ಬೆಂಗಳೂರು:-ಸಾತನೂರಿನಲ್ಲಿ ನಡೆದ ನೈತಿಕ ಪೊಲೀಸ್’ಗಿರಿ ಹತ್ಯೆಗೆ ಸಿಎಂ ಬೊಮ್ಮಾಯಿ ಮತ್ತು ಗೃಹ ಸಚಿವರೇ ಹೊಣೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಕ್ಷೇತ್ರದ ಸಾತನೂರಿನಲ್ಲಿ ನೈತಿಕ ಪೊಲೀಸ್ ಗಿರಿಯ ಭಾಗವಾಗಿ ಒಬ್ಬನ ಕೊಲೆಯಾಗಿದೆ. ಪೊಲೀಸರು ಈ ವಿಚಾರವಾಗಿ ದೂರು ದಾಖಲಿಸಿಕೊಳ್ಳುವವರೆಗೂ ನಾನು ಪ್ರತಿಕ್ರಿಯೆ ನೀಡಿರಲಿಲ್ಲ. ಸ್ಥಳೀಯವಾಗಿ ನಮ್ಮ ನಾಯಕರು ಅಲ್ಲಿ ಕಾರ್ಯಪ್ರವೃತ್ತರಾಗಿ ನಮಗೆ ನಿರಂತರವಾಗಿ ಮಾಹಿತಿ ನೀಡಿದ್ದಾರೆ. ಈ ಕೊಲೆಗೆ ಕಾರಣರಾದ ವ್ಯಕ್ತಿ ಬಿಜೆಪಿ ನಾಯಕರಿಗೆ ಆಪ್ತನಾಗಿದ್ದು, ಈ ನೈತಿಕ ಪೊಲೀಸ್ ಗಿರಿಗೆ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರನ್ನು ಹೊಣೆ ಮಾಡುತ್ತೇನೆ. ಕಾರಣ ಅವರು ಈ ಹಿಂದೆ ನೈತಿಕ ಪೊಲೀಸ್ ಗಿರಿಗೆ ಅವರು ಬೆಂಬಲ ನೀಡಿದ್ದರು. ರೈತ ಜಾನುವಾರುಗಳನ್ನು ಸಂತೆಯಲ್ಲಿ ಖರೀದಿಸಿದ ರಸೀದಿ ಇದ್ದರೂ ಅವನಿಗೆ 2 ಲಕ್ಷ ಹಣದ ಬೇಡಿಕೆ ಇಟ್ಟು, ಹತ್ಯೆ ಮಾಡಿದ್ದಾರೆ ಎಂದು ಶಿವಕುಮಾರ್ ಹೇಳಿದರು.
ಈ ಕೊಲೆಗೆ ಸರ್ಕಾರವೇ ಕಾರಣ. ಮುಖ್ಯಮಂತ್ರಿಗಳು ಹಾಗೂ ಗೃಹಸಚಿವರು ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಅಲ್ಪಸಂಖ್ಯಾತರು ಬದುಕಲು ಅವಕಾಶ ಮಾಡಿಕೊಡಬೇಕು. ಚುನಾವಣೆ ಸಮಯದಲ್ಲಿ ಇಂತಹ ಗೊಂದಲ ಮಾಡುವುದು ಸರಿಯಲ್ಲ. ಸರ್ಕಾರ ಕೂಡಲೇ ಮೃತನ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡಬೇಕು ಎಂದು ಡಿಕೆಶಿ ಆಗ್ರಹಿಸಿದರು.
