ರಾಮನಗರ, : ನಾಡಿನ ವರ್ಷದ ಮೊದಲ ರಾಸುಗಳ ಜಾತ್ರೆ ಎಂದು ಪ್ರಖ್ಯಾತಿ ಪಡೆದಿರುವ ಕೆಂಗಲ್ ದನಗಳ ಜಾತ್ರೆ ಇತ್ತೀಚೆಗೆ ಹಸುಗಳಲ್ಲಿ ಉಲ್ಬಣಗೊಂಡ ಚರ್ಮಗಂಟು ರೋಗದ ಭೀತಿ ಹಿನ್ನೆಲೆಯಲ್ಲಿ ರದ್ದುಗೊಳಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಜಿಲ್ಲೆಯಾದ್ಯಂತ ರಾಸುಗಳ ಚರ್ಮಗಂಟು ರೋಗ ಬಾಧೆಯನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಜನವರಿ 19ರ ವರೆಗೆ ಜಾನುವಾರುಗಳ ಜಾತ್ರೆ, ದನಗಳ ಸಂತೆ ಹಾಗೂ ನೆರೆ ರಾಜ್ಯಗಳಿಂದ ಒಳಗೆ ಅಥವಾ ಹೊರಗೆ ಜಾನುವಾರುಗಳ ಸಾಗಾಣಿಕೆಯನ್ನು ಸಹ ತಾತ್ಕಾಲಿಕವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಆದೇಶ ಹೊರಡಿಸಿದ್ದಾರೆ.

ಜಿಲ್ಲಾಧಿಕಾರಿಗಳ ಆದೇಶದ ಹಿನ್ನಲೆಯಲ್ಲಿ ಚನ್ನಪಟ್ಟಣ ತಾಲೂಕಿನ ಕೆಂಗಲ್ ಆಂಜನೇಯಸ್ವಾಮಿ ದೇವಾಲಯದ ಜಾನುವಾರು ಜಾತ್ರೆಯನ್ನು ರದ್ದುಮಾಡಿರುವುದಾಗಿ ದೇವಾಲಯದ ಅಧಿಕಾರಿಗಳು ಪ್ರಕಟಣೆ ಹೊರಡಿಸಿದ್ದಾರೆ. ಜಾತ್ರೆ ನಡೆದರೆ ಜಾನುವಾರುಗಳ ಚಲನವಲಗಳಿಂದ ಚರ್ಮಗಂಟು ರೋಗ ಹೆಚ್ಚಾಗಿ ಹರಡುವ ಸಂಭವವಿರುವುದರಿಂದ ಮುನ್ನೆಚ್ಚರಿಕ ಕ್ರಮವಾಗಿ ಜಾನುವಾರು ಜಾತ್ರೆಯನ್ನು ರದ್ದುಗೊಳಿಸಲಾಗಿದೆ ಎಂದು ಕೆಂಗಲ್ ಆಂಜನೇಯಸ್ವಾಮಿ ದೇವಸ್ಥಾನದ ಕಾರ್ಯನಿರ್ವಾಹಕರು ಹಾಗೂ ಅಧಿಕಾರಿಗಳು ರೈತರಲ್ಲಿ ಮನವಿ ಮಾಡಿದ್ದಾರೆ

ದನಗಳ ಖರೀದಿಗೆ ಮುಗಿಬೀಳುವ ಹೊರ ರಾಜ್ಯದ ರೈತರು

ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ರಾಮನಗರ ಮತ್ತು ಚನ್ನಪಟ್ಟಣ ಮಧ್ಯದಲ್ಲಿರುವ ಕೆಂಗಲ್ ದೇವಾಲಯದ ಬಳಿ ನಡೆಯುವ ದನಗಳ ಜಾತ್ರೆ ಅಯ್ಯನ ಗುಡಿ ಜಾತ್ರೆ ಎಂದು ಕರೆಯಲಾಗುತ್ತದೆ. ಕೆಂಗಲ್ ದನಗಳ ಜಾತ್ರೆಯಲ್ಲಿ ತಮ್ಮ ರಾಸುಗಳನ್ನು ಮಾರಾಟ ಹಾಗೂ ಖರೀದಿ ಮಾಡಲು ರಾಜ್ಯ ಅಷ್ಟೇ ಅಲ್ಲದೆ ಹೊರ ರಾಜ್ಯಗಳಿಂದಲೂ ಜನರು ಕೆಂಗಲ್ ಜಾತ್ರೆ ಭೇಟಿ ನೀಡುತ್ತಾರೆ.

ಬೂಕನಬೆಟ್ಟದ ದನಗಳ ಜಾತ್ರೆ ನಿಷೇಧಕ್ಕೆ ರೈತರ ಆಕ್ರೋಶ

ಇನ್ನು ಇತರ ಜಿಲ್ಲೆಗಳಲ್ಲೂ ಚರ್ಮಗಂಟು ರೋಗ ವ್ಯಾಪಿಸಿದೆ. ಇಡೀ ರಾಜ್ಯದಲ್ಲೇ ಹೆಸರು ವಾಸಿಯಾಗಿರುವ ಐತಿಹಾಸಿಕ ಬೂಕನಬೆಟ್ಟ ದನಗಳ ಜಾತ್ರೆ ಕೂಡ ಚರ್ಮಗಂಟುದ ಹಿನ್ನೆಲೆಯಲ್ಲಿ ರದ್ದುಗೊಳಿಸಿ ಹಾಸನ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಚರ್ಮಗಂಟು ರೋಗ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹಾಸನ ಜಿಲ್ಲೆಯಲ್ಲಿ ಜನವರಿ 9 ರಿಂದ ಜನವರಿ 22ರವರೆಗೆ ಜಿಲ್ಲೆಯಾದ್ಯಂತ ದನಗಳ ಜಾತ್ರೆ ಹಾಗೂ ಸಂತೆ ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ದನಗಳ ಜಾತ್ರೆ ರದ್ದುಗೊಳಿಸಿರುವುದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.