಿಕರಣ, ಜ್ಯೋತೆಗೆ ಸೆಕ್ಯುಲರ್ ಅಜಂಡದೊಂದಿಗೆ ಮುಸ್ಲಿಮರ ಮತಗಳನ್ನು ಪಡೆಯುವ ಮೂಲಕ ಬಿಜೆಪಿಯನ್ನು ಸೋಲಿಸುವ ರಾಜಕೀಯ ಲೆಕ್ಕಾಚಾರವು india ಒಕ್ಕೂಟವು ಒಳಗೊಂಡಿದೆ. ಅಲ್ಲದೆ ಇಪತ್ತಕ್ಕೂ ಹೆಚ್ಚು ಪಕ್ಷಗಳ ವೇದಿಕೆಯಾದ ಈ ಅಲೆಯನ್ಸ್ ಅನ್ನು ಸಮಾಧಾನಿಸಿ, ಸಮನ್ವಯಗೊಳಿಸುವುದು ಅಷ್ಟು ಸುಲಭದ ಕಾರ್ಯವಲ್ಲ. ಇದರ ಜ್ಯೋತೆಗೆ ಸಂಘಪರಿವಾರದ ಹಿಂದುತ್ವದ ಸಾಂಸ್ಕೃತಿಕ ರಾಜಕಾರಣ ಹಾಗು ಮುಸ್ಲಿಂ ವಿರೋಧಿ ಅಜಂಡವನ್ನೇ ವೋಟ್ ಬ್ಯಾಂಕ್ ಆಗಿಸಿಕೊಂಡು ಎರಡು ಬಾರಿ ಗೆದ್ದು ಅಧಿಕಾರ ಹಿಡಿದ ಬಿಜೆಪಿ ಹಾಗು ನರೇಂದ್ರ ಮೋದಿಯವರನ್ನು ಸೋಲಿಸುವಂತಹ ದೊಡ್ಡ ಜವಾಬ್ದಾರಿಗಳನ್ನು ನಿಭಾಯಿಸುವ ಹಿರಿತನ ಮತ್ತು ಅರ್ಹ ವ್ಯಕ್ತಿತ್ವ ಖರ್ಗೆಯವರಿಗಿದೆ ಎಂಬ ಕಾರಣಕ್ಕಾಗಿಯೆ ಕಾಂಗ್ರೆಸಲ್ಲದ ಹಾಗು ದಲಿತೇತರ ನಾಯಕರಾದ ಅರವಿಂದ್ ಕೇಜ್ರಿವಾಲ್ ಮತ್ತು ಮಮತಾ ಬ್ಯಾನರ್ಜಿಯವರು ಪ್ರಧಾನಿ ಅಭ್ಯರ್ಥಿಯಾಗಿ ಖರ್ಗೆಯವರ ಹೆಸರನ್ನು ಸೂಚಿಸಿದ್ದು.
India ಒಕ್ಕೂಟ ಪಕ್ಷಗಳ ದಲಿತ ಪ್ರಧಾನಿ ಎಂಬ ರಾಜಕಾರಣದ ಹಿಂದೆ ಏನೆ ರಾಜಕೀಯವಿದ್ದರೂ, ವಿದ್ಯಾರ್ಥಿ ದೇಸೆಯಲ್ಲಿಯೆ ರಾಜಕಾರಣದ ಆಸಕ್ತಿಯುಳ್ಳ ಖರ್ಗೆ ಕಾನೂನು ಪದವಿದರರು.1969ರಲ್ಲಿ ಪಕ್ಷ ಸೇರಿ ಕಲಬುರಗಿ ನಗರ ಕಾಂಗ್ರೆಸ್‌ನ ಅಧ್ಯಕ್ಷರಾದರು. 1972ರಲ್ಲಿ ಗುರುಮಿಠಕಲ್ ಕ್ಷೇತ್ರದಿಂದ ಸ್ಪರ್ಧಿಸಿ ವಿಧಾನಸಭೆಗೆ ಮೊದಲ ಬಾರಿಗೆ ಆಯ್ಕೆಯಾದರು. ಅಂದಿನಿಂದ ಸತತ ಎಂಟು ಬಾರಿ ವಿಧಾನಸಭೆಗೆ ಆಯ್ಕೆಯಾದ ಖರ್ಗೆ, 2008ರ ಕ್ಷೇತ್ರ ಪುನರ್‌ವಿಂಗಡಣೆಯ ನಂತರ ಚಿತ್ತಾಪುರಕ್ಕೆ ಬಂದು, ಅಲ್ಲಿಂದ ಸ್ಪರ್ಧಿಸಿ ಸತತ ಒಂಬತ್ತನೇ ಬಾರಿಗೆ ಶಾಸಕರಾದರು.
