ಎಂ.ಬಿ.ರಾಮಮೂರ್ತಿ ಅವರು ಕನ್ನಡಕ್ಕೆ ಅನುವಾದಿಸಿರುವ ಖುಷ್ವಂತ್ ಸಿಂಗ್ ಅವರ ‘ಟ್ರೈನ್ ಟು ಪಾಕಿಸ್ತಾನ್’ ಕಾದಂಬರಿಯ ಆಯ್ದ ಭಾಗ ನಿಮ್ಮ ಓದಿಗೆ…

1947ರ ಬೇಸಿಗೆ, ಭಾರತದ ಇತರ ಬೇಸಿಗೆ ಕಾಲಗಳಂತಿರಲಿಲ್ಲ. ಆ ವರ್ಷ ಭಾರತದಲ್ಲಿನ ಹವಾಮಾನ ಕೂಡ ಬೇರೆಯೇ ತರಹದ್ದಾಗಿದೆಯೆಂಬಂತೆ ಭಾಸವಾಗುತ್ತಿತ್ತು. ಮಾಮೂಲಿಗಿಂತ ಕೊಂಚ ಹೆಚ್ಚಿನ ಸೆಖೆ ಇದ್ದು ಧೂಳು, ಒಣಹವೆಯಿಂದ ಕೂಡಿದ ಬೇಸಿಗೆ ಕಾಲ ದೀರ್ಘವಾಗಿದೆಯೆಂದೆನಿಸುತ್ತಿತ್ತು. ಮುಂಗಾರು ಮಳೆ ಇಷ್ಟೊಂದು ತಡವಾಗಿದ್ದುದು ಯಾರಿಗೂ ನೆನಪಿಲ್ಲ. ವಾರಗಳಿಂದಲೂ ಚೆದುರಿದ ಮೋಡಗಳು ನೆರಳನಷ್ಟೇ ಚೆಲ್ಲಿದ್ದವೇ ವಿನಃ ಮಳೆ ಬಿದ್ದದ್ದಿಲ್ಲ. ತಾವು ಮಾಡಿದ ಪಾಪಕೃತ್ಯಗಳಿಗಾಗಿಯೇ ದೇವರು ತಮ್ಮನ್ನು ಶಿಕ್ಷಿಸುತ್ತಿದ್ದಾನೆಂದು ಜನರು ಮಾತಾಡಿಕೊಳ್ಳಹತ್ತಿದ್ದರು.

ತಾವು ಪಾಪ ಮಾಡಿರಬೇಕೆಂದು ಕೆಲವರಿಗೆ ಅನ್ನಿಸುತ್ತಿದ್ದುದು ಸಕಾರಣವಾಗಿಯೇ ಇತ್ತು. ಹೋದ ವರ್ಷ ದೇಶವು ಹಿಂದೂ ಭಾರತ ಮತ್ತು ಮುಸ್ಲಿಂ ಪಾಕಿಸ್ತಾನವಾಗಿ ವಿಭಜನೆ ಹೊಂದಲಿರುವ ಬಗ್ಗೆ ಹರಡಿದ ವರದಿಗಳಿಂದ ಕಲ್ಕತ್ತಾದಲ್ಲಿ ಕೋಮುಗಲಭೆಗಳು ಭುಗಿಲೆದ್ದು ಕೆಲವೇ ತಿಂಗಳುಗಳಲ್ಲಿ ಸಾವಿರಾರು ಜನರು ಮರಣ ಹೊಂದಿದ್ದರು. ಹಿಂದೂಗಳು ಸರಿಯಾಗಿ ಯೋಜಿಸಿಕೊಂಡೇ ಈ ರೀತಿ ಹತ್ಯೆಗೈಯ್ಯಲು ಪ್ರಾರಂಭಿಸಿದ್ದಾರೆಂದು ಮುಸ್ಲಿಮರು ದೂರಿದರು; ಮುಸ್ಲಿಮರೇ ಇದಕ್ಕೆ ಪೂರ್ತಿ ಹೊಣೆ ಎಂದು ಹಿಂದೂಗಳು ವಾದಿಸಿದರು. ಸತ್ಯಸಂಗತಿಯೆಂದರೆ ಎರಡೂ ಕಡೆಯವರೂ ಕೊಂದಿದ್ದರು. ಎರಡೂ ಕಡೆಯವರು ಕೈಗೆ ಸಿಕ್ಕಿದ್ದರಲ್ಲಿ ಇರಿಯುತ್ತ, ತಿವಿಯುತ್ತ, ದೊಣ್ಣೆಗಳಿಂದ ಬಡಿಯುತ್ತ, ಗುಂಡು ಹಾರಿಸಿ ಕೊಂದಿದ್ದರು. ಹಿಂಸಿಸಿದ್ದರು. ಮಾನಭಂಗ ಮಾಡಿದ್ದರು. ಕಲ್ಕತ್ತಾದಲ್ಲಿ ಶುರುವಾದ ಕೋಮುಗಲಭೆಗಳು ಉತ್ತರಕ್ಕೂ, ಪೂರ್ವ-ಪಶ್ಚಿಮ ದಿಕ್ಕುಗಳೆಡೆಗೂ ಹಬ್ಬಿದ್ದವು. ಪಶ್ಚಿಮ ಬಂಗಾಳದ ನೋಖಾಲಿಯಲ್ಲಿ ಹಿಂದೂಗಳು ಮುಸ್ಲಿಮರಿಂದ ಸಾಮೂಹಿಕವಾಗಿ ಕಗ್ಗೊಲೆಗೀಡಾದರೆ, ಬಿಹಾರದಲ್ಲಿ ಹಿಂದೂಗಳಿಂದ ಮುಸ್ಲಿಮರು ಸಾಮೂಹಿಕವಾಗಿ ಹತ್ಯೆಗೀಡಾದರು. ಬಿಹಾರದಲ್ಲಿ ಸತ್ತ ಮುಸ್ಲಿಮರವೆಂದು ಹೇಳಲಾದ ತಲೆಬುರುಡೆಗಳನ್ನು ಹಿಡಿದ ಮುಲ್ಲಾಗಳು ಪಂಜಾಬ್ ಮತ್ತು ಸುತ್ತಮುತ್ತಲಿನ ಪ್ರಾಂತಗಳ ಸರಹದ್ದುಗಳೆಲ್ಲೆಡೆ ಅಲೆದಾಡುತ್ತಿದ್ದರು. ವಾಯುವ್ಯ ಪ್ರಾಂತ್ಯದಲ್ಲಿ ಶತ-ಶತಮಾನಗಳಿಂದಲೂ ಒಟ್ಟೊಟ್ಟಿಗೇ ಬದುಕುತ್ತಿದ್ದ ಹಿಂದೂಗಳು, ಸಿಖ್ಖರು ತಮ್ಮ ಮನೆ-ಮಠ ಬಿಟ್ಟು ಪೂರ್ವ ಪ್ರಾಂತದಲ್ಲಿ ಅಧಿಕವಾಗಿ ವಾಸಿಸುತ್ತಿದ್ದ ಸಿಖ್ ಮತ್ತು ಹಿಂದೂ ಸಮುದಾಯಗಳತ್ತ ರಕ್ಷಣೆಗೆಂದು ಓಡಿಹೋಗಬೇಕಾಯ್ತು. ಜನರು ಟ್ರೈನಿನ ಕಿಟಕಿ, ಬಾಗಿಲು ಎಲ್ಲೆಂದರಲ್ಲಿ ಜೋತುಬಿದ್ದು, ಟಾಪಿನ ಮೇಲೆ ಕೂತುಕೊಂಡು, ಲಾರಿ-ಎತ್ತಿನಗಾಡಿಗಳನ್ನು ತುಂಬಿಕೊಂಡು ಹಾಗೂ ಕಾಲುನಡಿಗೆಯ ಮೇಲೂ ಪ್ರಯಾಣ ಬೆಳೆಸಿದರು. ದಾರಿಯುದ್ದಕ್ಕೂ ನದಿ ದಾಟುವ ಕಡೆ, ಅಡ್ಡರಸ್ತೆಗಳಲ್ಲಿ, ರೈಲ್ವೆ ಸ್ಟೇಷನ್ಗಳಲ್ಲಿ-ದಿಗಿಲುಗೊಂಡು ರಕ್ಷಣೆಗೆಂದು ಪಶ್ಚಿಮದಿಕ್ಕಿನೆಡೆಗೆ ಓಡಿಹೋಗುತ್ತಿದ್ದ ಮುಸ್ಲಿಮರ ಗುಂಪುಗಳು