-ಇಸ್ಮತ್ ಪಜೀರ್

ಉಳ್ಳಾಲದ ಪ್ರಪ್ರಥಮ ಮಸೀದಿಯೊಳಗಿಂದ…..
———————————
ಈ ಬರಹವನ್ನು ಅರೇಬಿಯಾದಿಂದ ಇಸ್ಲಾಮಿನ ಸಂದೇಶ ಪ್ರಚಾರಕ್ಕೆಂದು ಬಂದು ಉಳ್ಳಾಲವನ್ನು ಪುಣೀತಗೊಳಿಸಿದ ಸೂಫಿ ಸಂತ ಹಝ್ರತ್ ಸಯ್ಯದ್ ಮದನಿ (ಖ.ಸಿ.) ಅವರು ಸುಮಾರು ಐನೂರು ವರ್ಷಗಳ ಹಿಂದೆ ಧ್ಯಾನನಿರತರಾಗಿದ್ದ ಮಸೀದಿಯೊಳಗೆ ಕೂತೇ ಆರಂಭಿಸಿದ್ದೇನೆ. ಯಾಕೋ ಇಲ್ಲಿ ಕೂತು ಆರಂಭಿಸಿದಷ್ಟು ಪರಿಪೂರ್ಣವಾಗಿ ಈ ಕಿರು ಬರಹವನ್ನು ಬೇರೆಲ್ಲೂ ಬರೆಯಲಾಗದು ಎಂದು ನನ್ನ ಹೃದಯ ಸಾರಿ ಹೇಳುತ್ತಿದೆ.

ಈ ಮಸೀದಿ ಯಾವುದೆಂದು ಉಳ್ಳಾಲಿಗರ ಹೊರತಾದವರಿಗೆ ಪಕ್ಕನೇ ಹೊಳೆಯದು. ಉಳ್ಳಾಲ ಕೇಂದ್ರ ಜುಮಾ ಮಸೀದಿ ಮತ್ತು ಅಸ್ಸಯ್ಯದ್ ಮುಹಮ್ಮದ್ ಶರೀಫುಲ್ ಮದನಿಯವರ ದರ್ಗಾದ ಆವರಣದೊಳಗೆ ಇರುವ ಪುಟ್ಟ ಮಸೀದಿಯಿದು.ಉಳ್ಳಾಲದ ಉರೂಸಿನ ವೇದಿಕೆ ನಿರ್ಮಿಸುವುದೇ ಈ ಐತಿಹಾಸಿಕ ಮಸೀದಿಯ ಜಗಲಿಯಲ್ಲಿ. ಯಾಕೆಂದರೆ ಇದು ಹಝ್ರತ್ ಸಯ್ಯದ್ ಮದನಿಯವರು ಧ್ಯಾನ ನಿರತರಾಗಿದ್ದ ಮಸೀದಿ. ಹಝ್ರತ್ ಸಯ್ಯದ್ ಮದನಿಯವರು ಪ್ರವಾದಿ ಮುಹಮ್ಮದ್ (ಸ.ಅ) ರು ಅಂತ್ಯ ವಿಶ್ರಮಗೊಳ್ಳುತ್ತಿರುವ ಪುಣ್ಯ ನಗರಿ ಮದೀನಾದಿಂದ ಸರಿ ಸುಮಾರು ಐದು ನೂರು ವರ್ಷಗಳ ಹಿಂದೆ ಇಸ್ಲಾಮಿನ ಸಂದೇಶದೊಂದಿಗೆ ಸಮುದ್ರ ಮಾರ್ಗವಾಗಿ ಉಳ್ಳಾಲಕ್ಕೆ ಬಂದಾಗ ಉಳ್ಳಾಲ ಎಂಬುವುದು ಕಡಲ ತೀರದ ಕುಗ್ರಾಮ.
