ಜನಪರ ನಿಲುವು ಮರೆತ ಕರಾವಳಿಯ ರಾಜಕಾರಣಿಗಳು, ಎಂಆರ್ ಪಿಎಲ್ ಆಸುಪಾಸಿನಲ್ಲಿ ಕ್ಯಾನ್ಸರ್ ಎಂದ ಬಿಎಂ ಫಾರೂಕ್, ಪ್ಲಾಸ್ಟಿಕ್ ಪಾರ್ಕ್ ಜಪಿಸುವ ಸಂಸದರೂ…!

ಬಿ.ಎಂ.ಫಾರೂಕ್.. ಮೂಲತಃ ಮಂಗಳೂರಿನವರೇ ಆಗಿದ್ದರೂ, ಉದ್ಯಮ ಮತ್ತು ರಾಜಕೀಯದಲ್ಲಿ ಬೆಳೆದಿದ್ದು ಬೆಂಗಳೂರಿನಲ್ಲಿ. ಹಾಗಾಗಿ ಮಂಗಳೂರಿನಲ್ಲಿ ರಾಜಕೀಯವಾಗಿ ಅಥವಾ ಅಧಿಕಾರಿಗಳ ಜೊತೆ ಕಾಣಿಸಿಕೊಂಡಿದ್ದು ಕಡಿಮೆ. ವಿಧಾನ ಪರಿಷತ್ತಿನ ಭರವಸೆಗಳ ಸಮಿತಿಯ ಅಧ್ಯಕ್ಷರಾಗಿ ಮಂಗಳೂರಿಗೆ ಬಂದ ಬಿ.ಎಂ.ಫಾರೂಕ್ ಶೈಲಿಯನ್ನು ನೋಡಿದರೆ, ಜನರ ಮಧ್ಯೆ ತುಂಬ ಭರವಸೆ ಮೂಡಿಸಿದ್ದಾರೆ. ಮಾತಿನ ಶೈಲಿ, ಅಧಿಕಾರಿಗಳ ಜೊತೆಗಿನ ಮಾತು, ತೊದಲುವಿಕೆ ಇಲ್ಲದ ಕನ್ನಡ, ಪತ್ರಕರ್ತರ ಪ್ರಶ್ನೆಗೆ ಸಾವಧಾನದ ಉತ್ತರ ನೋಡಿದರೆ ಕರಾವಳಿಯ ಇತರ ರಾಜಕಾರಣಿಗಳಿಗಿಂತ ತುಂಬ ವಿಭಿನ್ನವಾಗಿ ಕಂಡಿದ್ದಾರೆ.

ಹಾಗೆ ನೋಡಿದರೆ, ಕರಾವಳಿಯ ಇತರ ಮುಸ್ಲಿಂ ರಾಜಕಾರಣಿಗಳಿಗೆ ಹೆಚ್ಚಿನವರಿಗೆ ಸ್ಪಷ್ಟ ಕನ್ನಡದಲ್ಲಿ ಮಾತನಾಡುವುದಕ್ಕೇ ಬರಲ್ಲ. ಎರಡೆರಡು ಬಾರಿ ಸಚಿವರಾಗಿರುವ ಯು.ಟಿ.ಖಾದರ್ ಆಗಲೀ, ಶಾಸಕರಾಗಿರುವ ಮೊಯ್ದೀನ್ ಬಾವಾ ಆಗಲೀ ಕನ್ನಡದಲ್ಲಿ ಮಾತನಾಡಲು ತೊದಲುತ್ತಾರೆ. ಯಾವುದೇ ವಿಚಾರವನ್ನು ಸುಲಭದಲ್ಲಿ ಅರ್ಥವಾಗುವಂತೆ ಹೇಳುವ ಶೈಲಿ ಬೆಳೆಸಿಕೊಂಡಿಲ್ಲ. ಕರ್ನಾಟಕದ ಮುಸ್ಲಿಂ ರಾಜಕಾರಣಿಗಳ ಪೈಕಿ ಮಾತಿನ ಮಲ್ಲ ಎಣಿಸಿಕೊಂಡವರು ಸಿ.ಎಂ.ಇಬ್ರಾಹಿಂ ಮಾತ್ರ. ಸಮಾಜದ ಆಗುಹೋಗುಗಳ ಬಗೆಗಿನ ಜ್ಞಾನ, ಹಲವು ಭಾಷೆಗಳನ್ನು ತಮ್ಮ ಶೈಲಿಗೆ ತಕ್ಕಂತೆ ಬಗ್ಗಿಸಿ ಒಗ್ಗಿಸಿಕೊಂಡು ಹೋಗುವ ಅವರನ್ನು ಮೀರಿಸಿದವರಿಲ್ಲ. ರಾಜ್ಯದ ಬೇರೆ ಯಾವುದೇ ರಾಜಕಾರಣಿಗಳಿಗೂ ಇಲ್ಲದ ಮಾತಿನ ಛಾಪು ಇಬ್ರಾಹಿಂ ಅವರಲ್ಲಿದೆ.

