ಕನಯ್ಯ ಕುಮಾರ್ ಗೆ ಸಿಕ್ಕ ಪ್ರಾಮುಖ್ಯತೆ ಜಿಗ್ನೇಶ್ ಮೇವಾನಿಗೆ ಯಾಕಿಲ್ಲ ?

ಇಂದು ಪ್ರಖ್ಯಾತ ಯುವ ನಾಯಕನೆಂದು ಕರೆಸಿಕೊಳ್ಳುವ ಕನಯ್ಯ ಕುಮಾರ್ ಹೆಸರುವಾಸಿಯಾಗಿದ್ದು 9 ಫೆಬ್ರವರಿ 2016 ಜೆಏನ್ ಯುದಲ್ಲಿ ನಡೆದ ಘಟನೆಯಿಂದಾಗಿ. ಆಗ ಕನಯ್ಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷನಾಗಿದ್ದ. ಆತ ಮುಗ್ಧ. ಆತನ ಮೇಲೆ ಇಲ್ಲಸಲ್ಲದ ಆರೋಪಗಳನ್ನ ಮಾಡಿ ಈ ವಿವಾದಗಳಿಗೆ ಎಳೆದುತರಲಾಗಿದೆಯೆಂದು ಎಡಪಂಥಿಯ ಲಿಬರಲ್ ಮೀಡಿಯಾದವರು ಅನುಕಂಪ ವ್ಯಕ್ತಪಡಿಸಿದ್ದರು. ಲೆಫ್ಟ್ ಲಿಬರಲ್ ದೃಶ್ಯ ಮಾಧ್ಯಮಗಳು ಕೊಟ್ಟ ನಿರಂತರ ಪ್ರಚಾರದಿಂದ ಕನಯ್ಯಗೆ ಭಾರತೀಯ ರಾಜಕೀಯ ರಂಗದ ಬಾಗಿಲುಗಳು ತೆರೆದುಕೊಂಡವು. ಸಾವಿರಾರು ವೇದಿಕೆಗಳಿಗೆ ಆತನನ್ನು ಆಹ್ವಾನಿಸಲಾಯಿತು. ಅತ್ಯತ್ತಮ ವಾಗ್ಮಿ, ಭವಿಷ್ಯದ ನಾಯಕನೆಂದು ಮೆರೆಸಲಾಯಿತು.

ಜೆಏನ್ ಯು ಘಟನೆಯ ನಂತರ, ವಿದ್ಯಾರ್ಥಿ ಸಂಘಟನೆಯ ನಾಯಕನಾಗಿ ಕನಯ್ಯ “ ಆಜಾದಿ” ಘೋಷಣೆಯನ್ನ ಜನಪ್ರಿಯಗೊಳಿಸಿದ. ಸಾಕಷ್ಟು ಬಿಜೆಪಿ ಮುಖಂಡರ ಜೊತೆ ಹಲವಾರು ಚರ್ಚೆಗಳಲ್ಲಿ ಭಾಗವಹಿಸಿದ. ಜೆಏನ್ ಯು ಘಟನೆಯ ಇನೊಬ್ಬ ಆರೋಪಿ ಉಮರ್ ಖಾಲಿದ್ ಕುರಿತು ಭಾರತೀಯ ಮೀಡಿಯಾ ಬೇರೆಯದೇ ಅಪ್ರೋಚ್ ಅನುಸರಿಸಿತ್ತೆನ್ನುವುದು ಇಲ್ಲಿ ಗಮನಾರ್ಹ. ಖಾಲಿದ್ ಇಂದಿಗೂ ಬಲ ಪಂಥಿಯರ ಪ್ರಮುಖ ಟಾರ್ಗೆಟ್ ಆಗಿಯೇ ಉಳಿದಿದ್ದಾನೆ. ಮೀಡಿಯಾ ಮತ್ತು ಪ್ರಭುತ್ವ ಕನಯ್ಯ ಮತ್ತು ಉಮರ್ ನನ್ನ ನೆಡಸಿಕೊಂಡ ರೀತಿ ಹಾಗು ಅವರ ನಡುವಿನ ವ್ಯತ್ಯಾಸ, ಅವರ ವಿಭಿನ್ನ ಅಸ್ಮಿತೆಯಲ್ಲಿಯೇ ಇದೆ. ಕನಯ್ಯ ಮೇಲ್ಜಾತಿ ಹಿಂದೂ ಭೂಮಿಹಾರ ಸಮುದಾಯಕ್ಕೆ ಸೇರಿದರೆ, ಉಮರ್ ಒಬ್ಬ ಮುಸ್ಲಿಂ.