ಸಯ್ಯದ್ ಮದನಿಯವರು ಕಡಲ ತೆರೆಗಳ ಮೇಲೆ ಮುಸಲ್ಲಾ (ಜಾನಿಮಾಝ್) ಹಾಕಿ ಅದರ ಮೇಲೆ ಧ್ಯಾನಸ್ಥ ಸ್ಥಿತಿಯಲ್ಲಿ ಕೂತು ಬಂದು ಉಳ್ಳಾಲದ ಕಡಲ ತೀರದಲ್ಲಿ ಬಂದಿಳಿದರು ಎಂಬ ಪ್ರತೀತಿಯಿದೆ. ಹಾಗೆ ಕಡಲ ತೆರೆಗಳನ್ನು ದಾಟಿ ಬಂದಾಗ ಅವರಿಗೆ ಸಿಕ್ಕ ಮೊದಲ ಮಸೀದಿ ಇದೇ ಮಸೀದಿ. ಸಯ್ಯದ್ ಮದನಿಯವರು ಇಲ್ಲೇ ಧ್ಯಾನ ನಿರತರಾಗಿದ್ದುದರಿಂದ ಈ ಮಸೀದಿಗೆ ಅವರ ಕಾಲಾನಂತರ ಮದನಿ ಮಸೀದಿ ಎಂದೇ ನಾಮಕರಣ ಮಾಡಲಾಯಿತು. ಸರಕಾರಿ ದಾಖಲೆಗಳಲ್ಲಿ ಇಂದಿಗೂ ಇದರ ಹೆಸರು ” ಸಯ್ಯದ್ ಮದನಿ ಗುಡಿ” ಎಂದೇ ಇದೆ.
ನಮ್ಮ ಹಿರಿಯರು ಹೇಳುತ್ತಿದ್ದಂತೆ ಹಿಂದೆ ಕಡಲು ಈಗಿರುವುದಕ್ಕಿಂತ ತುಂಬಾ ಈಚೆಗಿತ್ತಂತೆ.ಈ ಮಸೀದಿ ಕಡಲ ತೀರಕ್ಕಿಂತ ಕೂಗಳತೆ ದೂರದಲ್ಲಿತ್ತಂತೆ. ಹಾಗಿದ್ದುದರಿಂದ ಉಳ್ಳಾಲಕ್ಕೆ ಬಂದ ಸಯ್ಯದ್ ಮದನಿಯವರಿಗೆ ಸಿಕ್ಕ ಮೊದಲ ಮಸೀದಿ ಇದುವೇ ಆಗಿತ್ತು. ಅಲ್ಲಿಂದಲೇ ತನ್ನ ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳನ್ನು ಮದನಿಯವರು ಮಾಡುತ್ತಿದ್ದರಂತೆ.
ಈ ಮಸೀದಿಯಲ್ಲದೇ ಈಗಿನ ಸಯ್ಯದ್ ಮದ‌ನಿ ದರ್ಗಾ ಇರುವ ಸ್ಥಳದಿಂದ ಕೇವಲ ಐವತ್ತು ಮೀಟರ್ ದೂರವಿರುವ ಒಂದು ಮನೆಯಲ್ಲಿ ಸಯ್ಯದ್ ಮದನಿಯವರು ಆಗಾಗ ಕುಳಿತುಕೊಳ್ಳುತ್ತಿದ್ದರೆಂದೂ, ಅಲ್ಲಿಂದಲೂ ತನ್ನ ಚಟುವಟಿಕೆಗಳನ್ನು ಮಾಡುತ್ತಿದ್ದರೆಂದು ಉಳ್ಳಾಲದ ರಾಜಕೀಯ, ಧಾರ್ಮಿಕ ಮುಂದಾಳು ಫಾರೂಕ್ ಉಳ್ಳಾಲ್ ಹೇಳುತ್ತಾರೆ.

