ಜಿ.ರಾಜಶೇಖರ್
ಒಂಟಿ ಪಕ್ಷಿಯ ನೋಟ
…………………
-ಪಾರ್ವತೀಶ ಬಿಳಿದಾಳೆ
…..—–……..

ಜಿ.ರಾಜಶೇಖರರ ನಿರ್ಗಮನವು ಅವರನ್ನು ಬಲ್ಲವರಲ್ಲಿ ಬಹಳ ನೋವು ತಂದಿದೆ. ಏಳೂವರೆ ದಶಕದ ಬದುಕಿನಲ್ಲಿ ರಾಜಶೇಖರ್ ಅಪಾರ‌‌ ಗೌರವ & ಪ್ರೀತಿ ಪಡೆದವರು.
ರಾಜಕೀಯ, ಸಾಹಿತ್ಯ, ಸಿನಿಮಾ ಮತ್ತೆ ರಾಜಕೀಯ ತತ್ವ ಸಿದ್ದಾಂತಗಳನ್ನು ಚರ್ಚಿಸಿದ, ಬರೆದ ವಿಸ್ತಾರವಾದ ಚಟುವಟಿಕೆ ಅವರದ್ದು. ಆದರೆ ಅವರು ಹೆಚ್ಚು ಪ್ರವಾಸ ಮಾಡಿದಂತೆ ಕಾಣೆ.
ಉಡುಪಿ, ಧಾರವಾಡ, ಹೆಗ್ಗೋಡು, ಬೆಂಗಳೂರು, ಮಂಗಳೂರು ಪರಿಧಿಯೊಳಗಿದ್ದರೆನಿಸಿದೆ.‌‌
ಆದರೆ ಅವರ ಚಿತ್ತ ವಿಶ್ವವಿದ್ಯಮಾನಗಳತ್ತ.

ಕಳೆದ ಮೂರು ದಶಕದಿಂದ ಕರ್ನಾಟಕದ ಕೋಮುವಾದಿ ದಮನವು ಬಹುತೇಕ ಪ್ರಗತಿಪರರನ್ನು ಬಿಟ್ಟೂಬಿಡದೆ ಪ್ರತಿರೋಧಿಸುವ ಸ್ಥಿತಿ ನಿರ್ಮಿಸಿ ಬಳಲಿಸಿದೆ. ಸಹಜವಾಗಿಯೆ ರಾಜಶೇಖರರ ಸಾರ್ವಜನಿಕ ಬದುಕೂ ಮತ್ತು ಬರಹಗಳ ಕೇಂದ್ರಬಿಂದುವೂ ಸಹ ಫ್ಯಾಸಿಸಂ ವಿರೋಧವೆ ಆಗಿತ್ತು.

ಮಧ್ಯ ಭಾರತದ ಬುಡಕಟ್ಟು ಸಮೂದಾಯದ ದ್ರೌಪದಿ ಮುರ್ಮು ಈಗ ಫೆಡರಲ್ ಇಂಡಿಯಾದ ಅಧ್ಯಕ್ಷೆ. ಆ ಮೂಲಕ ಹಿಂದುತ್ವವಾದಿಗಳ ಕನ್ ಸಾಲಿಡೇಷನ್ ಪ್ರಕ್ರಿಯೆಯು ದಮನಿತ ಸಮೂದಾಯಗಳ ಕೊನೆಯ‌ ಹಂತದ ಸ್ತರವನ್ನೂ ಆವರಿಸಿದಂತಿದೆ.

ಈಗಾಗಲೇ ಅವರ ಕ್ಯಾಂಪಿನಲ್ಲಿ ಬನಿಯಾಗಳು, ಠಾಕೂರರು, ಬ್ರಾಹ್ಮಣರು, ಮಧ್ಯಮ ಸ್ತರದವರು, ಭೂ ಒಡೆತನ , ಸಂಪತ್ತು, ಅಧಿಕಾರ ಹೊಂದಿರುವವರು ಕೈ ಜೋಡಿಸಿದ್ದಾರೆ. ಈಗ ಅದಿವಾಸಿ-ಬುಡಕಟ್ಟುಗಳ ಜನಸಮೂದಾಯಗಳನ್ನು‌ ತಕ್ಕೆಗೆ ತೆಗೆದುಕೊಂಡರೆ ಕೇವಲ ಘರ್ ವಾಪ್ಸಿ ಅಜೆಂಡಾ ಮಾತ್ರವಲ್ಲದೆ ಕೋಟಿಗಟ್ಟಲೆ ಓಟುಗಳನ್ನೂ ದೋಚಬಹುದು. ಆರೆಸೆಸ್ ನ ವನವಾಸಿ‌ ಮಂಚ್ ‌ಇತ್ಯಾದಿಗಳ ಹಲವು ಧಶಕದ ಕೆಲಸಗಳು ಫಲ ನೀಡುವ ಹಂತವಿರಬಹುದಿದು.

