ಪ್ಯಾಲೆಸ್ತೀನ್ ಎದ್ದು ಬರಲಿದೆಯೇ…?
ಹಿಟ್ಲರ್ ಲಕ್ಷಾಂತರ ಯಹೂದಿಗಳನ್ನು ಕೊಂದು ಕ್ರೂರಿ ಎನಿಸಿಕೊಂಡ. ಆದರೆ ಅವನಿಗೆ ಕಿಂಚಿತ್ತು ಪಶ್ಚಾತಾಪವಿರಲಿಲ್ಲ. ನಾನೇಕೆ ಯಹೂದಿಗಳನ್ನು ಕೊಂದೇ ಎನ್ನುವುದನ್ನು ಇತಿಹಾಸ ವಿಮರ್ಶಿಸುತ್ತದೆ ಎಂದುಬಿಟ್ಟ. ಪ್ಯಾಲೆಸ್ತೀನ್ ಗರ್ಭ ಸೀಳಿ ಹೊರಬರುವ ಪ್ರಯತ್ನದಲ್ಲಿದ್ದ ಇಸ್ರೇಲ್ಗೆ ಬ್ರಿಟೀಷರ ಬೆಂಬಲವಿತ್ತು. ಜರ್ಮನ್ ಯಹೂದಿಗಳ ವಿರುದ್ಧ ರಣಕಹಳೆ ಮೊಳಗಿಸಿತ್ತು. ಆದರೆ ಅಂತಿಮವಾಗಿ ಇಸ್ರೇಲ್ ಭೂಪಟದಲ್ಲಿ ಸ್ಥಾಪಿತವಾಗಿತ್ತು. ಆದರೆ ಮೂಲ ಪ್ಯಾಲೆಸ್ತೀನ್, ಮೇಲೆ ಲೆಬನಾನ್, ಪಕ್ಕದ ಜೋರ್ಡಾನ್, ತಳಭಾಗದ ಈಜಿಪ್ಟ್, ಆಸುಪಾಸಿನ ಅರಬ್ ರಾಷ್ಟ್ರಗಳು ಇಸ್ರೇಲ್ ಮೇಲೆ ಮುಗಿಯದ ದ್ವೇಷವಿಟ್ಟುಕೊಂಡಿದೆ. ಆದರೆ ಪುಟ್ಟ ರಾಷ್ಟ್ರ ಇಸ್ರೇಲ್ ಇವರನ್ನೆಲ್ಲಾ ಮಟ್ಟ ಹಾಕಿ, ವಿಶ್ವಕ್ಕೆ ಮದ್ದುಗುಂಡುಗಳನ್ನು ಸರಬರಾಜು ಮಾಡುವಷ್ಟು ಬಲಿಷ್ಟವಾಗಿ ಹೋಗಿದೆ.
ಇಸ್ಲಾಂ ಶಾಂತಿಯ ಧರ್ಮ. ಆದರೆ ಅದು ಯಹೂದಿಗಳನ್ನು ಶತ್ರು ಎಂದು ಬಹಿರಂಗವಾಗಿ ಹೇಳುತ್ತದೆ. ಅವರ ನೆರಳು ಕಂಡರೇ ಇಸ್ಲಾಂ ರಾಷ್ಟ್ರಗಳು ಕೆಂಡ ತುಳಿದಂತಾಡುತ್ತದೆ. ಆದರೆ ಅವರನ್ನು ಮುಟ್ಟಿದ್ದಷ್ಟು ಇವರು ಸರ್ವನಾಶವಾಗುತ್ತಿದ್ದಾರೆ. ಇವತ್ತಿಗೆ ಪ್ಯಾಲೆಸ್ತೀನ್ ಯಾವ ಪರಿಸ್ಥಿತಿಯಲ್ಲಿದೆಯೆಂದರೇ ಸಿರಿಯಾಕ್ಕೂ ಗಾಜಾಪಟ್ಟಿಗೂ ಅಂತಹ ವ್ಯತ್ಯಾಸವಿಲ್ಲದಂತಾಗಿದೆ. ನಿರಂತರ ಬಾಂಬ್ ದಾಳಿ, ಇಸ್ರೇಲ್ ಸೈನಿಕರ ದೌರ್ಜನ್ಯ, ಕೆಮಿಕಲ್ ವಿಷಪ್ರಾಶಾನ- ಇವೆಲ್ಲವನ್ನು ನುಂಗಿ ರಕ್ತದ ಮಡುವಿನಲ್ಲಿ ತೋಯ್ದು ಮುದ್ದೆಯಾಗಿ ಬಿದ್ದಿದೆ ಪ್ಯಾಲೆಸ್ತೀನ್.
