ಮೊದಲ ಬಾರಿಗೆ ರಾಹುಲ್‌ ಗಾಂಧಿಯನ್ನು ನಾನು ಭೇಟಿಯಾದೆ. ಆದರೆ ನಾನೊಬ್ಬಳೇ ಭೇಟಿಯಾಗಿದ್ದಲ್ಲ. ನಮ್ಮ ನೆರಳು ಬೀಡಿ ಕಾರ್ಮಿಕರ ಯೂನಿಯನ್‌ ಸೇರಿ 6 ಸಂಘಟನೆಗಳ ಪ್ರತಿನಿಧಿಗಳು ಒಟ್ಟಾಗಿ ಭೇಟಿಯಾದೆವು. ಮಾತನಾಡಿದೆವು. ಅಸಂಘಟಿತ ಮಹಿಳೆಯರು ಕೆಲಸ ಮತ್ತು ಕುಟುಂಬವನ್ನು ಒಟ್ಟೊಟ್ಟಿಗೆ ನಿರ್ವಹಿಸುವ ಪರಿಸ್ಥಿತಿಯ ಬಗ್ಗೆ ಚರ್ಚಿಸಿದೆವು.

ಇಂಥದ್ದೊಂದು ಅವಕಾಶವನ್ನು ಮಾಡಿಕೊಟ್ಟ ಈ ಯಾತ್ರೆಯ ಸಂಘಟಕರಿಗೆ, ಸ್ನೇಹಿತರಿಗೆ ಮನಸಾರೆ ಕೃತಜ್ಞತೆ ಸಲ್ಲಿಸುತ್ತೇನೆ.

ಮುಕ್ಕಾಲು ತಾಸು ರಾಹುಲ್ ಗಾಂಧಿ ಜತೆಗೆ ಕಳೆದಾಗ ನನಗೆ ಅನ್ನಿಸಿದನ್ನು ಇಲ್ಲಿ ದಾಖಲಿಸುತ್ತಿದ್ದೇನೆ. ಅವರ ತಾಳ್ಮೆ, ಆಲಿಸುವ ರೀತಿ, ಸೌಜನ್ಯದಿಂದ ಕೇಳುವ ಪ್ರಶ್ನೆಗಳು, ಅವರ ಉತ್ಸಾಹ, ಸಹಜತೆ, ಮಾನವೀಯ ಮೌಲ್ಯಗಳನ್ನೇ ಬದುಕಾಗಿಸಿಕೊಂಡ ವ್ಯಕ್ತಿಯಾಗಿದ್ದರು. ಸಹನಾಶೀಲ ರಾಜಕೀಯ ಮುತ್ಸದ್ದಿ ಎಂಬುದನ್ನು ಅವರ ನಡವಳಿಕೆ ಎತ್ತಿ ತೋರಿಸಿತು. ರಾಹುಲ್‌ ಕಣ್ಣಿನಲ್ಲಿರುವ ಆಶಾಭಾವನೆ, ಬದಲಾವಣೆಯ ತುಡಿತ ಮತ್ತು ಸೌಹಾರ್ದ ಭಾರತ ನಿರ್ಮಾಣದ ಕಳಕಳಿಗಳು ಭವಿಷ್ಯಕ್ಕೆ ದಾರಿದೀಪವಾಗಬಲ್ಲದು. ಆ ಪಕ್ಷದ ಮುಖಂಡರು, ಕಾರ್ಯಕರ್ತರು ರಾಹುಲ್‌ ಅವರ ವ್ಯಕ್ತಿತ್ವ ಮತ್ತು ಕನಸನ್ನು ಅನುಸರಿಸಿಕೊಂಡರೆ ಅವರೂ ಬದಲಾಗುತ್ತಾರೆ. ಭಾರತವೂ ಬದಲಾಗುತ್ತದೆ.

ಇವತ್ತು ಸಮಾಜದಲ್ಲಿ ನಿರ್ಮಾಣವಾಗುತ್ತಿರುವ ಅಸಮಾನತೆ, ಆಸೂಯೆ, ಜಾತಿ–ಜಾತಿಗಳ ಮಧ್ಯೆ, ಧರ್ಮ–ಧರ್ಮಗಳ ಮಧ್ಯೆ ಹರಡುತ್ತಿರುವ ದ್ವೇಷ, ಆಗುತ್ತಿರುವ ಜಗಳಗಳು, ಈ ದೇಶದ ಬಹುತ್ವವನ್ನು ವಿವಿಧತೆಯನ್ನು ನಾಶ ಮಾಡಿ ಏಕ ಧರ್ಮ, ಏಕ ಸಂಸ್ಕೃತಿ, ಏಕ ಭಾಷೆಯನ್ನು ಹೇರುವ ಮನೋಭಾವ. ಒಂದು ಸಮುದಾಯವನ್ನು ಗುರಿ ಮಾಡಿ ನಡೆಸುತ್ತಿರುವ ಹಲ್ಲೆ, ದೌರ್ಜನ್ಯಗಳು ಇವೆಲ್ಲವನ್ನು ನಿತ್ಯ ಕಾಣುತ್ತಿದ್ದೇವೆ. ಇಂಥ ಸಂಕಷ್ಟದ ಸಮಯದಲ್ಲಿ ಭಾರತ್‌ ಜೋಡೊ ಯಾತ್ರೆ ಸಣ್ಣ ಆಶಾಕಿರಣದಂತೆ ಕಂಡಿದ್ದರಿಂದ ಅಕ್ಟೋಬರ್‌ 8 ಮತ್ತು 9 ಈ ಎರಡು ದಿನಗಳ ಕಾಲ ಭಾರತ್ ಜೋಡೊ ಯಾತ್ರೆಯಲ್ಲಿ ಭಾಗವಹಿಸಿದೆ.

ಸಮಸ್ಯೆಯ ಬಗ್ಗೆ ಧ್ವನಿ ಎತ್ತದೆ, ದೇಶ ಪ್ರೇಮ‌, ದೇಶ ಭಕ್ತಿಯ ಮಂತ್ರವನ್ನು ಜಪಿಸುವವರೇ ಇಂದು ಎಲ್ಲೆಡೆ ಆವರಿಸಿದ್ದಾರೆ. ನಮ್ಮನ್ನು ಭಾವನಾತ್ಮವಾಗಿ ಸೆಳೆದು ಶಿಕ್ಷಣ, ನಿರುದ್ಯೋಗ, ಅಹಾರ,ವಸತಿ, ಬೆಲೆ ಏರಿಕೆ ಇಂತಹ ಮೂಲ ಸಮಸ್ಯೆಗಳನ್ನು ಮೂಲೆಗುಂಪು ಮಾಡಲಾಗಿದೆ. ಪ್ರಜೆಗಳನ್ನೇ ಅಸ್ತ್ರ ಮಾಡಿಕೊಂಡು ನಮ್ಮ ನಮ್ಮೊಳಗೆ ಜಗಳ ಹಚ್ಚುತ್ತಿದ್ದಾರೆ. ಇಂಥ ಹುನ್ನಾರವನ್ನು ವಿರೋಧಿಸುತ್ತಿರುವ ಹಲವಾರು ಹೋರಾಟಗಾರರು, ಸಮಾನ ಮನಸ್ಕರು, ಸೌಹಾರ್ದ ಬಯಸುವ ಸಂಗಾತಿಗಳು ಮನಸ್ಸುಗಳನ್ನು ಜೋಡಿಸುವ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಅವರ ಜೊತೆಗೆ ನಿಂತು ನಾನೂ ಬೆಂಬಲ ಸೂಚಿಸಿದೆ, ನಮ್ಮಸಂಘಟನೆಯ ಸದಸ್ಯರೂ ಬೆಂಬಲಿಸಿದರು.

(ನನ್ನ ಜತೆಗೆ ಭಾಗವಹಿಸಿದ ನಮ್ಮ ಸಂಘಟನೆಯ ಸಂಗಾತಿಗಳು: ಹಸೀನಾ ಬಾನು, ನೂರ್ ಫಾತೀಮ, ಕರಿಬಸಪ್ಪ ಎಮ್, ಶಿರೀನ್ ಬಾನು)

ಜಬೀನಾ ಖಾನಂ
ದಾವಣಗೆರೆ