*ಯು ಎಂ ಮೊಯ್ದಿನ್ ಕುಞಿ :

ಮೊಯ್ದಿನ್ ಕುಞಿ ಯವರು ನಮ್ಮನ್ನಗಲಿ ಎರಡು ವಾರ ಕಳೆದು ಹೋಯಿತು. ಅವರ ಅಗಲಿಕೆ ನಮಗೆ ತುಂಬಲಾರದ ನಷ್ಟವಾಗಿದೆ. ಆದರೆ ಏನು ಮಾಡುವುದು? ಹುಟ್ಟಿದ ಮೇಲೆ ಸಾವು ಖಚಿತ.  ‘ಪ್ರತಿಯೊಂದು ಆತ್ಮವೂ ಮರಣವನ್ನು ಸವಿಯುತ್ತದೆ’ ಎಂಬ ಪವಿತ್ರ ಕುರ್‌ಆನ್‌ನ ಸಂದೇಶವು ಸಾವಿನ ಸತ್ಯವನ್ನು ಎತ್ತಿ ತೋರಿಸುತ್ತದೆ.  “ಯಾರು ನರಕದಿಂದ ದೂರ ಸರಿಸಲಾಗುವನೋ ಮತ್ತು ಸ್ವರ್ಗಕ್ಕೆ ಪ್ರವೇಶ ಮಾಡಿಸಲಾಗುವನೋ ಅವನು ಜಯಗಳಿಸಿದನು” ಎಂಬ ಸಂದೇಶವನ್ನು ಸಾರುವ ಮೂಲಕ ಕುರ್‌ಆನ್‌ ಒಬ್ಬನ ಹುಟ್ಟಲ್ಲ, ದೇಶವಲ್ಲ, ಸಂಪತ್ತಲ್ಲ, ಕುಟುಂಬ ಅಥವಾ ಸ್ನೇಹಿತರಲ್ಲ ಬದಲಾಗಿ ಮರಣಾನಂತರ, ಇಹಲೋಕದಲ್ಲಿ ಮತ್ತು ಪರಲೋಕದಲ್ಲಿ ಮನುಷ್ಯನನ್ನು ಉನ್ನತೀಕರಿಸುವುದು ಕರ್ಮವೆಂಬ ಅಂತಿಮ ಸತ್ಯವನ್ನು ನಾವು ಅರಿತುಕೊಳ್ಳುತ್ತೇವೆ.
ಯಾವುದೇ ವ್ಯಕ್ತಿ ಈ ಭೂಮಿಯ ಮೇಲೆ ಮರಣ ಹೊಂದಿದರೆ ಅವನ ಹಲವು ಕೊಡುಗೆಗಳು ಬಾಕಿ ಉಳಿಯುತ್ತವೆ. ಆ ಕೊಡುಗೆಗಳು ಅವನ ನಂತರ ಭೂಮಿಯ ಮೇಲೆ ಉಳಿದಿರುವವರಿಗೆ ಉಪಯುಕ್ತವಾಗಿದ್ದರೆ ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತವೆ, ಆ ಚಿಹ್ನೆಗಳು ಆ ವ್ಯಕ್ತಿಯ ಶ್ರೇಷ್ಠ ಕೊಡುಗೆಯಾಗಿ ಇತಿಹಾಸದಲ್ಲಿ ದಾಖಲಾಗುತ್ತವೆ.  ಪ್ರೀತಿಪಾತ್ರರ ಮರಣವು ನಮಗೆ ದುಃಖವನ್ನುಂಟುಮಾಡಿದರೂ, ಅವರು ನಮಗೆ ಬಿಟ್ಟುಹೋದ ಕೊಡುಗೆಗಳಲ್ಲಿ ನಾವು ಇನ್ನೂ ಸಂತೋಷಪಡಬಹುದು. ಮೊಯ್ದಿನ್ ಕುಞಿಯವರ ಬಗ್ಗೆ ಏನಾದರೂ ಬರೆಯಬೇಕೆಂದು ತೀರ್ಮಾನಿಸಿದ್ದೆ. ಆದರೆ ಸಮಯ ಸಿಗುತ್ತಿರಲಿಲ್ಲ. ಈಗ ಅವರ ಜೀವನದ ಬಗ್ಗೆ ನನಗೆ ತಿಳಿದಿರುವ ಕೆಲವು ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದೇನೆ.