ನರೇಂದ್ರ ಮೋದಿ ಇಸ್ರೇಲ್ಗೆ ಕಾಲಿಟ್ಟ ಭಾರತದ ಮೊದಲ ಪ್ರಧಾನಿ. ಆದರೆ ಪಕ್ಕದ ಪ್ಯಾಲೆಸ್ತೀನ್ ಬಗ್ಗೆ ಇತಿಹಾಸದಿಂದಲೂ ಬೆಂಬಲವಾಗಿ ನಿಂತ ಭಾರತದ ಸಾಂಪ್ರಾದಾಯಿಕ ವಿದೇಶಾಂಗ ನೀತಿಯನ್ನು ಮುಗಿಸಿದ ಅಪಖ್ಯಾತಿಯೂ ಅವರಿಗಿದೆ. ಭಾರತ ವಿಧ್ವಂಸಕಾರಿ, ವಿಕಾರ ಮನಃಸ್ಥಿತಿಯವರ ಜೊತೆ ತೇರೇ ಮೇರೇ ಭೀಚ್ ಮೇ ಹಾಡುತ್ತಾರೆ, ಐ ಅಂಡ್ ಐ ಮಂತ್ರ ಜಪಿಸುತ್ತಾರೆ ಎಂದಕೂಡಲೇ ಭಾರತ ವಿಶ್ವದ ಬಲಿಷ್ಟ ರಾಷ್ಟ್ರವಾಗಿ ಹೊರಹೊಮ್ಮುವುದಿಲ್ಲ. ಇಲ್ಲಿ ತೋಳ್ಬಲದ ಮುಲಾಕಾತ್ಗಿಂತ ಸಮಾನ ಮನಃಸ್ಥಿತಿಯ ಸುರತ ನಡೆದಿರುವುದಷ್ಟೇ ನಿಜ.
ತಮ್ಮ ನೆಲದಲ್ಲೇ ಬದುಕುವ, ತಮ್ಮ ಆಡಳಿತ ತಾವೇ ನಡೆಸುವ, ದೇಶ ಕಟ್ಟಿಕೊಳ್ಳುವ ಪ್ಯಾಲೆಸ್ತೀನ್ ಮೂಲನಿವಾಸಿಗಳ ಹಕ್ಕುಗಳ ಪ್ರಶ್ನೆ. ಇದನ್ನು ಹಲವು ದಶಕಗಳ ಕಾಲ ಬ್ರಿಟಿಶ್ ಸಾಮ್ರಾಜ್ಯಶಾಹಿ, ಆ ಮೇಲೆ ಜಗತ್ತಿನಾದ್ಯಂತ ನೆಲೆಸಿದ್ದ ಯಹೂದಿ ವಲಸಿಗರು ಅಮೆರಿಕನ್ ಬೆಂಬಲದೊಂದಿಗೆ ರಾಜಕೀಯ-ಮಿಲಿಟರಿ ಬಲದಿಂದ, ಭೀಕರ ಕ್ರೌರ್ಯಗಳಿಂದ ದಮನ ಮಾಡುತ್ತಾ ಬಂದಿದ್ದಾರೆ. ವಿಶ್ವಸಂಸ್ಥೆಯ ನಿಯಮಗಳ ಪ್ರಕಾರವೇ `ನರಮೇಧ’ ಎಂದು ಕರೆಯಬಹುದಾದ ಹಲವು ಪ್ರಮುಖ ದಾಳಿಗಳಲ್ಲಿ ಲಕ್ಷಾಂತರ ಪ್ಯಾಲೆಸ್ತೀನ್ನರ ಕಗ್ಗೊಲೆ ನಡೆಸಿದ್ದಾರೆ. ಲೆಕ್ಕವಿಲ್ಲದಷ್ಟು ಪ್ಯಾಲೆಸ್ತೀನರು ತಾಯ್ನಾಡಿನಲ್ಲೇ ಮತ್ತು ನೆರೆಯ ದೇಶಗಳಲ್ಲಿ ನಿರಾಶ್ರಿತರಂತೆ ಬದುಕುತ್ತಿದ್ದಾರೆ. ಪ್ಯಾಲೆಸ್ತೀನ್ ಎದ್ದುಬರುತ್ತದೆ ಎಂಬುದು ಅಲ್ಲಿನ ಅವಿರತ ಘೋಷಣೆಯಾಗಿದೆ. ನಾವು ಏಳುವುದಕ್ಕೆ ಬಿಡುವುದಿಲ್ಲ ಎಂಬುದು ಇಸ್ರೇಲ್ನ ಅಲಿಖಿತ ನಿಯಮವಾಗಿದೆ.
