ವೀರಪ್ಪ ಮೊಯ್ಲಿ -82
*****
(An unsung hero of IT revolution)
ಪ್ರಶಂಸೆಗಳನ್ನೇ ಕಾಣದ ಹೈಟೆಕ್ ಸಮಾಜ ಸುಧಾರಕ
– ಸಿ. ರುದ್ರಪ್ಪ
ಕೆ.ಕಾಮರಾಜ್ ನಾಡಾರ್ ಮದ್ರಾಸ್ ಮುಖ್ಯಮಂತ್ರಿಯಾಗಿದ್ದಾಗ ಅವರಿಗೆ 10 ಮೆಡಿಕಲ್ ಸೀಟು ಹಂಚಿಕೆ ಮಾಡುವ ವಿವೇಚನಾ ಅಧಿಕಾರವಿತ್ತು.ಅರ್ಜಿಗಳ ಫೈಲು ಮುಖ್ಯಮಂತ್ರಿಯವರಿಗೆ ಹೋಯಿತು.ಅದಕ್ಕೂ ಮೊದಲು ಉದ್ಯಮಿಗಳು,ಶ್ರೀಮಂತರು ಮತ್ತು ಪ್ರತಿಷ್ಠಿತರು ಮುಖ್ಯಮಂತ್ರಿಯವರ ಮೇಲೆ ಪ್ರಭಾವ ಬೀರಲು ಯತ್ನಿಸಿದ್ದರು.ಅವರೆಲ್ಲಾ ಹೊರಗೆ ಕಾಯುತ್ತಿದ್ದರು.ಆದರೆ ಆ ಫೈಲು ಹೊರಗೆ ಬಂದಾಗ ಅವರ ಮಕ್ಕಳಿಗೆ ಯಾರಿಗೂ ಸೀಟು ದೊರೆತಿರಲಿಲ್ಲ.”ಸಾರ್, ಈ ಆಯ್ಕೆಗೆ ಯಾವ ಮಾನದಂಡವನ್ನು ಅನುಸರಿಸಿದಿರಿ”ಎಂದು ಹಿರಿಯ ಅಧಿಕಾರಿಯೊಬ್ಬರು ಮುಖ್ಯಮಂತ್ರಿಯವರನ್ನು ವಿಚಾರಿಸಿದರು.ಆಗ ಕಾಮರಾಜ್ ನಾಡಾರ್”ಅಭ್ಯರ್ಥಿಯ ಅರ್ಜಿಯ ಕೊನೆಯಲ್ಲಿ ಪೋಷಕರ ಸಹಿಯ ಜಾಗದಲ್ಲಿ ಹೆಬ್ಬೆಟ್ಟಿನ ಗುರುತು ಇರುವ ಎಲ್ಲರನ್ನೂ ಆಯ್ಕೆ ಮಾಡಿದ್ದೇನೆ.ಅವನ ಇಡೀ ಸಮೂಹವೇ ಶಿಕ್ಷಣ ವಂಚಿತರು.ಇವನಿಂದ ಹೊಸ ಪರಂಪರೆ ಪ್ರಾರಂಭವಾಗಿ ಹೊಸ ಬೆಳಕು ಮೂಡಲಿ”ಎಂದರು.ಅದೊಂದು ಕ್ರಾಂತಿಕಾರಕ ಹೆಜ್ಜೆಯಾಗಿತ್ತು.ಅದೇ ರೀತಿಯ ಕ್ರಾಂತಿ ಕರ್ನಾಟಕದಲ್ಲಿ 90 ರ ದಶಕದ ಆರಂಭದಲ್ಲಿ ದೊಡ್ಡ ಮಟ್ಟದಲ್ಲಿ ಸಂಭವಿಸಿತು.ಉನ್ನತ ಶಿಕ್ಷಣ ಕೇವಲ ಹಣವಂತರ ಮತ್ತು ಪ್ರತಿಷ್ಠಿತರ ಪಾಲಾಗಿತ್ತು.ಶಿಕ್ಷಣ ಸಂಸ್ಥೆಗಳ ಮಾಲೀಕರು ಗಲ್ಲಾ ಪೆಟ್ಟಿಗೆಗಳ ಮೇಲೆ ಕುಳಿತು ಅತಿ ಹೆಚ್ಚಿನ ಬಿಡ್ಡುದಾರರಿಗೆ ಮೆಡಿಕಲ್ ಮತ್ತು ಇಂಜಿನಿಯರಿಂಗ್ ಸೀಟುಗಳನ್ನು ಬಿಕರಿ ಮಾಡುತ್ತಿದ್ದರು.