*ಸಿಂಧೂ ಕಣಿವೆಯ ನಾಗರಿಕತೆಯನ್ನು ಕಟ್ಟಿದ್ದು ಆರ್ಯರಲ್ಲ, ಶೂದ್ರರು* …

ಜಗತ್ತಿನ ಮೊದಲ ನಗರದ ಹೆಸರು ಹರಪ್ಪ. ಈ ಪದ ದಕ್ಷಿಣ ಭಾರತದ ದೇವರುಗಳಾದ ಬೀರಪ್ಪ, ಮಾರಪ್ಪ, ಮಲ್ಲಪ್ಪ ಇತ್ಯಾದಿ ಹೆಸರುಗಳೊಂದಿಗೆ ತಾಳೆಯಾಗುತ್ತದೆ.

ಲೇಖಕರು: ಕಾಂಚ ಐಲಯ್ಯ ಶೆಫರ್ಡ್‌

ಜಾಗತಿಕ ಇತಿಹಾಸದಲ್ಲಿ ವಿಶ್ವದ ಮೊದಲ ನಗರ ಎಂದು ಕರೆಸಿಕೊಂಡಿರುವ ಹರಪ್ಪ ನಗರ ನಿರ್ಮಾಣವಾಗಿದ್ದು ಕ್ರಿಸ್ತ ಪೂರ್ವ 2850ರಿಂದ 2900ರ ಅವಧಿಯಲ್ಲಿ. ಈ ವಿಷಯವನ್ನು ಪುರಾತನ ಸಾಕ್ಷ್ಯಗಳು ಸ್ಪಷ್ಟಪಡಿಸುತ್ತವೆ. ಸ್ವಲ್ಪ ಗಮನಿಸಿದರೆ ‘ *ಹರಪ್ಪ’ ಎಂಬ ಹೆಸರು ದಕ್ಷಿಣ ಭಾರತದ ಹಳ್ಳಿಗಾಡಿನ ದೇವರುಗಳಾದ ಮಲ್ಲಪ್ಪ, ಬೀರಪ್ಪ, ವೀರಪ್ಪ ಇತ್ಯಾದಿ ಹೆಸರುಗಳ ಜತೆಗೆ ತಾಳೆಯಾಗುತ್ತದೆ.*
ಸಿಂಧೂ ನದಿಯ ತಟಗಳಲ್ಲಿ ನಿರ್ಮಾಣಗೊಂಡ ಹರಪ್ಪ ನಗರ ಈಗ ಪಾಕಿಸ್ತಾನದ ಗಡಿಯೊಳಗೆ ಸೇರಿದೆ. ಮನೆಗಳನ್ನು ಕಟ್ಟಿಕೊಂಡ ಜಾಗಗಳಲ್ಲಿ ವ್ಯವಸ್ಥಿತವಾದ ರಸ್ತೆ, ಕೆರೆಗಳು, ಕಾಲುವೆಗಳು, ಕೋಟೆ ಕೊತ್ತಲಗಳನ್ನು ಕಟ್ಟಿ ಅಂದಿನ ಜನ ದೊಡ್ಡ ನಗರವನ್ನು ನಿರ್ಮಿಸಿದ್ದರು. ಆಧುನಿಕ ನಗರ ಹರಪ್ಪ, ಋಗ್ವೇದ ರಚನೆಯಾಗುವುಕ್ಕಿಂತ 1,500 ವರ್ಷಗಳ ಹಿಂದೆಯೇ ಈ ಸಾಧನೆಯನ್ನು ಮಾಡಿ ತೋರಿಸಿತ್ತು. ಪುರಾತತ್ವ ಅಧ್ಯಯನಗಳು ಹೇಳುವಂತೆ ಇಂಡೋ ಆಫ್ರಿಕನ್ನರು ಸಿಂಧೂ ನದಿಯ ನಾಗರೀಕತೆಯನ್ನು ಹುಟ್ಟುಹಾಕಿದ್ದರು. ಈ ಸಂಧರ್ಭದಲ್ಲಿ ಭಾರತೀಯ ಉಪಖಂಡಕ್ಕೆ *ಆರ್ಯರು ಇನ್ನು ಬಂದಿರಲೇ ಇಲ್ಲ.*

