*”ಅನಂತಕುಮಾರ್ ಅವರ ಕರ್ತವ್ಯ ಪಾಲನೆ ಸ್ಪೂರ್ತಿದಾಯಕ”: ರಾಜ್ಯಪಾಲ ಥಾವರಚಂದ್ ಗೆಹಲೋಟ್*
*ಬೆಂಗಳೂರು 22.09.2023*: ಭಗವಾನ್ ಬಸವೇಶ್ವರರ ‘ಕಾಯಕವೇ ಕೈಲಾಸ’ ಮತ್ತು ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಅಂತ್ಯೋದಯವನ್ನು ನಂಬಿದ್ದ ಅಜಾತ ಶತ್ರು ದಿ. ಅನಂತಕುಮಾರ್ ಅವರ ಚಿಂತನೆ, ಆಲೋಚನೆಗಳು, ದೂರದೃಷ್ಟಿ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಮಾಡಿದ ಕೆಲಸಗಳು ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕ ಎಂದು *ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು
ನಗರದಲ್ಲಿ ಬಸವನಗುಡಿಯಲ್ಲಿ ಆಯೋಜಿಸಿದ್ದ ಅನಂತಕುಮಾರ್ ಅವರ 64 ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಆಯೋಜಿಸಿದ್ದ “ಅನಂತ ನಮನ 64” ಕಾರ್ಯಕ್ರಮದಲ್ಲಿ ಭಾಗವಹಿಸಿ, ಅನಂತ ಚೇತನ ಭಾರತೀಯ ಜ್ಞಾನ ಪ್ರಶಿಕ್ಷಣ ಕೇಂದ್ರವನ್ನು ಅನಾವರಣಗೊಳಿಸಿ ಮಾತನಾಡಿದರು.
ನನಗೆ 25 ಕ್ಕೂ ಹೆಚ್ಚು ವರ್ಷಗಳಿಂದ ಅನಂತಕುಮಾರ್ ಅವರ ಪರಿಚಯವಿದೆ. ನನ್ನ ತವರು ರಾಜ್ಯ ಮಧ್ಯಪ್ರದೇಶದಲ್ಲಿ ಮತ್ತು ಕೇಂದ್ರ ಸಚಿವ ಸಂಪುಟದಲ್ಲಿ ಅವರೊಂದಿಗೆ ತುಂಬಾ ನಿಕಟವಾಗಿ ಕೆಲಸ ಮಾಡಿದ್ದೇನೆ. ಬಹಳ ಹತ್ತಿರದಿಂದ ಅವರನ್ನು ಬಲ್ಲವನಾಗಿದ್ದೇನೆ. ಕೊನೆಯ ಕ್ಷಣದವರೆಗೂ ದಣಿವರಿಯಿಲ್ಲದೆ ಕೆಲಸ ಮಾಡಿದ ಕಾಯಕ ಯೋಗಿ ಅವರು. ಅನಂತಕುಮಾರ್ ಸಾರ್ವಜನಿಕ ಜೀವನದಲ್ಲಿ ಮಾತ್ರವಲ್ಲ, ಎಲ್ಲಾ ಕ್ಷೇತ್ರಗಳಲ್ಲೂ ಚಿರಸ್ಥಾಯಿಯಾಗಿದ್ದರು. ನಿಜವಾದ ದೇಶಭಕ್ತ, ಸಮಾಜ ಸೇವಕ, ಆದರ್ಶವಾದಿ ಮತ್ತು ಶಕ್ತಿಯುತ ಸಾರ್ವಜನಿಕ ಪ್ರತಿನಿಧಿಯೆಂದರೆ ಅದು ಅನಂತಕುಮಾರ್. ಪಕ್ಷದ ಸಂಘಟನೆಯ ಜವಾಬ್ದಾರಿಯಾಗಲಿ ಅಥವಾ ಸಮಾಜ ಸೇವಾ ಕಾರ್ಯವಾಗಲಿ, ಅವರದೇ ಆದ ವಿಶಿಷ್ಟ ಜೀವನಶೈಲಿಯಿಂದ ಅಳಿಸಲಾಗದ ಛಾಪು ಮೂಡಿಸಿದ್ದಾರೆ ಎಂದು ಶ್ಲಾಘಿಸಿದರು.