ಎದುರಾಗುತ್ತಿದ್ದವು. ಎಲ್ಲೆಲ್ಲೂ ಗಲಭೆಗಳದ್ದೇ ಅವಾಂತರ. 1947ರ ಬೇಸಿಗೆ ಕಾಲದ ಹೊತ್ತಿಗೆ ಪಾಕಿಸ್ತಾನವೆಂಬ ಹೊಸ ದೇಶ ಸೃಷ್ಟಿಯ ಬಗ್ಗೆ ವಿಧಿಯುಕ್ತವಾಗಿ ಘೋಷಣೆಯಾದಾಗ ನೂರು ಲಕ್ಷದಷ್ಟು ಜನ ಮುಸ್ಲಿಮರು, ಹಿಂದೂಗಳು ಮತ್ತು ಸಿಖ್ಖರು ನಿರಾಶ್ರಿತರಾಗಿ ಪಲಾಯನ ಮಾಡಬೇಕಾಗಿ ಬಂತು. ಮುಂಗಾರು ಮಳೆ ಬೀಳುವ ಹೊತ್ತಿಗೆ ಸುಮಾರು ಹತ್ತು ಲಕ್ಷದಷ್ಟು ಜನ ಸತ್ತೇ ಹೋಗಿದ್ದರು. ಉತ್ತರ ಭಾರತದುದ್ದಕ್ಕೂ ಭಯೋತ್ಪಾದನೆ ಮತ್ತು ಭೀತಿ ತಾಂಡವವಾಡುತ್ತಿತ್ತು. ಅಳಿದುಳಿದ ಶಾಂತಿ ನೆಲೆಗಳೆಂದರೆ ಪ್ರಾಂತದಿಂದ ಬಹು ದೂರ ಇದ್ದು ಚೆದುರಿಹೋಗಿದ್ದಂತಹ ಸಣ್ಣಸಣ್ಣ ಹಳ್ಳಿಗಳು. ಇಂತಹುದೇ ಒಂದು ಪುಟ್ಟ ಹಳ್ಳಿ ಮನೋ ಮಜ್ರಾ.

ಮನೋ ಮಜ್ರಾ ಎಂಬುದೊಂದು ಪುಟಾಣಿ ಊರು. ಇಲ್ಲಿರುವುದು ಮೂರೇ ಮೂರು ಇಟ್ಟಿಗೆಯ ಕಟ್ಟಡಗಳು. ಬಡ್ಡಿ ವ್ಯವಹಾರಿಯಾಗಿರುವ ಲಾಲಾ ರಾಂ ಲಾಲ್ ಎಂಬುವನದೊಂದು ಮನೆ; ಇನ್ನೆರಡರಲ್ಲಿ ಒಂದು ಗುರುದ್ವಾರ, ಮತ್ತೊಂದು ಮಸೀದಿ. ಮೂರೂ ಇಟ್ಟಿಗೆ ಕಟ್ಟಡಗಳಿಂದ ಒಳಗೊಂಡಂತಿರುವ ತ್ರಿಕೋನಾಕಾರದ ಮಧ್ಯೆ ದೊಡ್ಡದೊಂದು ಅರಳಿ ಮರವಿದೆ. ಹಳ್ಳಿಯ ಉಳಿದ ಭಾಗವೆಂದರೆ ಊರ ಮಧ್ಯದಿಂದ ಹರಡುವ ಕಿರಿದಾದ ದಾರಿಗಳ ಬದಿಗೆ ಕಟ್ಟಲಾಗಿರುವ ಸಪಾಟು ಮೇಲ್ಛಾವಣಿ ಹೊಂದಿದ ಮಣ್ಣಿನ ಗುಡಿಸಲುಗಳ ಗುಂಪು; ಮತ್ತು ಅವುಗಳ ಮುಂದಿರುವ ಸೊಂಟದೆತ್ತರದ ಗೋಡೆಯ ಮನೆಯಂಗಳಗಳು. ಮುಂದೆ ಹೋದಂತೆ ರಸ್ತೆಗಳು ಕಿರಿದಾದ ಕಾಲುದಾರಿಗಳಾಗಿ ಸುತ್ತಲಿನ ಬಯಲಿನಲ್ಲಿ ಕಳೆದುಹೋಗುತ್ತವೆ. ಹಳ್ಳಿಯ ಪಶ್ಚಿಮ ದಿಕ್ಕಿನಲ್ಲಿ ಜಾಲಿ ಮರಗಳಿಂದ ಸುತ್ತುವರೆದಿರುವ ಒಂದು ಕೊಳವಿದೆ. ಕೇವಲ ಎಪ್ಪತ್ತು ಕುಟುಂಬಗಳಿರುವ ಮನೋಮಜ್ರಾದಲ್ಲಿ ಲಾಲಾ ರಾಂ ಲಾಲ್ ನದೊಂದೇ ಹಿಂದೂ ಕುಟುಂಬ. ಉಳಿದವರು ಸಮಸಂಖ್ಯೆಯಲ್ಲಿರುವ ಸಿಖ್ಖರು ಇಲ್ಲವೆ ಮುಸ್ಲಿಮರು. ಹಳ್ಳಿಯ ಸುತ್ತಮುತ್ತಲಿನ ಜಮೀನೆಲ್ಲವೂ ಸಿಖ್ಖರದು; ಹೊಲ ಉಳುವವರು ಮುಸ್ಲಿಮರು; ಜಮೀನಿನ ಮಾಲೀಕರಾದ ಸಿಖ್ಖರೊಂದಿಗೆ ಇವರು ಬೆಳೆದದ್ದನ್ನು ಹಂಚಿಕೊಳ್ಳುವ ಕೋರು ಮಾಡುವವರು. ಇಲ್ಲಿ ಇಂಥದೇ ಧರ್ಮದವರೆಂದು ನಿರ್ಧರಿಸಲಾಗದ ಕಸಗುಡಿಸುವ ಜಾಡಮಾಲಿಗಳ ಕೆಲವು ಕುಟುಂಬಗಳಿವೆ. ಮುಸ್ಲಿಮರು ಅವರೂ ನಮ್ಮವರೆ ಎಂದು ಹೇಳುತ್ತಾರಾದರೂ ಅಮೇರಿಕಾದ ಧರ್ಮಪ್ರಚಾರಕ ಪಾದ್ರಿಗಳು ಮನೋ ಮಜ್ರಾಕ್ಕೆ ಭೇಟಿ ನೀಡಿದಾಗ ಈ ಜಾಡಮಾಲಿಗಳು ಖಾಕಿ ಬಣ್ಣದ ಸೋಲಾ ಟೋಪಿಗಳನ್ನು ಧರಿಸಿ ಅವರ ಹೆಂಗಸರೊಂದಿಗೆ ಸೇರಿ ಹಾರ್ಮೋನಿಯಂ ಹಿಡಿದು ದೇವರ ಸ್ತೋತ್ರಗಳನ್ನು ಹಾಡುತ್ತಾರೆ. ಕೆಲವೊಮ್ಮೆ ಗುರುದ್ವಾರಕ್ಕೂ ಭೇಟಿ ನೀಡುತ್ತಾರೆ. ಆದರೆ ಲಾಲಾ ರಾಂ ಲಾಲ್ ಸೇರಿದಂತೆ ಮನೋ ಮಜ್ರಾದವರೆಲ್ಲರೂ ಗೌರವಿಸುವಂಥದೊಂದು ವಸ್ತುವಿದೆ; ಇದು ಕೊಳದ ಪಕ್ಕದಲ್ಲಿ ಜಾಲಿ ಮರದ ಕೆಳಗೆ ನೇರವಾಗಿ ನಿಲ್ಲಿಸಲಾಗಿರುವ ಮೂರಡಿ ಉದ್ದದ ಮಡ್ಡಿಕಲ್ಲು. ಇದು ಸ್ಥಳೀಯರ ಆರಾಧ್ಯದೈವ. ಆಶೀರ್ವಾದದ ವಿಶೇಷ ಅಗತ್ಯ ಬಿದ್ದಾಗ ಹಿಂದೂ, ಸಿಖ್, ಮುಸ್ಲಿಮರಲ್ಲದೇ ಕ್ರಿಶ್ಚಿಯನ್ನರಿರಬಹುದೆಂದು ಊಹಿಸಲಾಗಿರುವವರೂ ಸೇರಿದಂತೆ ಇಡೀ ಹಳ್ಳಿಗರು ಗುಟ್ಟಾಗಿ ಇದನ್ನು ಪೂಜಿಸುತ್ತಾರೆ.

