ಇರುನೆಲೆ
————
ಅರಿಯಬಲ್ಲಿರಾ ಭಾರತೀಯ ಮುಸ್ಲಿಮರ ಈ ಸಂಕಟ?
——————————————————————–* ಟಿ.ಕೆ.ತ್ಯಾಗರಾಜ್

ಕರ್ನಾಟಕದಲ್ಲಿ‌ಈಗ ನಡೆಯುತ್ತಿರುವ ವಿದ್ಯಮಾನಗಳನ್ನು ಅರ್ಥ‌ ಮಾಡಿಕೊಳ್ಳಬೇಕಾದರೆ ನಾನು ಇಲ್ಲಿ ಉಲ್ಲೇಖಿಸಿರುವ ಸಂಗತಿಗಳ‌ ಮೂಲಕವೇ ನೀವು‌ ಮುಂದಕ್ಕೆ ಹೋಗಬೇಕು.
*ಮೊಹ್ಮದ್ ಅಬ್ದುಲ್ ಹೈ! ಈ ಹೆಸರು ನಿಮಗೆ‌ ನೆನಪಿರುವುದು ಸಾಧ್ಯವಿಲ್ಲ. ಇವರು ಜೈ ನಾರಾಯಣ್ ವ್ಯಾಸ್ ವಿಶ್ವ‌ವಿದ್ಯಾಲಯದ ಅಸೋಸಿಯೇಟ್‌ ಪ್ರೊಫೆಸರ್.2001 ರ‌‌ ಡಿಸೆಂಬರ್ ನಲ್ಲಿ ಗುಜರಾತ್ ನಲ್ಲಿ ನಡೆಯಲಿದ್ದ ಮುಸ್ಲಿಂ ಶಿಕ್ಷಣಕ್ಕೆ ಸಂಬಂಧಿಸಿದ ವಿಚಾರಸಂಕಿರಣದಲ್ಲಿ ಭಾಗವಹಿಸಲು ಸೂರತ್ ನಿಂದ ಹೋಗಿದ್ದರು. ಅವರೂ ಸೇರಿದಂತೆ 127 ಮಂದಿಯನ್ನು ಗುಜರಾತ್‌ ಪೊಲೀಸರು ಬಂಧಿಸಿದರು.ನಿಷೇಧಿತ ಸ್ಟೂಡೆಂಟ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾ (ಸಿಮಿ)ಸಂಘಟನೆಯ ಜಾಲ‌ವಿಸ್ತರಿಸುವ ಜತೆ ಭಯೋತ್ಪಾದನೆ ಮತ್ತು ದೇಶದ್ರೋಹದ ಆರೋಪ ಹೊತ್ತಿದ್ದರು. ಜಾಮೀನಿನ‌ ಮೇಲೆ ಬಿಡುಗಡೆಯಾಗುವ‌ ಮುನ್ನ ಎಲ್ಲರೂ 14 ತಿಂಗಳ ಕಾಲ ಸೆರೆಮನೆಯಲ್ಲಿದ್ದು ನರಕವನ್ನೇ ಅನುಭವಿಸಿದರು. ನ್ಯಾಯಾಲಯದಲ್ಲಿ ವಿಚಾರಣೆಯಂತೂ‌ ಮುಂದುವರಿಯಿತು. ಇವರೆಲ್ಲ ಭಯೋತ್ಪಾದಕರೆನ್ನಲು ಪೊಲೀಸರ ಬಳಿ ಯಾವುದೇ ಆಧಾರ ಇರಲಿಲ್ಲವಾದರೂ ಮಾನಸಿಕ ಹಿಂಸೆ‌ ನೀಡುವ ಸಲುವಾಗಿಯೇ ಪ್ರಕರಣ ಇತ್ಯರ್ಥಗೊಳ್ಳುವುದೂ ವಿಳಂಬವಾಗಿಸಿದರೂ 19 ವರ್ಷಗಳ ನಂತರ ಆರೋಪ‌ಮುಕ್ತರಾದರು.ಈ ಪ್ರಕರಣದಿಂದಾಗಿ ಕೆಲವರು ಸರ್ಕಾರಿ ನೌಕರಿಯನ್ನೇ ಕಳೆದುಕೊಂಡು ಬೀದಿಗೆ ಬಿದ್ದರು. ಬಹುತೇಕರ ಬದುಕು ಇನ್ನಿಲ್ಲದಂತೆ ನೆಲಕಚ್ಚಿತು.ಈ ಆರ್ಥಿಕ ನಷ್ಟ, ಕಳೆದುಕೊಂಡ‌ ನೆಮ್ಮದಿ, ಅಕ್ಕಪಕ್ಕದವರ ಅನುಮಾನದ ಕಣ್ಣುಗಳ ನೋಟ, ಅವಮಾನ ಮೊದಲಾದ ಹಾನಿ ಸರಿಪಡಿಸುವುದಾದರೂ ಹೇಗೆ?
