*ಪ್ರೀತಿಯ ‘ಮಹೇಶಣ್ಣ’ ದೂರದ ‘ಮಹೇಶಜೀ’ ಆದರೆ..!?* : ಡಾ :ಸಿ.ಎಸ್.ದ್ವಾರಕಾನಾಥ್. ಪ್ರೀತಿಯ ಮಹೇಶ್,
ಈಚೆಗೆ ಸಿಗಲಿಲ್ಲ ಹೇಗಿದ್ದೀರಿ..? ವಿಜಯಕ್ಕ ಹೋದ ನಂತರ ಬಹಳ ಬಳಲಿರುವುದನ್ನು ಗಮನಿಸಿದೆ, ಕ್ರಮೇಣ ಈ ನೋವಿನಿಂದ ಹೊರಬರುತ್ತಿರುವುದು ಉತ್ತಮ ಸೂಚನೆ.. ಈಚೆಗೆ ಲವಲವಿಕೆಯಿಂದ ಕಾಣುತಿದ್ದೀರಿ.

ನೀವು ಬಿಜೆಪಿ ಸೇರಿದ ಮೇಲೆ ಹಾಗೂ ನಾನು ಕಾಂಗ್ರೆಸ್ ಸೇರಿದ ಮೇಲೆ ನಾವಿಬ್ಬರು ಹಿಂದಿನಂತೆ ಬೇಟಿ ಮಾಡಿ ಮಾತಾಡೇ ಇಲ್ಲ. ನೀವು ಎಲ್ಲೇ ಇರಿ ನೀವು ನನ್ನ ಸ್ನೇಹಿತರೆಂದೇ ಭಾವಿಸಿ ಅದೇ ಪ್ರೀತಿ ಮತ್ತು ಸಲುಗೆಯನ್ನು ಇಂದೂ ಹೊಂದಿದ್ದೇನೆ. ನೀವು ಬಿಜೆಪಿ ಸೇರಿದಾಗ ನಿಮ್ಮ ಮೇಲೆ ಕೆಲ ಹುಡುಗರು ಮಾಡುತಿದ್ದ ಮಾತಿನ ದಾಳಿ ನೋಡಿ ಬೇಸರಗೊಂಡಿದ್ದೆ. ಅನೇಕ ಸಲ ಬರೆಯಬೇಕೆನಿಸಿದ್ದರೂ ಬರೆಯದೆ ಸುಮ್ಮನಿದ್ದೆ. ನೀವು ಬಿಜೆಪಿ ಬೆಂಬಲ ಪಡೆದು ಸ್ವತಂತ್ರರಾಗೇ ಇರುತ್ತೀರಿ ಎಂದು ಭಾವಿಸಿದ್ದೆ. ಆದರೆ ಬಿಜೆಪಿಗೆ ಸೇರೇ ಬಿಟ್ಟಿರಿ ಅಂದಾಗ ಕೊಂಚ ಅಘಾತವಾದರೂ ನಿಮ್ಮ ರಾಜಕೀಯ ಭವಿಷ್ಯತ್ತಿಗೆ ಮತ್ತು ನಿಮ್ಮ ಕ್ಷೇತ್ರದ ಅಭಿವೃದ್ಧಿಗೆ ಆಡಳಿತ ಪಕ್ಷ ಸೇರುವುದು ಅನಿವಾರ್ಯವೇನೋ ಎಂದು ಭಾವಿಸಿ ಜೀರ್ಣಿಸಿಕೊಂಡೆ. ನಂತರ ನೀವು ಕೆಲವು ಸಲ ಕೊಟ್ಟ ಹೇಳಿಕೆಗಳು ನನ್ನಲ್ಲಿ ಆಶ್ಚರ್ಯವುಂಟು ಮಾಡುತಿದ್ದವು. ಅದನ್ನೂ ನಿಮ್ಮ ಅಸ್ಥಿತ್ವಕ್ಕೆ ಅನಿವಾರ್ಯವೇನೋ ಎಂದು ಭಾವಿಸಿದೆ.