*ಕನ್ನಡ ಮತ್ತು ತೆಲುಗು ಮಾತನಾಡುವ ಪ್ರದೇಶಗಳಲ್ಲಿ ವಾಸಿಸುತ್ತಿರುವ ಶೂದ್ರ ಮತ್ತು ದಲಿತ ಜನಾಂಗದ ವ್ಯಕ್ತಿಗಳ ಹೆಸರುಗಳ ಜತೆಗೆ ‘ಅಪ್ಪ’ ಎಂಬ ಪದ ವ್ಯಾಪಕವಾಗಿ ಸೇರಿಕೊಂಡಿದೆ* . ಪಶು ಸಂಗೋಪನೆ, ಕೃಷಿಯಲ್ಲಿ ತೊಡಗಿರುವ ಹಲವಾರು ಸಮುದಾಯಗಳ ದೇವರುಗಳ ಹೆಸರು ಮಲ್ಲಪ್ಪ, ಬೀರಪ್ಪ ಎಂದು ‘ಅಪ್ಪ’ ಪದದಿಂದಲೇ ಅಂತ್ಯಗೊಳ್ಳುತ್ತವೆ. ಹರಪ್ಪ ಶಬ್ಧವೂ ಕೂಡ ಇದೇ ರೀತಿಯೇ ಕೇಳಿಸುತ್ತದೆ.

ಭಾರತದ ಉಪಖಂಡದಲ್ಲಿ ಹಳ್ಳಿ ಮತ್ತು ನಗರಗಳಿಗೆ ಜನರ ಹೆಸರುಗಳನ್ನು ಇಡುವ ಪರಿಪಾಠ ಚಾಲ್ತಿಯಲ್ಲಿದೆ. ನಮ್ಮ ಊರಿನ ಹೆಸರು ಪಾಪಯ್ಯ ಪೇಟೆ. ಹಿಂದಿನ ಜನರು ಹೇಳುತ್ತಿದ್ದ ಪ್ರಕಾರ ಪಾಪಯ್ಯ ಎಂಬ ಮೀನುಗಾರನೊಬ್ಬ ಇಲ್ಲಿ ಜೀವಿಸುತ್ತಿದ್ದ. ಈಗ ಅದೇ ಜಾಗ, ಜನವಸತಿಯನ್ನು ಕಂಡು ಪಾಪಯ್ಯ ಪೇಟೆಯಾಗಿದೆ. ಇಂತಹ ಸಹಸ್ರಾರು ಉದಾಹರಣೆಗಳು ನಮ್ಮ ಮುಂದೆಯೇ ಇವೆ. ಅದೇ ರೀತಿ ಹರಪ್ಪ ನಾಗರೀಕತೆಯ ವಿಷಯದಲ್ಲಿಯೂ ಆಗಿರುವ ಸಾಧ್ಯತೆಗಳು ದಟ್ಟವಾಗಿವೆ. ಈ ನಗರ ನಿರ್ಮಾಣವಾಗುವ ಮುಂಚೆ ಇಲ್ಲಿ ಹರಪ್ಪ ಎಂಬ ವ್ಯಕ್ತಿ ಇದ್ದಿರಬಹುದು. ಆತನ ಹೆಸರನ್ನೇ ಈ ನಗರಕ್ಕೆ ಇಡಲಾಗಿರಬಹುದು.

ಹಳ್ಳಿಗಳು ಹತ್ತಿರವಿದ್ದಲ್ಲಿ ಮಾತ್ರವೇ ನಗರ ನಿರ್ಮಾಣ ಸಾಧ್ಯವಾಗಬಲ್ಲದು. ಸಿಂಧೂ ನದಿ ಕಣಿವೆ ಹಬ್ಬಿದ್ದ ಪ್ರದೇಶಗಳಲ್ಲಿ ಹರಪ್ಪ ನಗರ ನಿರ್ಮಾಣ ಆಗುವುದಕ್ಕೂ ಮುಂಚೆ ಕಣಿವೆಯುದ್ದಕ್ಕೂ ಹಳ್ಳಿಗಳು ಹಬ್ಬಿರಲೇಬೇಕು. ಜತೆಗೆ ಒಂದು ನಗರವನ್ನು ನಿರ್ಮಾಣ ಮಾಡಲು, ಆ ವೇಳೆಗಾಗಲೇ ಅಂದಿನ ಜನ ಕೃಷಿಯನ್ನು ಆರಂಭಿಸಿ, ಆರ್ಥಿಕತೆ ಸೃಷ್ಟಿಸಿಕೊಂಡಿರಲೇಬೇಕು.

