ಅಲ್ಪಸಂಖ್ಯಾತ ಇಲಾಖೆಗೆ
ಮಲತಾಯಿ ಧೋರಣೆ: ಸರಕಾರದ ವಿರುದ್ಧ ಫಾರೂಕ್ ಆಕ್ರೋಶ

ಬೆಂಗಳೂರು: “ಅಲ್ಪಸಂಖ್ಯಾತರ ವಿರುದ್ಧ ರಾಜ್ಯ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಅಲ್ಪಸಂಖ್ಯಾತ ಇಲಾಖೆಗಳಿಗೆ ಅನುದಾನ ತೀವ್ರ ಕಡಿತ ಮಾಡಲಾಗಿದೆ. ನಿಮಗೆ ಅಲ್ಪಸಂಖ್ಯಾತರ ಮೇಲೆ ಏಕೆ ಇಷ್ಟು ದ್ವೇಷ?” ಎಂದು ಜೆಡಿಎಸ್ ಸದಸ್ಯ ಬಿಎಂ ಫಾರೂಕ್ ಗುರುವಾರ ವಿಧಾನ ಪರಿಷತ್ತಿನಲ್ಲಿ ಸರಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

“ಕೇಂದ್ರದ ಮೋದಿ ನೇತೃತ್ವದ ಸರಕಾರ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ೧೫ ಅಂಶಗಳ ಕಾರ್ಯಕ್ರಮ ಪ್ರಕಟಿಸಿದೆ. ನೀವು ಒಂದಾದರೂ ಸಭೆ ಕರೆದಿದ್ದೀರಾ? ಏನಾದರೂ ಕಾರ್ಯಕ್ರಮ ಜಾರಿಗೆ ತಂದಿದ್ದಾರಾ? ನಮ್ಮ ರಾಜ್ಯದ 2 ಸದನದಲ್ಲಿ ಕೆಳಮನೆ ಮತ್ತು ಮೇಲ್ಮನೆ ಸೇರಿ ಸುಮಾರು 300 ಶಾಸಕರಿದ್ದಾರೆ. ಅದರಲ್ಲಿ 7 ಜನ ಕೆಳಮನೆ ಸದಸ್ಯರು 3 ಜನ ಮೇಲ್ಮನೆ ಸದಸ್ಯರು. ಒಟ್ಟಾಗಿ 300 ರಲ್ಲಿ ಕೇವಲ 10 ಶಾಸಕರು ಮಾತ್ರ ಇದ್ದಾರೆ. ಅದು ಕೇವಲ ಶೇ 10 ರಷ್ಟು ಕೂಡ ಇಲ್ಲ. ಯಾವ ಶಾಸಕರನ್ನು ನೀವು 15 ಅಂಶಗಳ ಅಲ್ಪಸಂಖ್ಯಾತರ ಅಭಿವೃದ್ಧಿ, ಕಲ್ಯಾಣಕ್ಕಾಗಿ ಈ ಯೋಜನೆಯನ್ನು ಕಾರ್ಯಗತಗೊಳಿಸುವ ಸಭೆಗಾಗಿ ಕರೆದಿದ್ದೀರಾ? ನಾನೀಗ ಶಾಸಕನಾಗಿ 3 ವರ್ಷಗಳಾಗುತ್ತಾ ಬಂತು,ಜಿಲ್ಲಾಡಳಿತ ಆಗಲಿ ಡಿ. ಸಿ. ಆಗಲಿ ನನ್ನನ್ನು ಒಂದು ಸಲ ಕೂಡ ಸಭೆಗಾಗಿ ಕರೆದಿಲ್ಲ. ರಾಜ್ಯದ 11 ನಗರಪಾಲಿಕೆ ವ್ಯಾಪ್ತಿಗಳಲ್ಲಿ ಎಷ್ಟು ಸ್ಲಂಗಳಿವೆ? ಅಲ್ಲಿ ಎಷ್ಟು ಮುಸ್ಲಿಮರು, ದಲಿತರು, ಕ್ರಿಶ್ಚಿಯನ್ಬರು ಇದ್ದಾರೆ ಗೊತ್ತಾ? ನಿಮ್ಮಲ್ಲಿ ಅಂಕಿ ಅಂಶ ಇದೆಯಾ? ಬಹುತೇಕ ಸ್ಲಂಗಳಲ್ಲಿ ಇವರೇ ಇರೋದು. ಸ್ಲಂ ಅಭಿವೃದ್ಧಿಗೆ ಹಣ ಖರ್ಚು ಮಾಡಲಾಗಿದೆ ಎಂದು ಸಚಿವರು ಉತ್ತರ ನೀಡಿದ್ದಾರೆ. ಎಷ್ಟು ಖರ್ಚು ಮಾಡಿದ್ದೀರಿ? ಖರ್ಚಾಗಿದ್ದರೆ ಅವರೇಕೆ ಇನ್ನೂ ಸ್ಲಂನಲ್ಲಿದ್ದಾರೆ?” ಎಂದು ಫಾರೂಕ್ ಪ್ರಶ್ನಿಸಿದರು.

