ಮಾನ್ಯ ಸಭಾಪತಿಗಳೇ

ಕೆಎಂಡಿಸಿ -ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ದುಃಸ್ಥಿತಿಯ ಬಗ್ಗೆ ಸರ್ಕಾರದ ಗಮನ ಸೆಳೆಯಲು ನಾನು ಬಯಸುತ್ತಿದ್ದೇನೆ. ಸರ್ಕಾರ ಈ ಸಂಸ್ಥೆಯನ್ನು ನಿಧಾನವಾಗಿ ವಿಷಪ್ರಾಶನ ಮಾಡಿ ಕೊಲ್ಲಲು ಯತ್ನಿಸುತ್ತಿದೆ ಎನ್ನುವ ಅನುಮಾನ ನನ್ನದು. ಇದನ್ನು ಬಹಳ ವಿಷಾದ ಮತ್ತು ದುಃಖದಿಂದ ಹೇಳುತ್ತಿದ್ದೇನೆ. ರಾಜ್ಯದಲ್ಲಿರುವ ಅಲ್ಪಸಂಖ್ಯಾತ ಧರ್ಮದ ಬಡವರು ಬದುಕುವುದೇ ಬೇಡ ಎಂದು ನಿಮ್ಮ ಸರ್ಕಾರ ನಿರ್ಧರಿಸಿದೆಯಾ? ಈ ರಾಜ್ಯದಲ್ಲಿ ಮುಸ್ಲಿಮರು, ಕ್ರೈಸ್ತರು, ಜೈನರು, ಬೌದ್ಧ ಧರ್ಮೀಯರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಅವರಲ್ಲಿ ಬಡವರು ಇಲ್ಲವೆ? ಎಲ್ಲ ರೀತಿಯಲ್ಲೂ ಹಿಂದುಳಿದಿರುವ ಈ ಬಡವರ ಮಕ್ಕಳು ಶೈಕ್ಷಣಿಕವಾಗಿ ಮುಂದೆ ಬರುವುದು ಬೇಡವೆ? ಸರ್ಕಾರ ಈ ಸಂಸ್ಥೆಯನ್ನು ಕೊಲ್ಲಲು ಯತ್ನಿಸುತ್ತಿದೆ ಎಂದು ಸುಮ್ಮನೇ ಹೇಳುತ್ತಿಲ್ಲ. ೨೦೧೬ರಿಂದ ಈ ಸಂಸ್ಥೆಗೆ ಸರ್ಕಾರ ಕೊಡುತ್ತಿರುವ ಅನುದಾನವನ್ನು ನೋಡಿದರೆ ಮತ್ತು ಇಲ್ಲಿ ತೀವ್ರವಾಗಿ ಕಡಿಮೆ ಮಾಡುತ್ತಿರುವ ಸಿಬ್ಬಂದಿ ಸಂಖ್ಯೆಯನ್ನು ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ.

ಜಿಲ್ಲಾ ಕಚೇರಿಗಳಲ್ಲೂ ಹೀಗೆಯೇ ಆಗಿದೆ. ಸಿಬ್ಬಂದಿ ಇಲ್ಲ. ಬಡವರು ಅಲ್ಲಿಗೆ ಹೋದರೆ ಕೇಳುವವರಿಲ್ಲ. ಕೆಲವು ಜಿಲ್ಲಾ ಕಚೇರಿಗಳಲ್ಲಿ ಕಸ ಗುಡಿಸಲೂ ನೌಕರರಿಲ್ಲ. ಬಡವರು ದುಡಿದು ತಿನ್ನಲು ಒಂದು ಪುಟ್ಟ ಸಾಲಕ್ಕಾಗಿ ಅರ್ಜಿ ಹಿಡಿದು ಅಲ್ಲಿ ಸಿಬ್ಬಂದಿಗಳ ಬರುವಿಕೆಗೆ ವಾರಗಟ್ಟಳೆ ಕಾದು ಕುಳಿತಿರುವುದೂ ಇದೆ. ಎಲ್ಲ ಜಿಲ್ಲೆಗಳಲ್ಲಿ ಒಟ್ಟು ಸ್ಯಾಂಕ್ಷನ್ ಆಗಿರುವ ಪೋಸ್ಟ್‌ಗಳು ಒಟ್ಟು ೪೮ ಇದೆ. ಆದರೆ ಪರ್ಮನೆಂಟ್ ಅಂತ ಇರುವುದು ಮೂರು ಜನ ಮಾತ್ರ! ೩೦ ಜನರನ್ನು ಔಟ್‌ಸೋರ್ಸ್ ಮಾಡಿ ನೇಮಿಸಲಾಗಿದೆ. ೧೫ ಜನ ಡೆಪ್ಯುಟೇಶನ್ ನಲ್ಲಿದ್ದಾರೆ. ಅದೂ ಸಾಲವುದಿಲ್ಲ. ಇದೊಂದು ಸರ್ಕಾರಿ ಕಚೇರಿ ಅಂತ ಹೇಳುವುದಕ್ಕೇ ನಾಚಿಕೆ ಆಗುವಂತಹ ಪರಿಸ್ಥಿತಿ ಅಲ್ಲಿದೆ.

