ಮುಖ್ಯಮಂತ್ರಿ ಮನೆಗೆ ಜನಾಗ್ರಹ ನಡಿಗೆ
ಪ್ರತಿಭಟನಾಕಾರರ ಬಂಧನ – ಬಿಡುಗಡೆ
ನಿಯೋಗ ಭೇಟಿಗೂ ಒಪ್ಪದ ಮುಖ್ಯಮಂತ್ರಿ
ಜೂನ್ 22ಕ್ಕೆ ರಾಜ್ಯವ್ಯಾಪಿ ಪ್ರತಿಭಟನೆಗೆ ಕರೆ

ಜನಾಗ್ರಹ ಆಂದೋಲನದ ವತಿಯಿಂದ ಇಂದು ಬೆಂಗಳೂರಿನ ಮೌರ್ಯ ವೃತ್ತದಿಂದ ಮುಖ್ಯಮಂತ್ರಿಯ ನಿವಾಸದೆಡೆಗೆ “ಜನಾಗ್ರಹ ನಡಿಗೆ”ಯನ್ನು ಆಯೋಜಿಸಲಾಗಿತ್ತು. ಅರೆಬರೆ ಕ್ರಮಗಳನ್ನು ಕೈಬಿಟ್ಟು ಜನರ ಜೀವ ಮತ್ತು ಜೀವನೋಪಾಯದ ರಕ್ಷಣೆಗೆ ಸರ್ಕಾರ ಸಮಗ್ರ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಈ ನಡಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. ಜನಾಗ್ರಹ ಆಂದೋಲನವು ಕಳೆದ 45 ದಿನಗಳಿಂದ ಸಮಗ್ರ ಕ್ರಮಗಳಿಗಾಗಿ ನಿರಂತರ ಅಭಿಯಾನ ನಡೆಸುತ್ತಿದೆ. ನಾಡಿನ 700ಕ್ಕೂ ಹೆಚ್ಚು ಗಣ್ಯರು ಹಾಗೂ ಸಾಮಾಜಿಕ ಕಾರ್ಯಕರ್ತರು ಮುಖ್ಯಮಂತ್ರಿಗೆ ಮೂರು ಬಾರಿ ಪತ್ರ ಬರೆದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನಿರಂತರ ಪ್ರಚಾರ ನಡೆಸಿದ್ದಾರೆ ಹಾಗೂ ಕೋವಿಡ್ ಇಕ್ಕಟ್ಟುಗಳ ನಡುವೆಯೇ ಎರಡು ಬಾರಿ ರಾಜ್ಯವ್ಯಾಪಿ ಪ್ರತಿಭಟನೆಗಳನ್ನು ನಡೆಸಿದೆ.

ಈ ಎಲ್ಲಾ ಒತ್ತಡಗಳ ಪರಿಣಾಮವಾಗಿ ಸರ್ಕಾರ ಕೆಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಆದರೆ ಅವು ಎಲ್ಲರಿಗೂ ತಲುಪದ ಮತ್ತು ತಲುಪಿದವರ ಸಂಕಷ್ಟವನ್ನೂ ನಿವಾರಿಸದ ಪ್ಯಾಕೇಜುಗಳಾಗಿವೆ. ಒಂದಷ್ಟು ಅಸಂಘಟಿತ ವಲಯದ ನೊಂದಾಯಿತ ಕಾರ್ಮಿಕರಿಗೆ 2000 ಅಥವ 3000 ಸಹಾಯ ಧನ ನೀಡಿದೆ. ಇತ್ತೀಚಿಗೆ ಅನಾಥ ಕುಟುಂಬಗಳಿಗೆ 1 ಲಕ್ಷ ಪರಿಹಾರ ಘೋಷಿಸಿದೆ. ವಲಸೆ ಕಾರ್ಮಿಕರಿಗೆ ಆಹಾರದ ಕಿಟ್ ನೀಡುವ ತೀರ್ಮಾನ ತೆಗೆದುಕೊಂಡಿದೆ. ಇವೆಲ್ಲವನ್ನೂ ಜನಾಗ್ರಹ ಸ್ವಾಗತಿಸುತ್ತದೆ. ಆದರೆ ಸಮಸ್ಯೆಯ ಗಾಢತೆಗೆ ಇವು ಪರಿಹಾರವಲ್ಲ ಎಂಬುದು ಅದರ ಖಚಿತ ನಿಲುವಾಗಿದೆ. ಹಾಗಾಗಿಯೇ ಜನಾಗ್ರಹ ಆಂದೋಲನವು 5 ಕ್ರಮಗಳಿಗಾಗಿ ಸರ್ಕಾರವನ್ನು ಒತ್ತಾಯಿಸುತ್ತಿದೆ. 1. ಕೋವಿಡ್ ಚಿಕಿತ್ಸೆಯನ್ನು ಉಚಿತಗೊಳಿಸಬೇಕು ಮತ್ತು ವಿಸ್ತಾರಗೊಳಿಸಬೇಕು. 2. ಸರ್ಕಾರವೇ ಎಲ್ಲರಿಗೂ ತ್ವರಿತ ಮತ್ತು ಉಚಿತ ವ್ಯಾಕ್ಸಿನ್ ವ್ಯವಸ್ಥೆ ಮಾಡಬೇಕು. 3. ಎಲ್ಲಾ ಬಡ ಕುಟುಂಬಗಳಿಗೆ ಸಮಗ್ರ ಆಹಾರದ ಕಿಟ್ ಮತ್ತು 10 ಸಾವಿರ ಆಪತ್ಕಾಲೀನ ಧನ ನೀಡಬೇಕು. 4. ಅನಾಥಗೊಂಡಿರುವ ಕುಟುಂಬಗಳಿಗೆ 5 ಲಕ್ಷ ಪರಿಹಾರ ನೀಡಬೇಕು. 5. ರೈತರ ಬಿತ್ತನೆ ಬೀಜ – ಗೊಬ್ಬರದ ಮೇಲೆ ಸಬ್ಸಿಡಿ ಘೋಷಿಸಬೇಕು.