ಒಂದು ಕಾಲದಲ್ಲಿ ಕರ್ನಾಟಕದ ಕರಾವಳಿ ತೀರವು
ಶಿರ್ಕ್, ಬಿದ್ ಅತ್ ಮತ್ತು ಮೂಡ ನಂಬಿಕೆಗಳ ಭದ್ರ ಕೋಟೆಯಾಗಿತ್ತು. ತೌಹೀದ್ ನ ಕುರಿತು ಮಾತನಾಡುವುದು ಕೂಡಾ ಅಪರಾಧವಾಗಿತ್ತು.
ಆದರೆ ತೌಹೀದ್‌ನ ಮಹತ್ವವನ್ನು ಅರಿತ ಬಳಿಕ ತನ್ನ ಜೀವನವನ್ನು ಅದಕ್ಕಾಗಿ ಅವರು ಮುಡಿಪಾಗಿಟ್ಟರು. ಮೊಯ್ದಿನ್ ಕುಞಿಯವರು ತನ್ನ ಛಲ ಮತ್ತು ಪರಿಶ್ರಮದಿಂದ ಜೀವನದುದ್ದಕ್ಕೂ ನಿರಂತರವಾಗಿ ಓಡಾಡಿ ನಾಡಿಗೆ ಮತ್ತು ಸಮುದಾಯಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿ ನಮ್ಮನ್ನು ಅಗಲಿದ್ದಾರೆ.  ಅವರ ಜೀವನವು ಸಾರ್ಥಕವಾಗಿತ್ತು. ಅಲ್ಲಾಹನ ಅನುಗ್ರಹ ಪಡೆದ ಅಪರೂಪದ ಭಾಗ್ಯವಂತರಲ್ಲಿ ಅವರೂ ಒಬ್ಬರಾಗಿದ್ದಾರೆಂದು ನಾನು ಭಾವಿಸುತ್ತೇನೆ. ಚಟುವಟಿಕೆಗಳು ಸಂಸ್ಥೆಗೆ ಅಥವಾ ಸ್ವಂತ ಹೆಸರು ಅಥವಾ ಖ್ಯಾತಿಗೆ ಸೀಮಿತವಾಗಿರುವ ಇಂದಿನ ಜಗತ್ತಿನಲ್ಲಿ, ಮೊಯ್ದಿನ್ ಕುಞಿಯವರಿಂದ ಕಲಿಯಬೇಕಾದ ಮೊದಲ ಪಾಠವೆಂದರೆ ಸಮುದಾಯಕ್ಕಾಗಿ ದೇವರ ಅನುಗ್ರಹಕ್ಕಾಗಿ ತನ್ನನ್ನು ಅರ್ಪಿಸಿಕೊಳ್ಳುವುದು. ಒಬ್ಬ ವಿಶ್ವಾಸಿಗೆ, ತನ್ನ ಸಮಯ, ಹಣ ಮತ್ತು ಕೆಲಸವನ್ನು ಇತರರಿಗೆ ವಿನಿಯೋಗಿಸುವುದರಿಂದ ಬರುವ ಮಾನಸಿಕ ಆನಂದ ಮತ್ತು ಆಧ್ಯಾತ್ಮಿಕ ಉನ್ನತಿಯು ಅವನಿಗೆ ಜೀವನದಲ್ಲಿ ಭರವಸೆಯನ್ನು ನೀಡುತ್ತದೆ.  ತನ್ನೆಲ್ಲ ಭೌತಿಕ ಸಂಪತ್ತನ್ನು ಭದ್ರವಾಗಿಟ್ಟುಕೊಂಡು ಸಮಯ ಉಳಿದಿದ್ದರೆ ಮಾತ್ರ ತನ್ನನ್ನು ತಾನು ಸಮಾಜಕ್ಕೆ ಅರ್ಪಿಸಿಕೊಳ್ಳುವುದು ಸಾಮಾನ್ಯ. ಆದರೆ ಸಮುದಾಯವನ್ನು ಸ್ವಂತ ಕುಟುಂಬವೆಂದು ಅರಿತು ಅಲ್ಲಾಹನಿಗೆ ಇಷ್ಟವಾಗುವ ಮತ್ತು ಜನರಿಗೆ ಪ್ರಯೋಜನಕಾರಿಯಾದ ಒಳ್ಳೆಯ ಕಾರ್ಯಗಳನ್ನು ಮಾಡಲು ಮುಂದೆ ಬರುವುದು ಅಪರೂಪ. ಮೊಯ್ದಿನ್ ಕುಞಿಯವರು ಅಂತವರಲ್ಲೊಬ್ಬರಾಗಿದ್ದರು.

