ಉಡುಪಿ ಸಹಬಾಳ್ವೆಯ ಸಮಾವೇಶ ಯಶಸ್ವಿಯಾಗಿ ಮುಗಿದಿದೆ..
ಸಹಬಾಳ್ವೆಯು ಕರ್ನಾಟಕದ ಪರಂಪರೆಯಷ್ಟೇ ಅಲ್ಲ, ವರ್ತಮಾನವೂ ಹೌದು, ಮುಂದೂ ಇರಲಿದೆ ಎಂಬ ಆಶಯವನ್ನು ಸಾಕಾರ ಮಾಡುವ ಜವಾಬ್ದಾರಿ ನನ್ನದು, ನಮ್ಮದು, ನಮ್ಮೆಲ್ಲರದ್ದು ಎನಿಸುತ್ತದೆ.

ಉಡುಪಿಗೆ ಹೋಗಲಾಗಲಿಲ್ಲ; ಹೋಗಿದ್ದವರ, ಆ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದವರ ಅನುಭವ, ಉತ್ಸಾಹಗಳನ್ನು ಕೇಳಿದರೆ ಸಮಾವೇಶವಾಗಿ ಅದೊಂದು ಸಾರ್ಥಕ ಕಾರ್ಯಕ್ರಮ. ಅದು ಮುಸ್ಲಿಮರ ಸಮಾವೇಶವಾಗಲಿಲ್ಲ; ಕರ್ನಾಟಕದ ಉದ್ದಗಲದಿಂದ ಬಂದ ಜನರು ಭಾಗವಹಿಸಿದ್ದಷ್ಟೇ ಅಲ್ಲ; ಸ್ಥಳೀಯ ಜನರೇ ಬಹುತೇಕ ಜೊತೆಗೂಡಿದ ರೀತಿ ವಿಶೇಷ. ಸಮಾವೇಶವೆಂಬ ಒಂದು ದಿನದ ಕಾರ್ಯಕ್ರಮಕ್ಕೆ ಪೂರಕವಾಗಿ ಉಡುಪಿ ಜಿಲ್ಲೆಯ ಎಲ್ಲಾ ದೊಡ್ಡ ಊರುಗಳಲ್ಲಿ ಆದ ತಯಾರಿಯೂ ಅದಕ್ಕೆ ಕಾರಣ. ಇವೆಲ್ಲಕ್ಕೂ ಕಾರಣರಾದವರಿಗೆ ಅಭಿನಂದನೆಗಳು.

ಹೊಸದೊಂದು ಆರಂಭಕ್ಕೆ ಕೆಲವೊಮ್ಮೆ ದೊಡ್ಡ ಸದ್ದು, ಉತ್ಸಾಹದ ಶುರುವಾತಿನ ಅಗತ್ಯವಿರುತ್ತದೆ. ಅದರಲ್ಲೂ ನಿರಾಶಾದಾಯಕ ಪರಿಸ್ಥಿತಿಯಲ್ಲಿದ್ದಾಗ. ನಾವಿಷ್ಟೊಂದು ಜನ ಜೀವಪರ ಆಲೋಚನೆಯವರಿದ್ದೇವೆ ಎಂಬ ಭರವಸೆಯನ್ನು ಅದು ಮೂಡಿಸುತ್ತದೆ. ಎಲ್ಲಾ ಕಾಲದಲ್ಲೂ ಬಹುಸಂಖ್ಯಾತರಾಗಿರುವ ಸಜ್ಜನರ ನಿರುತ್ಸಾಹ ಹಾಗೂ ಶಕ್ತಿಹೀನತೆಯೇ ದೊಡ್ಡ ತಡೆ. ಉಡುಪಿಯ ಸಹಬಾಳ್ವೆ ಸಮಾವೇಶವು ಅದನ್ನು ಒಂದಷ್ಟು ಮಟ್ಟಿಗೆ ನಿವಾರಿಸಿದರೆ ದೊಡ್ಡ ಸಾಧನೆಯೇ ಸರಿ.

ಈ ಒಂದು ತಿಂಗಳ ಆಸುಪಾಸಿನಲ್ಲಿ ರಾಜ್ಯದ ಹಲವು ಭಾಗಗಳಲ್ಲಿ ಇಂತಹ ಹಲವು ಕಾರ್ಯಕ್ರಮಗಳು ನಡೆದಿವೆ; ಈಗಲೂ ತಿಂಥಿಣಿಯಲ್ಲಿ ಒಂದು ಸಾಂಸ್ಕೃತಿಕ ಪ್ರಕ್ರಿಯೆಗೆ ಚಾಲನೆ ಕೊಡುವ ಕೆಲಸ ಆಗುತ್ತಿದೆ. ಎಲ್ಲವೂ ತಮ್ಮದೇ ರೀತಿಯಲ್ಲಿ ವಿಶಿಷ್ಟವಾದವು; ಒಂದು ಮತ್ತೊಂದಕ್ಕೆ ಪೂರಕವಾದದ್ದು.

ಆ ಎಲ್ಲವನ್ನೂ ಸಾಧ್ಯವಾಗಿಸಿದವರಿಗೆ ಸಲಾಂ. ಈಗ ಅಲ್ಲಿಂದ ಮುಂದಕ್ಕೆ ಹೋಗುವ ಸಮಯ. ಕಾರ್ಯಕ್ರಮಗಳಲ್ಲಿ ಭಾಗಿಯಾದವರು, ಆಯೋಜಿಸಿದವರು, ಹೋಗಲಾಗದವರು ಸೇರಿದಂತೆ ಎಲ್ಲರ ಜವಾಬ್ದಾರಿ. ಮುಖ್ಯವಾಗಿ ಕರ್ನಾಟಕದ ವರ್ತಮಾನವೂ ಸಹಬಾಳ್ವೆಯದ್ದೇ ಎಂಬುದನ್ನು ಸಾಬೀತು ಮಾಡುವ ಪ್ರಕ್ರಿಯೆಯಲ್ಲಿ ನಮಗೆ ಸಾಧ್ಯ ಇರುವ ರೀತಿಯಲ್ಲಿ ತೊಡಗುವುದು. ಇದು ನಿಜವನ್ನು ನಿಜ ಎಂದು ಮತ್ತೆ ಮತ್ತೆ ಹೇಳಬೇಕಾದ ಕಾಲವಾದ್ದರಿಂದ, ಅದನ್ನು ಸುಳ್ಳೆಂದು ಹೇಳುವವರ ಹುನ್ನಾರದಿಂದ ವಿಚಲಿತರಾಗದೇ, ಮತ್ತೆ ಮತ್ತೆ ಹೇಳಲು ಮುಂದಾಗುತ್ತಲೇ ಇರಬೇಕು. ಅಂತಿಮವಾಗಿ ಕರ್ನಾಟಕದ ಜನರ ಮನೋಲೋಕದಲ್ಲಿ ಸತ್ಯ, ಪ್ರೀತಿ ಹಾಗೂ ನ್ಯಾಯ ಎಂಬ ಮೌಲ್ಯಗಳೇ ಮೇಲುಗೈ ಸಾಧಿಸಬೇಕು.

ಅದಕ್ಕೆ ಸಮಾವೇಶಗಳು, ಕಾರ್ಯಕ್ರಮಗಳು ಕೆಲವೊಮ್ಮೆ ಆರಂಭ, ಕೆಲವೊಮ್ಮೆ ಪುನರ್‌ ಆರಂಭ – ಅವೇ ಅಂತಿಮವಲ್ಲ. ಆದರೆ ಸಮಾವೇಶಗಳು ಹಲವು ಸಾರಿ ಸುಸ್ತು ಮಾಡಿಸುತ್ತವೆ; ತೃಪ್ತಿಯನ್ನೂ ತಂದುಬಿಡುತ್ತವೆ. ಅಹಂಅನ್ನೂ ಸಹಾ.

ಯಾರನ್ನೂ ದೂರದೇ, ಯಾರ್ಯಾರು ಎಷ್ಟೆಷ್ಟು ಕೆಲಸ ಮಾಡಿದ್ದಾರೋ ಅಷ್ಟಷ್ಟಕ್ಕೆ ಅವರಿಗೆ ಕೃತಜ್ಞರಾಗಿರುತ್ತಾ ಮುಂದೆ ಸಾಗುವ ಕಾಲವಿದೆಂದು ವ್ಯಕ್ತಿಗತವಾಗಿ ನಾನಂದುಕೊಂಡಿದ್ದೇನೆ.

ಇನ್ನೂ ಒಮ್ಮೆ ಹೇಳಬೇಕೆನಿಸಿದ್ದು.. ಕರ್ನಾಟಕದ ವರ್ತಮಾನದಲ್ಲಿ ಬಹುತೇಕ ಜನರು ಸಹಬಾಳ್ವೆಯಿಂದಲೇ ಬದುಕುತ್ತಿದ್ದಾರೆ. ಅದನ್ನು ಮತ್ತೆ ಮತ್ತೆ ಹೇಳುವ, ಸಾಬೀತುಪಡಿಸುವ ಕೆಲಸವಷ್ಟೇ ಆಗಬೇಕಿದೆ

ಉಡುಪಿಯೂ ಸೇರಿದಂತೆ ಹಲವೆಡೆ ಅದಕ್ಕೆ ಪೂರಕವಾದ ಕೆಲಸವನ್ನು ಮಾಡುತ್ತಿರುವ ಎಲ್ಲರಿಗೂ ಅಭಿನಂದನೆಗಳು.