ಉದಾಹರಣೆಗೆ ನಾನು ಬಾಲಕನಾಗಿದ್ದ ಸಮಯದಲ್ಲಿ ನಮ್ಮ ಮನೆ ಕಟ್ಟಲ್ಪಟ್ಟಿತು. ಆ ಮನೆಯನ್ನು ಕಟ್ಟಲು ಹೆಚ್ಚಿನ ಸಲಕರಣೆಗಳೇನೂ ಬಳಕೆ ಆಗಿರಲಿಲ್ಲ. ಆ ಹುಲ್ಲಿನ ಮನೆಗೆ ಹಳ್ಳಿಯಲ್ಲಿ ದೊರೆತ ಮರಗಳನ್ನೇ ಬಳಸಲಾಗಿತ್ತು. ತದ ನಂತರದ ದಿನಗಳಲ್ಲಿ ನಮ್ಮ ಹಳ್ಳಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಡಗಿಗಳು ಸೃಷ್ಟಿಯಾದರು. ಮಣ್ಣಿನ ಗೋಡೆ, ಹುಲ್ಲಿನ ಛಾವಣಿಯ ಮನೆಯಿದ್ದ ಜಾಗದಲ್ಲಿ ಇಟ್ಟಿಗೆಗಳಿಂದ ಕಟ್ಟಿದ ಮನೆಗಳು ನಿರ್ಮಾಣವಾದವು.

ನನ್ನ ಹಳ್ಳಿಯಲ್ಲಿ ನಾನು ಕಂಡಂತ ಸಮಾಜೋ ಆರ್ಥಿಕ ಸ್ಥಿತಿಗತಿಗಳು ಹರಪ್ಪದಲ್ಲಿಯೂ ಕೂಡ ಇದ್ದದ್ದರಿಂದಲೇ ಹರಪ್ಪ ನಗರದ ನಿರ್ಮಾಣ ಸಾಧ್ಯವಾಗಿದೆ. ಈ ನಗರ ನಿರ್ಮಾಣ ಒಂದು ಸ್ಪಷ್ಟ ರೂಪ ಪಡೆಯುತ್ತಿದ್ದ ಸಂದರ್ಭದಲ್ಲಿ ಈ ವಿಷಯ ಮಹೆಂಜೋದಾರೋ ಮತ್ತು ಧೋಲವಿರಾ ನಗರಗಳಿಗೂ ಕೂಡ ಹಬ್ಬಿತ್ತು. ಆದರೆ ಇಂತಹದ್ದೊಂದು ನಾಗರಿಕತೆ ಗಂಗಾ ನದಿಯ ತಟಗಳಲ್ಲಿ ಹುಟ್ಟಿಕೊಳ್ಳಲಿಲ್ಲ. ಸಿಂಧೂ ನದಿಯ ದಡಗಳಲ್ಲಿ ಹರಪ್ಪದಂತಹ ನಗರ ನಿರ್ಮಾಣವಾಗಿದ್ದ ಕಾಲದಲ್ಲಿ ಗಂಗಾ ನದಿಯ ಪ್ರದೇಶದಲ್ಲಿ ಹಳ್ಳಿಗಳೂ ಕೂಡ ಇರಲಿಲ್ಲ.

ಈ ಪ್ರಶ್ನೆಗೆ ಉತ್ತರ ವೇದಗಳ ಕಾಲದ ಆರ್ಥಿಕತೆಯಲ್ಲಿ ದೊರೆಯುತ್ತದೆ. ವೇದಗಳ ಆರ್ಥಿಕತೆ ಎಂದರೆ ದನಗಾಹಿಗಳ ಅರ್ಥಿಕತೆ. ಈ ಆರ್ಥಿಕತೆಯ ಮೂಲ ಪ್ರಾಣಿ ಸಾಕಾಣಿಕೆ. ಹಸು, ಒಂಟೆ, ಮೇಕೆ, ಕುರಿ, ಯಾಕ್‌, ಲಾಮಾ, ಹಿಮ ಸಾರಂಗಗಳು, ಕುದುರೆಗಳೇ ಇಲ್ಲಿ ಮುಖ್ಯವಾಗಿದ್ದವು. ಈ ಜನ ಒಂದೆಡೆ ವಾಸಿಸುತ್ತಿರಲಿಲ್ಲ. ಇದನ್ನು ಗಮನಿಸಿದರೆ ವೇದಗಳ ಕಾಲದ ಸಾಮಾಜಿಕ ಬದುಕು ಹರಪ್ಪ ನಾಗರಿಕತೆಯ ಅಂತ್ಯದ ನಂತರ ಹಲವಾರು ಪಟ್ಟು ಹಿಂದಕ್ಕೆ ಸಾಗಿತ್ತು. ನಗರೀಕರಣ ದೊಡ್ಡ ಪೆಟ್ಟು ತಿಂದಿತ್ತು.