ಈ ಹತ್ಯೆಯಲ್ಲಿ ಭಾಗಿಯಾಗಿರುವವರನ್ನು ಬಂಧಿಸಬೇಕು. ಅವರನ್ನು ಬಂಧಿಸದೇ ಅವರನ್ನು ರಕ್ಷಣೆ ಮಾಡಿದರೆ, ಇದಕ್ಕೆ ಅಧಿಕಾರಿಗಳು ಜವಾಬ್ದಾರಿಯಾಗಲಿದ್ದಾರೆ. ಹತ್ಯೆ ಮಾಡಿರುವವರು ನಿಮ್ಮ ಕಾರ್ಯಕರ್ತನೋ, ಆತ್ಮೀಯನೋ ಅವನನ್ನು ಕೂಡಲೇ ಬಂಧಿಸಬೇಕು ಎಂದು ಶಿವಕುಮಾರ್ ಹೇಳಿದರು.
ಕಳೆದ ಒಂದು ತಿಂಗಳಿಂದ ಅನೇಕ ಹಿರಿಯ ನಾಯಕರು ಪಕ್ಷ ಸೇರುತ್ತಿದ್ದು, ಅವರಿಗೆ ಟಿಕೆಟ್ ನೀಡದಿದ್ದರೆ ಅವರಿಗೆ ಪಕ್ಷದಲ್ಲಿ ಯಾವ ಜವಾಬ್ದಾರಿ ನೀಡಲಾಗುವುದು ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ, ‘ನಾವು ಯಾರಿಗೂ ಯಾವುದೇ ರೀತಿಯ ಭರವಸೆ ನೀಡಿಲ್ಲ. ಆದರೂ ನಮ್ಮ ಪಕ್ಷ ಸೇರಲು ಅಪಾರ ಬೇಡಿಕೆ ಇದೆ. ನಾವು ಎಲ್ಲರ ಹೆಸರುಗಳನ್ನು ಪರಿಶೀಲಿಸಿ, ಅವರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡುವುದಿದ್ದರೆ ಸೇರಿಸಿಕೊಳ್ಳುತ್ತೇವೆ. ಗೋಪಾಲಕೃಷ್ಣರಂತಹ ನಾಯಕರು ನಾವು ಕಾರ್ಯಕರ್ತರಾಗಿ ದುಡಿಯಲು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ. ಅವರು ಟಿಕೆಟ್ ಗೆ ಅರ್ಜಿ ಹಾಕಿದರೆ, ನಾವು ಅವರ ಅರ್ಜಿ ಪರಿಶೀಲಿಸುತ್ತೇವೆ’ ಎಂದು ತಿಳಿಸಿದರು.
ನೀವು ಅರ್ಜಿ ಆಹ್ವಾನಿಸಿ 2 ಲಕ್ಷ ಹಣ ಪಡೆದು ಈಗ ಹೊಸಬರು ಬಂದಾಗ ಅವರಿಗೆ ಟಿಕೆಟ್ ನೀಡಿದರೆ, ಮೋಸ ಮಾಡಿದಂತೆ ಆಗುವುದಿಲ್ಲವೇ ಎಂದು ಕೇಳಿದಾಗ, ‘ಇದರಲ್ಲಿ ಮೋಸವೇನಿದೆ? ಕಾಂಗ್ರೆಸ್ ಪಕ್ಷಕ್ಕೆ ದೇವಾಲಯದಂತಿರುವ ಪಕ್ಷದ ಕಟ್ಟಡ ಕಟ್ಟಲು ಆ ಹಣ ವಿನಿಯೋಗಿಸಲಾಗುವುದು. ಅರ್ಜಿಗೆ ಶುಲ್ಕವಾಗಿ 5 ಸಾವಿರ ತೆಗೆದುಕೊಂಡಿದ್ದು, ಉಳಿದ 2 ಲಕ್ಷ ಪಕ್ಷದ ಕಟ್ಟಡಕ್ಕೆ ದೇಣಿಗೆಯಾಗಿ ಸ್ವೀಕರಿಸಲಾಗಿದೆ. ಪಕ್ಷದಲ್ಲಿ ಪ್ರಬಲ ಸ್ಪರ್ಧೆ ಇದ್ದಾಗಲೇ ಬಿಜೆಪಿಗೆ ಬಿಸಿ ಗೊತ್ತಾಗುತ್ತದೆ. ಆರೋಗ್ಯಕರ ಸ್ಪರ್ಧೆ ಇರಬೇಕು. ಪಕ್ಷದೊಳಗೆ ಹೋರಾಟ ಮಾಡುತ್ತಾರೆ. ನಂತರ ಬಿಜೆಪಿ ಹಾಗೂ ದಳದ ವಿರುದ್ಧ ಹೋರಾಟ ಮಾಡುತ್ತಾರೆ’ ಎಂದು ತಿಳಿಸಿದರು.