ಬರಹ, ವಾಸು ಎಚ್ ವಿ

 

*ಕರುನಾಡಿಗೆ ಕಿವಿಮಾತು ಹೇಳಿತೇ ಕಡಲನಾಡು?*

“ನೂರ್ ನೀವೆಲ್ಲರೂ ಹೇಳಿದ್ರಿ…ಆದರೆ ಇಷ್ಟು ಮ್ಯಾಸಿವ್ ಆಗಿ ನಡಿಯುತ್ತೆ ಅಂತ ನಾನಂದುಕೊಂಡಿರಲಿಲ್ಲ. It was amazing” – ವೇದಿಕೆ ಮೇಲಿಂದ ಇಳಿದ ಕೂಡಲೇ ಸಮಾವೇಶದ ಅಧ್ಯಕ್ಷರಾಗಿದ್ದ ಸಸಿಕಾಂತ್ ಸೆಂದಿಲ್ ಮಾಡಿದ ಉದ್ಗಾರ. ಇದು ಅವರಬೊಬ್ಬರ ಮಾತಾಗಿರಲಿಲ್ಲ. ಸಮಾರಸ್ಯ ನಡಿಗೆಯಲ್ಲಿ ಮತ್ತು ಸಹಬಾಳ್ವೆ ಸಮಾವೇಶದಲ್ಲಿ ಪಾಲ್ಗೊಂಡ ಸಮಸ್ತರ, ಅದನ್ನು ಫೇಸ್ಬುಕ್ ಲೈವ್ನಲ್ಲಿ ವೀಕ್ಷಿಸಿದ ರಾಜ್ಯದೆಲ್ಲೆಡೆಯ ಮಿತ್ರರ, ನಾವು ಕಳುಹಿಸಿದ ವರದಿಗಳನ್ನು ನೋಡಿ ಪ್ರತಿಕ್ರಿಯಿಸಿದ ಬೇರೆ ಬೇರೆ ರಾಜ್ಯದ ಮಿತ್ರರೆಲ್ಲರ ಏಕಾಭಿಪ್ರಾಯ. ವಿಶೇಷ ಅತಿಥಿಯಾಗಿ ಆಗಮಿಸಿದ್ದ ಯೋಗೇಂದ್ರ ಯಾದವ್, ಅವರ ಪತ್ರಿ ಮಧುನಿಕ, ಎಲ್ಲಾ ಸ್ವಾಮೀಜಿಗಳು, ಫಾದರ್ಗಳು, ಮೌಲಾಗಳು, ಪತ್ರಕರ್ತರು, ಕಡೆಗೆ ಉಡುಪಿಯ ಅಧಿಕಾರಿಗಳು ಎಲ್ಲರಿಂದಲೂ ಇದೇ ಸಂತಸದ ಅಚ್ಚರಿ. ದ್ವೇಷದ ಕಾರ್ಪೋರೇಟ್ ಬಾಂಬಿಂಗಿನಿಂದ ನಲುಗಿಹೋಗಿದ್ದ ಉಡುಪಿ ಪ್ರೀತಿಯ ಪತಾಕೆ ಹಿಡಿದು ಶಾಂತವಾಗಿ ಆದರೆ ಧೃಡಚಿತ್ತವಾಗಿ ಎದ್ದು ನಿಂತಿತು. ನೋಡನೋಡತ್ತಿದ್ದಂತೆ ಜೀವ ಸಂಚನವಾಗಿತ್ತು. ಹೊಸಗಾನ ಹೊಮ್ಮಿತ್ತು. ವಿವಿಧ ಬಣ್ಣಗಳ ಹೊಂಗಿರಣ ಮೂಡಿತ್ತು.

*ಅಪಾರ ಶ್ರಮವಿಲ್ಲದೆ ಇದು ಸಾಧ್ಯವಾಗಿಲ್ಲ. ಕಠಿಣ ಶ್ರಮ ಇದರ ಹಿಂದೆ ಅಡಗಿದೆ. ಅದರ ಬಗ್ಗೆ ನಂತರ ಹೇಳುತ್ತೇನೆ. ಆದರೆ ಇದು ಕೇವಲ ಶ್ರಮ ಹಾಕಿದ್ದರಿಂದಾಗಿ ಆಗಿದ್ದಲ್ಲ. ಈ ಚೈತನ್ಯವನ್ನು ಅನಾವರಣಗೊಳಿಸಿದ ಬೇರೊಂದು ಎಲಿಮೆಂಟ್ ಇದರಲ್ಲಿದೆ. ಸಾಮಾಜಿಕ ಕಾರ್ಯಕರ್ತರಾದ ನಮಗೆ ಅದು ಬಹಳ ಮುಖ್ಯವಾದುದು.* ಸಂದರ್ಭದ ನಾಡಿ ಹಿಡಿದದ್ದು ಉಡುಪಿಯ ಈ ಯಶಸ್ಸಿನ ಮೂಲಗುಟ್ಟು. ಈ ಹಿಂದೆ ಮಾಡಿದ್ದ ರೀತಿಯ ಕಾರ್ಯಕ್ರಮಗಳ ಪುನರಾವರ್ತನೆ ಹೊಸ ಚೈತನ್ಯ ತಂದುಕೊಡಲು ಸಾಧ್ಯವಿಲ್ಲ ಎಂಬುದನ್ನು ಅದು ಅರಿತಿತ್ತು. ರಾಜ್ಯದ ವಿವಿಧ ಗಣ್ಯರ ಕಾರ್ಯಕರ್ತರ ಜೊತೆ ಹಲವು ಸುತ್ತಿನ ಸಭೆಗಳನ್ನು ಮಾಡಿ, ಸುದೀರ್ಘ ಚರ್ಚೆಗಳನ್ನು ನಡೆಸಿ ಈ ಕ್ಷಣಕ್ಕೆ ಸರಿಹೊಂದುವ ಕಾರ್ಯಕ್ರಮ ರೂಪಿಸಿತ್ತು. ಅದು ಅದರ ಅಸಲಿ ಗುಟ್ಟು. ದ್ವೇಷ ರಾಜಕಾರಣದ ಸತತ ದಾಳಿಯಿಂದ ಸಾಮಾಜಿಕ ವಲಯ ಶಾಕಿಗೆ ಒಳಗಾಗಿದ್ದು ಮಾತ್ರವಲ್ಲ ಎದೆಗುಂದಿತ್ತು. ಬದುಕುವುದು ಹೇಗಪ್ಪಾ….? ಎಂಬ ಚಿಂತೆಯಲ್ಲಿ ಮುಳುಗಿತ್ತು. ಬೀದಿಗಿಳಿದು ಪ್ರತಿಭಟಿಸಲು ಜನಸಾಮಾನ್ಯರಲ್ಲಿ ಭವಿಷ್ಯದ ಬಗೆಗಿನ ಆತಂಕವೂ ಇತ್ತು. ವಿವಿಧ ಧರ್ಮೀಯರ ನಡುವಿನ ಬಾಂಧವ್ಯವೂ ಅಲುಗಾಡಿತ್ತು. ಇಂತಹ ಸಂದರ್ಭದಲ್ಲಿ ಎಲ್ಲರನ್ನೂ ಮತ್ತೆ ಒಟ್ಟಿಗೆ ತರಬಲ್ಲ ಮತ್ತು ವಿಶ್ವಾಸ ನೀಡಬಲ್ಲ ಕಾರ್ಯಕ್ರಮ ಬೇಕಿತ್ತು. ಆ ಕೆಲಸವನ್ನು ಉಡುಪಿ ಮಾಡಿತು.

ಕಾಮನ್ ಮಿನಿಮಮ್ ಪ್ರೋಗ್ರಾಂ [CMP] ಆಧಾರದ ಮೇಲೆ ಎಲ್ಲರನ್ನೂ ಒಟ್ಟಿಗೆ ತರುವ ರಾಜಕೀಯ ಸೂತ್ರದ ಬಗ್ಗೆ ಕೇಳಿರುತ್ತೇವೆ. *ಉಡುಪಿ CBP ಸೂತ್ರವನ್ನು ಅಳವಡಿಸಿತು – ಕಾಮನ್ ಬೇಸಿಕ್ ಪ್ರಿನ್ಸಿಪಲ್. “ಕೂಡಿ ಬಾಳಬೇಕು – ಪರ ಧರ್ಮವನ್ನೂ ಗೌರವಿಸಬೇಕು” ಎಂಬುದೇ ಇಲ್ಲಿರುವ CBP, ಅದುವೇ ಎಲ್ಲಾ ಧರ್ಮಗಳ ಸಾರ.* ಬುದ್ಧ ಹೇಳಿದ್ದೂ ಅದನ್ನೇ, ಏಸು ಹೇಳಿದ್ದೂ ಅದನ್ನೇ, ಪೈಗಂಬರರು ಹೇಳಿದ್ದು ಅದನ್ನೇ, ಬಸವಣ್ಣ, ವಿವೇಕಾನಂದರು ಹೇಳಿದ್ದೂ ಅದನ್ನೆ. ಅಷ್ಟು ಮಾತ್ರವಲ್ಲ ಜನಸಾಮಾನ್ಯರೆಲ್ಲರೂ ನಿತ್ಯ ಬದುಕಿನಲ್ಲಿ ಆಚರಿಸುತ್ತಿರುವುದು ಅದನ್ನೇ. ದೇಶದ ಯಾವುದೇ ಜನವಸತಿ ಪ್ರದೇಶಕ್ಕೆ ಹೋದರೂ ಅಲ್ಲಿರುವ ವಿವಿಧ ಧರ್ಮದ ಜನರು ಬಹುತೇಕ ಈ ಸೂತ್ರ ಆಧರಿಸಿ ಅನ್ಯೂನ್ಯವಾಗಿಯೇ ಬದುಕುತ್ತಿದ್ದಾರೆ. ಅವರುಗಳು ಜಗಳವಾಡುತ್ತಾ ಬದುಕುತ್ತಿಲ್ಲ. ಪರ ಧರ್ಮೀಯರನ್ನು ದ್ವೇಷಿಸುವ ಅಧರ್ಮ ಚಿಂತನೆ ಪರಕೀಯವಾದುದು, ಕೃತಕವಾದುದು, ಹೊರಗಿನಿಂದ ಹೇರಲ್ಪಟ್ಟಿರುವುದು. *ಉಡುಪಿ ಸಮಾವೇಶ ಎಲ್ಲಾ ಧರ್ಮಗಳೂ, ಎಲ್ಲಾ ಜನಸಾಮಾನ್ಯರು ಒಪ್ಪುವ ಅತಿ ಸರಳ ಆದರೆ ಅತಿ ಮಹತ್ವದ ‘ಸಹಬಾಳ್ವೆ’ಯ ಜೀವನತತ್ವಕ್ಕೆ ನೀರೆರೆಯುವ ಕೆಲಸ ಮಾಡಿತು. ಅದು ಫಲಿಸಿತು. ಭರವಸೆಯ ಸಸಿ ಚಿಗುರಿತು.*

