ಬಿರುಸಿನ ಮಳೆಯಿಂದ ತತ್ತರಿಸಿದ ಕ್ಷೇತ್ರದ ವಿವಿಧ ಪ್ರದೇಶಗಳಿಗೆ ನಿರಂತರ ಭೇಟಿ ನೀಡುತ್ತಿರುವ ಶಾಸಕ ಯು.ಟಿ.ಖಾದರ್,ಜನ ಸಾಮಾನ್ಯರು ಸಂಕಷ್ಟ ಅನುಭವಿಸುತ್ತಿದ್ದರೂ ತಿರುಗಿಯೂ ನೋಡದ ಕರುಣೆ ಮತ್ತು ಮಾನವೀಯತೆ ಇಲ್ಲದ ಸರಕಾರದ ವಿರುದ್ಧ ಖಾದರ್ ಗರಂ*

ಕಳೆದ ಹಲವಾರು ದಿವಸಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿದ ಪರಿಣಾಮ ಮಂಗಳೂರು ವಿಧಾನಸಭಾ ಕ್ಷೇತ್ರದ ವಿವಿಧ ಪ್ರದೇಶಗಳಲ್ಲಿ ಮನೆ ಹಾನಿ,ಗುಡ್ಡ ಕುಸಿತ ಸಂಭವಿಸಿದ್ದು ಶಾಸಕ ಯು.ಟಿ.ಖಾದರ್ ನಿರಂತರ ಭೇಟಿ ನೀಡಿ ಜನ ಸಂಪರ್ಕದಲ್ಲಿದ್ದುಕೊಂಡು ಸಾರ್ವಜನಿಕರಿಗೆ ಧೈರ್ಯ ತುಂಬಿದರು.

ಇಂದು ಶಾಸಕ ಯು.ಟಿ.ಖಾದರ್ ಕ್ಷೇತ್ರ ವ್ಯಾಪ್ತಿಯ ತೊಕ್ಕೋಟು,ಕೆರೆಬೈಲು,ಹಳೆಕೋಟೆ,ಕೋಟೆಪುರ,ಮೊಗವೀರ ಪಟ್ಣ,ಬಟ್ಟಂಪಾಡಿ,ಉಚ್ಛಿಲ,ಮುನ್ನೂರು ಪ್ರದೇಶದಲ್ಲಿ ಮಳೆ ಹಾನಿ ಮತ್ತು ಕಡಲ್ಕೊರೆತ ಸಂಭವಿಸಿದ ಸ್ಥಳಗಳಿಗೆ ಭೇಟಿ ನೀಡಿ ಸಾರ್ವಜನಿಕರಿಗೆ ಧೈರ್ಯ ತುಂಬಿ ಸರಕಾರದಿಂದ ಪರಿಹಾರ ಒದಗಿಸುವ ಭರವಸೆ ನೀಡಿದರು.

ಕಡಲ್ಕೊರೆತದಿಂದ ಭಾರೀ ಹಾನಿ ಸಂಭವಿಸಿದ ಉಳ್ಳಾಲ ನಗರ ಸಭೆ ವ್ಯಾಪ್ತಿಯ ಸೀ ಗ್ರೌಂಡ್ ಹಾಗೂ ಸೋಮೇಶ್ವರ ಪುರಸಭೆ ವ್ಯಾಪ್ತಿಯ ಬಟ್ಟಂಪಾಡಿಯಂಥಹ ಪ್ರದೇಶಗಳಿಗೆ ಸರಕಾರದ ಯಾವುದೇ ಒಬ್ಬ ಸಚಿವರೂ ಭೇಟಿ ನೀಡದೇ ಇದ್ದುದರ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ಖಾದರ್,ಇಂಥಹ ತುರ್ತು ಸಂದರ್ಭಗಳಲ್ಲಿ ತಕ್ಷಣ ಭೇಟಿ ನೀಡಿ ಪರಿಹಾರ ಕಂಡು ಕೊಳ್ಳುವುದು ಸರಕಾರದ ಜವಾಬ್ದಾರಿ,ಆದರೆ ಈವರೆಗೂ ಯಾವ ಸಚಿವರೂ ಭೇಟಿ ನೀಡದೇ ಇರುವುದರಿಂದ ಇದೊಂದು ಕರುಣೆ ಮತ್ತು ಮಾನವೀಯತೆ ಇಲ್ಲದ ಸರಕಾರ ಎಂದು ಕಿಡಿಕಾರಿದರು.

ಈ ಬಗ್ಗೆ ಜಿಲ್ಲಾ *ಉಸ್ತುವಾರಿ ಸಚಿವ ವಿ.ಸುನಿಲ್ ಕುಮಾರ್* *ಹಾಗೂ ಬಂದರು ಮತ್ತು ಮೀನುಗಾರಿಕಾ ಸಚಿವ ಎಸ್.ಅಂಗಾರ* ರವರ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ *ಮಾಜಿ ಸಚಿವ ಶಾಸಕ ಯು.ಟಿ.ಖಾದರ್* ತಕ್ಷಣ ಜಿಲ್ಲಾ ಮಟ್ಟದ ಪ್ರಾಕೃತಿಕ ವಿಕೋಪದ ಸಭೆ ಕರೆದು ಹಾನಿ ಸಂಭವಿಸಿದ ಮನೆಗಳಿಗೆ ಪರಿಹಾರ ಒದಗಿಸಲು ಅದೇ ರೀತಿ ಗುಡ್ಡ,ಗೋಡೆ ಕುಸಿತ ಸಂಭವಿಸಿದ ಪ್ರದೇಶಗಳಿಗೆ ಅನುದಾನ ಬಿಡುಗಡೆಗೊಳಿಸಿ ದುರಸ್ಥಿ ಪಡಿಸುವಂತೆ ಒತ್ತಾಯಿಸಿದರು.

ಕಡಲ್ಕೊರೆತದಿಂದ ಹಾನಿಗೊಳಗಾದ ತಡೆಗೋಡೆ ಹಾಗೂ ರಸ್ಥೆ ನಿರ್ಮಾಣಕ್ಕಾಗಿ, ಈಗಾಗಲೇ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಅಂದಾಜು ಪಟ್ಟಿ ಸಲ್ಲಿಸಿದ ಉಳ್ಳಾಲ ಸೀಗ್ರೌಂಡ್ ಬಳಿ ಅರವತ್ತು ಲಕ್ಷ ಹಾಗೂ ಸೋಮೇಶ್ವರ ಬಟ್ಟಂಪಾಡಿಗೆ ಒಂದು ಕೋಟಿ ಮೂವತ್ತು ಲಕ್ಷ ಅನುದಾನವನ್ನು ಶೀಘ್ರ ಬಿಡುಗಡೆಗೊಳಿಸುವಂತೆ ಒತ್ತಾಯಿಸಿ,ಸಚಿವದ್ವಯರು ಕೂಡಲೇ ಹಾನಿ ಸಂಭವಿಸಿದ ಪ್ರದೇಶಗಳಿಗೆ ಭೇಟಿ ನೀಡಬೇಕಾಗಿ ಆಗ್ರಹಿಸಿದರು.

ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವದ್ವಯರು ಇದೇ ಬರುವ *ಜುಲೈ 7ರಂದು* ಜಿಲ್ಲಾ ಮಟ್ಟದ ಸಭೆ ಕರೆದು ಹಾನಿ ಸಂಭವಿಸಿದ ಪ್ರದೇಶಗಳಿಗೆ ಭೇಟಿ ನೀಡುವುದಾಗಿಯೂ ಭರವಸೆ ನೀಡಿದರು.