೨೦೧೬-೧೭ ರಲ್ಲಿ ಸರ್ಕಾರ ಈ ನಿಗಮಕ್ಕೆ ೨೩೫.೯೭ ಕೋಟಿ ರೂಪಾಯಿ ಖರ್ಚು ಮಾಡಿತ್ತು. ೧೭-೧೮ ರಲ್ಲಿ ಇದನ್ನು ೨೭೪ ಕೋಟಿ ರೂಪಾಯಿಗೆ ಏರಿಸಲಾಗಿತ್ತು. ಆದರೆ ಬಳಿಕ ಇದನ್ನು ಪ್ರತಿ ವರ್ಷ ಕಡಿಮೆ ಮಾಡುತ್ತಾ ಬರಲಾಗಿದೆ. ೧೮-೧೯ ರಲ್ಲಿ ೨೫೦ ಕೋಟಿಗೆ ಇಳಿಸಲಾಯಿತು. ೧೯-೨೦ ರಲ್ಲಿ ೧೯೭ ಕೋಟಿಗೆ ಇಳಿಕೆ ಮಾಡಲಾಯಿತು. ಕಳೆದ ವರ್ಷ ಅಂದರೆ ೨೦೨೦-೨೧ ರಲ್ಲಿ ಸರ್ಕಾರ ಕೊಡುವ ಹಣವನ್ನು ತೀರಾ ಕಡಿಮೆ ಅಂದರೆ, ಕೇವಲ ೫೪.೭೨ ಕೋಟಿಗೆ ಇಳಿಸಲಾಗಿದೆ. ಇದರ ಅರ್ಥ ಏನು? ಮುಂದಿನ ವರ್ಷ ಪೂರ್ತಿ ನಿಲ್ಲಿಸಿ ಅಂಗಡಿ ಬಂದ್ ಮಾಡುವ ಆಲೋಚನೆ ಇದೆಯಾ?

ಈ ನಿಗಮದಿಂದ ಮುಸ್ಲಿಂ, ಕ್ರಿಶ್ಚಿಯನ್, ಜೈನ ಮತ್ತು ಬೌದ್ಧ ಧರ್ಮದ ಸಾವಿರಾರು ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಶಿಕ್ಷಣ ಮುಂದುವರಿಸಲು ತುಂಬಾ ಅನುಕೂಲ ಆಗುತ್ತಿತ್ತು. ಮುಖ್ಯವಾಗಿ ಇಲ್ಲಿ ವಿದ್ಯಾರ್ಥಿಗಳು ಅರಿವು ಯೋಜನೆಯ ಅಡಿ ಶಿಕ್ಷಣ ಸಾಲಕ್ಕೆ ಅರ್ಜಿ ಹಾಕುತ್ತಿದ್ದರು. ರಿಕ್ಷಾ ಚಾಲಕರು, ರಸ್ತೆ ಬದಿ ಮಾರಾಟಗಾರರು, ಸಣ್ಣ ಪುಟ್ಟ ಚಪ್ಪಲಿ ಅಂಗಡಿಯವರು, ಟೈಲರ್‌ಗಳು, ಟ್ಯಾಕ್ಸಿ ಓಡಿಸುವವರು ಈ ನಿಗಮದಿಂದ ಸಾಲ ಪಡೆದು ಒಂದು ಉದ್ಯೋಗ ಅಂತ ಮಾಡಿ ಹೇಗೋ ಜೀವನ ಸಾಗಿಸುತ್ತಿದ್ದರು. ೨೭೪ ಕೋಟಿ ಇದ್ದುದು ಕೇವಲ ಜುಜುಬಿ ೫೪ ಕೋಟಿ ರೂಪಾಯಿಗೆ ನೀವು ಈ ಅನುದಾನವನ್ನು ಇಳಿಸಿದ್ದೀರಿ ಎಂದರೆ ಅಲ್ಲಿ ಯಾರಿಗೆ ಸಾಲ ಕೊಡಲು ಆಗುತ್ತದೆ? ನಿಮಗೆ ಕಣ್ಣಲ್ಲಿ ಒಂದು ಹನಿ ರಕ್ತವೂ ಇಲ್ಲವಾ? ಅಲ್ಲಿ ಅರ್ಜಿ ಹಾಕಿದ ಬಡವರು ಬರಿಗಾಲಿನಲ್ಲಿ ಬಂದು ತಿಂಗಳುಗಟ್ಟಳೆ ಸಾಲ ಸಿಗುತ್ತದೆ ಎಂದು ಕಾಯುವುದನ್ನು ನೀವು ಯಾವತ್ತಾದರೂ ಹೋಗಿ ನೋಡಿದ್ದೀರಾ? ನಿಗಮದಲ್ಲಿ ಬಡವರು ಹೋಗಿ ವಿಚಾರಿಸಿದರೆ ಉತ್ತರ ಹೇಳಲೂ ಸಿಬ್ಬಂದಿ ಗತಿಯಿಲ್ಲ. ಹೆಡ್ ಆಫೀಸಿನಲ್ಲಿ ರೆಗ್ಯುಲರ್ ಸ್ಟಾಫ್ ಅಂತ ಇರುವುದು ಕೇವಲ ಇಬ್ಬರು. ಸ್ಯಾಂಕ್ಷನ್‌ಡ್ ಹುದ್ದೆ ಇರುವುದು ೩೯. ಅಂದರೆ ೩೭ ಪೋಸ್ಟ್ ಖಾಲಿ ಇದೆ. ಕಚೇರಿ ನಡೆಯುವುದಕ್ಕೆ ಈಗ ಎರವಲು ತಂದು, ಕಾಂಟ್ರಾಕ್ಟ್ ಮೇಲೆ ತಂದು ಒಟ್ಟು ೬೪ ಸಿಬ್ಬಂದಿ ಇದ್ದಾರೆ. ಪರ್ಮನೆಂಟ್ ಸ್ಟಾಫ್ ಕೇವಲ ಇಬ್ಬರು! ಈ ನಿಗಮಕ್ಕೆ ಪ್ರತ್ಯೇಕವಾದ ಸಿಬ್ಬಂದಿ ನೇಮಕ ಮಾಡಬೇಕೆಂದು ಸರ್ಕಾರ ನಿರ್ಧರಿಸಿ ಎಷ್ಟೋ ವರ್ಷಗಳಾಗಿವೆ. ಸಿಬ್ಬಂದಿ ನೇಮಕಕ್ಕೆ ಸಿ ಅಂಡ್ ಆರ್ ಪ್ರೊಸೆಸ್ ನಡೆಯುತ್ತಿದೆ ಎಂದು ಮುಖ್ಯಮಂತ್ರಿಯವರು ಉತ್ತರ ನೀಡಿದ್ದಾರೆ. ಇದು ಯಾವಾಗ ಆಗುತ್ತದೆ? ಇನ್ನೂ ಎಷ್ಟು ವರ್ಷಗಳು ಬೇಕು? ಅಲ್ಪಸಂಖ್ಯಾತ ಧರ್ಮದ ಬಡವರ ಮೇಲೆ ಇಷ್ಟು ದ್ವೇಷ ಏಕೆ ಸ್ವಾಮೀ? ಅನುದಾನ ತೀವ್ರವಾಗಿ ಇಳಿಸಿದ್ದೀರಿ.. ಸಿಬ್ಬಂದಿ ನೇಮಕ ಮಾಡುವುದಿಲ್ಲ…ಅಂದರೆ ಏನರ್ಥ? ಈ ಸಂಸ್ಥೆಯನ್ನು ಕೊಂದು ಬಿಡುವುದು ನಿಮ್ಮ ಉದ್ದೇಶವೇ? ಅಲ್ಪಸಂಖ್ಯಾತ ಧರ್ಮದ ಲಕ್ಷಾಂತರ ಬಡವರಿಗೆ ನಿಮ್ಮ ಸರ್ಕಾರದಿಂದ ಏನೂ ಪ್ರಯೋಜನ ಇಲ್ಲವೆ? ಅವರೂ ಸರ್ಕಾರಕ್ಕೆ ಅಕ್ಕಿ, ಬೇಳೆ, ಸೋಪು ಖರೀದಿಸುವಾಗ ತೆರಿಗೆ ಕಟ್ಟುತ್ತಿದ್ದಾರಲ್ಲಾ? ಅವರು ಮನುಷ್ಯರಲ್ಲವೆ? ಸರ್ಕಾರದ ಕಲ್ಯಾಣ ಯೋಜನೆಗಳಿಂದ ಅವರನ್ನು ಹೊರಗಿಡುವ ಉದ್ದೇಶವಾದರೂ ಏನು? ಈ ಬಡವರ ಮೇಲೆ ನಿಮಗೆ ಯಾಕೆ ಇಷ್ಟು ದ್ವೇಷ?