ಉಡುಪಿ ಸಮಾವೇಶದಲ್ಲಿ ಆಕ್ರೋಶವಿರಲಿಲ್ಲ, ಬೈಗಳಿರಲಿಲ್ಲ, ಹೀಗೆಳಿಕೆ ಇರಲಿಲ್ಲ. ಶಾಂತ ಚಿತ್ತ ಸಂಕಲ್ಪ ಮಾತ್ರವಿತ್ತು. ಬೆಂಕಿಯನ್ನು ಬೆಂಕಿಯಿಂದ ನಂದಿಸಲು ಸಾಧ್ಯವಿಲ್ಲ. ನೀರು ಚೆಲ್ಲಬೇಕು ಎಂಬ ಸಾಮಾನ್ಯ ವಿವೇಕವನ್ನು ಬಳಸಿತ್ತು. ದ್ವೇಷಕ್ಕೆ ದ್ವೇಷಕ್ಕೆ ಉತ್ತರವಲ್ಲ. ಪ್ರೀತಿ ಬೆಳೆಸಿ, ದ್ವೇಷ ಅಳಿಸಬೇಕು ಎಂಬ ಸಹೃದಯಿ ಪ್ರಯತ್ನ ಮಾತ್ರವಿತ್ತು. ಫ್ಯಾಸಿಸಂನ ಬೌದ್ಧಿಕ ವಿಶ್ಲೇಷಣೆಗಳಾಗಲೀ, ಕೋಮುವಾದಿ ಪಕ್ಷಗಳನ್ನು ಬಯಲುಗೊಳಿಸುವ ಭಾಷಣಗಳಾಗಲೀ ಇರಲಿಲ್ಲ. ಏಕೆಂದರೆ ಇದು ಸಾಮಾನ್ಯ ಜನರನ್ನು ಗಮನದಲ್ಲಿಟ್ಟುಕೊಂಡು ರೂಪಿಸಿದ್ದ ಕಾರ್ಯಕ್ರಮವಾಗಿತ್ತು. ಕೂಡಿ ಬಾಳುವ ಮಹತ್ವವನ್ನು ನೆನೆಪಿಸುವ ಸಂದೇಶಗಳಿಂದ ಮಾತ್ರ ಕೂಡಿತ್ತು. *ಕಾರ್ಯಕ್ರಮದ ಕರಪತ್ರ, ಒಂದು ತಿಂಗಳ ಕಾಲ ನಡೆದ ಸೋಷಿಯಲ್ ಮೀಡಿಯಾ ಪೋಸ್ಟರ್ ಕ್ಯಾಂಪೈನ್, ಮೆರವಣಿಗೆಯಲ್ಲಿ ಬಳಸಿದ ಟ್ಯಾಬ್ಲೋಗಳು, ಅದರಡಿ ಇದ್ದ ಸಂದೇಶಗಳು, ಅತಿಥಿಗಳ ಭಾಷಣಗಳು, ಇಡೀ ಸಮಾವೇಶದ ಉದ್ಘಾಟನಾ ಘೋಷವಾದ “ಮನುಜ ಜಾತಿ ತಾನೊಂದೇ ವಲಂ” ಈ ಸರಳ ಸತ್ಯವನ್ನೇ ನಾನೂ ರೂಪದಲ್ಲಿ ಕಟ್ಟಿಕೊಟ್ಟವು.*

*ಸತ್ಯ ಸರಳವಾದುದ್ದಾದರೂ ಅದು ಜನಮನವನ್ನು ತಟ್ಟುವಂತೆ ಮಾಡಬೇಕಾದರೆ ಸ್ವಲ್ಪ ದೊಡ್ಡ ರೂಪದಲ್ಲಿ ಹೇಳಬೇಕಿತ್ತು, ವೈವಿಧ್ಯತೆಯ ಜೊತೆ ಎಲ್ಲರ ಗಮನ ಸೆಳೆಯಬೇಕಿತ್ತು. ಹಾಗಾಗಿಯೇ ಬೃಹತ್ ಕಾರ್ಯಕ್ರಮದ ರೂಪರೇಷೆಯನ್ನೇ ಸಂಚಾಲಕ ಸಮಿತಿ ಸಿದ್ಧಪಡಿಸಿತ್ತು.* ಮಾತ್ರವಲ್ಲ ಅದನ್ನು ವೈವಿಧ್ಯಮಯಗೊಳಿಸಲು ಮತ್ತು ಅದರ ಮೂಲಕವೂ ಬಹುತ್ವದ ಸಂದೇಶ ನೀಡಲು ಸರ್ವ ಬಣ್ಣಗಳ ಬಾವುಟಗಳ ಬಳಕೆ, ಟ್ಯಾಬ್ಲೋಗಳ ಮೆರವಣಿಗೆ, ವಿವಿಧ ಜನಸಾಂಸ್ಕೃತಿಕ ಕಲಾರೂಪಗಳ ಪ್ರದರ್ಶನ, ಮನತಟ್ಟುವಂತೆ ಸಂದೇಶ ನೀಡಬಲ್ಲಂಥ ಅತಿಥಿಗಳ ಆಯ್ಕೆ, ಪಲ್ಲವಿಯವರ ಹಾಡು…. ಎಲ್ಲವೂ ನಡೆದಿತ್ತು. ಅದೆಲ್ಲವೂ ಕೂಡಿ ಸಾಮರಸ್ಯ ನಡಿಗೆ ಮತ್ತು ಸಹಬಾಳ್ವೆ ಸಮಾವೇಶ ಎರಡೂ ‘ವೈಭವತೆ’, ‘ವೈವಿಧ್ಯತೆ’ ಮತ್ತು ‘ಶಾಂತ ಚಿಂತನೆ’ಯ ಕಲಾಕೃತಿಗಳಾಗಿ ಮೂಡಿಬಂದವು.

ತಲೆಯಲ್ಲಿ ದೊಡ್ಡ ಕನಸನ್ನೇ ಕಾಣಬಹುದು, ಕಾಗದದಲ್ಲಿ ದೊಡ್ಡ ಸ್ಕೆಚ್ಚನ್ನೂ ಹಾಕಿಬಿಡಬಹುದು. ಆದರೆ ಅದನ್ನು ಕಾರ್ಯರೂಪಕ್ಕಿಳಿಸುವುದು ಅಷ್ಟು ಸುಲಭವಲ್ಲ. ಅದೊಂದು ಗರ್ಭಧಾರಣೆಯ, ಪ್ರಸವದ ಪ್ರಕ್ರಿಯೆ. ಸಮಾವೇಶದ ಹಿಂದಿನ ದಿನ ಪಯಣಿಸುತ್ತಿದ್ದಾಗ ಕೆಲಸದ ದೊಡ್ಡ ಹೊರೆಹೊತ್ತುಕೊಂಡಿದ್ದ ಯಾಸೀನ್ ಮಲ್ಪೆಯವರು “ನಾಳೆ ಹೆರಿಗೆ, ಮಗು ಹೇಗೆ ಹುಟ್ಟುತ್ತೋ ಗೊತ್ತಿಲ್ಲ” ಎಂದರು. ಒಳ್ಳೆಯ ಮನಸ್ಸಿನಿಂದ ನೀವೆಲ್ಲಾ ಶ್ರಮ ಹಾಕಿದ್ದೀರಿ ಯಾಸೀನ್ ಭಾಯ್ ಒಳ್ಳೆಯದೇ ಆಗುತ್ತದೆ ಎಂದೆ. ಮನದ ಬಯಕೆಯಂತೆ ಆರೋಗ್ಯಪೂರ್ಣ ಮಗುವೇ ಹುಟ್ಟಿತ್ತು. ಎಲ್ಲರ ಮೊಗದಲ್ಲಿ ಸಂತಸದ, ನಿರಾಳತೆಯ ಭಾವ ಮೂಡಿತ್ತು. ಪ್ರಕೃತಿಯೂ ಇದಕ್ಕೆ ಸಹಕರಿಸಿತ್ತು. ಝಡಿಝಡಿ ಜಿನುಗುತ್ತಲೇ ಇದ್ದ ಮಳೆ ಧಿಡೀರನೆ ನಿಂತು ಉಡುಪಿಯಲ್ಲಿ ಉಲ್ಲಾಸದ ವಾತಾವರಣ ಮೂಡಿಸಿತ್ತು. ‘ಮಕ್ಕಳೇ ಒಳ್ಳೇ ಕೆಲಸ ಮಾಡುತ್ತಿದ್ದೀರಿ ಮಾಡಿ’ ಎಂದು ಪ್ರಕೃತಿ ಹೇಳಿದಂತೆ ಭಾಸವಾಗಿತ್ತು. ದೊರೆಸ್ವಾಮಿಯವರ ಮಾತೊಂದು ನೆನಪಿಗೆ ಬಂತು – “ಯಾವ ಸಂದರ್ಭಕ್ಕೆ ಏನು ಮಾಡಬೇಕೋ ಅದನ್ನು ಶುದ್ಧ ಮನಸ್ಸಿನಿಂದ ಮಾಡಿ, ಜನ ಮತ್ತು ಹಣ ತಾನಾಗೇ ಒಲಿದುಬರುತ್ತವೆ”. ಅವರು ಹೇಳಿದಂತೆಯೇ ಆಯಿತು. *ಈ ಅಮೋಘ ಕಾರ್ಯಕ್ರಮವನ್ನು ಆಗುಮಾಡಲು ಅವಕಾಶಕೊಟ್ಟ ಪ್ರಕೃತಿಗೂ ಮತ್ತು ಆಗುಮಾಡಿದ ಉಡುಪಿಯ ನಿಸ್ವಾರ್ಥಿ ಸಂಕಲ್ಪಶೀಲ ತಂಡಕ್ಕೂ, ಇದರ ನಾನಾ ರೀತಿಯ ಕೆಲಸಗಳಲ್ಲಿ ತೊಡಗಿಸಿಕೊಂಡು ದುಡಿದ ರಾಜ್ಯದ ಸಹೃದಯಿಗಳಿಗೂ, ಹೆಜ್ಜೆಗೂಡಿಸಲು ಹೊರಟುಬಂದ ವಿವಿಧ ಧರ್ಮೀಯ ಮಹಾಜನತೆಗೂ ಮನದಾಳದ ಅಭಿನಂದನೆಗಳನ್ನು ಮತ್ತು ಸಲಾಂಗಳನ್ನು ನಾವೆಲ್ಲರೂ ಹೇಳಲೇಬೇಕು.*