ಮತ್ತೊಂದೆಡೆ

ನಾವು ಜನರನ್ನು, ಸಂಘಟನೆಗಳನ್ನು ಕಳೆದುಕೊಳ್ಳುತ್ತಾ ಸಾಗುತ್ತಿದ್ದೇವೆ. ಕಲ್ಬುರ್ಗಿ, ಗೌರಿ, ರಾಜಶೇಖರ್ ಕೋಮು‌ಸಾಮರಸ್ಯದ ಯುನೈಟೆಡ್ ಫ್ರಂಟ್ ಇವೆಲ್ಲ ಈಗಿಲ್ಲ.

ಕೋಮು ಸೌಹಾರ್ದದ ಮಾತಾಡುತ್ತಿದ್ದವನೊಬ್ಬ ಹಗರಣ ಮಾಡಿಕೊಂಡಿದ್ದಾನೆ. ಪುರಾವೆಗಳೂ ಇವೆ.
ಇವನು ಗೌರಿ ಟ್ರಸ್ಟಿನ ಸದಸ್ಯನೂ ಹೌದು.
ಜನಶಕ್ತಿ ಸಂಘಟನೆಯವರು ಸಧ್ಯಕ್ಕೆ ತಮ್ಮವನ ಹಗರಣವನ್ನು ಮುಚ್ಚಿಹಾಕುವಲ್ಲಿ ಬ್ಯುಸಿಯಾಗಿದ್ದಾರೆ.

The higher they go,
more crooked it becomes…

ರಾಜಶೇಖರ್ ವಿಮರ್ಶಿಸದೆ ಈ ಗುಂಪನ್ನು ಮುಗ್ಧವಾಗಿ ಬೆಂಬಲಿಸಿದ್ದರು.

ಇದು ನಮ್ಮ ಸ್ಥಿತಿ.

ರಾಜಶೇಖರ್ ನನ್ನ ನೆನಪಲ್ಲಿ ಉಳಿದದ್ದು ಲಂಕೇಶ್ ವಾರ್ಷಿಕೋತ್ಸವದ ಒಂದು ಭಾಷಣದಲ್ಲಿ.

ಅವತ್ತು ಸರ್ಕಾರಿ ಪ್ರಾಯೋಜಿತ ಫ್ಯಾಸಿಸಂ ಬಗ್ಗೆ ಮಾತು ಶುರು ಮಾಡಿ

‘ಹೈದರಾಬಾದ್ ವಿಮೋಚನಾ ಮಿಲಿಟರಿ ಕಾರ್ಯಾಚರಣೆ ‘ಯ ವಿವರಗಳನ್ನು ಪ್ರಸ್ತಾಪಿಸಿದ್ದರು.

ನೈಜಾಂ ಭಾರತ ಒಕ್ಕೂಟ ಸೇರಲು ಒಪ್ಪದಿದ್ದಾಗ ಅವನ ರಜಾಕಾರ್ ಮಿಲೀಷಿಯಾ ವಿರುದ್ದ 1948ರಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಾಮಾನ್ಯ ನಾಗರಿಕರೂ ಸೇರಿದಂತೆ ಮುವತ್ತು ಸಾವಿರಕ್ಕೂ ಹೆಚ್ಚು ಜನ ಕೊಲ್ಲಲ್ಪಟ್ಟರು. ಹತ್ಯೆಯಾದವರಲ್ಲಿ ಬಹುತೇಕರು ಆಗಿನ ಹೈದರಾಬಾದ್ ನಿಜಾಂ ರಾಜ್ಯದ ಮುಸಲ್ಮಾನರೇ ಹೆಚ್ಚಿದ್ದರು.

ಈ ರಾಜ್ಯವು ಉತ್ತರ ಕರ್ನಾಟಕದ ಜಿಲ್ಲೆಗಳು, ತೆಲಂಗಾಣ & ಮಹಾರಾಷ್ಟ್ರದ ದಕ್ಷಿಣ ಪ್ರಾಂತ್ಯದಲ್ಲಿ ಹರಡಿತ್ತು.
ಅದರ ಹಿಂದುಮುಂದು ತೆಲಂಗಾಣದಲ್ಲಿ ಕಮ್ಯೂನಿಷ್ಟರು ಸಶಸ್ತ್ರ ಭೂ ಹೋರಾಟವನ್ನೂ ನಡೆಸಿದ್ದರು. ಭಾರತದ ಸೇನೆ ಇವೆರಡನ್ನೂ ಮುಗಿಸಿತು.

ಸ್ವತಂತ್ರ ಇಂಡಿಯಾದ ಸೇನೆಯು ತನ್ನ ದೇಶವಾಸಿಗಳ ಮೇಲೆಯೇ ನಡೆಸಿದ ದೌರ್ಜನ್ಯ ಮತ್ತು ಹತ್ಯೆಗಳ ಬಗ್ಗೆ ತನಿಖೆ ನಡೆಸಲು ಪಂಡಿತ್ ಸುಂದರ್ ಲಾಲ್ ಆಯೋಗ ರಚನೆಯಾಗಿ, ಅವರು ನೀಡಿದ್ದ ವರದಿಯನ್ನು ವಲ್ಲಭಾಯ್ ಪಟೇಲ್ ಮೂಲೆಗೆಸೆದು ಕಾಲಾನಂತರ‌ ಎಲ್ಲರೂ ಅದನ್ನು ಮರೆತಾಗ ಕರ್ನಾಟಕದ ಉಡುಪಿಯಲ್ಲಿದ್ದ ಸರಳ ವ್ಯಕ್ತಿತ್ವದ ಬುದ್ದಿಜೀವಿ-ಬರಹಗಾರನೊಬ್ಬ ದೊಡ್ಡ ಸಭೆಯೊಂದರಲ್ಲಿ ಅದನ್ನು ಪ್ರಸ್ತಾಪಿಸಿದ್ದರು.

ಬಿಜೇಪಿಗಳ ಕೋಮುವಾದವನ್ನಷ್ಟೇ ಮಾತನಾಡುತ್ತ ಮೈಮರೆಯುವವರಿಗೆ ಯಾವುದೇ ಪಕ್ಷದ ಪ್ರಭುತ್ವ ಪ್ರಾಯೋಜಿತ ಹಿಂಸೆ ಮತ್ತು ಹತ್ಯಾಕಾಂಡಗಳ ನಮ್ಮದೇ ನೆಲದ ಪುರಾವೆಗಳನ್ನು ನೀಡಿದ್ದ ರಾಜಶೇಖರ್ ಬಹುಶ ಹೋರಾಟಗಾರರ ರಾಜಕೀಯ ಪ್ರಜ್ಞೆ ವಿಸ್ತರಿಸಲು ಬಯಸಿದ್ದಂತೆ ಭಾಸವಾಗುತ್ತದೆ.

ಆದರೆ ಕೋಮುವಾದದ ವಿರುದ್ಧದ ಹೋರಾಟದ ಕೇಂದ್ರಬಿಂದು ಗೋಜಲು ಸ್ಥಿತಿ ತಲುಪಿದೆ.

ಫೇಸ್ ಬುಕ್ ನಲ್ಲಿ ಓದಲು ಸಿಕ್ಕಿದ ರಾಜಶೇಖರ್ ಕುರಿತ ಹಲವರ ಬರಹಗಳಲ್ಲಿ ಇಂಟರೆಸ್ಟಿಂಗಾದ ವಿವರಗಳಿವೆ.

