*ಜಸ್ಟ್ ಆಸಕಿಂಗ್*

” *ಅಡಿಗರ ಅಂಬೇಡ್ಕರ್ ಕವನ -ಕಾವ್ಯ ಕುಸುರಿಯಲ್ಲಿ ಅಂಬೇಡ್ಕರ್ ಅವರನ್ನು ಹಿಂದುತ್ವದಲ್ಲಿ ಒಳಗೊಳ್ಳುವ ಪ್ರಯತ್ನವಲ್ಲವೇ?”*

ಇದು ಅಂಬೇಡ್ಕರ್ ಬಗ್ಗೆ ಗೋಪಾಲ ಕೃಷ್ಣ ಅಡಿಗ ಬರೆದ ಕವನವಂತೆ….

ಅಂಬೇಡ್ಕರ್ ರ ಹಿಂದುವೀಕರಣ ಹಾಗೂ ಅಂಬೇಡ್ಕರ್ ಅವರನ್ನು ಅವರು ಪ್ರತಿಪಾದಿಸಿದ ಬ್ರಾಹ್ಮಣ್ಯ ವಿರೋಧಿ ಬುದ್ಧತ್ವ ಹಾಗೂ ಪ್ರಭುತ್ವ ಸಮಾಜವಾದದಿಂದ ಗುರುತಿಸದೆ ಕೇವಲ ನೆಹರೂ ವಿರೋಧದ ಬಾಣವಾಗಿ ಬಳಸಿಕೊಂಡಿರುವ ಕಾವ್ಯ ಬ್ರಾಹ್ಮಣ್ಯ ಎದ್ದು ಕಾಣುತ್ತದೆ.. ಇಂದು ಸಂಘ ಪರಿವಾರಿಗಳು ಅಂಬೇಡ್ಕರ್ ಅನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಮಾಡುತ್ತಿರುವ ಎಲ್ಲಾ ಸಾಮುಗಳು ಈ ಕಾವ್ಯದಲ್ಲಿ “ಅದ್ಭುತವಾಗಿ” ಮೂಡಿಬಂದಿದೆ..

ಇನ್ನು ಸರಳವಾಗಿ ಹೇಳಬೇಕೆಂದರೆ ಕಾದಂಬರಿ ತಂತ್ರವನ್ನು ಕರಾತಲಾ ಮಲಕ ಮಾಡಿಕೊಂಡಿರುವ ಭೈರಪ್ಪನವರು ಇಂದು ಅಂಬೇಡ್ಕರ್ ಬಗ್ಗೆ ಒಂದು ಕಾದಂಬರಿ ಬರೆದರೆ ಹೇಗಿರುತ್ತದೋ ಅದನ್ನು ಅಡಿಗರು ಕಾವ್ಯದ ಕುಸುರಿಯಲ್ಲಿ ಆಗಲೇ ಮಾಡಿದ್ದಾರೆ….

ಹೀಗಿರುವಾಗ ಈ ಕವನ ಕನ್ನಡದ ಬಲ ಪಂಥ ಅಂಬೇಡ್ಕರ್ ರನ್ನು ಹೇಗೆ ಒಳಗೊಳ್ಳುವ ಪ್ರಯತ್ನ ನಡೆಸಿತ್ತು ಎನ್ನುವುದಕ್ಕೆ ಒಂದು ಉದಾಹರಣೆ ಯಾಗ ಬಹುದೇ ವಿನಃ….

