“ಇವತ್ತು ನಿನ್ನೆ ಎಂ80 ಸ್ಕೂಟರ್ ನಲ್ಲಿ ಮೀನು ಮಾರುತ್ತಾ ಬರುವ ಬ್ಯಾರಿ ಹುಡುಗರಿಗೇ ಇಷ್ಟಿರಬೇಕಾದರೆ… ನಮ್ಮದೇ ನೆಲದ ಅನ್ನ ತಿಂದು ಈ ಮುಸ್ಲಿಂ ಹುಡುಗರು ನಮ್ಮ ಮನೆ ಹುಡುಗಿಯರಿಗೆ ಕಾಳು ಹಾಕುವುದಾದರೆ….” ಎಂದು ಸುರತ್ಕಲ್ ನೆಲದಲ್ಲಿ ನಿಂತು ಭಜರಂಗದಳದ ಕಾರ್ಯಕ್ರಮದಲ್ಲಿ ಚೈತ್ರಾ ಕುಂದಾಪುರ ಮಾತನಾಡಿದ್ದಾರೆ.
ಸುರತ್ಕಲ್ ಗೆ ಮುಸ್ಲೀಮರು ಎಂ80 ಸ್ಕೂಟರ್ ನಲ್ಲಿ ಮೀನು ಮಾರುತ್ತಾ ಇಂದು ನಿನ್ನೆ ಬಂದವರಲ್ಲ. ಚೈತ್ರಾ ಕುಂದಾಪುರ ನಿಂತು ಈ ಭಾಷಣ ಮಾಡುತ್ತಿದ್ದ ವೇದಿಕೆಯ ಎದುರಿರುವ ಸುರತ್ಕಲ್ ಹೆದ್ದಾರಿಯಲ್ಲಿ ಹಾಜಿ ಅಬ್ದುಲ್ಲರು ಸಾಹೇಬರು 1920ರ ಸಂದರ್ಭದಲ್ಲೇ ವಾಹನದಲ್ಲಿ ಬಂದಿದ್ದಾರೆ. ಚೈತ್ರ ಕುಂದಾಪುರ ನಿಂತ ಸುರತ್ಕಲ್ ನೆಲದಲ್ಲೇ ಹಾಜಿ ಅಬ್ದುಲ್ಲ ಸಾಹೇಬರೂ ನಡೆದಾಡಿದ್ದಾರೆ. 1918 ರಲ್ಲಿ ಕರಾವಳಿಯ ಜನಕ್ಕೆ ಊಟಕ್ಕೆ ಅಕ್ಕಿಯ ಕೊರತೆ ಉಂಟಾಗುತ್ತದೆ. ಆಗ ಹಾಜಿ ಅಬ್ದುಲ್ಲ ಸಾಹೇಬರು ತನ್ನದೇ ಹಡಗಿನಲ್ಲಿ ಬರ್ಮಾದ ರಂಗೂನ್‍ನಿಂದ ಅಕ್ಕಿ ವಿತರಿಸಿದ್ದರು ಎಂದು ದಾಖಲೆಗಳು ಹೇಳುತ್ತವೆ. 1920 ಕ್ಕೆ ಉಡುಪಿಯ ಅಷ್ಟ ಮಠಗಳು ಆರ್ಥಿಕ ಸಂಕಷ್ಟದಲ್ಲಿದ್ದು ಇನ್ನೇನು ಮುಚ್ಚಬೇಕು ಎನ್ನುವಾಗ ಹಾಜಿ ಅಬ್ದುಲ್ಲರು ಮಠಗಳಿಗೆ ಅಗತ್ಯವಿದ್ದ ಆಹಾರ, ಹಣವನ್ನು ನೀಡಿ ರಕ್ಷಿಸುತ್ತಾರೆ. ಜನ ಆಹಾರವಿಲ್ಲದೆ ಸಾಯುವ ಪರಿಸ್ಥಿತಿ ಇದ್ದಾಗ ಉಡುಪಿಯ ಅಷ್ಟ ಮಠಗಳಲ್ಲಿ ಒಂದಾದ ಕೃಷ್ಣಾಪುರ ಮಠವು ಚಿನ್ನದ ಪಲ್ಲಕ್ಕಿ ನಿರ್ಮಿಸಲು ಸಹಾಯ ಮಾಡುವಂತೆ ಹಾಜಿ ಅಬ್ದುಲ್ಲರನ್ನು ಕೇಳಿಕೊಳ್ಳುತ್ತದೆ. ಒಂದು ಕಡೆ ಜನರಿಗೆ ಅಕ್ಕಿ ವಿತರಿಸುತ್ತಿದ್ದ ಹಾಜಿ ಅಬ್ದುಲ್ಲ ಸಾಹೇಬರು ಕೃಷ್ಣಾಪುರ ಮಠದ ಸ್ವಾಮೀಜಿಯ ಮನವಿಯಂತೆ ಒಂದು ಸೇರು ಚಿನ್ನವನ್ನು ಕೃಷ್ಣಾಪುರ ಮಠಕ್ಕೆ ನೀಡುತ್ತಾರೆ. ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಈ ಕೃಷ್ಣಾಪುರ ಮಠ ಇರುವುದು ಚೈತ್ರಾ ಕುಂದಾಪುರ ಮುಸ್ಲೀಮರನ್ನು ಅವಮಾನಿಸಿದ ಸುರತ್ಕಲ್ ನ ವೇದಿಕೆಯಿಂದ ಒಂದೆರಡು ಕಿಮಿ ದೂರದಲ್ಲಿ‌. ಚೈತ್ರಾ ಕುಂದಾಪುರರವರು ಮುಸ್ಲೀಮರತ್ತಾ ಕೈತೋರಿಸಿದ ಅದೇ ಬೀದಿಯಲ್ಲಿ ಹಾಜಿ ಅಬ್ದುಲ್ಲರು ಕೃಷ್ಣಾಪುರ ಮಠದತ್ತಾ ಚಿನ್ನ, ಅಕ್ಕಿ ವಿತರಿಸಲು ಬಂದಿದ್ದರು.

ಅದೇ ಭಾಷಣದಲ್ಲಿ ಚೈತ್ರಾ ಕುಂದಾಪುರರವರು “ಕೆಲವರ ಪಾಲಿಗೆ ಭಜರಂಗದಳ ಎಂದರೆ ಗೂಂಡಾಗಳು. ಕೆಲವರ ಪಾಲಿಗೆ ಭಜರಂಗದಳ ಎಂದರೆ ರೌಡಿಗಳು. ಕೆಲವರ ಪಾಲಿಗೆ ಭಜರಂಗದಳ ಎಂದರೆ ಪುಡಾರಿಗಳು. ಇನ್ನೂ ಕೆಲವರ ಪಾಲಿಗೆ ಭಜರಂಗದಳ ಎಂದರೆ ಕೆಲಸ ಇಲ್ಲದವರು. ನಮ್ಮ ಧರ್ಮವನ್ನು ರಕ್ಷಣೆ ಮಾಡಬೇಕು ಎಂದಿದ್ದರೆ ನಮ್ಮ ಭಜರಂಗದಳ ಗೂಂಡಾಗಿರಿಗೂ ಸಿದ್ದ, ರೌಡೀಸಂಗೂ ಸಿದ್ದ” ಎನ್ನುತ್ತಾರೆ. ಇದೇ ಭಾಷಣವನ್ನು ಚೈತ್ರ ಕುಂದಾಪುರರವರು ಆರ್ ಎಸ್ ಎಸ್ ಅಥವಾ ವಿಶ್ವಹಿಂದೂ ಪರಿಷತ್ ಕಾರ್ಯಕ್ರಮದಲ್ಲಿ ಮಾಡುತ್ತಾರೆಯೇ ? ಭಜರಂಗದಳದಲ್ಲಿ ಇರುವುದು ಕೇವಲ ನಮ್ಮ ಶೂದ್ರ ಯುವಕರು. ನಮ್ಮ ಶೂದ್ರ ಹುಡುಗರು ಧರ್ಮಕ್ಕಾಗಿ ರೌಡಿಗಳಾಗುವುದು, ಗೂಂಡಾಗಳಾಗುವುದು ಇವರಿಗೆ ಹೆಮ್ಮೆಯ ಸಂಗತಿ. ಆರ್ ಎಸ್ ಎಸ್ ಮತ್ತು ವಿಶ್ವಹಿಂದೂ ಪರಿಷತ್ತಿನ ಎಷ್ಟು ನಾಯಕರ ಮೇಲೆ ಗೂಂಡಾಗಿರಿಯ ಕೇಸ್ ಗಳಿವೆ ? ಇಲ್ಲಿಯವರೆಗೆ ಇದು ಗೂಂಡಾಗಿರಿಯಲ್ಲ, ಧರ್ಮರಕ್ಷಣೆ ಎಂದು ಹಿಂದುಳಿದ/ಶೂದ್ರ ಯುವಕರನ್ನು ನಂಬಿಸಿದ್ದವರು ಈಗ ಆರ್ ಎಸ್ ಎಸ್ ಸಿದ್ದಾಂತ ಜಾರಿಗಾಗಿ ಗೂಂಡಾಗಿರಿ, ರೌಡಿಸಂ ನಿಮ್ಮ ಕೆಲಸ ಎಂದು ಅಧಿಕೃತವಾಗಿ ಘೋಷಿಸಿದ್ದಾರೆ. ಈಗ ಶೂದ್ರ ಯುವಕರು ಒಂದು ಕ್ಷಣ ಯೋಚನೆ ಮಾಡಬೇಕು. ನಾವು ರೌಡಿಗಳಾಗಿ/ಗೂಂಡಾಗಳಾಗಿ ಧರ್ಮ ರಕ್ಷಣೆ ಮಾಡುವುದಾದರೆ, ಧರ್ಮ ರಕ್ಷಣೆ ಹೆಸರಿನಲ್ಲಿ ಹೀರೋ/ನಾಯಕ ಯಾರಾಗುತ್ತಾರೆ ?

ಚೈತ್ರ ಕುಂದಾಪುರರವರು ಮಾತನಾಡುತ್ತಾ ಸುರತ್ಕಲ್ ನ ಪೌರಾಣಿಕ ಕತೆಯನ್ನೂ ತಿರುಚುತ್ತಾರೆ. ರಾವಣನು ಶಿವನ ಆತ್ಮಲಿಂಗವನ್ನು ಕಿತ್ತು ಕೊಂಡೊಯ್ಯುವಾಗ ಬಿದ್ದ ಕಲ್ಲಿನ ಚೂರುಗಳಿರೋ ಪ್ರದೇಶವೇ ಸುರತ್ಕಲ್ ಎನ್ನುತ್ತಾರೆ. ಪೌರಾಣಿಕ ಕತೆಯ ಪ್ರಕಾರ ಖರಾಸುರ ಎಂಬ ರಾಕ್ಷಸನು ಸಾಧುವಾಗಿ ಖರ ಮಹರ್ಷಿಯಾಗುತ್ತಾನೆ. ಈ ಖರ ಮಹರ್ಷಿಯ ಶಿರದಿಂದ ಬಿದ್ದ ಕಲ್ಲಿನ ಜಾಗ ಆಡು ಭಾಷೆಯಲ್ಲಿ ಶಿರದ ಕಲ್ಲು ಹೋಗಿ ಸುರತ್ಕಲ್ ಆಗುತ್ತದೆ ಎನ್ನುತ್ತದೆ ಪೌರಾಣಿಕ ಕತೆ. ಅಂತಹ ಖರ ರಾಕ್ಷಸನೇ ಸಾಧು ಖರ ಮಹರ್ಷಿಯಾಗಿ ಪರಿವರ್ತನೆಯಾಗಿ ಧರ್ಮ ರಕ್ಷಣೆ ಮಾಡಿರುವಾಗ ಸುರತ್ಕಲ್ ನ ಯುವಕರು ಧರ್ಮರಕ್ಷಣೆಗಾಗಿ ಗೂಂಡಾಗಳಾಗಬೇಕು/ರೌಡಿಗಳಾಗಬೇಕು ಎನ್ನುವುದು ಹೇಗೆ ಹಿಂದೂ ಸಂಸ್ಕೃತಿಯಾಗುತ್ತದೆ ?