ರಾಹುಲ್ ಗಾಂಧಿ ಅವರ ಕೋಲಾರ ಕಾರ್ಯಕ್ರಮದ ವೇಳಾಪಟ್ಟಿ ಬದಲಾಗಲಿದೆಯೇ ಎಂದು ಕೇಳಿದಾಗ, ‘ನಾವು 9 ಅಥವಾ 10 ರ ದಿನಾಂಕ ನೀಡಿದ್ದು, ಎಐಸಿಸಿ ಅವರ ಪ್ರವಾಸಪಟ್ಟಿ ಬಿಡುಗಡೆ ಮಾಡಲಿದೆ. ಅವರು ನ್ಯಾಯಾಲಯದ ಮುಂದೆ ಹಾಜರಾಗಬೇಕಿದೆ. ಹೀಗಾಗಿ ಎಐಸಿಸಿ ಚರ್ಚೆ ಮಾಡಿ ದಿನಾಂಕ ನಿಗದಿ ಮಾಡಲಿದೆ. ಆದರೆ ಇಲ್ಲಿ ನಮ್ಮ ತಯಾರಿ ಸಾಗುತ್ತಿದೆ. ನಿನ್ನೆ ಸಿದ್ದರಾಮಯ್ಯ ಹಾಗೂ ಸುರ್ಜೆವಾಲ ಅವರು ಕೋಲಾರಕ್ಕೆ ಭೇಟಿ ನೀಡಿದ್ದರು. ಈಗಲೂ ಸುರ್ಜೆವಾರ ಅವರು ತುಮಕೂರಿನಲ್ಲಿದ್ದು, ಕಾರ್ಯಕ್ರಮದ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಇದೊಂದು ರಾಷ್ಟ್ರಮಟ್ಟದ ಕಾರ್ಯಕ್ರಮವಾಗಲಿದ್ದು, ಬೇರೆ ರಾಜ್ಯದ ಮುಖ್ಯಮಂತ್ರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ’ ಎಂದು ತಿಳಿಸಿದರು.
ರಾಜ್ಯದಲ್ಲಿ ನಡೆಯುತ್ತಿರುವ ಗಲಭೆಗಳ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎಂಬ ಮುಖ್ಯಮಂತ್ರಿಗಳ ಹೇಳಿಕೆ ಬಗ್ಗೆ ಕೇಳಿದಾಗ, ‘ನಾವು ಯಾವುದೇ ಗಲಭೆ ಮಾಡಿಸುತ್ತಿಲ್ಲ. ಇದೆಲ್ಲವೂ ಮುಖ್ಯಮಂತ್ರಿಗಳು ಮಾಡಿಕೊಂಡಿರುವ ಸ್ವಯಂಕೃತ ಅಪರಾಧ. ಮುಸಲ್ಮಾನರ ಮೀಸಲಾತಿ ಕಿತ್ತುಹಾಕಿ ನಮಗೆ ನೀಡಿ ಎಂದು ಒಕ್ಕಲಿಗರು, ಲಿಂಗಾಯತರು ಕೇಳಿದ್ದರಾ? ಚುನಾವಣೆ ಸಮಯದಲ್ಲಿ ಬಿಜೆಪಿ ಸರ್ಕಾರ ಗೊಂದಲ ಸೃಷ್ಟಿಸುತ್ತಿದೆ. ಕೆಲವು ಸಮುದಾಯದವರು ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ನೀಡಿ ಎಂದು ಕೇಳಿವೆ. ಈ ಸರ್ಕಾರ ಸಂವಿಧಾನಬದ್ಧವಾಗಿ ಕೆಲಸ ಮಾಡಿ ಎಲ್ಲಾ ವರ್ಗದವರನ್ನು ರಕ್ಷಣೆ ಮಾಡುವುದಾಗಿ ಪ್ರಮಾಣ ವಚನ ಸ್ವೀಕರಿಸಿ, ಈಗ ಅವರ ಹಕ್ಕು ಕಸಿಯುವ ಪ್ರಯತ್ನ ಮಾಡುತ್ತಿದೆ. ಕಾಂಗ್ರೆಸ್ ಪಕ್ಷ ಈ ಎಲ್ಲ ವರ್ಗಗಳ ಹಿತಾಸಕ್ತಿ ಕಾಪಾಡಲು ಬದ್ಧವಾಗಿದೆ. ಮುಖ್ಯಮಂತ್ರಿಗಳ ರಾಜಕೀಯ ಲಾಭದ ನಡೆಗೆ ರಾಜ್ಯ ದೇಶದ ಮುಂದೆ ತಲೆತಗ್ಗಿಸುವಂತಾಗಿದೆ. ಅಲ್ಪಸಂಖ್ಯಾತರನ್ನು ಆರ್ಥಿಕವಾಗಿ ಹಿಂದುಳಿದ ಮೀಸಲಾತಿ ವರ್ಗಕ್ಕೆ ಸೇರಿಸಿ ಮೇಲ್ಜಾತಿಯ ಆರ್ಥಿಕವಾಗಿ ಹಿಂದುಳಿದವರಿಗೂ ಈ ಸರ್ಕಾರ ಅನ್ಯಾಯ ಮಾಡುತ್ತಿದೆ. ರಾಜ್ಯಕ್ಕೆ ಕಳಂಕ ತಂದು ಎಲ್ಲ ಸಮಾಜದವರು ಪರಸ್ಪರ ಕಿತ್ತಾಡುವಂತೆ ಮಾಡಿದ್ದಾರೆ. ಇದೆಲ್ಲದಕ್ಕೂ ಮುಖ್ಯಮಂತ್ರಿಗಳೇ ನೇರ ಕಾರಣ’ ಎಂದರು.
ಪುಲಕೇಶಿ ನಗರದಲ್ಲಿ ಪಕ್ಷದ ತೀರ್ಮಾನವೇನು ಎಂದು ಕೇಳಿದಾಗ, ‘ಪಕ್ಷದ ಕಾರ್ಯಕರ್ತು, ನಾಯಕರು ನಮ್ಮ ಜತೆ ಅವರ ಅಬಿಪ್ರಾಯ ವ್ಯಕ್ತಪಡಿಸುತ್ತಾರೆ. ಅದಕ್ಕೆ ಗೊಂದಲವಿದೆ ಎಂದು ಭಾವಿಸಬಾರದು. ಅವರ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ನೀಡದೇ ಇರುವ ಪಕ್ಷ ನಮ್ಮದಲ್ಲ. ನಮ್ಮದು ಪ್ರಜಾಸತಾತ್ಮಕ ಪಕ್ಷ. ಎಲ್ಲರೂ ತಮ್ಮ ನೋವು, ಕಷ್ಟ, ಸುಖ ಹೇಳಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬ ಆತ್ಮವಿಶ್ವಾಸದಿಂದ 10-15 ಮಂದಿ ಟಿಕೆಟ್ ಗೆ ಅರ್ಜಿ ಹಾಕಿದ್ದಾರೆ’ ಎಂದು ತಿಳಿಸಿದರು.