ಆದರೆ ನೀವು ಸಾವರ್ಕರ್ ಪುಸ್ತಕ ಬಿಡುಗಡೆ ಕಾರ್ಯಕ್ರಮದ ಅತಿಥಿ ಆದಾಗಂತೂ ನಿಜಕ್ಕೂ ಬೇಸರವಾಯಿತು ಆದರೂ ನುಂಗಿಕೊಂಡೆ! ನಿನ್ನೆ ಸಾವರ್ಕರ್ ಪುಸ್ತಕದ ಕಾರ್ಯಕ್ರಮದ ವಿಡಿಯೋ ನೋಡಿದಾಗ ನಿಜಕ್ಕೂ ಅಘಾತವಾಯಿತು! ನೀವು ಕಳೆದುಹೋಗುತ್ತಿರುವುದರ ಸೂಚನೆ ಸಿಕ್ಕಿತು! ಒಬ್ಬ ಆಪ್ತ ಸ್ನೇಹಿತನಾಗಿ ನಿಮಗೊಂದು ಬಹಿರಂಗ ಪತ್ರ ಬರೆಯಲು ತೀರ್ಮಾನಿಸಿದೆ!? ಇಲ್ಲಿ ಬಹಿರಂಗವಾಗೇ ಆಡಬೇಕಾದ ಕೆಲ ಮಾತುಗಳಿದ್ದದ್ದರಿಂದ ಬಹಿರಂಗ ಪತ್ರವೇ ಸರಿ ಎನಿಸಿತು.

ನೀವು ಅದ್ಯಾರೋ ಸಂಘ ಪರಿವಾರದವರು ಬರೆದ ಸಾವರ್ಕರ್ ಪುಸ್ತಕ ಇಟ್ಟುಕೊಂಡು ನಿಮ್ಮ ಸಹಜ ಶೈಲಿಯಲ್ಲಿ ಮಾತಾಡಲು ಪ್ರಯತ್ನಿಸುತಿದ್ದಿರಿ. ಅದರಲ್ಲಿರುವ ಅಂಶಗಳನ್ನು ವಿಶ್ಲೇಷಿಸುತಿದ್ದಿರಿ. ಆದರೆ ನಿಮ್ಮ ಮಾತು ಎಂದಿನಂತೆ ಸಹಜವಾಗಿರಲಿಲ್ಲ! ನಿಜ ಹೇಳಿ? ಯಾರಾದರೂ ಸಂಘ ಪರಿವಾರದವರು ಎಂದಾದರೂ facts ಅನ್ನು ಇಟ್ಟುಕೊಂಡು ಬರೆದಿದ್ದಾರೆಯೆ? Fact ಗಳನ್ನು ತಿರುಚುವುದು, ಸತ್ಯದ ತಲೆ ಮೇಲೆ ಹೊಡೆದಂತೆ ಸುಳ್ಳು ಹೇಳುವುದು, ಅವರ ಅಜೆಂಡಾವನ್ನು ನಯನಾಜೂಕಾಗಿ ಒಪ್ಪಿಸುವುದೇ ಅವರ ಪರಂಪರಾಗತ ಕೃತ್ಯವಲ್ಲವೆ? ಅದೆಷ್ಟು ಸಲ ಅವರ ಬರಹಗಳ ಕುರಿತು ನಾವು ಬಿಡಿಸಿ ಬಿಡಿಸಿ ಮಾತನಾಡಿಲ್ಲ?

ಅರುಣ್ ಶೌರಿಯವರು ಬಾಬಾಸಾಹೇಬರ ವಿರುದ್ದ worshipping the false gods ಬರೆದಾಗ ಅದೆಷ್ಟು ಅದರಲ್ಲಿನ ಸುಳ್ಳುಗಳ ಬಗ್ಗೆ ಜನರಿಗೆ ತಿಳಿಸಲು ಪ್ರಯತ್ನಿಸುತಿದ್ದೆವು. ಈಗೇನಾದರೂ worshipping the false gods ಕುರಿತು ನಿಮಗೆ ಮಾತನಾಡಲು ವೇದಿಕೆ ನೀಡಿ ಸಂತೋಷ್ ಜೀಯನ್ನು ಪಕ್ಕದಲ್ಲಿ ಕೂರಿಸಿದರೆ, ಅವರನ್ನು ಓಲೈಸಲು ಆ ಪುಸ್ತಕವನ್ನು ಉದ್ದರಿಸುತ್ತಾ ಅರುಣ್ ಶೌರಿಯ ಸುಳ್ಳುಗಳನ್ನು, misquote ಗಳನ್ನು ವಿಜೃಂಬಿಸುತ್ತಾ ಬಾಬಾಸಾಹೇಬರನ್ನೇ ಹೀಗೆಳೆಯುತ್ತಿದ್ದಿರೇನೋ ಎಂಬ ಗಾಡ ಅನುಮಾನ ಬರುತ್ತೆ!
ನನಗೆ ಗೊತ್ತು “ಮೊನ್ನೆ ಬಿಡುಗಡೆಯಾದ ಸಾವರ್ಕರ್ ಕುರಿತ ಪುಸ್ತಕ ಮೊದಲು ಓದಿ ಸರ್.. ಆಮೇಲೆ ಮಾತಾಡೋಣ..” ಎನ್ನುತ್ತೀರಿ. ನಾನು ಓದಲ್ಲ. ನನ್ನ ಆರೋಗ್ಯದ ದೃಷ್ಟಿಯಿಂದ ಯಾವುದೇ ಸುಳ್ಳುಗಳನ್ನು ಓದಬಾರದು ಎಂದು ನನ್ನ ವೈದ್ಯರು ಸಲಹೆ ನೀಡಿದ್ದಾರೆ.

