*ಸಂಸದರು, ಹಂತಕರು ಮತ್ತು FINAL SOLUTION*

ಸಂಸದ “ಸಾರಿ ಸೂರ್ಯ” ಮೊನ್ನೆ ಉಡುಪಿ ಮಠದಲ್ಲಿ ಮಾಡಿದ ಒಂದೂವರೆ ಗಂಟೆ ಭಾಷಣದ ಬಗ್ಗೆ ಒಂದು ಪ್ಯಾರಾದ ತಾತ್ಕಾಲಿಕ ಕ್ಷಮೆಯನ್ನು ಕೋರಿದ್ದಾರೆ. ಆದರೆ ಆ ಕ್ಷಮಾಪಣೆಯ ಮೂಲ ಪಶ್ಚತ್ತಾಪವಲ್ಲ . ಬದಲಿಗೆ ಇತರ ಲೆಕ್ಕಾಚಾರಗಳು. ಪ್ರಧಾನವಾಗಿ ಕ್ರಿಶ್ಚಿಯನ್ನರು ಹೆಚ್ಚಾಗಿರುವ ಗೋವಾದಲ್ಲಿ ಚುನಾವಣೆ ಹತ್ತಿರವಿರುವುದು. ಸಾವರ್ಕರ್ ಕಾಲದಿಂದಲೂ ಇವರ ಸಾರಿಗಳಿಗೆ ಇರುವ ಅರ್ಥ ಇಷ್ಟೇ..

“ತಾನು ಉಡುಪಿ ಮಠದಲ್ಲಿ ಮಾಡಿದ ಭಾಷಣದಲ್ಲಿನ  “ಕೆಲವು ಹೇಳಿಕೆಗಳು”,  “ಅನಗತ್ಯ ವಿವಾದ”ಗಳಿಗೆ ಎಡೆಮಾಡಿಕೊಟ್ಟಿರುವುದರಿಂದ ಅವುಗಳನ್ನು ಬೇಷರತ್ ಆಗಿ ಹಿಂತೆಗೆದುಕೊಳ್ಳುವುದಾಗಿ ” ಅವರು ಟ್ವೀಟ್ ಮಾಡಿದ್ದಾರೆ. ಅಂದರೆ ಅವರು ಇಡೀ ಭಾಷಣವನ್ನೇನು ಹಿಂತೆಗೆದುಕೊಂಡಿಲ್ಲ. ಬದಲಿಗೆ ಕೆಲವು  ಹೇಳಿಕೆಗಳನ್ನು ಹಿಂತೆಗೆದುಕೊಂಡಿದ್ದಾರೆ(!?).

ಆದರೆ ಅವು ಯಾವ ಹೇಳಿಕೆಗಳು? ಅವು ವಿವಾದವಾಗಿದ್ದು ಅಗತ್ಯವಾಗಿಯೋ?ಅನಗತ್ಯವಾಗಿಯೋ ?  ಇವುಗಳಿಗೆ ಆ ಕ್ಷಮಾಪಣೆಯಲ್ಲಿ ಯಾವುದೇ ಉತ್ತರವಿಲ್ಲ.

ಏಕೆಂದರೆ ಸಂಸದ ಸೂರ್ಯ ಅವರ ಇಡೀ ಭಾಷಣವೇ ಒಂದು ಹೇಳಿಕೆ. ಹಾಗೂ ಅದು ಮಾಡಿದ್ದು ಒಂದೇ ಒಂದು ಹೇಳಿಕೆ.

” *ಇಂಡಿಯಾ ಅಂದರೆ ಭಾರತ. ಭಾರತ ಅಂದರೆ ಹಿಂದೂದೇಶ. ಆದ್ದರಿಂದ  ಈ ದೇಶದಲ್ಲಿರುವ ಹಿಂದೂಯೇತರರು ಈ ದೇಶದಲ್ಲಿ ಬದುಕಬೇಕೆಂದರೆ ಹಿಂದುಗಳಾಗಿ ಬದುಕಬೇಕು ಅಥವಾ ದೇಶಬಿಟ್ಟು ಹೋಗಬೇಕು. ಹಿಂದೂಯೇತರ ಚಿಂತನೆಗಳನ್ನು ದೇಶದ್ರೋಹಿ ಎಂದು ಪರಿಗಣಿಸಿ ಬಹಿಷ್ಕರಿಸಬೇಕು.*”

*ಬಿಡಿ ಹೇಳಿಕೆಯಲ್ಲ- ಸಾವರ್ಕರ್ ಕೊಟ್ಟ ಪೂರ್ಣ ಚಿತ್ರ*

ಇದನ್ನೇ ಅವರು ವಿವರವಾಗಿ ಹಲವು ರೀತಿಗಳಲ್ಲಿ ಒಂದೂವರೆ ಗಂಟೆ ಮಾತನಾಡಿದ್ದಾರೆ.

ಸೂರ್ಯ ಅವರ ಇಡೀ ಭಾಷಣ ಆರೆಸ್ಸೆಸ್- ಸಾವರ್ಕರ್ ಕನಸಿದ  ಹಿಂದೂ ರಾಷ್ಟ್ರದ ಫೋಟೋ ಇಮೇಜ್.

ಫೋಟೋ ಇಮೇಜುಗಳನ್ನು ಟೆಕ್ಸ್ಟ್ ಫೈಲುಗಳ ತರಹ ಆಯ್ದ ಭಾಗಗಳನ್ನು ಡಿಲೀಟ್ ಮಾಡಲು ಬರುವುದಿಲ್ಲ.  ಅದನ್ನು ಇಡಿಯಾಗಿ ಮಾತ್ರ ಹಿಂಪಡೆಯಲು ಸಾಧ್ಯ . ಸಂಸದ ವೈಪರ್ ಸೂರ್ಯ ಆ ಫೋಟೋ ಇಮೇಜನ್ನೇನೂ  ಹಿಂತೆಗೆದುಕೊಂಡಿಲ್ಲ.

ಹೀಗಾಗಿ ಈ ವೈಪರ್ (ವಿಷಸರ್ಪ )  ಸೂರ್ಯ (ಮುಗ್ಧ ಮಕ್ಕಳು ಹಾಕಿಕೊಳ್ಳುವ ಡೈಪರ್ ಅಲ್ಲ ) ಮಾಡಿದ ಈ ಭಾಷಣ ಹರಿದ್ವಾರದಲ್ಲಿ “ಹಿಂದೂ ರಕ್ಷಣಾ ಸಮಾವೇಶದ ” ಹೆಸರಿನಲ್ಲಿ ಸಾಧು ಸಂತರ ಮುಖವಾಡದಲ್ಲಿದ್ದ ಸಂಘಿ ಹಂತಕರು “ಮುಸ್ಲಿಮರ ಕಗ್ಗೊಲೆ ಮಾಡಬೇಕು ” ಎಂದು ಕೊಟ್ಟ ಕರೆಯ ಮುಂದುವರಿಕೆ.