ವಿವೇಚನಾ ಕೋಟಾ ಹೆಸರಲ್ಲಿ ಕೆಲವು ಸೀಟುಗಳನ್ನು ಗಿಟ್ಟಿಸುತ್ತಿದ್ದ ರಾಜಕಾರಣಿಗಳು ಕಣ್ಣು ಮುಚ್ಚಿ ಕುಳಿತುಕೊಂಡಿದ್ದರು.ಇದೇ ವೇಳೆ ಟಿ.ಎಂ.ಎ.ಪೈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಕ್ಯಾಪಿಟೇಷನ್ ಶುಲ್ಕವನ್ನು ನಿಷೇಧಿಸಿತು.ಈ ಅವಕಾಶವನ್ನು ದೇಶದಲ್ಲಿಯೇ ಮೊದಲ ಬಾರಿಗೆ ಬಳಸಿಕೊಂಡು ಅವಕಾಶ ವಂಚಿತರ ನೆರವಿಗೆ ಧಾವಿಸಿದವರು ಮುಖ್ಯ ಮಂತ್ರಿ ವೀರಪ್ಪ ಮೊಯ್ಲಿ.ಅವರು ಇಡೀ ದೇಶಕ್ಕೇ ಮಾದರಿಯಾದ ಸಾಮಾನ್ಯಪ್ರವೇಶ ಪರೀಕ್ಷೆ (ಸಿ ಇ ಟಿ)ವ್ಯವಸ್ಥೆಯನ್ನು ರೂಪಿಸಿದರು.ಮೀಸಲಾತಿಯ ರೋಸ್ಟರ್,ಸೀಟ್ ಮ್ಯಾಟ್ರಿಕ್ಸ್ ಮತ್ತು ಕೈಗೆಟಕುವ ಶುಲ್ಕವನ್ನೊಳಗೊಂಡ ಪಾರದರ್ಶಕ ವ್ಯವಸ್ಥೆ ಜಾರಿಗೆ ಬಂದಿತು.ಸಿ.ಇ.ಟಿ ಘಟಕದ ಆವರಣದಲ್ಲಿ ಠಳಾಯಿಸುತ್ತಿದ್ದ ಶಿಕ್ಷಣ ಸಂಸ್ಥೆಗಳ ಬ್ರೋಕರ್ ಮತ್ತು ಏಜೆಂಟ್ ಗಳನ್ನು ಬಂಧಿಸುವಂತೆ ಸಿ.ಇ.ಟಿ ಮುಖ್ಯಸ್ಥ ಬಿ. ಎ.ಹರೀಶ್ ಗೌಡರು ಪೊಲೀಸರಿಗೆ ಸೂಚಿಸಿದರು.ಸಿ.ಇ.ಟಿ ಪ್ರಕ್ರಿಯೆಯಲ್ಲಿ ಅಭ್ಯರ್ಥಿಗಳು ನಿರಾತಂಕದಿಂದ ಭಾಗವಹಿಸುವ ವಾತಾವರಣ ನಿರ್ಮಾಣವಾಯಿತು.ಈ ಮೂಲಕ, ಮೊಯ್ಲಿಯವರು ಉನ್ನತ ಶಿಕ್ಷಣಕ್ಕೆ ಅಂಟಿದ್ದ ಪ್ರತಿಷ್ಠೆಯ ಹಣೆ ಪಟ್ಟಿಯನ್ನು ಕಳಚಿ ಅದನ್ನು ಡಿಗ್ಲಾಮರೈಸ್(deglamourise )ಮಾಡಿ ಬಿಟ್ಟರು.ದಲಿತರು,ಹಿಂದುಳಿದವರು,ರೈತರು,ಕಾರ್ಮಿಕರು,ಕಡುಬಡವರು ಮತ್ತು ಮಧ್ಯಮ ವರ್ಗದವರ ಮಕ್ಕಳಿಗೆ ಮೊದಲ ಬಾರಿಗೆ ಡಾಕ್ಟರು ಮತ್ತು ಇಂಜಿನಿಯರ್ ಆಗುವ ಕನಸುಗಳು ಬೀಳ ತೊಡಗಿದವು.