ಸಂದರ್ಶನವೊಂದರಲ್ಲಿ

‘ ಕನ್ನಡದ (ಆಗಿನ) ಉತ್ತಮ ಬರಹಗಾರರು ಯಾರು? ‘ ಎಂಬ ಪ್ರಶ್ನೆಗೆ

‘ಜಯಂತ್ ಕಾಯ್ಕಣಿ , ಉಮಾ ರಾವ್ , ವಿವೇಕ್ ಶಾನಭಾಗ್ , ಯೋಗಪ್ಪನವರ್ ‘ ಎಂದಿರುವುದು ಔದಾರ್ಯದ ಗ್ರೇಸ್ ಮಾರ್ಕಿನ ಮಾತೆನಿಸಿತು.
ಆದರೆ ಕಾರಂತರ ಮರಳಿ ಮಣ್ಣಿಗೆ ಅನ್ನು ವಿಮರ್ಶಿಸುವಾಗ ಪಾತ್ರಗಳ‌ ಸಾಮಾಜಿಕ ಸ್ಥಾನಮಾನಗಳು ಅವುಗಳ ಮಾತಿನ ವರ್ಗಗುಣವನ್ನೂ ಬಿಂಬಿಸುವ‌ , ನಂತರ ಅವೇ ಒಂದೊಂದು ಡಯಲೆಕ್ಟ್ ಆಗುವ ವಿಧಾನದ ಬಗ್ಗೆ ಹೇಳುವುದು ರಾಜಶೇಖರರ ಗ್ರಹಿಕೆಯ ಶಕ್ತಿ ತೋರುತ್ತದೆ.

ಬರಹವೊಂದು ಓದುಗರ ಸ್ವಾಯತ್ತತೆಯ ಮೇಲೇರಿ ಬರಕೂಡದೆಂಬ ಅವರ ಮಾತು ಪ್ರತಿಭಟನಾ ಪಾಂಪ್ಲೆಟ್ ಬರೆಯುವವರೂ ಸಹ ಗಮನಿಸಬೇಕು ಅನಿಸುತ್ತಿದೆ.

ಲಂಕೇಶರು ರಾಜಶೇಖರ್ ರನ್ನು ತಮ್ಮ ಪತ್ರಿಕೆಗೆ ಬರೆಯುವಂತೆ ಆಹ್ವಾನಿಸಿದ್ದು ತನ್ನನ್ನು ಟೀಕಿಸಿದ ನಂತರ ಎನ್ನುವುದು ರೋಚಕ ಗಳಿಗೆ.

ಪ್ರಗತಿರಂಗದ ಪ್ರಣಾಳಿಕೆಯ ಜಾಳುತನದ ಬಗ್ಗೆ ರಾಜಶೇಖರ್ ಶೂದ್ರ ಪತ್ರಿಕೆಯಲ್ಲಿ ಕಟುವಾಗಿ ಟೀಕಿಸಿ ಬರೆದದ್ದು ಲಂಕೇಶರಿಗೆ ಮೊದಲಿಗೆ ಸಿಟ್ಟು ತರಿಸಿ ಆಮೇಲೆ ರಾಜಶೇಖರರ ಸ್ನೇಹ ನಡೆಯುವತ್ತ ಚಲಿಸಿತು.

ಇದಕ್ಕೆ ರಾಜಶೇಖರರ ನಿಷ್ಟೂರತೆ ಒಂದು ಕಾರಣವಾದರೆ,
ಜೀನಿಯಸ್ & ಸರಳ ಸ್ವಚ್ಚ ಮನದವರೆದಿರು ಲಂಕೇಶರು ತಲೆಬಾಗಿದ ಸಂದರ್ಭವದು.
ಅವರ ಮಗ ವಿಷ್ಣು ನೆನೆದು ಹೇಳುವ ಪ್ರಕಾರ ರಾಜಶೇಖರ್ ಒಬ್ಬ ದಣಿವರಿಯದ ಓದುಗ. ಸ್ವೀಡಿಶ್ ಸೇರಿದಂತೆ ಯೂರೋಪ್ ನ ಹಲವು ಭಾಷೆಗಳ ಪುಸ್ತಕಗಳು, ಲ್ಯಾಟೀನ್ ಅಮೇರಿಕಾ, ಇಂಡೋನೇಷಿಯಾದ ಯಾವುದ್ಯಾವುದೋ ಕೃತಿಗಳು ಅವರ ಕೈ‌ಹಿಡಿದಿವೆ.

