*ʼಆಟಿ ತುಳುನಾಡಿನ ಜೀವನ ಪದ್ಧತಿಯ ಸಂಕೇತʼ*
*ವಿವಿ ಕಾಲೇಜು: ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ ಅಭಿಮತ*
ಮಂಗಳೂರು: ತುಳುನಾಡು ಬಹುಸಾಧಕರ, ಮಹಾನುಭಾವರ, ನಿಸರ್ಗ ಸೌಂದರ್ಯ, ಸಾಂಸ್ಕೃತಿಕ ಗಾಂಭೀರ್ಯ, ಸಾಹಿತ್ಯದ ಮಾಧುರ್ಯ, ಸಂಯಮಶೀಲತೆ, ಸಹಬಾಳ್ವೆಗೆ ಹೆಸರಾಗಿದೆ, ಎಂದು ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ ಅಭಿಪ್ರಾಯಪಟ್ಟರು.
ಕರ್ನಾಟಕ ಜಾನಪದ ಪರಿಷತ್ತು ದ.ಕ.ಜಿಲ್ಲಾ ಘಟಕ, ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು ಇಲ್ಲಿನ ಕನ್ನಡ ಸಂಘ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳುಪೀಠ ಇವರ ಜಂಟಿ ಆಶ್ರಯದಲ್ಲಿ ನಗರದ ವಿವಿ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಗುರುವಾರ ನಡೆದ “ಆಟಿಡೊಂಜಿ ದಿನ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬದುಕು ಎಂದರೆ ಸಾಹಿತ್ಯ. ಸಾಹಿತ್ಯ- ಸಂಸ್ಕೃತಿಯ ಕರುಳಬಳ್ಳಿ ಜಾನಪದ ಸಾಹಿತ್ಯ ಎಂದರು.
ತಮ್ಮ ವಿಶೇಷ ಉಪನ್ಯಾಸದಲ್ಲಿ, ಉಪನ್ಯಾಸಕರ, ವಾಗ್ಮಿ ಡಾ. ಅರುಣ್ ಉಳ್ಳಾಲ್, ಕರಾವಳಿಯ ಸಾಮಾಜಿಕ- ಧಾರ್ಮಿಕ ಆಚರಣೆ, ಸಂಸ್ಕೃತಿಯಲ್ಲಿ ಆಟಿಯು ಒಂದು ಪ್ರಮುಖ ಭಾಗ. ಇದು ಬದುಕಿನ ಪದ್ಧತಿಯ ಸಂಕೇತವಾಗಿ, ಮಾನಸಿಕ ಸ್ಥೈರ್ಯ ತುಂಬುತ್ತದೆ, ಎಂದು ವಿವರಿಸಿದರು. ಅಧ್ಯಕ್ಷೀಯ ಸ್ಥಾನ ವಹಿಸಿದ್ದ, ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ, ಆಟಿಯ ಆಚರಣೆಯು ಎಲ್ಲರಲ್ಲಿ ಸಹಬಾಳ್ವೆಯನ್ನು, ಕರಾವಳಿಯ ಜನರ ಜೀವನ ಪದ್ಧತಿ ತಿಳಿಸುತ್ತದೆ, ಎಂದರು.
ಅತಿಥಿಗಳನ್ನು ಶ್ರೀ ಮೂಕಾಂಬಿಕಾ ಚೆಂಡೆ ಬಳಗದ ಚೆಂಡೆವಾದನದ ಮೆರವಣಿಗೆ ಮೂಲಕ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಪಡೆದ ಅರುಣ್ ಉಳ್ಳಾಲ್ ಅವರನ್ನು ಸನ್ಮಾನಿಸಲಾಯಿತು. ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಕೊಡಿಯಾಲ್ ಬೈಲ್ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಕ.ಜಾ.ಪ.ಕಾಸರಗೋಡು ಜಿಲ್ಲೆಯ ಅಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟೆ, ಮುಡಿಪು ಸಮಾಜ ಸೇವಕರು ಅಡ್ವಕೇಟ್ ಆಸ್ಗರ್ ಮೊದಲಾದವರು ಉಪಸ್ಥಿತರಿದ್ದರು.
ವಿವಿ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥ ಡಾ.ಮಾಧವ ಎಂ.ಕೆ. ಅತಿಥಿಗಳನ್ನು ಸ್ವಾಗತಿಸಿದರು. ವಿದ್ಯಾರ್ಥಿನಿ ವೀಕ್ಷಿತಾ ನಿರೂಪಿಸಿದರು. ಪ್ರತೀಕ್ಷಾ ಬಳಗ ಪ್ರಾರ್ಥಿಸಿ, ಪ್ರಥಮ ಬಿ. ಎ ವಿದ್ಯಾರ್ಥಿನಿ ಅಕ್ಷತಾ ಧನ್ಯವಾದ ಸಮರ್ಪಿಸಿದರು. ದ್ವಿತೀಯ ಪತ್ರಿಕೋದ್ಯಮ ವಿದ್ಯಾರ್ಥಿ ಲತೇಶ್ ಸಾಂತಾ ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟರು.
//