ವಿಶ್ವಸಂಸ್ಥೆಯ 1947ರ ನಿರ್ಣಯ ನಂಬರ್ 181 ಮತ್ತು 1967ರ ನಿರ್ಣಯ ನಂಬರ್ 242 ಹಾಗೂ ಇನ್ನೂ ಹಲವಷ್ಟು ನಿರ್ಣಯಗಳನ್ನು ಇಸ್ರೇಲ್ ಉಲ್ಲಂಘಿಸುತ್ತಾ ಬಂದಿದೆ. ಅದರ ಉಲ್ಲಂಘನೆಗೆ ಬೆಂಗಾವಲಾಗಿ ನಿಂತಿರುವುದು ಅಮೆರಿಕದ ಅಗಾಧ ಆರ್ಥಿಕ ಮಿಲಿಟರಿ ಸಹಾಯ ಮತ್ತು ಭದ್ರತಾ ಸಮಿತಿಯಲ್ಲಿ ಇಸ್ರೇಲಿನ ಬಗ್ಗೆ ಎಲ್ಲಾ ನಿರ್ಣಯಗಳ ವಿರುದ್ಧ ಬಳಸಿದ ವಿಟೋ ಅಧಿಕಾರ. ನಿಜ ಹೇಳಬೇಕೆಂದರೇ ಇಸ್ರೇಲ್ ಕ್ರೂರತೆಗೆ ನ್ಯಾಯ ಅಂತಿದ್ದರೇ ಜಗತ್ತು ಆ ರಾಷ್ಟ್ರದ ಮೇಲೆ ಆರ್ಥಿಕ ದಿಗ್ಬಂಧನ ಹೇರಬೇಕು. ಹೇರುವುದಕ್ಕೆ ಯಾರೂ ತಯಾರಿಲ್ಲ. ಚೀನಾ ಕೆಟ್ಟವರು ಎನಿಸಿಕೊಂಡರೂ ಈ ಸಾಮ್ರಾಜ್ಯಶಾಹಿಗಳ ವಿರುದ್ಧ ತಣ್ಣನೇ ಹಗೆ ಸಾಧಿಸುತ್ತಿರುವುದು ಇದೊಂದೇ ರಾಷ್ಟ್ರ. ಅಮೆರಿಕಾ- ಇಸ್ರೇಲ್ ಅಣ್ತಮ್ಮಂದಿರ ತೆರೆಮರೆಯ ಕ್ರೂರತೆಗಳು ಬಿಚ್ಚಿಟ್ಟಷ್ಟು ಬೆಚ್ಚಿಬೀಳಿಸುವಂತಿದೆ. ಎರಡೂ ದೇಶಗಳ ಮಾಮೂಲು ಆದಾಯವಾದ ಶಸ್ತ್ರಾಸ್ತ್ರಗಳಿಂದ ಸತ್ಯದ ಕೂಗು ಹೊರಬರದಂತೆ ಬಾಯಿಗೆ ಗುರಿಯಿಟ್ಟು ಉಡಾಯಿಸುವುದು ಜಗತ್ತಿಗೂ ಗೊತ್ತಿದೆ. ಗಂಟಲಾಳದಲ್ಲಿ ಸಿಲುಕಿದ ಗೋಲಿ ಅವರಿಂದ ಮಾತನಾಡಿಸುತ್ತಿಲ್ಲ. ವಿಶ್ವಸಂಸ್ಥೆಯನ್ನು ನಿಭಾಯಿಸುತ್ತಿರುವವರನ್ನು ಪ್ರಶ್ನಿಸಲು ಸಾಧ್ಯವೇ..?