ಸೃಜನಶೀಲವೆಂಬ ಸೆರೆಗೆ ಸಿಗದೆ ಕ್ರೈಂ ಥ್ರಿಲ್ಲರ್, ಪರಿಸರ ಹೋರಾಟ,
ರಾಜಕೀಯ ಬರಹಗಳೆಂದು ಅವರ ಓದುವ ಗೀಳು ಮನಬಂದಂತೆ ಚಲಿಸಿದೆ.

ಸಾಹಿತ್ಯ ವಿಮರ್ಶೆಗೆ ಅವರು ವ್ಯಯಿಸಿದ ಕಾಲವು ವ್ಯರ್ಥವೆನಿಸಿದೆ ಅಂತ ಅವರಿಗೇ ಅನಿಸಿದ್ದು ನಮ್ಮ ಕಾಲದ ಬೌದ್ಧಿಕ ಜಗತ್ತಿನ ಜಡ ಸ್ಥಿತಿಯ ವಿಮರ್ಶೆ ಅಲ್ಲ ಅನ್ನಲಾದೀತೆ ?

ರಾಜಶೇಖರರ ಸಾಹಿತ್ಯಾಭಿರುಚಿಯ, ಓದುವ, ಚರ್ಚಿಸುವ, ವಿಮರ್ಶಿಸುವ ಪೂರ್ಣ ಸಾಮರ್ಥ್ಯವನ್ನು‌ ಬಸಿದುಕೊಳ್ಳುವ objective condition evolve‌ ಆಗಲಿಲ್ಲವಾ ಅಂತ ಶಂಕೆ ನನಗೆ ?

ಕರ್ನಾಟಕದ ಕಮ್ಯೂನಿಷ್ಟ್ ಪಕ್ಷಗಳೊಂದಿಗೆ ಉತ್ತಮ ಒಡನಾಟ ಹೊಂದಿದ್ದ ರಾಜಶೇಖರ್ ಜನ ತಮ್ಮನ್ನು ಮಾರ್ಕ್ಸ್ ವಾದಿ ಚಿಂತಕ ಎಂದಾಗ, ಎಡಸಿದ್ದಾಂತಿ ಎನಿಸಿಕೊಂಡಾಗ ಹೆಮ್ಳೆ/ನಿರಾಕರಣೆ ಏನೂ ಹೇಳದೆ ಇರುತ್ತಿದ್ದದ್ದು ಗಮನಾರ್ಹ ವಿಚಾರ. ರಾಜಶೇಕರ್ ಲಂಕೇಶ್ ಗೆ, ಶೂದ್ರ ಪತ್ರಿಕೆಗೆ ಬರೆದಂತೆ ಕೆಂಬಾವುಟ ಪತ್ರಿಕೆಗೂ ಹೆಚ್ಚು ಬರೆದಿದ್ದಾರೆಂದು ಕೇಳಿದ್ದೇನೆ.

ಅದೇ ವೇಳೆ ಸೋವಿಯತ್ ಒಕ್ಕೂಟವೆಂಬ ಕನ್ನಡಿಯನ್ನು ನೆಲಕ್ಕೆಸೆದು ಚೂರಾಗಿಸಿದ ಮಿಖಾಯಿಲ್ ಗೋರ್ಬಚೇವ್ ನ. ಗ್ಲಾಸ್ ನಾಸ್ಟ- ಪೆರೋಸ್ಟ್ರಾಯಿಕ ನಡೆಯನ್ನು ರಾಜಶೇಖರ್ ‘ ಸರಿ ‘ ಯೆಂದು ವಾದಿಸಿ ಇಲ್ಲಿನ ಕಮ್ಯೂನಿಸ್ಟರ ಮುನಿಸು ಕಂಡರಂತೆ.

ಆ ಚರ್ಚೆ ವಾಗ್ವಾದಗಳು ಏನಾದವೊ !

ಕರ್ನಾಟಕ ಸಿಪಿಎಂನ ಸದಸ್ಯತ್ವದ ಕಾರ್ಡ್ ಹೋಲ್ಡರ್ ಅಂತೆ ರಾಜಶೇಖರ್, ಆದರೆ 1990 ದಶಕದ ನಂತರ ಸದಸ್ಯತ್ವ ಮುಂದುವರೆಯಲಿಲ್ಲ, ಆದರೂ‌ ಸಹ ಎಡಪಕ್ಷಗಳೊಂದಿಗಿನ ಒಡನಾಟ ಮುಂದುವರೆಯಿತು.