ದುಬಾರಿ ಬೆಲೆಗೆ ಮೆಡಿಕಲ್ ಮತ್ತು ಇಂಜಿನಿಯರಿಂಗ್ ಸೀಟುಗಳ ಮಾರಾಟದಿಂದ ಕಪ್ಪು ಹಣದ ಸಾಮ್ರಾಜ್ಯವನ್ನು ನಿರ್ಮಿಸಿಕೊಂಡಿದ್ದವರಿಗೆ ಆಘಾತವಾಯಿತು.ಶಿಕ್ಷಣ ಸಂಸ್ಥೆಗಳ ವಿವೇಚನಾ ಕೋಟಾ ರದ್ದಾಗಿದ್ದರಿಂದ ಕೆಲವು ರಾಜಕಾರಣಿಗಳು ಕಂಗಾಲಾದರು.ಶಿಕ್ಷಣ,ಧಾರ್ಮಿಕ ಮತ್ತು ರಾಜಕೀಯ ಕ್ಷೇತ್ರಗಳ ಪಟ್ಟಭದ್ರರ ನಡುವೆ ಅನೌಪಚಾರಿಕವಾದ ಅಪವಿತ್ರ ಮೈತ್ರಿ ಏರ್ಪಟ್ಟಿತು.ಮಾಧ್ಯಮ ಮತ್ತು ಸಾಹಿತ್ಯ ಕ್ಷೇತ್ರದ ಸ್ಥಾಪಿತ ಹಿತಾಸಕ್ತಿಗಳೂ ಕೈ ಜೋಡಿಸಿದವು.ಎಲ್ಲರೂ ಮೊಯ್ಲಿಯವರ ವಿರುದ್ಧ ಸಮರ ಸಾರಿದರು.ಚಿತ್ರದುರ್ಗ,ದಾವಣಗೆರೆ ಮುಂತಾದ ಕಡೆಗಳಲ್ಲಿ ಪ್ರತಿಭಟನಾ ಮೆರವಣಿಗೆಗಳು ನಡೆದವು. ಜಗದ್ಗುರುವೊಬ್ಬರು”ಸುಟ್ಟು ಬೂದಿಯಾಗು”ಎಂದು ಮುಖ್ಯಮಂತ್ರಿಯವರಿಗೆ ಶಾಪ ಹಾಕಿದರು.ಬೆಂಗಳೂರಿನ ತರಳಬಾಳು ಕೇಂದ್ರದಲ್ಲಿ ನೂರಾರು ಸ್ವಾಮೀಜಿಗಳು ಪ್ರತಿಭಟನಾ ಸಮಾವೇಶ ನಡೆಸಿ ಮುಖ್ಯಮಂತ್ರಿಯವರಿಗೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿದರು.
