*ಮೋದಿ ಸರ್ಕಾರಕ್ಕೆ ಎಂಟು ವರ್ಷಗಳು*

*ಭಾರತದ ಮಾನ ಹರಾಜಾದ ಎಂಟು ಪ್ರಸಂಗಗಳು*

ಇದೇ ಮೇ ೨೮ ಕ್ಕೆ ಮೋದಿ ಸರ್ಕಾರ ಅಧಿಕಾರಕ್ಕೆ ಬಂದು ಎಂಟು ವರ್ಷಗಳಾದವು.
ಮೇ ೨೮ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ದ್ರೋಹ ಬಗೆದು ಬ್ರಿಟಿಷರ ಜೊತೆ ಕೈಗೂಡಿಸಿದ ಹಾಗೂ ಈ ದೇಶದ ಭೌತಿಕ ವಿಭಜನೆಗೆ ಹಾಗೂ ಭಾವೈಕ್ಯತೆಯ ವಿಭಜನೆಗೆ ಪ್ರಮುಖ ಕಾರಣಕರ್ತನಾದ ಸಾವರ್ಕರ ಹುಟ್ಟಿದ ದಿನವೂ ಹೌದು. ೨೦೧೪ರಲ್ಲಿ ಮತ್ತು ಆ ನಂತರ ಎರಡನೇ ಬಾರಿ ೨೦೧೯ರಲ್ಲಿ ಚುನಾವಣೆಯಲ್ಲಿ ಗೆದ್ದು ಸಂಸತ್ ಪ್ರವೇಶಿಸುವುದಕ್ಕೆ ಮೋದಿ ಸರ್ಕಾರ ಇದೇ ದಿನವನ್ನು ಆಯ್ಕೆ ಮಾಡಿಕೊಂಡಿದ್ದು ಕಾಕತಾಳೀಯವೇನಲ್ಲ.

ಅದೇ ರೀತಿ ಮೋದಿ ಸರ್ಕಾರ ವಿಶ್ವಸಂಸ್ಥೆಯ ಜೊತೆ ನಿರಂತರ ಅನುಸಂಧಾನ ಮಾಡಿ ಜೂನ್ ೨೧ ಅನ್ನು ವಿಶ್ವ ಯೋಗ ದಿನವೆಂದು ಘೋಷಿಸುವಂತೆ ಮಾಡಿದೂ ಸಹ ಕಾಕತಾಳೀಯವೇನಲ್ಲ. ಅದು ಮೋದಿ ಮತ್ತು ಬಿಜೆಪಿಗಳ ಗುರುಮಠವಾದ ಹಾಗೂ ಸಾವರ್ಕರ್ ಸೈದ್ಧಾಂತಿಕ ಪ್ರೇರಣೆಯಿಂದ ಈ ದೇಶವನ್ನು ಬಂಧುತ್ವದ ಬದಲು ಹಿಂದೂತ್ವದ ಮೇಲೆ ಮರುನಿರ್ಮಾಣ ಬಯಸುವ ಆರೆಸ್ಸೆಸ್ ನ ಸಂಸ್ಥಾಪಕ ಹೆಡಗೇವಾರ್ ಹುಟ್ಟಿದ ದಿನ. ಹೀಗಾಗಿ ಇವು ಮೋದಿಯವರು ಕೊಟ್ಟ ಗುರುಕಾಣಿಕೆಗಳು ಮಾತ್ರವಲ್ಲ. ಭಾರತದ ಭವಿಷ್ಯದ ದಿಕ್ಸೂಚಕಗಳೂ ಆಗಿದ್ದವು.

ಈ ವರ್ಷ ಮೇ ೨೮ರಂದು ತಮ್ಮ ತವರಾದ ಗುಜರಾತಿನಲ್ಲಿ ತಮ್ಮ ಅಧಿಕಾರ ಗ್ರಹಣದ ಎಂಟನೇ ವರ್ಷದ ಭಾಷಣವನ್ನು ಮಾಡುತ್ತಾ ಮೋದಿಯವರು ಕಳೆದ ಎಂಟು ವರ್ಷಗಳಲ್ಲಿ ಭಾರತದ ಜನತೆ ನಾಚಿಕೆಯಿಂದ ತಲೆತಗ್ಗಿಸುವಂಥಾ ಒಂದೂ ಕೆಲಸವನ್ನು ಮಾಡಿಲ್ಲ ಎಂದು ಕೊಚ್ಚಿಕೊಂಡಿದ್ದಾರೆ.

ಈ ಮಾತನ್ನು ಕಣ್ಣು-ಕಿವಿ ಮತ್ತು ಹೊಟ್ಟೆ-ಹೃದಯ ಹಾಗೂ ಮೆದುಳಿರುವುವರು ಯಾರೂ ಒಪ್ಪಲಾರರು ಎನ್ನುವುದು ಬೇರೇ ಮಾತು.

ಪ್ರಾಯಶಃ ಯಾವುದೇ ಅಧಿಕಾರ ರೂಢ ಸರ್ಕಾರಗಳೂ ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುವುದಿಲ್ಲ. ಹಾಗೆ ನೋಡಿದರೆ ಭಾರತವು ನಾಚಿ ತಲೆತಗ್ಗಿಸುವಂಥ ಕೆಲಸಗಳನ್ನು ಈ ಹಿಂದಿನ ಸರ್ಕಾರಗಳೂ ಮಾಡಿದ್ದವು.
ಉದಾಹರಣೆಗೆ ೧೯೭೫ರಲ್ಲಿ ಇಂದಿರಾಗಾಂಧಿಯವರು ಪ್ರಜಾಸತ್ತೆಯನ್ನು ಬರ್ಖಾಸ್ತು ಮಾಡಿ ಸರ್ವಾಧಿಕಾರವನ್ನು ಜಾರಿ ಮಾಡಿದ್ದರು. ಸಿಖರ ಸ್ವರ್ಣ ದೇಗುಲದ ಮೇಲೆ ಮಿಲಿಟರಿ ದಾಳಿ ನಡೆಸಿ ಅಪವಿತ್ರಗೊಳಿಸಿದ್ದರು. ಅಧಿಕಾರದಲ್ಲಿರುವಷ್ಟೂ ಕಾಲವು ಅದನ್ನು ಸಮರ್ಥಿಸಿಕೊಳ್ಳುವ ವಂಧಿಮಾಗಧರನ್ನು ಸಾಕಿಕೊಂಡಿದ್ದರು.

ಆದರೂ, ಆ ನಂತರ ಸೋನಿಯಾ ಗಾಂಧಿ, ತುರ್ತುಸ್ಥಿತಿ ಜಾರಿ ಮಾಡಿದ್ದು ಪ್ರಮಾದ ಎಂದು ಒಂದೆರೆಡು ಸಾರಿ ಹೇಳಿದ್ದಾರೆ. ಅದೇರೀತಿ ೧೯೮೪ರಲ್ಲಿ ನಡೆದ ಸಿಖ್ ನರಮೇಧಕ್ಕೆ ಪ್ರಾಯಶ್ಚಿತ್ತದ ರೂಪದಲ್ಲಿ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಸ್ವರ್ಣ ದೇಗುಲದಲ್ಲಿ ಪ್ರಾಯಶ್ಚಿತ್ತ ರೂಪವಾಗಿ ಸಮುದಾಯ ಸೇವೆ ಮಾಡಿದ್ದರು.
ಕಾಂಗ್ರೆಸ್ ನಲ್ಲಿ ಹಾಗಿದ್ದರೆ ಮನಪರಿವರ್ತನೆ ಆಗಿದೆಯೇ?