ಚೈತ್ರಾ ಕುಂದಾಪುರರವರು ಹೇಳಿದಂತೆ ಸುರತ್ಕಲ್ ನಿಂದ ಲಂಕೆಗೆ ರಾವಣ ಆತ್ಮಲಿಂಗ ಕೊಂಡೊಯ್ಯುತ್ತಿದ್ದ ಎನ್ನುವುದಕ್ಕೆ ಯಾವುದೇ ದಾಖಲೆಯೂ ಇಲ್ಲ. ಪೌರಾಣಿಕ ಕತೆಯೂ ಇಲ್ಲ. ಆದರೆ ಹಾಜಿ ಅಬ್ದುಲ್ಲ ಸಾಹೇಬರು ಕರಾವಳಿಯ ಹೆಂಚು, ಮೀನು, ಒಣಮೀನನ್ನು ಶ್ರೀಲಂಕಾಕ್ಕೆ ರಫ್ತು ಮಾಡಿ ಅಲ್ಲಿಂದ ಅಕ್ಕಿಯನ್ನು ತಂದು ಸುರತ್ಕಲ್ ಸೇರಿದಂತೆ ಇಡೀ ಕರಾವಳಿಗೆ ಉಚಿತವಾಗಿ ಹಂಚಿದರು ಎಂದು ದಾಖಲೆ ಹೇಳುತ್ತದೆ. ಸುರತ್ಕಲ್ ಗೂ ಲಂಕೆಗೂ ಸಂಬಂಧವೇನಾದರೂ ಇದ್ದರೆ ಅದು ಹಾಜಿ ಅಬ್ದುಲ್ಲ ಸಾಹೇಬರಿಂದಲೇ ಹೊರತು ರಾಮಾಯಣದಿಂದ ಅಲ್ಲ.

ಎಲ್ಲಕ್ಕಿಂತ ಹೆಚ್ಚು ಬೇಸರ ತರಿಸಿದ್ದು ಚೈತ್ರ ಕುಂದಾಪುರ ಅವರು ಭಾಷಣದಲ್ಲಿ ಮುಸ್ಲಿಂ ಮಹಿಳೆಯರನ್ನು ಉಲ್ಲೇಖಿಸಿದ ರೀತಿ. “ಕೇವಲ 30 ಶೇಕಡಾ ಇರುವ ಮುಸ್ಲೀಮ್ ಮಹಿಳೆಯರನ್ನು ಶೇಕಡಾ 70 ರಷ್ಟಿರುವ ಹಿಂದೂ ಯುವಕರು ಲವ್ ಮಾಡಿದರೆ, ಮದುವೆ ಆದರೆ ಮುಸ್ಲೀಮರ ಮನೆಯಲ್ಲಿ ಒಂದೇ ಒಂದು ಹೆಣ್ಣು ಮಗಳು ಇರಲ್ಲ” ಎಂದು ಎಚ್ಚರಿಸುತ್ತಾರೆ. ಕನಿಷ್ಟ ಸ್ತ್ರೀ ಸಂವೇದನೆ ಇರುವ ಯಾವ ಮಹಿಳೆ/ಪುರುಷನೂ ಈ ರೀತಿಯಾಗಿ ಮಾತನಾಡಲಾರ. ಮುಸ್ಲಿಂ ಪುರುಷನೊಬ್ಬ ಹಿಂದು ಮಹಿಳೆಯನ್ನು ಮದುವೆಯಾಗುವುದು ಸುಮ್ನೆ ಚರ್ಚೆಗಾಗಿ (arguement shake) ತಪ್ಪು ಎಂದು ಹೇಳಿದರೂ ಯಾರೋ ಮಾಡಿದ ತಪ್ಪಿಗೆ ಮುಸ್ಲಿಂ ಮಹಿಳೆಯರನ್ನು ಗುರಿಯಾಗಿಸೋದು ಎಂತಹ ಕ್ರೂರತೆ ? ಒಂದು ಹೆಣ್ಣನ್ನು ಕ್ರೂರತೆಗಾಗಿ ಬಳಸಿಕೊಳ್ಳಿ ಎಂದು ಮತ್ತೊಂದು ಹೆಣ್ಣು ತಾನೇ ಘೋಷಿಸಿರುವಂತೆ ಗೂಂಡಾಗಿರಿ ಮಾಡುವ ಯುವಕರಿಗೆ ಕರೆ ಕೊಡುವುದು ಎಂತಹ ಅಮಾನವೀಯತೆ !