*ಇವರು ನಿಸಾರ್ ಅಂತ. ಬಾಬ್ರಿ‌ಮಸೀದಿ ಧ್ವಂಸ‌ಪ್ರಕರಣ ನಡೆದು ವರ್ಷ ತುಂಬಿದ‌ ಸಂದರ್ಭದಲ್ಲಿ ಸಂಭವಿಸಿದ ರೈಲು ಸ್ಫೋಟ ಪ್ರಕರಣದಲ್ಲಿ ಬಂಧಿತರಾಗಿ 23 ವರ್ಷ‌ ಸೆರೆಮನೆವಾಸ‌ ಅನುಭವಿಸಿದ ನಂತರ 2016 ರಲ್ಲಿ ಆರೋಪ‌ಮುಕ್ತರಾಗಿ ಹೊರಬಂದರು. ಬಿಡುಗಡೆಯಾದ‌ಸಂಭ್ರಮಕ್ಕಿಂತ ಅವರು ಹೇಳಿದ ಕೆಲವೇ ಶಬ್ದಗಳು ಎಂಥ‌ ಕಲ್ಲು ಹೃದಯದವರನ್ನೂ ಕರಗಿಸುವಂತಿತ್ತು.‌’ನಾನೀಗ ಬದುಕಿರುವ ಹೆಣ. ಬದುಕಲು ಯಾವುದೇ ಆಸೆ,‌ಆಕಾಂಕ್ಷೆಗಳೂ ಉಳಿದಿಲ್ಲ. ಮಾಡದ ತಪ್ಪಿಗೆ‌ ಅನುಭವಿಸಿದ ಶಿಕ್ಷೆ ತುಂಬ ಘೋರ. ಇನ್ಯಾರಿಗೂ ಬರಬಾರದು ಈ ಪರಿಸ್ಥಿತಿ”. ಯಾವುದೇ ಆಧಾರವಿಲ್ಲದೇ 23 ವರ್ಷ ಸೆರೆಮನೆಯಲ್ಲೇ ಕೊಳೆಯುವಂತೆ ಮಾಡಿದವರಾರು?