ಒಂದು ವೇಳೆ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ ಇವನ್ನೆಲ್ಲಾ ಮಾಡದಷ್ಟು ಸೈದ್ಧಾಂತಿಕವಾಗಿ ಬದಲಾಗಿದೆಯೇ ಅಥವಾ ಇವೆಲ್ಲಾ ದೂರಗಾಮಿ ರಾಜಕೀಯ-ಚುನಾವಣಾ ಲೆಕ್ಕಾಚಾರದ ಭಾಗವೇ ಎಂಬುದರ ಉತ್ತರವು ಕಾಂಗ್ರೆಸ್ ಪರ್ಯಾಯದ ಬಗ್ಗೆ ಇರುವ ಆಸೆ-ದುರಾಸೆ-ಹತಾಷೆಗಳನ್ನು ಆಧರಿಸಿರುತ್ತದೆ. ಅದೇನೇ ಇದ್ದರೂ ಕಾಂಗ್ರೆಸ್ ತಪ್ಪು ಮಾಡಿದ್ದು ಹಾಗೂ ಕ್ಷಮೆ ಕೇಳಿದ್ದು ಎರಡೂ ಇತಿಹಾಸ.

ಆದರೆ ಇದೇ ಮಾತನ್ನು ಮೋದಿಯವರ ಬಿಜೆಪಿ ಸರ್ಕಾರದ ಬಗ್ಗೆ ಹೇಳಲು ಸಾಧ್ಯವೇ?

ನರೇಂದ್ರ ಮೋದಿಯವರು ತಮ್ಮ ಉಸ್ತುವಾರಿಯಲ್ಲಿ ನಡೆದ ಗುಜರಾತ್ ನರಮೇಧದ ಬಗ್ಗೆ ಈವರೆಗೆ ಒಂದು ಮಾತಿನ ಪಶ್ಚಾತ್ತಾಪವನ್ನೂ ವ್ಯಕ್ತಪಡಿಸಿಲ್ಲ. ಬದಲಿಗೆ ಗುಜರಾತ್ ಮಾದರಿ ನರಮೇಧವನ್ನು ಅಸ್ಸಾಂ, ಕರ್ನಾಟಕ, ಉತ್ತರ ಪ್ರದೇಶ, ಮಧ್ಯಪ್ರದೇಶವನ್ನೂ ಒಳಗೊಂಡಂತೆ ದೇಶದುದ್ದಕ್ಕೂ ಪ್ರಯೋಗಿಸುತ್ತಿದ್ದಾರೆ .
ಕಳೆದ ಎಂಟು ವರ್ಷಗಳಲ್ಲಿ ಅದರಲ್ಲೂ ವಿಶೇಷವಾಗಿ ಕಳೆದ ಮೂರು ವರ್ಷಗಳಲ್ಲಿ ಮೋದಿ ಸರ್ಕಾರ ಭಾರತವನ್ನು ಎಂಥಾ ಸಾಮಾಜಿಕ, ಆರ್ಥಿಕ ಹಾಗೂ ನೈತಿಕ ಪ್ರಪಾತಕ್ಕೆ ದೂಡಿದೆ ಎಂಬುದನ್ನು ಜಗತ್ತಿನ ಎಲ್ಲಾ ಸ್ವತಂತ್ರ ಮಾಧ್ಯಮಗಳು ಹಾಗೂ ಸಂಸ್ಥೆಗಳು ವರದಿ ಮಾಡುತ್ತಿವೆ. ಅವೆಲ್ಲಕ್ಕಿಂತ ಹೆಚ್ಚಾಗಿ ಭಾರತೀಯರ ಸಾಮಾಜಿಕ-ಆರ್ಥಿಕ ಬದುಕೇ ಕಳೆದ ಎಂಟು ವರ್ಷಗಳ ಮೋದಿ ಆಡಳಿತದ ಪರಿಣಾಮಕ್ಕೆ ಜೀವಂತ ಸಾಕ್ಷಿಗಳಾಗಿವೆ. ಅಷ್ಟು ಮಾತ್ರವಲ್ಲ. ಮೋದಿಯವರ ಆಡಳಿತದಲ್ಲಿ ತೆಗೆದುಕೊಂಡಿರುವ ಅವಿವೇಕದ ಹಾಗೂ ದುಷ್ಟತನದ ಹಲವಾರು ಕ್ರಮಗಳು ಭಾರತದ ಜನರು ವಿಶ್ವದೆದುರು ನಾಚಿಕೆಯಿಂದ ತಲೆತಗ್ಗಿಸುವಂತೆ ಮಾಡಿದೆ.

ಆದರೂ ಮೋದಿಯವರು ಕಳೆದ ಎಂಟು ವರ್ಷಗಳಲ್ಲಿ ಭಾರತದ ಜನರು ತಲೆತಗ್ಗಿಸುವುದಿರಲಿ, ಹೆಮ್ಮೆಯಿಂದ ತಲೆ ಎತ್ತಿ ನಡೆಯುವಂತೆ ಮಾಡಿದ್ದೇನೆ ಎಂದು ಕೊಚ್ಚಿಕೊಂಡಿದ್ದಾರೆ.
ಈ ಲೇಖನದಲ್ಲಿ ಕಳೆದ ಎಂಟು ವರ್ಷಗಳಲ್ಲಿ ಭಾರತವು ಮೋದಿ ಸರ್ಕಾರದ ನಡೆಗಳಿಂದಾಗಿ ವಿಶ್ವದೆದುರು ಹಿಂದೆಂದೂ ಇಲ್ಲದಷ್ಟು ಅವಮಾನಕ್ಕೀಡಾದ ಹಲವೆಂಟು ಪ್ರಕರಣಗಳಲ್ಲಿ ಎಂಟೇ ಎಂಟನ್ನು ನೆನಪಿಸಿಕೊಳ್ಳಲಾಗಿದೆ!

*ಅವಮಾನ-೧: ವಿಶ್ವದೆದುರು ಬೆತ್ತಲಾದ ಅವಿವೇಕಿ ನೋಟು ನಿಶೇಧ*

೨೦೧೬ ರ ನವಂಬರ್ ೮ ರಂದು ಮೋದಿ ಮತ್ತವರ ಆಪ್ತ ಮಂತ್ರಿಗಳು ರಿಸರ್ವ್ ಬ್ಯಾಂಕಿನೊಂದಿಗೂ ಸಮಾಲೋಚಿಸದೆ, ಈ ಹಿಂದಿನ ರಿಸರ್ವ್ ಬ್ಯಾಂಕ್ ಗವರ್ನರ್ ಯಾವ ಕಾರಣಕ್ಕೂ ನೋಟು ನಿಷೇಧದಂಥ ಅವಿವೇಕಿ ಕ್ರಮಕ್ಕೆ ಮುಂದಾಗಬಾರದೆಂದು ಸಲಹೆ ನೀಡಿದ್ದರೂ, ಜಗತ್ತಿನ ಯಾವ ಅನುಭವಗಳನ್ನೂ ಗಣನೆಗೆ ತೆಗೆದುಕೊಳ್ಳದೆ ಚಲಾವಣೆಯಲ್ಲಿದ್ದ ಶೇ.೮೬ ರಷ್ಟು ನೋಟುಗಳನ್ನು ದಿಢೀರ್ ವಾಪಸ್ ತೆಗೆದುಕೊಂಡು ಇಡೀ ಆರ್ಥಿಕತೆಯ ದಿಕ್ಕೆಡಿಸಿದರು.

ಈ ಹುಚ್ಚು ಕ್ರಮವನ್ನು ಐಎಂಎಫ್, ವಿಶ್ವಬ್ಯಾಂಕ್, ಎಡಿಬಿ ಯಂಥ ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಗಳು ಹಾಗೂ ಜಗತ್ತಿನ ಬಹುಪಾಲು ಸ್ವತಂತ್ರ ಆರ್ಥಿಕ ಅಧ್ಯಯನ ಸಂಸ್ಥೆಗಳು ಮಾತ್ರವಲ್ಲ ಸರ್ಕಾರಗಳೂ ಕೂಡಾ ಸ್ಪಷ್ಟವಾಗಿ ಅವಿವೇಕದ ಕ್ರಮವೆಂದೇ ಬಣ್ಣಿಸಿತು.