ಮೇಲ್ಕಂಡ ಹಕ್ಕೊತ್ತಾಯಗಳನ್ನು ಮತ್ತೊಮ್ಮೆ ಮುಖ್ಯಮಂತ್ರಿಗಳ ಗಮನಕ್ಕೆ ತರಲು ಮತ್ತು ಅದಕ್ಕೆ ತಗಲುವ ವೆಚ್ಚ ಮತ್ತು ಸಂಪನ್ಮೂಲ ಕ್ರೂಢೀಕರಣದ ಸಾಧ್ಯತೆಗಳನ್ನು ಚರ್ಚಿಸಲು ಇಂದು ಜನಾಗ್ರಹ ನಡಿಗೆಯನ್ನು ಆಯೋಜಿಸಲಾಗಿತ್ತು. ಬೆಳಿಗ್ಗೆ 11 ಗಂಟೆಗೆ ಸರಿಯಾಗಿ ಪ್ರತಿಭಟನಾಕಾರರು ಮೌರ್ಯ ವೃತ್ತದ ಬಳಿ ಸೇರತೊಡಗಿದರು. ರೈತ ಮುಖಂಡರಾದ ಕೋಡಿಹಳ್ಳಿ ಚಂದ್ರಶೇಖರ್, ಬಡಗಲಪುರ ನಾಗೇಂದ್ರ, ದಲಿತ ಸಂಘರ್ಷ ಸಮಿತಿಯ ಮಾವಳ್ಳಿ ಶಂಕರ್, ಹಿರಿಯ ವಕೀಲರಾದ ಎಸ್. ಬಾಲನ್, ಯೂಸೂಫ್ ಕನ್ನಿ, ಸಿರಿ ಗೌರಿ, ಹೆಬ್ಬಾಳೆ ವೆಂಕಟೇಷ್, ಕುಮಾರ್ ಸಮತಳ, ಗೋಪಾಲ್, ಕೆ.ಜೆ.ಎಸ್ ಮರಿಯಪ್ಪ, ಅಫ್ಸರ್ ಕೊಡ್ಲಿಪೇಟೆ, ವರದರಾಜೇಂದ್ರ, ರವಿ ಮೋಹನ್, ಯಲಹಂಕ ಮಂಜುನಾಥ್, ತನ್ವೀರ್ ಅಹಮದ್, ರಾಜಶೇಖರ್ ಅಕ್ಕಿ ಮುಂತಾದ ಮುಖಂಡರು ಇಂದಿನ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರತಿಭಟನೆಗೆ ಅವಕಾಶವಿಲ್ಲವೆಂದು ಪೋಲೀಸರು ಹೋರಾಟಗಾರರನ್ನು ಚದುರಿಸಲು ಪ್ರಯತ್ನಿಸಿದರು. ಮುಖ್ಯಮಂತ್ರಿಗಳನ್ನು ಭೇಟಿಯಾಗಲೇಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ಪೋಲೀಸರು ಎಲ್ಲರನ್ನೂ ಬಂಧಿಸಿ ಹೌಗ್ರೌಂಡ್ ಪೋಲೀಸ್ ಠಾಣೆಗೆ ಕರೆದೊಯ್ದರು. ಪೋಲೀಸ್ ಠಾಣೆಯಲ್ಲೂ ಫಲಕಗಳನ್ನು ಹಿಡಿದು ಪ್ರತಿಭಟನೆಯನ್ನು ಮುಂದುವರಿಸಲಾಯಿತು. “ಸರ್ಕಾರ ಅರೆಬರೆ ಕ್ರಮಗಳನ್ನು ಮಾತ್ರ ಘೋಷಿಸುತ್ತಿದೆ. ಜನರ ಜೀವನ ಕುಸಿಯುತ್ತಿದ್ದರೂ, ಮೂರನೇ ಅಲೆಯ ಅಪಾಯ ತಲೆಮೇಲೆ ತೂಗುತ್ತಿದ್ದರೂ ಪರಿಣಾಮಕಾರಿಯಾದ ಕ್ರಮಗಳಿಗೆ ಅದು ಸಿದ್ಧವಿಲ್ಲ. ನೆರೆ ರಾಜ್ಯಗಳ ಸರ್ಕಾರಗಳು ತೆಗೆದುಕೊಂಡಿರುವ ಕ್ರಮಗಳನ್ನೂ ಅಳವಡಿಸಲು ಸಿದ್ಧವಿಲ್ಲ” ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಕನಿಷ್ಟ ಮುಖ್ಯಮಂತ್ರಿಯವರ ಜೊತೆ ಈ ಕುರಿತು ಒಂದು ಚರ್ಚೆಗೆ ವ್ಯವಸ್ಥೆಯಾಗಬೇಕು ಎಂದು ಪಟ್ಟು ಹಿಡಿದರು. ಪೋಲೀಸರೂ ನಿಯೋಗವೊಂದನ್ನು ಕರೆದೊಯ್ಯಲು ಪ್ರಯತ್ನ ನಡೆಸಿದರಾದರೂ ಮುಖ್ಯಮಂತ್ರಿಗಳು ಭೇಟಿಯನ್ನೂ ನಿರಾಕರಿಸಿದರು. ಬಂಧನಕ್ಕೊಳಗಾದ ಪ್ರತಿಭಟನಾಕಾರರು ಪೊಲೀಸ್ ಠಾಣೆಯಲ್ಲೇ ಪ್ರತಿಭಟನಾ ಸಭೆಯನ್ನು ನಡೆಸಲಾಯಿತು. ಪ್ರತಿಭಟನಾ ಸಭೆಯನ್ನುದ್ದೇಶಿಸಿ ಹಿರಿಯ ವಕೀಲರಾದ ಎಸ್.ಬಾಲನ್ ಮಾತನಾಡಿ ಸರ್ಕಾರ ನಡೆಯನ್ನು, ಬಂಧನವನ್ನು ಖಂಡಿಸಿದರು. ಮದ್ಯಾಹ್ನದ ಮೇಲೆ ಪ್ರತಿಭಟನಾಕಾರರನ್ನು ಬಿಡುಗಡೆ ಮಾಡಲಾಯಿತು.