ಪ್ಯಾಲೆಸ್ತೀನ್ ವಿಮೋಚನ ಸಂಘದ ನಾಯಕ, ಆ ರಾಷ್ಟ್ರದ ಮೊದಲ ಅಧ್ಯಕ್ಷ ಯಾಸಿರ್ ಅರಾಫತ್, ನಾನು ಒಂದು ಕೈಯಲ್ಲಿ ಹೂವು ಮತ್ತು ಇನ್ನೊಂದು ಕೈಯಲ್ಲಿ ಗನ್ನು ಹಿಡಿದು ಬಂದಿದ್ದೇನೆ. ನನ್ನ ಕೈಯಲ್ಲಿರುವ ಹೂವು ಬೀಳದಂತೆ ನೋಡುವುದು ನಿಮ್ಮ ಜವಾಬ್ದಾರಿ ಎಂದು ತನ್ನ ಪ್ರಜೆಗಳಿಗೆ ಸೂಚಿಸಿದ್ದರು. ರಕ್ತ ಹರಿಯುತ್ತಿದ್ದರೂ ಶಾಂತಿಮಂತ್ರ ಜಪಿಸಿದ ಅವರಿಗೆ ನೊಬೆಲ್ ಪಾರಿತೋಷಕವೇನೋ ಸಿಕ್ಕಿತ್ತು. ಆದರೆ ಪ್ಯಾಲೆಸ್ತೀನ್ ಗರ್ಭದಲ್ಲಿ ಹುಟ್ಟಿದ ಬೆಂಕಿ ಇಡೀ ರಾಷ್ಟ್ರವನ್ನು ಸುಡುತ್ತಲೇ ಇತ್ತು. ಪ್ಯಾಲೆಸ್ತೀನ್ ಸ್ವಾತಂತ್ರ್ಯ ಸಾಧಿಸದೆ ನಮ್ಮ ಸ್ವಾತಂತ್ರ್ಯ ಅಪೂರ್ಣ ಎಂಬುದು ನಮಗೆ ಚೆನ್ನಾಗಿ ಗೊತ್ತಿದೆ ಎಂದ ಅಮೆರಿಕಾ ಅವತ್ತಿನ ಅಧ್ಯಕ್ಷರ ಅವರ ಹೇಳಿಕೆ ಆ ದೇಶದ ಆಡಳಿತದ ವೈರುಧ್ಯಸ್ಥಿತಿಯನ್ನು ಬಿಕರಿಗಿಟ್ಟಂತಿತ್ತು.
ಆಪರೇಶನ್ ಹಾಟ್ ವಿಂಟರ್, ಆಪರೇಶನ್ ಕಾಸ್ಟ್ ಲೆಡ್, ಆಪರೇಶನ್ ಪ್ರೊಟೆಕ್ಟಿವ್ ಎಜ್, ಎಕ್ಸೆಟ್ರಾ, ಎಕ್ಸೆಟ್ರಾ ಅಂತ ಇಸ್ರೇಲ್, ಪ್ಯಾಲೆಸ್ತೀನ್ನ ಗಾಜಾಪಟ್ಟಿಯಲ್ಲಿ ನಡೆಸಿದ ಮಾರಣಹೋಮ ಆ ದೇಶದ ನೈಜ ಕ್ರೂರತೆಯನ್ನು ಬಹಿರಂಗಪಡಿಸುತ್ತದೆ. ವಾಸ್ತವಗಳು ಬೇರೆಯದೇ ಕಥೆ ಹೇಳುವಾಗ, ವಾಸ್ತವಗಳು ಗೊತ್ತಿದ್ದೇ ಭಾರತದಂತಹ ರಾಷ್ಟ್ರಗಳು ಇಸ್ರೇಲ್ನಿಂದ ಗಾವುದ ನಿಂತಿರುವಾಗ- ಜಗತ್ತಿನಲ್ಲಿ ಇಸ್ರೇಲ್ಗೂ ಇಂಡಿಯಾಗೂ ವ್ಯತ್ಯಾಸವಿಲ್ಲ ಎಂದು ರಕ್ತಚರಿತ್ರೆಗೆ ತಳ್ಳುವ ಪ್ರಯತ್ನ ಮಾಡಿ ಚಪ್ಪಾಳೆಗಿಟ್ಟಿಸಿಕೊಂಡ ಮೋದಿಯವರ ನಿಲುವಿಗೆ ಆಕ್ರೋಶ ವ್ಯಕ್ತಪಡಿಸುವುದಾ..? ನಕ್ಕು ಸುಮ್ಮನಾಗುವುದಾ..? ನೀವೇ ಹೇಳಿ.