ಆದರೆ ಬಿ.ಎಂ.ಫಾರೂಕ್ ಮಾತುಗಾರನಲ್ಲ. ಆದರೆ ಜನಪರ ಸಮಸ್ಯೆಯ ವಿಷಯಗಳಲ್ಲಿ ಅಧಿಕಾರಿಗಳೊಂದಿಗೆ ಮಾತನಾಡುವ ಶೈಲಿ, ವಿಷಯ ಜ್ಞಾನದಲ್ಲಿ ಕರಾವಳಿಯ ಇತರೆಲ್ಲ ರಾಜಕಾರಣಿಗಳಿಗಿಂತ ತುಂಬ ಭಿನ್ನವಾಗಿ ಕಾಣುತ್ತಾರೆ. ಸಾವಿರಾರು ಕೋಟಿಯ ಒಡೆಯ, ಭಾರೀ ದೊಡ್ಡ ಉದ್ಯಮ ಸಮೂಹದ ಮಾಲೀಕನಾಗಿದ್ದರೂ, ಜನರ ಪರವಾಗಿ ನಿಲ್ಲುವುದು, ಕಡ್ಡಿ ಮುರಿದಂತೆ ಮಾಲಿನ್ಯ ಸಮಸ್ಯೆಗೆ ಅಧಿಕಾರಿಗಳನ್ನೇ ಹೊಣೆಯಾಗಿಸುವ ಛಾತಿ ಬೇರೆ ರಾಜಕಾರಣಿಗಳಲ್ಲಿ ಕಂಡುಬರುವುದಿಲ್ಲ. ಎಂಆರ್ ಪಿಎಲ್ ಆಸುಪಾಸಿನ ಪ್ರದೇಶಗಳಿಗೆ ಭೇಟಿ ನೀಡಿರುವ ಭರವಸೆಗಳ ಸಮಿತಿಯ ಸದಸ್ಯರು ಅಲ್ಲಿನ ಜನರಲ್ಲಿ ನೇರವಾಗಿ ಅಹವಾಲು ಆಲಿಸಿದ್ದಾರೆ. ಅಲ್ಲಿನ ಕೈಗಾರಿಕೆಗಳ ಮಾಲಿನ್ಯವನ್ನು ನೀರಿಗೆ ಬಿಡುತ್ತಿರುವುದು, ಎಂಆರ್ ಪಿಎಲ್ ಆವರಣದಲ್ಲಿ ಗಾಳಿಯಲ್ಲಿ ಕಪ್ಪು ಮಸಿ ಬೀಳುತ್ತಿರುವುದನ್ನು ನಿವಾಸಿಗಳು ಸದಸ್ಯರ ಗಮನಕ್ಕೆ ತಂದಿದ್ದಾರೆ. ಇದನ್ನು ತುಂಬ ಸಾವಧಾನವಾಗಿಯೇ ಆಲಿಸಿದ ಬಿ.ಎಂ.ಫಾರೂಕ್, ಶಶೀಲ್ ನಮೋಶಿ ಮತ್ತಿತರರಿದ್ದ ಸಮಿತಿಯ ಸದಸ್ಯರು ಗಂಭೀರವಾಗಿ ಪರಿಗಣಿಸಿದ್ದು ಗಮನಿಸಬೇಕಾದ ಅಂಶ. ಅಷ್ಟೇ ಅಲ್ಲ, ಆಸುಪಾಸಿನ ಜನರಲ್ಲಿ ಕ್ಯಾನ್ಸರ್ ರೀತಿಯ ರೋಗಗಳು ಹೆಚ್ಚಿರುವುದು, ಕುಡಿಯುವ ನೀರು ಮಲಿನವಾಗಿರುವುದು, ಗಾಳಿಯಲ್ಲಿ ವಿಷಕಾರಿ ಅನಿಲಗಳು ಸೇರ್ಪಡೆಯಾಗಿರುವುದನ್ನು ಕಂಡುಕೊಂಡ ಸಮಿತಿ ಸದಸ್ಯರು ಅಂತಾರಾಷ್ಟ್ರೀಯ ಸಂಸ್ಥೆಯಿಂದ ಅಧ್ಯಯನ ನಡೆಸಬೇಕಾಗಿದೆ ಎಂದು ರಾಜ್ಯ ಸರಕಾರಕ್ಕೆ ಆಗ್ರಹ ಮಾಡಿದ್ದಾರೆ.

