*ಭಾಷಣ ಮಾಡುವವರು ಸಮಸ್ಯೆ ಕೊಡುತ್ತಾರೆ, ಬದುಕು ಕೊಡುವ ನಾಯಕರನ್ನು ಮುಸ್ಲಿಮರು ಬೆಂಬಲಿಸಬೇಕು -: ಶ್ರೀ.ಸಿ.ಎನ್ ಅಶ್ವತ್ಥ್ ನಾರಾಯಣ್, ರಾಜ್ಯ ಉನ್ನತ ಶಿಕ್ಷಣ ಸಚಿವರು.*

ಭಾಷಣ ಮಾಡುವ ಜನರಿಂದ ಏನೂ ಆಗುವುದಿಲ್ಲ. ಒಂದು ಕ್ಷಣ ಮನಸಿಗೆ ಖುಷಿ ಕೊಡುವ ಆ ಭಾಷಣ ಮುಂದೆ ನಮಗೆ ನೋವು ಮತ್ತು ಸಮಸ್ಯೆ ಕೊಡುತ್ತೆ. ನಾವು ಅದನ್ನು ಅರ್ಥ ಮಾಡಿ ಬದುಕು ಕೊಡುವ, ಪ್ರಾಯೋಗಿಕ ಪ್ರಯತ್ನ ಮಾಡುವ ನಾಯಕರನ್ನು ಬೆಂಬಲಿಸಬೇಕು. ನಿಮ್ಮ ಸಮಾಜದ ಜನರ ಅಭಿವೃದ್ದಿ ಮತ್ತು ಹಿತ ಕಾಯುವ ನಾಯಕರನ್ನು ತಾವುಗಳು ಬೆಳೆಸಬೇಕು. ಕರ್ನಾಟಕದಲ್ಲಿ ಈಗಿರುವ ಸರಕಾರಕ್ಕೆ ಮುಸಲ್ಮಾನರು ಬೇರೆ ಅಲ್ಲ. ಮುಸ್ಲಿಮರ ಶೈಕ್ಷಣಿಕ ಪ್ರಗತಿಗೆ ಎಲ್ಲಾ ಸರಕಾರಗಳು ದುಡಿದಂತೆ ನಮ್ಮ ಸರಕಾರವೂ ದುಡಿಯುತ್ತದೆ. ನಾವು ಕನ್ನಡಿಗರ ಜ್ಞಾನ -ಕೌಶಲ್ಯಕ್ಕೆ ಮಹತ್ವ ಕೊಟ್ಟು ಅವರ ಬೇಡಿಕೆಯನ್ನು ತಕ್ಷಣ ಪೂರೈಸುತ್ತೇವೆ ಎಂದು ರಾಜ್ಯ ಉನ್ನತ ಶಿಕ್ಷಣ ಸಚಿವರಾದ ಸಿ.ಎನ್ ಅಶ್ವತ್ಥ್ ನಾರಾಯಣ್ ಹೇಳಿದರು. ನಿನ್ನೆ ಹಮೀದ್ ಷಾ ಕಾಂಪ್ಲೆಕ್ಸ್ ನಲ್ಲಿ ಮುಖ್ಯಮಂತ್ರಿ ಕೌಶಲ್ಯ ಯೋಜನೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ತಂತ್ರಜ್ಞಾನ ಕ್ಷೇತ್ರದಲ್ಲಿ ವರ್ಷಕ್ಕೆ ಲಕ್ಷಾಂತರ ಉಧ್ಯೋಗ ಸೃಷ್ಠಿಯಾಗುತ್ತಿದೆ. ಇದನ್ನು ಅರಿತು ಜಿ.ಎ.ಬಾವಾರವರು ಈ ಕಾಂಪ್ಲೆಕ್ಸ್ ನಲ್ಲಿ ಕೌಶಲ್ಯ ಯೋಜನೆಯನ್ನು ಆರಂಭಿಸಿ ಮುಸ್ಲಿಂ ಸಮುದಾಯದ ಯುವಕರ ಭವಿಷ್ಯ ರೂಪಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಅಭಿನಂದಿಸಿದರು.

