ಮಂಗಳೂರಿನ ವೈಶಿಷ್ಟ್ಯ ಉಳಿಸಿಕೊಳ್ಳುವುದು ಎಲ್ಲರ ಜವಾಬ್ದಾರಿ : ನಿಟ್ಟೆ ವಿವಿ ಕುಲಪತಿ ಡಾ. ವಿನಯ್ ಹೆಗ್ಡೆ*


ಮಂಗಳೂರು : ದೇಶದಲ್ಲೇ ಮಂಗಳೂರಿಗೆ ವಿಶಿಷ್ಟ ಸ್ಥಾನವಿದೆ, ಎಲ್ಲಾ ಕ್ಷೇತ್ರಗಳಲ್ಲೂ ಉಜ್ವಲ ಅವಕಾಶಗಳಿವೆ. ಅದನ್ನು ನಾವು ಎಂದಿಗೂ ಕಳೆದು ಕೊಳ್ಳಬಾರದು. ಸಮಾಜದಲ್ಲಿ ದ್ವೇಷ ಪಾರಮ್ಯ ಮೆರೆಯಲು ಅವಕಾಶ ನೀಡಲೇಬಾರದು ಎಂದು ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ ಡಾ. ಎನ್. ವಿನಯ್ ಹೆಗ್ಡೆ ಕರೆ ನೀಡಿದರು.

ಮಂಗಳೂರು ಬಿಷಪ್ ಡಾ. ಪೀಟರ್ ಪೌಲ್ ಸಲ್ದಾನ ಮತ್ತು ಡಾ. ಎನ್. ವಿನಯ್ ಹೆಗ್ಡೆ ಹಾಗು ಯೆನೆಪೊಯ ವಿವಿಯ ಕುಲಪತಿ ವೈ. ಅಬ್ದುಲ್ಲಾ ಕುಂಞಿ ಅವರು ಜಂಟಿಯಾಗಿ ನಗರದ ಜಪ್ಪಿನಮೊಗರುವಿನಲ್ಲಿರುವ ಯೆನೆಪೊಯ ಪದವಿಪೂರ್ವ ಕಾಲೇಜಿನ ಫುಟ್ಬಾಲ್ ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ಸೌಹಾರ್ದ ಇಫ್ತಾರ್ ಕೂಟವನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.‌

ಮನುಷ್ಯ ಎಷ್ಟೇ ದೊಡ್ಡ ಸಾಧನೆ ಮಾಡಿದರೂ ಕೂಡ ಆತ ಅತ್ಯುತ್ತಮ ಮನುಷ್ಯನಾಗುವುದು ಎಲ್ಲಕ್ಕಿಂತ ಮುಖ್ಯವಾಗಿದೆ. ಸಮಾಜದಲ್ಲಿ ಸೌಹಾರ್ದ ಕಾಪಾಡುವ ಅಗತ್ಯವಿದೆ. ಮಾನವನಾಗಿ ಬಾಳಿದರೆ ಮಾತ್ರ ಸೌಹಾರ್ದ ಬೆಸೆಯಲು ಸಾಧ್ಯ. ಹಾಗಾಗಿ ಪ್ರತಿಯೊಬ್ಬರೂ ಸಮಾಜದಲ್ಲಿ ಶಾಂತಿ ಸಹಬಾಳ್ವೆಯನ್ನು ಬೆಳೆಸುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದು ಡಾ. ಎನ್. ವಿನಯ್ ಹೆಗ್ಡೆ ತಿಳಿಸಿದರು.‌

ಮಂಗಳೂರು ಬಿಷಪ್ ಡಾ. ಪೀಟರ್ ಪೌಲ್ ಸಲ್ದಾನ ಅವರು ಕ್ರೈಸ್ತ ಧರ್ಮದಲ್ಲಿ ಉಪವಾಸದ ಮಹತ್ವದ ಕುರಿತು ವಿವರಿಸಿದರು. ಯೆನೆಪೊಯ ಅಬ್ದುಲ್ಲಾ ಕುಂಞಿ ಅವರು ರಮಝಾನ್ ಉಪವಾಸದ ಮಹತ್ವ, ಕುರ್‌ಆನ್ ಮತ್ತು ಪ್ರವಾದಿಯ ಬದುಕಿನ ಮಾನವೀಯ ಮೌಲ್ಯಗಳ ಕುರಿತು ತಿಳಿಸಿದರು.

ಯೆನೆಪೊಯ ವಿವಿಯ ಇಸ್ಲಾಮಿಕ್ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ಜಾವೇದ್ ಜಮೀಲ್ ದಿಕ್ಸೂಚಿ ಭಾಷಣಗೈದರು.

ಸೌಹಾರ್ದ ಇಫ್ತಾರ್ ಕೂಟದಲ್ಲಿ ಶಾಸಕ ಯು ಟಿ ಖಾದರ್ , ವಿಧಾನಪರಿಷತ್ ಸದಸ್ಯ ಬಿಎಂ ಫಾರೂಕ್ , ಕಾಂಗ್ರೆಸ್ ಮುಖಂಡರಾದ ಐವನ್ ಡಿಸೋಜಾ , ಜಿಎ ಬಾವ ಮೊದಲಾದ ರಾಜಕೀಯ, ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರಗಳ ಗಣ್ಯರು, ಜನಪ್ರತಿನಿಧಿಗಳು, ಅಧಿಕಾರಿಗಳು ಪಾಲ್ಗೊಂಡಿದ್ದರು. ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ ಕಾರ್ಯಕ್ರಮ ನಿರೂಪಿಸಿದರು.