ಕನ್ನಡಿಗರ ನಿಖರ ಸಂಖ್ಯೆ ಪತ್ತೆಗೆ ಭರವಸೆ ಸಮಿತಿಯ ಸೂಚನೆ*

ಮಂಗಳೂರು, ಮೇ.4 :-
ಇಲ್ಲಿನ ವಿಶೇಷ ಆರ್ಥಿಕ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಕಾರ್ಖಾನೆಗಳಲ್ಲಿ ಎ ಮತ್ತು ಬಿ ದರ್ಜೆಯ ಹುದ್ದೆಗಳಲ್ಲಿ ಕೆಲಸ ಮಾಡುತ್ತಿರುವ ಕನ್ನಡಿಗರ ನಿಖರ ಸಂಖ್ಯೆಯನ್ನು ಪತ್ತೆ ಮಾಡಿ ವರದಿ ನೀಡುವಂತೆ ವಿಧಾನ ಪರಿಷತ್ ನ ಸರ್ಕಾರಿ ಭರವಸೆಗಳ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಅವರಿಗೆ ನಿರ್ದೇಶನ ನೀಡಿದರು.

ಅವರು ನಗರದ ಜಿಲ್ಲಾ ಪಂಚಾಯತ್ ನ ನೇತ್ರಾವತಿ ಸಭಾಂಗಣದಲ್ಲಿ ಮೇ.4ರ ಬುಧವಾರ ಹಮ್ಮಿಕೊಳ್ಳಲಾಗಿದ್ದ ಬಾಕಿ ಭರವಸೆ ಸಂಖ್ಯೆಗಳ ಕುರಿತು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ನಡೆಸಿದ ಚರ್ಚೆಯ ಸಂಧರ್ಭದಲ್ಲಿ ಈ ಸೂಚನೆ ನೀಡಿದರು.

ವಿಶೇಷ ಆರ್ಥಿಕ ವಲಯದಲ್ಲಿರುವ ಮಂಗಳೂರು ರಿಫೈನರಿ ಮತ್ತು ಪೆಟ್ರೋ ಕೆಮಿಕಲ್ ಲಿಮಿಟೆಡ್ ಸೇರಿದಂತೆ ಇತರೆ ಕಾರ್ಖಾನೆಗಳಲ್ಲಿ ನಿಯಾಮವಳಿಯಂತೆ ಶೇ. 70ರಷ್ಟು ಕನ್ನಡಿಗರಿಗೆ ಉದ್ಯೋಗಾವಕಾಶ ನೀಡಬೇಕು. ಅಲ್ಲಿ ಅಷ್ಟು ಮಂದಿ ಕನ್ನಡಿಗರೇ ಕೆಲಸ ಮಾಡುವ ಬಗ್ಗೆ ಖಚಿತಪಡಿಸಿಕೊಳ್ಳಲು ಜಿಲ್ಲಾಧಿಕಾರಿಯವರು ಕೂಲಂಕುಷವಾಗಿ ತಪಾಸಣೆ ನಡೆಸಿ ವರದಿ ನೀಡುವಂತೆ ಸಮಿತಿಯ ಅಧ್ಯಕ್ಷರಾದ ಬಿ.ಎಂ. ಫಾರೂಕ್ , ಸದಸ್ಯರುಗಳಾದ ಎಸ್.ವಿ. ಸಂಕನೂರು,ಕೆ.ಟಿ ಶ್ರೀಕಂಟೇಗೌಡ ಹಾಗೂ ಇತರರು ಸೂಚಿಸಿದರು.

ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಮುಂದಿನ ಎರಡು ತಿಂಗಳಲ್ಲಿ ವರದಿ ನೀಡುವುದಾಗಿ ತಿಳಿಸಿದರು.