ಕನಯ್ಯ ಕುಮಾರ್ ತನ್ನ ಈ ಅಸ್ಮಿತೆಯನ್ನ ಹಲವು ಬಾರಿ ಮರೆಮಾಚಿದರು ಅಥವಾ ಅಷ್ಟಾಗಿ ಹೇಳಿಕೊಳ್ಳದಿದ್ದರು, ಬೇಗುಸರೈ ಚುನಾವಣೆ ವೇಳೆಯಲ್ಲಿ ಆತ ತನ್ನ ಮೇಲ್ಜಾತಿ ಹಿಂದೂ ಅಸ್ಮಿತೆಯೊಂದಿಗೆ ಗುರುತಿಸಿಕೊಳ್ಳುತ್ತಿದ್ದುದು ಸ್ಪಷ್ಟವಾಗಿತ್ತು. ಬೇಗುಸರೈ ಕ್ಷೇತ್ರದ ಪ್ರಬಲ ಪ್ರತಿಸ್ಪರ್ಧಿ ಗಿರಿರಾಜ್ ಸಿಂಗ್ ಕೂಡ ಭೂಮಿಹಾರ್ ಸಮುದಾಯಕ್ಕೆ ಸೇರಿದ್ದವರೇ. ಭೂಮಿಹಾರ್ ಸಮುದಾಯದ ರಾಜಕೀಯಕ್ಕೆ ಖ್ಯಾತವಾಗಿದ್ದ ಕ್ಷೇತ್ರದಿಂದ ಅದೇ ಸಮುದಾಯಕ್ಕೆ ಸೇರಿದವರ ನಡುವೆ ಹಣಾಹಣಿ ನಡೆಯಿತು. ಸ್ಥಳ ಮತ್ತು ನೆಲ ಮನುಷ್ಯನಲ್ಲಿ ಇಷ್ಟೆಲ್ಲಾ ಬದಲಾವಣೆಯನ್ನ ತರಬಹುದು!

2015-16ರಲ್ಲಿ ಜೆಏನ್.ಯು ಅಂಬೇಡ್ಕರ್ ವಾದದ ನೆರಳಿನಲ್ಲಿತ್ತು. ಹೈದರಬಾದ್ ವಿಶ್ವವಿದ್ಯಾಲಯದಲ್ಲಿ ಆತ್ಮಹತ್ಯೆಗೆ ಶರಣಾದ ರೋಹಿತ್ ವೇಮುಲರ ಘಟನೆಯನ್ನ ರಾಜಕೀಯಕ್ಕಾಗಿ ಕನಯ್ಯ ತುಂಬಾ ಚನ್ನಾಗಿಯೇ ಬಳಸಿಕೊಂಡರು. ದಬ್ಬಾಳಿಕೆಗೆ ಒಳಪಟ್ಟ, ದಮನಿತ ಸಮಾಜದ ವಿಷಯಗಳಲ್ಲಿ ಕುಮಾರ್ ತನ್ನನ್ನ ತಾನು ತೊಡಗಿಸಿಕೊಂಡ. ಶೋಷಿತರ ಬಗ್ಗೆ ಮಾತನಾಡುವವರಲ್ಲಿ ಅಗ್ರಗಣ್ಯನಾದ. ಮೀಡಿಯಾ ಕೂಡ ಈತನನ್ನ ಜಾತಿರಹಿತವಾಗಿಯೇ (casteless) ಬಿಂಬಿಸಿತು. ದಲಿತರ, ಶೋಷಿತರ, ದಮನಿತರ, ಹಿಂದುಳಿದ ವರ್ಗದವರ ರಾಜಕೀಯವನ್ನ, ದನಿಯನ್ನ ಮೇಲ್ಜಾತಿಯ ಕುಮಾರ್ ಸ್ವಾಧೀನಪಡಿಸಿಕೊಂಡಿದ್ದ, ತನ್ನದಾಗಿಸಿಕೊಂಡಿದ್ದ. ಹೀಗೆ ಸದಾ ವಂಚಿಸುವ ಮೇಲ್ಜಾತಿಯ ರಾಜಕೀಯ ಬಗ್ಗೆ ಯೋಚಿಸುವ ವ್ಯವಧಾನ ಭಾರತದಲ್ಲಾಗಲಿ ಜೆಏನ್ ಯುದಲ್ಲಾಗಲಿ ಇರಲಿಲ್ಲ.