ಸಯ್ಯದ್ ಮದನಿಯವರು ಬರುವುದಕ್ಕಿಂತ ಮುಂಚೆಯೇ ಅಸ್ತಿತ್ವದಲ್ಲಿದ್ದ ಮೇಲಂಗಡಿ ಮಸೀದಿಗೆ ಆರುನೂರು ವರ್ಷಗಳಿಗೂ ಹೆಚ್ಚಿನ ಇತಿಹಾಸವಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಮ್ಮ ಕೆಲಸ ಕಾರ್ಯಗಳು, ಸೇವಾ ಚಟುವಟಿಕೆಗಳು, ಜನರ ಸಂಕಷ್ಟಗಳಿಗೆ ಪರಿಹಾರ ಮಾರ್ಗವನ್ನು ಸೂಚಿಸುವ ಮೂಲಕ ಇಸ್ಲಾಮ್ ಧರ್ಮವನ್ನು ಪಸರಿಸಿದ ಸೂಫಿ ಸಂತರುಗಳು ಅನೇಕರಿದ್ದರೂ ಅವರಲ್ಲಿ ಹಝ್ರತ್ ಬಾಬಾ ಫಕ್ರುದ್ದೀನ್ ಮತ್ತು ಅಸ್ಸಯ್ಯದ್ ಶರೀಫುಲ್ ಮದನಿ ಪ್ರಮುಖರು.ಬಾಬಾ ಫಕ್ರುದ್ದೀನ್‌ ಅವುಲಿಯಾರು ಬಂಟ್ವಾಳ ತಾಲೂಕಿನ ಪೊಳಲಿಯಲ್ಲಿ ಮತ್ತು ಅಜಿಲಮೊಗರುವಿನಲ್ಲಿ ಕೆಲ ಕಾಲ ನೆಲೆ ನಿಂತು ಸಂದೇಶ ಪ್ರಚಾರ ಕಾರ್ಯ ಕೈಗೊಂಡು ಅಲ್ಲಿ ಮಸೀದಿಗಳನ್ನು ನಿರ್ಮಿಸಿದರು. ಆ ಬಳಿಕ ಅಲ್ಲಿ ತನ್ನ ಶಿಷ್ಯಂದಿರನ್ನು ಸಂದೇಶ ಪ್ರಚಾರಕ್ಕೆಂದೇ ಬಿಟ್ಟು ಮುಂದೆ ಸಾಗಿದರು. ಅವರು ಕೊನೆಗೆ ಆಂದ್ರಪ್ರದೇಶದ ಪೆನುಗೊಂಡ ಎಂಬಲ್ಲಿ ಬದುಕು ಮುಗಿಸಿ ಅಲ್ಲೇ ಶರಣಾದರು. ಸಯ್ಯದ್ ಮದನಿ ಅವುಲಿಯಾರು ಉಳ್ಳಾಲಕ್ಕೆ ಬಂದ ನಂತರ ಉಳ್ಳಾಲ ಬಿಟ್ಟು ಎಲ್ಲಿಗೂ ತೆರಳಲಿಲ್ಲ. ಇಲ್ಲೇ ಇದ್ದು ಜನರನ್ನು ಸಂಸ್ಕರಿಸುವ ಕಾರ್ಯದಲ್ಲಿ, ಇಸ್ಲಾಮಿನ ಸಂದೇಶ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡರು. ಉಳ್ಳಾಲದಲ್ಲೇ ಜನಸೇವೆ ಮಾಡುತ್ತಾ, ಅಸಹಾಯಕರ ಸೇವೆಗೈಯುತ್ತಾ, ನೊಂದವರಿಗೆ ಸಾಂತ್ವನಗೈಯುತ್ತಾ ಅವರ ಸಮಸ್ಯೆಗಳಿಗೆ ಪರಿಹಾರದ ಮಾರ್ಗ ತೋರಿಸುತ್ತಾ ಇಲ್ಲೇ ಬಾಳಿ ಬದುಕಿ, ಉಳ್ಳಾಲದ ಮಣ್ಣಲ್ಲೇ ಮರಣ ಹೊಂದಿ ಸಮಾಧಿಸ್ಥರಾದರು. ಅವರು ಉಳ್ಳಾಲದ ಅಲೇಕಳ ಎಂಬಲ್ಲಿನ ಬಡ ಕುಟುಂಬದ ಸಾತ್ವಿಕ ಮಹಿಳೆಯೊಬ್ಬರನ್ನು ವರಿಸಿದರು.ಸಯ್ಯದ್ ಮದನಿಯವರಿಗೆ ಮಕ್ಕಳಿರಲಿಲ್ಲ.
