*ಮೋದಿ ಸರ್ವಾಧಿಕಾರದ ಕತ್ತಿ- ಗುರಾಣಿಯಾಗಿದ್ದ ನ್ಯಾ. ಖನ್ವಿಲ್ಕರ್*

ಸುಪ್ರಿಂ ಕೋರ್ಟಿನ ಹಿರಿಯ ನ್ಯಾಯಾಧೀಶರುಗಳಲ್ಲ್ಲಿ ಒಬ್ಬರಾಗಿದ್ದ ನ್ಯಾ. ಖನ್ವಿಲ್ಕರ್ ಅವರು ಮೊನ್ನೆ ನಿವೃತ್ತರಾಗಿದ್ದಾರೆ. ದೇಶದ ಅತ್ಯುನ್ನತ ನ್ಯಾಯ ಪೀಠದಲ್ಲಿ ಕುಳಿತು ಅವರು ನೀಡಿದ ಹಲವು ಬಹುಮುಖ್ಯ ತೀರ್ಪುಗಳು ಭಾರತದ ಪ್ರಜಾತಂತ್ರದ ಬುಡಕ್ಕೆ ದೊಡ್ಡ ಪೆಟ್ಟುಕೊಟ್ಟಿದೆ.

ಭಾರತವು ಸರ್ವಾಧಿಕಾರಕ್ಕೆ ಆಡಳಿತಕ್ಕೆ ಒಳಗಾಗಿದ್ದ ೧೮ ತಿಂಗಳ ಎಮರ್ಜೆನ್ಸಿಯ ಕಾಲವನ್ನು ಬಿಟ್ಟರೆ ಭಾರತದ ಉನ್ನತ ನ್ಯಾಯಾಂಗವು ಪ್ರಭುತ್ವದ ದಾಳಿಯಿಂದ ದೇಶದ ಜನರ ನಾಗರಿಕ ಹಕ್ಕುಗಳನ್ನು ರಕ್ಷಿಸುವ ಬದಲು ಪ್ರಭುತ್ವದ ಅತಿರೇಕಗಳಿಗೆ ನ್ಯಾಯಿಕ ಸಮರ್ಥನೆ ನೀಡುತ್ತಾ ಸರ್ಕಾರದ ಸರ್ವಾಧಿಕಾರಕ್ಕೆ ಗುರಾಣಿಯಾಗಿಯೂ , ಜನರ ಹಕ್ಕುಗಳ ಮೇಲೆ ಬೀಸುವ ಕತ್ತಿಯಾಗಿ ಪರಿವರ್ತನೆಯಾದ ಅತಿ ದೊಡ್ಡ ಉದಾಹರಣೆ ನ್ಯಾ. ಖನ್ವಿಲ್ಕರ್ ಅವರೇ ಆಗಿದ್ದಾರೆ.

ಸಾಮಾನ್ಯವಾಗಿ ನ್ಯಾಯಾಲಯದ ಆವರಣಗಳಲ್ಲಿ ವಕೀಲರ ಪಿಸುಮಾತುಗಳಲ್ಲಿ ಪೀಠದಲ್ಲಿ ಕುಳಿತಿರುವರು ಪೊಲೀಸ್ ನ್ಯಾಯಾಧೀಶರೋ ಅಥವಾ ಲಿಬರಲ್ ನ್ಯಾಯಾಧೀಶರೋ ಎಂಬ ಚರ್ಚೆ ನಡೆಯುತ್ತಿರುತ್ತದೆ. ಆದರೆ ಖನ್ವಿಲ್ಕರ್ ಅಂಥಾ ಯಾವ ಗುಸುಗುಸುಗಳಿಗೂ ಅವಕಾಶಕೊಡದೆ ತಮ್ಮ ಅತಿರೇಕದ ತೀರ್ಪುಗಳ ಮೂಲಕ ತಾವೊಬ್ಬಸರ್ಕಾರೀ ಪರ ನ್ಯಾಯಾಧೀಶರು ಎಂಬುದನ್ನು ಘೋಷಿಸಿಬಿಟ್ಟಿದ್ದರು.

ಪ್ರಭುತ್ವವು ಸದಾ ಸರಿಯಾದದ್ದನ್ನೇ ಮಾಡುತ್ತದೆ ಮತ್ತು ಆಳುವ ಸರ್ಕಾರದ ಉದ್ದೇಶವನ್ನು ಮತ್ತು ಅದರ ಅತಿರೇಕಗಳನ್ನು ಪ್ರಶ್ನಿಸುವವರು ಸರ್ಕಾರದ ಮಾತ್ರವಲ್ಲ ದೇಶದ ಹಿತಾಸಕ್ತಿಗೆ ಮಾರಕ ಎಂಬ ಪೂರ್ವಗ್ರಹ ಅವರ ಎಲ್ಲಾ ತೀರ್ಪುಗಳಲ್ಲೂ ಎದ್ದು ಕಾಣಿಸುತ್ತದೆ. ಇದು ಈ ದೇಶದ ಸ್ವತಂತ್ರ ನ್ಯಾಯಾಂಗದ ಸಹಜ ನ್ಯಾಯಿಕ ಮಾನದಂಡಗಳನ್ನೇ ತಲೆಕೆಳಗಾಗಿ ನಿಲ್ಲಿಸಿದೆ. ಮತ್ತು ಉತ್ತರದಾಯಿತ್ವ ಇಲ್ಲದ ಸರ್ಕಾರದ ಸರ್ವಾಧಿಕಾರಕ್ಕೆ ನ್ಯಾಯಾಂಗದ ರಕ್ಷಾ ಕವಚವನ್ನು ತೊಡಿಸಿದೆ.

*ಇ.ಡಿ. ದಾಳಿಗಳ ಹಿಂದಿನ ಕರಾಳ ಉದ್ದೇಶಗಳನ್ನು ಬಿಳಿಯಾಗಿಸಿದ ಆದೇಶ*

ನ್ಯಾ. ಖನ್ವಿಲ್ಕರ್ ನಿವೃತ್ತರಾಗುವ ಮುನ್ನ ಕೊಟ್ಟ ಕೊನೆಯ ಆದೇಶವನ್ನೇ ನೋಡಿ. PMLA (ಕಪ್ಪುಹಣವನ್ನು ಬಿಳಿ ಮಾಡುವ ಅಪರಾಧ ನಿಗ್ರಹ ಕಾಯಿದೆ) ಕಾನೂನನ್ನು ಬಳಸಿಕೊಂಡು ಮೋದಿ ಸರ್ಕಾರ ವಿರೋಧ ಪಕ್ಷಗಳ ಮೇಲೆ, ಭಿನ್ನಮತೀಯರ ಮೇಲೆ ಎನ್‌ಫ಼ೋರ್ಸ್‌ಮೆಂಟ್ ಡೈರೆಕ್ಟೋರೇಟ್ (ಇ.ಡಿ) ಇಲಾಖೆ ಯ ಮೂಲಕ ದುರುದ್ದೇಶದ ದಾಳಿಗಳನ್ನು ಮಾಡಿಸುತ್ತಿರುವುದು ಈಗ ಎಳೆಯ ಮಕ್ಕಳೂ ಬಲ್ಲ ಸತ್ಯ.