ಬ್ರಾಹ್ಮಣವಾದಿ ಮೀಡಿಯಾಗಳು ನಿರ್ಲಜ್ಜ ರಾಜಕೀಯ
ಎಲ್ಲ ಮೇಲ್ಜಾತಿ ಮೀಡಿಯಾದವರು ಕನಯ್ಯಾನಿಗೆ ಅತಿಯಾಗಿ ಪ್ರಾಮುಖ್ಯತೆ ನೀಡಿದರೂ ಏನ್ ಡಿ ಟಿವಿಯ ಲಿಬರಲ್ ಪತ್ರಕರ್ತ ರವೀಶ್ ಕುಮಾರ್ ಒಂದು ಹೆಜ್ಜೆ ಮುಂದೆ ಹೋಗಿ ಕನಯ್ಯನಿಗೆ ವಿಶೇಷ ಗಮನ ನೀಡಿ ರಾತ್ರೋರಾತ್ರಿ ಸೆಲೆಬ್ರೆಟಿ ಮಾಡಿಬಿಟ್ಟ. ಜೆಏನ್ ಯು ವಿವಾದ ಸಮಯದಲ್ಲಿ ರವೀಶ್ ಕುಮಾರ್ ಕನಯ್ಯನಿಗೆ ಹೆಗಲಿಗೆ ಹೆಗಲು ಕೊಟ್ಟು ನಿಂತರೆ, 2019 ಬೇಗುಸರೈ ಚುನವಾಣೆ ವೇಳೆಗೆ ಅಲ್ಲಿಗೇ ಹೋಗಿ ಮೂರೂ ಬಾರಿ ಸುದೀರ್ಘ ಸಂದರ್ಶನ ನಡೆಸಿದ. ಶಿಥಿಲಾವಸ್ತೆಯಲ್ಲಿದ ಆತನ ಮನೆ, ಅಂಗನವಾಡಿಯಲ್ಲಿ ಕೆಲಸ ಮಾಡುವ ಕನಯ್ಯನ ತಾಯಿ, ಗಾರ್ಡ್ ಕೆಲಸ ಮಾಡುವ ಸಹೋದರನ ಕುರಿತು ವರದಿಗಳು ಪ್ರಸಾರ ಮಾಡಿದ. ರವೀಶ್ ಕುಮಾರ ಕನಯ್ಯನನ್ನು ಕೆಳವರ್ಗದ ಬಡ ಅಭ್ಯರ್ಥಿಯೆಂದು ಬಿಂಬಿಸಿ, ಭಾರತೀಯ ಚುನಾವಣ ಇತಿಹಾಸದಲ್ಲೇ ಇದೊಂದು ವಿಶಿಷ್ಟಗಳಿಗೆಯೆಂದು ಕೊಂಡಾಡಿದ. ಹಣಬಲ, ತೋಳ್ಬಲಗಳ ಸಹಾಯವಿಲ್ಲದೆ ಸ್ಪರ್ಧಿಸುತ್ತಿರುವುದು ವಿಶೇಷವೆಂದ. ಸಮಾಜದ ಅಂಚಿನಲ್ಲಿರುವವರ ನೇತಾರನೆಂದ.

