*ಉಳ್ಳಾಲ ಯು.ಜಿ.ಡಿ (ಒಳಚರಂಡಿ) ಕಾಮಗಾರಿ ಡಿಸೆಂಬರ್ ಅಂತ್ಯದೊಳಗೆ ಮುಗಿಸಲು ನಿರ್ಧಾರ : ಯು.ಟಿ.ಖಾದರ್*

ಉಳ್ಳಾಲ ಯು.ಜಿ.ಡಿ (ಒಳಚರಂಡಿ) ಕಾಮಾಗಾರಿಗೆ ಸಂಬಂಧಿಸಿದಂತೆ,ಒಳಚರಂಡಿ ಕಾಮಾಗಾರಿಗೆ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಇಂದು ಇದರ ಸಾಧಕ ಭಾದಕಗಳ ಬಗ್ಗೆ ಚರ್ಚೆ ನಡೆಸಲು ನಗರಾಭಿವೃದ್ಧಿ ಸಚಿವರಾದ ಬೈರತಿ ಬಸವರಾಜ್ ನೇತೃತ್ವದಲ್ಲಿ ವಿಧಾನ ಸೌಧದಲ್ಲಿ ಸಭೆ ಕರೆಯಲಾಗಿತ್ತು.

ಸಭೆಯಲ್ಲಿ ಸದರಿ ಯೋಜನೆಯಡಿ ನಿರ್ಮಿಸಲಾಗುತ್ತಿರುವ 6.60 ಎಂ.ಎಲ್.ಡಿ ಸಾಮರ್ಥ್ಯದ ಮಲಿನ ನೀರು ಶುದ್ಧೀಕರಣ ಘಟಕದಲ್ಲಿ ಐ.ಐ.ಟಿ ಮುಂಬೈ ಪೇಟೆಂಟ್ ಪಡೆದಿರುವ (Soil Bio Technology-SBT) ತಂತ್ರಜ್ಞಾನವನ್ನು ಅಳವಡಿಸಲಾಗಿದೆ ಎಂಬುದಾಗಿ ಸಂಬಂಧಪಟ್ಟ ಅಧಿಕಾರಿಗಳು ವಿವರಿಸಿದರು.

ಉಳ್ಳಾಲಕ್ಕೆ ಒಳಚರಂಡಿಯ ಅವಶ್ಯಕತೆಯ ಬಗ್ಗೆ ಮಾತನಾಡಿದ *ಮಾಜಿ ಸಚಿವ ಶಾಸಕ ಖಾದರ್ ರವರು*, ಒಳಚರಂಡಿ ಅನುಷ್ಠಾನ ಆಗದೇ ಇದ್ದಲ್ಲಿ ಮುಂದೊಂದು ದಿನ ಉಳ್ಳಾಲ ಅಘೋಷಿತ ಕೊಳಗೇರಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ,ಈಗಾಗಲೇ ಬಹುಮಹಡಿ ಕಟ್ಟಡಗಳು ಹೊರಬಿಡುವ ಕಲುಷಿತ ನೀರಿನಿಂದಾಗಿ ಜನರ ಮಧ್ಯೆ ವೈಮನಸ್ಸು ಸಮಸ್ಯೆಗಳಾದ ಅನೇಕ ನಿದರ್ಶನಗಳಿವೆ.ಆದುದರಿಂದ ಉಳ್ಳಾಲದ ಅಭಿವೃದ್ಧಿ ಹಾಗೂ ಸ್ವಚ್ಛತೆಯ ದೃಷ್ಟಿಯಲ್ಲಿ ಆದಷ್ಟು ಬೇಗನೇ ಕಾಮಾಗಾರಿ ಪೂರ್ಣಗೊಳಿಸಬೇಕೆಂದು ಒತ್ತಾಯಿಸಿದರು.ಇದಕ್ಕೆ ಸಹಮತ ವ್ಯಕ್ತಪಡಿಸಿದ ಸಭೆಯಲ್ಲಿ ನೆರೆದಿದ್ದ ಇತರ ಸದಸ್ಯರು ಪ್ರತೀ ನಗರಕ್ಕೂ ಒಳಚರಂಡಿ ವ್ಯವಸ್ಥೆಯ ಅತೀ ಅಗತ್ಯವಿರುವುದಾಗಿಯೂ ಸುಸಜ್ಜಿತ ರೀತಿಯಲ್ಲಿ ಕಾಮಗಾರಿ ನಡೆಸಲು ಸಲಹೆ ನೀಡಿದರು.