ಅವರು ಭಾರತಕ್ಕೆ ಆಗಮಿಸಿದ ಬಳಿಕದಿಂದ ಮರಣದವರೆಗೆ ಹೆಚ್ಚಿನ ಸಮಯ ಇದೇ ಮದನಿ ಮಸೀದಿಯಲ್ಲಿ ಧ್ಯಾನ ನಿರತರಾಗಿರುತ್ತಿದ್ದರು. ಅವರು ಉಳ್ಳಾಲಕ್ಕೆ ಬಂದ ಕಾಲದಲ್ಲಿ ಉಳ್ಳಾಲದಲ್ಲಿದ್ದ ಇನ್ನೊಂದು ಮಸೀದಿ ಅಲೇಕಳ ಮಸೀದಿ.ಆಗ ಅಲೇಕಳದಲ್ಲಿ ಒಂದು ಚಿಕ್ಕ ಮಸೀದಿಯಿತ್ತು. ಆ ಮಸೀದಿಯನ್ನು ಉಳ್ಳಾಲದ ರಾಣಿ ಅಬ್ಬಕ್ಕಳ ಕಾಲದಲ್ಲಿ ದೊಡ್ಡದಾಗಿ ಮರು ನಿರ್ಮಾಣ ಮಾಡಲಾಯಿತು. ಆದರೆ ಅಲೇಕಳ ಮಸೀದಿ ಪಕ್ಕವೇ ಇರುವ ಕೊಳ ಐತಿಹಾಸಿಕವಾದುದು. ಸಯ್ಯದ್ ಮದನಿಯವರು ಸ‍ದ್ರಿ ಕೊಳದಲ್ಲಿ ಅಂಗಸ್ನಾನ ಮಾಡುತ್ತಿದ್ದರು. ಅಲೇಕಳ ಮಸೀದಿಯನ್ನು ರಾಣಿ ಅಬ್ಬಕ್ಕ ದೊಡ್ಡದಾಗಿ ಪುನರ್‌ನಿರ್ಮಿಸಲು ಸಹಾಯ ನೀಡಿದಳು. ಅದರ ಹಿಂದೆ ಒಂದು ಇತಿಹಾಸವಿದೆ.
ರಾಣಿ ಅಬ್ಬಕ್ಕಳನ್ನು ಪೋರ್ಚುಗೀಸರು ಹುಡುಕುತ್ತಿದ್ದಾಗ ಆಕೆ ಅಲೇಕಳ ಪಕ್ಕದ ಬೆಲಿಯಗ ತರವಾಡಿನಲ್ಲಿ ಅಡಗಿ ಕೂರುತ್ತಾಳೆ. ಆ ತರವಾಡಿನ ಮಹಿಳೆಯರು ಅಬ್ಬಕ್ಕಳಿಗೆ ಬ್ಯಾರಿ ಮಹಿಳೆಯಂತೆ ವೇಷ ತೊಡಿಸಿ ಮನೆಯಲ್ಲಿ ಬಚ್ಚಿಟ್ಟುಕೊಳ್ಳುತ್ತಾರೆ.
ಪೋರ್ಚುಗೀಸರ ಸೈನ್ಯವು ಅಬ್ಬಕ್ಕಳನ್ನು ಹುಡುಕುತ್ತಾ ಬರುತ್ತದಾದರೂ ಅಬ್ಬಕ್ಕ ಎಲ್ಲೂ ಕಾಣಸಿಗುವುದಿಲ್ಲ. ಕೆಲ ದಿನಗಳ ಕಾಲ ಅಲ್ಲೇ ಬ್ಯಾರಿ ಮಹಿಳೆಯ ವೇಷದಲ್ಲಿ ಅಡಗಿ ಕೂತು ಅಬ್ಬಕ್ಕ ಅಲ್ಲಿಂದಲೇ ಸೈನ್ಯವನ್ನು ಸಜ್ಜುಗೊಳಿಸುತ್ತಾಳೆ. ಮಲಬಾರ್‌ನ ಕುಟ್ಟಿ ಪೋಕರ್ ನೇತೃತ್ವದ ಸೈನ್ಯವೊಂದನ್ನು ಕಟ್ಟಿ ಮತ್ತೆ ರಂಗಕ್ಕಿಳಿದು ಪೋರ್ಚುಗೀಸರನ್ನು ಹಿಮ್ಮೆಟ್ಟಿಸುತ್ತಾಳೆ. ಅಂದು ತನಗೆ ರಕ್ಷಣೆ ಕೊಟ್ಟ ಬೆಲಿಯಗ ತರವಾಡಿನವರ ಕೈಯಲ್ಲಿ ಅಲೇಕಳದ ಮಸೀದಿ ಪುನರ್ನಿರ್ಮಾಣಕ್ಕೆಂದು ದೊಡ್ಡ ಮೊತ್ತವೊಂದನ್ನು ನೀಡುತ್ತಾಳೆ. ಆ ದುಡ್ಡನ್ನು ಬಳಸಿ ಅಲೇಕಳದಲ್ಲಿ ಸುಂದರವಾದ ಮಸೀದಿಯೊಂದನ್ನು ಪುನರ್ನಿರ್ಮಿಸಲಾಗುತ್ತದೆ.