• ಅದು 28 ಮೇ, 1994. ಮಹಾರಾಷ್ಟ್ರದ ಥಾಣೆಯ ಕಾಲೇಜೊಂದರಲ್ಲಿ ಫಾರೂಖ್ ಅಹ್ಮದ್‌ಖಾನ್‌ ತಮ್ಮ‌ ವಿದ್ಯಾರ್ಥಿಗಳಿಗೆ‌ ಉಪನ್ಯಾಸ‌ ನೀಡುತ್ತಿದ್ದರು. ಕಾಲೇಜಿಗೆ‌ ಬಂದ‌ ಪೊಲೀಸರು ಅವರನ್ನು ಬಂಧಿಸಿ ಎಳೆದೊಯ್ದು ಹಲ್ಲೆ ನಡೆಸಿದರು. ಕಾಶ್ಮೀರಿ ಭಯೋತ್ಪಾದಕರ‌ ಜತೆಗೂಡಿ ಮಹಾರಾಷ್ಟ್ರದಲ್ಲಿ ಭಯೋತ್ಪಾದಕ ಚಟುವಟಿಕೆ ನಡೆಸಲು ಸಂಚು ರೂಪಿಸಿದ ಆರೋಪ ಅವರ‌ ಮೇಲಿತ್ತು. ಆಗ ಫಾರೂಖ್ ಅವರಿಗೆ‌ ಇನ್ನೂ 24 ವರ್ಷ.‌ವಿದೇಶದಲ್ಲಿ ನೌಕರಿಗೆ ಹೋಗುವ‌ ಸಲುವಾಗಿ ವೀಸಾಗೆ ಅರ್ಜಿ ಸಲ್ಲಿಸಿ ಕಾಯುತ್ತಿದ್ದರು.
ಈ ಘಟನೆಯ‌ ನಂತರ ಅವರ ಬದುಕೇ ನಾಶವಾಯಿತು.
ಇವರು ಅಶ್ಫಕ್ ಮೀರ್, ವೈದ್ಯರು. ದಕ್ಷಿಣ ಮುಂಬೈನಲ್ಲಿ‌ ನೆಲೆಸಿದ್ದ ಸುಖೀ‌ಕುಟುಂಬ, ಸಾಮಾಜಿಕವಾಗಿಯೂ ಗೌರವಾನ್ವಿತ‌ ವ್ಯಕ್ತಿ. 1994 ರ‌‌ ಮೇ 28 ಅವರ‌ ಪಾಲಿಗೆ ಕಪ್ಪು ದಿನವಾಗುತ್ತದೆ ಎಂದು ಆಗ‌ 34 ವರ್ಷದವರಾಗಿದ್ದ‌ಮೀರ್ ಅವರಿಗೆ‌ ಗೊತ್ತಿರಲಿಲ್ಲ.ಭುಸಾವಾಲ್ ನಲ್ಲಿ ನಡೆದ ಸ್ಫೋಟಕ್ಕೆ‌ ಸಂಬಂಧಿಸಿದಂತೆ ಪೊಲೀಸರು ಅವರನ್ನು‌ ಬಂಧಿಸಿದರು.‌ಅಲ್ ಜಿಹಾದ್ ತಂಝೀಮ್ ಎಂಬ ಭಯೋತ್ಪಾದಕ ಸಂಘಟನೆ ಜತೆ ಅವರಿಗೆ ಸಂಬಂಧ ಕಲ್ಪಿಸಲಾಯಿತು.ಈ ಇಬ್ಬರೂ ನಾಲ್ಕು‌ತಿಂಗಳು ಸೆರೆಮನೆವಾಸ ಅನುಭವಿಸಿದರು.‌ಜಾಮೀನಿನ‌ ಮೇಲೆ ಬಿಡುಗಡೆಯಾದ‌ ನಂತರವೂ ಯಾವುದೇ ಭಯೋತ್ಪಾದಕ ಚಟುವಟಿಕೆ‌ ಕಂಡರೂ ಪೊಲೀಸರಿಂದ ಹಿಂಸೆ ತಪ್ಪಿರಲಿಲ್ಲ.ಅವರು ಯಾವುದೇ ದೇಶದ್ರೋಹದ‌ ಕೆಲಸ‌ ಮಾಡಿಲ್ಲ‌ ಎಂದು ಆರೋಪಮುಕ್ತರಾಗುವುದಕ್ಕೆ ಇಪ್ಪತ್ತೈದು‌ ವರ್ಷಗಳೇ ಬೇಕಾದವು. 2019 ರಲ್ಲಿ‌ಆರೋಪ‌ಮುಕ್ತರಾಗುವ ಹೊತ್ತಿಗೆ ನಡು ವಯಸ್ಸು ದಾಟಿದ್ದ‌ ಮೀರ್ ಸಾಮಾಜಿಕವಾಗಿ, ಆರ್ಥಿಕವಾಗಿ‌ ಸಾಕಷ್ಟು ಹಾನಿ‌ ಅನುಭವಿಸಿದ್ದರು. ತಮ್ಮೊಂದಿಗೆ ಬಿಡುಗಡೆಯಾದ ಇತರ ಹನ್ಮೊಂದು ಜತೆಗಾರರನ್ನು ತಬ್ಬಿಕೊಂಡು ಕಣ್ಣೀರಿಟ್ಟ ಮೀರ್‌ ನ್ಯಾಯಾಲಯದಿಂದ‌ ಹೊರ ಬಂದ‌ ನಂತರ ಹೇಳಿದ್ದು ನಾಲ್ಕೇ‌ ಪದಗಳು. ‘ನಾನು‌ ಮುಸ್ಲಿಮನಾಗಿ ಹುಟ್ಟಿದ್ಧೇ ತಪ್ಪಾಯಿತು’.
• ಈ ಹುಡುಗರ ಕತೆ‌ ನೋಡಿ .ಜಲಾಲುದ್ದೀನ್, ನೌಷಾದ್, ಮೊಹ್ಮದ್ ಅಲಿ, ಅಜೀಜ್ ಉರ್‌ ರಹಮಾನ್,‌ಶೇಖ್ ಮುಖ್ತಾರ್ ಎಂಬ ಹುಡುಗರನ್ನು ಉತ್ತರ ಪ್ರದೇಶದ ಲಕ್ನೋ‌ ಪೊಲೀಸರು 2007 ರಲ್ಲಿ ಬಂಧಿಸಿದರು. ಅವರಿಗೆಲ್ಲ ಹರ್ಕತ್ ಉಲ್ ಜಿಹಾದಿ ಇಸ್ಲಾಮಿ(ಹೂಜಿ) ಸಂಘಟನೆಯೊಂದಿಗೆ ಸಂಬಂಧವಿದ್ದು ಭಯೋತ್ಪಾದಕ ಚಟುವಟಿಕೆ ನಡೆಸುವ ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿದರು. ಅವರಿಂದ ಎ.ಕೆ.47 ಬಂದೂಕು ಸೇರಿದಂತೆ ಅನೇಕ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿರುವುದಾಗಿ ನ್ಯಾಯಾಲಯಕ್ಕೆ ಪೊಲೀಸರು ತಿಳಿಸಿದ್ದರು. ಅಲ್ಲಿಂದ 2015 ರವರೆಗೂ ಸೆರೆಮನೆಯಲ್ಲಿ ಈ ಹುಡುಗರು ಬದುಕಿನ ಅಮೂಲ್ಯ ಅವಧಿಯನ್ನೇ ಕಳೆದುಕೊಂಡಿದ್ದರು. ಆ ಶಸ್ತ್ರಾಸ್ತ್ರಗಳಿಗೂ ಹುಡುಗರಿಗೂ ಯಾವುದೇ ಸಂಬಂಧವಿಲ್ಲವೆಂದೂ, ಹೂಜಿ ಸಂಘಟನೆ ಬಗ್ಗೆಯೂ ಹುಡುಗರಿಗೆ ಯಾವುದೇ ಮಾಹಿತಿ ಇಲ್ಲವೆಂದೂ, ಇದೆಲ್ಲ ಪೊಲೀಸರೇ ಕತೆ ಕಟ್ಟಿ ಅವರನ್ನು ಸೆರೆಮನೆಗೆ ತಳ್ಳುವ ಹುನ್ನಾರವಾಗಿತ್ತೆಂದು ನ್ಯಾಯಾಧೀಶರೇ ಛೀಮಾರಿ ಹಾಕಿ‌ ಹುಡುಗರನ್ನು ಬಿಡುಗಡೆ ಮಾಡಿದರು.ಇಂಥ‌ ಅನೇಕ‌ ಮನ‌ ಮಿಡಿಯುವ ಸಂಗತಿಗಳು ದೇಶದ ಬಹುತೇಕ ಕಡೆ ದಾಖಲಾಗಿವೆ.