ಖರ್ಗೆ ಕರ್ನಾಟಕ ಸರಕಾರದ ಹಲವು ಮುಖ್ಯಮಂತ್ರಿಗಳ ಸಂಪುಟದಲ್ಲಿ ಪ್ರಮುಖ ಖಾತೆಗಳ ಸಚಿವರಾಗಿ ಕೆಲಸ ಮಾಡಿದ್ದಾರೆ. 1976ರಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾಗಿ, 1978ರ ದೇವರಾಜ ಅರಸುರವರ ಸಂಪುಟದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯ್ ರಾಜ್ ರಾಜ್ಯ ಸಚಿವ, 1980ರಲ್ಲಿ ಗುಂಡೂರಾವ್ ರವರ ಸಂಪುಟದಲ್ಲಿ ಕಂದಾಯ ಸಚಿವ, 1990ರಲ್ಲಿನ ಬಂಗಾರಪ್ಪ ಸಂಪುಟದಲ್ಲಿ ಕಂದಾಯ ಮತ್ತು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ, 1992ರ ವೀರಪ್ಪ ಮೊಯ್ಲಿ ಸಂಪುಟದಲ್ಲಿ ಸಹಕಾರ ಮತ್ತು ಮಧ್ಯಮ ಹಾಗೂ ಬೃಹತ್ ಕೈಗಾರಿಕಾ ಸಚಿವ, 1999ರಲ್ಲಿ ಎಸ್ ಎಂ ಕೃಷ್ಣ ಸಂಪುಟದಲ್ಲಿ ಗೃಹ ಸಚಿವರಾಗಿಯೂ ಮಲ್ಲಿಕಾರ್ಜುನ ಖರ್ಗೆ ಜವಾಬ್ದಾರಿ ನಿರ್ವಹಿಸಿದ್ದಾರೆ. ಅಲ್ಲದೆ, 2004ರ ಧರ್ಮಸಿಂಗ್ ಸಂಪುಟದಲ್ಲಿ ಸಾರಿಗೆ ಮತ್ತು ಜಲಸಂಪನ್ಮೂಲ ಸಚಿವರೂಸಹ ಆಗಿದ್ದರು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಹಲವಾರು ಬಾರಿ ಮುಖ್ಯಮಂತ್ರಿ ಗಾದಿಯ ಸನಿಹ ಬಂದಿದ್ದ ಖರ್ಗೆಯವರು ಕೊನೆಯ ಗಳಿಗೆಯ ಜಾತಿ ರಾಜಕೀಯ ಲೆಕ್ಕಾಚಾರಗಳಿಂದ ವಂಚಿತರಾಗಿದ್ದರು.
1994 ಹಾಗೂ 2008ರಲ್ಲಿ ರಾಜ್ಯ ವಿಧಾನಸಭೆಯ ವಿಪಕ್ಷ ನಾಯಕರಾಗಿದ್ದ ಖರ್ಗೆ 2005ರಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದರು. ಆ ನಂತರ ಎರಡು ಬಾರಿ ಸಂಸದರಾಗಿಆಯ್ಕೆ ಯಾಗಿ, ಮನಮೋಹನ್‌ಸಿಂಗ್ ಸಂಪುಟದಲ್ಲಿ ರೈಲ್ವೆ ಸಚಿವ, ಕಾರ್ಮಿಕ ಮತ್ತು ಉದ್ಯೋಗ ಸಚಿವ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾಗಿದ್ದರು. 2014-19ರವರೆಗೆ ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕರಾಗಿದ್ದರು. ಜ್ಯೋತೆಗೆ ರಾಜ್ಯಸಭೆಯಲ್ಲಿ ವಿಪಕ್ಷ ನಾಯಕರೂ ಆಗಿದ್ದರು. ನಂತರ 2019ರ ಲೋಕಸಭಾ ಚುನಾವಣೆಯಲ್ಲಿ ಸೋತರು. ಅದು ಅವರ ಐದು ದಶಕಗಳ ಚುನಾವಣಾ ರಾಜಕಾರಣದಲ್ಲಿನ ಮೊದಲ ಸೋಲು.