1997 ರಲ್ಲಿ, ಶ್ರೀ ಅನಂತ್ ಕುಮಾರ್ ಅವರು ತಮ್ಮ ತಾಯಿ ಶ್ರೀಮತಿ ಗಿರಿಜಾ ಶಾಸ್ತ್ರಿ ಅವರ ನೆನಪಿಗಾಗಿ ಅದಮ್ಯ ಚೇತನವನ್ನು ಪ್ರಾರಂಭಿಸಿದರು, ಇದರ ಮೂಲಕ ಸಮಾಜಕ್ಕೆ ಸೇವೆ ಸಲ್ಲಿಸುವ ಕೆಲಸವನ್ನು ದಶಕಗಳಿಂದ ಮಾಡಲಾಗುತ್ತಿದೆ. ಅದಮ್ಯ ಚೇತನದಿಂದ ಅನ್ನ-ಅಕ್ಷರ-ಆರೋಗ್ಯ, ಮಧ್ಯಾಹ್ನದ ಊಟ ಕಾರ್ಯಕ್ರಮ, ಶೂನ್ಯತ್ಯಾಜ್ಯ ಅಡುಗೆ ಮನೆ, ಹಸಿರು ಭಾನುವಾರ, ಸಿಸಿಗಳ ನೆಡುವಿಕೆ ಹೀಗೆ ಹಲವು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುತ್ತಿರುವುದು ಉತ್ತಮ ಕಾರ್ಯವಾಗಿದೆ ಎಂದು ಹೇಳಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಮಧ್ಯಾಹ್ನದ ಊಟದ ಕಾರ್ಯಕ್ರಮದಡಿಯಲ್ಲಿ ಕರ್ನಾಟಕದ ಬೆಂಗಳೂರು, ಹುಬ್ಬಳ್ಳಿ, ಕಲಬುರಗಿ ಮತ್ತು ರಾಜಸ್ಥಾನದ ಜೋಧಪುರದಲ್ಲಿ ಪ್ರತಿದಿನ 1.5 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಬಿಸಿ, ರುಚಿ ಮತ್ತು ಪೌಷ್ಟಿಕ ಆಹಾರವನ್ನು ನೀಡುತ್ತಿರುವ ಅದಮ್ಯ ಚೇತನದ ಕೆಲಸ ಶ್ಲಾಘನೀಯ. ಈ ಪರಿಣತಿಯ ಜೊತೆಗೆ ಉತ್ತರ ಪ್ರದೇಶದ ವಿಶ್ವವಿದ್ಯಾಲಯಗಳನ್ನು ಹಸಿರಾಗಿಸುವಲ್ಲಿ ಅದಮ್ಯ ಚೇತನವೂ ಸಹಾಯ ಮಾಡುತ್ತಿರುವುದು ಆಶ್ಚರ್ಯಕರವಾಗಿದೆ.
ಬೆಂಗಳೂರಿನಲ್ಲಿ ಪ್ರತಿದಿನ ಸಾವಿರಾರು ಮಕ್ಕಳಿಗೆ ಆಹಾರ ಪೂರೈಕೆ ಮಾಡುವ ಅದ್ಭುತವಾದ ಅದಮ್ಯ ಚೇತನ ಅಡುಗೆ ಮನೆ ನೋಡುವ ಅವಕಾಶ ಸಿಕ್ಕಿತು. ಅಡುಗೆಮನೆಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರಿಗೂ ನಾನು ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ ಎಂದ ಅವರು, ರಾಷ್ಟ್ರದ ಸೇವೆ ಮಾಡಲು ಜನರನ್ನು ಪ್ರೇರೇಪಿಸುವ ಉದ್ದೇಶದಿಂದ ಕಳೆದ ವರ್ಷ ಅನಂತ ಪ್ರೇರಣಾ ಕೇಂದ್ರವನ್ನು ಸ್ಥಾಪಿಸಲಾಗಿದೆ. ಶ್ರೀ ಅನಂತಕುಮಾರ್ ಜಿ ಯವರ ಚಿಂತನೆಗಳು ಮತ್ತು ಕಾರ್ಯಗಳನ್ನು ಮುಂದಕ್ಕೆ ಕೊಂಡೊಯ್ಯುವ ಕೆಲಸವನ್ನು ಅನಂತಕುಮಾರ್ ಪ್ರತಿಷ್ಠಾನದ ವತಿಯಿಂದ ಮಾಡುತ್ತಿರುವ ಶ್ರೀಮತಿ ತೇಜಸ್ವಿನಿ ಅನಂತಕುಮಾರ್ ಅವರ ಕಾರ್ಯ ಶ್ಲಾಘನೀಯ ಎಂದರು.