ಅದು ಕಾಶಿಯಲ್ಲಿ ಪ್ರಧಾನಿ ಹಿಂದೂ ಸಂತನ ದಿರಿಸಿನಲ್ಲಿ “ಔರಂಗಜೇಬ್ ಹುಟ್ಟಿದಾಗಲೆಲ್ಲಾ ಒಬ್ಬ ಶಿವಾಜಿ ಹುಟ್ಟುತ್ತಾನೆ” ಎಂದು ಮಾಡಿದ ಭಾಷಣದ ಮುಂದುವರಿಕೆ .

ಆರೆಸ್ಸೆಸ್ ನ ಸರಸಂಘಚಾಲಕ ಭಾಗವತ್ “ಪ್ರತಿಯೊಬ್ಬ ಹಿಂದುವೂ ಒಂದಷ್ಟು ಮುಸ್ಲಿಮರನ್ನು ಮತ್ತು ಕ್ರಿಶ್ಚಿಯನ್ನರನ್ನು ಘರ್ ವಾಪ್ಸಿ ಮಾಡಿಸಿ ಹಿಂದೂ ಧರ್ಮಕ್ಕೆ ಕರೆತರಬೇಕು” ಎಂದು ಕೊಟ್ಟ ಕರೆಯ ಮುಂದುವರಿಕೆ .

ಕೆಲವು ಆರೆಸ್ಸೆಸ್ ಪಾತ್ರಧಾರಿಗಳು ಅದನ್ನು ಹರಿದ್ವಾರದ ಸಾಧು ಸಂತರ ರೀತಿ ಹಸಿಹಸಿಯಾಗಿ ಹಂತಕ ಭಾಷೆಯಲ್ಲಿ ಮಾತನಾಡುತ್ತಾರೆ. ಪ್ರಧಾನಿ ಮೋದಿ ತನ್ನ ವರ್ತನೆ, ಮೌನ, ಶಾಸನಗಳ ಮೂಲಕ ಅದನ್ನೇ ಮಾತನಾಡುತ್ತಾರೆ. ಸೂರ್ಯನಂತವರು ಅದೇ ಅನಾಗರೀಕ ಅಜೇಂಡಾವನ್ನೇ ಸಂಸ್ಕೃತ ಮತ್ತು ಇಂಗ್ಲೀಷಗಳನ್ನು ಬೆರೆಸಿ ಮಾತನಾಡುತ್ತಾರೆ. ಅಷ್ಟೇ.

ಆದ್ದರಿಂದ ಇವು  ಬಾಯಿತಪ್ಪಿ ಆಡಿದ ಮಾತುಗಳಲ್ಲ. ಇದು ಬರಲಿರುವ ದಿನಗಳಲ್ಲಿ ಮೋದಿ-ಆರೆಸ್ಸೆಸ್-ಫ್ಯಾಸಿಸ್ಟ್ ಕೂಟ ಭಾರತದ ಮೇಲೆ ಮಾಡಲಿರುವ ನರಹಂತಕ ದಾಳಿಗಳ ನೀಲನಕ್ಷೆ .

*ಸಾಧು ಸಂತರೋ? ಪ್ರಭುತ್ವ ಪ್ರಾಯೋಜಿತ ಹಂತಕರೋ?*

ಉದಾಹರಣೆಗೆ ಹರಿದ್ವಾರದಲ್ಲಿ ಸಾಧುವೇಷದ ಹಂತಕರು ಮಾಡಿದ ಭಾಷಣಗಳನ್ನೇ ಗಮನಿಸಿ .

” ಇಸ್ಲಾಮೀಯ ಭಾರತದಲ್ಲಿ ಸನಾತನ ಹಿಂದುಗಳ ಭವಿಷ್ಯ: ಸಮಸ್ಯೆ ಮತ್ತು ಸವಾಲುಗಳು” ಎಂಬ ಆ ಸಮಾವೇಶದ ವಿಷಯವೇ  ಪ್ರಚೋದನಾತ್ಮಕವಾಗಿತ್ತು. ಆದರೂ ಉತ್ತರ ಖಂಡ ಬಿಜೆಪಿ ಸರ್ಕಾರ ಅದಕ್ಕೆ ಕೋವಿಡ್ ನಡುವೆಯೂ ಡಿಸೇಂಬರ್ 17-19 ರ ತನಕ ಮೂರುದಿನಗಳ  ಸಮಾವೇಶ ಮಾಡಲು ಎಲ್ಲಾ ಸಹಕಾರವನ್ನು ನೀಡಿತು.

ಸಭೆಯ ಆಯೋಜಕರಲ್ಲಿ ಒಬ್ಬನಾಗಿರುವ ಯತಿ ನರಸಿಂಗಾನಂದ 2020 ರ ದೆಹಲಿ ಹತ್ಯಾಕಾಂಡಕ್ಕೆ ಸಕಲ ತರಬೇತಿ, ಸಿದ್ಧತೆಗಳನ್ನು ಮಾಡಿಕೊಟ್ಟಿದ್ದ ಪ್ರಮುಖ ಆರೋಪಿ. ಈತನ ಎಲ್ಲಾ ನರಹಂತಕ ಯೋಜನೆಗಳಿಗೂ ಬೆಂಬಲ ಕೊಟ್ಟವರಲ್ಲಿ  ಹಾಗೂ ದೆಹಲಿ ಗಲಭೆಗಳ ಪ್ರಾಯೋಜಕರಾಗಿದ್ದವರಲ್ಲಿ ಹಲವಾರು  ಈಗ ಬಿಜೆಪಿ ಸಂಸದರಾಗಿದ್ದಾರೆ. ಮೋದಿ ಕ್ಯಾಬಿನೆಟ್ಟಿನಲ್ಲಿ ಮಂತ್ರಿಗಳಾಗಿದ್ದಾರೆ.