ಅಂಬೇಡ್ಕರ್ ಅವರನ್ನು ಪ್ರತಿನಿಧಿಸುವ ಅದ್ಭುತ ಕಾವ್ಯ ಎಂದೆಲ್ಲ ಹೇಳಬಹುದೇ…

ಜಸ್ಟ್ ಆಸಕಿಂಗ್

-ಶಿವಸುಂದರ್

*ಅಂಬೇಡಕರ ಭೀಮರಾಯರಿಗೆ*


ಅಂಬೇಡಕರ ಭೀಮರಾಯರಿಗೆ ಈ ನಮ್ಮ
ತುಂಬು ಹೃದಯದ ಗೌರವಾದರಪೂರ್ಣ-
ಸಾಷ್ಟಾಂಗ ನಮಸ್ಕಾರ;
ಆಧುನಿಕ ಹಿಂದುತ್ವದ ಅಪ್ರತಿಮ ಮೂಲ ಮಾದರಿಗೆ ;
ಕೊಳೆಕಸಗಲೀಜುಗಳ ಮಧ್ಯೆ ಮೇಲೆದ್ದು ಬಂದುದ್ಬುದ್ದ
ಶುದ್ಧಬುದ್ಧಿಯ ಮೃದುಲ ಹೃದಯದುತ್ತುಂಗತೆಗೆ ;
ಗಲಬೆಗೊಂದಲ ಭಷಣ ಭಾಷಣಗಳ ಅಪಸ್ವರದ
ಕೋಲಾಹಲದ ನಡುವೆ ನಡುಗಡ್ಡೆ ನಿಂತಿದ್ದ-
ಶ್ರುತಿಶುದ್ಧ ಮಧ್ಯಮಾಲಾಪಕ್ಕೆ ;
ನಿಂದೆ ತಾತ್ಸಾರ ಅಪಮಾನಗಳ ಗರಳ-
ನುಂಗಿ ಅರಗಿಸಿಕೊಂಡು
ಚಿಂತನದ ಕುಲುಮೆಯಲ್ಲಿ ಚಿದಗ್ನಿ ಕಿಡಿ-
ಸೂಸುತ್ತಲೇ ಬಂದಿದ್ದ
ಅಪರಂಜಿ ಕಾರಂಜಿಗೆ ;
ನಮಸ್ಕಾರ.


ಗಾಂಧಿಯುಗದಲ್ಲಿ ಬೀಸಿ ಬೀಸಿ-
ಬಡಿಯುತ್ತಿರಲು ಭಾವುಕತೆ
ಕಣ್ಣೆಲ್ಲ ಧೂಳು, ಮನಸ್ಸೆಲ್ಲ ಮಂಕು ;
ಪ್ರತಿಯೊಬ್ಬರೂ ತಮ್ಮ ತಮ್ಮ ಜವುಗಿನಲ್ಲಿ-
ಜಾರುತ್ತಲಿರೆ ಇಡೀ
ದೇಶವೇ ಆಗಿರೆ ತ್ರಿಶಂಕು ;
ಕೆಸರಲ್ಲಿ ಬಿದ್ದು ಕೊಸರಾಡುತ್ತಿದ್ದ ಮಂದಿಗೆ
ಕಾಣಿಸಲೆ ಇಲ್ಲ ಗಟ್ಟಿ ನೆಲದ ಮೇಲೆ
ಅಲ್ಲೊಂದು ಇಲ್ಲೊಂದು ನಿಂತಿದ್ದ-
ಅಚಲ ಗಂಭೀರ ದಿಕ್ಸೂಚಿ ಶಿಖರಗಳು ;
ವ್ಯಭಿಚಾರಿ ಭಾವಗಳ ತುಮುಲದಲ್ಲಿ
ಕೇಳಿಸಲೆ ಇಲ್ಲ ಶುದ್ಧ ಭಾವನೆಯ ಮಧ್ಯಮ ಸ್ಥಾಯಿ ;
ಸುತ್ತಲೂ ಮನ ಸತ್ತು ಕೆಪ್ಪಾದ ಮೊರಮೊರ ಬಾಯಿ–
ದಿಗ್ಭ್ರಾಂತಿಯಲ್ಲಿ ಬಿಚ್ಚಿಟ್ಟ ಹಾಯಿ.


ನಿಮಗೆ ತಿಳಿದಿತ್ತು ಆಕಾಶಕ್ಕೆ ತೂರಿದರೆ ಹೊಟ್ಟು
ಫಸಲು ಬರುವುದಸಾಧ್ಯ ಎಂಬ ಸತ್ಯ ;
ರಾಜಾಜಿಯಂತೆ ನೀವೂ ಕೂಡ ಹೆಣಗುತ್ತ ಬಂದಿರಿ ಬಾಳಿನುದ್ದ ವಸ್ತುಸ್ಥಿತಿಗೆ ತತ್ವಸಾಂಗತ್ಯ
ಸಾಧಿಸಲು ; ಅಜ್ಞಾತಕ್ಕೆ ಕಟ್ಟು ಬಿದ್ದು
ಬದುಕಲೆಳೆಸಿದರೆ ಅದು ಭಾರೀ ದೊಡ್ಡ
ಕಲ್ಲ ಕತ್ತಿಗೆ ಕಟ್ಟಿಕೊಂಡು, ತುಂಬಿದ ಹೊಳೆಗೆ
ಧುಮ್ಮಿಕ್ಕಿದಂತೆ. ಈಸುವುದು, ಸಾಧ್ಯವಾದರೆ ಇದ್ದು
ಜಯಿಸುವುದು, ಮುಳುಗಿ ಸಾಯುವುದಲ್ಲ
ಗಮ್ಯ. ಹರ್ಮ್ಯದೊಳಗಲ್ಲ, ದೈನ್ಯಾವಮಾನಗಳ
ಕಲ್ಮುಳ್ಳುಗಳ ಬಸಿಯುವಿಕ್ಕಟ್ಟಿನಲ್ಲಿ
ಸ್ವಂತ ಕಾಲಿಂದಲೇ
ನಡೆದು ಹತ್ತಿದಿರಿ ಮುಟ್ಟಿದಿರಿ ಮಾನವತ್ವದ ಪರಾಕಾಷ್ಠೆ,
ಸಂಸ್ಕೃತಿ ವಿವೇಕಗಳ ನಿಯಮ ನಿಷ್ಠೆ.