ಸಾಮಾನ್ಯವಾಗಿ ಚುನಾವಣೆಯ ಮುಂಚಿನ ವರ್ಷಗಳಲ್ಲಿ ಪ್ರಾರಂಭವಾಗುವ ಈ ಇ.ಡಿ. ದಾಳಿಗಳಿಂದ ವಿರೋಧ ಪಕ್ಷಗಳ ಸದಸ್ಯರು ಬಚಾವಾಗಬೇಕೆಂದರೆ ಒಂದೋ ಬಿಜೆಪಿ. ಯನ್ನು ಸೇರಿಕೊಳ್ಳಬೇಕು ಅಥವಾ ತೆಪ್ಪಗಾಗಬೇಕು. ಇತೀಚಿನ ವರ್ಷಗಳಲ್ಲಿ ವಿರೋಧಪಕ್ಷಗಳ ಸರ್ಕಾರಗಳು ಉರುಳಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಎಲ್ಲಾ ಪ್ರಕರಣಗಳಲ್ಲಿ ಪ್ರತ್ಯಕ್ಷ ಅಥವಾ ಪರೋಕ್ಷ ಇ.ಡಿ ಪಾತ್ರವಿದೆ. ಬಿಜೆಪಿಯ ಸರ್ಕಾರದ ಮೇಲೆ ಟೀಕೆಯನ್ನು ಮುಂದುವರೆಸುವ ರಾಜಿರಹಿತ ವಿರೋಧಿಗಳನ್ನು ವಾರಂಟ್ ಇಲ್ಲದೆ ಬಂಧಿಸುವ, ಅವರ ಮೇಲೆ ಹೊರಿಸಲಾಗಿರುವ ಆರೋಪ ಪಟ್ಟಿಯನ್ನು ಒದಗಿಸದ, ಹಾಗೂ ಜಾಮೀನನ್ನು ನಿರಂತರ ನಿರಾಕರಿಸುವ ಮತ್ತು ತಾನು ನಿರಪರಾಧಿ ಎಂದು ಸಾಬೀತುಪಡಿಸುವ ಹೊಣೆ ಆರೋಪಿಯ ಮೇಲೆ ವರ್ಗಾಯಿಸುವ ಅತ್ಯಂತ ಪ್ರಜಾತಂತ್ರ ವಿರೋಧಿ ಅಂಶಗಳು ಈ PMLA ಕಾನೂನಿನಲ್ಲಿದೆ. ಹೀಗಾಗಿ ಇದು ಆಳುವ ಸರ್ಕಾರಕ್ಕೆ ವಿರೋಧಿಗಳ ಭವಿಷ್ಯವನ್ನೇ ಸರ್ವಾನಾಶ ಮಾಡುವ ಅಪಾರ ಸರ್ವಾಧಿಕಾರವನ್ನು ಕೊಡುತ್ತದೆ.

ಇದರ ವಿರುದ್ಧ ಹಲವಾರು ವಿರೋಧ ಪಕ್ಷಗಳು ಮತ್ತು ಸಮಾಜಿಕ ಸಂಘಟನೆಗಳು ಸುಪ್ರೀಕೋರ್ಟಿನ ಮೊರೆ ಹೊಕ್ಕಿದ್ದವು. ಅದು ನ್ಯಾ. ಖ್ಹನ್ವಿಲ್ಕರ್ ಪೀಠದ ಮುಂದೇ ಬಂದಿತ್ತು.

ತಾನು ನಿವೃತ್ತನಾಗುವ ಮುನ್ನ ಈ ಪ್ರಕರಣವನ್ನು ಇತ್ಯರ್ಥ ಪಡಿಸಿದ ನ್ಯಾಯಮೂರ್ತಿ ಖನ್ವಿಲ್ಕರ್ ಅವರು ಇ.ಡಿ. ಇಲಾಖೆಗೆ PMLA ಕಾನೂನು ನೀಡಿರುವ ಎಲ್ಲಾ ಸರ್ವಾಧಿಕಾರವನ್ನು ಮಾನ್ಯ ಮಾಡಿತು. ಅಷ್ಟು ಮಾತ್ರವಲ್ಲ. ಕನಿಷ್ಟ ಅದರ ದುರ್ಬಳಕೆ ಆಗದಂತೆ ತಡೆಗಳನ್ನು ರೂಪಿಸುವ ಅಗತ್ಯವನ್ನು ಖನ್ವಿಲ್ಕರ್ ಪೀಠ ನಿರಾಕರಿಸಿತು. ಮಾತ್ರವಲ್ಲ, PMLA ಕಾನೂನಿನ ಉಲ್ಲಂಘನೆ ದೇಶದ್ರೋಹಿ ಅಪರಾಧಕ್ಕೆ ಸಮ ಎಂದು ಘೋಷಿಸುತ್ತಾ ಆಳುವ ಸರ್ಕಾರ ನಡೆಸಬಹುದಾದ ಎಲ್ಲಾ ಅತಿರೇಕಗಳಿಗೂ, ಹಕ್ಕುಗಳ ಉಲ್ಲಂಘನೆಗೂ ದೇಶರಕ್ಷಣೆಯ ಕವಚವನ್ನು ಒದಗಿಸಿಬಿಟ್ಟಿತು.

ಇದಕ್ಕೆ ಸ್ವಲ್ಪ ಮುನ್ನ ಖನ್ವಿಲ್ಕರ್ ಅವರ ಪೀಠ ನೀಡಿದ ಇನ್ನೆರೆಡು ಆದೇಶಗಳು ಸರ್ವಾಧಿಕಾರಿಗಳಿಗೂ ಅತಿ ಎನ್ನಿಸುವಂತ್ತಿತ್ತು. ಇಡಿ ಪ್ರಜಾತಾಂತ್ರಿಕ ಜಗತ್ತನೇ ದಂಗುಬಡಿಸಿತು.

*ಪೊಲೀಸರನ್ನು ಪ್ರಶ್ನಿಸಿದವರೇ ಭಯೋತ್ಪಾದಕರು!*

ಅದರಲ್ಲಿ ಒಂದು ಗಾಂಧಿವಾದಿ ಮತ್ತು ಮಾನವಹಕ್ಕುಗಳ ಕಾರ್ಯಕರ್ತ ಹಿಮಂಶುಕುಮಾರ್ ಮತ್ತು ಚತಿಸ್‌ಘಡ್ ಪೊಲೀಸರಿಗೆ ಸಂಭಂಧಪಟ್ಟಿದ್ದು.

೨೦೦೯ರಲ್ಲಿ ಚತ್ತಿಸ್‌ಘಡ್ ನ ಬಿಜೆಪಿ ಸರ್ಕಾರದ ಪೊಲೀಸರು ೧೭ ಅಮಾಯಕ ಆದಿವಾಸಿಗಳನ್ನು ಕೊಂದುಹಾಕಿದ್ದರು. ಆ ನಂತರ ಆ ಕೊಲೆಗಳನ್ನು ನಕ್ಸಲರೇ ಮಾಡಿದ್ದೆಂದು ಪ್ರಕರಣ ಮುಚ್ಚಿಹಾಕಲು ಹೊರಟಿದ್ದರು. ಆದರೆ ಹಿಮಾಂಶುಕುಮರ್ ಅವರು ಇದು ಪೊಲೀಸರು ಮಾಡಿದ ನರಹತ್ಯೆಂದು ಸಂಬಂಧಪಟ್ಟ ಪೊಲೀಸರ ಮೇಲೆ ಕಾನೂನುರೀತ್ಯ ಕ್ರಮಜರುಗಿಸಬೇಕೆಂದು ನ್ಯಾಯಾಲಯದ ಮೊರೆ ಹೋಗಿದ್ದರು.
ಇದು ಅಂತಿಮವಾಗಿ ಸುಪ್ರೀಂ ಕೋರ್ಟಿನಲ್ಲಿ ನ್ಯಾ. ಖನ್ವಿಲ್ಕರ್ ಅವರ ಪೀಠದ ಮುಂದೆ ಬಂತು.