ಹೀಗಾಗಿ ಇವರು ಹಿಂದುತ್ವ ಪರಿವಾರದ ಅಂಚಿನ ಜನಗಳಲ್ಲ. ಅಂಚು – ಕೇಂದ್ರ ಎರಡೂ ಒಟ್ಟಿಗೆ ಸೇರಿ ಯೋಜಿಸಿ ಹೆಣೆಯುತ್ತಿರುವ ಪ್ರಭುತ್ವ ಬೆಂಬಲಿತ  ದಾಳಿಗಳಿವು.

ಆ ಸಭೆಯ ಮತ್ತೊಬ್ಬ ಪ್ರಮುಖ ಭಾಷಣಕಾರರಲ್ಲಿ ಒಬ್ಬನಾಗಿದ್ದ ಸ್ವಾಮಿ ಪ್ರಬೋಧಾನಂದ ಗಿರಿ ಎಂಬುವರು ಮಯಾನ್ಮಾರ್  ನಡೆಯುತ್ತಿರುವಂತೆ ಭಾರತದ ರಾಜಕಾರಣಿಗಳು, ಪೊಲೀಸರು, ಮಿಲ್ಟ್ರಿ, ಸಾಧು ಸಂತರು ಎಲ್ಲರೂ ಒಂದಾಗಿ ಮುಸ್ಲಿಮರ ಮೇಲೆ ದಾಳಿ ಮಾಡಬೇಕು” ಎಂದು ಕರೆಕೊಟ್ಟರು.

ಈತನ “ಪಾದಾರವಿಂದ”ಗಳಿಗೆ ಉತ್ತರಾಖಂಡದ ಮುಖ್ಯಮಂತ್ರಿ ತಲೆಬಾಗುತ್ತಿರುವುದು ಹಾಗೂ ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥನ ಜೊತೆ ಸ್ನೇಹಪೂರ್ವಕವಾಗಿ ತೆಗೆಸಿಕೊಂಡಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

ಅದೇ ಸಮಾವೇಶದಲ್ಲಿ ಪೂಜಾ ಶಕುನ್  ಪಾಂಡೆ ಅಲಿಯಾಸ್ ಸಾಧ್ವಿ ಅನ್ನಪೂರ್ಣ ಎಂಬ ಹೆಂಗಸು ” ಒಂದು ನೂರು ಜನ ಹಿಂದುಗಳು ಕನಿಷ್ಠ 20 ಲಕ್ಷ ಮುಸ್ಲಿಮರನ್ನುಕೊಲ್ಲಬೇಕು ” ಎಂದು ಕರೆ ಕೊಡುತ್ತಾಳೆ . ಈಕೆಯೇ ಕಳೆದ ವರ್ಷ ಗಾಂಧಿ ಹುತಾತ್ಮರಾದ ದಿನ ಗಾಂಧಿ ಫೋಟೋಗೆ ಗುಂಡಿಟ್ಟು ಗೋಡ್ಸೆಯೇ ಈ ದೇಶದ ನಿಜವಾದ ಪಿತಾಮಹ ಎಂದು ಘೋಷಿಸಿದ್ದಳು.

ಈಕೆ ಬಿಜೆಪಿಯ ನಾಯಕಿ ಉಮಾಭಾರತಿ ಮತ್ತು ಮಧ್ಯಪ್ರದೇಶದ ಬಿಜೆಪಿ ಮುಖ್ಯಮಂತ್ರಿ ಶಿವರಾಜ್ ಚವ್ಹಾಣ್ ರ ಆಪ್ತ ವರ್ಗಕ್ಕೆ ಸೇರಿದವಳು.

ಮತ್ತೊಬ್ಬ “ಸಾಧು” ಸಾಗರ್ ಸಿಂಧುರಾಜ್  ” ಈ ಸಭೆಯಾದ ಮೇಲೆ ನಮ್ಮ ಪ್ರದೇಶಗಳಿಗೆ ತೆರಳಿ ನಾವು ಯಾವ ರೀತಿ ಕೆಲಸ ಮಾಡಬೇಕೆಂದರೆ ಈ ದೇಶದಲ್ಲಿ ಉಳಿಯಬೇಕೆಂದರೆ ಹಿಂದುಗಳಾಗದೆ ಗತ್ಯಂತರವಿಲ್ಲ ” ಎಂಬ ಪರಿಸ್ಥಿತಿಯನ್ನು ನಿರ್ಮಾಣ ಮಾಡಬೇಕು ಎಂದು ಕರೆಕೊಟ್ಟ. ಅಷ್ಟು ಮಾತ್ರವಲ್ಲ. ನಿಮ್ಮ ಬಳಿ 5000 ರೂ. ಮೌಲ್ಯದ ಮೊಬೈಲ್  ಮಾತ್ರವಿದ್ದರೂ ಪರವಾಗಿಲ್ಲ. ಮುಸ್ಲಿಮರ ತಲೆ ತೆಗೆಯಲು ಒಂದು ಲಕ್ಷ ಮೌಲ್ಯದ ಉತ್ತಮ ಗುಣಮಟ್ಟದ ಖಡ್ಗವನ್ನು ಇಟ್ಟುಕೊಳ್ಳಿ  ಎಂದು ಕರೆ ನೀಡಿದ.

ಈತ  ಈಗ ಬರಲಿರುವ ಉತ್ತರ ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಟಿಕೆಟ್ ಆಗಿ ಬೇಡಿಕೆ ಮುಂದಿಟ್ಟಿದ್ದಾನೆ.

ಸಹಜವಾಗಿ ಒಂದು ಭೀಕರ ಹತ್ಯಾಕಾಂಡವನ್ನೇ ನಡೆಸಲು ಕರೆ ನೀಡಿದರೂ ಇವರ ಯಾರಮೇಲೂ ಕೆಲವು ದಿನಗಳ ಹಿಂದಿನವರೆಗೆ ಯಾವ ಕೇಸುಗಳೂ ಆಗಿರಲಿಲ್ಲ. ಈವರೆಗೆ ಯಾರನ್ನು ಬಂಧಿಸಿಯೂ ಇಲ್ಲ.

*ಶಿಷ್ಟ ಭಾಷೆಯಲ್ಲಿ ದುಷ್ಟ ಯೋಜನೆ*

ಇದರ ಮುಂದುವರಿಕೆಯೇ ಸಂಸದ ಸೂರ್ಯನ ಭಾಷಣ.