ರವೀಶ್ ಕುಮಾರ್ ಸ್ವತಃ ಬಿಹಾರಕ್ಕೆ ಸೇರಿದ ಮೇಲ್ಜಾತಿಯವನು. ಆತ ಕನಯ್ಯನನ್ನು ಸುರಕ್ಷಿತ ಜಾಗದಲ್ಲಿ ಕುಳ್ಳಿರಿಸಿದ. ಮೇಲ್ಜಾತಿಯ ಸವಲತ್ತು ಮತ್ತು ಕನಯ್ಯನ ರಾಜಕೀಯದಲ್ಲಿ ಅದರ ಪ್ರಭಾವನ್ನ ತುಂಬ ಸುಲಭವಾಗಿ ಕಡೆಗಣಿಸಿ ಮರೆಮಾಚಿದ. ಭೂಮಿಹಾರ್ ಸಮುದಾಯಕ್ಕೆ ಸೇರಿದವರಿಗೆ ಬಿಹಾರದಲ್ಲಿ ಸಿಗುವ ಸ್ಥಾನ-ಮಾನಗಳ ಕುರಿತು ಚರ್ಚಿಸಲೇ ಇಲ್ಲ ಅಥವಾ ಅದನ್ನ ನಾಜೂಕಾಗಿ ಪಕ್ಕಕ್ಕೆ ಸರಿಸಿದ. ಐತಿಹಾಸಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಬೇಗುಸರೈ ಕ್ಷೇತ್ರದಲ್ಲಿ ಮೇಲ್ಜಾತಿ ಭೂಮಿಹಾರ್ ಸಮುದಾಯದವರ ಪ್ರಾಬಲ್ಯ ಕುರಿತು ಒಂದು ಪ್ರಶ್ನೆಯನ್ನೂ ಕೇಳಲಿಲ್ಲ. ಮೇಲ್ಜಾತಿಯಲ್ಲಿ ಹುಟ್ಟಿದ್ದರಿಂದ ಕನಯ್ಯನಿಗೆ ಸಿಕ್ಕ ಲಾಭಗಳ, ಅವಕಾಶಗಳ ಬಗ್ಗೆ ರವೀಶ್ ಮಾತಾನಾಡಲಿಲ್ಲ. ಎಲ್ಲ ಲಿಬರೆಲ್ಗಳಂತೆ ಕನಯ್ಯ ಕೂಡ ಜಾತಿರಹಿತನಾದ. ಆದರೆ ಕ್ಷೇತ್ರದ ಜನ ಜಾತಿಯ ಹೊರತಾಗಿ ಕನಯ್ಯನನ್ನು ಪರಿಗಣಿಸಿದರೆ?