ಸಂಘರ್ಷವಾದಿಯಾಗಿರಲಿಲ್ಲ ನೀವು.-
ಪುರಾತನ ಕೊಳಲ
ಸೀಳಿ ಸಿಗಿದ ಅದನೆರಡು ಕೋಲು ಮಾಡಿ
ಒಂದನಿನ್ನೊಂದಕ್ಕೆ ಕುಟ್ಟಿಕುಟ್ಟಿ ಪುಡಿಪುಡಿ-
ಮಾಡಿ ಅರೆದರೆದು
ಬರುವ ಸಮತ್ವದ ಶರಾಬು ಹೀರಿಹೀರಿ
ಅಪಲಪಿಸಿದವರಲ್ಲ. ಅಪಸ್ವರ ಕೊಡುವ
ಕಸರು ತುಂಬಿದ ಕೊಳಲ ಶ್ರುತಿಶುದ್ಧಮಾಡಿ
ಹಿಂದುತ್ವದೊಳಗಿರುವ ಸಿಂಧುತ್ವ ಬಂಧುತ್ವ-
ಸಮತ್ವಗಳ ರಾಗ
ಮಾಲಿಕೆಯನೆಬ್ಬಿಸಲು ದುಡಿದು ದಣಿದು
ಬೌದ್ಧಕ್ಕೆ ಸೋತದ್ದು ಸೋಜಿಗವಲ್ಲ ಬುದ್ಧಿಯೋಗಿಯೇ.
ಎಚ್ಚರಾಗುವುದು, ಎದೆ ಸೆಟೆದೆದ್ದು ನಿಲ್ಲುವುದು,
ಗುರಿಯ ಗುರುತಿಸಿ ತಕ್ಕ ದಿಕ್ಕು ಹಿಡಿದು
ತರ್ಕಶುದ್ಧಿಯ ಬೆಳಕಿನಲ್ಲಿ ಎದೆಬಡಿತದೊಳತಾಳಕ್ಕೆ
ಲಯಬದ್ಧ ನಡೆ ಸಮಷ್ಟಿಗಾನದೆಡೆಗೆ ;
ಹಾಗೆ ಇಲ್ಲಿದ್ದು ಮೇಲ್ಪಂಕ್ತಿ ಹಾಕಿದ್ದೀರಿ.
ನಿಮಗೆ ಜಯಜಯಕಾರ ಹಾಕಿ-
ಹಿಂಡು ಹಿಂಡು ನುಗ್ಗುತ್ತಿರುವ
ಬಂಧುಗಳೆ, ಹಾಗೆ ನಡೆಯಿರಿ ನೇರ ಶಿಖರದತ್ತ.
ಸಾಮರಸ್ಯದ ಮೇಳಗಾನದತ್ತ ;
ಇಲ್ಲವಾದರೆ ಎಲ್ಲ ವ್ಯರ್ಥ, ವ್ಯರ್ಥ.


