ಬೆಂಗಳೂರಿನ ಜನವರಿ 7;   ಬಿಜೆಪಿ ನೇತೃತ್ವದ ಕರ್ನಾಟಕ ರಾಜ್ಯ ಸರಕಾರವು ಸಂಪುಟ ಸಭೆಯಲ್ಲಿ ಸುಗ್ರೀವಾಜ್ಞೆ ಮೂಲಕ ತರಾತುರಿಯಲ್ಲಿ ಜಾರಿ ಮಾಡಲು ಹೊರಟಿರುವ ಮತಾಂತರ ನಿಷೇಧ ವಿಧೇಯಕವು ಸಂವಿಧಾನ ವಿರೋಧಿ, ಸರ್ವಾಧಿಕಾರಿ ಮತ್ತು ಅಪ್ರಜಾಸತ್ತಾತ್ಮಕ ನಿಲುವನ್ನು ಹೊಂದಿದ್ದು, ಧರ್ಮದ ಹೆಸರಲ್ಲಿ ಮುಗ್ದ ಅಮಾಯಕರನ್ನು ಹಿಂಸಿಸುವ ಮತ್ತು ಅವರ ಮೇಲಿನ ದೈಹಿಕ ಹಾಗು ಮಾನಸಿಕ ದಾಳಿಗಳಿಗೆ ಪ್ರಚೋದಿಸುವ ಭಯೋತ್ಪಾದಕ ಕೃತ್ಯವಾಗಿದೆ. ಈ ಕಾಯ್ದೆ ನಮ್ಮ ಸಂವಿಧಾನದ ಮೂಲ ಆಶಯಕ್ಕೆ ವಿರುದ್ಧವಾದ ಕಾಯಿದೆಯಾಗಿದೆ. ಎಂದು ಎಸ್ ಡಿ ಪಿ ಐ ಕರ್ನಾಟಕ ರಾಜ್ಯಧ್ಯಕ್ಷ ಅಬ್ದುಲ್ ಮಜೀದ್ ಪತ್ರಿಕಾಗೋಷ್ಠಿ ಗೋಷ್ಠಿ ಯಲ್ಲಿ ತಿಳಿಸಿದ್ದಾರೆ.

ಈ ವಿಧೇಯಕವು ಸಂವಿಧಾನದ 25 ರಿಂದ 28ರವರೆಗಿನ ಪರಿಚ್ಛೇದಗಳು ಸೂಚಿಸುತ್ತಿರುವ ವ್ಯಕ್ತಿಯ ಧಾರ್ಮಿಕ ಸ್ವಾತಂತ್ರ್ಯದ ಸ್ಪಷ್ಟ ಉಲ್ಲಂಘನೆಯಾಗಿದೆ. ಮಾತ್ರವಲ್ಲ ಇದು ಧಾರ್ಮಿಕ ಅಲ್ಪಸಂಖ್ಯಾತ ವರ್ಗದವರನ್ನು ಪ್ರತ್ಯಕ್ಷ ಮತ್ತು ಪರೋಕ್ಷವಾಗಿಯೂ, ಆತಂಕ ಹಾಗು ಭಯದ ವಾತಾವರಣದಲ್ಲಿ ಸಿಕ್ಕಿಸುವ ಶಡ್ಯಂತ್ರವಾಗಿದೆ.

ಹುಬ್ಬಳ್ಳಿ, ಕೊಡಗು, ಹಾಸನ, ಮಂಡ್ಯ ಹಾಗು ರಾಜ್ಯದ ಹಲವು ಕಡೆಗಳಲ್ಲಿ ಕ್ರೈಸ್ತ ಪ್ರಾರ್ಥನಾ ಮಂದಿರಕ್ಕೆ ಅಡ್ಡಿ ಸೇರಿದಂತೆ 2021ರ ಅವಧಿಯಲ್ಲಿ ಇಡೀ ರಾಜ್ಯದಲ್ಲಿ ಸುಮಾರು 39 ಕ್ರೈಸ್ತ ಪ್ರಾರ್ಥನಾ ಮಂದಿರಗಳ ಮೇಲೆ ದಾಳಿಗಳು ನಡೆದಿದ್ದು, ಈಗ ಜಾರಿಗೊಳಿಸಲು ಶಡ್ಯಂತ್ರ ರೂಪಿಸಿರುವ ಮತಾಂತರ ನಿಷೇಧ ವಿಧೇಯಕವು ಇಂತಹದ್ದೇ ಮತ್ತು ಇದಕ್ಕಿಂತಲೂ ಕ್ರೂರವಾದ ದಾಳಿಗಳಿಗೆ ಇನ್ನಷ್ಟು ಪುಷ್ಠಿ ನೀಡಲು ಕಾರಣವಾಗುತ್ತದೆ. ಅಲ್ಲದೇ ಇಂತಹ ದಾಳಿಗಳಿಗೆ ಹಿಂದುತ್ವದ ಕೋಮುವಾದಿ ಗೂಂಡಾಗಳು ಕಾರಣರಾದರೂ, ಇಲ್ಲಿನ ಭ್ರಷ್ಟಗೊಂಡಿರುವ ಪೋಲಿಸ್ ವ್ಯವಸ್ಥೆ ಮಾತ್ರ FIRಗಳನ್ನು ಕ್ರೈಸ್ತ ಬಾಂಧವರ ಮೇಲೆ ದಾಖಲು ಮಾಡುತ್ತಿವೆ. ಕಾನೂನಿನ ಇಕ್ಕಳಗಳಿಗೆ ಮುಸಲ್ಮಾನರನ್ನೂ ಸಿಕ್ಕಿಸಲಾಗುತ್ತಿದೆ. 2021ರಲ್ಲಿ ಮತಾಂತರ ಮಾಡಿರುವ ಆರೋಪದಡಿಯಲ್ಲಿ 13 ಕ್ರೈಸ್ತರ ಮೇಲೆ ಸುಳ್ಳು ಕೇಸುಗಳನ್ನು ದಾಖಲಿಸಲಾಗಿದೆ. ಎಂದು ಪೀಪಲ್ಸ್‌ ಯೂನಿಯನ್‌ ಫಾರ್‌ ಸಿವಿಲ್‌ ಲಿಬರ್ಟೀಸ್‌ ಎಂಬ ಸರ್ಕಾರೇತರ ಸಂಸ್ಥೆಯು ಅಧ್ಯಯನ ನಡೆಸಿದೆ.