ಹರಿದ್ವಾರದಲ್ಲಿ ಸಾಧು ವೇಷದ ಹಂತಕರು ಮಾಡಿದ ಸಮಾವೇಶದ  ವಿಷಯ  “ಇಸ್ಲಾಮೀಯ ಭಾರತದಲ್ಲಿ ಸನಾತನ ಹಿಂದುಗಳ ಭವಿಷ್ಯ” ಎಂಬುದಾಗಿದ್ದರೆ , ಉಡುಪಿ ಮಠದಲ್ಲಿ ಈ ಸಂಸದ ಮಾಡಿದ ಭಾಷಣದ ವಸ್ತು “ಹಿಂದೂ  ಅಸ್ಮಿತೆಯ ಪುನರುತ್ಥಾನ -ಸವಾಲುಗಳು” ಎಂಬುದಾಗಿತ್ತು.

ಸಂವಿಧಾನವನ್ನು ಎತ್ತಿ ಹಿಡಿಯುವುದಾಗಿ ಪ್ರಮಾಣ ಮಾಡಿ ಅಧಿಕಾರಕ್ಕೆ ಬಂದಿರುವ ಈ ಸಂಸದ  ಹಿಂದೂ  ಅಸ್ಮಿತೆಯ ಪುನರುತ್ಥಾನಕ್ಕೆ ಇಸ್ಲಾಮ್ ಮತ್ತು ಕ್ರಿಶ್ಚಿಯಾನಿಟಿ ಮಾತ್ರವಲ್ಲ ಸಮಾಜವಾದ ಹಾಗೂ ಸೆಕ್ಯುಲಾರಿಸಂ ಗಳು ದೊಡ್ಡ ಶತ್ರುಗಳು ಎಂದು ಘೋಷಿಸಿದರು.  ಮಾತ್ರವಲ್ಲದೆ ಅದಕ್ಕೆ ಇರುವ ಏಕೈಕ ಹಾಗೂ FINAL SOLUTION ಎಂದರೆ ಭಾರತವನ್ನು ಸಂಪೂರ್ಣವಾಗಿ ಹಿಂದುವೀಕರಿಸುವುದು ಎಂದು ಕರೆನೀಡಿದರು. ಮಾತ್ರವಲ್ಲದೆ ಪ್ರತಿ ಹಿಂದೂ ದೇವಸ್ಥಾನ-ಮಠಗಳು ಪ್ರತಿ ವರ್ಷ ಇಂತಿಷ್ಟು ಸಂಖ್ಯೆಯ ಮುಸ್ಲಿಂ ಮತ್ತು ಕ್ರಶ್ಚಿಯನ್ನರನ್ನು ಹಿಂದುಗಳನ್ನಾಗಿ ಮಾಡುವ ಟಾರ್ಗೆಟ್ ಇಟ್ಟುಕೊಳ್ಳಬೇಕೆಂದು ಕರೆ ನೀಡಿದರು ..

ಸಂಸದ ಸೂರ್ಯನ ಈ ಕರೆ:
– ಹರಿದ್ವಾರದಲ್ಲಿ “ಯಾವ ಹಿಂದುಯೇತರರು ಹಿಂದುವಾಗದೆ ಉಳಿಗಾಲವಿಲ್ಲ ಎನ್ನುವ ವಾತಾವರಣವನ್ನು ನಿರ್ಮಿಸಬೇಕು ” ಎಂದು ಕರೆ ನೀಡಿದ ಸಾಧುಗಳ ಕರೆಯ ಕಾರ್ಯಯೋಜನೆಯೇ ಆಗಿದೆ.
-ಬಿಜೆಪಿ ರಾಜ್ಯಗಳು ತರಾತುರಿಯಲ್ಲಿ ಜಾರಿಗೆ ತರುತ್ತಿರುವ “ಮತಾಂತರ ನಿಷೇಧ ಕಾಯಿದೆಯ ” ನಿಜವಾದ ವ್ಯಾಖ್ಯಾನವಾಗಿದೆ .
-ಎಲ್ಲಕ್ಕಿಂತ ಹೆಚ್ಚಾಗಿ ತೇಜಸ್ವಿ ಹೇಳಿದ   “FINAL SOLUTION” ನ  ನಾಜಿಗಳ ನರಹಂತಕ ಯೋಜನೆಯ ಭಾರತೀಯ ರೂಪವಾಗಲಿದೆ.

” *ಏನಿದು   FINAL SOLUTION”?*

ಈ FINAL SOLUTION ಎಂಬುದು ಜರ್ಮನಿಯ ನಾಜಿಗಳ ಪರಿಭಾಷೆ.

ಜರ್ಮನಿಯ ಎಲ್ಲಾ ಸಮಸ್ಯೆಗಳಿಗೆ ಕಾರಣ ಕಮ್ಯುನಿಸ್ಟರು, ವಿರೋಧಪಕ್ಷಗಳು ಮತ್ತು ಯೆಹೂದಿ ಹಾಗೂ ಇನ್ನಿತರ ಆಯಾ ಜರ್ಮನರಲ್ಲದ ಜನಾಂಗಗಳು ಎಂಬುದು ನಾಜಿಗಳ ಹಂತಕ ಧೋರಣೆಯಾಗಿತ್ತು. ಹೀಗಾಗಿ ಆರ್ಯ ಜರ್ಮನರ ಪುನರುತ್ಥಾನವೊಂದೇ ಜರ್ಮನಿಯ ಸಮಸ್ಯೆಗಳಿಗೆ ಏಕೈಕ ಪರಿಹಾರ ಎಂಬುದು ಹಿಟ್ಲರ್ -ನಾಜಿಗಳ ಹಂಚಿಕೆಯಾಗಿತ್ತು .

ಜರ್ಮನಿಯ ಜನಾಂಗೀಯ  ಶ್ರೇಷ್ಠತೆಯನ್ನು “ಪುನರುತ್ಥಾನ ” ಮಾಡಲು” ಆರ್ಯ ಅಸ್ಮಿತೆಯನ್ನು” ಕಾಪಾಡಿಕೊಳ್ಳಲು ಆರ್ಯ ರಕ್ತದೊಂದಿಗೆ ಬೆರೆತುಕೊಂಡಿರುವ ಆರ್ಯೇತರ ಯೆಹೂದಿ, ಜಿಪ್ಸಿ ಅಲೆಮಾರಿ ಇನ್ನಿತ್ಯಾದಿ ಜನಾಂಗಗಳನ್ನು “ರಾಷ್ಟ್ರವಾಹಿನಿ”ಯಿಂದ ಹೊರದಬ್ಬುವುದು  ಮತ್ತು ಆರ್ಯ ಶ್ರೇಷ್ಠತೆಗೆ ಅಡ್ಡಿಯಾಗಿರುವ ಕಮ್ಯುನಿಸ್ಟ್ , ಕೆಥೋಲಿಕ್, ಇನ್ನಿತರ ಭಿನ್ನಮತೀಯರನ್ನು “ರಾಷ್ಟ್ರ ಜೀವನದಿಂದ ” ಹೊರಗಟ್ಟುವುದು ಅತ್ಯಗತ್ಯ ಎನ್ನುವುದು ನಾಜಿಗಳ “ರಾಷ್ಟ್ರೀಯವಾದಿ ಚಿಂತನೆ “ಯಾಗಿತ್ತು.

ಮೊದಲನೇ ಮಹಾಯುದ್ಧದ ಸೋಲಿನಿಂದ ಕಂಗೆಟ್ಟಿದ್ದ ಜರ್ಮನರ ಆರ್ಥಿಕ, ಸಾಂಸ್ಕೃತಿಕ ಬಿಕ್ಕಟ್ಟುಗಳನ್ನು ಬಳಸಿಕೊಂಡು ಚುನಾವಣೆಗಳ ಮೂಲಕವೇ ಅಧಿಕಾರಕ್ಕೆ  ಮೂಲಕವೇ ಜರ್ಮನಿಯಲ್ಲಿ ಅಧಿಕಾರಕ್ಕೆ ಬಂದ ಹಿಟ್ಲರ್  ಮತ್ತು ನಾಜಿಗಳು  ಜರ್ಮನಿಯ ಜನಾಂಗೀಯ  ಶುದ್ಧತೆಯನ್ನು ಕಾಪಾಡಿಕೊಳ್ಳಲು ಹಂತಹಂತವಾದ ಅನಾಗರೀಕ, ನರಹಂತಕ ಯೋಜನೆಗಳನ್ನು ಪ್ರಾರಂಭಿಸಿದರು.

ಅಧಿಕಾರಕ್ಕೆ ಬಂದ ಕೊಡಲೇ ಮೊದಲು ಕಮ್ಯುನಿಸ್ಟರನ್ನು  ಕಗ್ಗೊಲೆ ಮಾಡುವ  ಮೂಲಕ ಪ್ರಬಲವಾಗಿದ್ದ ಕಮ್ಯುನಿಸ್ಟ್ ವಿರೋಧವನ್ನು ನಿವಾರಿಸಿಕೊಂಡರು…

ನಂತರ ಎಲ್ಲ ವಿರೋಧ ಪಕ್ಷ ಗಳನ್ನು ನಿಷೇಧಿಸಿ ಜರ್ಮನಿಯನ್ನು “ವಿರೋಧಮುಕ್ತಗೊಳಿಸಿದರು.”

1934-38 ರ ನಡುವೆ ಯೆಹೂದಿಗಳಿಗೆ ನಾಗರಿಕ ಸ್ವಾತಂತ್ರ್ಯವನ್ನು, ಉದ್ಯೋಗ ಮತ್ತು ಆಸ್ತಿ ಮಾಡುವ ಹಕ್ಕನ್ನು, ನಂತರ ಮತದಾನದ ಹಕ್ಕನ್ನು ಕಿತ್ತುಕೊಂಡರು…

1940ರಲ್ಲಿ ಅಷ್ಟೂ ಯೆಹೂದಿಗಳನ್ನು ಮಡಗಾಸ್ಕರ್ ದ್ವೀಪಕ್ಕೆ ಓಡಿಸುವ ಯೋಜನೆಯನ್ನು ಮಾಡಿದ್ದರು…

ಅಂತಿಮವಾಗಿ ಜಗತ್ತಿನಲ್ಲಿ ಜರ್ಮನ್  ಜನಾಂಗೀಯ ಶ್ರೇಷ್ಠತೆಗೆ ಮತ್ತು ನಾಜಿ ಚಿಂತನೆಗೆ ಅಡ್ಡಿಯಿದ್ದ ಎಲ್ಲ ಯೆಹೂದಿಗಳನ್ನು, ಜಿಪ್ಸಿಯಂತ ಅಲೆಮಾರಿಗಳನ್ನೂ, ಕಮ್ಯುನಿಷ್ಟರನ್ನೂ, ಭಿನ್ನಮತೀಯ ಕೆಥೊಲಿಕ, ಪ್ರೊಟೆಸ್ಟೆಂಟುಗಳನ್ನೂ…. ಸಾರಾ ಸಗಟು ಕೊಂದುಹಾಕುವ Final Solution ಜಾರಿ ಮಾಡಿದರು…

1942-45ರ ಮೂರು ವರ್ಷಗಳ ಅವಧಿಯಲ್ಲಿ ನಾಜಿಗಳು 60 ಲಕ್ಷ ಜನರನ್ನು, ಪ್ರಧಾನವಾಗಿ ಯೆಹೂದಿಗಳನ್ನು ಕೊಂದುಹಾಕಿದರು…

ನಾಜಿಗಳ ಈ ಜನಾಂಗೀಯ ಶ್ರೇಷ್ಠತೆಯ ಫ್ಯಾಸಿಶಂನಿಂದಾಗಿ 43 ಲಕ್ಷ ಜರ್ಮನರೂ ಪ್ರಾಣತೆತ್ತರು…

” *ಸಂಘಿಗಳ FINAL SOLUTION”*

ನಾಜಿಗಳಿಂದ ಅಪಾರವಾಗಿ ಪ್ರೇರಿತರಾಗಿರುವ ಸಂಘಪರಿವಾರದವರ ಪ್ರಕಾರ ಭಾರತ ಹಿಂದೂ ದೇಶವಾಗಿದ್ದಾಗ ಮಾತ್ರ ಪುನರುತ್ಥಾನಗೊಳ್ಳಲು ಸಾಧ್ಯ. ಅದಕ್ಕೆ ಅಡ್ಡಿ ಇರುವರು ಮುಸ್ಲಿಮರು, ಕ್ರಿಶ್ಚಿಯನ್ನರು , ಕಮ್ಯುನಿಸ್ಟರು , ಉದಾರವಾದಿ ಚಿಂತನೆಗಳು ..ಹಾಗೂ ಅವರೆಲ್ಲರೂ ಒಟ್ಟಿಗೆ ಬಾಳು ಅವಕಾಶ ಮಾಡಿಕೊಡುತ್ತಿರುವ ಪ್ರಜಾತಂತ್ರ ಮತ್ತು ಸಂವಿಧಾನ.