ಸಯ್ಯದ್ ಮದನಿ ಅವುಲಿಯಾರ ಪತ್ನಿಯ ಮನೆ ಅಲೇಕಳದ ಪೊಲ್ಕರೆ ಎಂಬಲ್ಲಿದ್ದುದರಿಂದ ಅವರು ಅಲೇಕಳದಲ್ಲೇ ಮನೆ ಮಾಡಿ ಜೀವಿಸುತ್ತಾರೆ. ಅಲೇಕಳದಲ್ಲಿ ಆ ಕಾಲಕ್ಕೆ ಚಿಕ್ಕ ಮಸೀದಿಯೊಂದಿತ್ತಾದರೂ ಅದನ್ನು ನವೀಕರಿಸಿರುವುದು ಅಬ್ಬಕ್ಕಳ ಕಾಲದಲ್ಲಿ. ಅಬ್ಬಕ್ಕ ಮರಣ ಹೊಂದಿದ್ದು 1570ರಲ್ಲಿ. ಆಗ ಅಬ್ಬಕ್ಕಳಿಗೆ ನಲ್ವತ್ತೈದು ವರ್ಷ ವಯಸ್ಸು. ಸಯ್ಯದ್ ಮದನಿಯವರ ಕಾಲ ಅಬ್ಬಕ್ಕಳಿಗಿಂತ ತುಸು ಹಿಂದಿನದ್ದೆಂದು ಉಳ್ಳಾಲದ ರಾಜಕೀಯ , ಧಾರ್ಮಿಕ್ ಮುಂದಾಳು ಫಾರೂಕ್ ಉಳ್ಳಾಲ್ ಹೇಳುತ್ತಾರೆ. ಮಾತ್ರವಲ್ಲದೇ ಉಳ್ಳಾಲದ ಹಿರಿಯರೂ ಹೇಳುತ್ತಾರೆ. ಸಯ್ಯದ್ ಮದನಿಯವರು ಅಬ್ಬಕ್ಕಳ ನಂತರದವರಂತೂ ಅಲ್ಲ. ಅಬ್ಬಕ್ಕಳ ಕಾಲದವರೂ ಅಲ್ಲ. ಆದರೆ ಇವರಿಬ್ಬರ ಕಾಲವು ಅತ್ಯಂತ ಸಮೀಪದ್ದಂತೂ ಹೌದು. ಇತಿಹಾಸದಲ್ಲಿ ಅಲೇಕಳ ಮಸೀದಿಯನ್ನು ಅಬ್ಬಕ್ಕಳೇ ನಿರ್ಮಿಸಿಕೊಟ್ಟದ್ದೆಂದು ಹೇಳಲಾಗಿದೆ.ಆದರೆ ಅಬ್ಬಕ್ಕಳಿಗಿಂತ ಮುಂಚೆಯೇ ಅಲೇಕಳದಲ್ಲಿ ಮಸೀದಿಯಿತ್ತು. ಇಲ್ಲವಾದರೆ ಸಯ್ಯದ್ ಮದನಿಯವರು ಅಂಗಸ್ನಾನ (ವುಳೂ) ಮಾಡುತ್ತಿದ್ದ ಚಾರಿತ್ರಿಕ ಕೊಳದ ಪ್ರಸ್ತಾಪವೇ ಸಯ್ಯದ್ ಮದನಿಯವರ ಚರಿತ್ರೆಯಲ್ಲಿ ಬರುತ್ತಿರಲಿಲ್ಲ. ಸಯ್ಯದ್ ಮದನಿಯವರ ಅಧಿಕೃತ ಚರಿತ್ರೆಗಳಲ್ಲೊಂದಾದ ಮದನಿ ಮಾಲೆ ಕಾವ್ಯರೂಪದಲ್ಲಿದೆ. ಅದನ್ನು ಬರೆದವರು ತಲಪಾಡಿ ಖಾಝಿ ಬಾಪಕುಂಞಿ ಮುಸ್ಲಿಯಾರ್. ಅದನ್ನು ಬರೆಸಿದವರು ಮಂಚಿಲ ಹಮ್ಮಬ್ಬ ಎಂಬವರು. ನನ್ನ ಐದನೇ ತಲೆಮಾರಿನ ಮುತ್ತಜ್ಜ ಮಂಚಿಲ ಹಮ್ಮಬ್ಬರು ಉಳ್ಳಾಲ ದರ್ಗಾ ಮತ್ತು ಕೇಂದ್ರ ಮಸೀದಿಯ ಮೊಕ್ತೇಸರರಾಗಿದ್ದರು. ಮಲಯಾಳಂ ಭಾಷೆ ಪ್ರಧಾನವಾಗಿರುವ ಮದನಿ ಮಾಲೆಯೆಂಬ ಸುಂದರ ಚರಿತ್ರೆ ಕಾವ್ಯದಲ್ಲಿ ತಮಿಳ್, ಕನ್ನಡ, ಬ್ಯಾರಿ- ಮಲಾಮೆ ಮುಂತಾದ ಭಾಷೆಯ ಪದಗಳ ಮಿಶ್ರಣವಿದೆ.ಅದರಲ್ಲಿ ಸಯ್ಯದ್ ಮದನಿಯವರ ಅದ್ಭುತ ಸಿದ್ಧಿಯೊಂದರ ಪ್ರಸ್ತಾಪದಲ್ಲಿ ಅಲೇಕಳ ಎಂಬ ಊರು, ಅಲ್ಲಿನ ಮಸೀದಿಯ ಕೊಳ ಇತ್ಯಾದಿಗಳ ಪ್ರಸ್ತಾಪ ಬರುತ್ತದೆ.

ಉಳ್ಳಾಲದ ಎಲ್ಲಾ ಮಸೀದಿಗಳನ್ನು ಆಧುನಿಕ ವಾಸ್ತುಶಿಲ್ಪದನ್ವಯ ನವೀಕರಿಸಲಾಗಿದೆಯಾದರೂ ಸಯ್ಯದ್ ಮದನಿಯವರು ಹೆಚ್ಚಿನ ಸಮಯ ಧ್ಯಾನ ನಿರತರಾಗಿದ್ದ ಐತಿಹಾಸಿಕ ಮೇಲಂಗಡಿ ಮಸೀದಿಯ ಮೂಲ ರೂಪವನ್ನು ಹಾಗೆಯೇ ಇರಿಸಿ ಹೊರಗಿಂದಲೇ ನವೀಕರಿಸಲಾಗಿದೆ. ನೆಲಕ್ಕೆ ಸಿರಾಮಿಕ್ ಟೈಲ್ಸ್ ಅಳವಡಿಸಿದ್ದು, ಕಾಲ ಕಾಲಕ್ಕೆ ಪೈಂಟಿಂಗ್ ಮಾಡುತ್ತಾ ಬರಲಾಗಿದ್ದು ಬಿಟ್ಟರೆ ಮಸೀದಿಯ ಮಿಹ್ರಾಬ್ ( ನಮಾಝಿಗೆ ನೇತೃತ್ವ ನೀಡುವ ಇಮಾಂ ನಿಲ್ಲುವ ಸ್ಥಳ), ಮಸೀದಿಯ ಒಳಗಿನ ಮೂರು ಕಮಾನುಗಳು, ಮೇಲ್ಚಾವಣಿಯ ಮರದ ಮುಚ್ಚಿಗೆ ಇವೆಲ್ಲವನ್ನೂ ಹಿಂದಿನಂತೆಯೇ ಉಳಿಸಲಾಗಿದೆ. ಹಳೇ ಕಾಲದ ಮಸೀದಿಗಳಲ್ಲಿ ಒಳ ಮಸೀದಿ ಮತ್ತು ಹೊರ ಮಸೀದಿ ಎಂದು ವಿಂಗಡಣೆಯಿರುತ್ತಿತ್ತು. ಒಳ ಮಸೀದಿಗೆ ನಾಲ್ಕು ಬದಿಗೂ ಗೋಡೆ, ಮುಂಭಾಗದಲ್ಲಿ ಸಂಪೂರ್ಣ ಮುಚ್ಚಿದ ಗೋಡೆ, ಪ್ರವೇಶದಲ್ಲಿ ಮೂರು ಕಮಾನುಗಳು, ಒಳ ಮಸೀದಿಯ ಬಲ ಮತ್ತು ಎಡಭಾಗದ ಗೋಡೆಗಳಿಗೆ ಮೂರು ಬಾಗಿಲುಗಳಿರುತ್ತವೆ. ಒಳ ಮಸೀದಿಯ ಹೊರಗೆ ಮುಂಭಾಗ ಹೊರತು ಪಡಿಸಿ ಮೂರು ಸುತ್ತಲೂ ನಮಾಝಿಗೆ ನಿಲ್ಲಲು ಒಂದಷ್ಟು ಜಾಗವಿರುತ್ತದೆ. ಅದೇ ಹೊರ ಮಸೀದಿ. ಅದನ್ನು ಮಸೀದಿಯೊಳಗಿನ ಪ್ರಾಂಗಣವೆನ್ನಲೂಬಹುದು.
ಮದನಿ‌ ಮಸೀದಿಯಲ್ಲಿ ಇವೆಲ್ಲವನ್ನೂ ಹಳೇ ಸ್ವರೂಪದಲ್ಲಿ ಉಳಿಸಿಕೊಳ್ಳಲಾಗಿದೆ. ಉಳ್ಳಾಲದ ಕೇಂದ್ರ ಮಸೀದಿ ಸ್ಥಾಪನೆಗೆ ಮುಂಚೆ ಇದೇ ಇಲ್ಲಿನ ಪ್ರಧಾನ ಮಸೀದಿಯಾದುದರಿಂದ ಹಿಂದೆ ಈ ಮಸೀದಿಯಲ್ಲಿ ಶುಕ್ರವಾರದ ಸಾಮೂಹಿಕ ಜುಮಾ ನಮಾಝ್ ಇತ್ತಾದರೂ, ಆ ಬಳಿಕ ನಿರ್ಮಿಸಲಾದ ಕೇಂದ್ರ ಮಸೀದಿಗೆ ಜುಮಾ ನಮಾಝನ್ನು ಸ್ಥಳಾಂತರಿಸಲಾಗಿದೆ. ಅದಕ್ಕೆ ಎರಡು ಮುಖ್ಯ ಕಾರಣಗಳಿವೆ.
೧. ಒಂದೇ ಆವರಣದೊಳಗೆ ಎರಡು ಜುಮಾ ನಮಾಝ್ ಅಷ್ಟು ಸಮಂಜಸವೆನಿಸದು
೨. ಸ್ಥಳಾವಕಾಶದ ಕೊರತೆ.

ಜುಮಾ ಇಲ್ಲದಿದ್ದರೂ ಬೇರೆಲ್ಲಾ ನಮಾಝ್‌ಗಳು ಎರಡೂ ಮಸೀದಿಗಳಲ್ಲಿ ನಡೆಯುತ್ತವೆ.