ಸಲಫಿ ಚಳುವಳಿಯೊಂದಿಗಿನ ಅವರ ಸಂಬಂಧವು ಅದರ ಆರಂಭಿಕ ದಿನಗಳಿಂದಲೇ ಪ್ರಾರಂಭವಾಯಿತು. ಮುಸ್ಲಿಮರು ಮೂಢನಂಬಿಕೆಗಳಿಂದ ಮುಕ್ತರಾಗಿ ಶೈಕ್ಷಣಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಸಾಧನೆ ಮಾಡಬೇಕಾದ ಅಗತ್ಯವನ್ನು ಅವರು ಕನಸು ಕಂಡಿದ್ದರು.
ತೌಹೀದ್‌ನ ಮಹತ್ವ ಮತ್ತು ಶಿರ್ಕ್‌ನ ಗಂಭೀರತೆಯನ್ನು ವಿವರಿಸುವ ಪ್ರಭಾಷಣಗಳನ್ನು ನಿರಂತರವಾಗಿ ನಡೆಸುತ್ತಾ ಬಂದರು. ಅಂದು ಕರಾವಳಿಯ ಭಾಗದಲ್ಲಿ ಸಂಘಟನೆಗಳು ಅಷ್ಟಾಗಿ ಕಾರ್ಯಾಚರಿಸುತ್ತಿರಲಿಲ್ಲ. ಸ್ವತಃ ಕೇರಳಕ್ಕೆ ಹೋಗಿ ಅಥವಾ ಫೋನ್ ಮೂಲಕ ಅಲ್ಲಿಯ ಮೌಲವಿಗಳಿಂದ ದಿನಗಳನ್ನು ಕಾಯ್ದಿರಿಸಿ ಅವರನ್ನು ಕರೆತಂದು ಮಂಗಳೂರು, ಉಳ್ಳಾಲ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಇತರ ಭಾಗಗಳಲ್ಲಿ ತೌಹೀದ್‌ನ ಮಹತ್ವವನ್ನು ತಿಳಿಸುವ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜನರಲ್ಲಿ ತೌಹೀದ್‌ನ ಬಗ್ಗೆ ಜಾಗೃತಿ ಮೂಡಿಸಿದರು. ಇಪ್ಪತ್ತನೆಯ ಶತಮಾನದ ಕೊನೆಯಲ್ಲಿ ಕರ್ನಾಟಕದ ಕರಾವಳಿ ತೀರದಲ್ಲಿ ತೌಹೀದ್‌ನ ಬೆಳಕನ್ನು ಚೆಲ್ಲುವ ಪ್ರಯತ್ನ ಅವರು ಮತ್ತು ಯು ಎನ್ ಅಬ್ದುರ್ರಝ್ಝಾಕ್ ಹಾಜಿಯವರು (ಇಂದು ವೃದ್ಧಾಪ್ಯದ ಅನಾರೋಗ್ಯದಿಂದ ಬಳಲುತ್ತಿದ್ದು ಹೆಚ್ಚಾಗಿ ಮನೆಯಲ್ಲಿಯೇ ಇದ್ದು ವಿಶ್ರಮ ಜೀವನ ನಡೆಸುತ್ತಿದ್ದಾರೆ. ಅಲ್ಲಾಹು ಅವರಿಗೆ ಕ್ಷೇಮ ಮತ್ತು ಆರೋಗ್ಯವನ್ನು ದಯಪಾಲಿಸಲಿ) ನಿರಂತರವಾಗಿ ಮಾಡುತ್ತಾ ಬಂದರು. ಜನರ ಮಾತುಗಳಲ್ಲಿ ಕೂಡ ಅವರು ಇದು ಮೊಯ್ದಿನ್ ಕುಞಿ ಯ ದೀನ್,  ಅಬ್ದುರ್ರಝ್ಝಾಕ್ ನ ದೀನ್ ಎಂದು ಮೂದಲಿಸುತ್ತಿದ್ದರು. ಆದರೆ ಅಲ್ಲಾಹುವಿನ ಅನುಗ್ರಹದಿಂದ ಮತ್ತು ಅವರಂತಹ ನೇತಾರರ ಮತ್ತು ವಿದ್ವಾಂಸರ ಪ್ರಯತ್ನದಿಂದ ಇಂದು ಕುರ್ ಆನ್ ಮತ್ತು ಸುನ್ನತ್ ನ ಆದರ್ಶವನ್ನು ಕಲಿಸುವ ಮದ್ರಸಗಳು ಮತ್ತು ಮಸೀದಿಗಳು ಕಾರ್ಯಾಚರಿಸುತ್ತಿದೆ (الحمد لله).