ಕಪ್ಪುಹಣವನ್ನು ತಡೆಗಟ್ಟಲು ನೋಟುನಿಷೇಧವು ಒಂದು ಪರಿಣಮಕಾರಿ ಕ್ರಮವೇ ಅಲ್ಲ. ಏಕೆಂದರೆ ಈಗ ಕಪ್ಪುಹಣ ಮತ್ತು ಕಪ್ಪು ಸಂಪತ್ತಿನ ಉತ್ಪಾದನೆ, ಸಂಗ್ರಹಣೆ ಮತ್ತು ವರ್ಗಾವಣೆ ನೋಟುಗಳ ಮೂಲಕ ನಡೆಯುವುದೇ ಇಲ್ಲವೆಂದು ಅಂತರರಾಷ್ರೀಯ ಸಮುದಾಯ ಭಾರತಕ್ಕೆ ಕಿವಿಹಿಂಡಿ ಬುದ್ಧಿ ಹೇಳಿತ್ತು. ಅದರೆ ಅವೇಳೆಗಾಗಲೇ ದೂರಗಾಮಿ ಆರ್ಥಿಕ ಅನಾಹುತ ಸಂಭವಿಸಿ ಆಗಿತ್ತು.

ಆದ್ದರಿಂದ ಕೂಡಲೇ ಮೋದಿ ಸರ್ಕಾರ ನೋಟುನಿಷೇಧದ ಉದ್ದೇಶ ಕಪ್ಪುಹಣವನ್ನು ತಡೆಗಟ್ಟುವುದಲ್ಲ, ನೋಟು ಚಲಾವಣೆ ತಗ್ಗಿಸಿ ಡಿಜಿಟಲ್ ಎಕಾನಮಿಗೆ ಭಾರತವನ್ನು ಸಜ್ಜುಗೊಳಿಸುವುದು ಎಂದು ಗುರಿಯನ್ನೇ ಬದಲಿಸಿತು. ಆಗಲೂ ಜಾಗತಿಕ ಸಮುದಾಯ ಡಿಜಿಟಲ್ ಎಕಾನಮಿಯನ್ನು ಹೀಗೆ ಏಕಾಏಕಿ ನೋಟುನಿಷೇಧದ ಮೂಲಕ ಮಾಡಲಾಗದು. ಅದಕ್ಕೆ ಡಿಜಿಟಲ್ ಪರಿಕರಗಳ ಸೌಲಭ್ಯ, ಜನರ ಮನೋಭಾವ, ವಹಿವಾಟು ಸುಗಮತೆ ಎಲ್ಲವನ್ನು ಕಲ್ಪಿಸುತ್ತಾ ಹಂತಹಂತವಾಗಿ ಜಾರಿಮಾಡಬೇಕಾದ ಕ್ರಮ ಎಂದು ತಿಳಿಹೇಳಿತು. . ಭಾರತ ಸರ್ಕಾರದ ಅವಿವೇಕ ಆಗ ಇಡೀ ಜಗತ್ತಿನ ಮುಂದೆ ಬಯಲಾಗಿತ್ತು.

ನೋಟುನಿಷೇಧಕ್ಕೆ ಮುಂಚೆ ಭಾರತದ ಆರ್ಥಿಕತೆಯಲ್ಲಿ ೧೮ ಲಕ್ಷ ಕೋಟಿ ನೋಟುಗಳು ಚಲಾವಣೆಯಲ್ಲಿದ್ದರೆ, ನೋಟು ನಿಷೇಧದ ಆರು ವರ್ಷಗಳ ನಂತರ ಆ ಪ್ರಮಾಣ ಕಡಿಮೆಯಾಗುವುದಿರಲಿ ೩೧ ಲಕ್ಷ ಕೋಟಿಗೆ ಏರಿಕೆಯಾಗಿದೆ! ಸರ್ಕಾರವೊಂದರ ಮುಠಾಳ ನೀತಿಯೊಂದು ದೇಶವನ್ನು ಇಂಥಾ ಸಂಕಷ್ಟಕ್ಕೂ, ಹಾಗೂ ಜಗತ್ತಿನೆದುರು ಇಂಥಾ ಅಪಮಾನಕ್ಕೂ ಎಂದೂ ಗುರಿಮಾಡಿರಲಿಲ್ಲ.

*ಅವಮಾನ-೨: ನಗೆಪಾಟಲಿಗೀಡಾದ ಜಿಎಸ್‌ಟಿ*

ಗೂಡ್ಸ್ ಅಂಡ್ ಸರ್ವೀಸ್ ಟ್ಯಾಕ್ಸ್- ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ ) ಎಂಬುದು ಶ್ರೀ ಸಾಮಾನ್ಯರ ಮೇಲೆ ತೆರಿಗೆ ಹೊರೆ ಜಾಸ್ತಿ ಮಾಡುವ ಪರೋಕ್ಷ ತೆರಿಗೆ ವ್ಯವಸ್ಥೆ. ಈ ವಿಧಾನ ಜಾರಿಗೆ ಬಂದದ್ದೇ ಜನರನ್ನು ಸರಾಗವಾಗಿ ಸುಲಿಯಲೆಂದು. ಹಾಗೂ ದೊಡ್ದ ಉದ್ಯಮ ಹಾಗೂ ದೊಡ್ದ ವ್ಯಾಪಾರಸ್ಥರ ವ್ಯವಹಾರಗಳು ಬಗೆಬಗೆಯ ತೆರಿಗೆ ಗೋಜಲಿಗೆ ಸಿಲುಕದೆ ಸುಗಮವಾಗಿ ನಡೆಯಲೆಂದು.

ಆದ್ದರಿಂದಲೇ ಜಗತ್ತಿನಾದ್ಯಂತ ವ್ಯಾಟ್ ಅಥವಾ ಜಿಎಸ್‌ಟಿ ವ್ಯವಸ್ಥೆ ಜಾರಿ ಮಾಡಿರುವ ದೇಶಗಳು ಒಂದೇ ತೆರಿಗೆ ದರ ಹೆಚ್ಚೆಂದರೆ ಎರಡು ತೆರಿಗೆ ದರಗಳನ್ನು ಹೊಂದಿರುತ್ತವೆ. ಹಾಗೂ ಅವನ್ನು ಜಾರಿ ಮಾಡುವ ಮೊದಲು ಅದರ ಸುಲಭ ಜಾರಿಗೆ ಅಗತ್ಯವಿರುವ ಆಡಳಿತಾತ್ಮಕ ತಯಾರಿ ಹಾಗೂ ಜನರಲ್ಲಿ ಅರಿವನ್ನು ಮೂಡಿಸಿ ನಂತರ ಜಾರಿ ಮಾಡುತ್ತಾರೆ. ಆದರೆ ಭಾರತದಂಥ ವಿವಿಧ ಹಂತದ ಆರ್ಥಿಕ ವಿಕಾಸದ ಘಟ್ಟದಲ್ಲಿರುವ ರಾಜ್ಯಗಳ ಒಕ್ಕೂಟದಲ್ಲಿ ಅಂಬೇಡ್ಕರ್ ಹೇಳಿದಂತೆ ಪರೋಕ್ಷ ತೆರಿಗೆ ಹೆಚ್ಚಳಕ್ಕಿಂತ ಶ್ರೀಮಂತರ ಮೇಲೆ ಹಾಗೂ ಸರಾಸರಿಗಿಂತ ಅಧಿಕ ಹಾಗೂ ನಿಶ್ಚಿತ ಆದಾಯ ಹೊಂದಿರುವ ವರ್ಗಗಳ ಮೇಲೆ ತೆರಿಗೆಯನ್ನು ಹೇರುವುದು ಸೂಕ್ತವಾದ ಪದ್ಧತಿಯಾಗಿತ್ತು.