ರಾಜಕಾರಣದ ಫ್ಯೂಡಲ್ ಶಕ್ತಿಗಳು “ಕೈ “ಜೋಡಿಸಿದ್ದರಿಂದ ಮುಖ್ಯಮಂತ್ರಿಯವರ ವಿರುದ್ಧ ಭಿನ್ನಮತೀಯ ಚಟುವಟಿಕೆ ತಾರಕಕ್ಕೆ ಏರಿತು.ಒಂದು ಹಂತದಲ್ಲಿ ಭಿನ್ನಮತೀಯ ಶಾಸಕರು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಮುಖ್ಯಮಂತ್ರಿಯವರ ವಿರುದ್ದ ತೀವ್ರವಾಗಿ ಪ್ರತಿಭಟನೆ ನಡೆಸಿ ಗದ್ದಲ ಎಬ್ಬಿಸಿದರು.ಸಭೆಯನ್ನು ಅರ್ಧಕ್ಕೆ ಬರಖಾಸ್ತುಗೊಳಿಸಿದ ವೀರಪ್ಪ ಮೊಯ್ಲಿಯವರು ವಿಧಾನಸಭೆಗೆ ಧಾವಿಸಿದರು.ಅವರನ್ನು ಹಿಂಬಾಲಿಸಿದ 50 ಕ್ಕೂ ಹೆಚ್ಚು ಶಾಸಕರು ವಿಧಾನಸಭೆಯಲ್ಲಿ ಮುಖ್ಯಮಂತ್ರಿಯವರ ವಿರುದ್ಧ ಧಿಕ್ಕಾರದ ಘೋಷಣೆಗಳೊಂದಿಗೆ ಧರಣಿ ನಡೆಸಿದಾಗ ಕೋಲಾಹಲವೇ ಆಯಿತು.ಅದು,ಒಬ್ಬ ಮುಖ್ಯಮಂತ್ರಿ ವಿರುದ್ಧ ಆಡಳಿತ ಪಕ್ಷದ ಶಾಸಕರೇ ಪ್ರತಿಭಟನೆ ನಡೆಸಿದ ಅತಿರೇಕದ ರಾಜಕೀಯ ನಡವಳಿಕೆಯಾಗಿತ್ತು.ಈ ಗೌಜು, ಗದ್ದಲದಲ್ಲಿ ಲಕ್ಷಾಂತರ ಮಕ್ಕಳಿಗೆ ದಾರಿದೀಪವಾಗಿದ್ದ ಮೊಯ್ಲಿಯವರ ಸಾಧನೆ ಮುಳುಗಿ ಹೋಯಿತು.ಮೊಯ್ಲಿಯವರ ವಿರುದ್ದ ಅಸಹನೆ ಇಷ್ಟಕ್ಕೇ ನಿಲ್ಲಲಿಲ್ಲ.ಅವರು ಕೇಂದ್ರ ಸಾಹಿತ್ಯ ಅಕಾಡೆಮಿ ಮತ್ತು ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತರು.ಆದರೆ ಸಾಹಿತ್ಯ ಕ್ಷೇತ್ರದ ಅವರ ಸಾಧನೆಯನ್ನು ಹೀಯಾಳಿಸುವ ಪ್ರಯತ್ನವೂ ನಡೆಯಿತು.