ಈ ಕಾಲಬೈರವ, ತೊಡೆ ಕೆರೆಯುವ ಹೇಳಿಕೆಗಳನ್ನು ಕೊಡುವವರ ತಲೆಯೊಳಗೆ ತುಂಬಬೇಕಿರುವುದು ಬೇಕಾದಷ್ಟಿದೆ. ಸುಮ್ಮನೇ ಕಪೋಲಕಲ್ಪಿತ ಕಥೆಗಳನ್ನು ಕಟ್ಟುತ್ತಾರೆ. ಸಮಾಜದ ದಿಕ್ಕು ತಪ್ಪಿಸಲು, ಮೊದಲೇ ಅರೆಬೆಂದವರ ಕಿವಿಯಲ್ಲಿ ಸುಳ್ಳಿನ ಸೀಸ ಸುರಿಯಲು ಏನೆಲ್ಲಾ ಬೇಕೋ ಅದನ್ನೇ ಮಾಡುತ್ತಾರೆ. ಶಸ್ತ್ರ ಸಾಮ್ರಾಜ್ಯದಲ್ಲಿ ದಿಟ್ಟವಾದ ದೇಶ, ಕಾಸು ಕೊಟ್ಟರೇ ಯುದ್ಧ ಸಾಮಾಗ್ರಿ ಸರಬರಾಜು ಮಾಡುವ ದೇಶವೆಂಬ ಕಾರಣಕ್ಕೆ ಪಕ್ಕದ ಚೀನಾವನ್ನು ಭಾರತ ಸರ್ವನಾಶ ಮಾಡುತ್ತದೆ ಎಂದು ಕಿಬ್ಬೊಟ್ಟೆ ಕೆಳಗೆ ಅದೆಂಥದೋ ವಿಚಿತ್ರ ಆವೇಶಕ್ಕೆ ಬೀಳುತ್ತಾರೆ. ಅವರಿಗೆ ಇಸ್ರೇಲ್ ಅಂದರೇನು..? ಪ್ಯಾಲೆಸ್ತೀನ್ ಅಂದರೇನು..? ಆ ನೆಲದಲ್ಲಿ ಬಿದ್ದ ಪ್ರತಿಯೊಂದು ಹೆಣಕ್ಕೂ ಬಾಕಿಯಿರಿಸಿರುವ ಲೆಕ್ಕಗಳೇನೆಂಬುದೇ ತಿಳಿದಿಲ್ಲ. ತಿಳಿಸುವ ಪ್ರಯತ್ನ ಮಾಡಿದರೂ ಬಡ್ಡೆತವು ಕೇಳೋಕೆ ತಯಾರಿಲ್ಲ.
ಹಾಗಂತ ತೀರಾ ವಿರೋಧಿಸುವಂತೆಯೂ ಇಲ್ಲ. ಯಹೂದಿಗಳು ಅಕ್ಷರಶಃ ಬೆಂಕಿಯಿಂದ ಎದ್ದುಬಂದವರು. ವಿಪರ್ಯಾಸವೆಂದರೇ ಅದೇ ಬೆಂಕಿಯ ಕವಸು ಧರಿಸಿಕೊಂಡೇ ಬದುಕುತ್ತಿದ್ದಾರೆ. ಮೈಮನಸ್ಸು ಎರಡೂ ಧಗಧಗಿಸುತ್ತಿದೆ. ಹೀಗಾಗಿಯೇ ಅವರು ಮುಟ್ಟಲಾಗದ ಸಾಮ್ರಾಜ್ಯ ಕಟ್ಟಿಕೊಂಡು ವಿಶ್ವಗುರುವೆನಿಸಿಕೊಂಡಿದ್ದಾರೆ. ಅಷ್ಟಕ್ಕೂ ಯಹೂದಿಗಳನ್ನು ಪೌರಾಣಿಕವಾಗಿ ಮುಟ್ಟಿದ್ದು ಮುಸಲ್ಮಾನರು. ಐತಿಹಾಸಿಕವಾಗಿ ತಟ್ಟಿದ್ದು ಯುರೋಪಿಯನ್ನರು. ವಾಸ್ತವದಲ್ಲಿ ಯಹೂದಿಗಳ ಕೈಮೇಲಾಗುತ್ತಿದೆ. ವಿಶ್ವವೇ ಉಧೋ ಎನ್ನುವಂತೆ ಮಾಡಿದ್ದಾರೆ. ಅವರು ಯಾವುದೇ ಅಂತಾರಾಷ್ಟ್ರೀಯ ಸದಸ್ಯತ್ವಕ್ಕೆ ದುಂಬಾಲು ಬೀಳುವುದಿಲ್ಲ. ಅವರಿಗದು ಬೇಕಾಗಿಯೂ ಇಲ್ಲ. ಆದರೆ ಅವರ ಅಣತಿಯಂತೆ ವಿಶ್ವದ ದೊಡ್ಡಣ್ಣಂದಿರು ಕೇಳುತ್ತಾರೆ.