ಆದರೆ ಅದನ್ನು ನಿರಾಕರಿಸಿ ವ್ಯವಹಾರಸ್ಥರಿಗೆ ಅನುಕೂಲ ಮಾಡಿಕೊಡಲೆಂದು ಜಿಎಸ್‌ಟಿ ವ್ಯವಸ್ಥೆಯನ್ನು ಜಾರಿ ಮಾಡಲು ಮುಂದಾದ ಮೋದಿ ಸರ್ಕಾರ ಅದಕ್ಕೆ ಬೇಕಾದ ತಯಾರಿಯನ್ನೂ ಮಾಡಿಕೊಂಡಿರಲಿಲ್ಲ. ಹಾಗೂ ಜನರಿಗೆ ಅದರ ಅರಿವನ್ನು ಮೂಡಿಸಿರಲಿಲ್ಲ. ಜೊತೆಗೆ ಎಂಟರಿಂದ ಹತ್ತು ಬಗೆಯ ವಿವಿಧ ತೆರಿಗೆ ದರಗಳನ್ನು ವಿಧಿಸಿ ಒಟ್ಟಾರೆ ವಹಿವಾಟನ್ನು ಹಿಂದಿಗಿಂತ ಹೆಚ್ಚಿನ ಗೋಜಲು ಮಾಡಿಟ್ಟಿತು. ಇಷ್ಟೆಲ್ಲಾ ಆಗಿ ತೆರಿಗೆ ಸಂಗ್ರಹವೂ ಹೆಚ್ಚಾಗಲಿಲ್ಲ. ತೆರಿಗೆ ಮೋಸ, ಕಪ್ಪುಹಣ ಏರಿಕೆಗಳೂ ನಿಲ್ಲಲಿಲ್ಲ.

ಅಂತರರಾಷ್ಟ್ರೀಯ ಆರ್ಥಿಕ ಸಮುದಾಯ ಹಾಗೂ ಪರಿಣಿತರೂ ಆಗಲೂ ಮೋದಿ ನೇತೃತ್ವದ ಭಾರತ ಸರ್ಕಾರದ ಅವಿವೇಕ ಹಾಗೂ ದುಡುಕುತನಗಳ ಬಗ್ಗೆ ಬಹಿರಂಗವಾಗಿಯೇ ಟೀಕೆಗಳನ್ನು ಮಾಡಿದ್ದರು. ನೋಟು ನಿಷೇಧದ ಹೊಡೆತದಿಂದ ಚೇತರಿಸಿಕೊಳ್ಳುವ ಮುನ್ನವೇ ಜಿಎಸ್‌ಟಿ ಹೊಡೆತಕ್ಕೆ ಭಾರತವನ್ನು ಗುರಿಮಾಡಿದ ಸಂವೇದನಾ ಶೂನ್ಯತೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದವು.

*ಅವಮಾನ-೩: ರೈತ ಹೋರಾಟವನ್ನು ನಡೆಸಿಕೊಂಡ ರೀತಿಯ ಬಗ್ಗೆ ಜಾಗತಿಕ ಛೀಮಾರಿ*

ಇತ್ತೀಚಿನ ಇತಿಹಾಸದಲ್ಲೆ ಅಭೂತಪೂರ್ವವಾದ ರೈತ ಚಳವಳಿಯೊಂದು ಇದೇ ಮೋದಿ ಅವಧಿಯಲ್ಲಿ ನಡೆಯಿತು. ಒಂದು ವರ್ಷಕ್ಕೂ ಮೀರಿ ಲಕ್ಷಾಂತರ ರೈತರು ರೈತ ವಿರೋಧಿ ಕಾನೂನುಗಳನ್ನು ರದ್ದು ಮಾಡಬೇಕೆಂದು ಆಗ್ರಹಿಸಿ ದೆಹಲಿಯ ಹೊರವಲಯದಲ್ಲಿ ಧರಣಿ ಕೂತಿದ್ದರು. ಒಂದು ಜವಬ್ದಾರಿಯುತ ಸರ್ಕಾರ ಘನತೆಯಿಂದ ಅವರ ಜೊತೆ ಮಾತುಕತೆ ನಡೆಸಿ ತನ್ನ ತಪ್ಪನ್ನು ತಿದ್ದುಕೊಳ್ಳಬೇಕಿತ್ತು. ಆದರೆ ಮೋದಿ ಸರ್ಕಾರ ಪ್ರಾರಂಭದಿಂದಲೂ ಆ ಹೋರಾಟವನ್ನು ಮುರಿಯಲು ತಂತ್ರ-ಕುತಂತ್ರಗಳನ್ನು ಪ್ರಯೋಗಿಸಿತು. ಮುಳ್ಳಿನ ಬೇಲಿ, ಗೂಂಡಾ ದಾಳಿ, ಭಯೋತ್ಪಾದಕರೆನ್ನುವ ಪಟ್ಟಿ, ಒಡಕು ತರುವ ಪ್ರಯತ್ನ, ದುಷ್ಟ ಅಪಪ್ರಚಾರಗಳನ್ನು ನಡೆಸಿತು.

ಅದರೆ ಜಗತ್ತಿನಾದ್ಯಂತ ಈ ರೈತ ಚಳವಳಿಗೆ ಅಪರೂಪದ ಬೆಂಬಲ ದಕ್ಕಿತು. ಕೆನಡಾ, ಅಮೆರಿಕ,ಐರೋಪ್ಯ ಒಕ್ಕೂಟದ ಸಂಸತ್ತುಗಳು ಅಧಿಕೃತವಾಗಿ ರೈತ ಹೋರಾಟವನ್ನು ಬೆಂಬಲಿಸಿ ಮೋದಿ ಸರ್ಕಾರದ ಕ್ರಮಗಳನ್ನು ಟೀಕಿಸಿದವು.

ಇದರ ಜೊತೆಗೆ, ಜಾಗತಿಕ ಸಮುದಾಯಕ್ಕೆ ರೈತ ಚಳವಳಿ ಏಕೆ ನಡೆಯುತ್ತಿದೆ ಎಂಬುದರ ಅರಿವು ಕೊಡುವ ಸಮಗ್ರ ಮಾಹಿತಿ ಕಿಟ್ ಒಂದನ್ನು ಹೋರಾಟಗಾರರ ಬೆಂಬಲಿಗರು ತಯಾರಿಸಿದ್ದರೆ ಮೋದಿ ಸರ್ಕಾರ ಅದನ್ನು ಅಂತರರಾಷ್ಯ್ರೀಯ ಶಡ್ಯಂತ್ರದ ಟೂಲ್ ಕಿಟ್ ಎಂದು ಬಣ್ಣಿಸಿ ದಿಶಾ ರವಿ ಹಾಗೂ ಇನ್ನಿತರ ಕಾರ್ಯಕರ್ತರನ್ನು ದೇಶದ್ರೋಹೀ ಕಾಯಿದೆಯಡಿ ಬಂಧಿಸಿತು. ಇದನ್ನು ಇಡೀ ನಾಗರಿಕ ಜಗತ್ತು ತೀವ್ರವಾಗಿ ಖಂಡಿಸಿತು.
ಪ್ರಾಯಶಃ ಸ್ವತಂತ್ರ ಭಾರತದಲ್ಲಿ ಯಾವೊಂದು ಸರ್ಕಾರವು ಭಾರತವನ್ನು ಇಷ್ಟೊಂದು ಅಪಮಾನಕ್ಕೆ ಗುರಿ ಮಾಡಿರಲಿಲ್ಲ.

