*ದಕ್ಷಿಣ ಕನ್ನಡ ಜಿಲ್ಲೆಯ ನಂದಾವರದಲ್ಲಿ ಗುಡ್ಡ ಕುಸಿತದಿಂದ ಸಂಭವಿಸಿದ ಸಾವಿಗೆ ಜಿಲ್ಲಾಡಳಿತವೆ ಹೊಣೆ: ಅಬ್ದುಲ್ ಮಜೀದ್ ರಾಜ್ಯಾಧ್ಯಕ್ಷರು, ಎಸ್ಡಿಪಿಐ*
*ಬೆಂಗಳೂರು, 12 ಜುಲೈ 2023:* ಸುಮಾರು ವರ್ಷಗಳಿಂದ ಗುಡ್ಡಕ್ಕೆ ಶಾಶ್ವತ ತಡೆಗೋಡೆ ನಿರ್ಮಿಸುವಂತೆ ಮನವಿ ಮಾಡುತ್ತಿದ್ದರೂ ಇಲ್ಲಿನ ಜಿಲ್ಲಾಡಳಿತ ಈ ಬಗ್ಗೆ ನಿರ್ಲಕ್ಷ್ಯ ತೋರಿದ ಕಾರಣಕ್ಕೆ ಇಂದು ಒಂದು ಜೀವ ಬಲಿಯಾಗಿ ಇಬ್ಬರು ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ದುರಂತಕ್ಕೆ ಜಿಲ್ಲಾಡಳಿತವೆ ನೇರ ಹೊಣೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಅವರು ಆರೋಪಿಸಿದ್ದಾರೆ.

ದುರಂತದಲ್ಲಿ ಸಂಪೂರ್ಣ ನಾಶವಾಗಿರುವ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ಕಳೆದ 6 ವರ್ಷಗಳಿಂದ ಇಲ್ಲಿನ ಅಪಾಯದ ಬಗ್ಗೆ ಇಲ್ಲಿನ ನಿವಾಸಿಗಳು ಸರ್ಕಾರಕ್ಕೆ ಮನವಿ ಸಲ್ಲಿಸುತ್ತಲೇ ಬಂದಿದ್ದಾರೆ. ಆದರೆ ಯಾರೂ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡಿಲ್ಲ. ಸರ್ಕಾರದ ನಿರ್ಲಕ್ಷ್ಯಕ್ಕೆ ಇಂದು ಒಂದು ಮಹಿಳೆಯ ಜೀವ ಹೋಗಿದೆ ಮತ್ತು ಆಕೆಯ ಪತಿ ಹಾಗೂ ಮಗಳು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು. ಸರ್ಕಾರ ತಕ್ಷಣ ಈ ಗುಡ್ಡಕ್ಕೆ ಅಡ್ಡಲಾಗಿ ಶಾಶ್ವತ ತಡೆಗೋಡೆ ನಿರ್ಮಿಸಬೇಕು ಅಥವಾ ಇಲ್ಲಿ ವಾಸ ಇರುವ ಏಳು ಕುಟುಂಬಗಳಿಗೆ ಪರ್ಯಾಯ ವಸತಿ ವ್ಯವಸ್ಥೆ ಮಾಡಿ ಸ್ಥಳಾಂತರಿಸಬೇಕು ಎಂದು ಸರ್ಕಾರವನ್ನು ಮಜೀದ್ ಅಗ್ರಹಿಸಿದರು.
ಈ ಬಗ್ಗೆ ಮಾತನಾಡಿದ ಸಜಿಪಾ ಮುನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸಬೀನಾ ನಂದಾವರ ಅವರೂ ಕೂಡ ಈ ದುರಂತಕ್ಕೆ ಜಿಲ್ಲಾಡಳಿತದ ನಿರ್ಲಕ್ಷ್ಯವೆ ಕಾರಣ ಎಂದು ದೂರಿದರು. ಇಲ್ಲಿರುವ ಗುಡ್ಡಕ್ಕೆ ಶಾಶ್ವತ ತಡೆಗೋಡೆ ಅಥವಾ ಕುಟುಂಬಗಳ ಸ್ಥಳಾಂತರ ಮಾಡುವಂತೆ ಜಿಲ್ಲಾಡಳಿತ ಹಾಗೂ ಮುಖ್ಯಮಂತ್ರಿಗಳಿವೆ ಪತ್ರ ಬರೆಯುವುದಾಗಿ ತಿಳಿಸಿದರು.

ಈ ಭೇಟಿಯ ಸಂದರ್ಭದಲ್ಲಿ ಪಕ್ಷದ ರಾಷ್ಟ್ರೀಯ ಸಮಿತಿ ಸದಸ್ಯ ಅಬ್ದುಲ್ ಹನ್ನಾನ್, ರಾಜ್ಯ ಪಧಾನ ಕಾರ್ಯದರ್ಶಿಗಳಾದ ಅಫ್ಸರ್ ಕೊಡ್ಲಿಪೇಟೆ, ಅಬ್ದುಲ್ ಲತೀಫ್ ಪುತ್ತೂರು, ಮಜೀದ್ ತುಂಬೆ, ರಾಜ್ಯ ಕಾರ್ಯದರ್ಶಿ ಅಶ್ರಫ್ ಮಾಚಾರ್, ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಅನ್ವರ್ ಸಾದತ್, ಬಂಟ್ವಾಳ ವಿಧಾನಸಭಾ ಅಧ್ಯಕ್ಷ ಮೋನಿಶ್ ಅಲಿ, ವಿಧಾನಸಭಾ ಕ್ಷೇತ್ರದ ಕಾರ್ಯದರ್ಶಿ ಕಲಂದರ್ ಪರ್ತಿ ಪಾಡಿ, ಹಾಗೂ ಸ್ಥಳೀಯ ಮುಖಂಡರು ಹಾಜರಿದ್ದರು.












