ವಕ್ಫ್ ಆಸ್ತಿ ಸಮುದಾಯದ ಸಬಲೀಕರಣಕ್ಕೆ ಉಪಯೋಗವಾಗಲಿ:ಬಿ.ಎಂ.ಫಾರೂಕ್
ಬೆoಗಳೂರು, ಆ.೫: ವಕ್ಫ್ ಆಸ್ತಿಗಳನ್ನು ಮುಸ್ಲಿಮ್ ಸಮುದಾಯದ ಶೈಕ್ಷಣಿಕ ಅಭಿವೃದ್ಧಿಗೆ ಉಪಯೋಗಿಸಲು ತೀರ್ಮಾನಿಸಿರುವ ವಕ್ಫ್ ಮಂಡಳಿಯ ಕ್ರಮವು ಸ್ವಾಗತಾರ್ಹ ಮತ್ತು ಅದು ಇನ್ನೂ ತ್ವರಿತಗತಿಯಲ್ಲಿ ನಡೆಯಲು ಸರಕಾರ ಮತ್ತು ವಕ್ಫ್ ಮಂಡಳಿಯ ನಡುವೆ ಉತ್ತಮ ಸಂಬoಧ ಬೆಳೆಯಬೇಕೆಂದು ವಿಧಾನ ಪರಿಷತ್ತಿನ ಸರಕಾರಿ ಭರವಸೆಗಳ ಸಮಿತಿ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಬಿ.ಎಂ.ಫಾರೂಕ್ ಹೇಳಿದರು.


ಶುಕ್ರವಾರ ಶಾಸಕರ ಭವನದಲ್ಲಿ ನಡೆದ ವಿಧಾನ ಪರಿಷತ್ತಿನ ಸರಕಾರಿ ಭರವಸೆಗಳ ಸಮಿತಿ ಸಭೆಯಲ್ಲಿ ವಕ್ಫ್, ಹಜ್ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ನೆನೆಗುದಿಗೆ ಬಿದ್ದಿರುವ ಹಲವು ವಿಷಯಗಳ ಬಗ್ಗೆ ಸಂಬoಧಪಟ್ಟ ಇಲಾಖಾ ಅಧಿಕಾರಿಗಳೊಂದಿಗೆ ಅವರು ಚರ್ಚೆ ನಡೆಸಿದರು.
ಪ್ರಮುಖವಾಗಿ ಒತ್ತುವರಿಯಾಗಿರುವ ವಕ್ಫ್ ಆಸ್ತಿಗಳು ಮರು ವಶಪಡಿಸಲು ಅಡ್ಡಿಯಾಗುತ್ತಿರುವ ನ್ಯಾಯಾಲಯದ ವ್ಯಾಜ್ಯಗಳ ಇತ್ಯರ್ಥ, ಸರಕಾರದಿಂದ ಕಬಳಿಕೆಯಾದ ಭೂಮಿಗಳ ಮರುಹಂಚಿಕೆ ಹಾಗೂ ಅನ್ವರ್ ಮಾಣಿಪ್ಪಾಡಿ ವರದಿಯ ನಂತರ ಮಂಡಳಿ ತೆಗೆದು ಕೊಂಡಿರುವ ಕ್ರಮಗಳ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು.