*ಅವಮಾನ -೪: ಭೀಮಾ ಕೊರೆಗಾಂವ್ ಬಂಧನಗಳು ಮತ್ತು ಪೆಗಾಸಸ್ ಶಡ್ಯಂತ್ರಗಳು*

೨೦೧೮ರಲ್ಲಿ ಭೀಮಾ-ಕೊರೆಗಂವ್ ಮೇಳದ ಮೇಲೆ ಸಂಘೀ ಗೂಂಡಾಗಳು ಹಂತಕ ದಾಳಿ ನಡೆಸಿದ ನಂತರ ಹಂತಕರನ್ನು ಬಂಧಿಸುವ ಬದಲಿಗೆ ದಾಳಿಗೆ ಗುರಿಯಾದ ದಲಿತರ ಮೇಲೇ ಮಹಾರಾಷ್ಟ್ರದ ಬಿಜೆಪಿ ಸರ್ಕಾರ ದಾಳಿ ನಡೆಸಿತು.

ಆ ನಂತರ ಮೋದಿ ಸರ್ಕಾರ ಆ ಪ್ರಕರಣದ ಸಂಘೀ ರೂವಾರಿಗಳನ್ನು ಬಿಟ್ಟು ಸುಧಾ ಭರದ್ವಾಜ್, ವರವರರಾವ್, ಸ್ಟಾನ್ ಸ್ವಾಮಿ, ಆನಂದ ತೇಲ್ತುಂಬ್ಡೆ, ಹಾಗೂ ಇನ್ನಿತರ ೧೬ ಗಣ್ಯ ಚಿಂತಕರು, ಕವಿಗಳು, ಜನಪರ ವಕೀಲರು ಹಾಗೂ ಹೋರಾಟಗಾರರನ್ನು ಭಯೋತ್ಪಾದಕ ಕಾಯಿದೆಯಡಿ ಬಂಧಿಸಿ ಕಳೆದ ಮೂರು ವರ್ಷಗಳಿಂದ ಜೈಲಿನಲ್ಲಿ ಕೊಳೆಯುವಂತೆ ಮಾಡಿದೆ. ಬಂಧನಕ್ಕೊಳಗಾಗಿದ್ದ ಸಂತ ಪಾದ್ರಿ ಸ್ಟಾನ್ ಸ್ವಾಮಿಯವರು ೮೩ ವಯಸ್ಸಿನ ವೃದ್ಧರಾಗಿದ್ದರೂ, ಅನಾರೋಗ್ಯ ಪೀಡಿತರಾಗಿದ್ದರೂ ಅವರಿಗೆ ನೀರು ಕುಡಿಯಲು ಸ್ಟಾ ಕೂಡ ಕೊಡದೆ ಜೈಲಿನಲ್ಲೇ ಸಾಯುವಂತೆ ಮೋದಿ ಸರ್ಕಾರ ಮಾಡಿತು. ಇದನ್ನು ಜಗತ್ತಿನ ಹಲವಾರು ಸರ್ಕಾರಗಳು ಹಾಗೂ ನಾಗರಿಕ ಜಗತ್ತು ಉಗ್ರವಾಗಿ ಖಂಡಿಸಿತು.

ಕಳೆದ ವರ್ಷ ಪತ್ರಿಕೆಗಳು ಬಯಲು ಮಾಡಿರುವಂತೆ ಇಸ್ರೇಲಿನಿಂದ ಪೆಗಾಸಸ್ ಬೇಹುಗಾರಿಕೆ ತಂತ್ರಜ್ನಾನವನ್ನು ಸಂವಿಧಾನ ಬಾಹಿರವಾಗಿ ಪಡೆದುಕೊಂಡಿರುವ ಮೋದಿ ಸರ್ಕಾರ, ಅದನ್ನು ಈ ಬಂಧಿತರ ವಿರುದ್ಧ ಸುಳ್ಳು ಸಾಕ್ಷ್ಯ ಸೃಷ್ಟಿ ಮಾಡಲು ಬಳಸಿಕೊಂಡಿದೆ.
ಇದೆಲ್ಲದರ ಪರಿಣಾಮವಾಗಿ ಜಾಗತಿಕ ನಾಗರಿಕ ಸ್ವಾತಂತ್ರ್ಯದ ಸೂಚ್ಯಂಕದಲ್ಲಿ ಭಾರತವು ಹಿಂದೆಂದಿಗಿಂತಲೂ ಅತ್ಯಂತ ಹೀನಾಯ ಮಟ್ಟಕ್ಕೆ ಇಳಿದಿದೆ.
ಭಾರತವು ಮೋದಿ ಸರ್ಕಾರಡಿಯಲ್ಲಿ ನಾಚಿಕೆಯಿಂದ ತಲೆತಗ್ಗಿಸುವಂತಾಗಿದೆ.

*ಅವಮಾನ- ೫ : ಉತ್ಪ್ರೇಕ್ಷೆಯೆಂದು ಸಾಬೀತಾದ ಬಾಲಾಕೋಟ್ ದಾಳಿ*

೨೦೧೯ರ ಸಾರ್ವತ್ರಿಕ ಚುನಾವಣೆಗೆ ಕೇವಲ ಕೆಲವು ತಿಂಗಳಿರುವಾಗ ಕಾಶ್ಮೀರದ ಫ಼ುಲ್ವಾಮದಲ್ಲಿ ಉಗ್ರಗಾಮಿಗಳ ದಾಳಿಗೆ ೪೦ ಯೋಧರು ಬಲಿಯಾದರು. ಘಟನೆ ನಡೆದು ಮೂರು ವರ್ಷಗಳಾದರೂ ಇದಕ್ಕೆ ಕಾರಣರಾದವರನ್ನು ಪತ್ತೆ ಮಾಡಲು ಮೋದಿ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಬದಲಿಗೆ ಘಟನೆ ನಡೆದ ಅವಧಿಯಲ್ಲಿ ಮತ್ತು ಆ ಸ್ಥಳದಲ್ಲಿ ಬಿಜೆಪಿ ಸರ್ಕಾರಕ್ಕೆ ಹತ್ತಿರವಿರುವ ಡಿವೈಎಸ್ಪಿ ದವಿಂದರ್ ಸಿಂಗ ರಂಥವರ ನಿಗೂಢ ಓಡಾಟ, ಉಗ್ರಗಾಮಿಗಳನ್ನು ಗಡಿದಾಟಿಸುವ ಪ್ರಯತ್ನದಲ್ಲಿರುವಾಗ ಕಾಶ್ಮೀರ ಪೊಲೀಸರಿಂದ ಅವರ ಬಂಧನ, ನಂತರ ಅವರನ್ನು ದೆಹಲಿ ಕೇಂದ್ರದ ಪೊಲೀಸರಿಗೆ ವರ್ಗಾವಣೆ ಮಾಡಿದ್ದು, ಈಗ ಅವರ ಸುದ್ದಿಯೇ ಗೊತ್ತಾಗದಿರುವುದು ಇವೆಲ್ಲಾ ಘಟನೆಯ ಬಗ್ಗೆ ಹಲವಾರು ಥಿಯರಿಗಳನ್ನು ಹುಟ್ಟುಹಾಕಿದೆ. ಅದರ ಬಗ್ಗೆ ಯಾವುದೇ ಸ್ಪಷ್ಟನೆ ಕೊಡಲೂ ಸರ್ಕಾರ ಮುಂದಾಗಿಲ್ಲ.