ಸರ್ಕಾರದ ಈ ಸಂವೇದನಾರಹಿತ ನಡುವಳಿಕೆಯನ್ನು ಜನಾಗ್ರಹವು ತೀವ್ರವಾಗಿ ಖಂಡಿಸುತ್ತದೆ. ಸಮಗ್ರ ಮೂರನೇ ಪ್ಯಾಕೇಜಿಗಾಗಿ ಒತ್ತಾಯವನ್ನು ಹೆಚ್ಚಿಸುತ್ತದೆ. ಇದರ ಭಾಗವಾಗಿ ಜೂನ್ 22 ರಂದು ರಾಜ್ಯವ್ಯಾಪಿಯಾಗಿ ಎಲ್ಲಾ ಆಡಳಿತರೂಢ ಶಾಸಕರು ಮತ್ತು ಮಂತ್ರಿಗಳ ಕಛೇರಿಗಳ ಎದುರು ಖಾಲಿ ಚೀಲ ಸುಟ್ಟು ಪ್ರತಿಭಟಿಸಲು ಮತ್ತು ಸತ್ಯಾಗ್ರಹ ಹೂಡಲು ಕರೆ ಕೊಟ್ಟಿದೆ. ಸರ್ಕಾರ ಸಮಗ್ರ ಕ್ರಮಗಳಿಗೆ ಮುಂದಾಗುವ ತನಕ ಈ ಜನಾಗ್ರಹ ಮುಂದುವರಿಯಲಿದೆ.

ಜನಾಗ್ರಹ ಆಂದೋಲನದ ಪರವಾಗಿ

ಮಾವಳ್ಳಿ ಶಂಕರ್, ಕೋಡಿಹಳ್ಳಿ ಚಂದ್ರಶೇಖರ್, ಯೂಸೂಫ್ ಕನ್ನಿ, ಸಿರಿ ಗೌರಿ