ಸಿಂಧೂ ಕಣಿವೆಯ ನಾಗರಿಕತೆಯನ್ನು ಕಟ್ಟಿದ್ದು ಆರ್ಯರಲ್ಲ, ಶೂದ್ರರು…
ಪುರಾತತ್ವ ಶಾಸ್ತ್ರಜ್ಞರ ಅಧ್ಯಯನಗಳು ಹೇಳುವಂತೆ ಹರಪ್ಪ ನಾಗರಿಕತೆ ನಿರ್ಮಾಣವಾಗಿದ್ದು ಇಂಡೋ ಆಫ್ರಿಕನ್ನರಿಂದ. ಅವರ ದೈಹಿಕ ಲಕ್ಷಣಗಳು ದಕ್ಷಿಣ ಭಾರತದ ದ್ರಾವಿಡರೊಟ್ಟಿಗೆ ಹೋಲಿಕೆ ಆಗುತ್ತವೆ. ವೇದಗಳ ನಾಗರಿಕತೆಯ ಸಂಸ್ಕೃತಿ ಮತ್ತು ಸಮಾಜ ನಿರ್ಮಾಣವಾಗಿದ್ದು ಇಂಡೋ ಆರ್ಯನ್ನರಿಂದ. ಈ ಜನ ಕ್ರಿಸ್ತ ಪೂರ್ವ 1500ರಿಂದ 1100ರ ಅವಧಿಯಲ್ಲಿ ಬಂದು ನೆಲೆಸಿದವರು.

ಇಂಡೋ ಆರ್ಯನ್‌ ನಾಗರಿಕತೆಗೆ ಸಂಬಂಧಿಸಿದ ಮೊಟ್ಟ ಮೊದಲ ಮತ್ತು ವಿಶ್ವಾಸಾರ್ಹ ಸಾಕ್ಷಿಯೆಂದರೆ ಋಗ್ವೇದ. ಜಾತಿ ಪದ್ಧತಿಯ ಬೇರುಗಳು ಋಗ್ವೇದದಲ್ಲಿಯೇ ಕಾಣಸಿಗುತ್ತವೆ. ಸಂಸ್ಕೃತದಲ್ಲಿರುವ ಈ ವೇದ ಹಿಡಿದು ಈಗಲೂ ಕೂಡ ಬ್ರಾಹ್ಮಣರು ದೇವಾಲಯಗಳಲ್ಲಿ ಪುರೋಹಿತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಶೂದ್ರರಿಗೆ ಇಂತಹ ಕೃತಿಗಳನ್ನು ರಚಿಸುವ ಹಕ್ಕು ಇರಲಿಲ್ಲ. ಇಂದಿಗೂ ಸಹ ಹಲವು ಹಿಂದೂ ಶಾಲೆ ಮತ್ತು ಕಾಲೇಜುಗಳು ಹಲವಾರು ಸಮುದಾಯಗಳ ಜನರಿಗೆ ಅಧ್ಯಯನದಲ್ಲಿ ತೊಡಗುವುದನ್ನು ನಿರಾಕರಿಸಿವೆ. ದೇಶದ ಬಹುತೇಕ ದೇವಾಲಯಗಳಲ್ಲಿ ಇವತ್ತಿಗೂ ಬ್ರಾಹ್ಮಣೇತರರು ಪುರೋಹಿತರಾಗಲು ಸಾಧ್ಯವಿಲ್ಲ. *ಬ್ರಾಹ್ಮಣರ ಹಿಡಿತದಲ್ಲಿದ್ದ ಸಮಾಜದಲ್ಲಿ ಯಾವ ಶೂದ್ರ ತತ್ವಜ್ಞಾನಿಯೂ ಜನ್ಮ ತಳೆದಿರಲಿಲ್ಲ.* ಬ್ರಾಹ್ಮಣ ಅಥವಾ ಕ್ಷತ್ರಿಯರಷ್ಟೇ ತತ್ವಜ್ಞಾನಿಗಳಾಗಿ ಕಂಡಿದ್ದರು.