ಚೈತ್ರ ಕುಂದಾಪುರ ಈ ಭಾಷಣಕ್ಕಾಗಿ ನಿಂತಿದ್ದ ನೆಲ ಕಾಂತೇರಿ ಜುಮಾದಿಯ ನೆಲ. ಈ ಕಾಂತೇರಿ ಜುಮಾದಿ ಕರಾವಳಿಯ ಹಲವು ಕಡೆಗಳಲ್ಲಿ ಹಲವು ಹೆಸರುಗಳಲ್ಲಿ ಆರಾಧಿಸಲ್ಪಡುತ್ತಾಳೆ. ಹಲವು ಕಡೆಗಳಲ್ಲಿ ಈ ಜುಮಾದಿ ಜೊತೆಗೆ ಮಾಪುಳ್ತಿ ಎಂಬ ಬ್ಯಾರ್ದಿ ದೈವವೂ ಆರಾಧನೆಗೊಳಪಡುತ್ತದೆ. ಮಾಪುಳ್ತಿ ಎಂಬ ಬ್ಯಾರ್ದಿ(ಮುಸ್ಲಿಂ ಮಹಿಳೆ) ದೈವಕ್ಕೆ ನೇಮವಾದ ಬಳಿಕವೇ ಜುಮಾದಿ ನೇಮ ಪಡೆದುಕೊಳ್ಳುತ್ತದೆ. ಇದೆಲ್ಲಾ ಈಗ ಸೃಷ್ಟಿಸಿದ ಪದ್ದತಿಗಳಲ್ಲ. ಕರಾವಳಿಯಲ್ಲಿ ದೈವಾರಾಧನೆ ಪ್ರಾರಂಭ ಅಗಿದಂದಿನಿಂದ ಕರಾವಳಿಗೂ ಮುಸ್ಲಿಂ ಮಹಿಳೆಯರಿಗೂ ಭಾವನಾತ್ಮಕ ಸಂಬಂಧವಿದೆ. ರಾಜಕೀಯ ದ್ವೇಷ ಸಾಧನೆಗಾಗಿ ಮುಸ್ಲಿಂ ಮಹಿಳೆಯರನ್ನು ಬಳಸಿಕೊಳ್ಳುವುದನ್ನು ಕರಾವಳಿಯ ಅದರಲ್ಲೂ ಸಿರಿ ಆಲಡೆಯ ಕಟ್ಲ ಸುರತ್ಕಲ್ ನ ಹಿಂದೂಗಳು ಒಪ್ಪಲು ಸಾಧ್ಯವೇ ಇಲ್ಲ.