ಖರ್ಗೆ ಕೂಡ ದೇವೇಗೌಡರಂತೆಯೇ ಪ್ರಬುದ್ಧ ರಾಜಕಾರಣಿ. ಸಾಧ್ಯವಾದರೆ ಎರಡನೇ ಕನ್ನಡಿಗ ಪ್ರಧಾನಿ. ಶೂದ್ರ ಹಾಗು ದಲಿತ ಪ್ರಧಾನಿಗಳನ್ನು ದೇಶಕ್ಕೆ ಕೊಡುಗೆ ಕೊಟ್ಟ ರಾಜ್ಯ ಕರ್ನಾಟಕವಾಗಬಹುದು. ಇವರು ಅಧ್ಯಕ್ಷರಾದಾಗಿನಿಂದ ಕಾಂಗ್ರೆಸ್ ಪಕ್ಷ ಜನರಿಗೆ ಹಾಗೂ ಕಾರ್ಯಕರ್ತರಿಗೆ ಹೆಚ್ಚು ಹತ್ತಿರವಾಗುತ್ತಿದೆ. ಒಂದಷ್ಟು ಪಕ್ಷದ ನಾಯಕರು ಜಾತ್ಯತೀತ ತತ್ವಗಳಪರ ಬಹಿರಂಗವಾಗಿ ಹೇಳಿಕೆಗಳನ್ನು ನೀಡಿ ತಾವು ಕೂಡ ಜನಪದ, ಪ್ರಗತಿಪರ ಎಂದು ಸಾಬೀತು ಪಡಿಸಲು ಪ್ರಯತ್ನಿಸುತ್ತಿದ್ದಾರೆ ಎನ್ನುವುದು ಕೂಡ ಸತ್ಯ. ಕರ್ನಾಟಕದ ರಾಜಕಾರಣದಲ್ಲಿ ದಲಿತ ಮುಖ್ಯ ಮಂತ್ರಿಯ ಕೂಗು ಸಹ ದಶಕಗಳ ಹಿಂದಿನ ಒತ್ತಾಯವಾಗಿದೆ. ಇದರ ಮೊದಲ ಸಾಲಿನಲ್ಲಿ ಇದ್ದ ಹೆಸರು ಕೂಡ ಖರ್ಗೆಯವರದ್ದೇ. ದಲಿತರೊಳಗಿನ ಎಡ ಬಲ ಒಳಮೀಸಲಾತಿಗಳ ನಡುವೆಯು ಖರ್ಗೆ ಹೆಸರೆ ರಾಜ್ಯದ ಬಹುತೇಕ ಎಸ್ಸಿ ಎಸ್ಟಿ ಸಮುದಾಯಗಳ ಆಯ್ಕೆ ಯಾಗಿತ್ತು.
ಅಂಬೇಡ್ಕರರ ನೈಜ ಅನುಯಾಯಿ, ಸಮಾಜವಾದಿ, ಸಮ ಸಮಾಜದ ಕನಸುಳ್ಳ ಒಬ್ಬ ದಲಿತ ಪ್ರತಿನಿದಿಯಾಗಿ ಒಂದು ವೇಳೆ ಮಲ್ಲಿಕಾರ್ಜುನ ಖರ್ಗೆಯವರೇನಾದರೂ ಪ್ರಧಾನಿಯಾದರೆ, ದೇಶದ ಮೊದಲ ದಲಿತ ಪ್ರಧಾನಮಂತ್ರಿ ಎನ್ನಿಸಿಕೊಳ್ಳಲಿದ್ದಾರೆ. ಅಲ್ಲದೆ ಇಂದು ದೇಶದಲ್ಲಿ ತಾಂಡವವಾಡುತ್ತಿರುವ ಧರ್ಮದ್ವೇಷದ, ಜಾತಿ ಕೇಂದ್ರೀತ ರಾಜಕಾರಣದ ಬದಲಾಗಿ ಸೋಷಿತರ ಸಾಮಾಜಿಕನ್ಯಾಯದ ರಾಜಕಾರಣಕ್ಕೆ ಸಾಕ್ಷಿಯೂ ಆಗಬಹುದು.