*ಅದಮ್ಯ ಚೇತನ ಮುಖ್ಯಸ್ಥೆ ಡಾ. ತೇಜಸ್ವಿನಿ ಅನಂತಕುಮಾರ್ ಮಾತನಾಡಿ*, ದೆಹಲಿಯ ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜುಕೇಶನ್ ನ ಇನ್ನೋವೇಟಿವ್ ಸೆಲ್ ಆಗಿರುವ ಇಂಡಿಯನ್ ನಾಲೇಜ್ ಸಿಸ್ಟಮ್ (IKS) ಅನುದಾನದ ಅಡಿಯಲ್ಲಿ ಅನಂತಕುಮಾರ್ ಪ್ರತಿಷ್ಠಾನದ ವತಿಯಿಂದ ಭಾರತೀಯ ಜ್ಞಾನ ಪ್ರಶಿಕ್ಷಣ ಕೇಂದ್ರವನ್ನು ಜಯನಗರದಲ್ಲಿ ಸ್ಥಾಪಿಸಲಾಗುತ್ತಿದೆ. ಈ ಪ್ರಶಿಕ್ಷಣ ಕೇಂದ್ರದ ಮೂಲಕ ಭಾರತೀಯ ಇತಿಹಾಸ, ಗಣಿತ, ವಾಸ್ತುಶಿಲ್ಪ, ಪುರಾಣದ ಬಗ್ಗೆ ನಮ್ಮ ಹಿರಿಯರ ದೃಷ್ಟಿಕೋನವನ್ನ ಇಂದಿನ ಪೀಳಿಗೆಯ ಪಠ್ಯಕ್ರಮದಲ್ಲಿ ಅಳವಡಿಸುವ ಉದ್ದೇಶ ಹೊಂದಿದ್ದೇವೆ ಎಂದರು. ದಿ. ಅನಂತಕುಮಾರ್ ಅವರು ಹಾಕಿಕೊಟ್ಟ ದಾರಿಯಲ್ಲಿ ಸಾಗುತ್ತಿದ್ದೇವೆ ಎಂದರು.
ಅನಂತಕುಮಾರರ ಒಡನಾಡಿಗಳ ಆತ್ಮೀಯ ಬರಹಗಳನ್ನು ಒಳಗೊಂಡ ʻಅನಂತ ನಮನʼ ಕೃತಿಯು ದಿ. 23 ರಂದು ಲೋಕಾರ್ಪಣೆಗೊಳಿಸಲಾಗುತ್ತದೆ.
ಕಾರ್ಯಕ್ರಮದಲ್ಲಿ ಅನಂತಕುಮಾರ್ ಪ್ರತಿಷ್ಠಾನದ ಅಧ್ಯಕ್ಷ, ಪ್ರಾಧ್ಯಾಪಕ ಪಿ.ವಿ. ಕೃಷ್ಣ ಭಟ್, ನ್ಯಾಯಮೂರ್ತಿ ಎನ್. ಕುಮಾರ್ ಸೇರಿದಂತೆ ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಮಾಜಿ ಸಚಿವರಾದ ಸಿ ಟಿ ರವಿ, ಮಾಜಿ ವಿಧಾನಸಭೆಯ ಅಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದಂತೆ ಅನೇಕ ಗಣ್ಯರು ಹಾಗೂ ಶ್ರೀ ಅನಂತಕುಮಾರ ಒಡನಾಡಿಗಳು, ಅಭಿಮಾನಿಗಳು, ಮುಖಂಡರು-ಕಾರ್ಯಕರ್ತರು ಪಾಲ್ಗೊಂಡಿದ್ದರು.