ಇದರ ಜೊತೆಗೆ ಫ಼ುಲ್ವಾಮ ಸೇಡನ್ನು ತೀರಿಸಿಕೊಳ್ಳುವ ಭಾರತದ ಆಶಯದ ಭಾಗವಾಗಿ ಮೋದಿ ಆದೇಶದ ಮೇರೆಗೆ ಪಾಕಿಸ್ತಾನದ ಬಾಲಾಕೋಟ್ ನಲ್ಲಿದ್ದ ಉಗ್ರಗಾಮಿ ತರಬೇತಿ ಕೇಂದ್ರದ ಮೇಲೆ ಭಾರತವು ವಾಯುದಾಳಿ ಮಾಡಿ ಧ್ವಂಸಗೊಳಿಸಿದೆ ಎಂದು ೨೦೧೯ರ ಫೆಬ್ರವರ್ರಿ ೨೬ರಂದು ಮೋದಿ ಸರ್ಕಾರ ಘೋಷಿಸಿತು. ಬಿಜೆಪಿ ನಾಯಕ ಯೋಗಿ ಆದಿತ್ಯನಾಥ ಈ ದಾಳಿಯಲ್ಲಿ ೬೦೦ ಉಗ್ರಗಾಮಿಗಳು ಹತರಾದರೆಂದರೆ, ಮೋದಿ ಕ್ಯಾಬಿನೆಟ್ಟಿನ ಒಬ್ಬೊಬ್ಬ ಮಂತ್ರಿಗಳು ಒಂದೊಂದು ಸಂಖ್ಯೆಯನ್ನು ಹೇಳತೊಡಗಿದರು. ವಾಯುಪಡೆಯು ನಿರ್ದಿಷ್ಟವಾಗಿ ಎಷ್ಟು ಉಗ್ರಗಾಮಿಗಳು ಹತರಾದರೆಂದು ಈವರೆಗೆ ಹೇಳಿಲ್ಲ.

ಬದಲಿಗೆ ಅಂತರರಾಷ್ಟ್ರೀಯ ಮಾಧ್ಯಮಗಳು ಸ್ವತಂತ್ರ ತನಿಖೆ ನಡೆಸಿ ಭಾರತದ ಕ್ಷಿಪಣಿಗಳು ಉಗ್ರಗಾಮಿ ಶಿಬಿರದಿಂದ ಎರಡು ಕಿಮಿ ದೂರದಲ್ಲಿ ಬಿದ್ದವು ಎಂದು ವರದಿ ಮಾಡಿದವು.
ಈ ದಾಳಿಯನ್ನು ಮುಂದಿಟ್ಟುಕೊಂಡು ಸುರಕ್ಷಿತ ರಾಷ್ಟ್ರ ಬೇಕೆಂದರೆ ಬಲಿಷ್ಟ ನಾಯಕ ಬೇಕೆಂದು ಓಟುಗಳನ್ನು ಪಡೆದುಕೊಳ್ಳಲು ಬಿಜೆಪಿಗೆ ಸುಲಭವಾಯಿತು.
ಆದರೆ ಈಗಲೂ ಮೋದಿ ಸರ್ಕಾರ ಬಾಲಾಕೋಟ್ ದಾಳಿಯ ಬಗ್ಗೆ ಮಾಡಿಕೊಂಡ ಅತ್ಯುತ್ಪ್ರೇಕ್ಷಿತ ಪ್ರಚಾರಗಳಿಂದ ಅಂತರರಾಶ್ಟ್ರೀಯ ಮಟ್ಟದಲ್ಲಿ ಭಾರತ ಮುಜುಗುರಕ್ಕೆ ಒಳಗಾಗುತ್ತಲೇ ಇದೆ.

*ಅವಮಾನ ೬- : ಸಿಎಎ-ಎನ್‌ಆರ್‌ಸಿ, ಆರ್ಟಿಕಲ್ ೩೭೦ ರದ್ದು-ಕೆಳಗಿಳಿದ ಭಾರತದ ಘನತೆ*

ಇಡೀ ಜಗತ್ತಿನಲ್ಲಿ ಭಾರತದಷ್ಟು ವೈವಿಧ್ಯಮಯವಾದ ಸಮಾಜ ಬೇರೆಲ್ಲೂ ಇಲ್ಲ. ಹೀಗಾಗಿ ಇಲ್ಲಿ ಪ್ರಜಾತಂತ್ರ ಉಳಿಯುವುದೋ ಇಲ್ಲವೋ ಎಂದು ಇಡೀ ಜಾಗತಿಕ ಸಮುದಾಯ ಗಮನಿಸುತ್ತಿತ್ತು. ಆದರೆ ಇಲ್ಲಿ ಹುಟ್ಟುವ ಪ್ರತಿಯೊಬ್ಬರಿಗೂ ಜಾತಿ, ಧರ್ಮ, ಲಿಂಗ , ವರ್ಣ ಬೇಧವಿಲ್ಲದೆ ಸಮಾನವಾದ ನಾಗರೀಕತ್ವ ಹಾಗೂ ನಾಗರಿಕ ಹಕ್ಕುಗಳನ್ನು ಸಂವಿಧಾನ ಕೊಡಮಾಡಿದೆ. ಅದರಿಂದಾಗಿಯೇ ವೈವಿಧ್ಯತೆಯ ನಡುವೆಯೂ ಏಕತೆ ಮತ್ತು ಘನತೆಯಿಂದ ಭಾರತ ಸಮಾಜ ಬಾಳಲು ಸಾಧ್ಯವಾಗುವ ಸಾಂವಿಧಾನಿಕ ಅವಕಾಶ ದಕ್ಕಿದೆ.
ಆದರೆ ೯೦ರ ದಶಕದಿಂದಾಚೆಗೆ ಇಲ್ಲಿ ಅಲ್ಪಸಂಖ್ಯಾತರು ಅದರಲೂ ಮುಸ್ಲಿಮರು ಸಮಾನ ನಾಗರಿಕರಾಗಿ ಸಮಾಜದಲ್ಲಿ ಬಾಳ್ವೆ ಮಾಡಲು ಸಾಧ್ಯವಾಗದ ಪರಿಸ್ಥಿತಿ ನಿಧಾನವಾಗಿ ಸೃಷ್ಟಿಯಾಗಲು ಪ್ರಾರಂಭಿಸಿತು. ಆದರೂ ಈವರೆಗೆ ಕನಿಷ್ಟ ಕಾನೂನಿನಲ್ಲಾದರೂ ಸಮಾನತೆಯಿತ್ತು.

ಆದರೆ ಮೋದಿ ಸರ್ಕಾರ ೨೦೧೯ರಲ್ಲಿ ಎರಡನೆ ಬಾರಿ ಅಧಿಕಾರಕ್ಕೆ ಬಂದಮೇಲೆ ಸಿಎಎ-ಎನ್‌ಪಿಅರ್-ಎನ್‌ಅರ್‌ಸಿ ಕಾಯಿದೆಗಳನ್ನು ಜಾರಿಗೆ ತಂದು ಈ ದೇಶದಲ್ಲಿ ಮುಸ್ಲಿಮರಿಗೆ ಸರಿಸಮಾನವಾದ ನಾಗರೀಕತ್ವವನ್ನು ನಿರಾಕರಿಸಿದೆ. ಅದೇರೀತಿ ಆರ್ಟಿಕಲ್ ೩೭೦ ಅನ್ನು ರದ್ದುಗೊಳಿಸಿ, ಕಾಶ್ಮೀರಕ್ಕಿದ್ದ ರಾಜ್ಯದ ಸ್ಥಾನಮಾನವನ್ನೂ ಕಸಿದು, ಅಲ್ಲಿನ ರಾಜಕೀಯ ನಾಯಕರುಗಳನ್ನೆಲ್ಲಾ ಬಂಧನದಲ್ಲಿರಿಸಿ, ಇಂತರ್‌ನೆಟ್ ಅನ್ನು ವರ್ಷಾನುಗಟ್ಟಲೇ ಕಸಿದು ಸಮೂಹ ಜೀವನ ಇಲ್ಲದಂತೆ ಮಾಡಿದೆ. ಇತ್ತೀಚೆಗೆ ಯಾವುದೇ ರಾಜಕೀಯ ಪ್ರಕ್ರಿಯೆಗಳನ್ನೇ ನಡೆಸದೆ ಅತ್ಯಂತ ತಾರತಮ್ಯದಿಂದ ಕ್ಷೇತ್ರ ವಿಂಗಡನೆ ಮಾಡಿ ಕಾಶ್ಮೀರದ ಅಸ್ಮಿತೆ ಮತ್ತು ಅಸ್ಥಿತ್ವವನ್ನು ಮೋದಿ ಸರ್ಕಾರ ಛಿದ್ರಗೊಳಿಸಿದೆ.

