*ಉಪ ಚುನಾವಣೆಗಳ ಫಲಿತಾಂಶ ಕಂಡು ಮುಸ್ಲಿಮರು ಆತ್ಮಾವಲೋಕನ ಮಾಡಬೇಕು

ಕರ್ನಾಟಕದ ಹಾನಗಲ್ ಮತ್ತು ಸಿಂದಗಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಬಿಜೆಪಿ ತಲಾ ಒಂದು ಸ್ಥಾನ ಗೆದ್ದಿದೆ. ಮೇಲ್ನೋಟಕ್ಕೆ ಇದು ಆರೆಸ್ಸೆಸ್ ಮತ್ತು ಡಿಕೆ ಶಿವಕುಮಾರ್ ರವರ ಒಳ ಒಪ್ಪಂದದ ಫಲಿತಾಂಶ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ .

ಸಿಂದಗಿಯಲ್ಲಿ ವಿಶ್ವಹಿಂದೂ ಪರಿಷತ್ ಮುಖಂಡರಾಗಿದ್ದವರನ್ನು ಕಾಂಗ್ರೆಸ್ ಅಭ್ಯರ್ಥಿ ಮಾಡಿದಾಗಲೇ ಕಾಂಗ್ರೆಸ್ ಸೋಲಿನ ಮುನ್ನುಡಿ ಬರೆದಿತ್ತು. ಉತ್ತರ ಕರ್ನಾಟಕದಲ್ಲಿ ತೀರಾ ದುರ್ಬಲವಾದ ಜೆಡಿಎಸ್ ಪಕ್ಷ ಮುಸ್ಲಿಂ ಅಭ್ಯರ್ಥಿಯನ್ನು ನಿಲ್ಲಿಸಿತ್ತು. ಕುಮಾರಸ್ವಾಮಿ ಮತ್ತು ಇತರ ಜೆಡಿಎಸ್ ಮುಖಂಡರು ಮುಸ್ಲಿಂ ಸಮುದಾಯದ ಬಗ್ಗೆ ಕಿಲೋ ಗಟ್ಟಲೆ ಮೊಸಳೆ ಕಣ್ಣೀರು ಸುರಿಸಿತ್ತು. ಸಮ್ಮಿಶ್ರ ಸರಕಾರದ ಮುಖ್ಯಮಂತ್ರಿಯಾಗಿದ್ದಾಗ ಕುಮಾರಸ್ವಾಮಿ 2700 ಕೋಟಿ ಇದ್ದ ಅಲ್ಪಸಂಖ್ಯಾತರ ಬಜೆಟ್ಟನ್ನು 800 ಕೋಟಿಗೆ ಕಡಿತಗೊಳಿಸಿದ್ದು ಮತದಾರರು ಮರೆತಿರಲಿಲ್ಲ.

ಮುಸ್ಲಿಮರು ಮತ್ತು ಹಿಂದುಳಿದ ಕನಿಷ್ಠ ಹತ್ತು ಸಣ್ಣ ಜಾತಿಗಳಿಗೆ ರಾಜ್ಯದಲ್ಲಿ ಶಾಸಕರು – ಸಂಸದರ – ಮಂತ್ರಿಗಳ ಪ್ರಾತಿನಿಧ್ಯ ತೀರಾ ಕಡಿಮೆ. ಇವರ ಪಾಲನ್ನು ಬ್ರಾಹ್ಮಣರು, ಲಿಂಗಾಯತರು, ಒಕ್ಕಲಿಗರು ಮತ್ತು ಕುರುಬ ಸಮುದಾಯದ ರಾಜಕಾರಣಿಗಳು ಬಾಚಿಕೊಂಡಿದ್ದಾರೆ. 1.10 ಕೋಟಿ ಇರುವ ಮುಸ್ಲಿಮರು ರಾಜ್ಯದಲ್ಲಿ ಕೇವಲ 7 ಶಾಸಕರನ್ನು ಹೊಂದಿದ್ದಾರೆ. ಜನಸಂಖ್ಯೆ ಅನುಪಾತದಲ್ಲಿ ಕನಿಷ್ಠ 32 ಶಾಸಕರು ಗೆಲ್ಲಬೇಕಿತ್ತು.  15 ವರ್ಷಗಳಲ್ಲಿ  ಒಬ್ಬನೇ ಒಬ್ಬ ಸಂಸದ  ರಾಜ್ಯದಿಂದ ಆಯ್ಕೆಯಾಗಿಲ್ಲ. ಈ ಬಗ್ಗೆ ಮುಸ್ಲಿಂ ಸಮುದಾಯ ಮತ್ತು ಜಾತ್ಯಾತೀತ ಮತದಾರರು ಕಣ್ಣು ತೆರೆಯಬೇಕು.

ಚುನಾವಣೆಯಲ್ಲಿ ಕೇವಲ ಕ್ಷುಲ್ಲಕ ವಿಷಯಗಳಲ್ಲಿ ಚರ್ಚೆಯಾಗಿತ್ತು. ಕೋವಿಡ್ ಸಂತ್ರಸ್ತರಿಗೆ ಪರಿಹಾರ, ಆರ್ಥಿಕ ಪುನಶ್ಚೇತನ, ಸ್ಥಳೀಯ ಸಂಸ್ಥೆಗಳಲ್ಲಿ ಮುಸ್ಲಿಂ ಮತ್ತು ಅತಿ ಹಿಂದುಳಿದವರಿಗೆ ಪ್ರತ್ಯೇಕ ಮೀಸಲಾತಿ, ಅಲ್ಪಸಂಖ್ಯಾತರಿಗೆ ಹತ್ತು ಸಾವಿರ ಕೋಟಿ ಬಜೆಟ್, ಸಂಘಪರಿವಾರದ ಕೋಮುವಾದಿ ಹೇಳಿಕೆ – ಹಿಂಸೆಗಳಿಗೆ ಕಡಿವಾಣ ಮೊದಲಾದ ನೂರಾರು ವಿಷಯಗಳ ಬಗ್ಗೆ ಚರ್ಚೆಯಾಗದಿರುವುದು ಖೇದಕರ.

ಮುಂದಿನ ವಿಧಾನಸಭಾ ಚುನಾವಣೆ ಬಗ್ಗೆ ಈಗಲೇ ಜಾತ್ಯಾತೀತವಾದಿಗಳು ಚಿಂತನೆ ನಡೆಸಿ ದಲಿತರು – ಮುಸ್ಲಿಮರು ಮತ್ತು ಅವಕಾಶ ವಂಚಿತ ಅತಿ ಹಿಂದುಳಿದ ಜಾತಿಗಳಿಗೆ ರಾಜಕೀಯ ಪ್ರಾತಿನಿಧ್ಯದ ಬಗ್ಗೆ ಕಾರ್ಯ ಯೋಜನೆ ರೂಪಿಸುದು ಅಗತ್ಯ.

ಬರಹ  :  ಎ. ಶಿಮಾಝ್. ಬೆಂಗಳೂರು.