ಬೆಂಗಳೂರುಃ ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿ ಪ್ರದೇಶದಲ್ಲಿ ಮಲಿನ ನೀರು ಶುದ್ಧೀಕರಣ ಯೋಜನೆಯ ಜಾರಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದ್ದು, ಉಳ್ಳಾಲ, ಸುರತ್ಕಲ್ ಸಹಿತ ಹಲವೆಡೆ ಕಳಪೆ ಕಾಮಗಾರಿ ನಡೆದಿದ್ದು ಕೋಟ್ಯಾಂತರ ರೂಪಾಯಿ ಪೋಲಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಕ್ ಅವರು ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಗಮನ ಸೆಳೆದರು. ಈ ಕುರಿತು ಮುಖ್ಯಮಂತ್ರಿಯವರ ಜೊತೆ ವಿವರವಾಗಿ ಚರ್ಚೆ ನಡೆಸಿದ ಫಾರೂಕ್ ಅವರು ಸಮಗ್ರ ಕಾಮಗಾರಿಯ ಕಳಪೆ ಜಾರಿಯ ಬಗ್ಗೆ ಸದನ ಸಮಿತಿಯಿಂದ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.

ಕರಾವಳಿಯಲ್ಲಿ ಈಗಾಗಲೆ ವಿಪರೀತ ಕೈಗಾರಿಕಾ ಮಾಲಿನ್ಯದಿಂದ ಜನರ ಆರೋಗ್ಯ ಹದಗೆಟ್ಟಿದೆ. ಇದರ ಜೊತೆಗೆ ಅವೈಜ್ಞಾನಿಕವಾಗಿ ತ್ಯಾಜ್ಯ ಗುಂಡಿಗಳನ್ನು ನಿರ್ಮಿಸುವುದರಿಂದ ಮಾಲಿನ್ಯ ಇನ್ನಷ್ಟು ಹೆಚ್ಚಾಗಿದೆ. ಕುಡಿಯುವ ನೀರಿನ ಬಾವಿಗಳ ನೀರು ಕಲುಷಿತವಾಗಿದೆ. ಸಮುದ್ರ ಸೇರುವ ತ್ಯಾಜ್ಯ ನೀರಿನಿಂದಾಗಿ ಸಮುದ್ರವೂ ಕಲುಷಿತಗೊಳ್ಳುತ್ತಿದೆ. ಮತ್ಸ್ಯ ಸಂಪತ್ತು ಕೂಡಾ ಇದರಿಂದ ಕ್ಷೀಣಗೊಂಡಿದೆ. ಹಲವಾರು ವರ್ಷಗಳಿಂದ ಬಳಸದೆ ಉಳಿಸಿದ ಕಳಪೆ ಕಬ್ಬಿಣದ ತಂತಿಗಳನ್ನು ಬಳಸಿ ಕಾಮಗಾರಿ ನಡೆಸುತ್ತಿದ್ದು ಇಡೀ ಯೋಜನೆ ಜನರ ಹಣ ಪೋಲು ಮಾಡುವುದಕ್ಕೆ ಸ್ಪಷ್ಟ ನಿದರ್ಶನವಾಗಿದೆ ಎಂದು ಫಾರೂಕ್ ಅವರು ಮುಖ್ಯಮಂತ್ರಿಯವರಿಗೆ ವಿವರಿಸಿದರು.

ವಿಷಯದ ಗಂಭೀರತೆಯನ್ನು ಅರಿತ ಮುಖ್ಯಮಂತ್ರಿಯವರು ತಕ್ಷಣ ಈ ಕುರಿತು ಗಮನ ಹರಿಸುವುದಾಗಿ ಭರವಸೆ ನೀಡಿದರು.

ಈ ಯೋಜನೆಯ ಅಂಗವಾಗಿ ನಿರ್ಮಿಸುತ್ತಿರುವ ವೆಟ್ ವೆಲ್ ಅಂತೂ ಕೊಳೆತು ನಾರುತ್ತಿದ್ದು ಸ್ಥಳೀಯ ನಿವಾಸಿಗಳು ಮತ್ತು ಮೀನುಗಾರರು ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ. ಜ್ವರ, ಶ್ವಾಸಕೋಶದ ಸೋಂಕು ಸಹಿತ ಸಾಂಕ್ರಾಮಿಕ ರೋಗಗಳು ಹರಡುತ್ತಿದ್ದು, ಕೊರೊನಾ ಭೀತಿಯೂ ಹೆಚ್ಚಾಗಿದ್ದು ಎಂದು ಉಳ್ಳಾಲ, ಕುಳಾಯಿ, ಸುರತ್ಕಲ್ ಪರಿಸರದ ಜನರು ದೂರು ನೀಡುತ್ತಿರುವುದರ ಬಗ್ಗೆ ಫಾರೂಕ್ ಅವರು ಮುಖ್ಯಮಂತ್ರಿಯವರ ಗಮನ ಸೆಳೆದರು.

ಮಾಜಿ ಮುಖ್ಯಮಂತ್ರಿ ಎಚ್. ಡಿ.ಕುಮಾರಸ್ವಾಮಿ ಅವರೂ ಚರ್ಚೆಯ ವೇಳೆಗೆ ಹಾಜರಿದ್ದು ಸಮಸ್ಯೆಯ ಗಂಭೀರತೆ ಅರಿತು ಸದನ ಸಮಿತಿಯ ಸಮಗ್ರ ತನಿಖೆಗೆ ಒಲವು ತೋರಿಸಿದರು.