ಈ ಎರಡೂ ಬೆಳವಣಿಗೆಗಳು ಭಾರತದ ಪ್ರಜಾಸತ್ತೆಯನ್ನೇ ಜಾಗತಿಕ ಸಮುದಾಯ ಅನುಮಾನದಿಂದ ನೋಡುವಂತೆ ಮಾಡಿದೆ. ಭಾರತವು ಪ್ರಜಾತಂತ್ರವಲ್ಲ-ಅರೆ ಪ್ರಜಾತಂತ್ರ ಎಂದು ಘೋಷಿಸುವಂತೆ ಮಾಡಿದೆ.
೧೯೪೭ರ ನಂತರ ಭಾರತಕ್ಕೆ ಇಂಥಾ ಅಪಮಾನವಾಗಿರಲಿಲ್ಲ.

*ಅವಮಾನ ೭: ಲಾಕ್‌ಡೌನ್ ಹೇರಿಕೆ ಮತ್ತು ಸಾವುಗಳ ನಿರಾಕರಣೆಯಿಂದ ಹರಜಾದ ಭಾರತದ ಮಾನ*

ಕೋವಿಡ್ ಸಾಂಕ್ರಾಮಿಕ ವಿಶ್ವಕ್ಕೆಲ್ಲಾ ವ್ಯಾಪಿಸಿದರೂ ಎಲ್ಲಾ ದೇಶದ ಜನರು ಒಂದೇ ರೀತಿಯ ಬಾಧೆಗೆ ಒಳಪಟ್ಟಿಲ್ಲ. ಯಾವ ದೇಶಗಳಲ್ಲಿ ಹಿಂದಿನಿಂದಲೂ ಸಮರ್ಥವಾದ ಸಾರ್ವತ್ರಿಕ ವೈದ್ಯಕೀಯ ವ್ಯವಸ್ಥೆಯಿತ್ತೋ ಆ ದೇಶಗಳು ಮೊದಲಲ್ಲಿ ಸಾಕಷ್ಟು ಸಾವು-ನೋವುಗಳನ್ನು ಅನುಭವಿಸಿದರೂ ಬಹುಬೇಗ ಚೇತರಿಸಿಕೊಂಡವು. ಅದರಲೂ ಕೋವಿಡ್ ಗೆ ಲಸಿಕೆಯನ್ನು ಕಂಡುಹಿಡಿದ ಮೇಲೆ ತಮ್ಮ ದೇಶದ ಆರೋಗ್ಯವನ್ನು ಭದ್ರ ಮಾಡಿಕೊಂಡವು.

ಆದರೆ ಯಾವ ದೇಶಗಳಲ್ಲ್ಲಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಹಿಂದಿನಿಂದಲೂ ತುಂಬಾ ಅಸಮರ್ಪಕವಾಗಿತ್ತೂ ಆ ದೇಶಗಳಲ್ಲಿ ಕೋವಿಡ್ ಪರಿಣಾಮ ತೀವ್ರವಾಯಿತು. ಆದರೆ ಅಂಥಾ ಕೆಲವು ದೇಶಗಳಲ್ಲೂ ಜವಾಬ್ದಾರಿಯುತ ಪ್ರಜಾತಾಂತ್ರಿಕ ಸರ್ಕಾರ ಇದ್ದಾಗ ಸಾವು-ನೋವುಗಳ ಪ್ರಮಾಣವನ್ನು ಸಾಧ್ಯವಾದ ಮಟ್ಟಿಗೆ ನಿಯಂತ್ರಣಕ್ಕೆ ತರಲು ಸಾಧ್ಯವಾಯಿತು.

ಆದರೆ ಭಾರತದಲ್ಲಿ ಕೋವಿಡ್ ಅಪ್ಪಳಿಸಿದಾಗ ಬಲವಾದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯೂ ಇರಲಿಲ್ಲ. ಜವಾಬ್ದಾರಿಯುತ ಪ್ರಜಾತಂತ್ರಿಕ ಸರ್ಕಾರವೂ ಇರಲಿಲ್ಲ. ಹೀಗಾಗಿ ಭಾರತದ ಜನತೆ ಒಂದೆಡೆ ಕೋವಿಡ್ ಇನೊಂದೆಡೆ ಮೋದಿ ಸರ್ಕಾರದ ದಮನಕಾರಿ ಮತ್ತು ಅವಿವೇಕದ ಲಾಕ್‌ಡೌನ್ ಎಂಬ ಎರಡೂ ದಾಳಿಗಳನ್ನು ಏಕಕಾಲದಲ್ಲಿ ಎದುರಿಸಬೇಕಾಯಿತು. ಇದರಿಂದಾಗಿ ಜಗತ್ತಿನಲ್ಲೇ ಅತಿಹೆಚ್ಚು ಕೋವಿಡ್ ಸಾವುಗಳು ಭಾರತದಲ್ಲಿ ಸಂಭವಿಸಿದೆ. ಆದರೆ ಭಾರತ ಸರ್ಕಾರ ಸಾವುಗಳ ಸಂಖ್ಯೆಯನ್ನು ಮುಚ್ಚಿಟ್ಟು ಭಾರತದ ಹಿರಿಮೆಯನ್ನು ಉಳಿಸಿಕೊಳ್ಳಲು ಯತ್ನಿಸುತ್ತಿದೆ. ಮೋದಿ ಸರ್ಕಾರ ಸಾವಿನ ಸಂಕ್ಯೆಯನ್ನು ಕೇವಲ ೪ ಲಕ್ಷ ಎಂದು ಹೇಳುತ್ತಿದ್ದರೂ ಸರ್ಕಾರದ ಇತರೇ ಅಂಕಿಅಂಶಗಳನ್ನೇ ಮುಂದಿಟ್ಟು ಅಂತರರಾಷ್ಟ್ರೀಯವಾಗಿ ಪ್ರತಿಷ್ಟಿತವಾದ ಲಾನ್ಸೆಟ್ ನಂಥ ಸಂಸ್ಥೆಗಳು ಭಾರತದಲ್ಲಿ ಕೋವಿಡ್ ಸಾವಿನ ಸಂಖ್ಯೆ ಏನಿಲ್ಲ ಎಂದರೂ ೫೦ ಲಕ್ಷ ಎಂದು ಹೇಳುತ್ತಿವೆ.

ಮೋದಿ ಸರ್ಕಾರ ಈ ವಿಷಯದಲ್ಲಿ ತೋರುತ್ತಿರುವ ಭಂಡತನದಿಂದಾಗಿ ಭಾರತ ಇಡೀ ಜಗತ್ತಿನೆದುರು ತಲೆತಗ್ಗಿಸಬೇಕಾಗಿ ಬಂದಿದೆ.

*ಅವಮಾನ ೮: ಭಾರತವನ್ನು ಅಮೆರಿಕದ ೫೧ನೇ ರಾಜ್ಯ ಮಾಡಿಬಿಟ್ಟ ಪ್ರಧಾನಿ ಮೋದಿ*

ಪ್ರಾಯಶಃ ಜಗತ್ತಿನ ಯಾವುದೇ ಸಾರ್ವಭೌಮಿ ರಾಷ್ಟ್ರದ ಪ್ರಧಾನಿಗಳು ಮಾಡದ ಅಪಚಾರವನ್ನು ಮೋದಿಯವರು ಭಾರತ ಸ್ವಾಭಿಮಾನಕ್ಕೆ ಮಾಡಿದ್ದಾರೆ. ಜಗತ್ತಿನ ಯಾವುದೇ ಸರ್ಕಾರದ ಮುಖ್ಯಸ್ಥ ಮತ್ತೊಂದು ದೇಶಕ್ಕೆ ಅತಿಥಿಯಾಗಿ ಹೋದಾಗ ಆ ದೇಶದ ರಾಜಕಾರಣದಲ್ಲಿ ಮೂಗುತೂರಿಸುವುದಿಲ್ಲ. ತೂರಿಸಬಾರದು.