ಸಕಲ ಸಂಪನ್ಮೂಲ ಮತ್ತು ಬಲಗಳನ್ನು ಹೊಂದಿರುವ ಪೊಲೀಸರ ಮೇಲಿನ ಆರೋಪವನ್ನು ಯಾವುದೇ ಪ್ರಭುತ್ವ ಸಂಪನ್ಮೂಲಗಳಿಲ್ಲದ ಸಾಮಾನ್ಯ ನಾಗರಿಕ ಸಾಬೀತು ಮಾಡುವುದು ಕಷ್ಟ. ಒಂದು ನಿಷ್ಪಕ್ಷಪಾತಿ ನ್ಯಾಯಾಲಯ ಸರ್ಕಾರ ಅಥವಾ ಪೊಲೀಸರ ಮೇಲೆ ಇಂಥಾ ಆರೋಪ ಬಂದಾಗ ಒಂದು ಸ್ವತಂತ್ರ ತನಿಖೆಗಾದರೂ ಆದೇಶಿಸಬೇಕು. ಮತ್ತು ನ್ಯಾಯಾಲಯ ಪೊಲೀಸರೂ ಅಪರಾಧ ಎಸಗಿರಬಹುದಾದ ಸಂಭಾವ್ಯತೆಯನ್ನು ಪರಿಗಣಿಸಬೇಕು.

ಆದರೆ ನ್ಯಾ. ಖನ್ವಿಲ್ಕರ್ ಪೀಠ ಅದೇನನ್ನೂ ಮಾಡದೆ ಪೊಲೀಸರನ್ನು ಅನುಮಾನಿಸಿದ ಹಿಮಾಂಶುಕುಮಾರ್ ಅವರನ್ನು ಪ್ರಾರಂಭದಿಂದಲೂ ಪೂರ್ವಗ್ರಹ ಧೋರಣೆಯಿಂದ ನೋಡಲಾರಂಭಿಸಿತು. ಹಾಗು ಅಂತಿಮವಾಗಿ ಯಾವುದೇ ಸ್ವತಂತ್ರ ತನಿಖೆ ಇಲ್ಲದಿದ್ದರೂ, ಕೇವಲ ಪೊಲೀಸರು ಒದಗಿಸಿದ ಸಾಕ್ಷ್ಯವನ್ನು ಮಾತ್ರ ಪರಿಗಣಿಸಿ ಪೊಲಿಸರನ್ನು ದೋಷಮುಕ್ತಗೊಳಿಸಿತು.

ಅಷ್ಟು ಮಾತ್ರವಲ್ಲ. ಪೊಲೀಸರ ಮೇಲೆ ಆರೋಪಹೊರಿಸಿದ ತಪ್ಪಿಗೆ ಹಿಮಾಂಶುಕುಮಾರ್ ಅವರ ಮೇಲೆ ೫ ಲಕ್ಷ ಜುಲ್ಮಾನೆ ವಿಧಿಸಿತು. ಜೊತೆಗೆ ಪೊಲೀಸರಿಗೆ ಕಳಂಕ ತಂದು ನಕ್ಸಲರಿಗೆ ಅನುಕೂಲ ಮಾಡಿಕೊಟ್ಟ ಆರೋಪದ ಮೇಲೆ ಚತ್ತಿಸ್‌ಘಡ್ ಸರ್ಕಾರ ಹಿಮಾಂಶುಕುಮಾರ್ ಅವರ ಮೇಲೆ ಭಯೋತ್ಪಾದಕ ನಿಗ್ರಹ ಕಾಯಿದೆಗಳ ಪ್ರಕಾರ ಕ್ರಮ ಜರುಗಿಸಬಹುದೆಂದು ಅನುಮತಿಯನ್ನೂ ನೀಡಿತು!

*ನ್ಯಾಯಕ್ಕಾಗಿ ನಿರಂತರ ಹೋರಾಡುವುದು ದೇಶದ್ರೋಹವೆಂದ ನ್ಯಾಯಾದೇಶ!*

ಅದೇರೀತಿ ಎರಡು ತಿಂಗಳ ಕೆಳಗೆ ನ್ಯಾ. ಖನ್ವಿಲ್ಕರ್ ಅವರ ಪೀಠ ಮತ್ತೊಂದು ಆದೇಶವನ್ನು ನೀಡಿತು.
೨೦೦೨ರ ಗುಜರಾತ್ ಹತ್ಯಕಾಂಡದಲ್ಲಿ ಆಗ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಮೋದಿ ಮತ್ತು ಇತರ ೬೨ ಅಧಿಕಾರಸ್ಥರು ಆ ಹತ್ಯಾಕಾಂಡದಲ್ಲಿ ವಹಿಸಿದ್ದ ಪಾತ್ರಕ್ಕೆ ಶಿಕ್ಷೆಯಾಗಬೇಕೆಂದು ಆ ಹತ್ಯಾಕಾಂಡದಲ್ಲಿ ಪ್ರಾಣತೆತ್ತ ಮಾಜಿ ಸಂಸದ ಎಹ್ಸಾನ್ ಜಾಫ಼್ರಿಯವರ ಪತ್ನಿ ಜಾಕಿಯಾ ಜಾಫ಼್ರಿಯವರ ನಡೆಸಿದ ಸುದೀರ್ಘ ಹೋರಾಟಕ್ಕೆ ನೆರವು ನೀಡಿದ್ದಕ್ಕಾಗಿ ಮಾನವ ಹಕ್ಕು ಹೋರಟಗಾರ್ತಿ ತೀಸ್ತಾ ಸೆಟೆಲ್‌ವಾದ್ ಮತ್ತು ಮಾಜಿ ಡಿಜಿಪಿ ಶ್ರೀಕುಮಾರ್ ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕೆಂದು ಖನ್ವಿಲ್ಕರ್ ಪೀಠ ಪರೋಕ್ಷ ಆದೇಶ ನೀಡಿತ್ತು. ಹಾಗೂ ಮೋದಿ ಮತ್ತು ಆ ೬೨ ಜನ ಆರೋಪಿಗಳನ್ನು ಸಂಪೂರ್ಣವಾಗಿ ದೋಷಮುಕ್ತಗೊಳಿಸಿತು.

