ಪ್ರೀತಿಯ ಚೆ ಗುವಾರ,

*ಇವತ್ತುನೀನು ಹುಟ್ಟಿದ ದಿನ.*
ಅಮ್ಮ ಅಪ್ಪನ ಮುದ್ದಿನ “ಟೆಟೆ”ಯಾಗಿದ್ದ ನೀನು ಪ್ರೀತಿ ಪಾತ್ರರ ಪಾಲಿಗೆ ಆತ್ಮೀಯ “ಚೆ”ಯಾದೆ.ನನಗೆ ಬಲು ಇಷ್ಟವಾದ ವಿಷಯ ಗಣಿತದಲ್ಲಿ ಆಸಕ್ತಿ ಹೊಂದಿದ್ದ ನೀನು ಇಂಜಿನಿಯರಿಂಗ್ ಓದಬೇಕೆಂದುಕೊಂಡಿದ್ದರೂ ವೈದ್ಯಕೀಯ ಅಭ್ಯಸಿಸಿದೆ. ವೈದ್ಯಶಾಸ್ತ್ರದಲ್ಲಿ ಸಂಶೋಧನೆ ಮಾಡಬೇಕೆಂದಿದ್ದ ನೀನು *ಜಗತ್ತಿನ ಹಸಿವು ಬಡತನಗಳನ್ನು ಕಂಡು ಅಪ್ಪಟ ಕಮ್ಯೂನಿಷ್ಟನಾದೆ.ದೇಹದ ನೋವುಗಳಿಗೆ ಔಷಧಿ ನೀಡುತ್ತಲೇ ಸಮಾಜದ ಬೇನೆಗಳಿಗೆ ಔಷಧಿ ನೀಡುತ್ತಾ ಹೋದೆ.*
ನಿನ್ನ ಚಿತ್ರವಿರುವ ಟೀಶರ್ಟ್,ಡೈರಿ ,ಪೆನ್ನು,ಸ್ಕಾರ್ಫ್,ಟೋಪಿ ….ಮುಂತಾದ ವಸ್ತುಗಳು, ನೀನು ಪ್ರವಾಸ ಕಾಲದಲ್ಲಿ ಬಳಸಿದ ಮೋಟಾರ್ ಬೈಕ್ ಇವುಗಳನ್ನೆಲ್ಲಾ ಬಳಸುವುದು ಯುವಜನತೆಗೆ ಫ್ಯಾಶನ್ ಆಗಿದೆ. *ವಿಪರ್ಯಾಸವೆಂದರೆ ಅವರಲ್ಲಿ ಬಹುತೇಕರಿಗೆ ನೀನು ಯಾರೆಂದೇ ಗೊತ್ತಿಲ್ಲ.* ಕಮ್ಯೂನಿಸಂ ಸಿದ್ಧಾಂತವಿರುವ ಪಕ್ಷ ಸೇರಿಕೊಂಡು ನಿನ್ನ ಬಗ್ಗೆ ತಿಳಿದಿರುವವರಲ್ಲೂ ಹಲವರಿಗೆ ನಿನ್ನ ಹೆಸರಿನ ಭೌತಿಕ ವಸ್ತುಗಳಷ್ಟೇ ಆಕರ್ಷಣೀಯವಾಯಿತೇ ವಿನಃ ನಿನ್ನ ಸರಳ ವ್ಯಕ್ತಿತ್ವ ಅನುಕರಣೀಯವಾಗಲಿಲ್ಲವಲ್ಲ
ಎನ್ನುವುದೇ ವಿಷಾದಕರ.
” *ಕಮ್ಯೂನಿಸಂ “ಎಂಬ ಮಾನವೀಯ ಸಿದ್ಧಾಂತದ ಬಗ್ಗೆ ನಿನಗಿದ್ದ ಬದ್ದತೆ;ಯಾವುದೇ ಭ್ರಷ್ಟಾಚಾರವನ್ನು ಖಂಡಿಸುತ್ತಿದ್ದ* ನಿನ್ನ ನಿಷ್ಠುರತೆ;ತನ್ನನ್ನೇ ಒರೆಗಲ್ಲಿಗೆ ಹಚ್ಚಿ ನೋಡುವ ನಿನ್ನ ಸ್ವವಿಮರ್ಶಾಗುಣ;ಅನ್ಯಾಯ, ದೌರ್ಜನ್ಯದ ವಿರುದ್ಧ ಸಿಡಿದೇಳುವ ನಿನ್ನ ಪ್ರವೃತ್ತಿ ;ಶೋಷಿತರು,ನೊಂದವರಿಗಾಗಿ ಮಿಡಿಯುತ್ತಿದ್ದ ನಿನ್ನ ಹೆಂಗರುಳು;ಠಾಕುಠೀಕಾಗಿ ಉಡುಪು