ಶೂದ್ರರು ಹೆಚ್ಚಿನದಾಗಿ ಹಿಂದುತ್ವದ ಕಡೆಗೆ ಹೊರಳಿದ್ದು ಭಾರತೀಯ ಜನತಾ ಪಕ್ಷ ಮೊದಲ ಬಾರಿಗೆ ಅಧಿಕಾರಕ್ಕೆ ಬಂದ ನಂತರದಿಂದ. 1999ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಆರ್‌ಎಸ್‌ಎಸ್‌ನಲ್ಲಿ ಶೂದ್ರರ ಒಳಗೊಳ್ಳುವಿಕೆ ಆರಂಭಗೊಂಡಿತು. ಆದರೆ ಯಾವ ಶೂದ್ರನೂ ಕೂಡ ದೇವಸ್ಥಾನ ಅರ್ಚಕನಾಗಲು ಸಾಧ್ಯವಾಗಿಲ್ಲ. ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗಳು ಕೇವಲ ಓಟಿನ ಕಾರಣಕ್ಕಾಗಿ ಶೂದ್ರರನ್ನು ತಲುಪುತ್ತಿವೆ ಅಷ್ಟೇ. ಶೂದ್ರ ಸಮುದಾಯವನ್ನು ಅಭಿವೃದ್ಧಿ ಪಡಿಸಬೇಕೆಂಬ ಯಾವ ಆಶಯವೂ ಕೂಡ ಅವುಗಳಲ್ಲಿಲ್ಲ.

ಶೂದ್ರರು ಹರಪ್ಪ ನಾಗರಿಕತೆಯ ಐತಿಹಾಸಿಕ ಬೇರುಗಳನ್ನು ಹೊಂದಿದ್ದಾರೆ. ಅಲ್ಲಿ ಯಾವ ಬ್ರಾಹ್ಮಣರು, ಬ್ರಾಹ್ಮಣ್ಯ ಅಥವಾ ಸಂಸ್ಕೃತ ಇರಲಿಲ್ಲ ಎನ್ನುವುದಂತೂ ಸತ್ಯ. ಆದರೆ ಅದೇಗೆ ಇಡೀ ಸಿಂಧೂ ನದಿಯ ನಾಗರಿಕತೆ ಕಾಣ್ಮರೆಯಾಯಿತು ಎನ್ನುವುದು ಉತ್ತರವಿಲ್ಲದ ಪ್ರಶ್ನೆ. ಅದೇ ರೀತಿ ಭಾರತಕ್ಕೆ ಕಾಲಿಟ್ಟ, ಸರಿಯಾದ ಹಳ್ಳಿಗಳನ್ನು ಕಟ್ಟಿಕೊಳ್ಳಲು ಬಾರದ ಮೊದಲ ಆರ್ಯನ್ನರು ಅದೇಗೆ ಹಳೆಯ ನಾಗರಿಕತೆಗೆ ಸಂಪೂರ್ಣ ವಿರುದ್ಧವಾದ ಸಂಸ್ಕೃತಿಯನ್ನು ಸೃಷ್ಟಿಸಿಕೊಂಡರು ಎಂಬ ಪ್ರಶ್ನೆಯೂ ಹಾಗೇ ಉಳಿಯುತ್ತದೆ.