ಈ ಆದೇಶವನ್ನೇ ಎಫ಼್‌ಐಆರ್ ಆಗಿ ಪರಿಗಣಿಸಿದ ಗುಜರಾತಿನ ಪೊಲೀಸರು ಕೂಡಲೇ ತೀಸ್ತ ಮತ್ತು ಶ್ರಿಕುಮಾರ್ ಅವರನ್ನು ಬಂಧಿಸಿ ಜಾಮೀನು ಕೊಡದೆ ಗುಜರಾತ್ ಜೈಲಿನಲ್ಲಿ ಕೊಳೆಯಿಸುತ್ತಿದ್ದಾರೆ.
ಹೀಗೆ ನ್ಯಾ. ಖನ್ವಿಲ್ಕರ್ ಪೀಠ ಹಿಮಾಂಶುಕುಮಾರ್ ಹಾಗೂ ತೀಸ್ತಾ ಪ್ರಕರಣದಲ್ಲಿ ಅಧಿಕಾರಸ್ಥರನ್ನು ಪ್ರಶ್ನಿಸಿದ ಏಕೈಕ ಅಪರಾಧಕ್ಕಾಗಿ ಅಹವಾಲುದಾರರನ್ನು ಮತ್ತು ಅಹವಾಲುದಾರರಿಗೆ ಬೆಂಬಲ ನೀಡಿದವರನ್ನು ಅಪರಾಧಿಗಳನ್ನಾಗಿಸಿಬಿಟ್ಟಿತು.

ಸರ್ಕಾರ ಹಾಗೂ ಪೊಲೀಸರ ಮೇಲಿನ ಆರೋಪ ಸಾಬೀತು ಮಾಡಲಾಗದ್ದನ್ನು ದೇಶದ್ರೋಹಕ್ಕೆ ಸಮವಾದ ಅಪರಾಧವೆಂದು ಪರಿಗಣಿಸಿದ್ದು ಹಿಟ್ಲರ್‌ನ ನ್ಯಾಯಾಲಯ ಮಾತ್ರ.

ಭಾರತದ ನ್ಯಾಯಾಂಗ ಇತಿಹಾಸದಲ್ಲೇ ಹೀಗೆ ದೂರು ಸಾಬೀತು ಮಾಡದ ಏಕೈಕ ಕಾರಣಕ್ಕೆ ಅಹವಾಲುದಾರರನ್ನೇ ಅಪರಾಧಿಗಳನ್ನಾಗಿ ಪರಿಗಣಿಸಿದ ಇತಿಹಾಸವಿಲ್ಲ.

ಹಾಗೆ ನೋಡಿದರೆ ದೇಶದ್ರೋಹ ಹಾಗೂ ಭಯೋತ್ಪಾದನೆ ನಿಗ್ರಹ ಕಾಯಿದೆಗಳಡಿಯಲ್ಲಿ ಪೊಲೀಸರು ದಾಖಲಿಸಿರುವ ಶೇ. ೯೦ ಪ್ರಕರಣಗಳಲ್ಲಿ ಪೊಲೀಸರು ಆರೋಪಿಗಳ ಮೇಲೆ ಅಪರಾಧವನ್ನು ಸಾಬೀತುಗೊಳಿಸಲು ಸಾಧ್ಯವಾಗಿಲ್ಲ. ಆದರೂ ವಿನಾಕಾರಣ ಆ ಅಮಾಯಕರು ಐದು-ಹತ್ತು ವರ್ಷಗಳ ಕಾಲ ಸೆರೆ ವಾಸ ಅನುಭವಿಸುತ್ತಿದ್ದಾರೆ.

ಆರೋಪ ಸಾಬೀತುಪಡಿಸಲಾಗದ್ದೇ ಅಪರಾಧವಾಗುವುದಾದರೆ ಪೊಲೀಸರು ಕೂಡ ಇಂಥಾ ಪ್ರಕರಣಗಳಲ್ಲಿ ಅಪರಾಧಿಗಳಾಗಬೇಕಲ್ಲವೇ? ಆದರೆ ಭಾರತದ ಸಿ.ಆರ್‌ಪಿ.ಸಿ ಕಾನೂನುಗಳು ಪೊಲೀಸರು ಮಾಡುವ ತಪ್ಪುಗಳನ್ನು, ಕೊಲೆಗಳನ್ನು ಕೂಡ ಜನತೆಯ ಹಿತದೃಷ್ಟಿಯಿಂದ ಮಾಡಿದ ಕೃತ್ಯಗಳೆಂದು ಪರಿಗಣಿಸುತ್ತದೆ. ಹೀಗಾಗಿ ಪೊಲೀಸರು ಮಾಡಿದ ಆರೋಪ ಸಾಬೀತಾಗದಿದ್ದರೂ ಅವರು ದೋಷಿಗಳಲ್ಲ.

ಆದರೆ, ನ್ಯಾ. ಖನ್ವಿಲ್ಕರ್ ಪೀಠದ ವಿಷೇಷ ಏನೆಂದರೆ ಕಾನೂನುಗಳೇ ಪೊಲೀಸರ ಪರವಾಗಿಯೇ ಇದ್ದರೂ ನ್ಯಾ. ಖನ್ವಿಲ್ಕರ್ ಅವರಂತೆ ಈವರೆಗೆ ದೇಶದ ಯಾವ ನ್ಯಾಯಪೀಠಗಳು ಪೊಲಿಸರ ಮೇಲಿನ ಆರೋಪವನ್ನು ಸಾಬೀತು ಮಾಡಲಾಗದ ದೂರುದಾರರನ್ನು ಅಪರಾಧಿಗಳೆಂದೂ, ದೇಶದ್ರೋಹಿಗಳೆಂದೂ ಶಿಕ್ಷಿಸಿರಲಿಲ್ಲ.

ಹೀಗಾಗಿ ಈ ಆದೇಶವು ಬರಲಿರುವ ದಿನಗಳಲ್ಲಿ ಯಾವ ನಾಗರಿಕರು ಸರ್ಕಾರದ ಮತ್ತು ಪೊಲೀಸರ ಅನ್ಯಾಯ-ಅಕ್ರಮಗಳ ವಿರುದ್ಧ ಸೊಲ್ಲೆತ್ತದಂತೆ ಮೇಲ್ಪಂಕಿ ಹಾಕಿಕೊಟ್ಟಿದೆ. ಹಾಗೂ ಇದರಿಂದಾಗಿ ಆಳುವ ಸರ್ಕಾರಗಳಿಗೆ ಉತ್ತರದಾಯಿತ್ವದ ಹೊಣೆಗಾರಿಕೆಯೇ ಇಲ್ಲವಾಗುವುದರಿಂದ ಸರ್ಕಾರದ ಸರ್ವಾಧಿಕಾರಕ್ಕೆ ಖನ್ವಿಲ್ಕರ್ ಆದೇಶ ಗುರಾಣಿಯನ್ನು ಒದಗಿಸಿದೆ.

*ಜಾಮೀನನ್ನಲ್ಲದೆ ಜೈಲನ್ನು ಕಾನೂನು ಮಾಡಿದ ನ್ಯಾ. ಖನ್ವಿಲ್ಕರ್ ಆದೇಶ*

ಇದಲ್ಲದೆ ನ್ಯಾ. ಖನ್ವಿಲ್ಕರ್ ಅವರು ಜಗತ್ತಿನ ಯಾವ ನಾಗರಿಕ ದೇಶಗಳಲ್ಲೂ ಇಲ್ಲದಂಥ ಒಂದು ಹೊಸ ದಮನಕಾರಿ ಅಸ್ತ್ರವನ್ನು ಸರ್ಕಾರಕ್ಕೆ ಅಧಿಕೃತವಾಗಿ ಒದಗಿಸಿಕೊಟ್ಟಿದ್ದಾರೆ. ೨೦೧೯ರಲ್ಲಿ ಅವರು ಕೊಟ್ಟ ಆದೇಶದ ಪ್ರಕಾರ UAPA (ಕಾನೂನುಬಾಹಿರ ಚಟುವಟಿಗೆಗಳ ನಿಗ್ರಹ ಕಾಯಿದೆ)ಯಡಿ ಬಂಧಿತರಾದ ಆರೋಪಿಗಳಿಗೆ ಜಾಮೀನೇ ಸಿಗದಂತೆ ಮಾಡಲಾಗಿದೆ.