28 ಸೆಪ್ಟೆಂಬರ್ 2021 ರಂದು ಕನಯ್ಯ ವಿಧ್ಯುಕ್ತವಾಗಿ ಕಾಂಗ್ರೆಸ್ ಪಾರ್ಟಿ ಸೇರಿದ. ಏನ್ ಡಿಟಿವಿ ಕನಯ್ಯನನ್ನು ವಿದ್ಯಾರ್ಥಿಗಳ ನಾಯಕನೆಂದು ಕರೆದರೆ, ಜಿಗ್ನೇಶ್ ಮೆವಾನಿಯನ್ನ ಗುಜರಾತ್ನ ದಲಿತ ನಾಯಕನೆಂದು ಕರೆಯಿತು. ಈ ಚಾನಲ್ ಚುನಾಯಿತ ಎಂಎಲ್ಎ ಮೆವಾನಿಯನ್ನ ದಲಿತ ಸಮುದಾಯಕ್ಕೆ ಸೇರಿದ ಪ್ರಾಂತೀಯ ನಾಯಕನೆಂದರೆ, ಕನಯ್ಯನನ್ನು ವಿದ್ಯಾರ್ಥಿ ನಾಯಕನೆಂದು ಹೆಸರಿಸಿ ಆತನ ಮೇಲ್ಜಾತಿಯ ಅಸ್ಮಿತೆಯನ್ನೇ ಮುಚ್ಚಿಹಾಕಿ ಅತನನ್ನ ಜಾತಿರಹಿತನನ್ನಾಗಿ ಮಾಡಿಬಿಟ್ಟಿತು.

ಸಮಾರೋಪ
2019ರ ಲೋಕಸಭಾ ಚುನಾವಣೆ ಕನಯ್ಯನನ್ನ ಜನನಾಯಕ, ಸಾಮಾಜಿಕ ನ್ಯಾಯದ ಹರಿಕಾರನೆಂದು ಬಿಂಬಿಸಲಾಯಿತು. ಎಡ ಪಂಥೀಯ ಬುದ್ದಿಜೀವಿಗಳು ಹಾಗು ಪತ್ರಕರ್ತರು ಕನಯ್ಯ ಕುಮಾರ್ನಂತವರು ಭಾರತೀಯ ರಾಜಕಾರಣಕ್ಕೆ ಅತ್ಯಾವಶ್ಯಕನೆಂದು ಜನರಿಗೆ ಪದೇ ಪದೆ ಹೇಳಿದರು. ಕಮ್ಯುನಿಸ್ಟ್ ಪಾರ್ಟಿಯಿಂದ ಆತ ಚುನಾವಣ ಕಣಕ್ಕಿಳಿದರಿಂದ ಪ್ರಶಂಸಿಸಲಾಯಿತು. ಆತ ತನ್ನ ಖ್ಯಾತಿಯನ್ನ ಬಳಸಿಕೊಂಡು ಕಳೆಗುಂದಿದ ಕಮ್ಯುನಿಸ್ಟ್ ಪಾರ್ಟಿಗೆ ಹೊಸ ಚೈತನ್ಯವನ್ನೂ ತುಂಬಿದ. ಚುನಾವಣೆ ವೇಳೆಯಲ್ಲಿ ರೋಟಿ ಹಾಗು ರೋಜ್ಗಾರ್ ಗಾಗಿ ಹೋರಾಟ ಮಾಡುತ್ತಿದೇನೆಂದು ಹೇಳಿದ. ಬೇರೆಲ್ಲ ಮೇಲ್ಜಾತಿ ನಾಯಕರಂತೆ, ಬಿಹಾರದ ಜಾತಿ ಆಧಾರಿತ ಶೋಷಣೆ ಕುರಿತು ಮಾತನಾಡಲಿಲ್ಲ. ಬಿಹಾರದಲ್ಲಿ ಬಹುಜನರ ಮೇಲೆ ಮೇಲ್ಜಾತಿ/ ಮತ್ತವನ ಜಾತಿಯವರೇ ನಡೆಸುವ ದೌರ್ಜನ್ಯಗಳ ಬಗ್ಗೆ ತನ್ನನ್ನ ತಾನು ಪ್ರಶ್ನಿಸಿಕೊಳ್ಳಲೆ ಇಲ್ಲ. ಆತನ ಚುನಾವಣ ಅಭಿಯಾನವೆಲ್ಲಾ ಮೋದಿಯವರಿಂದ ಉತ್ತರ ಕೇಳುವುದೇ ಆಗಿತ್ತು.