ಧರಿಸಿಕೊಂಡು ಬರುವ ನಾಜೂಕಯ್ಯಗಳಿರುವ ಶ್ರೀಮಂತರ ಸಭೆಯಲ್ಲಿ ಹಳೆಯಕೋಟು,ಹಳೆಯಶೂ ಹಾಕಿಕೊಂಡು ಬಂದ ನಿನ್ನ ಸ್ವಾಭಿಮಾನ;ಹೋರಾಟದ ಬಿಡುವಿನಲ್ಲಿ ರೈತರ ಗದ್ದೆಗಳಲ್ಲಿ ಕಬ್ಬು ಕಡಿಯುವ ,ಕಟ್ಟಡ ನಿರ್ಮಾಣದ ಕೆಲಸದಲ್ಲಿ ಕೈ ಜೋಡಿಸುವ,ಬಂದರು ಕಟ್ಟೆಗಳಲ್ಲಿ ದುಡಿಯುವ ನಿನ್ನ ಶ್ರಮಬದುಕಿನ ಮೇಲಿನ ಪ್ರೀತಿ; ವೈರಿಗಳು ಸೆರೆ ಸಿಕ್ಕಾಗ ಅವರನ್ನು ಹಿಂಸಿಸದೆ ಬುದ್ಧಿವಾದ ಹೇಳಿ ಬಿಟ್ಟು ಬಿಡುವ ನಿನ್ನ ಔದಾರ್ಯ;ಅವಿರತ ಹೋರಾಟದೆಡೆಯಲ್ಲೂ ತನ್ನನ್ನು ನೆಚ್ಚಿಕೊಂಡಿದ್ದವರಿಗೆ ನೀನು ತೋರುತ್ತಿದ್ದ ಪ್ರೀತಿ ,ಕಾಳಜಿ;ಕ್ಯೂಬಾದ ಕ್ರಾಂತಿಯ ನಂತರ ಗಣ್ಯಾತಿಗಣ್ಯರು ಭಾಗವಹಿಸಿದ್ದ ” ಪಂಟಾ ಡೆಲ್ ಎಸ್ಟ್ “ಸಮ್ಮೇಳನದಲ್ಲಿ ಹೋರಾಟದಲ್ಲಿರುವಾಗ ಸೈನ್ಯದ ಮೇಜರ್ ಆಗಿದ್ದಾಗಿನ ಆಲಿವ್ ಗ್ರೀನ್ ಉಡುಪನ್ನೇ ಧರಿಸಿಕೊಂಡು ಬಂದ ನಿನ್ನ ಸರಳತೆ ;ಅಧಿಕಾರ ಅಂಗೈಯೊಳಗಿದ್ದಾಗಲೂ ಅದನ್ನು ನಿರಾಕರಿಸಿ ಮತ್ತೆ ಹೋರಾಟಕ್ಕೆ ಸಿದ್ಧನಾದ ನಿನ್ನ ನಿಸ್ವಾರ್ಥತೆ ಈ ವ್ಯಕ್ತಿತ್ವಗಳೆಲ್ಲವೂ ನಿನ್ನನ್ನು ಮೇರು ವ್ಯಕ್ತಿಯನ್ನಾಗಿಸಿದೆ.
ಅರ್ಜೆಂಟೈನಾದಲ್ಲಿ ಹುಟ್ಟಿ,ತನ್ನದಲ್ಲದ ಕ್ಯೂಬಾದೇಶಕ್ಕೆ ವಿಜಯವನ್ನು ತಂದು ಕೊಟ್ಟು, ತನ್ನದಲ್ಲದ ಇನ್ನೊಂದು ದೇಶ ಬೊಲಿವಿಯಾಕ್ಕಾಗಿ ಹೋರಾಡಿ ಮಡಿದ ನಿನ್ನ ತ್ಯಾಗ ಅಜರಾಮರವಾದುದು.
“ಪ್ರಪಂಚದ ಯಾವುದೇ ಮೂಲೆಯಲ್ಲಿ ಅನ್ಯಾಯ, ದೌರ್ಜನ್ಯನಡೆದರೂ ಅದರ ವಿರುದ್ಧ ಸಿಡಿದೆದ್ದರೆ ನೀನು ನನ್ನ ಸಂಗಾತಿ “ಎಂಬ ಅದ್ಭುತವಾದ ಮಾತನ್ನು ಹೇಳುವುದರ ಮೂಲಕ ಇಡೀ ವಿಶ್ವದ ಎಲ್ಲಾ ಹೃದಯವಂತರನ್ನು ಒಟ್ಟಿಗೆ ಬಿಗಿದಪ್ಪಿಕೊಂಡ ವೀರಾಧಿವೀರ ನನ್ನೊಲವಿನ “ಚೆ “ನಿನಗೆ ನನ್ನ ಕೆಂಪು ನಮನಗಳು.