####$$$$$$$$$$$$$$$$$$$$$$$$#####
Article by
B M Hanif
ಖರ್ಗೆ ಮತ್ತು ಪ್ರಧಾನಿ ಹುದ್ದೆ
*
ಮೊದಲನೆಯದಾಗಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕಂಗ್ರಾಚುಲೇಷನ್ಸ್ ಹೇಳೋಣ. ಇದಕ್ಕೆ ಎರಡು ಮುಖ್ಯ ಕಾರಣಗಳಿವೆ.
I.N.D.I.A ಒಕ್ಕೂಟದಲ್ಲಿ ಪ್ರಧಾನಿ ಅಭ್ಯರ್ಥಿಯ ಕುರಿತು ಸಹಮತ ಮೂಡಿಸುವಷ್ಟು ಸಾಮರ್ಥ್ಯ ಮತ್ತು ಸಜ್ಜನಿಕೆಯ ವ್ಯಕ್ತಿತ್ವ ಖರ್ಗೆ ಅವರಲ್ಲಿ ಇದೆ ಎನ್ನುವುದು ಮೊದಲ ಕಾರಣ.
ಎರಡನೆಯ ಕಾರಣ- ಚುನಾವಣೆಯ ಬಳಿಕ ಹೀಗೆ congratulations ಹೇಳುವ ಸಂದರ್ಭ ಸಿಗದೇ ಇರುವ ಸಾಧ್ಯತೆ ಹೆಚ್ಚು ಇರುವುದರಿಂದ, ಈಗಲೇ ಹೇಳುವುದು ಒಳ್ಳೆಯದು ಅಂತ.
ಇದನ್ನು ವ್ಯಂಗ್ಯ ಅಂತ ತಿಳಿಯಬೇಕಾದ ಅಗತ್ಯವಿಲ್ಲ. ಸಾಧ್ಯವಾದಷ್ಟು practical ಆಗಿಯೇ ಯೋಚಿಸೋಣ. ಏಕೆಂದರೆ ಸ್ವತಃ ಖರ್ಗೆಯವರೇ practical ಆಗಿ ಮಾತನಾಡಿದ್ದಾರೆ. “ಮೊದಲು ಬಹುಮತ ಬರುವಷ್ಟು ಎಂಪಿ ಗಳನ್ನು ಗೆಲ್ಲಿಸುವ ಬಗ್ಗೆ ಮಾತನಾಡೋಣ. ಬಹುಮತ ತರುವುದು ಹೇಗೆ ಎನ್ನುವುದನ್ನು ಚರ್ಚಿಸದೆ ಪ್ರಧಾನಿ ಅಭ್ಯರ್ಥಿ ಯಾರೆಂಬ ಬಗ್ಗೆ ಚರ್ಚಿಸುವುದರಲ್ಲಿ ಅರ್ಥವಿಲ್ಲ” ಎಂದು ಖರ್ಗೆ ಸ್ಪಷ್ಟವಾಗಿ ಹೇಳಿದ್ದಾರೆ.