*ವಿಧಾನ ಪರಿಷತ್ ಸದಸ್ಯರಾದ ಬಿ.ಎಮ್.ಫಾರೂಕ್ ರವರು ಮಾತನಾಡಿ ಉಳ್ಳಾಲದ ಅಭಿವೃದ್ಧಿಗೆ ಒಳಚರಂಡಿಯ ಅವಶ್ಯಕತೆಯಿದೆ,ಆದರೆ ಕೈಕೋ ಪ್ರದೇಶದಲ್ಲಿ ನಿರ್ಮಿಸಲಾಗುವ ವೆಟ್ ವೆಲ್ ನ್ನು ಬೇರೆ ಸ್ಥಳಕ್ಕೆ ವರ್ಗಾಯಿಸಬೇಕೆಂದು* ಕೋರಿದಾಗ ವೆಟ್ ವೆಲ್ ಜಾಗವನ್ನು ಸ್ಥಳಾಂತರಿಸಲು ಯಾವುದೇ *ತಾಂತ್ರಿಕ ಅಡಚಣೆಯಾಗದೇ ಇದ್ದಲ್ಲಿ ಸ್ಥಳಾಂತರಿಸಲು ನನ್ನದೇನು ಅಭ್ಯಂತರವಿಲ್ಲ ಎಂದು ಯು.ಟಿ.ಖಾದರ್ ತಿಳಿಸಿದರು.* ಈ ಬಗ್ಗೆ ಪ್ರತಿಕ್ರಿಯಿಸಿದ ನಗರಾಭಿವೃದ್ದಿ ಸಚಿವರು ಸ್ಥಳ ಬದಲಾವಣೆಯ ಸಾಧ್ಯತೆಯ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಸಭೆಯಲ್ಲಿದ್ದ ವಿಧಾನ ಪರಿಷತ್ ಸದಸ್ಯರುಗಳಾದ ಬೋಜೇಗೌಡ್ರು,ಮರಿತಿಬ್ಬೇಗೌಡ್ರು,ತಿಮ್ಮೇಗೌಡ್ರು ಹಾಗೂ ನಝೀರ್ ಅಹ್ಮದ್ ರವರು ಮಾತನಾಡಿ ಬೆಳೆಯುತ್ತಿರುವ ನಗರ ಪ್ರದೇಶಕ್ಕೆ ಒಳಚರಂಡಿಯ ವ್ಯವಸ್ಥೆಯು ಬಹಳ ಅಗತ್ಯ ಇದ್ದು ಕಾಮಾಗಾರಿಯ ಗುಣಮಟ್ಟವನ್ನು ಸಂಬಂಧಪಟ್ಟ ಇಲಾಖೆ ಹಾಗೂ ಅಧಿಕಾರಿಗಳು ಕೂಲಂಕೂಷವಾಗಿ ಪರಿಶೀಲಿಸಬೇಕು,ಕಳಪೆ ಕಾಮಗಾರಿ ನಡೆಸುವ ಗುತ್ತಿಗೆದಾರರನ್ನು ಬ್ಲಾಕ್ ಲಿಸ್ಟ್ ಗೆ ಒಳಪಡಿಸಬೇಕೆಂದು ಒತ್ತಾಯಿಸಿದರು.

ಬಂಡಿಕೊಟ್ಯದಲ್ಲಿ ನಿರ್ಮಾಣವಾಗುತ್ತಿರುವ ವೆಟ್ ವೆಲ್ ಜಾಗದ ಮೂಲ ವಾರಸುದಾರರಿಗೆ ಸರಕಾರದಿಂದ ಇನ್ನೂ ಕೂಡಾ ಮೊತ್ತ ಪಾವತಿಯಾಗದ ಹಿನ್ನಲೆಯಲ್ಲಿ ಶಾಸಕ ಯು.ಟಿ.ಖಾದರ್ ರವರು ನಗರಾಭಿವೃದ್ದಿ ಸಚಿವರಲ್ಲಿ ವಿವರಿಸಿದ್ದು ಈ ಬಗ್ಗೆ ತಕ್ಷಣ ಅಗತ್ಯ ಕ್ರಮ ಕೈಗೊಂಡು ಮೂಲ ವಾರಸುದಾರರಿಗೆ ಹಣ ಪಾವತಿಸಬೇಕೆಂದು ತಾಕೀತು ನೀಡಿದರು.