ಈ ಎಲ್ಲಾ ಅಡ್ಡಿಗಳನ್ನು ನಿವಾರಿಸಿಕೊಳ್ಳಲು ಕಳೆದ ನೂರು ವರ್ಷಗಳಿಂದಲೂ ಸಂಘಿ ಪರಿವಾರ ಹಲವಾರು ಯೋಜನೆಗಳನ್ನು ಹಂತಹಂತವಾಗಿ ಜಾರಿಮಾಡುತ್ತಾ ಬಂದಿದೆ. ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಈ ಯೋಜನೆಗಳು ಈಗ ಪ್ರಭುತ್ವದ ಬಲ  ಮತ್ತು ಶಾಸನ ಶಕ್ತಿಯನ್ನು ಪಡೆದುಕೊಂಡಿದೆ.

ಆದರೇ  ಭಾರತದಲ್ಲಿ 21 ಕೋಟಿ  ಮುಸ್ಲಿಮರು ಮತ್ತು 3 ಕೋಟಿ  ಕ್ರಿಶ್ಚಿಯನ್ನರೂ ಇದ್ದಾರೆ.

ಅಷ್ಟೊಂದು ಜನರನ್ನು ಕೊಲ್ಲಲೂ ಆಗುವುದಿಲ್ಲ. ಬೇರೆ ಯಾವುದೋ ದ್ವೀಪಕ್ಕೆ ಅಟ್ಟ ಲೂ  ಆಗುವುದಿಲ್ಲ. ಹೀಗಾಗಿ ಇರುವ ಏಕೈಕ ದಾರಿ ಎಂದರೆ – FINAL SOLUTION – ಎಂದರೆ ಈ “ಹಿಂದುತ್ವ ಶತ್ರುಗಳನ್ನು”:

– ಸಾಂವಿಧಾನಿಕವಾಗಿ ಮತ್ತು ಹಿಂಸಾತ್ಮಕವಾಗಿ ರಾಷ್ಟ್ರ ವಾಹನಿಯಿಂದ ಹೊರಗಟ್ಟಿ ಎರಡನೇ ದರ್ಜೆ ನಾಗರಿಕರನ್ನಾಗಿ ಮಾಡುವುದು ..

-ಹಿಂದುಯೇತರರು ಘನತೆ ಮತ್ತು ಸ್ವಾಭಿಮಾನದಿಂದ ಬದುಕಲಾಗದ ಪರಿಸ್ಥಿತಿ ಸೃಷ್ಟಿಸುವುದು ..

-ಅದಕ್ಕೆ ಶಾಸನಬಲವನ್ನು ಕೊಟ್ಟು ಹತ್ಯಾಕಾಂಡಗಳನ್ನು ಕೂಡಾ ಮಾನ್ಯಗೊಳಿಸುವುದು .

-ಹಿಂದೂ ಓಟ್ ಬ್ಯಾಂಕ್ ಸೃಷ್ಟಿಸಿ ಯಾವುದೇ ಪಕ್ಷವು ಹಿಂದೂತ್ವ ದ  ಹಂತಕ  ಅಜೇಂಡಾಗಳಿಗೆ ವ್ಯತಿರಿಕ್ತವಾಗಿ  ಚುನಾವಣೆಯನ್ನು ಗೆಲ್ಲುವುದೇ ಕಷ್ಟ ಸಾಧ್ಯಗೊಳಿಸುವುದು .

– ಸಾಂವಿಧಾನಿಕ ಸಂಸ್ಥೆಗಳಲ್ಲಿ ಹಿಂದುತ್ವ  ಅಜೇಂಡಾಗಳಿಗೆ ವಿರುದ್ಧವಿರುವವರನ್ನು ನಿವಾರಿಸಿಕೊಂಡು ಅಲ್ಲಿ ಯೋಜಿತವಾಗಿ ಹಿಂದುತ್ವವಾದಿ ವ್ಯಕ್ತಿಗಳನ್ನು ತುಂಬುತ್ತಾ ಎಲ್ಲಾ ಸಾಂವಿಧಾನಿಕ ಸಂಸ್ಥೆಗಳನ್ನು ವಶಪಡಿಸಿಕೊಂಡು  ಸಾಂವಿಧಾನಿಕವಾಗಿಯೇ ಫ್ಯಾಸಿಸಂ ತರುವುದು ..

-ಹಿಂದುಯೇತರರನ್ನುDisempower (ನಿರ್ಬಲೀಕರಿಸುವುದು ), Disenfranchise (ನಾಗರಿಕತ್ವ ನಿರಾಕರಿಸುವುದು ), ಮಾಡುವುದು..

-ಹಿಂದುಯೇತರನ್ನು ಮತ್ತು ಎಲ್ಲಾ ಸಾರ್ವಜನಿಕ ಮತ್ತು ಖಾಸಗಿ ಜೀವನವನ್ನು ಹಿಂದೂವೀಕರಿಸುವುದು …ಇತ್ಯಾದಿ

-ಈ ಉನ್ಮಾದದಲ್ಲಿ ಜನತೆಯನ್ನು ತೊಡಗಿಸಿ ದೇಶವನ್ನು ನಿರಾತಂಕವಾಗಿ ದೊಡ್ಡ ಕಾರ್ಪೊರೇಟ್ ಧಣಿಗಳು ಲೂಟಿ ಹೊಡೆಯಲು ಬಿಟ್ಟುಕೊಡುವುದು ..

ಇದು ಸಂಘಿಗಳು ಭಾರತದಲ್ಲಿ ಜಾರಿ ಮಾಡುತ್ತಿರುವ FINAL SOLUTION..