ವಿಶೇಷ ಆರ್ಥಿಕ ವಲಯದಲ್ಲಿ ಪರಿಸರ ಮಾಲಿನ್ಯಗೊಂಡಿದೆ ಎಂದು ಸಾರ್ವಜನಿಕರು ಹಾಗೂ ಸ್ಥಳೀಯರು ಸಮಿತಿಗೆ ಮಾಹಿತಿ ನೀಡಿದ್ದಾರೆ, ಅದರಂತೆ ಸಮಿತಿಯಿಂದ ಸ್ಥಳವನ್ನು ಪರಿಶೀಲನೆ ಮಾಡಲಾಗಿದೆ, ಈ ಪ್ರದೇಶದಲ್ಲಿ ಸವಿಸ್ತಾರವಾದ ಸರ್ವೇ ಮಾಡಿ ಭತ್ತ ಸೇರಿದಂತೆ ತೋಟಗಾರಿಕಾ ಬೆಳೆಗಳ ಬಗ್ಗೆ ವರದಿ ನೀಡುವಂತೆ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಸೀತಾ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದ ಸಮಿತಿಯ ಸದಸ್ಯರು, ಮೀನುಗಾರಿಕೆ ಇಲಾಖೆಯಿಂದ ಈ ವ್ಯಾಪ್ತಿಯ ಜಲಪ್ರದೇಶದಲ್ಲಿ ಕೆಲವೊಂದು ಮೀನು ತಳಿಗಳು ನಾಶಗೊಂಡಿರುವ ಬಗ್ಗೆ ಅಧ್ಯಯನ‌ ನಡೆಸಿ ವರದಿ ಸಲ್ಲಿಸುವಂತೆ ತಿಳಿಸಿದರು.

ಮುಖ್ಯವಾಗಿ ಆ ಪರಿಸರದಲ್ಲಿರುವ ನೀರು, ಅಂತರ್ಜಲ, ಗಾಳಿ, ಸೇರಿದಂತೆ ನೆಲ-ಜಲ ಹಾಗೂ ವಾಯುಮಾಲಿನ್ಯದ ಬಗ್ಗೆ ಅಂತರಾಷ್ಟ್ರೀಯ ಮಟ್ಟದ ಸಂಸ್ಥೆಯಿಂದ ತಪಾಸಣೆ ನಡೆಸಿ ವರದಿ ನೀಡುವಂತೆ ಜಿಲ್ಲಾಧಿಕಾರಿಯವರಿಗೆ ಸೂಚಿಸಿರು.

ಅಲ್ಲಿ ವಾಸಿಸುವ ಜನರ ಆರೋಗ್ಯದ ಸ್ಥಿತಿಗತಿಗಳ ಬಗ್ಗೆಯೂ ವರದಿ ನೀಡುವಂತೆ ಆರೋಗ್ಯಾಧಿಕಾರಿ ಡಾ. ಕಿಶೋರ್ ಕುಮಾರ್ ಅವರಿಗೆ ತಿಳಿಸಿದರು.

ಭರವಸೆ ಸಮಿತಿ ಅಧ್ಯಕ್ಷರಾದ ಬಿ.ಎಂ. ಫಾರೂಕ್, ಸದಸ್ಯರುಗಳಾದ ಶಶೀಲ್ ಜಿ ನಮೋಶಿ, ಕೆ.ಟಿ. ಶ್ರೀಕಂಠೇಗೌಡ, ಯು.ಬಿ. ವೆಂಕಟೇಶ್, ರುದ್ರೇಗೌಡ, ಎಸ್.ವಿ. ಸಂಕನೂರು, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಅಪರ ಕಾರ್ಯದರ್ಶಿ ಡಾ. ಇ.ವಿ. ರಮಣರೆಡ್ಡಿ, ಕೆ.ಐ.ಎ.ಡಿ.ಬಿ ವ್ಯವಸ್ಥಾಪಕ ನಿರ್ದೇಶಕ ಶಿವಶಂಕರ್, ಪರಿಸರ ಮತ್ತು ಜೀವಿ ಪರಿಸ್ಥಿತಿಯ ಪ್ರಧಾನ ಕಾರ್ಯದರ್ಶಿ ವಿಜಯ್ ಮೋಹನ್ ರಾಜ್,
ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಕುಮಾರ್ ವೇದಿಕೆಯಲ್ಲಿದ್ದರು.