ಸುರತ್ಕಲ್, ಕಾಟಿಪಳ್ಳ ಪರಿಸರದಲ್ಲಿ ಪರಿಸರ ಮಾಲಿನ್ಯ ಹೆಚ್ಚಿರುವ ಬಗ್ಗೆ ಹಲವು ಬಾರಿ ಸಾಮಾಜಿಕ ಸಂಘಟನೆಗಳು ಜಿಲ್ಲಾಡಳಿತ, ಶಾಸಕರು, ಸಂಸದರ ಗಮನಕ್ಕೆ ತಂದಿದ್ದಿದೆ. ಆದರೆ, ಈ ವಿಚಾರದಲ್ಲಿ ಜಿಲ್ಲಾಡಳಿತ, ಶಾಸಕರು ಮಾತ್ರ ಜಾಣ ಮೌನವನ್ನೇ ವಹಿಸಿಕೊಂಡು ಬಂದಿದ್ದಾರೆ. ಕೈಗಾರಿಕೆಗಳ ತ್ಯಾಜ್ಯದಿಂದ ಜನರ ಆರೋಗ್ಯಕ್ಕೆ ಹಾನಿಯಾಗುತ್ತಿದೆ, ಇದಕ್ಕೆ ಕಾರಣವಾದ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಜನರ ಒತ್ತಾಯ ಅರಣ್ಯ ರೋದನವಾದಂತಿದೆ. ಇದೀಗ ಕೈಗಾರಿಕೆಗಳ ಕಾರಣದಿಂದ ಗಂಭೀರ ಸಮಸ್ಯೆ ಉದ್ಭವಿಸಿರುವುದನ್ನು ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿಗಳೂ ಒಪ್ಪಿಕೊಂಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಭರವಸೆಗಳ ಕಮಿಟಿಯ ಸದಸ್ಯರು ಅಧಿಕಾರಿಗಳಿಂದಲೇ ಪತ್ರಕರ್ತರಿಗೆ ಮಾಹಿತಿ ನೀಡುವಂತೆ ಮಾಡಿದ್ದು ಪ್ರಮುಖ ವಿದ್ಯಮಾನ. ಹೀಗಾಗಿ, ಈವರೆಗೂ ಬಚ್ಚಿಟ್ಟುಕೊಂಡಿದ್ದ ಆಘಾತಕಾರಿ ವಿಷಯವನ್ನು ಅಧಿಕಾರಿಗಳು ಒಪ್ಪಿಕೊಂಡಿದ್ದೇ ಈ ನಾಡಿನ ದುರಂತ ಸತ್ಯ. ಅಧಿಕಾರಿಗಳು ದುರಂತ ಸತ್ಯ ಹೇಳುತ್ತಿದ್ದರೆ, ನಮ್ಮ ಶಾಸಕರು, ಸಂಸದರು, ಅಧಿಕಾರಿ ವರ್ಗ ಜನರನ್ನು ಸಾಯಲು ಬಿಟ್ಟಿದ್ದಾರೆಯೇ ಎನ್ನುವ ಪ್ರಶ್ನೆ ಬರಲ್ಲವೇ..? ಇವರಿಗೆ ಜನರ ಬಗ್ಗೆ ಕನಿಷ್ಠ ಕಾಳಜಿ ಇದ್ದಿದ್ದರೆ, ಈ ಕೈಗಾರಿಕೆಗಳ ವಿರುದ್ಧ ಕಠಿಣ ನಿಲುವು ತಾಳುತ್ತಿರಲಿಲ್ಲವೇ..?