ವಕ್ಪ್ ಆಸ್ತಿಯನ್ನು ಮುಸ್ಲಿಮರ ಸಾಮಾಜಿಕ- ಶೈಕ್ಷಣಿಕ- ಆರೋಗ್ಯ ಮತ್ತು ಆರ್ಥಿಕ ಅಭಿವೃದ್ದಿಗೆ ಹೇಗೆ ಬಳಸಬಹುದು ಎಂಬ ಮಾದರಿ ಯೋಜನೆಗಳು ಇರುವ ಹಮೀದ್ ಷಾ ಮತ್ತು ಮುಹಿಬ್ ಷಾ ಟ್ರಸ್ಟ್ ನ ಯೋಜನೆ ಕರ್ನಾಟಕದಲ್ಲೇ ಚಿರಪರಿಚಿತ. ಈ ಕಾಂಪ್ಲೆಕ್ಸ್ ನ ಸಮೀಪ ಟಿಪ್ಪು ಸುಲ್ತಾನ್ ರ ಯೋಧರ ಸಮಾಧಿ ಇರುವ ಪ್ರದೇಶದಲ್ಲಿ ವಿಸ್ಡಂ ಫಾರ್ಕ್ ನಿರ್ಮಿಸಲಾಗಿದೆ. ಇದನ್ನು ನಿನ್ನೆ ಮಾಜಿ ಸಚಿವರಾದ ರಹ್ಮಾನ್ ಖಾನ್ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಈ ಸಂಸ್ಥೆ, ಕಾಲೇಜು, ಶಿಕ್ಷಣ ಸಂಸ್ಥೆ, ಐಟಿಐ, ಸಂಪೂರ್ಣ ಉಚಿತ ಆರೋಗ್ಯ ಕೇಂದ್ರ, ಡಯಾಲಿಸೀಸ್ ಸೆಂಟರ್ ಅಲ್ಲದೇ ಇದೀಗ ಬೃಹತ್ತ್ ಬ್ಲಡ್ ಬ್ಯಾಂಕ್ ನಿರ್ಮಿಸಲು ತೊಡಗಿದ್ದು ನಿಜವಾಗಿಯೂ ಶ್ಲಾಘನೀಯ. ಇಷ್ಟು ದೊಡ್ಡ ಬ್ಲಡ್ ಬ್ಯಾಂಕ್ ನಾನು ಎಲ್ಲೂ ನೋಡಿಲ್ಲಾ ಎಂದರು. ನವೀಕೃತ ಮಸೀದಿಯನ್ನು ಮಾಜಿ ಸಚಿವ ನಝೀರ್ ಆಹ್ಮದ್ ಮತ್ತು ನವೀಕೃತ ಒಝೂ ಮಾಡುವ ಸ್ಥಳವನ್ನು ಮೈನಾರಿಟಿ ಕಮಿಷನರ್ ಅಬ್ದುಲ್ ಅಝೀಮ್ ರವರು ಉದ್ಘಾಟಿಸಿದರು. ಹಮೀದ್ ಷಾ ಟ್ರಸ್ಟ್ ನ ಅಭಿವೃದ್ದಿ ಯೋಜನೆಗಳ ಪರಿಚಯ ಇರುವ ಕೈಪಿಡಿಯನ್ನು ಚಿಕ್ಕಪೇಟೆ ಎಂ.ಎಲ್.ಎ ಶ್ರೀ ಉದಯ ಬಿ ಗರುಡಾಚಾರ್ ಮತ್ತು ಸೆಂಟ್ರಲ್ ಮುಸ್ಲಿಂ ಅಸೋಶಿಯೇಶನ್ ನ ಅಧ್ಯಕ್ಷರಾದ ಜನಾಬ್ ಝಿಯಾವುಲ್ಲಾ ಷರೀಫ್ ರವರು ಬಿಡುಗಡೆ ಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಚಿಕ್ಕಪೇಟೆ ಎಂ.ಎಲ್.