ಎಂ.ಆರ್.ಪಿ.ಎಲ್ ವ್ಯವಸ್ಥಾಪಕ ನಿರ್ದೇಶಕ ಎಂ.ವೆಂಕಟೇಶ್ ಸೇರಿದಂತೆ ವಿವಿಧ ಕಾರ್ಖಾನೆಗಳ ಮುಖ್ಯಸ್ಥರು, ಇತೆರೆ ಅಧಿಕಾರಿಗಳು ಉಪಸ್ಥಿತರಿದ್ದರು.

ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಗೋಕುಲ್ ದಾಸ್ ಸ್ವಾಗತಿಸಿದರು.

*ರಾಜ್ಯ ವಿಧಾನ ಪರಿಷತ್ತಿನ ಭರವಸೆಗಳ ಸಮಿತಿಯ ಜಿಲ್ಲಾ ಪ್ರವಾಸ*

*ಒಡಿಸಿ ರಸ್ತೆ ಸೇರಿ ವಿವಿಧೆಡೆ ಸ್ಥಳ ಪರಿಶೀಲನೆ*

ಮಂಗಳೂರು,ಮೇ.04
ಜಿಲ್ಲೆಯ ಪ್ರವಾಸ ಕೈಗೊಂಡಿರುವ ರಾಜ್ಯ ವಿಧಾನ ಪರಿಷತ್ತಿನ ಭರವಸೆಗಳ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು, ಜಿಲ್ಲೆಯ ವಾಣಿಜ್ಯ ಮತ್ತು ಕೈಗಾರಿಕೆ, ನಗರಾಭಿವೃದ್ಧಿ, ಪರಿಸರ ಮಾಲಿನ್ಯ ಮಂಡಳಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಅಗ್ನಿಶಾಮಕ ದಳ, ಪಶುಸಂಗೋಪನೆ ಹಾಗೂ ಮೀನುಗಾರಿಕೆ ಇಲಾಖೆಗೆ ಸಂಬಂಧಿಸಿದಂತೆ ಬಾಕಿ ಭರವಸೆ ಸಂಖ್ಯೆ ಕುರಿತಂತೆ ಇಲಾಖಾಧಿಕಾರಿ ಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಲು ಮೇ.4ರ ಬುಧವಾರ ಮಂಗಳೂರಿನ ಒ.ಡಿ.ಸಿ ರಸ್ತೆ ಗೆ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿಗಳನ್ನು ಪರಿಶೀಲನೆ ನಡೆಸಿದ ನಂತರ, ಪೈಪ್ ಲೈನ್,ಕಾರಿಡಾರ್,ಎಮ್.ಎಸ್.ಇ.ಝೆಡ್ ಕಚೇರಿ, ಐ.ಎಸ್.ಪಿ.ಆರ್.ಎಲ್, ಉಲ್ಕಾ ಎಲ್.ಎಲ್.ಪಿ ಮೀನು ಸಂಸ್ಕರಣಾ, ಕುಡುಂಬೂರು ನದಿ ಪರಿಶೀಲನೆ, ಎಮ್.ಆರ್.ಪಿ.ಎಲ್ ಘಟಕ ಭೇಟಿ, ಬಿ.ಎ.ಎಸ್.ಎಫ್ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಸ್ಥಳೀಯರು ಹಾಗೂ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.

ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷರಾದ ಬಿ.ಎಂ. ಫಾರೂಕ್, ಸದಸ್ಯರಾದ ಶಶೀಲ್ ನಮೋಶಿ, ಕೆ.ಜಿ ಶ್ರೀಕಂಠೇಗೌಡ, ಯು.ಬಿ. ವೆಂಕಟೇಶ್, ಎಸ್.ವಿ. ಶಂಕನೂರು, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ. ಇ.ವಿ. ರಮಣರೆಡ್ಡಿ, ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್, ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಗೋಕುಲ್ ದಾಸ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಸೀತಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್ ಕುಮಾರ್, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ ಕಿರಣ್ ಕುಮಾರ್, ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಹರೀಶ್ ಸೇರಿದಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಪರಿಶೀಲನೆ ವೇಳೆ ಹಾಜರಿದ್ದರು.