ಲಕ್ಷಾಂತರ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಿದ ಮಾಹಿತಿ ತಂತ್ರಜ್ಞಾನ(IT)ಕ್ರಾಂತಿಯ ಯಶಸ್ಸಿನಲ್ಲಿ ಮೊಯ್ಲಿಯವರ ಪಾತ್ರವೂ ಇದೆ.ಅವರು 70 ರ ದಶಕದಲ್ಲಿ ದೇವರಾಜ ಅರಸು ಸಂಪುಟದಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಸಚಿವರಾಗಿದ್ದಾಗ ಅಮೇರಿಕಾದಲ್ಲಿ ಐ. ಟಿ.ಕಂಪನಿಗಳ ಪ್ರಮುಖ ತಾಣ ಸಿಲಿಕಾನ್ ವ್ಯಾಲಿಗೆ ಭೇಟಿ ನೀಡಿದ್ದರು.ಅವರು ಕರ್ನಾಟಕದಲ್ಲಿಯೂ ಸಿಲಿಕಾನ್ ವ್ಯಾಲಿಯ ಪ್ರತಿರೂಪವನ್ನು ನಿರ್ಮಾಣ ಮಾಡುವ ಸಂಕಲ್ಪವನ್ನು ಮಾಡಿದರು.ಇಲೆಕ್ಟ್ರಾನಿಕ್ ಸಿಟಿ ನಿರ್ಮಾಣಕ್ಕಾಗಿ ಆನೇಕಲ್ ಮತ್ತು ಜಿಗಣಿ ಸುತ್ತ ಮುತ್ತ ಭೂ ಸ್ವಾಧೀನಕ್ಕೆ ಚಾಲನೆ ನೀಡಿದರು.ಕೇವಲ 10 ಸಾವಿರ ರೂಪಾಯಿ ಹೊಂದಿದ್ದ ಎನ್. ಆರ್ .ನಾರಾಯಣಮೂರ್ತಿಯರಿಗೆ, ಇನ್ಫೋಸಿಸ್ ಸ್ಥಾಪಿಸಲು,ಭೂಮಿ,ಕೆ.ಎಸ್.ಎಫ್ .ಸಿ ಸಾಲ ಮತ್ತು ಕೆನರಾ ಬ್ಯಾಂಕಿನಿಂದ ವರ್ಕಿಂಗ್ ಕ್ಯಾಪಿಟಲ್ ವ್ಯವಸ್ಥೆ ಮಾಡಿಸಿದರು.ಹೈದರಾಬಾದಿಗೆ ಹೊರಟಿದ್ದ ಅಜೀಮ್ ಪ್ರೇಮ್ ಜಿ ಅವರಿಗೆ ತೆರಿಗೆ ವಿನಾಯ್ತಿ ಮತ್ತಿತರ ಸವಲತ್ತು ನೀಡುವ ಮೂಲಕ ವಿಪ್ರೋ ಕಂಪನಿಯನ್ನು ಬೆಂಗಳೂರಿನಲ್ಲೇ ಉಳಿಸಿಕೊಂಡರು.ಮೊಯ್ಲಿಯವರು ಮುಖ್ಯಮಂತ್ರಿಯಾದಾಗ ವೈಟ್ ಫೀಲ್ಡ್ ನಲ್ಲಿ ಸಿಂಗಾಪುರ ಸರ್ಕಾರದ ಸಹಯೋಗದೊಂದಿಗೆ ಟೆಕ್ನಾಲಜಿ ಪಾರ್ಕ್(International Tech Park Bangalore) ಸ್ಥಾಪನೆಗೆ ಚಾಲನೆ ನೀಡಿದರು.
ಸಿ.ಇ.ಟಿ ಜಾರಿಗೆ ಬಂದು 28 ವರ್ಷಗಳಾಗಿವೆ.ಐ.ಟಿ.ಕ್ರಾಂತಿಯಿಂದಾಗಿ ಲಕ್ಷಾಂತರ ಯುವ ಜನರು ಉನ್ನತ ಹುದ್ದೆಗಳಲ್ಲಿದ್ದಾರೆ.