ದೇಶವಿಭಜನ ಕಾಲದಲ್ಲಿ ಸಾರಿ, ಸಾರಿ ಎಚ್ಚರಿಸಿದಿರಿ ;
“ಜನರ ವಿನಿಮಯವೊಂದೆ ಸುರಕ್ಷಣೆಯ ದಾರಿ ;
ನೀರಿನಲ್ಲೆಂದಿಗೂ ಕಲ್ಲೆಣ್ಣೆ ಬೆರೆಯುವುದಿಲ್ಲ ;
ಚಿಗುರುತ್ತಲೇ ಇರುವ ಪುರಾತನವಟಕ್ಕೆ-
ಲಾಠಿ ಕಸಿಕಟ್ಟಲಾಗುವುದಿಲ್ಲ.”
ಕೇಳಿಸಲಿಲ್ಲ ಹಿತವಚನ ಅಧಿಕಾರಕ್ಕಾಗಿ-
ಹಸಿದು ಕಂಗಾಲಾಗಿದ್ದ
ಕುರ್ಚಿರೋಗದ ಕಿವುಡುಕಿವಿಯ ಪುಢಾರಿ-
ಜನಕ್ಕೆ ; ಕೆನ್ನೆತ್ತರಿನ
ಭೋರ್ಗರೆವ ಮಹಾಪ್ರವಾಹದಲ್ಲೆದ್ದು ಬಿದ್ದು-
ಒದ್ದಾಡಿ ಅಂತೂ ಇಂತು
ಹಿಡಿದುಬಿಟ್ಟರು ಕುರ್ಚಿ ; ಅವಿವೇಕಿಗಳ ಸಾಮ್ರಾಜ್ಯಕ್ಕೆ
ಸರ್ವಾಧಿಕಾರದೇಕತಾರಿಯ ಪಟ್ಟು ಗಿಟ್ಟಿತೋ ಗಿಟ್ಟಿತು.
ಕೋಟಿಕೋಟಿಗಳ ಅನಾಥ ರುದ್ರ ಛಿದ್ರ ಅಭದ್ರ-
ಅಸ್ತಿವಾರದ ಮೇಲೆ
ನಡೆಸಿದರು ದೀನದಲಿತೋದ್ಧಾರ ನಾಟಕದ-
ರಂಗ ತಾಲೀಮು,
ಹಂಚಿದರು ಎಲ್ಲ ಕಡೆ ಮಣಮಣ ಅಫೀಮು.
ಅನುಭವಿಸುತ್ತಿದ್ದೇವೆ ಆ ದುರಂತದ-
ಸುಟ್ಟು ಸುಗಿವ ಹಾಲಾಹಲವ,
ಕುಡಿದು ಬದುಕಿಸಬಲ್ಲ ವಿಷಕಂಠನನ್ನು ಕಾಯುತ್ತ,
ಮತ್ತೆ ಮತ್ತೆ ಆಸ್ಫೋಟಿಸುವ ಜಾತ್ಯಾಂಧ-
ಲಾವಾದಲ್ಲಿ ಸಿಕ್ಕಿ ಸೀಯುತ್ತ.


ತಮ್ಮ ಬದುಕನ್ನೆ ಕೆತ್ತಿ ಕೆತ್ತಿ ಕಡೆಕಡೆದು-
ಅನಾಥ ಅಮೂರ್ತ
ಮಾನವತ್ವಕ್ಕೆ ವಿಗ್ರಹವಾಗಿ ಮೇಲೆದ್ದಿದ್ದ ಆ
ತೀರ್ಥರೂಪಸಮಾನರೀಗಿಲ್ಲ. ನಿಮ್ಮಂಥ
ಮಹಾರ್ಹರಿಗಾಗಿ ದೇಶವೇ
ಕಾಯುತ್ತಲಿದೆ ಈಗ. ನಿಮ್ಮ ನಡೆ ನುಡಿ ವಿಚಾರ
ಗಾಂಭೀರ್ಯಗಳ ಉದಾಹರಣೆ-
ಇತಿಹಾಸ ಸಂಪುಟದಲ್ಲಿ
ಮಾಸತೊಡಗಿದೆ. ನಿಮ್ಮ ಹೆಸರಲ್ಲಿ ಕೊಳಲನ್ನೊಡೆದು
ಅಪಸ್ವರದ ತಾರಕಕ್ಕೇರಿ ಚೀರುತ್ತಲಿರುವವರು
ಸ್ವತಃ ವಿಗ್ರಹವಾಗಲಿಷ್ಟಪಡದಂಥವರು
ನಿಮ್ಮನ್ನೆ ಕಲ್ಲಾಗಿ ಮಾಡಿ ವಿಗ್ರಹ ಕೆತ್ತಿ ಗುಡಿಕಟ್ಟಿ
ಬುದ್ಧನನ್ನೆಂತೊ ಗಾಂಧಿಯನ್ನೆಂತೊ ಅಂತೆಯೇ
ಒಳಗಿಟ್ಟು ಮುಗಿಸುತ್ತಾರೆ, ಕತ್ತಲಲ್ಲಿ.

–#ಎಂ_ಗೋಪಾಲಕೃಷ್ಣ_ಅಡಿಗ