ತಪ್ಪೇ‌ ಮಾಡದೇ ಶಿಕ್ಷೆ ಅನುಭವಿಸಿದ ಅವರೆಲ್ಲ‌ಮುಸ್ಲಿಮರು!ಇದು ಮನುಸ್ಮೃತಿ ಬಿಟ್ಟು ಹೋಗಿರುವ ಹೀನ ಸುಳಿಗಳು ಭಾರತೀಯ‌ ಮನಸ್ಸನ್ನೇ ನಿಯಂತ್ರಿಸುತ್ತಾ ಸದಾ ಮುಸ್ಲಿಂ ದ್ವೇಷದ ಬಿತ್ತನೆ‌ ಮಾಡುತ್ತಾ ಇಡೀ ದೇಶದ ಸಾಮಾಜಿಕ ವ್ಯವಸ್ಥೆಯನ್ನೇ ಕಲುಷಿತಗೊಳಿಸಿರುವುದರ ಫಲ.
ಈಗ ಕರ್ನಾಟಕದಲ್ಲಿ ಆಗುತ್ತಿರುವುದನ್ನೇ ನೋಡಿ‌. ಎಸ್.ಡಿ.ಪಿ.ಐ., ಪಿ.ಎಫ್.ಐ. ಮೊದಲಾದ ಮುಸ್ಲಿಂ ಸಂಘಟನೆಗಳಿಗೆ ಸೇರಿದ ಅದೆಷ್ಟೋ‌ಮುಸ್ಲಿಂ ಯುವಕರನ್ನು ರಾಜ್ಯದ‌ ವಿವಿಧೆಡೆಗಳಲ್ಲಿ ಬಂಧಿಸಲಾಗಿದೆ. ಮಾಧ್ಯಮಗಳು ಕೂಡ ಮುಸ್ಲಿಮರು‌ ಮತ್ತು ಭಯೋತ್ಪಾದನೆಯ ನಂಟು ಸಹಜ ಎಂಬಂಥ ಆಧಾರರಹಿತ ‘ಭಯೋತ್ಪಾದಕ’ ವರದಿಗಳನ್ನು ಪ್ರಸಾರ‌ಮಾಡುತ್ತಲೇ ಇವೆ.
ಭರತಭೂಮಿಯಲ್ಲಿ ತಪ್ಪು ಮಾಡಿದವರು ಶಿಕ್ಷೆ ಅನುಭವಿಸುವ ಬದಲು ಪ್ರಶ್ನಿಸಿದವರು ಶಿಕ್ಷೆ ಅನುಭವಿಸುವಂಥ ವಾತಾವರಣ ನಿರ್ಮಾಣವಾಗಿದೆ. ಈ ನೆಲದಲ್ಲಿ ಇತ್ತೀಚೆಗೆ ಮುಸ್ಲಿಂ ವಿರೋಧಿ ನಿರ್ಧಾರಗಳನ್ನು ಒಂದಿಷ್ಟೂ ಅಳುಕಿಲ್ಲದೇ ಪ್ರತಿಭಟಿಸಿದ್ದು, ಪ್ರಶ್ನಿಸಿದ್ದು ಇದೇ ಮುಸ್ಲಿಂ ಸಂಘಟನೆಗಳು. ಸಹಜವಾಗಿಯೇ ಮುಸ್ಲಿಮರನ್ನೇ ಗುರಿಯಾಗಿಸಿ ಅದಕ್ಕೆ ತಕ್ಕ ತೋರಿಕೆಯ ಕಾರಣಗಳನ್ನಿರಿಸಿಕೊಂಡು‌ ಮಾನಸಿಕ ಹಿಂಸೆ ನೀಡಲಾಗುತ್ತಿದೆಯೋ ಎಂಬ ಅನುಮಾನವೂ ಕಾಡುತ್ತಿದೆ.