ಚೈತ್ರ ಕುಂದಾಪುರ ತುಳುನಾಡಿನ ಪೌರಾಣಿಕ ಕತೆ, ಜನಪದ ಇತಿಹಾಸ ಮತ್ತು ಇತಿಹಾಸವನ್ನು ಅರ್ಥ ಮಾಡಿಕೊಂಡು ಭಾಷಣ ಮಾಡುವುದನ್ನು ರೂಡಿಸಿಕೊಳ್ಳಬೇಕು. ಕೋಟಿ ಚೆನ್ನಯ್ಯ ಹೆಸರನ್ನು ಭಾಷಣದಲ್ಲಿ ಬಳಕೆ ಮಾಡುವಾಗ ನೂರು ಬಾರಿ ಯೋಚಿಸಬೇಕು. ಬಿಲ್ಲವರಿಗೆ ಮತ್ತು ಎಲ್ಲಾ ಹಿಂದುಳಿದ ವರ್ಗಗಳಿಗೆ ಕೃಷಿ ಭೂಮಿಯನ್ನು ನೀಡಿದ ಉಳುವವನೇ ಹೊಲದೊಡೆಯ ಕಾನೂನಿಗೆ ಬಹುಶಃ ಈ ಕೋಟಿ ಚೆನ್ನಯ್ಯರಂತಹ ಮಹಾತ್ಮರ ಬದುಕೇ ಪ್ರೇರಣೆಯೇನೊ! ಕೋಟಿ ಚೆನ್ನಯ್ಯರು ಚೈತ್ರ ಕುಂದಾಪುರ ಹೇಳಿದಂತೆ ತಲವಾರು ಹಿಡಿದಿಲ್ಲ. ಅವರು ಬಳಸಿದ್ದು ಸುರಿಯಾ. ಅವರು ಸುರಿಯಾ ಬಳಸಿದ್ದು ಯಾವುದೇ ಅಮಾಯಕರ ವಿರುದ್ದವೂ ಅಲ್ಲ, ದ್ವೇಷ ಸಾಧನೆಗಾಗಿಯೂ ಅಲ್ಲ. ಬಲ್ಲಾಳರು ತನಗಾಗಿ ನೀಡಿದ್ದ ಕೃಷಿ ಭೂಮಿಯನ್ನು ಉಳಿಸಿಕೊಳ್ಳಲು ಜಮೀನ್ದಾರರ ವಿರುದ್ದ ಸುರಿಯಾ ಬಳಸಿದರು. ಉಳುವವನೇ ಹೊಲದೊಡೆಯ ಎಂಬ ಆಶಯದ ಜಾರಿಗಾಗಿ ಆಗಿನ ಕಾಲದಲ್ಲೇ ಹೋರಾಡಿದ್ದ ಕೋಟಿಚೆನ್ನಯ್ಯರನ್ನು ಈಗಿನ ಹೊಲಸು ರಾಜಕೀಯ ದ್ವೇಷ ಸಾಧನೆಗೆ ಬಳಸಿದ್ದು ತುಳುನಾಡಿನ ಆರಾಧ್ಯ ದೈವವನ್ನು ಅವಮಾನ ಮಾಡಿದ್ದಲ್ಲದೆ ಇನ್ನೇನು ಅಲ್ಲ.

ಸುರತ್ಕಲ್ ಪ್ರದೇಶದ ಪೌರಾಣಿಕ, ಜನಪದ ಇತಿಹಾಸ ಮತ್ತು ಚಾರಿತ್ರಿಕ ಇತಿಹಾಸ ತಿಳಿದಿರುವ ಯಾರೂ ಕೂಡಾ ಚೈತ್ರ ಕುಂದಾಪುರ ಹೇಳಿದಂತೆ ಧರ್ಮ ರಕ್ಷಣೆಗಾಗಿ ರೌಡಿಸಂ ಮಾಡಲ್ಲ ಮತ್ತು ಅಮಾಯಕ ಮುಸ್ಲಿಂ ಮಹಿಳೆಯರನ್ನು ಗುರಿಯಾಗಿಸಲು ಸಾಧ್ಯವೇ ಇಲ್ಲ.

– ನವೀನ್ ಸೂರಿಂಜೆ