ಇಷ್ಟೆಲ್ಲಾ ಹೇಳಿದ ಮೇಲೂ ಒಂದಿಷ್ಟು ಕೊರಗು ಮನದೊಳಗೆ ಉಳಿದೇ ಇದೆ. ನಾವು ನಮ್ಮ ಸಂಪೂರ್ಣ ಸಾಮರ್ಥ್ಯದೊಂದಿಗೆ ಉಡುಪಿ ಸಂಗಾತಿಗಳಿಗೆ ಸಾತ್ ನೀಡಲಾಗಲಿಲ್ಲ. ಜನಶಕ್ತಿಯ ಸಮ್ಮೇಳನ ಜೂನ್ 5-6 ಎಂದುಕೊಂಡಿದ್ದರಿಂದ ಎರಡೂ ಕಡೆ ಗಮನಕೊಡಬೇಕಿತ್ತು. [ದಿನಗಳು ಹತ್ತಿರಬಂದಾಗ ಮಾತ್ರ ಹೀಗಾಗುವುದಿಲ್ಲ ಎಂದು ಸಮ್ಮೇಳನವನ್ನು ಜುಲೈ 3-4ಕ್ಕೆ ಮುಂದೂಡಿ ಪೂರ್ತಿ ಗಮನ ಇದಕ್ಕೆ ನೀಡಿದೆವು. ಮೊದಲೇ ಈ ತೀರ್ಮಾನ ತೆಗೆದುಕೊಂಡಿದ್ದಲ್ಲಿ ಇನ್ನೂ ಹೆಚ್ಚಿನ ಕೊಡುಗೆಯನ್ನು ನೀಡಬಹುದಿತ್ತು]. “ಉಡುಪಿ ಮತ್ತು ಮಂಗಳೂರಿನ ಅನೇಕ ಮಿತ್ರರನ್ನು ತೊಡಗಿಸಿಕೊಳ್ಳಲು ಆಗಲಿಲ್ಲ” ಎಂದು ಉಡುಪಿ ಸಂಗಾತಿಗಳು ಮಾತನಾಡಿಕೊಳ್ಳುತ್ತಿದ್ದರು. ರಾಜ್ಯದ ಇನ್ನೂ ಅನೇಕ ಚಿಂತಕರು ಹಾಗೂ ಸಂಘಟನೆಗಳ ಜೊತೆ ನಿರಂತರ ಸಂಪರ್ಕ ಇಟ್ಟುಕೊಳ್ಳಲು ಆಗಲಿಲ್ಲ ಎಂಬ ಅಭಿಪ್ರಾಯ ‘ಸಂಚಾಲಕ ಸಮಿತಿ’ಯದು. ಈ ಪ್ರಯತ್ನದ ಕೊರತೆ ಇತ್ತ ಕಡೆಯದಾದರೆ, ಕೆಲವರು ಸಹಜ ಅನುಮಾನಗಳಿಂದ ತೊಡಗಿಸಿಕೊಳ್ಳಲಿಲ್ಲ. ಕೆಲವರು ತಮ್ಮದೇ ಆದ ಅಸಮಧಾನಗಳ ಕಾರಣಗಳಿಂದಾಗಿಯೂ ಬರಲಿಲ್ಲ. ಪರಸ್ಪರ ದ್ವೇಷ ಇಲ್ಲವಾದರೂ ಇರಬೇಕಾದಂಥ ಸ್ನೇಹ ಮತ್ತು ವಿಶ್ವಾಸದ ಕೊರತೆ ಇರುವುದು ಇದಕ್ಕೆ ಕಾರಣ. ಏನೇ ಇದ್ದರೂ ಈ ಅರೆವಿಶ್ವಾಸಕ್ಕೆ ನಾವೆಲ್ಲರೂ ಹೊಣೆಗಾರರಾಗಿದ್ದೇವೆ. ನಾವೆಲ್ಲರೂ ಪೂರ್ತಿ ಚಿತ್ತದ ಜೊತೆ ಸೇರಿಕೊಳ್ಳಲಾಗಲಿಲ್ಲ. ಒಂದುವೇಳೆ ಹಾಗಾಗಿದ್ದಲ್ಲಿ ಉಡುಪಿ ಇಡೀ ದೇಶಕ್ಕೇ ಸಂದೇಶ ನೀಡಿರುತ್ತಿತ್ತು.

ಈ ಕೊರತೆಗಳ ಹೊರತಾಗಿಯೂ ಉಡುಪಿ ನಮ್ಮೆಲ್ಲರಿಗೂ ಹುರುಪು, ವಿಶ್ವಾಸ ನೀಡಿರುವುದು ಮಾತ್ರವಲ್ಲ, ಕಿವಿಮಾತು ಹೇಳಿರುವುದಂತೂ ಸತ್ಯ. ಅಂದು ‘ನೀಲಿ ಪತಾಕೆ’ಯೊಂದಿಗೆ ಉಡುಪಿ ಚಲೋ ನಡೆಸಿಕೊಟ್ಟು ಸ್ವಾಭಿಮಾನದ ಸಂಕಲ್ಪ ಮಾಡಿಸಿತ್ತು. ಇಂದು ಬಹುವರ್ಣೀಯ ಧ್ವಜಗಳ ಮೂಲಕ *ಸಹಬಾಳ್ವೆಯ ಸಂದೇಶ ನೀಡಿ ಮುಂದಿನ ಹಾದಿಗೆ ದಿಕ್ಸೂಚನೆ ಮಾಡಿದೆ. ಅದನ್ನು ಆಲಿಸೋಣ, ಆನಂದಿಸೋಣ, ಅನುಸರಿಸೋಣ ಮತ್ತು ಪಾಲಿಸೋಣ. ಆದರೆ ಯಶಸ್ಸಿನ ಅಹಂಕಾರ ಬೆಳೆಯಗೊಡದೆ, ಮಾಡಬೇಕಿರುವ ರಾಶಿ ಕೆಲಸದತ್ತ ಚಿತ್ತ ಹರಿಸೋಣ. ಉಡುಪಿಯ ಸಂದೇಶವನ್ನು ತಳಮಟ್ಟಕ್ಕೆ ಒಯ್ಯುವ ಕೆಲಸಕ್ಕೆ ಗಮನ ನೀಡೊಣ* …………..ಬರೆಯಲು ಇನ್ನೂ ಸಾಕಷ್ಟಿದೆ. ಉದ್ದವಾಯಿತು. ಇದೂ ಸಹ ಹಳೆ ಕಾಯಿಲೆಯೆ. ಸಾರಿ, ಸಾಕು.

ಪ್ರೀತಿಯೊಂದಿಗೆ

ನಿಮ್ಮ

*ನೂರ್ ಶ್ರೀಧರ್*

*ಉಡುಪಿ: ಸಾಮರಸ್ಯದ ಸಾಗರಕೆ ಸಾವಿರಾರು ನದಿಗಳು*

ಯಾವ ನೆಲದಲ್ಲಿ ಕೋಮು ಸಂಘರ್ಷವನ್ನು ನೆಲೆಸಲು ಯತ್ನಿಸಲಾಯಿತೋ, ಅದೇ ನೆಲದಿಂದ ಸಾಮರಸ್ಯದ ಸಿಂಚನ ಹರಿದಿದೆ. ಈ ನೆಲ ಎಂದಿಗೂ ಸಾಮರಸ್ಯ, ಸೌಹಾರ್ದತೆಯ ತವರೇ ಹೊರತು ದ್ವೇಷ, ಮತ್ಸರದ ನೆಲವೀಡಲ್ಲ ಎಂಬುದನ್ನು ಸಾರಿ ಸಾರಿ ಹೇಳಲಾಯಿತು.