ಹಾಗೆಂದ ಮಾತ್ರಕ್ಕೆ ನಿಜಕ್ಕೂ ಭಯೋತ್ಪಾದಕ ಚಟುವಟಿಕೆಗಳಲ್ಲಿ‌ ನಿರತರಾದವರು, ದೇಶದ್ರೋಹದ‌ ಸಂಚಿನಲ್ಲಿ ಭಾಗಿಯಾದವರು ಕಾನೂನುಬದ್ಧ ಶಿಕ್ಷೆಯಿಂದ ಪಾರಾಗಲೇಬಾರದು. ಇದಕ್ಕೆ ಯಾರದೇ ತಕರಾರು ಇರುವುದು ಸಾಧ್ಯವಿಲ್ಲ. ಆದರೆ ಹಾಗಾಗಿದೆಯೇ? ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿ ಕೋಮುವಾದಿಗಳ ವಿಷಬಿತ್ತನೆ ಫಲವಾಗಿ ಮುಸ್ಲಿಮರು ತಮ್ಮ ಹುಟ್ಟಿನಿಂದಾಗಿಯೇ ಆರೋಪಿಗಳು! ಭಾರತೀಯರೆಂಬ ನಮ್ಮನಡುವೆ ಮೊದಲೇ ಅತಂತ್ರವಾಗಿರುವ ಮುಸ್ಲಿಂ ಸಮುದಾಯವನ್ನು ಇನ್ನಷ್ಟು ದಿಕ್ಕೆಟ್ಟ ಸ್ಥಿತಿಗೆ ತಳ್ಳುವ ಹುನ್ನಾರ ಮುಂದುವರಿದೇ ಇದೆ. ಮುಸ್ಲಿಮರ ಅಸಹಾಯಕತೆ ನೋಡಿ ಸಂಭ್ರಮಿಸುವ ಅಮಾನವೀಯ ಉನ್ಮಾದಕ್ಕೂ‌ ಕೊರತೆ‌ ಇಲ್ಲ.
ಹಿಂದೂ ಮುಸ್ಲಿಂ ಭಾವೈಕ್ಯ ಈ ನೆಲದ ಸಹಜ ಗುಣ. ಭಾರತದ ಪ್ರಗತಿಗೆ ಆದು ಅನಿವಾರ್ಯ. ಅಂದರೆ ಭಾರತೀಯ ಮನಸ್ಸು ಮುಸ್ಲಿಂ ವಿರೋಧಿ ವಿಷಬಿತ್ತನೆ ಮಾಡುವುದು ಸಾಧ್ಯವೇ ಇಲ್ಲ. ದೇಶವನ್ನು ಒಡೆದು ನಿಯಂತ್ರಣದಲ್ಲಿರಿಸಿಕೊಳ್ಳುವ ಕ್ಷುದ್ರಜೀವಿಗಳ ಸಂಚಿನ ಫಲವೇ ಮುಸ್ಲಿಂ ವಿರೋಧಿ ಮನೋರೋಗ. ಸದ್ಯಕ್ಕೆ ಮುಂದಿನ ಚುನಾವಣೆ ಗೆಲುವಿಗಾಗಿ ಹಿಂದೂ ಮತ್ತು ಮುಸ್ಲಿಮರನ್ನು ಪ್ರತ್ಯೇಕಿಸಿ ಮತಸೆಳೆಯುವ ಲೆಕ್ಕಾಚಾರ ಇರಬಹುದು. ಆದರೆ ಭಾರತದ ಸಾಮಾಜಿಕ ವ್ಯವಸ್ಥೆಯನ್ನು ತನ್ನ ಸಂಪೂರ್ಣ ನಿಯಂತ್ರಣದಲ್ಲಿ ಇಟ್ಟುಕೊಳ್ಳುವ ಮೊದಲ ಭಾಗವಾಗಿ ಕ್ಷುದ್ರಜೀವಿಗಳ ಗುಂಪೊಂದು ಮುಸ್ಲಿಮರ ಮೇಲೆ ಗುರಿ ಇರಿಸಿದೆದೆಯಷ್ಟೇ‌. ಈವರೆಗೆ ಗುಜರಾತ್ ಮಾಡಲ್ ಎಂದು ಬೊಗಳುತ್ತಿದ್ದವರೆಲ್ಲ ಈಗ ಉತ್ತರ ಪ್ರದೇಶ ಮಾಡಲ್ ಎಂದು ಒದರಲಾರಂಭಿಸಿದ್ದಾರೆ. ಗುಜರಾತ್ ಮಾಡಲ್ ಮತ್ತು ಉತ್ತರಪ್ರದೇಶ ಮಾಡಲ್ ಗೆ ಅಂಥ ವ್ಯತ್ಯಾಸವೇನಿಲ್ಲ. ಬದುಕಿರುವವರನ್ನು ಕೊಲ್ಲುವುದು ಗುಜರಾತ್ ಮಾಡಲ್, ಬದುಕನ್ನು ಕೊಲ್ಲುವುದು ಉತ್ತರಪ್ರದೇಶ ಮಾಡಲ್. ಅಂದರೆ ಒಂದು ಕಾಲ ಘಟ್ಟದಲ್ಲಿ ಮುಸ್ಲಿಮರ ವಿರುದ್ಧ ವೈಯಕ್ತಿಕ ಮಟ್ಟದಲ್ಲಿದ್ದ ಸಿಟ್ಟನ್ನು ಈಗ ಸಂಘಟಿತವಾಗಿ ಸರ್ಕಾರಿ ಕಾರ್ಯಕ್ರಮವಾಗಿ ಪರಿವರ್ತಿಸಲಾಗಿದೆ.ಬಿಜೆಪಿ ಸರ್ಕಾರಗಳು ಮುಸ್ಲಿಮರಿಗಿರುವ ಇದ್ದಬದ್ದ ಅವಕಾಶಗಳನ್ನೂ ಕಸಿದುಕೊಳ್ಳುವಂತೆ ವರ್ತಿಸುತ್ತಿವೆ.
ಈ ಬಂಧನಗಳೂ ಹಾಗೆಯೇ. ಮುಸ್ಲಿಮರನ್ನು ಸದಾ‌ ಭಯದಲ್ಲಿಟ್ಟು ಅವರ‌ದನಿ ಬಗ್ಗು‌ಬಡಿಯುವುದಕ್ಕಷ್ಟೇ ಈ ಹುನ್ನಾರ! ಈ ಮಾತುಗಳನ್ನು ನಾನು ಸುಮ್ಮನೆ‌ ಹೇಳುತ್ತಿಲ್ಲ.
ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಭಯೋತ್ಪಾದನೆ ಮತ್ತು ದೇಶದ್ರೋಹದ ಸಂಚಿನ ಆರೋಪದಲ್ಲಿ ಬಂಧಿತರಾಗಿ ವರ್ಷಗಳ ಕಾಲ ಸೆರೆಮನೆಯಲ್ಲೇ ಕಳೆದು ಆರೋಪಮುಕ್ತರಾದ ಅಸಂಖ್ಯಾತ ಮುಸ್ಲಿಂ‌ ಯುವಜನರು ಅನುಭವಿಸಿದ ನರಕಸದೃಶ ಹಿಂಸೆ ಭಾರತೀಯ ಇತಿಹಾಸಕ್ಕೆ ಕಳಂಕ‌ ತರಲಿಲ್ಲವೇ?