ದಯವಿಟ್ಟು ಮಾನವೀಯ ದೃಷ್ಟಿಯಿಂದ ಈ ಸಮಸ್ಯೆಯನ್ನು ಗಮನಿಸಿ. ಕೋವಿಡ್ ಬಂದು ಬಡವರೆಲ್ಲ ಹಳ್ಳ ಹಿಡಿದಿದ್ದಾರೆ. ಉದ್ಯೋಗ ಇಲ್ಲ, ಊಟಕ್ಕೆ ಕೂಳಿಲ್ಲ. ದುಡಿಯಬೇಕೆಂದರೆ ಸಣ್ಣ ಪುಟ್ಟ ವ್ಯಾಪಾರ ಮಾಡಿ ಬದುಕಬೇಕೆಂದರೆ ಸಣ್ಣ ಸಾಲವೂ ಸಿಗುವುದಿಲ್ಲ. ಮಕ್ಕಳಿಗೆ ಸಾಲ ಮಾಡಿ ಶಿಕ್ಷಣ ಕೊಡಿಸೋಣವೆಂದರೆ ಈ ರೀತಿ ಕೆಎಂಡಿಸಿ ಯನ್ನು ಹಣವೇ ನೀಡದೆ ಬೀದಿಪಾಲು ಮಾಡುತ್ತಿದ್ದೀರಿ… ಇದು ನ್ಯಾಯವಾ? ಇದು ನಿಮ್ಮ ಆಡಳಿತದ ಹೊಸ ಶೈಲಿಯಾ?

ದಯವಿಟ್ಟು ಮುಖ್ಯಮಂತ್ರಿಗಳು ಖುದ್ದಾಗಿ ಇದನ್ನು ಗಮನಿಸಬೇಕು. ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಕ್ಕೆ ತಕ್ಷಣ ವಾರ್ಷಿಕ ೩೦೦ ಕೋಟಿ ರೂಪಾಯಿ ವಾರ್ಷಿಕ ಅನುದಾನ ನಿಗದಿ ಮಾಡಬೇಕು. ೧೬ % ಜನಸಂಖ್ಯೆಯನ್ನು ಸಾಯಲು ಬಿಟ್ಟು ಏನು ರಾಜ್ಯದ ಅಭಿವೃದ್ಧಿ ಮಾಡುತ್ತೀರಿ ಸ್ವಾಮೀ? ಬೇರೆ ಬಲಿಷ್ಠ ಜಾತಿಗಳ ನಿಗಮಕ್ಕೆ ಎಷ್ಟು ಕೋಟಿ ಕೊಡುತ್ತಿದ್ದೀರಿ.. ಬಡವರ ನಿಗಮ ಅಂದರೆ ಏಕೆ ತಾತ್ಸಾರ ಮಾಡುತ್ತೀರಿ? ದಯವಿಟ್ಟು ಬಡವರನ್ನು ಬದುಕಲು ಬಿಡಿ. ಅವರ ಮಕ್ಕಳಿಗೆ ಶಿಕ್ಷಣಕ್ಕೆ ಅವಕಾಶ ಮಾಡಿಕೊಡಿ. ಅವರೂ ಎಲ್ಲರಂತೆ ಒಂದು ಡಿಗ್ರಿಯಾದರೂ ಮಾಡಲಿ. ಪ್ರತಿಭೆ ಇದ್ದವರು ಉನ್ನತ ಶಿಕ್ಷಣ ಪಡೆಯಲಿ. ದಯವಿಟ್ಟು ತಕ್ಷಣ ಈ ಕಡೆಗೆ ಗಮನ ಕೊಡಿ.