ಆದರೆ ಅಮೆರಿಕವು ಚುನಾವಣೆಯ ಹೊಸ್ತಿಲಲ್ಲಿದ್ದಾಗ ಅಮೆರಿಕಕ್ಕೆ ಭೇಟಿ ಕೊಟ್ಟ ಮೋದಿ, ಅಲ್ಲಿನ ಭಾರತೀಯ ಅಮೆರಿಕನ್ನರನ್ನುದ್ದೇಶಿಸಿ ಮಾತಾಡುವಾಗ ” *ಅಬ್ ಕಿ ಬಾರ್ ಟ್ರಂಪ್ ಕಿ ಸರ್ಕಾರ್”* ಎಂದು ಘೋಷಿಸಿ ಟ್ರಂಪಿಗೆ ಓಟುಹಾಕಲು ಮನವಿ ಮಾಡಿದರು. ಅಮೆರಿಕದಲ್ಲಿ ೫೦ ರಾಜ್ಯಗಳಿದ್ದು ಅದರ ಮುಖ್ಯಸ್ಥರು ಚುನಾವಣೆಯ ಸಂದರ್ಭದಲ್ಲಿ ತಮ್ಮ ರಾಜಕೀಯಕ್ಕೆ ತಕ್ಕಂತೆ ತಮ್ಮ ಪಕ್ಷಕ್ಕೆ ಮತಹಾಕಲು ಕೇಳುತ್ತಾರೆ. ಆದರೆ ಮೋದಿಯವರು ಬೇರೆ ದೇಶಕ್ಕೆ ಸೇರಿದ್ದರೂ ಟ್ರಂಪಿಗೆ ಮತಹಾಕಲು ಕೇಳಿ ಭಾರತವನ್ನು ಅಮೆರಿಕದ ೫೧ ನೇ ರಾಜ್ಯವನ್ನಾಗಿ ಮಾಡಿ ಭಾರತಕ್ಕೆ ಅಪಮಾನ ಮಾಡಿದರು.

ಇವು ಮೋದಿಯವರ ಎಂಟು ವರ್ಷಗಳ ಅವಧಿಯಲ್ಲಿ ಭಾರತೀಯರು ಜಗತ್ತಿನೆದುರು ನಾಚಿಕೆಯಿಂದ ತಲೆ ತಗ್ಗಿಸಿ ನಿಲ್ಲಬೇಕಾಗಿ ಬಂದ ಹಲವೆಂಟು ಘಟನೆಗಳಲ್ಲಿ ಎಂಟೇ ಎಂಟು ಪ್ರಮುಖ ಪ್ರಕರಣಗಳು.

ಇದಲ್ಲದೆ ಜಗತ್ತಿನಲ್ಲಿ ನರಮೇಧದ ಸಾಧ್ಯತೆ ಹೆಚ್ಚಿರುವ ದೇಶಗಳ ಬಗ್ಗೆ ಅಧ್ಯಯನ ಮಾಡುವ ” *ಜಿನೋಸೈಡ್ ವಾಚ್”* ಎಂಬ ಸಂಸ್ಥೆ ಕಳೆದ ವರ್ಷ ಜಗತ್ತಿನಲ್ಲಿ ನರಮೇಧ ನಡೆಯಬಹುದಾದ ಸಾಧ್ಯತೆ ಇರುವ *ಎರಡು ಪ್ರಮುಖ ದೇಶಗಳಲ್ಲಿ ಭಾರತವೂ ಒಂದು ಎಚ್ಚರಿಸಿದೆ.*

ಜಗತ್ತಿನಲ್ಲಿ ಪ್ರಜಾತಂತ್ರಗಳ ಪರಿಸ್ಥಿತಿಗಳ ಬಗ್ಗೆ ಅಧ್ಯಯನ ಮಾಡು ಸ್ವೀಡನ್ನಿನ *ವಿ-ಡೆಮ್* ಸಂಸ್ಥೆ ಭಾರತವನ್ನು ಸತತವಾಗಿ ಮೂರನೇ ವರ್ಷ ಪ್ರಜಾತಂತ್ರವಲ್ಲ ಬದಲಿಗೆ *ಚುನಾವಣಾ ಸರ್ವಾಧಿಕಾರಿ* ರಾಷ್ಟ್ರವೆಂದು ಹೆಸರಿಸಿದೆ.

ಪತ್ರಿಕಾ ಸ್ವಾತಂತ್ರ್ಯದ ಸೂಚ್ಯಂಕದಲ್ಲಿ ಅತ್ಯಂತ ಅಪಾಯಕಾರಿ ೩೦ ದೇಶಗಳಲ್ಲಿ ಎಂದು ಪರಿಗಣಿಸಲ್ಪಟ್ಟಿದೆ.

ಇವಲ್ಲದೆ ಭಾರತದ ಜನಜೀವನದ ಪರಿಸ್ಥಿತಿಯನ್ನು ಸೂಚಿಸುವ *೪೫ ಸೂಚ್ಯಂಕಗಳಲ್ಲಿ ಭಾರತವು ಕಳೆದ ಎಂಟು ವರ್ಷಗಳಿಂದ ೪೧ ಸೂಚ್ಯಂಕಗಳಲ್ಲಿ ಸತತವಾಗಿ ಕುಸಿಯುತ್ತಿದೆ* ಎಂದು ಚಿಂತಕ ಆಕಾರ್ ಪಟೇಲ್ ಅವರು ತಮ್ಮ ” *ಮೋದೀಸ್ ಇಯರ್ಸ್”* ಪುಸ್ತಕದಲ್ಲಿ ತೋರಿಸಿಕೊಟ್ಟಿದ್ದಾರೆ.

ಆದ್ದರಿಂದಲೇ ಜಗತ್ತಿನಾದ್ಯಂತ ಸ್ವತಂತ್ರ ಸಂಸ್ಥೆಗಳು ಮತ್ತು ಪ್ರಜಾತಾಂತ್ರಿಕ ಸರ್ಕಾರಗಳು ಟ್ರಂಪಿನ ಅಮೆರಿಕ, ಅರ್ವಾಧಿಕಾರಿ ಪುಟಿನ್ ನ ರಷ್ಯಾ, ಸರ್ವಾಧಿಕಾರಿ ಎರ್ಡೋಗಾನ್ ನ ಟರ್ಕಿ, ಹಾಗೂ ನಿರಂಕುಶ ಒರ್ಬಾನ್ ನ ಹಂಗೆರಿಯ ಜೊತೆ ಹೋಲಿಸುತ್ತಾರೆ.

ಸ್ವಾತಂತ್ರ್ಯಾ ನಂತರದಲ್ಲೇ ಭಾರತವು ಎಂದೂ ಜಗತ್ತಿನೆದುರು ಇಷ್ಟೊಂದು ನಾಚಿಕೆ ಹಾಗೂ ಮುಜುಗರಗಳಿಂದ ತಲೆತಗ್ಗಿಸಿ ನಿಲ್ಲುವ ಸಂದರ್ಭ ಬಂದಿರಲಿಲ್ಲ.

*ಮೋದಿ ಹೈತೋ ಮುಮ್ಕಿನ್* ಹೈ !

ಎಷ್ಟು ನಿಜ!!

– ಶಿವಸುಂದರ್


shivasundar
9448659774