ಶಾಲಾ ಕಾಲೇಜು ಮಕ್ಕಳು ಹಿಜಾಬ್‌ ಧರಿಸುವುದನ್ನು ವಿರೋಧಿಸುವ ಮೂಲಕ ಹುಟ್ಟಿ ಹಾಕಲಾದ ದ್ವೇಷ, ಮುಸ್ಲಿಮರ ವ್ಯಾಪಾರಕ್ಕೆ ನಿಷೇಧ, ಹಲಾಲ್‌ ಕಟ್‌ಗೆ ಬದಲಾಗಿ ಜಟ್ಕಾ ಕಟ್‌, ಆಜಾನ್‌ಗೆ ವಿರುದ್ಧವಾಗಿ ಹನುಮಾನ್‌ ಚಾಲೀಸ್‌ ಹೀಗೆ ಮುಂದುವರಿಯುತ್ತಲೇ ಇದೆ. ಇದಕ್ಕೆ ಅಡಿಗಲ್ಲು ಹಾಕಿದ್ದು ಉಡುಪಿ ಎಂಬ ಅಳುಕು ಎಲ್ಲ ಜೀವಪರರ ಎದೆಗೊತ್ತಿದ್ದ ಮುಳ್ಳಿನಂತೆ ಭಾಸವಾಗಿತ್ತು. ಆದರೆ ‘ಸರ್ವ ಜನಾಂಗದ ಶಾಂತಿಯ ತೋಟ’ವನ್ನು ಉಳಿಸಿಕೊಳ್ಳಲು ಉಡುಪಿಯಲ್ಲಿ ಶನಿವಾರ ಜರುಗಿದ ‘ಸಾಮರಸ್ಯ ನಡಿಗೆ ಹಾಗೂ ಸಹಬಾಳ್ವೆ ಸಮಾವೇಶ’ ನಿರೀಕ್ಷೆಗೂ ಮೀರಿ ಯಶಸ್ಸು ಸಾಧಿಸಿತು.

ಉಡುಪಿಯ ಅಜ್ಜರ ಕಾಡು- ಹುತಾತ್ಮರ ಚೌಕದಿಂದ ಹೊರಟ ಸಾಮರಸ್ಯ ನಡಿಗೆ ಸುಮಾರು ಮೂರು ಕಿಮೀಯಷ್ಟು ದೂರ ಕ್ರಮಿಸಿ ಕ್ರಿಶ್ಚಿಯನ್‌ ಶಾಲೆ ಮೈದಾನವನ್ನು ಸೇರಿತು. ಉಡುಪಿಯ ಜನತೆ ಹಾಗೂ ರಾಜ್ಯದ ಮೂಲೆ ಮೂಲೆಯಿಂದ ಬಂದಿದ್ದ ಸಾವಿರಾರು ಜನರು ಮೆರವಣಿಗೆಯಲ್ಲಿ ಪಾಲ್ಗೊಂಡರು.

ವಿವಿಧ ಬಣ್ಣದ ಬಾವುಟಗಳನ್ನು ಪ್ರದರ್ಶಿಸಿ ಬಹುತ್ವವನ್ನು ಸಾರಲಾಯಿತು. ರಾಷ್ಟ್ರಪಿತ ಗಾಂಧೀಜಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌, ಸ್ವಾಮಿ ವಿವೇಕಾನಂದ, ಬಸವಣ್ಣ, ನಾರಾಯಣಗುರು, ಹಾಜಿ ಅಬ್ದುಲ್ಲಾ ಮೊದಲಾದವರ ಸ್ತಬ್ಧ ಚಿತ್ರಗಳು ಮುಂದೆ ಸಾಗಿದವು. ದಫ್‌ ನೃತ್ಯ, ಹುಲಿವೇಷದ ನೃತ್ಯ, ಚಂಡೆ, ನಾಸಿಕ್‌ ಬ್ಯಾಂಡ್‌, ಕೊರವ ನೃತ್ಯ ಸೇರಿದಂತೆ ತುಳುನಾಡ ಪರಂಪರೆ ದಾರಿಯುದ್ಧಕ್ಕೂ ಪ್ರದರ್ಶನವಾಯಿತು.

*ಸಾಮರಸ್ಯ ಸಾರಿದ ವೇದಿಕೆ ಕಾರ್ಯಕ್ರಮ*

ಸಹಬಾಳ್ವೆ ಸಮಾವೇಶದ ಸಂಚಾಲಕ ಸಮಿತಿಯ ಯಾಸಿನ್‌ ಮಲ್ಪೆ ವೇದಿಕೆ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.

“ಉಡುಪಿ ಜಿಲ್ಲೆ ಇತ್ತೀಚಿನ ದಿನಗಳಲ್ಲಿ ಅಹಿತಕರ ಘಟನೆಗಳಿಗೆ ಸುದ್ದಿಯಾಗಿತ್ತು. ದ್ವೇಷ ಹಾಗೂ ನಂಜಿನ ಕಾರಣಕ್ಕೆ ಚರ್ಚಿಸಲ್ಪಟ್ಟಿತು. ಇದು ಜಗತ್ತಿಗೆ ಕೇಳುವಂತೆ ಸಹಬಾಳ್ವೆ ಸಾಮರಸ್ಯವನ್ನು ಮಾಡುತ್ತಿರುವುದು ಸುಂದರ ಮುಂಜಾವಿನ ಸಂಕೇತ” ಎಂದು ಬಣ್ಣಿಸಿದರು.

ದೇಶವು ಅಭಿವೃದ್ಧಿ ಹಾಗೂ ಶಾಂತಿಯಿಂದ ಇರಬೇಕೆಂದರೆ ಸಹಬಾಳ್ವೆ ಅಗತ್ಯ. ನಮ್ಮ ಮೇಲೆ ಯಾರು ದಾಳಿ ಮಾಡಬೇಕಾಗಿಲ್ಲ. ನಮ್ಮ ದೇಶದ ನಾಶಕ್ಕೆ ನಾವೇ ಕಾರಣವಾಗುತ್ತಿದ್ದೇವೆ. ಈ ದೇಶದ ಸಂಪತ್ತು ನಾಶ ಮಾಡುತ್ತಿರುವುದು ಹೊರಗಿನವರಲ್ಲ. ಇದೇ ದೇಶದವರು. ನಮ್ಮಲ್ಲಿನ ಮತಾಂಧತೆಯೇ ಇದಕ್ಕೆ ಕಾರಣ. ಜಾತಿ, ಮತಗಳ ಆಧಾರದಲ್ಲಿ ವಿಭಜಿಸುವವರನ್ನು ದಿಟ್ಟವಾಗಿ ಎದುರಿಸಬೇಕಾಗಿದೆ. ಈ ದೇಶದ ಇತಿಹಾಸ ಕೂಡಿ ಬಾಳುವ ಇತಿಹಾಸವೇ ಹೊರತು ದ್ವೇಷದ ಇತಿಹಾಸವಲ್ಲ. ಒಂದುಗೂಡಿ ಕಟ್ಟಿದ ದೇಶ ನಮ್ಮದು ಎಂದರು.

ಜಾತಿ ಧರ್ಮಗಳ ಸಂಕುಚಿತ ದೃಷ್ಟಿಯಿಂದ ಹೊರಬನ್ನಿ ಎಂದರು ಕುವೆಂಪು. ಇವನಾವರ ಎನ್ನದೆ ಇವ ನಮ್ಮವ ಎಂಬ ಸಂದೇಶವನ್ನು ಸಾರಿದ್ದು ಬಸವಾದಿ ಶರಣರು ಎಂದು ಸ್ಮರಿಸಿದ ಅವರು, ಉಡುಪಿಯನ್ನು ಕಟ್ಟಿದ ಪೈಗಳು, ನಾರಾಯಣಗುರುಗಳು, ವಡ್ಡರ್ಸೆ ರಘುರಾಮ ಶೆಟ್ಟರು, ಕ್ರೈಸ್ತ ಶಾಲೆಗಳು, ಉಡುಪಿಯ ಹಾಜಿ ಅಬ್ದುಲ್ಲಾ ಸಾಹೇಬರ ಕೊಡುಗೆ ಮೊದಲಾದವುಗಳನ್ನು ನೆನೆದರು.

ಇದು ಕೊನೆಯ ಸಮಾವೇಶವಲ್ಲ, ಆರಂಭವಷ್ಟೇ. ಮುಂದಿನ ತಿಂಗಳುಗಳಲ್ಲಿ ಎಲ್ಲ ಜಿಲ್ಲೆಗಳಲ್ಲಿ ಸಮಾವೇಶವನ್ನು ಯೋಜಿಸಲು ಚಿಂತಿಸಲಾಗಿದೆ. ಬೆಂಕಿ ಹಚ್ಚುವ, ರಕ್ತ ಹರಿಸುವ ಮಾತು ಕೇಳಿದ್ದು ತುಂಬಾ ಆಯಿತು. ಇನ್ನಾದರೂ ಸಾಮರಸ್ಯ ಬೆಸೆಯುವ ಚರ್ಚೆ ಆರಂಭಿಸದೆ ಹೋದರೆ ದೇಶ ವಿನಾಶದ ಹಾದಿಗೆ ಹೊರಳುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಸಹಬಾಳ್ವೆ ಸಮಾವೇಶದ ಸಂಚಾಲಕ ಸಮಿತಿಯ ಕೆ.ಎಲ್‌.ಅಶೋಕ್‌ ಮಾತನಾಡಿ, “ವೈವಿಧ್ಯತೆ ಅನಾವರಣವಾಗಿದೆ.  ಒಂದು ಭಾಷೆ, ಒಂದು ಧರ್ಮ ಶ್ರೇಷ್ಠ ಎಂಬುದೆಲ್ಲ ಇಲ್ಲ. ಸಹಬಾಳ್ವೆ ಪ್ರಕೃತಿಯ ತತ್ವ. ಯಾರನ್ನೂ ದ್ವೇಷಿಸಬಾರದು. ನಾವೆಲ್ಲ ಒಂದಾಗಿದ್ದೇವೆ. ಮನುಷ್ಯಜಾತಿ ತಾನೊಂದೇ ವಲಂ ಎಂದು ಆದಿಕವಿ ಪಂಪ ಸಾರಿದರೆ ವಿಶ್ವಮಾನವತೆಯನ್ನು ಆಧುನಿಕ ಕವಿ ಕುವೆಂಪು ಸಾರಿದ್ದಾರೆ. ಹೀಗೆ ನಮ್ಮ ಸಾಹಿತ್ಯದಲ್ಲಿ ಸಹಬಾಳ್ವೆ ಸಂದೇಶ ಬೆಳೆದುಬಂದಿದೆ” ಎಂದರು.