******************************

 

*ಚೆ ಗುವಾರನ ನೆನೆಯುತ್ತಾ..*

ಬೇಕಿತ್ತು…

ದೀರ್ಘ ನಡಿಗೆಯ ದಣಿವು
ಮರುಳು ನಿದ್ರೆಗೆ
ದೂಡುತ್ತಿರುವ
ಹೊತ್ತಿನಲ್ಲಿ….

ಕಡು ಕತ್ತಲಿನಲ್ಲೂ
ಬೆಳಕಿನ ಬೇಸಾಯ ಬಿಡದ
ಚೆ ಗುವಾರ ನೊಬ್ಬ ಬೇಕಿತ್ತು…

ಮಬ್ಬು ಮುಸುಕಿರುವ ಕಾಲದಲ್ಲಿ ..

ಗಸ್ತು ಹೊಡೆವ ಮೆರವಣಿಗೆಗಳು
ಗಮ್ಯದ ದಾರಿ
ಮರೆತ ಹೊತ್ತಿನಲ್ಲಿ…

ಚೆ ಗುವಾರನೊಬ್ಬ ಬೇಕಿತ್ತು ..

ಹಸಿವಿನ ಉರಿಯಿಂದ
ಬೆಳಗದಾ ದೀಪಗಳು…

ಕಡು ಕತ್ತಲನ್ನು
ಕರಗಿಸುವುದಿಲ್ಲವೆಂದೂ..

ಕರುಣೆಯ ಜೊತೆಗಿನ
ಕಾಲಕ್ಷೇಪಗಳು
ಕ್ರಾಂತಿಯಲ್ಲವೆಂದು…

ಸಾರಿಸಾರಿ ಹೇಳಿದ
ಚೆಗುವಾರ ಇರಬೇಕಿತ್ತು….

ಮುಂಬೆಳಕಿನ
ದೊಂದಿಯಾಗದೆ….

ಮಂದೆಯೊಳಗಿನ
ಮಂದಿಯಾದರೆ…

ಕಟುಕನ ಕೆಲಸ
ಸುಲಭವಾಗುವುದೆಂದು..

ತಿಳಿಹೇಳಿದ ಚೆ ಗುವಾರ ಬೇಕಿತ್ತು ..

ನಿನ್ನೆಗಳ ಹಂಗಿರದೆ
ನಾಳಿನ ನಿಜಗಳಿಗಾಗಿ ..

ಸೋಲನ್ನು ಸೋಲೆಂದು
ಶತ್ರುವನ್ನು ಶತ್ರುವೆಂದೂ
ಬೆತ್ತಲು ಮಾಡಿ ತೋರಿದ್ದ…

ಚೆ ಗುವಾರನೊಬ್ಬ ಬೇಕಿತ್ತು…

ಯುದ್ಧವನ್ನು ಯುದ್ಧದಿಂದಲೇ
ಸೋಲಿಸಬೇಕೆಂದೂ…

ಯುದ್ಧದಲ್ಲಿ ವಿರಾಮ ಇರದೆಂದೂ..

ಸಾರಿಸಾರಿ ಹೇಳಿದ್ದ
ಚೆಗುವಾರ ಇರಬೇಕಿತ್ತು ..

ಶತ್ರುವಿನ ಔದಾರ್ಯ ವನ್ನು
ರಣತಂತ್ರವೆಂದೂ..

ಯುದ್ಧ ಮರೆತ
ಕ್ರಾಂತಿಕಾರಿಯ ಕಾರುಣ್ಯವನ್ನು
ಐತಿಹಾಸಿಕ ಅವಘಡವೆಂದು ..

ಪತ್ತೆ ಮಾಡಿದ್ದ
ಡಾಕ್ಟರ್ ಚೆಗುವಾರ
ಇರ ಬೇಕಿತ್ತು ..

– ಶಿವಸುಂದರ್


shivasundar
9448659774