ಹಾಗೆ ನೋಡಿದರೆ UAPA ಯಂಥಾ ಕಾನೂನೇ ಅಧಿಕಾರದ ದುರ್ಬಳಕೆ. ಏಕೆಂದರೆ ಈ ಕಾನೂನಿನಡಿ ಸರ್ಕಾರವು ತನ್ನನ್ನು ವಿರೋಧಿಸುವ ಯಾರನ್ನು ಬೇಕಾದರೂ ಭಯೋತ್ಪಾದಕನೆಂದು ಆರೋಪ ಹೊರಿಸಿ ಜೈಲಿಗೆ ದೂಡಬಹುದು. ಹಾಗೂ ವಿಚಾರಣೆಯಾಗುವ ತನಕ ಜಾಮೀನು ಕೊಡದೆ ಕೊಳೆಯಿಸಬಹುದು. ಉದಾರಹಣೆಗೆ ೨೦೧೬-೨೦೨೦ರ ನಡುವೆ ಮೋದಿ ಸರ್ಕಾರ ೨೦,೦೦೦ ಕ್ಕೂ ಹೆಚ್ಚು ಅಮಾಯಕರನ್ನು ಈ ಕಾಯಿದೆಯಡಿ ಬಂಧಿಸಿದೆ. ಅವರಲ್ಲಿ ಬಹುಪಾಲು ಜನರು ಸರ್ಕಾರದ ಯೋಜನೆಗಳ ವಿರುದ್ಧ ತಮ್ಮ ಭೂಮಿಯನ್ನು ಉಳಿಸಿಕೊಳ್ಳಲು ಹೋರಾಡುತ್ತಿರುವ ಆದಿವಾಸಿಗಳು, ದಲಿತರು ಅಥವಾ ಅಮಾಯಕ ಮುಸ್ಲಿಮರು.

ಇದಕ್ಕೆ ಇತ್ತೀಚಿನ ಉದಾಹರಣೆ ೨೦೧೭ರಲ್ಲಿ ಪೊಲೀಸ್ ಕ್ಯಾಂಪ್ ಮೇಲೆ ದಾಳಿ ಮಾಡಿದ ನಕ್ಸಲರೆಂಬ ಆರೋಪಿಗಳೆಂದು ಬಂಧಿಸಲ್ಪಟ್ಟ ೧೨೧ ಆದಿವಾಸಿಗಳನ್ನು ಮೊನ್ನೆ ನ್ಯಾಯಾಲಯ ನಿರ್ದೋಷಿಗಳೆಂದು ಬಿಡುಗಡೆ ಮಾಡಿರುವುದು. ಆದರೆ ೨೦೧೭ ರಿಂದ ೨೦೨೨ರಲ್ಲಿ ವಿಚಾರಣೆ ಮುಗಿಯುವವರೆಗೆ ಅವರಿಗೆ ಜಾಮೀನು ಕೂಡ ಸಿಗದಂತೆ ಮಾಡಿದ್ದು ನ್ಯಾ, ಖನ್ವಿಲ್ಕರ್ ಅವರು ನೀಡಿದ ಮೇಲ್ಪಂಕ್ತಿ ಆದೇಶ.

ಇತರ ಕಾನೂನುಗಳಲ್ಲಿ ನ್ಯಾಯಾಲಯವು ಜಾಮೀನು ನೀಡುವಾಗ ಆರೋಪಿಯ ಮೇಲೆ ಮೇಲ್ನೋಟಕ್ಕೆ ಅಪಾರಾಧ ಸಾಬೀತಾಗುವಂತಿದೆಯೇ ಎಂದೇನೂ ಪರಿಗಣಿಸುವುದಿಲ್ಲ. ಬದಲಿಗೆ ಆರೋಪಿಯು ಹವ್ಯಾಸಿ ಅಪರಾಧಿಯೇ, ಸಾಕ್ಷ್ಯ ಪುರಾವೆಗಳನ್ನು ನಾಶಮಾಡಬಲ್ಲರೇ ಎಂಬುದನ್ನು ಮಾತ್ರ ಪರಿಗಣಿಸುತ್ತದೆ.

ಆದರೆ UAPA ಯ ಸೆಕ್ಷನ್ ೪೩ (೫) ಡಿ ಯ ಪ್ರಕಾರ ನ್ಯಾಯಾಲಯವು ಚಾರ್ಜ್ ಶೀಟ್ ಸಲ್ಲಿಕೆಯಾದ ನಂತರ ಅಥವಾ ಅದಕ್ಕೆ ಪೂರ್ವದಲ್ಲಿ ಜಾಮೀನು ಅರ್ಜಿಯನ್ನು ನಿರ್ವಹಿಸುವಾಗ ಸಾಕ್ಷಿ ನಾಶದ ಸಂಭಾವ್ಯತೆಯನ್ನು ಮಾತ್ರವಲ್ಲದೆ ಮೇಲ್ನೋಟಕ್ಕೆ ಆರೋಪಿಯ ಮೇಲೆ ಕೇಸಿದೆಯೇ ಎಂದು ಪರಿಶೀಲಿಸಬೇಕು.

ಆದರೆ ೨೦೧೯ರಲ್ಲಿ ವತಾಲಿ ವರ್ಸಸ್ ಎನ್‌ಐಎ ಪ್ರಕರಣದಲ್ಲಿ ನ್ಯಾ. ಖನ್ವಿಲ್ಕರ್ ಪೀಠ ಆರೋಪಿಯ ಮೇಲೆ ಮೇಲ್ನೋಟಕ್ಕೆ ಕೇಸಿದೆಯೇ ಇಲ್ಲವೇ ಎಂದು ಪರಿಗಣಿಸುವಾಗ ನ್ಯಾಯಾಲಯವು ಪೊಲೀಸರು ಸಲ್ಲಿಸುವ ಕೇಸ್ ಡೈರಿ ಮತ್ತು ಪೂರಕ ಪೊಲೀಸ್ ವಾದಗಳನ್ನು ಮಾತ್ರ ಪರಿಗಣಿಸಬೇಕು ಎಂದು ಆದೇಶಿಸಿದೆ.

ಅಂದರೆ ಪೊಲಿಸರು ಹೇಳಿದ್ದನ್ನು ನ್ಯಾಯಾಲಯವು ಯಥಾವತ್ ಒಪ್ಪಿಕೊಂಡು ಆರೋಪಿಗೆ ವಿಚಾರಣೆ ಮುಗಿಯುವವರೆಗೆ ಜಾಮೀನು ನಿರಾಕರಿಸಬೇಕು ಎಂಬುದು ಅದರ ಅರ್ಥ.