ನೀವು ಶಾಸಕರಾಗಿ ಗೆದ್ದಿದ್ದು, ಹತ್ತಾರು ವರ್ಷ ನಿಮ್ಮ ನಿರಂತರ ಶ್ರಮ ಮತ್ತು ಸಂಘಟನೆಯ ಆಧಾರದ ಮೇಲೆ. ಕಾನ್ಸಿರಾಮರು ಕಟ್ಟಿದಂತ ಬಿಎಸ್ಪಿ ಪಕ್ಷದ ಆನೆಯ ಚಿನ್ಹೆಯ ಮೇಲೆ ಅಲ್ಲವೆ? ನೀವು ಶಾಸಕರಾಗಿ ಬಿಜೆಪಿ ಸೇರಿದ್ದು ಅವರಿಗೇ ಲಾಭ. ಆದ್ದರಿಂದ ನಿಮ್ಮ ಹಂಗಿನಲ್ಲಿ ಅವರಿರಬೇಕೇ ಹೊರತು ನೀವಲ್ಲ, ಆದ್ದರಿಂದ ನೀವು ಯಾವುದೇ ಕಾರಣಕ್ಕೆ ಬಿಜೆಪಿ ಸೇರಿದ್ದರೂ ಆರೆಸೆಸ್ಸಿನ ಇಂತಹ ಹಾರ್ಡ್ಕೋರ್ ಕಾರ್ಯಕ್ರಮಗಳನ್ನು avoid ಮಾಡಬಹುದಿತ್ತು. ಇಂತಹ ಮುಜುಗರಗಳಿಂದ ದೂರವಿರಬಹುದಿತ್ತು. ಈ ಕಾರ್ಯಕ್ರಮದಲ್ಲಿ ನಿಮ್ಮ ಬಾಗವಹಿಸುವಿಕೆ ಅತ್ಯಂತ ಅನಿವಾರ್ಯ ಎನಿಸಿದಾಗ ಕನಿಷ್ಟ ಒಬ್ಬ ಮಾಜಿ ಅಂಬೇಡ್ಕರ್ ವಾದಿಯಾಗಿ ಸಾವರ್ಕರ್ ಕುರಿತು ಅಂಬೇಡ್ಕರ್ ರವರು ಏನು ಹೇಳಿದ್ದಾರೆ ಎಂಬುದನ್ನಾದರೂ ಕೋಟ್ ಮಾಡಿ ನಿಮ್ಮತನ ಉಳಿಸಿಕೊಳ್ಳಬಹುದಿತ್ತು. ಅದನ್ನೂ ಮಾಡದೆ ನೀವು ಆ ಪುಸ್ತಕದಲ್ಲಿದ್ದದ್ದನ್ನು ಓದುತ್ತಾ ವಿಶ್ಲೇಷಿಸಿದ್ದು ನನ್ನ ಪ್ರಕಾರ ಅಕ್ಷಮ್ಯ ಅಪರಾಧವಲ್ಲವೆ?

ನೀವು ಹಿಂದೊಮ್ಮೆ ಅಪ್ಪಟ ಅಂಬೇಡ್ಕರ್ ವಾದಿಯಾಗಿದ್ದಾಗ ನೀವೇ ನನಗೆ ಕೊಟ್ಟ ‘ವಿಜಯ್ ಮಾಂಕರ್’ ಅವರ A chronology of Dr.B.R. Ambedkar ಪುಸ್ತಕದಿಂದಲೇ ಆರಿಸಿದ ಒಂದೆರಡು ಕೋಟ್ ಗಳನ್ನು ಯಥಾವತ್ತಾಗಿ ಇಲ್ಲಿ ನೀಡುತಿದ್ದೇನೆ. ಬಾಬಾಸಾಹೇಬರಿಗೆ ಸಾವರ್ಕರ್ ಬಗ್ಗೆ ಇದ್ದ ಅಭಿಪ್ರಾಯವನ್ನು ಗಮನಿಸಿ…
ದಿನಾಂಕ 18-2-1933 ರಂದು(ಪುಟ 134) ಸಾವರ್ಕರ್ ರವರು ಅಂಬೇಡ್ಕರ್ ರವರಿಗೆ ಪತ್ರ ಬರೆದು ಅಸ್ಪೃಶ್ಯರಿಗೆ ದೇವಾಲಯವನ್ನು ತೆರೆಯಲು ಆಹ್ವಾನಿಸಿದಾಗ ಬಾಬಾಸಾಹೇಬರು ಅವರ ಆಹ್ವಾನವನ್ನು ಗೌರವಿಸುತ್ತಲೇ ನಮ್ರವಾಗಿ ಹೀಗೆ ಬರೆಯುತ್ತ ಅವರ Hippocracy ಯನ್ನು ಬಯಲು ಮಾಡುತ್ತಾರೆ. ‘As I look at what is called the problem of the untouchables, I feel it is intimately bound up with the question of the reorganisation of hindu society. If the untouchables are to be a part and parcel of the hindu society then it is not enough to remove untouchability, for that purpose you must destroy chaturvarnya… That you still use the jargon of chaturvarnya although you qualify it by basing it on merit is rather unfortunate. However, I hope that in course of time you will have courage enough to drop this needless and mischievous jargon’. ಎಂದು ಬರೆಯುತ್ತಾರೆ.

ಇನ್ನೊಮ್ಮೆ 24ನೇ ಮೇ 1956 ರಂದು ಮುಂಬಯಿನ ನಾರೇ ಪಾರ್ಕ್ ನಲ್ಲಿ ನಡೆದ ಐತಿಹಾಸಿಕ ಸಮಾವೇಶವೊಂದರಲ್ಲಿ ಮಾತನಾಡುತ್ತಾ 1956ರ ಅಕ್ಟೋಬರ್ ತಿಂಗಳಲ್ಲಿ ತಾವು ಬೌದ್ದ ಧರ್ಮಕ್ಕೆ ಮತಾಂತರ ವಾಗುತ್ತೇವೆಂದು ಹೇಳುತ್ತಾ ಸಾವರ್ಕರ್ ರವರ್ ಕುರಿತು ಈ ರೀತಿ ಅಟ್ಯಾಕ್ ಮಾಡುತ್ತಾರೆ…
(ಪುಟ 474) He makes vitriolic attack on veer savarkar(Mr. V.D.Savarkar) who had written a series of articles on the non-violence preached by Buddhism. He tells, that his book on Buddhism would be published soon. That he has closed all the breaches in the organization of Buddhism and has now consolidated it; so the tide of Buddhism never recede in India. ಎಂದು ಸ್ಪಷ್ಟ ಪಡಿಸುತ್ತಾರೆ. ಹೀಗೇ ಬಾಬಾಸಾಹೇಬರ ಅರಿವಿನ ಜ್ಞಾನದಲ್ಲಿ ಕಣ್ಣಾಡಿಸಿದರೆ ಇಂತವು ಅನೇಕ ಸಿಗಬಹುದು.