28 ಸೆಪ್ಟೆಂಬರಂದು ಆತ ಕಮ್ಯುನಿಸ್ಟನಾಗಿ ಉಳಿಯದೆ, ಗಾಂಧಿಯ ಅನುಯಾಯಿಯಾದ. ಕಾಂಗ್ರೆಸ್ ಸೇರ್ಪಡೆ ಸಮಯದಲ್ಲಿ ಮಾಡಿದ ಪತ್ರಿಕಾ ಗೋಷ್ಠಿಯಲ್ಲಿ ಗಾಂಧಿಯನ್ನ ಹಲವು ಬಾರಿ ಹಾಡಿ ಹೊಗಳಿದ. ಅಂಬೇಡ್ಕರ್, ಭಗತ್ ಸಿಂಗ್ ನಾಮಕಾವಸ್ತೆ ಭಾಷಣದಲ್ಲಿ ಬಂದು ಹೋದರು. ಹೀಗೆ ಕನಯ್ಯ ಸಂಪೂರ್ಣ ಗಾಂಧಿವಾದಿಯಾದ. ಕಮ್ಯುನಿಸ್ಟ್ ಪಾರ್ಟಿ ನಿಧಾನ ಗತಿಯಲ್ಲಿ ಕೆಲಸ ಮಾಡುತ್ತದೆ ಅದಕ್ಕೆ ಕಾಂಗ್ರೆಸ್ ಪಾರ್ಟಿಗೆ ಸೇರಿದೆನೆಂದ.

ಕನಯ್ಯ ಕಾಂಗ್ರೆಸ್ ಪಾರ್ಟಿಯಲ್ಲಿ ಯಾವ ಯಾವ ಬದಲಾವಣೆ ತರುತ್ತಾನೋ ಅದನ್ನ ಈಗಲೇ ಊಹಿಸುವುದು ಕಷ್ಟ. ಒಳಕಿತ್ತಾಟ, ಅಸೂಯೆಯ ಗೂಡಾಗಿರುವ ಕಾಂಗ್ರೆಸ್ ಪಾರ್ಟಿಯ ಹಿರಿಯ ನಾಯಕರು ಕನಯ್ಯ ವಿರುದ್ಧ ಅಸಮಾದಾನ ಹೊರಹಾಕಿ ಮತ್ತಷ್ಟು ಕಾಂಗ್ರೆಸ್ನ ಕುಸಿಯಲು ಕಾರಣನಾಗುವನೋ ಕಾದುನೋಡಬೇಕು. ಕಮ್ಯುನಿಸ್ಟ್ ಪಾರ್ಟಿ ತನ್ನ ತೆಳುವಾದ ಸಿದ್ದಾಂತಗಳನ್ನ, ಸದಾ ಅಲುಗಾಡುವ ನಾಯಕತ್ವ ಬಗ್ಗೆ ಗಮನಹರಿಸಬೇಕು. ಒಂದಂತೂ ಸತ್ಯ ಕನಯ್ಯ ಕುಮಾರನ ಮೇಲ್ಜಾತಿ ಭೂಮಿಹಾರ್ ಹಿನ್ನಲೆ, ಮೀಡಿಯಾ ಬೆಂಬಲ ಆತನ ರಾಜಕೀಯ ಯಾನವನ್ನ ನಿರ್ವಿಘ್ನವಾಗಿಸಿದೆ. ಸಮಾಜದ ಅಂಚಿನಿಂದ ಬರುವವರ, ದಮನಿತರ ರಾಜಕೀಯ ಯಾನ ಎಂದಿಗೂ ಇಷ್ಟು ಸಲೀಸಾಗಿರದು.

ಬರಹ: ವಿಕಾಸ್ ಕುಮಾರ್ ( ದಲಿತ ಸಂಶೋಧನಾ ವಿದ್ಯಾರ್ಥಿ, ಐತಿಹಾಸಿಕ ಅಧ್ಯಯನ ಕೇಂದ್ರ. ಜೆಏನ್ ಯು

ಅನುವಾದ: ಹರೀಶ್ ಎಂ )