ಋಗ್ವೇದದ ಶ್ಲೋಕಗಳು ದೇವರನ್ನು ಬಿಟ್ಟು ಅಗ್ನಿಯನ್ನು ಸ್ತುತಿಸುತ್ತವೆ. ಋಗ್ವೇದದ ಕಾಲದಲ್ಲಿ ಬ್ರಹ್ಮ, ಇಂದ್ರರಿಗಿಂತ ಅಗ್ನಿ ಮತ್ತು ವಾಯು ಹೆಚ್ಚಿನ ಮನ್ನಣೆ ಪಡೆಯುತ್ತಾರೆ. ಬೆಂಕಿ ಅತೀ ಶಕ್ತಿಶಾಲಿಯಾದ ದೈವ ಎಂದು ವೈದಿಕರು ಭಾವಿಸಿದ್ದರು. ಶತ್ರುಗಳನ್ನು, ಅವರ ಮನೆ, ದನಕರು, ಬೆಳೆ, ಧಾನ್ಯ ದವಸ ಮತ್ತಿತರೆ ಸ್ವತ್ತುಗಳನ್ನು ಸುಲಭವಾಗಿ ನಾಶ ಮಾಡಬಲ್ಲ ಶಕ್ತಿ ಬೆಂಕಿಗೆ ಇರುವ ಕಾರಣದಿಂದ ಈ ಸ್ತುತಿಗಳು ಹುಟ್ಟಿಕೊಂಡಿದ್ದವು. ಅಷ್ಟೇ ಶಕ್ತಿಯುತವಾಗಿ ಕಂಡ ಮತ್ತೊಬ್ಬ ದೈವವೆಂದರೆ ವಾಯು.

ನಾನು ಸುಮಾರು 3-4 ವರ್ಷದ ಬಾಲಕನಾಗಿದ್ದ ಸಂದರ್ಭದಲ್ಲಿ ನನ್ನ ಹಳ್ಳಿಯ ಬಹುತೇಕ ಮನೆಗಳು ಬೆಂಕಿಯಿಂದಾಗಿ ಸುಟ್ಟುಹೋದವು. ಆಕಾಶದೆತ್ತರಕ್ಕೆ ಹಾರುತ್ತ ಗಾಳಿಯೊಂದಿಗೆ ಸರಸವಾಡುತ್ತಿದ್ದ ಬೆಂಕಿ ಎಲ್ಲರನ್ನೂ ಭಯಭೀತವಾಗಿಸಿತ್ತು. ಅದೃಷ್ಟವೆಂದರೆ ಮನೆಗಳು ಗಾಳಿ ಬೀಸುವ ದಿಕ್ಕಿನಲ್ಲಿ ಇಲ್ಲದ ಕಾರಣ ಹೆಚ್ಚು ಅಪಾಯವೇನೂ ಆಗಲಿಲ್ಲ. ಆದರೆ ಕೆಲವು ಹಳ್ಳಿಗರ ಪ್ರಾಣ ಪಡೆದಿತ್ತು. ಅಂದಿನಿಂದ ಹಳ್ಳಿಗರು ಅಗ್ನಿ ಮತ್ತು ವಾಯು ದೇವವನ್ನು ಬಯ್ಯಲು ಶುರು ಮಾಡಿದರು.

ಆದರೆ ಆರ್ಯರು ಹೀಗೆ ಮಾಡಿದಂತಿಲ್ಲ. ನಾಶ ಮಾಡುವ ದೇವತೆಗಳನ್ನೇ ಪೂಜಿಸಲು ಪ್ರಾರಂಭಿಸಿದರು. ಜಾತಿಗಳನ್ನು ಹುಟ್ಟಿಹಾಕಿದ್ದೂ ಕೂಡ ಇವರೇ. ಅದರ ಮೂಲಕ ಜನರ ಗುಂಪನ್ನು ಅವಮಾನಕರ ಜೀವನಕ್ಕೆ ನೂಕಿದರು.

ಹರಪ್ಪ ಸಂಸ್ಕೃತಿಯಲ್ಲಿ ಜಾತಿ ಇರಲಿಲ್ಲ. ಆಗಿನ ಜನ ಕೃಷಿಯನ್ನು ನೆಚ್ಚಿಕೊಂಡಿದ್ದವರು, ಒಂದೆಡೆ ನೆಲೆ ನಿಂತವರು. ಇವೆಲ್ಲವನ್ನೂ ಗಮನಿಸಿದರೆ ಹರಪ್ಪ ನಗರ ಕಟ್ಟಿದ್ದು ಆರ್ಯರಲ್ಲ, ಬದಲಾಗಿ ಶೂದ್ರರು ಎನ್ನುವುದು ಗೊತ್ತಾಗುತ್ತದೆ.

( ‘ಡೈಲಿ ಓ’ ಸುದ್ದಿ ಸಂಸ್ಥೆ ಪ್ರಕಟಿಸಿದ ಕಾಂಚ ಐಲಯ್ಯ ಶೆಫರ್ಡ್‌ ಅವರ ಲೇಖನದ ಭಾವಾನುವಾದ)