ಮನೋ ಮಜ್ರಾ ಹಳ್ಳಿಯು ಸಟ್ಲೇಜ್ ನದಿ ದಂಡೆಯ ಮೇಲಿದೆಯೆಂದು ಹೇಳುತ್ತಾರಾದರೂ ನಿಜಕ್ಕೂ ಇದು ನದಿಯಿಂದ ಅರ್ಧ ಮೈಲಿ ದೂರದಲ್ಲಿದೆ. ಭಾರತದಲ್ಲಿ ಹಳ್ಳಿಗಳು ನದಿ ದಂಡೆಗೆ ತುಂಬ ಹತ್ತಿರವಾಗಿರಲಾಗುವುದಿಲ್ಲ. ನದಿಗಳೂ ಋತುಗಳಿಗನುಗುಣವಾಗಿ ತಮ್ಮ ಕ್ರಿಯಾರೂಪಗಳನ್ನು ಬದಲಿಸಿಕೊಂಡು ಯಾವುದೇ ಮುನ್ಸೂಚನೆ ಇಲ್ಲದೆಯೇ ಬೇರೆ ಮಾರ್ಗಗಳನ್ನು ಹಿಡಿದುಬಿಡುತ್ತವೆ. ಪಂಜಾಬ್ ನಲ್ಲೇ ಅತಿ ದೊಡ್ಡ ನದಿ ಸಟ್ಲೇಜ್. ಮಳೆಗಾಲದ ನಂತರವಂತೂ ಪ್ರವಾಹ ಹೆಚ್ಚಾಗಿ ಒಂದು ಮೈಲಿಗಿಂತಲೂ ಅಗಲದ ವಿಶಾಲ ಮರಳುಹಾಸಿಗೆಯುದ್ದಕ್ಕೂ ಹರಡಿಕೊಂಡು, ಮಣ್ಣಿನ ಏರಿಯ ಇಕ್ಕೆಲಗಳಲ್ಲೂ ಕೆನ್ನೀರು ದಂಗೆ ಎದ್ದಂತೆ ಉಕ್ಕಿ ಹರಿಯುತ್ತದೆ. ಪ್ರವಾಹ ಇಳಿಮುಖವಾದಾಗ ನದಿ ಸಾವಿರಾರು ಕವಲುಗಳಾಗಿ ಒಡೆದು ತೆಳುವಾಗಿ ಜವುಗು ನೆಲದ ಅಸಂಖ್ಯ ಪುಟ್ಟ ದ್ವೀಪಗಳ ಸುತ್ತಲೂ ಮಂದಗತಿಯಲ್ಲಿ ಹರಿಯುತ್ತದೆ. ಮನೋ ಮಜ್ರಾದ ಉತ್ತರ ದಿಕ್ಕಿಗೆ ಒಂದು ಮೈಲು ದೂರದಲ್ಲಿ ಸಟ್ಲೇಜ್ ನದಿಗೆ ಅಡ್ಡವಾಗಿ ರೈಲು ಹಳಿ ಸೇತುವೆಯನ್ನು ಕಟ್ಟಲಾಗಿದೆ. ಅದೊಂದು ಅದ್ಭುತವಾದ ಸೇತುವೆ-ಅದರ ಹದಿನೆಂಟು ಬೃಹತ್ ಗಾತ್ರದ ಕಮಾನುಗಳು ಮಧ್ಯದಲ್ಲಿರುವ ಒಂದು ಕಂಬದಿಂದ ಮತ್ತೊಂದರೆಡೆಗೆ ಅಲೆಗಳಂತೆ ಹೊಯ್ದಾಡುತ್ತಿರುವವೇನೋ ಎಂಬಂತೆ ಕಾಣುವುದಲ್ಲದೆ ಪ್ರತಿಯೊಂದು ಕಮಾನಿನ ಅಂಚಿನಲ್ಲೂ ರೈಲು ಹಳಿಗೆ ಆಧಾರವಾಗಿರುವಂತೆ ಕಲ್ಲಿನ ಕಟ್ಟೆಗಳಿವೆ. ಅಣೆಕಟ್ಟಿನ ಪೂರ್ವ ದಿಕ್ಕಿನ ಕೊನೆಯ ಭಾಗ ಹಳ್ಳಿಯ ರೇಲ್ವೆ ಸ್ಟೇಷನ್ ವರೆಗೂ ಹರಡಿಕೊಂಡಿದೆ.

ಲಡಾಯಿ ಪ್ರಕಾಶನ ಪ್ರಕಟಿಸಿರುವ ‘ಟ್ರೈನ್ ಟು ಪಾಕಿಸ್ತಾನ್’ ಕೃತಿ ಪ್ರಜೋದಯ ಪ್ರಕಾಶನದ Online Storeನಲ್ಲಿ ಲಭ್ಯವಿದ್ದು, ಆಸಕ್ತರು ಪುಸ್ತಕ ಕೊಳ್ಳಲು ಕೆಳಗಿನ ಲಿಂಕ್ ಕ್ಲಿಕ್ಕಿಸಬಹುದು…
https://imojo.in/rd7z7