CAA-NPR-NRC, ಆರ್ಟಿಕಲ್ 370 ರದ್ದು, ಗೋಹತ್ಯಾ ನಿಷೇಧ ಮತ್ತು ಮತಾಂತರ ನಿಷೇಧ ಕಾಯಿದೆಗಳು, ಹೊಸದಾಗಿ ಜಾರಿಯಾಗುತ್ತಿರುವ ಡಿ-ಲಿಮಿಟೇಷನ್ ಪ್ರಕ್ರಿಯೆಗಳು, ಪ್ರಧಾನಿ ಹುದ್ದೆಯಲ್ಲಿದ್ದರೂ ಸಂವಿಧಾನ ಬಾಹಿರವಾಗಿ  ಹಿಂದೂ ಸಂತನಂತೆ ವರ್ತಿಸುವುದು , ಗುಜರಾತ್-ಮುಜಾಫರ್ ನಗರ್-ದೆಹಲಿಯಂತ ಪ್ರಭುತ್ವ ಪ್ರಾಯೋಜಿತ ಹತ್ಯಾಕಾಂಡಗಳು, ಸರ್ಕಾರೀ ಬೆಂಬಲಿತ  ಪ್ರಾಯೋಜಿತ ಲಿಂಚಿಂಗ್ -ಹರಿದ್ವಾರ ದಂತ ಸಾಧು ಸಮಾವೇಶಗಳು ..ಸರ್ಕಾರದ ನೀತಿಗಳನ್ನು ವಿರೋಧಿಸುವ ರೈತರನ್ನು, ಕಾರ್ಮಿಕರನ್ನು, ಪತ್ರಕರ್ತರನ್ನು, ಚಿಂತಕರನ್ನು ದುರುಳೀಕರಿಸುವುದು , ಕೊಂದುಹಾಕುವುದು  ಅಥವಾ ಭಯೋತ್ಪಾದಕರೆಂದು ಜೈಲಿಗೆ ದೂಡುವುದು .. ಇತ್ಯಾದಿ

ಮೋದಿ ಅಧಿಕಾರಕ್ಕೆ ಬಂದ ಮೇಲೆ ಭಾರತದಲ್ಲಿ  ಬಿರುಸಿನಲ್ಲಿ FINAL SOLUTION ಜಾರಿಯಲ್ಲಿದೆ.

ಇದು ಇನ್ನೂ ಹತ್ತುವರ್ಷಗಳು ಮುಂದುವರೆಯುವ ಎಲ್ಲಾ ಸಂಭವವೂ ಇದೆ.

ಇದನ್ನು ತಡೆಯಲು ಇರುವ ಏಕೈಕ ದಾರಿ …

ಎಲ್ಲರ ಸಾವಿನಲ್ಲೂ ನನ್ನ ಸಾವನ್ನು ಕಾಣುವುದು ..

ಎಲ್ಲರ ಬದುಕಿನಲ್ಲಿ ಮಾತ್ರ ನನ್ನ ಬದುಕನ್ನು ಕಾಣುವುದು ..

ಈ ಸಂದರ್ಭದಲ್ಲಿ ಎಷ್ಟೇ ಕ್ಲೀಷೆಯಾದರೂ ಹಿಟ್ಲರ್ ನ ಜರ್ಮನಿಯಲ್ಲಿದ್ದ ಪಾದ್ರಿ ಮಾರ್ಟಿನ್ ನೆಮ್ಯೂಲರ್ ನ ಈ ಕವನ ನೆನಪು ಮಾಡಿಕೊಳ್ಳಲೇ ಬೇಕು ..

*ನಂತರ ಅವರು ನನ್ನನ್ನೇ ಹುಡುಕಿ ಬಂದಾಗ*

ಈಗ ಕ್ಲೀಷೆಯೇ ಆಗಿರುವ ಆದರೂ ಅತ್ಯಂತ ಪ್ರಸ್ತುತವಾಗಿರುವ  ಕೆಳಗಿನ ಕವನವನ್ನು ಬರೆದದ್ದು  *ಜರ್ಮನಿನ ಪಾದ್ರಿ ಮಾರ್ಟಿನ್ ನೆಮ್ಯೂಲರ್*.  ಪ್ರೊಟೆಸ್ಟಂಟ್ ಪಾದ್ರಿಯಾಗಿದ್ದ ಮಾರ್ಟಿನ್ ನೆಮ್ಯೂಲರ್ 1934 ರಲ್ಲಿ ಹಿಟ್ಲರ್ ಅಧಿಕಾರ ವಶಪಡಿಸಿಕೊಂಡಿದ್ದನ್ನು ಸಂಭ್ರಮಿಸಿದವರಲ್ಲಿ ಒಬ್ಬನಾಗಿದ್ದ.

ಅಧಿಕಾರ ವಹಿಸಿಕೊಂಡ ಪ್ರಾರಂಭದಲ್ಲಿ ಹಿಟ್ಲರ್ ನ ಪಡೆಗಳು ಕಮ್ಯುನಿಸ್ಟರ ಕಗ್ಗೊಲೆಯನ್ನು ನಡೆಸುತ್ತಿದ್ದಾಗ ದೈವದ್ರೋಹಿ ಕಮ್ಯುನಿಸ್ಟರನ್ನು ಕೊಂದು ಹಿಟ್ಲರ್ ಒಳ್ಳೆಯ ಕೆಲಸ ಮಾಡುತ್ತಿದ್ದಾನೆ ಎಂದು ಸಂಭ್ರಮಿಸಿದ್ದವರಲ್ಲಿ ಇವರೂ ಒಬ್ಬರು…

ನಂತರ ಅಶಕ್ತರು, ರೋಗಪೀಡಿತರನ್ನು ಹಿಟ್ಲರ್ ಸೆರೆಗೆ ಅಥವಾ ಕೊಲೆಗೆ ಗುರಿಮಾಡುತ್ತಿದ್ದಾಗಲೂ ಇದರಿಂದ ಒಟ್ಟಾರೆಯಾಗಿ ಜರ್ಮನಿಗೆ ಒಳ್ಳೆಯದೇ ಆಗುತ್ತದೆಂದು ಈ ಪಾದ್ರಿ ಭಾವಿಸಿದ್ದರು.

1938 ರಲ್ಲಿ ನಿಧಾನಕ್ಕೆ ಜರ್ಮನಿ ಯ ಹಲವು ನಗರಗಳ ಹೊರವಲಯಗಳಲ್ಲಿ ಪ್ರಾರಂಭಗೊಂಡ ಹಿಟ್ಲರನ Concentration Camp ಗಳನ್ನು Workers Camp ಗಳೆಂದೇ ತಮ್ಮನ್ನು ನಂಬಿಸಿಕೊಂಡಿದ್ದರು.