*ಮನುಷ್ಯ ಜಾತಿ ತಾನೊಂದೆ ವಲಂ’ ಅನಾವರಣ*

“ಮನುಷ್ಯ ಜಾತಿ ತಾನೊಂದೇ ವಲಂ” ಸಂದೇಶವನ್ನು ಸಾರುವ ಮೂಲಕ ವೇದಿಕೆ ಕಾರ್ಯಕ್ರಮವನ್ನು ವಿನೂತನವಾಗಿ ಉದ್ಘಾಟಿಸಲಾಯಿತು. ಮುಖಂಡರಾದ ಬಾಲಕೃಷ್ಣ ಶೆಟ್ಟಿಯವರು ಉದ್ಘಾಟನೆಯ ನಿರೂಪಣೆ ಮಾಡಿದರು.

ಬಾಲ್ಕಿಯ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದೇವರು ಮಾತನಾಡಿ, “ಬಸವಣ್ಣನವರರನ್ನು ಕೇಳಿದ್ದೇವೆ, ಓದಿದ್ದೇವೆ. ಅನುಭವ ಮಂಟಪವೇ ಇಡೀ ಉಡುಪಿಗೆ ಬಂದಂತೆ ಭಾಸವಾಗುತ್ತಿದೆ. ಎಲ್ಲ ಜಾತಿ, ಧರ್ಮದ ಜನರು ಇಲ್ಲಿಗೆ ಬಂದಿದ್ದಾರೆ” ಎಂದು ವರ್ಣಿಸಿದರು.

“ಒಂದನ್ನೊಂದು ಬೆಸೆಯುವ ಕೆಲಸವನ್ನು ಧರ್ಮ ಮಾಡುತ್ತದೆ. ಬಸವಣ್ಣನವರು ಧರ್ಮವನ್ನು ಪ್ರೀತಿ, ಸಾಮರಸ್ಯದಿಂದ ಕಟ್ಟಿದರು. ಭಾರತಕ್ಕೆ ಗೌರವ ಬಂದಿದ್ದು ಬುದ್ಧ, ಬಸವ, ಅಂಬೇಡ್ಕರ್‌, ಯೇಸು,  ಅಲ್ಲಾ, ಗುರುನಾನಕರ ತತ್ವಗಳಿಂದ. ಒಂದು ಕುಟುಂಬದೊಳಗೆ ಸಾಮರಸ್ಯ  ಪ್ರೀತಿ ಇದ್ದರೆ ಮಾತ್ರ ಆ ಕುಟುಂಬಕ್ಕೆ ಏಳಿಗೆಯಾಗುತ್ತದೆ. ಭಾರತವೊಂದು ಕುಟುಂಬದಂತೆ ಇರಬೇಕು. ಬಸವಣ್ಣನವರು ಎಲ್ಲ ಜನವರ್ಗವನ್ನು ಪ್ರೀತಿಸಿದರು. ಎಲ್ಲರನ್ನೂ ಮೆಚ್ಚಿಕೊಂಡಾಗ ದೇವರು ಮೆಚ್ಚುತ್ತಾನೆ” ಎಂದು ಸ್ವಾಮೀಜಿ ಹೇಳಿದರು.

ಉಡುಪಿಯ ಝೈನುಲ್‌ ಉಲಮಾ ಎಂ ಅಬ್ದುಲ್ ಹಮೀದ್ ಮುಸ್ಲಿಯಾರ್‌ ಮಾಣಿ ಮಾತನಾಡಿ, “ಈ ಸಭೆಯ ಬಗ್ಗೆ ತಂಬಾ ಖುಷಿ ಇದೆ. ಭಾರತೀಯ ಎಂಬುದಕ್ಕೆ ಬಹಳ ಹೆಮ್ಮೆ ಇದೆ. ನಾನು ತುಂಬಾ ದೇಶಗಳನ್ನು ಸುತ್ತಿದ್ದೇನೆ. ಆದರೆ ಭಾರತದಂತಹ ದೇಶವನ್ನು ನಾನು ಎಂದಿಗೂ ನೋಡಿಲ್ಲ. ಇದು ನಮಗೆ ಸೃಷ್ಟಿಕರ್ತ ನೀಡಿದ ಅನುಗ್ರಹ” ಎಂದರು.

ಪುತ್ತೂರು ಮಲಂಕರ ಕ್ಯಾಥೋಲಿಕ್‌ ಚರ್ಚ್ ಬಿಷಬ್‌ ಅ.ವಂ. ಜೀ ವರ್ಗೀಸ್‌ ಮಾರ್‌ ಮಕರಿಯೋಸ್‌ ಮಾತನಾಡಿ,  “ಏಸು ಕ್ರಿಸ್ತರು ಕೊಟ್ಟಿರುವ ಸಂದೇಶವನ್ನು ಸಾರುತ್ತಾ ಶಾಂತಿ, ಸಾಮರಸ್ಯದ ಕೆಲಸ ಮಾಡುತ್ತಿದ್ದೇವೆ. ನೀನು ನಿನ್ನ ದೇವರನ್ನು, ಪೂರ್ಣ ಆತ್ಮದಿಂದ, ಪೂರ್ಣ ಮನಸ್ಸು ಮತ್ತು ಹೃದಯದಿಂದ ಪ್ರೀತಿಸು ಎಂದು ಧರ್ಮ ಹೇಳುತ್ತದೆ. ನೆರೆಹೊರೆಯವರನ್ನು ಪ್ರೀತಿಸು ಎನ್ನುತ್ತದೆ. ಕ್ರೈಸ್ತ ಧರ್ಮೀಯರು ಈ ನೆಲೆಯಲ್ಲಿ ಸೇವೆಯನ್ನು ಮಾಡುತ್ತಾ ಬಂದಿದ್ದಾರೆ. ನಾವೆಲ್ಲರೂ ಸಮಭಾವನೆ, ಸಮಬಾಳ್ವೆ ಸಂದೇಶದಲ್ಲಿ ಸಾಗುತ್ತಿದ್ದೇವೆ. ಈ ಕಾರ್ಯಕ್ರಮದಲ್ಲಿನ ವಿಚಾರಧಾರೆ ಇಡೀ ಭಾರತದ ಮೂಲೆ ಮೂಲೆಗೂ ತಲುಪಲಿ” ಎಂದು ಆಶಿಸಿದರು.

*ಸೆಕ್ಯುಲರಿಸಂ ಭಾರತದಲ್ಲೇ ಹುಟ್ಟಿ ಬೆಳೆದದ್ದೇ ಹೊರತು ಹೊರಗಿನದ್ದಲ್ಲ: ಯೋಗೇಂದ್ರ ಯಾದವ್‌*

ರೈತ ನಾಯಕ, ರಾಜಕೀಯ ವಿಶ್ಲೇಷಕ ಯೋಗೇಂದ್ರ ಯಾದವ್‌ ಮಾತುಗಳು ಇಂದಿನ ಸನ್ನಿವೇಶಕ್ಕೆ ಕನ್ನಡಿ ಹಿಡಿದವು.

“ನನಗೆ ಕನ್ನಡ ಬರದಿದ್ದರೂ ನೀವು ಹೇಳುತ್ತಿರುವುದು ಅರ್ಥವಾಗುತ್ತಿದೆ. ಯಾಕೆಂದರೆ ಅದು ಹೃದಯದ ಭಾಷೆಯಾಗಿದೆ” ಎಂದು ಮಾತು ಆರಂಭಿಸಿದರು.

“ಅವರು ಒಡೆಯುತ್ತಾರೆ, ನಾವು ಕೂಡಿಸುತ್ತೇವೆ. ಒಂದು ಸಮುದಾಯವನ್ನು ಎರಡನೇ ದರ್ಜೆಯ ನಾಗರಿಕರನ್ನಾಗಿ ಮಾಡಲು ಯತ್ನಿಸುತ್ತಾರೆ. ಹಿಂದಿ ರಾಷ್ಟ್ರ ಭಾಷೆ ಎಂದು ಕೆಲವರು ಹೇಳುತ್ತಾರೆ. ಯಾವುದೇ ಭಾಷೆ ರಾಷ್ಟ್ರೀಯ ಭಾಷೆ ಎಂದು ಸಂವಿಧಾನ ಹೇಳಿಲ್ಲ. ಕನ್ನಡ  ಭಾಷೆಗೆ ಎರಡೂವರೆ ಸಾವಿರ ವರ್ಷಗಳ ಇತಿಹಾಸವಿದ್ದರೆ, ಹಿಂದಿ ನಾಲ್ಕು ನೂರು ವರ್ಷ ಹಳೆಯದ್ದಷ್ಟೇ” ಎಂದು ತಿಳಿಸಿದರು.

“ಉಡುಪಿಯಲ್ಲಿ ಘೋಷಿಸುತ್ತೇವೆ. ಯಾರ್‍ಯಾರ ಪೂರ್ವಿಕರ ರಕ್ತ ಇಲ್ಲಿದೆಯೋ ಅವರೆಲ್ಲರೂ ಈ ದೇಶದ ಮಾಲೀಕರೇ ಹೊರತು ಗುಲಾಮರಲ್ಲ. ಸಂವಿಧಾನದಲ್ಲಿ ಸೆಕ್ಯುಲರಿಸಂ ಮೊದಲು ಇರಲಿಲ್ಲ, ಆಮೇಲೆ ಸೇರಿಸಲಾಯಿತು ಎನ್ನುತ್ತಾರೆ. ಆದರೆ ಸಂವಿಧಾನದಲ್ಲಿ ಸೆಕ್ಯುಲರಿಸಂ ಮೊದಲೇ ಇತ್ತು. ಸಂವಿಧಾನದ ಹಲವು ವಿಧಿಗಳು ಜಾತ್ಯತೀತತೆಯನ್ನು ಸಾರಿವೆ” ಎಂದು ವಿವರಿಸಿದರು.