ಅವರ ಮಾರ್ಕ್ಸ್ ವಾದಿ ಓದು, ಗ್ರಹಿಕೆ ಮತ್ತು ಚರ್ಚೆಗೆ ಸೂಕ್ತ ದೊಡ್ಡ ಪ್ಲಾಟ್ ಫಾರಂ ಸಿಗದೇ ಹೋಯಿತೆಂತಲೇ ನನ್ನನಿಸಿಕೆ.

ಬಹುಶ ಉಡುಪಿ ಪ್ರಾಂತ್ಯದ ಮಿತ್ರರ ಬಳಗದಲ್ಲಿ ಸ್ವಲ್ಪ ಮಟ್ಟಿಗೆ ಇದು ನಡೆದಿರಲು ಸಾಕು. ಇಟಲಿಯ ಗ್ರಾಂಷಿಯ ಪರಿಚಯ ಮತ್ತು ಅವನ ತಿಳಿವಳಿಕೆಯನ್ನು ಕನ್ನಡಕ್ಕೆ ತಂದದಕ್ಕೆ ನಾವು ಫಣಿರಾಜ್ & ರಾಜಶೇಖರ್ ಮಿತ್ರ ಬಳಗವನ್ನು ನೆನೆಯಬೇಕು.

ದಿನಕ್ಕೊಂದು ಸಿಗರೇಟು, ಮಿತ ಭಾಷೆ, ಮಿತಾಹಾರ, ಮಿತ ಉಡುಗೆ ತೊಡುಗೆ, ಮಿತ ಸಂಚಾರಿ ರಾಜಶೇಖರ್ ಸಿನಿಮಾ ಪ್ರಿಯ,
ಥಿಯೇಟರ್ ನಲ್ಲಿ ಅವರ ಟಿಕೇಟ್ ಗಾಂಧಿ ಕ್ಲಾಸಿನದ್ದೆಂದು ವಿಷ್ಣು ಹೇಳಿದರು. ರಾಜಶೇಖರ್ ಬಳಿ ಇದ್ದದ್ದು ಬಹುಶ ಐದು ಜೊತೆ ಬಟ್ಟೆಗಳು. ಅವನ್ನೂ ಸಹ ನಿಗಾ ಇರಿಸಿ ಹೊಸದನ್ನು ತಂದಿರಿಸುವ ಅಕ್ಕರೆ ಮನೆಯವರದ್ದೆ.

ಸರಳವಾಗಿರುವುದನ್ನು ವ್ರತದಂತೆ ಆಚರಿಸಿದವರಲ್ಲ ರಾಜಶೇಖರ್, ಅದು ಅವರ ಮನಸಿಗೆ ಪ್ರಿಯವಾದದ್ದಿರಬೇಕು.

ನನಗವರ ಹಣಕಾಸಿನ ಸ್ಥಿತಿಗತಿ ತಿಳಿದಿಲ್ಲ, ಆದರೆ ನಮ್ಮ‌ ಸಮಕಾಲೀನ ದೊಡ್ಡ ಚಿಂತಕರೊಬ್ಬರು ಬೇಕಂತಲೆ ಗಾಂಧೀ ಕ್ಲಾಸಿನಲ್ಲಿ ಕುಳಿತು ಸಿನಿಮಾ ನೋಡುತ್ತಿದ್ದರು ಮತ್ತದನ್ನು ಹೆಗ್ಗಳಿಕೆಯೂ ಅಲ್ಲ ಕೀಳರಿಮೆಯೂ ಅಲ್ಲವೆಂಬಂತೆ‌ ಸಹಜವಾಗಿ ಭಾವಿಸಿದ್ದರು.

ಒಂದೇ ನಾಟಕವೊಂದರ ಬೆನ್ನು ಹತ್ತಿ ವಿವಿಧ ಕಡೆ ಪ್ರದರ್ಶನದಲ್ಲಾಗುವ ಪಲ್ಲಟಗಳನ್ನು ಗಮನಿಸುವ ಅವರು ಅದನ್ನು ದಾಖಲಿಸಿದರಾ ಏನೊ ತಿಳಿಯದು.