ಈ ವಿಚಾರಣೆಗಳು ಹತ್ತಾರು ವರ್ಷ ಎಳೆದಾಡುತ್ತವೆ. ಅಂತಿಮ ಶಿಕ್ಷೆಗಿಂತ ಸುದೀರ್ಘ ವಿಚಾರಣೆಯ ಪ್ರಕ್ರಿಯೆಯೇ ನಿರಪರಾಧಿಗಳಿಗೆ ಶಿಕ್ಷೆ ನೀಡಿರುತ್ತದೆ. ಅಂತಿಮವಾಗಿ ಶೇ.೯೮ರಷ್ಟು ಜನ ನಿರಪರಾಧಿ ಎಂದು ಬಿಡುಗಡೆಯಾಗುತ್ತಾರೆ. ಆದರೆ ಅಷ್ಟು ವರ್ಷಗಳ ಕಾಲ ಆ ನಿರಪರಾಧಿಗಳು ವಿನಾಕಾರಣ ಜೈಲು ಶಿಕ್ಷೆ ಅನುಭವಿಸುವುದು, ಸಾಂವಿಧಾನ ಕೊಟ್ಟಿರುವ ಎಲ್ಲಾ ನಾಗರಿಕ ಹಕ್ಕುಗಳಿಂದ ವಂಚಿತರಾಗುತ್ತಿರುವುದು ಮಾತ್ರ ನ್ಯಾ. ಖನ್ವಿಲ್ಕರ್ ವತಾಲಿ ಪ್ರಕರಣದಲ್ಲಿ ಕೊಟ್ಟಿರುವ ಆದೇಶದಿಂದಾಗಿ!

*ನ್ಯಾ. ಖನ್ವಿಲ್ಕರ್ ಅವರ ಆದೇಶದಿಂದ ಕತ್ತಲಲ್ಲಿರುವ ಭಾರತದ ಸೂರ್ಯೋದಯ*

ನ್ಯಾ. ಖನ್ವಿಲ್ಕರ್ ಅವರ ಈ ೨೦೧೯ರ ಆದೇಶದಿಂದಾಗಿಯೆ.. ಸರ್ಕಾರವೇ ರೂಪಿಸಿದ ಸಂಚಾದ ಭೀಮಾ-ಕೊರೆಗಾಂವ್ ಪ್ರಕರಣದಲ್ಲಿ ಬಂಧಿತರಾಗಿರುವ ಮಹಾರಾಷ್ಟ್ರದ ದಲಿತ್ ರಿಪಬ್ಲಿಕ್ ಸಂಘಟನೆಯ ಸುಧೀರ್ ಧವಾಲೆ, ಮಾನವ ಹಕ್ಕು ಹೋರಾಟಗಾರರಾದ ರೋನಾ ವಿಲ್ಸನ್ ಹಾಗೂ ಮಹೇಂದ್ರ ರಾವತ್, ವಕೀಲ ಸುರೇಂದ್ರ ಗಾಡ್ಲಿಂಗ್, ದಮನಿತ ಸ್ತ್ರೀವಾದಿ ಅಧ್ಯಾಪಕಿ ಶೋಮಾ ಸೇನ್, ಮಾನವ ಹಕ್ಕು ಹೋರಾಟಗಾರರಾದ ಅರುಣ್ ಫೆರೇರ, ವರ್ನೆನ್ ಗೋನ್ಸಾಲ್ವೆಜ್, ಅಂತರರಾಷ್ಟ್ರೀಯ ಖ್ಯಾತಿಯ ಚಿಂತಕ, ಲೇಖಕ ಆನಂದ್ ತೇಲ್ತುಂಬ್ಡೆ, EPW ಪತ್ರಿಕೆಯ ಗೌರವ ಸಂಪಾದಕ ಹಾಗೂ ಮಾನವ ಹಕ್ಕುಗಳ ಹೋರಾಟಗಾರ ಗೌತಮ್ ನವಲಾಖ, ಈ ದೇಶ ಕಂಡ ಅಪರೂಪದ ಕ್ರಾಂತಿಕಾರಿ ಕವಿ ವರವರರಾವ್, ದೆಹಲಿ ವಿಶ್ವವಿದ್ಯಾಲಯದ ಬಹುಜನ ವಿದ್ವಾಂಸ, ಅಧ್ಯಾಪಕ ಹನಿ ಬಾಬು, ಕಬೀರ್ ಕಲಾ ಮಂಚ್ ನ ಸಾಂಸ್ಕೃತಿಕ ಕಾರ್ಯಕರ್ತರಾದ ಸಾಗರ್, ಜ್ಯೋತಿ ಮತ್ತು ರಮೇಶ್, ಮಾನವ ಹಕ್ಕು ಹೋರಾಟಗಾರ ಹಾಗೂ ಶೇ. ೯೦ರಷ್ಟು ಅಪಾಂಗಕ್ಕೆ ತುತ್ತಾಗಿರುವ ದೆಹಲಿ ವಿಶ್ವವಿದ್ಯಾಲದ ಇಂಗ್ಲಿಶ್ ಪ್ರೊಫ಼ೆಸರ್ ಜಿ.ಎನ್.ಸಾಯಿಬಾಬಾ, ದೆಹಲಿ ಗಲಭೆಯ ಹಿನ್ನೆಲೆಯಲ್ಲಿ ಸುಳ್ಳು ಕೇಸುಗಳಡಿ ಬಂಧಿತಾರಾಗಿರುವ ವಿದ್ಯಾರ್ಥಿ ನಾಯಕರುಗಳಾದ ಒಮರ್ ಖಲೀದ್, ಗುಲ್ಫಿಶಾ, ದೆವಾಂಗನಿ, ಶರ್ಜಿಲ್ ಇಮಾಮ್ ಹಾಗೂ CAA ವಿರೋಧಿ, ಕಾರ್ಪೊರೇಟ್ ಪರ ಪರಿಸರ ನೀತಿಯ ವಿರೋಧಿ ಹೋರಾಟಗಾರರು, ಆರ್ಟಿಐ ಹೋರಾಟಗಾರರು ಹಾಗೂ ಪತ್ರಕರ್ತರೂ..

ಒಟ್ಟಿನಲ್ಲಿ ಈ ದೇಶದ ಪ್ರಜಾತಂತ್ರವೇ ನ್ಯಾ. ಖನ್ವಿಲ್ಕರ್ ಆದೇಶದಿಂದಾಗಿ ಜೈಲಿನಲ್ಲಿ ಕೊಳೆಯುವಂತಾಗಿದೆ.

*ಶಬರಿಮಲ ಪ್ರಕರಣ- ನ್ಯಾಯತರ್ಕಕ್ಕೆ ಮೀರಿದ ನ್ಯಾ. ಖನ್ವಿಲ್ಕರ್ ನಡೆ*

ಖಾನ್ವಿಲ್ಕರ್ ಅವರು ಶಬರಿಮಲ ಆದೇಶ ಮರುಪರಿಶೀಲನಾ ಪ್ರಕರಣದಲ್ಲಿ ತೆಗೆದುಕೊಂಡ ನಿಲುವೂ ಸಹ ಸಾಕಷ್ಟು ಪ್ರಶ್ನೆಗೊಳಗಾಗಿದೆ.