INDIA ಸಭೆಯಲ್ಲಿ ಖರ್ಗೆಯವರನ್ನು ಒಕ್ಕೂಟದ ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಬೇಕೆಂದು ಸಲಹೆ ನೀಡಿದವರು ಮಮತಾ ಬ್ಯಾನರ್ಜಿ. ಅದನ್ನು ತಕ್ಷಣ ಬೆಂಬಲಿಸಿದವರು ಅರವಿಂದ ಕೇಜ್ರಿವಾಲ್. ಮಮತಾ ಅವರ ತೃಣಮೂಲ ಕಾಂಗ್ರೆಸ್ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ 23 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆ ಇದೆ. ಹಾಗೆಯೇ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ ದೆಹಲಿಯಲ್ಲಿ 6 ಮತ್ತು ಗುಜರಾತಲ್ಲಿ 1 ಸ್ಥಾನ ಗೆಲ್ಲುವ ಅಂದಾಜಿದೆ. ಇದಕ್ಕೆ ಕಾಂಗ್ರೆಸ್ ಗೆಲ್ಲಬಹುದಾದ 75ರಿಂದ 100 ಎಂಪಿ ಗಳ ಸಂಖ್ಯೆಯನ್ನು ಸೇರಿಸಿದರೆ, ಒಟ್ಟು 130 ಸಂಭಾವ್ಯ ಎಂಪಿ ಗಳ ಬೆಂಬಲ ಖರ್ಗೆ ಅವರಿಗೆ ಸಿಗಬಹುದು. ಖಂಡಿತವಾಗಿಯೂ ಇದು ಮಹತ್ವದ ಸಂಗತಿಯೇ. ಇನ್ನೊಬ್ಬ ನಾಯಕ ಬಿಹಾರದ ನಿತೀಶ್ ಕುಮಾರ್ ಗೆ ಇಷ್ಟು ಬೆಂಬಲ INDIA ಒಕ್ಕೂಟದಲ್ಲಿ ಸಿಗುವ ಛಾನ್ಸೇ ಇಲ್ಲ.
“ಮೊದಲು ರಾಜ್ಯವಾರು ಸೀಟು ಹಂಚಿಕೆಯನ್ನು ಅಂತಿಮಗೊಳಿಸೋಣ. ಆ ಬಳಿಕ ಪ್ರಧಾನಿ ಅಭ್ಯರ್ಥಿಯ ಮಾತು” ಎಂದು ಖರ್ಗೆ ಹೇಳಿದ್ದಾರೆ. ಅದು ಮೇಲ್ನೋಟಕ್ಕೆ ಅವರ ಸಜ್ಜನಿಕೆಯ ಮಾತು ಎಂದೇ ಗೋಚರಿಸುತ್ತದೆ. ಆದರೆ ಅದರ ಆಳದಲ್ಲಿ ಇರುವುದು ಅವರ “ಗಾಂಧಿ ಕುಟುಂಬದ ಪರಮ ನಿಷ್ಠೆಯೇ” ಎನ್ನುವುದರಲ್ಲಿ ಎರಡು ಮಾತಿಲ್ಲ. “ಮುಂದಿನ ಪ್ರಧಾನಿ ಅಭ್ಯರ್ಥಿಯ ಹೆಸರು ಸೋನಿಯಾ ಗಾಂಧಿಯವರ ಮನೆಯಿಂದ ಪ್ರಕಟವಾದರೆ ಮಾತ್ರ ಸರಿ” ಎನ್ನುವುದು ಖರ್ಗೆಯವರಿಗೂ ಚೆನ್ನಾಗಿ ಗೊತ್ತಿದೆ.
INDIA ಸಭೆಯಲ್ಲಿ ಪ್ರಧಾನಿ ಅಭ್ಯರ್ಥಿಯ ಬಗ್ಗೆ ಮಂಗಳವಾರ (ಡಿ.19) ಯಾವ ನಿರ್ಧಾರವೂ ಆಗಿಲ್ಲ. ಆದರೆ ಅದಾಗಲೇ ಕಾಂಗ್ರೆಸ್ಸಿನ ಕೆಲವು ಫೇಸ್ ಬುಕ್ ವೀರರು “ಮುಂದಿನ ಪ್ರಧಾನಿ ಅಭ್ಯರ್ಥಿ ಖರ್ಗೆಯವರಿಗೆ ಅಭಿನಂದನೆಗಳು” ಎಂದು ಶಂಖ ಊದಿ, ಜಾಗಟೆ ಬಾರಿಸಲು ಶುರು ಮಾಡಿದ್ದಾರೆ! ಇದರಿಂದ ಖರ್ಗೆಯವರಿಗೆ ನಷ್ಟವಾಗುವ ಸಾಧ್ಯತೆಯೇ ಹೆಚ್ಚು.
Anyhow, advance congratulations ಖರ್ಗೆಯವರೇ!
ಬರಹ
ಬಿ ಎಂ ಹನೀಫ್
ಹಿರಿಯ ರಾಜಕೀಯ ವಿಶ್ಲೇಷಕರು