“ಗೌತಮ ಬುದ್ಧ, ಅಕ್ಬರ್‌ ಮೈತ್ರಿ ಬಗ್ಗೆ ಹೇಳುತ್ತಾರೆ. ಸೆಕ್ಯುಲರಿಸಂ ಬ್ರಿಟಿಷರ ಕೊಡುಗೆ ಅಲ್ಲ. ಐದು ಸಾವಿರ ವರ್ಷಗಳಿಂದ ಈ ದೇಶ ಹೀಗೆಯೇ ನಡೆಯುತ್ತಿದೆ. ಮುಂಚೆಯೂ ದೇಶ ಹೀಗೆಯೇ ಇತ್ತು, ಮುಂದೆಯೂ ಇರುತ್ತದೆ. ಎಲ್ಲರನ್ನೂ ಗೌರವಿಸುವ, ಒಟ್ಟಿಗೆ ಕರೆದೊಯ್ಯುವುದು ಈ ದೇಶದ ಧರ್ಮ” ಎಂದು ವರ್ಣಿಸಿದರು.

“ದೇಶದ್ರೋಹದ ಬಗ್ಗೆ ಮಾತನಾಡುತ್ತಾರೆ. ಅವರೇ ದೇಶದ್ರೋಹದ ಸರ್ಟಿಫಿಕೇಟ್ ಕೊಡುತ್ತಾರೆ. ನಾನು ಒಂದೇ ಸರ್ಟಿಫಿಕೇಟ್‌ ಕೊಡುತ್ತೇನೆ. ಈ ದೇಶವನ್ನು ಯಾರು ಕಟ್ಟುತ್ತಾರೋ ಅವರು ದೇಶಪ್ರೇಮಿಗಳು. ಹಿಂದೂ, ಮುಸ್ಲಿಂ, ಹಿಂದೂ ಸಿಖ್ಖರ ನಡುವೆ ಜಗಳ ತರುವವರು ದೇಶದ್ರೋಹಿಗಳು. ಹಿಂದೂಸ್ಥಾನದ ಮೇಲೆ, ಸಂವಿಧಾನದ ಮೇಲೆ ಬುಲ್ಡೋಜರ್‌ ಚಲಾಯಿಸಲಾಗುತ್ತಿದೆ. ಈ ದೇಶದ ಬುನಾದಿಯನ್ನು ಉಳಿಸಲು ಯತ್ನಿಸುವವರು ದೇಶಪ್ರೇಮಿಗಳು” ಎಂದರು.

“ಬುಲ್ಡೋಜರ್‌ ಚಲಾವಣೆ ಮಾಡುತ್ತಿರುವವರ ಕೈಲಿ ಮಿಡಿಯಾ ಇದೆ. ಒಳ್ಳೆಯ ಮಿಡಿಯಾ ಆಗಿದ್ದರೆ ಉಡುಪಿ ಸಮಾವೇಶ ಕುರಿತು ಹೆಚ್ಚು ವರದಿ ಮಾಡುತ್ತದೆ. ಬುಲ್ಡೋಜರ್‌ ಚಲಾವಣೆ ಮಾಡುವವರ ಕೈಲಿ ಮಾಧ್ಯಮಗಳ ಕುತ್ತಿಗೆ ಪಟ್ಟಿ ಇದೆ. ಅವರ ಕೈಲಿ ಪೊಲೀಸರ ಲಾಠೀ ಇದೆ. ನಮ್ಮ ಕೈಯಲ್ಲಿ ಏನಿದೆ- ಬುದ್ಧ ಚಿಂತನೆ, ಸೂಫಿಗಳ ಸಂದೇಶ ಹಾಗೂ ಈ ದೇಶದ ಮಣ್ಣು ನಮ್ಮ ಬಳಿ ಇದೆ” ಎಂದು ಮಾರ್ಮಿಕವಾಗಿ ಹೇಳಿದರು.

*ಜನ್ನಿ ಗಾಯನ*

ಹೋರಾಟಗಾರ ಜನಾರ್ದನ್‌ (ಜೆನ್ನಿ) ಅವರು ಹುಲಿಕುಂಟೆ ಮೂರ್ತಿ ರಚಿಸಿರುವ ‘ಸಹಬಾಳ್ವೆ- ಸಾಮರಸ್ಯ ನಮ್ಮ ನೆಲದ ಅಂತಸತ್ವ ’ ಹಾಡನ್ನು ಹಾಡಿದರು.

ಮೈಸೂರು ಬಸವ ಜ್ಞಾನ ಮಂದಿರದ ಡಾ.ಮಾತೆ ಬಸವಾಂಜಲಿ ದೇವಿ ಮಾತನಾಡಿ, ‘ಯಾವುದೇ ಮನುಷ್ಯನ ಮೈಯಲ್ಲಿ ಹರಿಯುತ್ತಿರುವುದು ಕೆಂಪು ರಕ್ತ. ಯಾರೂ ಭೇದ ಮಾಡಬಾರದು. ಆದರೆ ಮನುಷ್ಯ ಮನುಷ್ಯನನ್ನು ಕೊಲ್ಲುತ್ತಿದ್ದಾನೆ. ಅಸತ್ಯದ ವಿರುದ್ಧ ನಿಂತು ಹೋರಾಡಬೇಕಾಗಿದೆ” ಎಂದು ಗುಡುಗಿದರು.

*ಕೊಲ್ಲುವುದಾಗಿ ಪತ್ರ ಬರೆದಿದ್ದಾರೆ: ಬಸವ ಪ್ರಕಾಶ ಸ್ವಾಮೀಜಿ*

ಬೆಳಗಾವಿಯ ಬಸವ ಧರ್ಮ ಪೀಠದ ಬಸವ ಪ್ರಕಾಶ ಸ್ವಾಮೀಜಿ ಮಾತನಾಡಿ, “ತಮಗೆ ಕೊಲೆ ಬೆದರಿಕೆ ಬಂದಿವೆ” ಎಂದು ತಿಳಿಸಿದರು.

“ನಮಗೆ ಹಿಂದುತ್ವ ಬೇಕಾಗಿಲ್ಲ. ಸರ್ವಜನಾಂಗದ ಶಾಂತಿಯ ತೋಟ ಬೇಕಾಗಿದೆ.  ನನ್ನ ಮಠಕ್ಕೂ ಪತ್ರ ಬಂದಿವೆ. ಸಂವಿಧಾನ ಎಂದು ಹೇಳುತ್ತಾ ಓಡಾಡುತ್ತಿದ್ದೀರಾ. ಗುಂಡಿಗೆ ಬಲಿಯಾಗುತ್ತೀರಿ ಎಂದು ಬರೆದಿದ್ದಾರೆ. ಭಾರತದ ಸಂವಿಧಾನದ ಇರುವಾಗ ಯಾವುದೇ ಭಯವಿಲ್ಲ” ಎಂದು ಪ್ರತಿಕ್ರಿಯೆ ನೀಡಿದರು.

ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರು ಎಲ್ಲರ ಧರ್ಮಾಚರಣೆಗೂ ಅವಕಾಶ ಕಲ್ಪಿಸಿದ್ದಾರೆ. ಹಿಂದೂ ಎಂಬ ಶಬ್ಧದಿಂದ ಬಡಿದಾಡೋದು ಬೇಡ, ನಾವೆಲ್ಲ ಒಂದೇ ಎಂದು ಸಾಗೋಣ. ಸಮಾನತೆ, ಸಮನ್ವಯತೆಯ ತತ್ವದಲ್ಲಿ ಬದುಕೋಣ ಎಂದು ಆಶಿಸಿದರು.

“ದೇವನೊಬ್ಬ ನಾಮ ಹಲವು ಎಂದಿರುವ ದೇಶ ಎಂದಿರುವ ದೇಶ ನಮ್ಮದು. ನಮಗೆ ಹಿಂದುತ್ವ ಬೇಕಾಗಿಲ್ಲ. ಮಾನವ ಬಂಧುತ್ವ ಬೇಕಾಗಿದೆ.  ನಮ್ಮ ಗುರಿಯೊಂದೇ ಆಗಿರಬೇಕು. ಹಿಂದೂ, ಮುಸ್ಲಿಂ, ಲಿಂಗಾಯತ ಎಂಬುದನ್ನೆಲ್ಲ ಮಂದಿರ, ಮಸೀದಿ, ಮಠದಲ್ಲಿ ಬಿಟ್ಟು ಬರೋಣ. ನಾವು ಭಾರತೀಯರಾಗಿ ನಡೆಯೋಣ” ಎಂದು ತಿಳಿಸಿದರು.

*ಡಾ.ಎಂ.ಎಸ್.ಎಂ.ಅಬ್ದುಲ್‌ ರಶೀದ್ ಸಖಾಫಿ ಝೈನಿ ಕಾಮಿಲ್‌* ಮಾತನಾಡಿ, “ಇದೊಂದು ಪುಟ್ಟ ಭಾರತ. ಎಲ್ಲ ಜಾತಿ, ಜನಾಂಗದ ಒಟ್ಟಾಗಿ ಸೇರಿ ಬದುಕಿದರೆ ಹೇಗಿರಬಹುದು ಎಂಬುದಕ್ಕೆ ಉದಾಹರಣೆಯಾಗಿ ಈ ಕಾರ್ಯಕ್ರಮ ಕಾಣುತ್ತಿದೆ. ಈ ಕಾರ್ಯಕ್ರಮವನ್ನು ಇಡೀ ರಾಜ್ಯಕ್ಕೆ ವಿಸ್ತರಿಸಬೇಕು. ಆಡಳಿತ ಶಕ್ತಿಯಾಗಿ ಸಹಬಾಳ್ವೆ ಬೆಳೆಯಬೇಕು” ಎಂದು ಒತ್ತಾಯಿಸಿದರು.