ಎಂಆರ್ ಪಿಎಲ್ ಇವತ್ತು ವರ್ಷಕ್ಕೆ 80 ಸಾವಿರ ಕೋಟಿ ವಹಿವಾಟು ನಡೆಸುವ ಕಂಪನಿಯಾಗಿರಬಹುದು. ಆದರೆ, ಅದು ಇಷ್ಟೆಲ್ಲವನ್ನೂ ಮಾಡುತ್ತಿರೋದು ನಮ್ಮ ನಾಡಿನ ನೆಲ, ಜಲ, ಪರಿಸರವನ್ನು ಬಳಸಿಕೊಂಡು. ನಮ್ಮ ನಾಡಿನ ಪರಿಸರ ಹಾಳುಗೆಡವಿ, ಮತ್ಸ್ಯ ಸಂಕುಲವನ್ನು ನಾಶ ಮಾಡಿ ಎಂಆರ್ ಪಿಎಲ್, ಬಿಎಸ್ಎಫ್, ಎಸ್ ಇಝೆಡ್ ಕಂಪನಿಗಳು ಇಲ್ಲಿ ಇದ್ದರೇನು, ಇಲ್ಲದಿದ್ದರೇನು..? ಅದರಿಂದ ನಮಗೇನೂ ಲಾಭವಂತೂ ಇರೋದಿಲ್ಲ. ಜನರಿಗೆ ಕಾಯಿಲೆ ತರಿಸಿ, ವಿಷವುಣಿಸಿ ಜನರ ಸಾವಿಗೆ ಕಾರಣವಾಗುವ ಇಂತಹ ಕೈಗಾರಿಕೆಗಳ ವಿರುದ್ಧ ಕಠಿಣ ನಿಲುವು ತಾಳದ ಜನಪ್ರತಿನಿಧಿಗಳು, ಅಧಿಕಾರಿ ವರ್ಗಕ್ಕೆ ಜನರು ಚಪ್ಪಲಿ ತೋರಿಸಿ ರಸ್ತೆಯುದ್ದಕ್ಕೂ ಓಡಿಸಿದರೂ ಕಡಿಮೆಯೇ ?

ಪರಿಸರ ನಿಯಂತ್ರಣ ಮಂಡಳಿ ಎಂಬ ಇಲಾಖೆಯಲ್ಲಿ ಏಸಿ ಕಚೇರಿಯೊಳಗೆ ಕುಳಿತು ಹೊಟ್ಟೆ ಚಾಚಿಕೊಳ್ಳುವ ನರಸತ್ತು ಹೋಗಿರುವ, ಕೈಗಾರಿಕೆಗಳ ದುಡ್ಡು ಪಡೆದು ಅವರದೇ ಬೂಟು ನೆಕ್ಕುವ ಅಧಿಕಾರಿ ವರ್ಗಕ್ಕೆ ಬೂಟು ಗಾಲಿನಲ್ಲಿ ಒದ್ದು ನೆಲಕ್ಕೆ ಬೀಳಿಸುವ ಕೇರಳದ ಶೈಲಿ ಮಂಗಳೂರಿನಲ್ಲೂ ಬಂದರೆ ಇಂಥವಕ್ಕೆ ಬುದ್ಧಿ ಬಂದೀತೋ ಏನೋ.. ಧರ್ಮದ ನೆಪದಲ್ಲಿ ಉರಿದು ಬೀಳುವ ಕರಾವಳಿಯ ಕೋಮುವಾದಿಗಳು, ಇತರೇ ಪಕ್ಷಗಳ ರಾಜಕಾರಣಿಗಳು, ಜನಪ್ರತಿನಿಧಿಗಳು ಕೇರಳದ ಕಮ್ಯುನಿಸ್ಟರು, ಆರೆಸ್ಸೆಸ್ಸಿಗರ ಶೈಲಿಯನ್ನು ಯಾಕೆ ಪಾಲಿಸುತ್ತಿಲ್ಲ. ಅಲ್ಲಿ ಕೆಲಸ ಮಾಡದ ಅಧಿಕಾರಿ, ಜನಪ್ರತಿನಿಧಿಗಳಿಗೆ ಯಾವುದೇ ಅಂಜಿಕೆ ಇಲ್ಲದೆ ಚಪ್ಪಲಿ ತೋರಿಸುವ, ಅಗತ್ಯ ಬಿದ್ದರೆ ಕೊರಳು ಪಟ್ಟಿ ಹಿಡಿದು ಕೆಲಸ ಮಾಡಿಸುವ ಎದೆಗಾರಿಕೆ ಅಲ್ಲಿನ ಸಾಮಾನ್ಯ ಜನರಲ್ಲಿದೆ. ಅದಕ್ಕೆ ಧರ್ಮ, ಭೇದದ ವ್ಯತ್ಯಾಸ ಇರುವುದಿಲ್ಲ. ನಾಡಿನ ಜ್ವಲಂತ ಸಮಸ್ಯೆಗಳ ವಿಚಾರ ಬಂದಾಗ ಎಲ್ಲರೂ ಜೊತೆಯಾಗಿ ನಿಂತು ವಿರೋಧಿಸುವುದು, ಸರಕಾರಿ ದುಡ್ಡಿನಲ್ಲಿ ಭ್ರಷ್ಟಾಚಾರ ಎಸಗುವ ಮಂದಿಯ ಜೊತೆ ನಿರಂಕುಶವಾಗಿ ವರ್ತಿಸುವ ಛಾತಿಯನ್ನು ಜನರು ಬೆಳೆಸಿಕೊಳ್ಳಬೇಕಾಗಿದೆ.