ಎ ಶ್ರೀ ಉದಯ ಬಿ ಗರುಡಾಚಾರ್ ರವರು, ಮುಸ್ಲಿಂ ಸಮುದಾಯದ ಯುವಕರಲ್ಲಿ ಇರುವಷ್ಟು ಕೌಶಲ್ಯ ಬೇರೆ ಯಾರಲ್ಲೂ ಇಲ್ಲ. ಅವರು ಹತ್ತನೆ, ಪಿಯುಸಿ ಡ್ರಾಪೌಟ್ ಹೆಚ್ಚಾಗಿ ಆಗುತ್ತಾರೆ. ಅಂತಹ ವಿದ್ಯಾರ್ಥಿಗಳನ್ನು ಈ ಹಮೀದ್ ಷಾ ಕೌಶಲ್ಯ ತರಬೇತಿಗೆ ಆಯ್ಕೆ ಮಾಡಿ ಅವರಿಗೆ ಬದುಕು ಕೊಡುವುದು ನೊಡುವಾಗ ಅಭಿಮಾನವಾಗುತ್ತಿದೆ. ಈ ಸಂಸ್ಥೆಯ ನಾಯಕತ್ವ ಇರುವ ಶ್ರೀ ಜಿ.ಎ ಬಾವ ಮತ್ತು ಅವರ ತಂಡವನ್ನು ನಾನು ಅಭಿನಂದಿಸುತ್ತೇನೆ ಎಂದರು.

ಹಮೀದ್ ಷಾ ಟ್ರಸ್ಟ್ ಸುಮಾರು ಒಂದು ಕೋಟಿ ರುಪಾಯಿಗಿಂತ ಹೆಚ್ಚು ವಾರ್ಷಿಕ ಖರ್ಚು ಭರಿಸುತ್ತಿರುವ ಶಿವಾಜಿ ನಗರದ ಒಬೇದುಲ್ಲಾ ಶಾಲೆಗೆ ಬೇಟಿ ನೀಡಿದ ವಾರದ ಒಳಗಾಗಿ ಸಂಸ್ಥೆಗೆ ಎಲ್.ಕೆ.ಜಿ ಗೆ ಅನುಮತಿ ನೀಡಿದ ಶಿಕ್ಷಣ ಸಚಿವರಾದ ಬಿ.ಸಿ ನಾಗೇಶ್ ರವರು ಒಬೇದುಲ್ಲಾ ಹೈಸ್ಕೂಲನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ ಮಾಡುವ ಪ್ರಸ್ತಾವವನ್ನೂ ಬೆಂಬಲಿಸಿದ್ದನ್ನು ಸ್ಮರಿಸಲಾಯಿತು. ಈ ಸಂದರ್ಭ ಸ್ಕಿಲ್ ಡೆವಲಪ್ಪ್ ಮೆಂಟ್ ಸೆಂಟರ್ ನ ಪರವಾನಿಗೆ ಮತ್ತು ಸೌಲತ್ತನ್ನು ಅಭಿವೃದ್ದಿ ಪಡಿಸಲು ನೆರವಾದ ಉನ್ನತ ಶಿಕ್ಷಣ ಸಚಿವರಾದ ಶ್ರೀ ಅಶ್ವಥ್ ನಾರಾಯಣ್ ರವರನ್ನು ಜಿ.ಎ ಬಾವಾರವರು ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ವಕ್ಪ್ ನ ಸದಸ್ಯರಾದ ಮೌಲಾನ ಶಾಫಿ ಸಹದಿ, ಜಾಮೀಯ ಮಸೀದಿಯ ಖತೀಬರಾದ ಮೌಲಾನ ಮಕ್ಸೂದ್ ಇಮ್ರಾನ್, ಎನ್.ಆರ್.ಐ ಫಾರಂ ನ ಮಾಜಿ ಅಧ್ಯಕ್ಷೆ ಡಾ.ಆರತಿ ಕೃಷ್ಣ ಮುಂತಾದವರು ಭಾಗವಹಿಸಿದ್ದರು.
❤️❤️❤️❤️❤️