ಸಯ್ಯದ್ ಮದನಿಯವರು ಮರಣ ಹೊಂದಿದಂದಿನಿಂದ ಸುಮಾರು ಮುನ್ನೂರೈವತ್ತು ವರ್ಷಗಳ ಕಾಲ ವರ್ಷಂಪ್ರತಿ ವಾರ್ಷಿಕ ನೇರ್ಚೆ ನಡೆಯುತ್ತಿತ್ತಾದರೂ 1920ರಿಂದ ಅಂದಿನ ಮೊಕ್ತೇಸರ ಮಂಚಿಲ ಹಮ್ಮಬ್ಬರ ನೇತೃತ್ವದಲ್ಲಿ ಐದು ವರ್ಷಗಳಿಗೊಮ್ಮೆ ನಡೆಯುವ ಉರೂಸ್ ಆರಂಭಿಸಲಾಯಿತು. ಪ್ರಸ್ತುತ ನಡೆಯುತ್ತಿರುವುದು ಇಪ್ಪತ್ತೊಂದನೇ ಪಂಚವಾರ್ಷಿಕ ಉರೂಸ್. ಈ ಉರೂಸ್ 2020ರಲ್ಲೇ ನಡೆಯಬೇಕಾಗಿತ್ತು. ಕೋವಿಡ್ ಕಾರಣದಿಂದಾಗಿ ಈ ಬಾರಿ ಎರಡು ವರ್ಷ ತಡವಾಯಿತು.
ಭಾರತದಲ್ಲಿ ಅಜ್ಮೀರ್ ಬಿಟ್ಟರೆ ಅತೀ ಹೆಚ್ಚು ಜನ ಸೇರುವ ಉರೂಸ್ ಉಳ್ಳಾಲದ ಉರೂಸ್. ಆದುದರಿಂದಲೇ ಉಳ್ಳಾಲವನ್ನು ದಕ್ಷಿಣ ಭಾರತದ ಅಜ್ಮೀರ್ ಎನ್ನಲಾಗುತ್ತದೆ. ಉಳ್ಳಾಲದ ಉರೂಸಿನಲ್ಲಿ ಹಲವು ವಿಶೇಷತೆಗಳಿವೆ. ಯಾರಿಗೇ ಆದರೂ ಮೊದಲ ನೋಟಕ್ಕೆ ಕಾಣಸಿಗುವ ಒಂದು ವಿಶೇಷತೆ ಲಕ್ಷಾಂತರ ಜನ ಸೇರುತ್ತಿದ್ದರೂ ಪೋಲೀಸ್ ಇಲಾಖೆಗೆ ಮಸೀದಿ ಕಂಪೌಂಡ್ ಒಳಗೆ ಎಂಟ್ರಿಯೇ ಇಲ್ಲ. ಜನರನ್ನು ನಿಯಂತ್ರಿಸುವ ಕೆಲಸವನ್ನು ಇಲ್ಲಿನ ಸ್ವಯಂ ಸೇವಕರೇ ಮಾಡುತ್ತಾರೆ.
ಉಳ್ಳಾಲದ ಉರೂಸಿನ ಕುರಿತು ಇನ್ನಷ್ಟು ಬರೆಯುವುದಿದೆ. ಮತ್ತೊಮ್ಮೆ ಬರೆಯುವೆ..ಉಳ್ಳಾಲದ ಉರೂಸಿಗೊಮ್ಮೆ ಬನ್ನಿ.. ಜಾತಿ ಮತಗಳಿಗತೀತವಾಗಿ ಎಲ್ಲರಿಗೂ ಸ್ವಾಗತ..

ಚಿತ್ರಗಳು :


-ಮದನಿ ಮಸೀದಿ


– ಮದನಿ ಮಸೀದಿಯ ಒಳಾಂಗಣ.


-ಸಯ್ಯದ್ ಮದನಿಯವರ ಮನೆ (ನವೀಕರಿಸಲಾಗಿದೆ)

ಸಯ್ಯದ್ ಮದನಿಯವರು ಆಗಾಗಕುಳಿತುಕೊಳ್ಳುತ್ತಿದ್ದ ದರ್ಗಾ ಪಕ್ಕದ ಮನೆ ( ನವೀಕರಿಸಲಾಗಿದೆ)

– ಅವರು ವುಝೂ ಮಾಡುತ್ತಿದ್ದ ಐತಿಹಾಸಿಕ ಕೊಳ
******************