ಅವರು ಸಲಫಿ ಸಿದ್ಧಾಂತವನ್ನು ಅಪಾರವಾಗಿ ಪ್ರೀತಿಸುತ್ತಿದ್ದರು. ಎಷ್ಟೋ ಜನರು ಶಿರ್ಕ್ ಬಿದ್’ಅತ್ತ್’ಗಳನ್ನು ತೊರೆದು ತೌಹೀದನ್ನು ಅಳವಡಿಸಿಕೊಳ್ಳಲು ಅಲ್ಲಾಹು ತನ್ನ ಅನುಗ್ರಹದಿಂದ ಇವರನ್ನು ಕಾರಣಕರ್ತನನ್ನಾಗಿಸಿದನು. ಅದೆಷ್ಟೋ ಮಸೀದಿ ಮದ್ರಸಗಳ ನಿರ್ಮಾಣಕ್ಕೆ ಅಲ್ಲಾಹುವಿನ ತೌಫೀಕಿನಿಂದ ಇವರು ಕಾರಣಕರ್ತರಾಗಿ ಮಾರ್ಪಟ್ಟರು. ಅವರು ಅನಗತ್ಯ ಸಾಂಸ್ಥಿಕ ಪೈಪೋಟಿಗಳನ್ನು ದ್ವೇಷಿಸುತ್ತಿದ್ದರು. ಸಲಫಿ ಚಳವಳಿಗೆ ಮಾತ್ರವಲ್ಲದೆ ಮುಸ್ಲಿಂ ಸಮುದಾಯದ ವಿದ್ಯಾಭ್ಯಾಸದ ಉನ್ನತಿಗಾಗಿ ಆಹೋರಾತ್ರಿ ಹೋರಾಡಿದ್ದಾರೆ. ಉಳ್ಳಾಲದ ಇಸ್ಲಾಹೀ ಶಿಕ್ಷಣ ಸಂಸ್ಥೆಗಳು ಮತ್ತು ಮೂಡಬಿದರೆಯ ಅಲ್ ಫುರ್ಖಾನ್ ಶಿಕ್ಷಣ ಸಂಸ್ಥೆಗಳು ಅವರ ಪರಿಶ್ರಮದ ಫಲ.
ಹಲವು ಗುಣವೈಶಿಷ್ಟ್ಯಗಳಿಗೆ ನಾಂದಿಯಾಗಿರುವ ಇವರ ಬದುಕಿನಿಂದ ಸಮುದಾಯ ಸಾಕಷ್ಟು ಕಲಿಯಬೇಕಿದೆ. ತಮ್ಮ ಸಮುದಾಯಕ್ಕಾಗಿ ದಣಿವರಿವಿಲ್ಲದೆ ಕೆಲಸ ಮಾಡಲು, ಶಿಕ್ಷಣದ ವಿಷಯಗಳಲ್ಲಿ ಉತ್ತಮ ಚಿಂತನೆಯ ಮೂಲಕ ಸಮುದಾಯಕ್ಕೆ ಮಾರ್ಗದರ್ಶನ ನೀಡಲು ಸಮರ್ಥರಾಗಿದ್ದರು.

*ಅವರ ನಿಧನ ವೈಯಕ್ತಿಕವಾಗಿ ನನಗೆ ತುಂಬಲಾರದ ನಷ್ಟ.*

ತೌಹೀದ್‌ನ ಆದರ್ಶವನ್ನು ಅರಿತ ನನ್ನ ತಂದೆಯವರು ನನ್ನನ್ನು ಸಲಫಿ ಮದ್ರಸದಲ್ಲಿ ಸೇರಿಸಿದ ಅಂದರೆ ನಾನು ಶಾಲೆಯಲ್ಲಿ ಏಳನೇ ತರಗತಿಯಲ್ಲಿ ಓದುತ್ತಿದ್ದ 97 ರ ಕಾಲದಿಂದ ನೋಡುತ್ತ ಬಂದ ಮುಖ. ಪಟ್ಲದಲ್ಲಿದ್ದ ನಮ್ಮ ಮದ್ರಸಕ್ಕೆ ಆಗಾಗ ಭೇಟಿ ಕೊಟ್ಟು ನಮ್ಮನ್ನು ಕಲಿಯಲು ಪ್ರೋತ್ಸಾಹ ನೀಡುತ್ತಿದ್ದರು. ನಮ್ಮ ಊರಿನ ದಾವಾ ಚಟುವಟಿಕೆಯಲ್ಲಿಯೂ ಅವರ ಸಾನಿಧ್ಯವನ್ನು ಕಾಣುತ್ತಿದ್ದೆ. ನಂತರ ಹತ್ತನೆಯ ತರಗತಿಯ ನಂತರ ದೀನೀ ವಿಧ್ಯಾಭ್ಯಾಸವನ್ನು ಕಲಿಯಲು ನಾನು ಕೇರಳದ ಪ್ರಸಿದ್ಧ ವಿಧ್ಯಾಭ್ಯಾಸ ಸಂಸ್ಥೆಯಾದ ಜಾಮಿಅ ನದವಿಯ್ಯಗೆ ಹೋದ ನಂತರವೂ ರಜೆಯಲ್ಲಿ ಊರಿಗೆ ಬರುವಾಗ ನನ್ನ ಮತ್ತು ನನ್ನ ಅಣ್ಣನ ಬಗ್ಗೆ ಕೇಳುತ್ತಿದ್ದರು. ಕಂಡಲ್ಲಿ ಮಾತಾಡಿಸಿ ನಮ್ಮ ಕಲಿಕೆಯ ಬಗ್ಗೆ ಕೇಳುತ್ತಿದ್ದರು ಮತ್ತು ಇನ್ನೂ ಕಲಿಯಲು ಪ್ರೋತ್ಸಾಹ ನೀಡುತ್ತಿದ್ದರು. ಆರ್ಥಿಕವಾಗಿ ತಂದೆಯವರು ತುಂಬಾ ಕಷ್ಟದಲ್ಲಿದ್ದ ಕಾಲವಾಗಿತ್ತು. ನನ್ನ ತಂದೆಯ ಬಗ್ಗೆ ಅವರಿಗೆ ಅಪಾರ ಗೌರವ ಮತ್ತು ಪ್ರೀತಿ ಇತ್ತು. ಆ ಕಾಲದಲ್ಲಿ ಪೆರ್ನಾಲ್ ಬಟ್ಟೆ ಖರೀದಿಸಲು ಅವರು ನೀಡುತ್ತಿದ್ದ ಹಣ ಇಂದಿಗೂ ಮರೆತಿಲ್ಲ. ನಂತರ ನಾನು ಉನ್ನತ ಶಿಕ್ಷಣವನ್ನು ಪಡೆಯಲು ದೆಹಲಿಯ ಜಾಮಿಅ ಹಂದರ್ದ್ ಮತ್ತು ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿರುವಾಗಲೂ ಫೋನಿನ ಮೂಲಕ ಮಾತನಾಡಿ ಕಲಿಕೆಯ ಬಗ್ಗೆ ಕೇಳುತ್ತಿದ್ದರು. ಒಮ್ಮೆ ಹಂದರ್ದ್ ವಿಶ್ವವಿದ್ಯಾಲಯಕ್ಕೆ ಭೇಟಿ ಕೊಟ್ಟು ಅಲ್ಲಿನ ಕಲಿಕಾ ವಿಧಾನದ ಬಗ್ಗೆ ತಿಳಿದುಕೊಂಡಿದ್ದರು. ಕೋರ್ಸ್ ಮುಗಿಸಿದ ಬಳಿಕ ತನ್ನ ಸಂಸ್ಥೆಯಲ್ಲಿ ಕೆಲಸ ಮಾಡುವ ಇಂಗಿತ ವ್ಯಕ್ತಪಡಿಸಿದ್ದರು. ಕಾರಣಾಂತರಗಳಿಂದ ನನಗೆ ಅಲ್ಲಿ ಕೆಲಸ ಮಾಡಲು ಸಾಧ್ಯವಾಗಿಲ್ಲ ಆದರೆ ನಾನು ಈಗ ಕಲಿಸುತ್ತಿರುವ ಅಲ್ ಬಯಾನ್ ಅರಬಿಕ್ ಕಾಲೇಜಿನ ಬಗ್ಗೆ ಅಪಾರ ಪ್ರೀತಿಯಿಂದ ಮಾತನಾಡುತ್ತಿದ್ದರು ಮತ್ತು ಎಲ್ಲ ರೀತಿಯ ಸಹಾಯ ಸಹಕಾರಗಳನ್ನು ನೀಡುತ್ತಾ ಬಂದಿದ್ದರು. ಅವರನ್ನು ಕಾಣಲು ಕೆಲವೊಮ್ಮೆ ಮೂಡಬಿದರೆಯ ಅವರ ಮನೆಗೆ ಹೋದಾಗಲೆಲ್ಲ ನಮ್ಮ ಕಾಲೇಜಿನ ಬಗ್ಗೆ, ಪಟ್ಲ ಎಂಬ ನನ್ನ ಊರಿನ ಬಗ್ಗೆ, ನಾನು ಖುತ್ಬ ನಿರ್ವಹಿಸುತ್ತಿರುವ ಕೋಟೆಪುರ ಮಸೀದಿಯ ಬಗ್ಗೆ
ಮತ್ತು ಕೆ ಎಸ್ ಎ (ಕರ್ನಾಟಕ ಸಲಫಿ ಅಸೋಸಿಯೇಶನ್) ಯ ದಾವಾ ಚಟುವಟಿಕೆಗಳ ಬಗ್ಗೆ ಮಾತನಾಡುತ್ತಿದ್ದರು. ಎಲ್ಲರೂ ಒಗ್ಗಟ್ಟಿನಿಂದ ಒಟ್ಟಾಗಿ ಶಿರ್ಕ್‌ನ ವಿರುದ್ಧ ಕೆಲಸ ಮಾಡುವ ಕನಸನ್ನು ಕಂಡಿದ್ದರು. ಅವರ ಅನಾರೋಗ್ಯದ ಸಂದರ್ಭ ಕೊನೆಯದಾಗಿ ಅವರನ್ನು ಕಂಡಾಗ ಕೇಳಿದ್ದು ಕೂಡ ಪಟ್ಲದ (ನಮ್ಮೂರಿನ) ಮದ್ರಸ ಕಟ್ಟಡ ಪೂರ್ತಿಯಾಯಿತಾ? ಎಂಬುವುದಾಗಿತ್ತು. ಇವೆಲ್ಲವೂ ಸಮುದಾಯದ ಬಗ್ಗೆ ಅವರಿಗಿದ್ದ ಕಾಳಜಿಯಾಗಿದೆ.
ಯಾ ಅಲ್ಲಾಹ್! ಅವರ ಪ್ರಯತ್ನ, ಪ್ರಾರ್ಥನೆ, ಕರ್ಮಗಳೆಲ್ಲವನ್ನೂ ನೀನು ಸ್ವೀಕರಿಸಿ ಅಗಾಧ ಪ್ರತಿಫಲವನ್ನು ಅವರಿಗೆ ನೀಡು. ಆಮೀನ್.
ಖಂಡಿತವಾಗಿಯೂ ಅವರು ಪ್ರವಾದಿಗಳಂತೆ ಪಾಪ ಸುರಕ್ಷಿತರೂ ಅಲ್ಲ! ಮಲಕ್ ಗಳಂತೆ ಪ್ರಮಾದ ಮುಕ್ತರೂ ಅಲ್ಲ! ಯಾ ಅಲ್ಲಾಹ್! ಅವರಿಂದ ಅರಿತೋ ಅರಿಯದೆಯೋ ಸಂಭವಿಸಿದ ಎಲ್ಲ ತಪ್ಪುಗಳನ್ನೂ ನೀನು ಕ್ಷಮಿಸು. ಅವರನ್ನೂ, ನಮ್ಮನ್ನೂ, ನಮ್ಮ ಹೆತ್ತವರನ್ನೂ
ನಮಗಿಂತ ಮುಂಚೆ ನಿನ್ನ ಮಾರ್ಗದಲ್ಲಿ ತ್ಯಾಗವನ್ನು ಸಹಿಸಿ ಈ ಆದರ್ಶದ ನಿಲುವುಗಾಗಿ ಪ್ರಯತ್ನಿಸಿದ ಎಲ್ಲರನ್ನೂ ಪ್ರವಾದಿಗಳ, ಸತ್ಯಸಂಧರ, ಹುತಾತ್ಮರ, ಸಜ್ಜನರ ಜತೆ ಸ್ವರ್ಗದಲ್ಲಿ ಒಟ್ಟುಗೂಡಿಸು. ಆಮೀನ್.

*✒️ ಡಾ. ಮುಹಮ್ಮದ್ ಹಫೀಝ್ ಸ್ವಲಾಹಿ*