ಅಂಬೇಡ್ಕರ್ ಮತ್ತು ಸಾವರ್ಕರ್ ಒಂದಾಗಿದ್ದರೆ ದೇಶ ಇಬ್ಬಾಗ ಆಗುತ್ತಿರಲಿಲ್ಲ ಈಗಿನ ಸಮಸ್ಯೆಗಳು ಇರುತ್ತಿರಲಿಲ್ಲ ಎಂದು ಪರೋಕ್ಷವಾಗಿ ಮುಸ್ಲಿಂ ಸಮುದಾಯವೇ ನಮ್ಮ ಸಮಸ್ಯೆ ಎನ್ನುವಂತೆ ಮಾತನಾಡಿದ್ದೀರಿ! ನಾವು ಹಿಂದೆಲ್ಲಾ ಭಾಗವಹಿಸಿದ ಮುಸ್ಲಿಂ ಸಬೆಗಳು, ಸಮಾವೇಶಗಳು ಆಗ ಕನಿಷ್ಟ ನೆನಪಾಗಲಿಲ್ಲವೆ!? ನಮ್ಮ ಒಡನಾಡಿಗಳಾಗಿದ್ದ ಎಲ್ಲಾ ಮುಸ್ಲಿಂ ಬಾಂಧವರು ನೀವು ಸಂಘ ಪರಿವಾರ ಸೇರಿದಾಕ್ಷಣ ವಿಲನ್ ಗಳಾಗಿಬಿಟ್ಟರೆ!? ಬಾಬಾಸಾಹೇಬರ Pakistan or partition of india ಬರಹವನ್ನು ಕೂಡ misquote ಮಾಡಿ ಸಮಯಕ್ಕೆ ತಕ್ಕಂತೆ ತೇಲಿಸುತ್ತಾ ಚಪ್ಪಾಳೆ ಗಿಟ್ಟಿಸಿದಿರಲ್ಲ!? ಒಂದು ಕ್ಷಣ guilt ಆಗಲಿಲ್ಲವೆ?

ಜನಸಾಮಾನ್ಯರಿಗೆ ಗೊತ್ತಿರುವಂತೆ ಸಾವರ್ಕರ್ ಬ್ರಿಟಿಷರಿಗೆ ಬರೆದುಕೊಟ್ಟ ಕ್ಷಮಾರ್ಪಣಾ ಪತ್ರಗಳ ಕುರಿತಾದರೂ ನೀವು ಒಂದಷ್ಟು ಮಾತನಾಡಬಹುದಿತ್ತು. ನನಗೆ ಪ್ರಾಮಾಣಿಕವಾಗಿ ಅನಿಸುತ್ತಿರುವುದು ನೀವು ಆತ್ಮವಂಚನೆ ಮಾಡಿಕೊಳ್ಳುತಿದ್ದೀರಿ ಎಂಬುದು! ವೇದಿಕೆಯ ಮೇಲಿದ್ದ ಒಕ್ಕಲಿಗರ ಸ್ವಾಮೀಜಿ, ಮಾದಿಗ ಕುಲದ ಸ್ವಾಮೀಜಿ ಮತ್ತು ನಿಮ್ಮನ್ನು ಕಂಡು ಅಂದು ಸಂತೋಷಜಿ ಆಡಿದ ಮಾತುಗಳನ್ನು ಗಮನಿಸಿ.. ನೀವು ಸೂಕ್ಷ್ಮಮತಿಯಾಗಿದ್ದರೆ ಆತನ arrogance ನಿಮ್ಮನ್ನು ಕನಿಷ್ಟ ವಿಚಲಿತರನ್ನಾಗಿ ಮಾಡಬೇಕಿತ್ತು! ಕೊಂಚ ನಿಷ್ಟುರ ಎನಿಸಿದರೂ ಹಿಂದಿನ ಆತ್ಮೀಯತೆಯಿಂದಲೇ ಇದನ್ನೆಲ್ಲ ಬರೆಯುತಿದ್ದೇನೆ. ಅಸಂಖ್ಯಾತ ಯುವಕರ ಪ್ರೀತಿಯ ‘ಮಹೇಶಣ್ಣ’ ಆಗಿದ್ದ ನೀವು ‘ಮಹೇಶಜಿ’ ಆಗುವುದನ್ನು ಕಲ್ಪಿಸಿಕೊಳ್ಳಲೂ ಆಗುತ್ತಿಲ್ಲ. ಒಬ್ಬ ಅರಿವಿರದ ಮನುಷ್ಯ ಸಾವರ್ಕರ್ ವಾದಿಯಾಗಿದ್ದು ಅರಿವು ಪಡೆದ ನಂತರ ಅಂಬೇಡ್ಕರ್ ವಾದಿಯಾಗಬಹುದು, ಆದರೆ ಎಲ್ಲಾ ಅರಿವುಳ್ಳ ಅಂಬೇಡ್ಕರ್ ವಾದಿಯೊಬ್ಬ ಸಾವರ್ಕರ್ ವಾದಿಯಾಗುವ ಅವಸಾನಕ್ಕೆ ಇಳಿಯಲಾರ, ಆತ ಅವಕಾಶವಾದಿಯಾಗದ ಹೊರತು..!?

ಸ್ನೇಹವಿರಲಿ.. ಜೈ ಭೀಮ್..
– ಸಿ.ಎಸ್.ದ್ವಾರಕಾನಾಥ್