ಐ ಟಿ ಉದ್ಯೋಗಿಗಳು ಕುಗ್ರಾಮಗಳಿಗೆ ಐಷಾರಾಮಿ ಕಾರುಗಳಲ್ಲಿ ಬರುವ ಅಥವಾ ಅವರನ್ನು ದೇಶ ವಿದೇಶಗಳಿಗೆ, ಒಂದು ಕಾಲದಲ್ಲಿ ಕಡು ಬಡವರಾಗಿದ್ದ, ಅವರ ತಂದೆ ತಾಯಿಯರು ವಿಮಾನ ನಿಲ್ದಾಣಗಳಲ್ಲಿ ಬೀಳ್ಕೊಡುವ ದೃಶ್ಯಗಳು ಸರ್ವೇ ಸಾಮಾನ್ಯವಾಗಿವೆ.ಶ್ರೇಣೀಕೃತ ಸಮಾಜದಲ್ಲಿ ಶೋಷಿತರು ಮತ್ತು ದಮನಿತರು ಕೂಡ ಸರೀಕರ ಎದುರು ತಲೆ ಎತ್ತಿ ನಡೆಯುವಂತಾಗಿದೆ.ಸಿ.ಇ.ಟಿ ವ್ಯವಸ್ಥೆ ಸಮಾಜದ ಏರುಪೇರುಗಳನ್ನು ಸಮತಟ್ಟು ಮಾಡುವ ಗ್ರೇಟ್ ಲೆವೆಲ್ಲರ್(great leveller)ಕೂಡಾ ಹೌದು.ಲಕ್ಷಾಂತರ ವಿದ್ಯಾವಂತಯುವಕರ ನಿರುದ್ಯೋಗ ದಿಂದಾಗಿ ಸಮಾಜದಲ್ಲಿ ನಿರ್ಮಾಣವಾಗಬಹುದಾಗಿದ್ದ ಕ್ಷೋಭೆಯನ್ನು ಕೂಡಾ ಐ.ಟಿ.ಕ್ರಾಂತಿ ತಪ್ಪಿಸಿದೆ.ಜತೆಗೆ ಸರ್ಕಾರೀ ಕೆಲಸಕ್ಕೆ ಸೇರಿ ಅವರು ಭ್ರಷ್ಟ ವ್ಯವಸ್ಥೆಯ ಭಾಗವಾಗುವುದನ್ನೂ ತಪ್ಪಿಸಿದೆ.ಒಟ್ಟಿನಲ್ಲಿ ಐ.ಟಿ.ಕ್ರಾಂತಿ ಹೊಸ ತಲೆಮಾರಿನ ಯುವಕರ ಬದುಕಿನಲ್ಲಿ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಪರಿವರ್ತನೆಯನ್ನು ತಂದಿದೆ.ಉನ್ನತ ತಂತ್ರಜ್ಞಾನ ಕ್ಷೇತ್ರವನ್ನು ಬಳಸಿಕೊಂಡು ಸಮಾಜ ಸುಧಾರಣೆ ಸಾಧ್ಯ ಎಂಬುದನ್ನು ಮೊಯ್ಲಿಯವರು ತೋರಿಸಿದ್ದಾರೆ.ಐ.ಟಿ.ಕ್ರಾಂತಿಯ ರೂವಾರಿಗಳು ಯಾರು ಎಂದು ಗೂಗಲ್ ನಲ್ಲಿ ಹುಡುಕಿದರೆ ಎಫ್.ಸಿ.ಕೊಹ್ಲಿ,ಸ್ಯಾಮ್ ಪಿತ್ರೋಡ ,ರಾಜೀವ ಗಾಂಧಿ ,ಎನ್.ಆರ್ .ನಾರಾಯಣಮೂರ್ತಿ,ಅಜೀಮ್ ಪ್ರೇಮ್ ಜಿ ಹೆಸರುಗಳು ಬರುತ್ತವೆಯೇ ಹೊರತು, ಅದೇ ಸಾಲಿನಲ್ಲಿ ನಿಲ್ಲಬಹುದಾದ,ಮೊಯ್ಲಿಯವರ ಹೆಸರು ಕಾಣಿಸುವುದಿಲ್ಲ .ಒಂದು ರೀತಿಯಲ್ಲಿ ಅವರು ಪ್ರಸಂಶೆಗಳನ್ನೇ ಕಾಣದ ಅನ್ ಸಂಗ್ (unsung)ಹೀರೋ.ಮೊಯ್ಲಿಯವರು ಇದೇ ಜನವರಿ 12 ರಂದು 82 ನೇ ಜನ್ಮ ದಿನವನ್ನು ಆಚರಿಸುತ್ತಿದ್ದಾರೆ.ಈ ಸಂದರ್ಭದಲ್ಲಿಯಾದರೂ ಲಕ್ಷಾಂತರ ಬಡಮಕ್ಕಳಿಗೆ ಅವರು ಮಾಡಿರುವ ಸಹಾಯವನ್ನು ನೆನೆಯೋಣ.