ದಲಿತರನ್ನು ಮತಾಂತರ ಮಾಡಿದರೆ 3ರಿಂದ 10 ವರ್ಷ ಕಠಿಣ ಶಿಕ್ಷೆ ಘೋಷಿಸಿರುವ ಸರಕಾರವು ದಲಿತರ ಏಳಿಗೆಗೆ ಯಾವ ಕಾರ್ಯಯೋಜನೆಗಳನ್ನು ಮಾಡಿದೆ ಎಂಬುವುದನ್ನು ನೋಡಿದರೆ ಸರಕಾರದ ಪ್ರಯತ್ನ ಶೂನ್ಯವಾಗಿದೆ. ದಲಿತರ ಮೇಲೆ ನಿರಂತರ ದಾಳಿಗಳು, ಜಾತಿನಿಂದನೆ, ಬಹಿಷ್ಕಾರಗಳು ನಡೆಯುತ್ತಿದ್ದರೂ ಇದನ್ನು ತಡೆಯುವ ಗೋಜಿಗೆ ಹೋಗದ ಈ ಭಯೋತ್ಪಾದಕ ಸರ್ಕಾರ ಕೇವಲ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು, ಸಂವಿಧಾನ ವಿರೋಧಿ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತರಲು ಹೊರಟಿದೆ.

ಈ ಕಾಯಿದೆಯ ಮೂಲಕ ಬಿಜೆಪಿಯು ತನ್ನ ಹಿಂದುತ್ವ ಅಜೆಂಡಾವನನ್ನು ಕಾರ್ಯಗತಗೊಳಿಸಲು ಪ್ರಯತ್ನಿಸಿದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ತಮ್ಮ ಅಲ್ಪಸಂಖ್ಯಾತ ಮತ ಬ್ಯಾಂಕ್ ಅನ್ನು ಹಿಡಿದಿಟ್ಟುಕೊಳ್ಳಲು ಮಾತ್ರ ಇದರ ವಿರುದ್ಧ ನಾಮಕಾವಸ್ಥೆ ವಾಗ್ವಾದ ನಡೆಸುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.

ಸರಕಾರವು ವಿಧಾನಮಂಡಲ ಅಧಿವೇಶನದಲ್ಲಿ ರಾಜ್ಯದಲ್ಲಿ ಅತೀವ್ರಷ್ಟಿ, ಬೆಲೆ ಏರಿಕೆ, ಕೃಷಿ ಬಿಕ್ಕಟ್ಟು, ಕೋವಿಡ್ ಸಂಕಷ್ಟದಂತಹ ಹಲವು ಸಮಸ್ಯೆಗಳಿಗೆ ಪರಿಹಾರ ನೀಡುವುದರ ಸಕರಾತ್ಮಕ ಚರ್ಚೆ ಮಾಡುವುದರ ಬದಲು ಜನ ಸಾಮಾನ್ಯರ ಬದುಕಿಗೆ ಯಾವ ರೀತಿಯಲ್ಲೂ ಸಂಬಂಧವೇ ಪಡದ ಮತಾಂತರ ನಿಷೇಧ ಮಸೂದೆಯ ಕುರಿತಾದ ಚರ್ಚೆ, ಸುಗ್ರೀವಾಜ್ಞೆಗಳು ಸರಕಾರದ ಭೌದ್ಧಿಕ ದಿವಾಳಿತನಕ್ಕೆ ಮತ್ತು ಅವೈಜ್ಞಾನಿಕ ನಿಲುವುಗಳಿಗೆ ಹಿಡಿದ ಕೈಗನ್ನಡಿಯಾಗಿದೆ