ಕೊನೆಗೊಂದು ನೆನಪು:ಅದು 2003 ರ ವಿಶ್ವ ಕಪ್ ಕ್ರಿಕೆಟ್ ಟೂರ್ನಿ. ಅದರ ಕೆಲವು ತಿಂಗಳ ಹಿಂದೆ ಈ ಹಿನ್ನೆಲೆಯಲ್ಲಿ ನಾನು ಆಗ ಸಂಪಾದಕನಾಗಿದ್ದ ಒಂದು ಪತ್ರಿಕೆಯಲ್ಲಿ ಲೇಖನ ಬರೆದಿದ್ದೆ. ಆಗಿನ್ನೂ ಇರ್ಫಾನ್ ಪಠಾಣ್ ಭಾರತ ತಂಡಕ್ಕೆ ಸೇರ್ಪಡೆಯಾಗಿರಲಿಲ್ಲ. ಮಧ್ಯಮ ವೇಗಿ ಜಹೀರ್ ಖಾನ್ ಅಬ್ಬರಿಸುತ್ತಿದ್ದರು.ರಣಜಿ ಟೂರ್ನಿಯಲ್ಲಿ ತನ್ನ ಪ್ರತಿಭೆ ಮೆರೆದಿದ್ದ ಇರ್ಫಾನ್ ಪಠಾಣ್ ಕುರಿತು ‘ಹಸಿದು ಕುಳಿತಿರುವ ಸಿಂಹದ‌ಮರಿ’ ಎಂದು ಉಲ್ಲೇಖಿಸಿದ್ದೆ. ಈ ಬಗ್ಗೆ ನಾನು ಬಲ್ಲ ಶರಣರೊಬ್ಬರ ಜತೆ ಮಾತಾಡುತ್ತಾ ಹೇಗೂ ಜಹೀರ್ ಖಾನ್ ಬೋಲಿಂಗ್ ನಲ್ಲಿ ಮಿಂಚುತ್ತಿದ್ದಾರೆ, ಇರ್ಫಾನ್ ಪಠಾಣ್ ಕೂಡ ಭಾರತ ತಂಡ ಸೇರ್ಪಡೆಯಾದರೆ ಆರಂಭಿಕ ಬೋಲಿಂಗ್ ಗೆ ಇನ್ನಷ್ಟು ಬಲ ಬರುತ್ತದೆ ಎಂದೆ. ಒಮ್ಮೆಗೇ ಸಿಟ್ಟಿಗೆದ್ದ ಅವರು ‘ಇದೇನು ಪಾಕಿಸ್ತಾನ ತಂಡಾನಾ? ಏನಾಗಿದೆ ತ್ಯಾಗರಾಜ್ ನಿಮಗೆ?’ ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆ ಹಾಕಿದರು. ಈ ಘಟನೆಯನ್ನು ನಾನು ಏಕೆ ಹೇಳುತ್ತಿದ್ದೇನೆಂದರೆ ಬಸವಣ್ಣ ಬೋಧಿಸಿದ ಶರಣ ಸಮುದಾಯದಲ್ಲಿ ಹುಟ್ಟಿದ ಆ ನನ್ನ ಗೆಳೆಯರಲ್ಲೂ ಮುಸ್ಲಿಂ ದ್ವೇಷ ಅಷ್ಟರ ಮಟ್ಟಿಗೆ ತೀವ್ರವಾಗಿತ್ತು.ಆನಂತರ‌ ತಡವಾಗಿಯಾದರೂ ಇರ್ಫಾನ್ ಪಠಾಣ್ ಭಾರತ ಕ್ರಿಕೆಟ್ ತಂಡ ಸೇರಿ ಒಂದಷ್ಟು ಗಮನ ಸೆಳೆದಿದ್ದೂ ಆಯಿತು.