ಪ್ಲಾಸ್ಟಿಕ್ ಪಾರ್ಕ್ ಜಪಿಸುವ ಸಂಸದನೂ..

ನಮ್ಮೊಬ್ಬ ನಾಲಾಯಕ್ ಸಂಸದ ಹತ್ತು ವರ್ಷಗಳಿಂದ ಪ್ಲಾಸ್ಟಿಕ್ ಪಾರ್ಕ್ ಬಗ್ಗೆ ಮಂತ್ರ ಪಠಿಸುತ್ತಾ ಬಂದಿದ್ದನ್ನು ಕೇಳಿದ್ದೇವೆ. ಪ್ಲಾಸ್ಟಿಕ್ ಪಾರ್ಕ್ ಅಂದ್ರೇನು, ಅದರಲ್ಲಿ ಎಷ್ಟೆಲ್ಲಾ ಹಾನಿಕಾರಕ ಅಂಶಗಳು ಪರಿಸರಕ್ಕೆ ಬಿಡುಗಡೆಯಾಗುತ್ತವೆ, ಪ್ಲಾಸ್ಟಿಕ್ ತ್ಯಾಜ್ಯದಿಂದ ಆಸುಪಾಸಿನ ಜನರಿಗೆ ಉಂಟಾಗುವ ದುರಂತಗಳೇನು ಅನ್ನುವ ಕನಿಷ್ಠ ಜ್ಞಾನ ಇಲ್ಲದ ಮನುಷ್ಯರು ಮಾತ್ರ ಪ್ಲಾಸ್ಟಿಕ್ ಪಾರ್ಕ್ ಬಗ್ಗೆ ಜಪ ಮಾಡಬೇಕು. ಜಗತ್ತಿನ ಮುಂಚೂಣಿ ರಾಷ್ಟ್ರಗಳು ಪ್ಲಾಸ್ಟಿಕ್ ಆಧರಿತ ಕೈಗಾರಿಕೆಗಳನ್ನೇ ನಿಷೇಧ ಮಾಡುತ್ತಿರುವಾಗ ನಮ್ಮ ಕೆಲವು ಅನಕ್ಷರಸ್ಥ, ಅಪ್ರಬುದ್ಧ ಜನಪ್ರತಿನಿಧಿಗಳು ದೇಶದಲ್ಲೇ ಅತ್ಯಂತ ಪ್ರಬುದ್ಧರು ಎಂದು ಹೇಳಿಕೊಳ್ಳುವ ಜನರುಳ್ಳ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಪಾರ್ಕ್ ಸ್ಥಾಪನೆಯ ಜಪ ಮಾಡುವುದು ಇಲ್ಲಿನ ಜನಪ್ರತಿನಿಧಿಗಳು, ರಾಜಕಾರಣಿಗಳ ದುರವಸ್ಥೆಗೆ ಕನ್ನಡಿ ಹಿಡಿಯುತ್ತದೆ. ಇಂಥ ಅಪ್ರಬುದ್ಧರ ಮಧ್ಯೆ ಕರಾವಳಿಯ ರಾಜಕಾರಣಿಗಳ ಪೈಕಿ ಬಿ.ಎಂ.ಫಾರೂಕ್ ತುಂಬ ಮೇಲ್ಮಟ್ಟದಲ್ಲಿ ಕಾಣುತ್ತಾರೆ. ವ್ಯವಸ್ಥೆಯ ಬಗ್ಗೆ ಅರಿವು, ಜನಪರ ಕಾಳಜಿ, ಅಧಿಕಾರಿಗಳಲ್ಲಿ ಹೇಗೆ ಕೆಲಸ ಮಾಡಿಸಬೇಕು ಎಂಬ ಕನಿಷ್ಠ ಜ್ಞಾನ ಉಳ್ಳ ಇಂಥವರು ಶಾಸಕ, ಸಂಸದರಾಗಬೇಕು ಅನ್ನುವ ಜಾಗೃತಿ ಜನರಲ್ಲಿ ಬರಬೇಕು.

✍️ Giridhar shetty