*ರೆವರೆಂಡ್ ಡಾ.ಹಬರ್ಟ್ ಎಂ. ವಾಟ್ಸನ್‌* , ಸಹಬಾಳ್ವೆಯ ಕುರಿತು ಸಂದೇಶ ಸಾರಿದರು.
*ಮೌಲಾನ ಯುಕೆ ಅಬ್ದುಲ್‌ ಅಝೀಜ್‌ ದಾರಿಮಿ ಚೊಕ್ಕಬೆಟ್ಟ* ಮಾತನಾಡಿ, “ಕಡಲು ಹೆಣವನ್ನು ಎತ್ತಿ ಬಿಸಾಕಿದಂತೆ ದ್ವೇಷವನ್ನು ಈ ಸಮಾವೇಶ ಎತ್ತಿ ಬಿಸಾಕಿದೆ” ಎಂದು ಅಭಿಪ್ರಾಯಪಟ್ಟರು.

ಉಡುಪಿ ಧರ್ಮಪ್ರಾಂತ ಸಾರ್ವಜನಿಕ ಸಂಪರ್ಕಾಧಿಕಾರಿ *ಫಾದರ್‌ ಚೇತನ್‌ ಲೋಬೋ* ಮಾತನಾಡಿ, “ಟೀಕಾಕಾರರ ಮುಂದೆ ಆಕಾಶದೆತ್ತರಕ್ಕೆ ಬೆಳೆದಿದ್ದೇವೆ. ಉಡುಪಿಗೆ ಬಂದಿದ್ದ ಕುಖ್ಯಾತಿಯನ್ನು ಕಿತ್ತೆಸೆಯಲಾಗಿದೆ” ಎಂದು ಘೋಷಿಸಿದರು.

ನಿನ್ನ ದೇವರು, ಧರ್ಮ ಅಶಾಂತಿ ತರುವುದಾದರೆ ಅದನ್ನು ಬಿಟ್ಟು ಬಿಡು. ನಿನಗೊಂದು ಹೊಸಧರ್ಮ, ಹೊಸ ದೇವರ ಅಗತ್ಯವಿದೆ. ಯಾವುದೇ ಧರ್ಮ ದ್ವೇಷವನ್ನು ಕಲಿಸುವುದಿಲ್ಲ. ಮನುಷ್ಯ ತಪ್ಪಾಗಿ ಧರ್ಮವನ್ನು ಅರ್ಥ ಮಾಡಿಕೊಂಡಿದ್ದಾನೆ. ಮೌನವಾಗಿರುವುದು ಅಪಾಯಕಾರಿ. ಪ್ರತಿಯೊಬ್ಬರೂ ತುಟಿಬಿಚ್ಚಿ ಮಾತನಾಡಬೇಕು ಎಂದು ಆಗ್ರಹಿಸಿದರು.
*ಮಣಿಪಾಲ ಗುರುದ್ವಾರದ ಜ್ಞಾನಿ ಬಲರಾಜ್‌ ಸಿಂಗ್‌* ಧರ್ಮ ಸಂದೇಶ ನೀಡಿದರು.

*ಮೇಲು ಕೀಳಿನ ಮನಸ್ಥಿತಿಯೇ ದೇಶ ವಿರೋಧಿ: ಸಸಿಕಾಂತ್ ಸೆಂಥಿಲ್‌*

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ಐಎಸ್‌ಐ ಅಧಿಕಾರಿ ಸಸಿಕಾಂತ್‌ ಸೆಂಥಿಲ್‌, “ನಾನು ತಮಿಳಿಗ. ಆದರೆ ಕನ್ನಡ ಕಲಿತು ಮಾತನಾಡುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಇಂದು ಮಾತನಾಡುತ್ತಿದ್ದೇನೆ. ಇದು ಭಾರತ” ಎಂದು ಮಾತು ಆರಂಭಿಸಿ ಹಲವಾರು ಒಳನೋಟಗಳನ್ನು ಹಂಚಿಕೊಂಡರು.

“ಇಂದು ನೋಡುತ್ತಿರುವುದು ಧರ್ಮಗಳ ಸಮಸ್ಯೆಯನ್ನಲ್ಲ. ಅದು ಮೇಲು ಕೀಳು ಎಂಬ ಮನಸ್ಥಿತಿಯ ಸಮಸ್ಯೆ. ಇದು ಎಲ್ಲ ಧರ್ಮದಲ್ಲೂ ಇದೆ. ಪೊಲೀಸ್, ನ್ಯಾಯಾಂಗ ವ್ಯವಸ್ಥೆಯಲ್ಲಿಯೂ ಈ ಮನಸ್ಥಿತಿ ಇದೆ. ಇದರ ವಿರುದ್ಧ ಹೋರಾಟ ಮಾಡಬೇಕು. ಈ ಮನಸ್ಥಿತಿಯು ಭಾರತೀಯತೆಗೆ ವಿರುದ್ಧವಾದದ್ದು. ಈ ಸಮಸ್ಯೆಯು ಭಾರತವನ್ನು ನಂಬದೆ ಇರುವವರಿಂದ ಹುಟ್ಟಿದೆ” ಎಂದು ವಿಶ್ಲೇಷಿಸಿದರು.

“ಈ ಮನಸ್ಥಿತಿಯ ಜನರು ಕೇವಲ ಹತ್ತು ಪರ್ಸೆಂಟ್ ಇದ್ದಾರೆ. ಆದರೆ ದ್ವೇಷವನ್ನು ತಮ್ಮ ಆಸ್ತಿ ಎಂದು ಅವರು ಭಾವಿಸಿದ್ದಾರೆ. ಅದರ ವಿರುದ್ಧ ದನಿ ಎತ್ತಬೇಕಾಗಿದೆ” ಎಂದು ತಿಳಿಸಿದರು.

“ನಿಜವಾದ ಭಾರತವನ್ನು ಆಚರಣೆ ಮಾಡುವುದನ್ನು ನಾವು ಮರೆತಿದ್ದೇವೆ. ನಾವು ಇನ್ನು ಮುಂದೆ ಆಚರಣೆ ಮಾಡಬೇಕಾಗಿದೆ. ಈ ಆಚರಣೆ ಇಲ್ಲಿಂದ ಶುರುವಾಗಬೇಕಿದೆ. ಈ ಸಹೋದರತ್ವ, ಬಂಧುತ್ವವನ್ನು ಆಚರಿಸಬೇಕಿದೆ” ಎಂದು ಆಶಿಸಿದರು.

“ದ್ವೇಷ‘- ಹರಡುವವರ ಸಮಸ್ಯೆಯಲ್ಲ, ಅದನ್ನು ನೋಡಿಕೊಂಡು ಸುಮ್ಮನಿರುವುದು ಸಮಸ್ಯೆಯಾಗಿದೆ. ಎಲ್ಲರೂ ಒಳ್ಳೆಯವರೇ  ಆದರೆ ಮಾತನಾಡುತ್ತಿಲ್ಲ. ನಮ್ಮನ್ನು ಎಲ್ಲಿ ಸಿಕ್ಕಿ ಹಾಕಿಸುತ್ತಾರೊ ಎಂಬ ಭಯ. ಹಿಂದೂ ಮುಸ್ಲಿಂ ಸಮಸ್ಯೆ ಎನ್ನುತ್ತಿರುವುದರಿಂದ ಮೌನವಾಗಿದ್ದಾರೆ. ಭಾರತೀಯರು ಮತ್ತು ಭಾರತವನ್ನು ಒಪ್ಪದೆ ಇರುವವರ ಸಮಸ್ಯೆ ಎಂದು ಮಾತನಾಡಬೇಕು. ಅದು ನಿಜವಾದ ಪ್ರತಿಪಾದನೆ” ಎಂದು ತಿಳಿಸಿದರು.

“ಭಾರತವನ್ನು ನಂಬದೆ ಇರುವವರು ಕೇವಲ ಹತ್ತು ಪರ್ಸೆಂಟ್‌ ಮಾತ್ರ ಇದ್ದಾರೆ. ಭಾರತವನ್ನು ನಂಬುವವರು ಮತ್ತು ನಂಬದಿರುವವರ ಸಮಸ್ಯೆ ಎಂದು ಮಾತನಾಡಬೇಕು. ಈ ಸಹೋದರತೆಯನ್ನು ಆಚರಣೆ ಮಾಡಬೇಕು. ಇದನ್ನು ಮಾಡದೆ ಇರುವುದರಿಂದ ನಾವು ಡಲ್ ಆಗಿದ್ದೇವೆ” ಎಂದು ಎಚ್ಚರಿಸಿದರು.

“ನಮ್ಮ ಮಕ್ಕಳ ಭವಿಷ್ಯಕ್ಕಾಗಿ ನಾವುವಹನ ಮಾತನಾಡಬೇಕಿದೆ. ಇದು ಐತಿಹಾಸಿಕ ಸಮಾವೇಶ. ಯುವಶಕ್ತಿಯ ಮೂಲಕ ಇಲ್ಲಿನ ಆಶಯವನ್ನು ಹಳ್ಳಿಹಳ್ಳಿಗೆ ತಲುಪಿಸಬೇಕು” ಎಂದರು.

*ವರದಿ- ಯತಿರಾಜ್ ಬ್ಯಾಲಹಳ್ಳಿ*