ಶಬರಿಮಲ ಪ್ರಕರಣವನ್ನು ೨೦೧೬ರಲ್ಲಿ ಸುಪ್ರೀಕೋರ್ಟಿನಲ್ಲಿ ಆಗಿನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾ. ಚಂದ್ರಚೂಡ್. ನ್ಯಾ. ನಾರಿಮನ್, ನ್ಯಾ. ಖನ್ವಿಲ್ಕರ್ ಮತ್ತು ನ್ಯಾ. ಇಂದು ಮಲ್ಹೋತ್ರ ಅವರಿದ್ದ ಐದು ನ್ಯಾಯಧೀಶರ ಸಾಂವಿಧಾನಿಕ ಪೀಠ ವಿಚಾರಣೆ ನಡೆಸಿತು. ಅವರಲ್ಲಿ ನ್ಯಾ. ಇಂದು ಮಲ್ಹೋತ್ರ ಅವರೊಬ್ಬರನ್ನು ಹೊರತುಪಡಿಸಿದರೆ ನ್ಯಾ. ಖನ್ವಿಲ್ಕರ್ ಅವರನ್ನು ಒಳಗೊಂಡಂತೆ ಉಳಿದ ನಾಲ್ವರು ನ್ಯಾಯಾಧೀಶರು ಶಬರಿಮಲದಲ್ಲಿ ಮಹಿಳೆಯರ ಪ್ರವೇಶದ ಹಕ್ಕನ್ನು ಎತ್ತಿಹಿಡಿದಿದ್ದರು. ಇದು ಬಹುಸಂಖ್ಯಾತ ನ್ಯಾಯಾಧೀಶರುಗಳ ತೀರ್ಪಾದ್ದರಿಂದ ಅದೇ ಅಂತಿಮ ಆದೇಶವಾಗಬೇಕಿತ್ತು.

ಆದರೆ ಆ ನ್ಯಾಯಾದೇಶದ ವಿರುದ್ಧ ಬಿಜೆಪಿ-ಆರೆಸ್ಸೆಸ್- (ಮತ್ತು ಕೇರಳದಲ್ಲಿ ಕಾಂಗ್ರೆಸ್ಸ್ ಕೊಡಾ ಸೇರಿ) ವಿಧ್ವಂಸಕ ಕೃತ್ಯಗಳನ್ನು ನಡೆಸಿ ಆದೇಶದ ವಿರುದ್ಧ ಹವಾ ಸೃಷ್ಟಿಸಿದವು. ನಂತರದಲ್ಲಿ ಆ ಆದೇಶದ ವಿರುದ್ಧ ಮರುಪರಿಶೀಲನಾ ಅರ್ಜಿಯನ್ನು ಹಾಕಲಾಯಿತು.

ಸುಪ್ರಿಂ ಕೋರ್ಟಿನ ನಿಯಮಗಳ ಪ್ರಕಾರ ಮರು ಪರಿಶೀಲನಾ ಅರ್ಜಿಯನ್ನು ಅದೇ ಪೀಠದ ಮುಂದೆ ಹಾಕಬೇಕು. ಮತ್ತು ಈ ಹಿಂದೆ ವಾದಿಸಲಾಗದೇ ಹೋದ ಅತ್ಯಂತ ಮಹತ್ವದ ಹೊಸ ವಿಷಯವಿರಬೇಕು. ಹಳೆಯ ವಾದ-ಆಧಾರಗಳನ್ನು ಮತ್ತೊಮ್ಮೆ ಪರಿಶೀಲಿಸುವುದಿಲ್ಲ.

ಆದರೆ ಈ ಮರುಪರಿಶೀಲನಾ ಅರ್ಜಿಯಲ್ಲಿ ಯಾವ ಹೊಸ ಅಂಶಗಳೂ ಇರಲಿಲ್ಲ. ಹಳೆಯ ವಾದವನ್ನೇ ಮುಂದಿಟ್ಟು ಏಳು ಜನರ ಪೀಠಕ್ಕೆ ವರ್ಗಾಯಿಸುವಂತೆ ಕೋರಲಾಗಿತ್ತು. ಆ ವೇಳೆಗೆ ಮುಕ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ನಿವೃತ್ತರಾಗಿದ್ದರು.

ಆದ್ದರಿಂದ ಈ ಅರ್ಜಿಯು ಆಗ ಮುಖ್ಯ ನ್ಯಾಯಮೂರ್ತಿಯಾಗಿದ್ದ ರಂಜನ್ ಗೋಗೋಯ್, ನ್ಯಾ. ಚಂದ್ರಚೂಡ್, ನ್ಯಾ. ನಾರಿಮನ್, ನ್ಯಾ. ಖನ್ವಿಲ್ಕರ್, ನ್ಯಾ. ಇಂದು ಮಲ್ಹೋತ್ರ ಅವರ ಪೀಠದ ಮುಂದೆ ಬಂದಿತು. ಇಂದು ಮಲ್ಹೋತ್ರ ಅವರು ಹಿಂದೆಯೂ ಬಹುಸಂಖ್ಯಾತರ ಆದೇಶಕ್ಕೆ ಭಿನ್ನಮತ ಹೊಂದಿದ್ದರು. ಹೊಸದಾಗಿ ಈ ಪ್ರಕರಣಕ್ಕೆ ಪ್ರವೇಶ ಪಡೆದಿದ್ದ ಗೋಗೋಯ್ ಅವರು ಇಂದು ಮಲ್ಹೋತ್ರ ಅವರ ನಿಲುವನ್ನು ಸಮರ್ಥಿಸಿ ವಿಸ್ತ್ರುತ ಪೀಠಕ್ಕೆ ಕೊಂಡೊಯ್ಯುವ ಅಭಿಪ್ರಾಯವನ್ನು ಹೊಂದಿದ್ದರು.

ನ್ಯಾ. ಚಂದ್ರಚೂಡ್, ನ್ಯಾ. ನಾರಿಮನ್ ತಮ್ಮ ಹಳೆಯ ಆದೇಶಕ್ಕೆ ತಕ್ಕ ಹಾಗೆ ವಿಸ್ತೃತ ಪೀಠದ ಅಗತ್ಯವಿಲ್ಲ ಹಾಗೂ ಯಾವುದೇ ಹೊಸ ವಿಷಯವಿಲ್ಲವಾದ್ದರಿಂದ ಮರುಪರಿಶೀಲನಾ ಅರ್ಜಿಯನ್ನು ತಿರಸ್ಕರಿಸಬೇಕು ಎನ್ನುವ ನಿಲುವಿಗೆ ಬಂದರು.

ಹೀಗಾಗಿ ಪರ ಹಾಗೂ ವಿರುದ್ಧ ಸಮ ಸಂಖ್ಹ್ಯೆಯಲ್ಲಿದ್ದಾಗ ನ್ಯಾ. ಖನ್ವಿಲ್ಕರ ಅವರು ಯಾವುದರ ಪರ ನಿಲುವು ತೆಗೆದುಕೊಳ್ಳುತ್ತಿದ್ದರೊ ಅದೇ ಅಂತಿಮ ತೀರ್ಪಾಗುತ್ತಿತ್ತು. ಈ ಹಿಂದೆ ನಾರಿಮನ್, ಚಂದ್ರಚೂಡರ ಜೊತೆ ಎಲ್ಲಾ ವಾದ, ಆದೇಶಗಳಿಗೆ ಸಹಮತಸೂಚಿಸಿ ವಿಸ್ತೃತ ಪೀಠ ಅನಗತ್ಯ ಎಂದು ತೀರ್ಪುಕೊಟ್ಟಿದ್ದ ಖನ್ವಿಲ್ಕರ್ ಅವರು ದಿಢೀರನೇ ತಮ್ಮ ನಿಲುವನ್ನು ಬದಲಿಸಿ ನ್ಯಾ. ಇಂದು ಮಲ್ಹೋತ್ರ ಹಾಗೂ ಗೋಗೋಯ್ ಅವರೊಂದಿಗೆ ಸೇರಿಕೊಂಡರು. ಆ ಮೂಲಕ ಶಬರಿಮಲ ವಿಷಯದಲ್ಲಿ ನೀಡಲಾಗಿದ್ದ ಅತ್ಯಂತ ಪ್ರಗತಿಪರ ತೀರ್ಪು ಅತ್ಯಂತ ಅಸಾಂವಿಧಾನಿಕವಾಗಿ ನಿರರ್ಥಕವಾಗುವುದಕ್ಕೆ ಕಾರಣರಾದರು.

