*ಮಾಧ್ಯಮ ಪ್ರಕಟಣೆ*
*ಎಂ. ಸತೀಶ್ ರೆಡ್ಡಿ ಪರವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಬ್ಬರದ ಪ್ರಚಾರ*
*ಬಿಳೇಕಹಳ್ಳಿಯಿಂದ ಪುಟ್ಟೇನಹಳ್ಳಿಯವರೆಗೆ 12 ಕಿಲೋಮೀಟರ್ ಬೈಕ್ ರ‍್ಯಾಲಿ*
*ಬೆಂಗಳೂರು, ಏಪ್ರಿಲ್, 29;* ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರ ತೀವ್ರಗೊಂಡಿದ್ದು, ತಾರಾ ಪ್ರಚಾರಕರು ಮತಯಾಚಿಸುತ್ತಿದ್ದಾರೆ. ಇಂದು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ. ಸತೀಶ್ ರೆಡ್ಡಿ ಪರವಾಗಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಪಾರ ಅಭಿಮಾನಿಗಳ ಹರ್ಷೋದ್ಗಾರದ ನಡುವೆ 12 ಕಿಲೋಮೀಟರ್ ಬೃಹತ್ ಬೈಕ್ ರ‍್ಯಾಲಿ ನಡೆಸಿದರು.
ನಂತರ ತೆರೆದ ವಾಹನದಲ್ಲಿ ಸತೀಶ್ ರೆಡ್ಡಿ ಅವರೊಂದಿಗೆ ಪ್ರಚಾರದಲ್ಲಿ ಭಾಗಿಯಾದರು. ನಟ ದರ್ಶನ್ ಮಾತನಾಡಿ, ಸತೀಶ್ ರೆಡ್ಡಿ ಈಗಾಗಲೇ ಹ್ಯಾಟ್ರಿಕ್ ಸಾಧಿಸಿದ್ದು, ೪ನೇ ಬಾರಿಗೆ ಗೆಲುವಿನ ಹಾದಿಯಲ್ಲಿ ಮುನ್ನಡೆಯಲಿದ್ದಾರೆ. ಅವರ ಕ್ರಮ ಸಂಖ್ಯೆ : ೪ ಆಗಿದ್ದು, ನಾಲ್ಕನೇ ಬಾರಿ ಅವರು, ವಿಧಾನಸಭೆಗೆ ಪ್ರವೇಶಿಸಿ ಸರ್ಕಾರದಲ್ಲಿ ಉನ್ನತ ಸ್ಥಾನಮಾನಗಳನ್ನು ಪಡೆಯಲಿದ್ದಾರೆ ಎಂದು ಆಶಯ ವ್ಯಕ್ತಪಡಿಸಿದರು.
ಸತೀಶ್ ರೆಡ್ಡಿ ಮಾತನಾಡಿ, ಅಭಿವೃದ್ಧಿ ಕಾರ್ಯಗಳನ್ನು ಪರಿಗಣಿಸಿ ಮತದಾರರು ತಮ್ಮನ್ನು ಬೆಂಬಲಿಸಲಿದ್ದಾರೆ. ಕಾಂಗ್ರೆಸ್ ಚುನಾವಣಾ ಉದ್ದೇಶದಿಂದ ಸಕ್ರಿಯವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಆಶಯಗಳನ್ನು ಈಡೇರಿಸಲು ತಾವು ಬದ್ಧ. ಜಾತಿ, ಮತ, ಧರ್ಮವನ್ನು ಮೀರಿ ಅಭಿವೃದ್ಧಿ ಕೆಲಸಗಳಲ್ಲಿ ತೊಡಗಿದ್ದು, ತಮ್ಮ ಎದುರಾಳಿಗಳಿಗೆ ಅಭಿವೃದ್ಧಿಯೇ ಉತ್ತರ ಎಂದು ಹೇಳಿದರು.