” ಮುಖ್ಯಮಂತ್ರಿಯವರಿಗೆ ಈ ಇಲಾಖೆಯತ್ತ ನೋಡಲು ಪುರುಸೊತ್ತಿಲ್ಲ. ದಯವಿಟ್ಟು ಆ ಇಲಾಖೆಗೆ ಒಬ್ಬ ಅಲ್ಪಸಂಖ್ಯಾತ ಸಮುದಾಯದವರನ್ನು ಮಂತ್ರಿ ಮಾಡಿ. ನಿಮ್ಮ ಪಕ್ಷದಲ್ಲಿ ಅಬ್ದುಲ್ ಅಜೀಮ್ ರಂತಹ ದಕ್ಷರಿದ್ದಾರೆ.ಹಿರಿಯ ಸಚಿವರಾದ ಈಶ್ವರಪ್ಪ ನವರು ನಿನ್ನೆಯ ಪತ್ರಿಕೆಯಲ್ಲಿ ಹೇಳಿಕೆ ನೀಡಿ ನಮ್ಮ ಪಕ್ಷದಲ್ಲಿರುವ ಮುಸಲ್ಮಾನರು ದೇಶಭಕ್ತರೆಂದು ಹೇಳಿದ್ದಾರೆ ಅವರನ್ನಾದರೂ ಮಾಡಿ ಅಥವಾ ಮುಸ್ಲಿಮರು ಇಷ್ಟವಿಲ್ಲವೆಂದರೆ ಒಬ್ಬ ಜೈನರನ್ನೋ, ಬೌದ್ಧರನ್ನೋ ಸಚಿವರನ್ನಾಗಿ ಮಾಡಿ” ನಿಮ್ಮಲ್ಲಯೇ ಇರುವ ಮುಸಲ್ಮಾನರನ್ನು ಮಂತ್ರಿ ಮಾಡಿ ಕಾಂಗ್ರೆಸ್ ಅಥವಾ ಜೆಡಿಎಸ್ ಪಕ್ಷದವರನ್ನು ತಂದು ಮಂತ್ರಿ ಮಾಡುವುದು ಬೇಡ ಎಂದು ಫಾರೂಕ್ ರವರು ಹೇಳಿದರು. ಈ ಹಿಂದೆ ಸಿದ್ದಾರಾಮಯ್ಯನವರ ನೇತೃತ್ವದ ಸರ್ಕಾರದ ಅವಧಿಯಲ್ಲಿ ಸುಮಾರು 165 ಕೋಟಿ ಖರ್ಚು ಮಾಡಿ 2 ಲಕ್ಷದ 65 ಸಾವಿರ ಸರ್ಕಾರಿ ನೌಕರರು ಹಾಗೂ ಸಿಬ್ಬಂದಿಯವರು ಹಗಲಿರಲು ದುಡಿದು ಸಿದ್ದಪಡಿಸಿದ ಜಾತಿಗಣತಿಯ ಸಮೀಕ್ಷೆ ಪ್ರಕಾರ ಈ ರಾಜ್ಯದಲ್ಲಿ ಸುಮಾರು 70 ಲಕ್ಷ ಮುಸಲ್ಮಾನರು ಅಂದರೆ ಶೇ 16 ರಷ್ಟಿದ್ದಾರೆಂದು ಪ್ರಜಾವಾಣಿ ಹಾಗೂ ಇನ್ನಿತರ ಪತ್ರಿಕೆಯು ಪ್ರಕಟಿಸಿತ್ತು. ಈ ಅಧಿವೇಶನದಲ್ಲಿ ಯಾತಾಕ್ಕಾಗಿ ಜಾತಿ ಗಣತಿಯ ವರದಿಯನ್ನು ಮಂಡಿಸಿಲ್ಲ. ಸರ್ಕಾರ ಎಲ್ಲಾ ಸಮುದಾಯದವರನ್ನು ಒಂದೇ ತಾಯಿಯ ಮಕ್ಕಳಂತೆ ಕಾಣಬೇಕೆಂದು ತಿಳಿಸಿದರು. ಫಾರೂಕ್ ಅವರ ಆಕ್ರೋಶವನ್ನು ತಣಿಸಲು ಯತ್ನಿಸಿದ ಸಚಿವ ಮಾಧುಸ್ವಾಮಿ, ಶೀಘ್ರವೇ 15 ಅಂಶಗಳ ಕಾರ್ಯಕ್ರಮ ಜಾರಿಗೆ ತರಲು ಅಗತ್ಯ ಅನುದಾನವನ್ನು ಬಿಡುಗಡೆ ಮಾಡಲು, ಇಲಾಖೆ, ನಿಗಮದಲ್ಲಿ ಖಾಲಿ ಇರುವ ನೌಕರರ ಹುದ್ದೆಯನ್ನು ತುಂಬಲಾಗುವುದು ಅಲ್ಲದೆ ಈ ಬಗ್ಗೆ ಚರ್ಚಿಸಲು ಶಾಸಕರ ಮತ್ತು ಅಧಿಕಾರಿಗಳ ಸಭೆ ಕರೆಯುವುದಾಗಿ ಭರವಸೆ ನೀಡಿದರು.