*ಹಿಂದೂತ್ವವಾದಿಗೆ ಶಾಶ್ವತ ಜಾಮೀನು-ಸಮನಾತವಾದಿಗೆ ಶಾಶ್ವತ ಜೈಲು!*

ಅದರರ್ಥ ಖನ್ವಿಲ್ಕರ್ ಅವರು ಯಾವಾಗಲೂ ಪೊಲೀಸರು ಹಿಡಿದ ಆರೋಪಿಗಳ ವಿರುದ್ಧ ತೀರ್ಪು ಕೊಟ್ಟಿದ್ದಾರೆ ಎಂತಲೂ ಅಲ್ಲ.

೨೦೦೨ರ ಗುಜರಾತ್ ಹತ್ಯಾಕಾಂಡದಲ್ಲಿ ನರೋದಾಪಾಟಿಯಾ ನರಹತ್ಯಾ ಪ್ರಕರಣದಲ್ಲಿ ಬಾಬಾ ಭಜರಂಗಿ ಎಂಬ ಹಿಂದೂತ್ವವಾದಿ ಕಾರ್ಯಕರ್ತನ ಅಪರಾಧ ಸಾಕ್ಷ್ಯಾಧಾರಗಳ ಸಮೇತ ಸಾಬೀತಾಗಿತ್ತು. ಆತನಿಗೆ ಜೀವಾವಧಿ ಶಿಕ್ಷೆಯೂ ಖಾಯಂ ಆಗಿತ್ತು. ಆದರೆ ೨೦೨೦ರಲ್ಲಿ ನ್ಯಾ. ಖನ್ವಿಲ್ಕರ್ ಅವರ ಪೀಠ ಇಂಥ ದೇಶದ್ರೋಹಿ ಅಪರಾಧಿಗೆ ಕಣ್ಣಿನ ಸಮಸ್ಯೆಯಿದೆಯೆಂದು ಶಾಶ್ವತ ಜಾಮೀನು ನೀಡಿತು.

ಆದರೆ ಶೇ. ೯೦ರಷ್ಟು ಅಂಗವಿಕಲತೆಯಿಂದ ನರಳುತ್ತಿರುವ ಮೋದಿಯ ಕಟುಟೀಕಾಕಾರ ಪ್ರೊ. ಸಾಯಿಬಾಬಾ ಅವರಿಗೆ ಮಾತ್ರ ಶಾಶ್ವತ ಜಾಮೀನಿರಲಿ, ತತ್ಕಾಲಿಕ ಜಾಮೀನನ್ನು ಕೂಡಾ ಇದೇ ಖನ್ವಿಲ್ಕರ್ ಪೀಠ ನಿರಂತರವಾಗಿ ನಿರಾಕರಿಸುತ್ತಾ ಬಂದಿದೆ. ಹಾಗೆಯೇ ಭೀಮ-ಕೊರೆಗಾಂವ್ ಬಂಧಿಗಳ ಜಾಮೀನು ಕೂಡ .

ಸಾಮಾನ್ಯವಾಗಿ ಸರ್ವಾಧಿಕಾರಿ ಸರ್ಕಾರವೊಂದು ಅಧಿಕಾರದಲ್ಲಿದ್ದಾಗ ಅಲ್ಲಿಯ ನ್ಯಾಯಾಂಗ ಸ್ವತಂತ್ರವಾಗಿ ವರ್ತಿಸದೇ ಅಧಿಕಾರಕ್ಕೆ ಪೂರಕವಾಗಿ ವರ್ತಿಸುತ್ತದೆ ಎಂಬುದು ಜಗತ್ತಿನ ನ್ಯಾಯಾಂಗದ ಇತಿಹಾಸ ಸಾಬೀತು ಮಾಡುತ್ತದೆ. ಇಂದಿರಾಗಾಂಧಿ ಜಾರಿಗೆ ತಂದ ಸರ್ವಾಧಿಕಾರದ ಕಾಲದಲ್ಲಿ ಕೆಳಹಂತದ ಕೆಲವು ಕೋರ್ಟುಗಳೂ ಹಾಗೂ ನ್ಯಾ. ಖನ್ನಾ ಅವರಂಥ ಅಪರೂಪದವರನ್ನು ಬಿಟ್ಟರೆ ಉಳಿದಂತೆ ಸುಪ್ರಿಂಕೋರ್ಟು ಇಂದಿರಾಗಾಂಧಿಯವರ ಆಜ್ನಾನುವರ್ತಿಯಾಗಿ ನಡೆದುಕೊಂಡಿತು.

ಇಂದು ಮೋದಿಯವರ ಅಘೋಷಿತ ಸರ್ವಾಧಿಕಾರದ ಕಾಲದಲ್ಲಿ ಮತ್ತೊಮ್ಮೆ ಸುಪ್ರಿಂಕೋರ್ಟು ಸರ್ಕಾರದ ಆಜ್ನಾನುವರ್ತಿಯಂತೆ ನಡೆದುಕೊಳ್ಳುತ್ತಿದೆ. ಆದರೆ ಈ ಬಾರಿ ಕೇವಲ ಭಯದಿಂದಲ್ಲ. ಆಮಿಷದಿಂದಲ್ಲ. ಬದಲಿಗೆ ಸೈದ್ಧಾಂತಿಕವಾಗಿಯೂ ಭಾರತದ ಉನ್ನತ ನ್ಯಾಯಾಂಗದ ಬಹುಭಾಗ ಮೋದಿತ್ವದ ಪ್ರಭಾವದಲ್ಲಿರುವಂತೆ ಕಾಣುತ್ತಿದೆ. ಇದು ಭಾರತದ ಪ್ರಜಾತಂತ್ರದ ಬಗ್ಗೆ ಇದ್ದ ಭರವಸೆಗಳು ಮತ್ತಷ್ಟು ಕಮರುವಂತೆ ಮಾಡುತ್ತಿದೆ.

ಅದರಲ್ಲೂ ನ್ಯಾ. ಖನ್ವಿಲ್ಕರ್ ಅವರು ಭಾರತದ ಉದಾರವಾದಿ ನ್ಯಾಯಾಂಗಕ್ಕೆ ಹಾಗೂ ನ್ಯಾಯ ಸಂಹಿತೆಗಳಿಗೆ ಮಾಡಿರುವ ಹಾನಿಯನ್ನು ಅದಷ್ಟು ಬೇಗ ಸರಿಮಾಡದಿದ್ದರೆ ಭಾರತದ ಪ್ರಜಾತಂತ್ರಕ್ಕೆ ಕಗ್ಗತ್ತಲು ಆವರಿಸಲಿದೆ.

– ಶಿವಸುಂದರ್


shivasundar
9448659774