ಏನನ್ನೇ ಮಾಡಿದರೂ, ಆಡಿದರೂ ಅದರ ಕ್ಯಾನ್ವಾಸನ್ನು ವಿಸ್ತರಿಸುವ ಶಕ್ತಿ ಇದ್ದ ರಾಜಶೇಖರ್ ತಮ್ಮ ನೈಜ ಸಾಮರ್ಥ್ಯಕ್ಕಿಂತ ಕಡಿಮೆ ಸ್ಥಿತಿಯನ್ನೂ ಸಹಜವೆಂಬಂತೆ ಒಪ್ಪಿಕೊಂಡವರು. ಕೆಲವು ಪ್ರಶಸ್ತಿಗಳನ್ನು ಬೇಡವೆಂದವರು ಕರ್ನಾಟಕ ರೂಪಿಸಿದ ಅತ್ಯುತ್ತಮ ಜನನಾಯಕರಲ್ಲಿ ಒಬ್ಬರಾದ ಕೆ.ಎಂ.ಶರೀಫ್ ರ ಸ್ಮರಣೆಯ ಪ್ರಶಸ್ತಿ ಒಪ್ಪಿದ್ದು ಸಂತೋಷವಾಗಿತ್ತು.

ರಾಜಶೇಖರ್
ಬಲಿಷ್ಠರ ಎದಿರು ದುರ್ಬಲರ ಸಂಗಾತಿ

ಪಕ್ಷದ ಎದಿರು ಜನತೆಯ ಒಡನಾಡಿ

ಗುಂಪಿನಲ್ಲಿದ್ದರೂ ಏಕಾಂಗಿ,ಆದರೆ ಮಿತ್ರವ್ರಂದಪ್ರಿಯ

ಒಂಟಿ ಆಗುವಂತಿದ್ದರೂ ದಿಟ್ಟತನ. ಬಿಡದವರು

ಸತತವಾಗಿ ಓದಿ ಬರೆದು ಮಾಡಿದರೂ ಮಹತ್ವಾಕಾಂಕ್ಷೆಯಿಲ್ಲದವರು

ದೊಡ್ಡದನಿಯಲ್ಲಿ ಮಾತಾಡಿದರೂ ಸಂಕೋಚ ಬಿಡದವರು

ಎಲ್ಲರ ಜೊತೆಗಿದ್ದಂತೆ ಭಾಸವಾದರೂ ಹೊರನಿಂತು ತುಸು ಎತ್ತರದಿಂದ ಆಳಕ್ಕೆ ವಿಸ್ತಾರಕ್ಕೆ ನೋಟ ಬಯಸುವವರು.
ಹಾಗಾಗಿ ಅವರದ್ದು ಒಂಟಿ ಪಕ್ಷಿಯ ಮಾನವೀಯ ರಾಜಕೀಯ ನಿಲುವಿನ ಖಚಿತ ನೋಟ.

ಕರ್ನಾಟಕದ ಈಗಿನ ಗೋಜಲಿನ ಪರಿಸ್ಥಿತಿ ನೆನೆದರೆ, ರಾಜಶೇಖರರ ಚೆದುರಿದ ಚಿತ್ರಗಳ ತರದ ವಿವಿಧ ಆಸಕ್ತಿ ಆದ್ಯತೆಗಳತ್ತ ನೋಡಿದರೆ, ಆವರ ಪೂರ್ಣ‌ ಸಾಮರ್ಥ್ಯವು ಸೂಕ್ತವಾಗಿ ಬಳಕೆಯಾಗಲಿಲ್ಲ ಅನಿಸಿದ್ದ ಕಾರಣಕ್ಕೂ ವಿಷಾದ ಎನಿಸುತ್ತಿದೆ.

ಜಿ. ರಾಜಶೇಖರ್ ಗೆ ಗೌರವದ‌ ವಿದಾಯ

— … —

( ಫೋಟೊ –
ಕವಿ ಸುಬ್ಬು ಹೊಲೆಯಾರ್
ಜಿ.ರಾಜಶೇಖರ್
ಸಿಪಿಐನ ಗುರುಶಾಂತ್‌ ಮತ್ತು ನಾನು)