ಆದರೆ ಜರ್ಮನಿಯ ಜನಾಂಗೀಯ  ಶುದ್ಧತೆಯನ್ನು ಕಾಪಾಡಿಕೊಳ್ಳಲು ಜರ್ಮನರ ರಕ್ತ ಮತ್ತು ಚಿಂತನೆಗಳಿಂದ ಅನಾರ್ಯತೆಯನ್ನು ಶುದ್ಧಗೊಳಿಸಲು ಹಿಟ್ಲರ್, ಯೆಹೂದಿಗಳನ್ನು, ಕಮ್ಯುನಿಸ್ಟರನ್ನು, ಭಿನ್ನಮತೀಯ ಕೆಥೊಲಿಕ-ಪ್ರೊಟೆಶ್ಟೆಂಟುಗಳನ್ನೂ , ಜಿಪ್ಸಿ ಇನ್ನಿತರ ಅಲೆಮಾರಿಗಳನ್ನು ಸಾರಾಸಗಟು ಕೊಂದುಹಾಕುವುದೊಂದೇ *FINAL SOLUTION* ಎಂದು ತೀರ್ಮಾನಿಸಿದ ಮೇಲೆ  ತಾವು ಮಾತ್ರ ಹಿಟ್ಲರನ ಆಳ್ವಿಕೆಯಲ್ಲಿ ಸುರಕ್ಷಿತರು ಎಂದು ಭಾವಿಸಿಕೊಂಡಿದ್ದ ಪಾಸ್ಟರ್ ನೆಮ್ಯೂಲಾರ್ ಒಳಗೊಂಡಂತೆ  ಸಾವಿರಾರು ಪಾದ್ರಿಗಳು ಬಂಧನಕ್ಕೊಳಗಾದರು. ಕೊಲ್ಲಲ್ಪಟ್ಟರು. ಅದೃಷ್ಟವಶಾತ್ ಈ ಪಾದ್ರಿ ಬದುಕುಳಿದರು.

ಆದರೆ, ಎಲ್ಲರನ್ನೂ -ಎಲ್ಲವನ್ನೂ ಬಲಿತೆಗೆದುಕೊಳ್ಳುವ ಈ ನಾಜಿ-ಫ್ಯಾಸಿಸ್ಟರ ರಾಜಕಾರಣವನ್ನು ಅರ್ಥಮಾಡಿಕೊಳ್ಳದೇ ಪಾಸ್ಟರ್ ನೆಮ್ಯೂಲರ್ ಅಂತವರೂ, ಉದಾರವಾದಿ ನಿಲುವಿನವರೂ, ಪಶ್ಚಿಮದ ಪ್ರಜಾತಂತ್ರ ಜಗತ್ತು ಪ್ರಾರಂಭದಲ್ಲಿ ಬೆಂಬಲಿಸುವ ಪ್ರಮಾದ ಮಾಡಿದ್ದರು… ಅಂಥ ಪ್ರಮಾದವನ್ನು ಪ್ರಾರಂಭದಲ್ಲಿ ಗಾಂಧಿ ಕೂಡ ಮಾಡಿದ್ದರು..

ಆದರೆ, ನಂತರ 1945ರಲ್ಲಿ ಬದುಕುಳಿದ ಹೂರಬಂದ ಮಾರ್ಟಿನ್ ನೆಮ್ಯೂಲರ್.. ತಮ್ಮ ತಪ್ಪೊಪ್ಪಿಗೆ ಭಾಷಣದಲ್ಲಿ…

“ಹಿಟ್ಲರ್ ಪ್ರಾರಂಭದ ದಿನಗಳಲ್ಲಿ ಕಮ್ಯುನಿಸ್ಟರನ್ನು ಕೊಲ್ಲತ್ತಿದ್ದ  ಕಾಲದಲ್ಲೇ ಇಡೀ ಜರ್ಮನ್ ಸಮಾಜ ತಿರುಗಿಬಿದ್ದಿದ್ದರೆ, ಜರ್ಮನಿ ಇಂಥಾ ದಾರುಣ ಕ್ರೌರ್ಯಗಳನ್ನು ಕಾಣುತ್ತಿರಲಿಲ್ಲವೆಂದು ಮನದಾಳದಿಂದ ಭಾಷಣ ಮಾಡಿದರು.

ಇದು ಆ ಭಾಷಣದ ಸಾರ ರೂಪದ ಕವನ

ಮೊದಲವರು
ಕಮ್ಯುನಿಸ್ಟರನ್ನು
ಹುಡುಕಿ ಬಂದರು

ನಾನು ಸುಮ್ಮನಿದ್ದೆ

ಏಕೆಂದರೆ
ನಾನು ಕಮ್ಯುನಿಸ್ಟ್ ಆಗಿರಲಿಲ್ಲ ..

ನಂತರ ಅವರು
ಟ್ರೇಡ್ ಯೂನಿಯನಿಷ್ಠರನ್ನು
ಹುಡುಕಿ ಬಂದರು

ನಾನು ಸುಮ್ಮನಿದ್ದೆ

ಏಕೆಂದರೆ
ನಾನು ಟ್ರೇಡ್ ಯೂನಿಯನಿಸ್ಟ್ ಆಗಿರಲಿಲ್ಲ ..

ನಂತರ ಅವರು
ಯೆಹೂದಿಗಳನ್ನು
ಹುಡುಕಿ ಬಂದರು

ನಾನು ಸುಮ್ಮನಿದ್ದೆ

ಏಕೆಂದರೆ
ನಾನು ಯೆಹೂದಿಯಾಗಿರಲಿಲ್ಲ.

ನಂತರ ಅವರು
ಕೆಥೊಲಿಕರನ್ನು
ಹುಡುಕಿ ಬಂದರು

ನಾನು ಸುಮ್ಮನಿದ್ದೆ

ಏಕೆಂದರೆ
ನಾನು ಕೆಥೊಲಿಕನಾಗಿರಲಿಲ್ಲ

ಕೊನೆಗೆ ಅವರು
ನನ್ನನ್ನೇ
ಹುಡುಕಿ ಬಂದರು

ಆಗ  ನನಗಾಗಿ
ಧ್ವನಿ ಎತ್ತುವವರು
ಯಾರೂ ಇರಲಿಲ್ಲ………

*ಈಗ ಭಾರತದಲ್ಲೂ ಮೋದಿ ಸರ್ಕಾರ FINAL SOLUTION ಹುಡುಕುತ್ತಿದೆ, ಹರಿದ್ವಾರದ ಭಾಷಣ, ಸಂಸದ ತೇಜಸ್ವಿ ಸೂರ್ಯನ ಭಾಷಣ ಎಲ್ಲವೂ ಅದರ ಭಾಗಗಳೇ..*

*ಪಾಸ್ಟರ್ ಮಾರ್ಟಿನ್ ನೆಮ್ಯೂಲರ್ ನಿಂದ  ಭಾರತೀಯರೇನಾದರೂ ಕಲಿಯಬಹುದೇ?*

– ಶಿವಸುಂದರ್

shivasundar
9448659774