ಉದಯೋನ್ಮುಖ ನಟ, ಗಾಯಕ ನವೀನ್ ಸಜ್ಜು ಗೆ ಕರ್ನಾಟಕ ಸಂಘ ಕತಾರ್ ಇಂದ “ಜಾನಪದ ಕೋಗಿಲೆ” ಗೌರವ ಸನ್ಮಾನ
ದಕ್ಷಿಣ ಭಾರತದ ಖ್ಯಾತ ನಟ, ಗಾಯಕ, ಸಂಗೀತ ನಿರ್ದೇಶಕ ನವೀನ್ ಸಜ್ಜು ಅವರಿಗೆ ಕೊಲ್ಲಿ ರಾಷ್ಟ್ರ ಕತಾರ್ ನ ಕರ್ನಾಟಕ ಸಂಘವು ತಮ್ಮ ವಾರ್ಷಿಕ ಕಾರ್ಯಕ್ರಮ ವಸಂತೋತ್ಸವ – 2023 ರ ಸಂದರ್ಭದಲ್ಲಿ “ಜಾನಪದ ಕೋಗಿಲೆ” ಬಿರುದನ್ನು ನೀಡಿ ಗೌರವಿಸಿದೆ.
ನವೀನ್ ಮತ್ತು ಅವರ ರಾಕ್ ಬ್ಯಾಂಡ್ ತಂಡವು “ಕನ್ನಡ ಜಾನಪದ ರಾಕ್ ಬ್ಯಾಂಡ್” ಬ್ಯಾನರ್ ಅಡಿಯಲ್ಲಿ ಕರ್ನಾಟಕ ಸಂಘ ಕತಾರ್ ಆಯೋಜಿಸಿದ್ದ ಸಮುದಾಯ ಕಾರ್ಯಕ್ರಮದಲ್ಲಿ 28 ಏಪ್ರಿಲ್ 2023 ರಂದು ಸಾವಿರಕ್ಕೂ ಹೆಚ್ಚು ಅಭಿಮಾನಿಗಳಿಂದ ತುಂಬಿದ ಸಭಾಂಗಣದಲ್ಲಿ ಪ್ರಖ್ಯಾತ ಕನ್ನಡ ಹಾಡು “ಅಶ್ವಮೇಧ” ನಂತರ “ಕೊಡಗನ ಕೋಳಿ ನುಂಗಿತ್ತ” ಮತ್ತು “ಒಳಿತು ಮಾಡು ಮಾನುಷ” ಹಾಗೂ ಶ್ರಾವಣ ಬಂತು ಶ್ರಾವಣ ಹಾಗೂ ಹತ್ತು ಹಲವಾರು ಪ್ರಸಿದ್ಧ ಜಾನಪದ ಹಾಡುಗಳನ್ನು ಹಾಡುವ ಮೂಲಕ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದರು ಮಾತ್ರವಲ್ಲದೆ ನವೀನ್ ಸಜ್ಜು ಅವರು ಹಾಡುಗಳಿಗೆ ನೃತ್ಯ ಪ್ರದರ್ಶನವನ್ನು ಮಾಡಿದರು. ನವೀನ್ ಅವರು ಸ್ಯಾಂಡಲ್‌ವುಡ್ ಇಂಡಸ್ಟ್ರಿಯ ಅಂತರಾಷ್ಟ್ರೀಯ ಖ್ಯಾತಿಯ ನಟ ಶ್ರೀ ಪುನೀತ್ ರಾಜ್ ಕುಮಾರ್ ಅವರ ಸ್ಮರಣಾರ್ಥ ಆಡಿಯೋ ಮತ್ತು ವಿಡಿಯೋ ಪ್ರಸ್ತುತಿಯನ್ನು ಪ್ರಸ್ತುತಪಡಿಸಿದರು.
ನವೀನ್ ಅವರ ತಂಡದ ನದೀರಾ ಬಾನು (ಗಾಯಕಿ), ಕಿಶೋರ್ (ಕೀ ಬೋರ್ಡ್), ಅಮೋಘವರ್ಷ (ಡ್ರಮ್) ಮತ್ತು ದೋಹಾದ ಸ್ಥಳೀಯ ಕಲಾವಿದರು ತುವಾನ್ ಹಾಸನ್ (ಗಿಟಾರ್), ಜೇಮ್ಸ್ (ಪಿಟೀಲು) ಮತ್ತು ಅವಿನಾಶ್ ಗಾಯಕ್‌ವಾಡ್ (ತಬಲಾ, ಧೋಲಕ್ ಮತ್ತು ಹ್ಯಾಂಡ್ ಸೋನಿಕ್) ಉತ್ತಮ ಬೆಂಬಲ ನೀಡಿದರು. .
ಕಾರ್ಯಕ್ರಮದ ಕೊನೆಯಲ್ಲಿ ನವೀನ್ ಶ್ರೀ ಮಹೇಶ್ ಗೌಡ, ಅಧ್ಯಕ್ಷ ಕರ್ನಾಟಕ ಸಂಘ ಕತಾರ್ ಮತ್ತು ಆಡಳಿತ ಸಮಿತಿ ಸದಸ್ಯರು ಹಾಗೂ ಕತಾರ್‌ನ ಎಲ್ಲಾ ಕನ್ನಡಾಭಿಮಾನಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು ಮತ್ತು ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿರುವ ಅವರ ಚಲನಚಿತ್ರಗಳಿಗೆ ಸಂಪೂರ್ಣ ಬೆಂಬಲವನ್ನು ಸಹ ಕೋರಿದರು.