ವಕ್ಫ್ ಆಸ್ತಿಗಳ ಒತ್ತುವರಿ ಸಂಬoಧ ಅನ್ವರ್ ಮಾಣಿಪ್ಪಾಡಿ ಸಿದ್ಧಪಡಿಸಿರುವ ವರದಿಯಲ್ಲಿ ಉಲ್ಲೇಖಿಸಿರುವುದಷ್ಟೇ ಅಲ್ಲ, ರಾಜ್ಯದಲ್ಲಿ ನಡೆದಿರುವ ಎಲ್ಲ ಭೂ ಕಬಳಿಕೆಗಳ ಬಗ್ಗೆ ರಾಜ್ಯ ಸರಕಾರವೇ ತನ್ನ ವಿವೇಚನೆಯಂತೆ ಸಿಬಿಐ, ಎಸಿಬಿ ಸೇರಿದಂತೆ ಯಾವುದೆ ತನಿಖಾ ಸಂಸ್ಥೆಗಳ ಮೂಲಕ ತನಿಖೆ ನಡೆಸಲಿ ಅದಕ್ಕೆ ರಾಜ್ಯ ವಕ್ಫ್ ಮಂಡಳಿ ಸಂಪೂರ್ಣ ಸಹಕಾರ ನೀಡಲಿದೆ ಎಂದು ಮಂಡಳಿಯ ಅಧ್ಯಕ್ಷ ಮೌಲಾನ ಎನ್.ಕೆ.ಎಂ.ಶಾಫಿ ಸಅದಿ ಸಭೆಗೆ ಭರವಸೆ ನೀಡಿದರು ಎಂದು ತಿಳಿದು ಬಂದಿದೆ.
ಅಲ್ಲದೆ, ಈ ಸಂಬoಧ ರಾಜ್ಯ ವಕ್ಫ್ ಮಂಡಳಿಯ ಪ್ರತ್ಯೇಕ ಸಭೆ ನಡೆಸಿ ಅಲ್ಲಿ ನಡೆಯುವ ಚರ್ಚೆ ಕುರಿತು ಮಾಹಿತಿಯನ್ನು ಸಮಿತಿಗೆ ತಲುಪಿಸಲಾಗುವುದು ಎಂದು ಶಾಫಿ ಸಅದಿ ಹೇಳಿದರು. ಈ ಪ್ರಸ್ತಾವವನ್ನು ಸ್ವಾಗತಿಸಿದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಮಣಿವಣ್ಣನ್, ಈ ಸಂಬoಧ ತನಿಖೆ ನಡೆಸುವ ಕುರಿತು ಶೀಘ್ರವೆ ಕ್ರಮ ಕೈಗೊಳ್ಳುವುದಾಗಿ ಸಭೆಯಲ್ಲಿ ತಿಳಿಸಿದ್ದಾರೆ ಎಂದು ಹೇಳಲಾಗಿದೆ.
ಅನ್ವರ್ ಮಾಣಿಪ್ಪಾಡಿ ವರದಿಯಲ್ಲಿ ಪ್ರಸ್ತಾಪಿಸಿರುವಂತೆ ಬೀದರ್ ಜಿಲ್ಲೆಯಲ್ಲಿ ಕಾಂಪೌoಡ್ ವಾಲ್ ಇಲ್ಲದಿರುವ ಎಲ್ಲ ವಕ್ಫ್ ಆಸ್ತಿಗಳಿಗೆ ಅಗತ್ಯವಿರುವ ಅನುದಾನದ ಪ್ರಸ್ತಾವನೆಗಳನ್ನು ಒಂದು ತಿಂಗಳಲ್ಲಿ ಸರಕಾರಕ್ಕೆ ಕಳುಹಿಸುವಂತೆ ಮಣಿವಣ್ಣನ್ ತಿಳಿಸಿದ್ದಾರೆ. ಅದಕ್ಕೆ ವಕ್ಫ್ ಮಂಡಳಿ ಅಧ್ಯಕ್ಷ ಹಾಗೂ ಇಒ ಖಾನ್ ಪರ್ವೆಝ್ ಸಮ್ಮತಿ ಸೂಚಿಸಿದರು.
ಮಂಗಳೂರು ಹಜ್ ಭವನದ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆದಿದ್ದು, ಒಂದು ತಿಂಗಳಲ್ಲಿ ಹಜ್ ಭವನ ನಿರ್ಮಾಣಕ್ಕೆ ಸಂಬoಧಿಸಿದoತೆ ಇರುವಂತಹ ಕಾನೂನಾತ್ಮಕ ತೊಡಕುಗಳನ್ನು ನಿವಾರಿಸಿ ಆದಷ್ಟು ಬೇಗ ಕ್ರಮ ಕೈಗೊಳ್ಳುವಂತೆ ಹಜ್ ಸಮಿತಿ ಅಧ್ಯಕ್ಷ ರವೂಫುದ್ದೀನ್ ಕಚೇರಿವಾಲೆ ಹಾಗೂ ಇಒ ಸರ್ಫರಾಝ್ ಖಾನ್ ಅವರಿಗೆ ಸಮಿತಿ ಸೂಚನೆ ನೀಡಿತು.

ಸಭೆಯಲ್ಲಿ ವಿಧಾನಪರಿಷತ್ತಿನ ಸರಕಾರಿ ಭರವಸೆಗಳ ಸಮಿತಿಯ ಸದಸ್ಯರಾದ ಬಸವರಾಜ ಹೊರಟ್ಟಿ, ಆಯನೂರು ಮಂಜುನಾಥ್, ಕೆ.ಎ.ತಿಪ್ಪೇಸ್ವಾಮಿ, ಶಶಿಲ್ ನಮೋಶೀ, ಯು.ಬಿ.ವೆಂಕಟೇಶ್, ಎಸ್.ವಿ.ಸಂಕನೂರು, ಎಸ್.ರುದ್ರೇಗೌಡ, ಚನ್ನರಾಜ ಹಟ್ಟಿಹೋಳಿ, ರಾಜ್ಯ ಹಜ್ ಸಮಿತಿಯ ಅಧ್ಯಕ್ಷ ರವೂಫುದ್ದೀನ್ ಕಚೇರಿವಾಲ, ವಕ್ಫ್ ಮಂಡಳಿ ಕಾನೂನು ಇಲಾಖೆಯ ಅಧ್ಯಕ್ಷ ಅಡ್ವಕೆಟ್ ರಿಯಾಜ್ ಖಾನ್,ವಕ್ಫ್ ಮಂಡಳಿ ಮುಖ್ಯ ಕಾರ್ಯನಿರ್ವಣಾಧಿಕಾರಿ ಖಾನ್ ಫರ್ವೇಜ್,ಹಜ್ ಸಮಿತಿ ಇಒ ಸರ್ಫರಾಝ್ ಖಾನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.