ಎರಡನೇ ಮಹಾಯುದ್ಧಕ್ಕೂ ಮೊದಲು, ಯಹೂದಿಗಳನ್ನು ಹುಡುಕಾಡಿ ಕೊಲ್ಲುತ್ತಿದ್ದವರು ಯುರೋಪಿಯನ್ನರು. ಎರಡನೇ ಮಹಾಯುದ್ಧದ ವೇಳೆಗೆ ಯಹೂದಿಗಳ ವಿರುದ್ಧದ ದ್ವೇಷ ಭುಗಿಲೆದ್ದು ಅಂದಾಜು ಅರವತ್ತು ಲಕ್ಷ ಯಹೂದಿಯರನ್ನು ಕೊಲ್ಲಲಾಯಿತು. ಬೆರಳೆಣಿಕೆಯಷ್ಟಿದ್ದ ಅಥವಾ ಉಳಿದಿದ್ದ ಯಹೂದಿಗಳು ನೆಲಕಚ್ಚಿದಾಗ ಎತ್ತಲು ಬಲವಾದ ಹಸ್ತವೊಂದು ಬೇಕಿತ್ತು. ಆ ಕಾಲಕ್ಕೆ ಜಗತ್ತನ್ನೇ ಆಳುತ್ತಿದ್ದ ಬ್ರಿಟೀಷರು ಯಹೂದಿಗಳ ಪರ ನಿಂತರು. ಯಹೂದಿ ಸಾಮ್ರಾಜ್ಯ ಕಟ್ಟಿದರು. ನಮ್ಮ ಮೈಸೂರು, ಜೋಧ್ಪುರ್ ಸೈನಿಕರನ್ನು ಬ್ರಿಟೀಷ್ ಅಧಿಕಾರಿಯೊಬ್ಬ ಎತ್ತಾಕಿಕೊಂಡು ಹೋಗಿ ಹೋರಾಟಕ್ಕಿಳಿಸಿದ. ಒಟ್ಟೋಮನ್ ತುರ್ಕರು ಜಾಗ ಖಾಲಿಮಾಡಿದರು. 1948ರಲ್ಲಿ ಪ್ಯಾಲೆಸ್ತೀನ್ ಗರ್ಭ ಸೀಳಿ ಇಸ್ರೇಲ್ ಹುಟ್ಟಿಕೊಂಡಿತ್ತು. ಭಾರತದ ಮೇಲೆ ಇಸ್ರೇಲ್ಗಿರುವುದೇ ಈ ಅಭಿಮಾನ.
ಬೆಂಕಿಯಲ್ಲಿ ಅರಳಿದ ಇಸ್ರೇಲ್ ಆನಂತರ ಹಿಂಸೆಯನ್ನೇ ಪ್ರವೃತ್ತಿ ಮಾಡಿಕೊಂಡಿತ್ತು. ಈ ಲೆಬನಾನ್, ಪ್ಯಾಲೆಸ್ತೀನ್, ಜೋರ್ಡಾನ್, ಇರಾಕ್ನ ಮುಸ್ಲಿಂ ಮಾನವ ಹೋರಾಟ ಸಂಘಟನೆಗಳು ಹಠಕ್ಕೆ ಬಿದ್ದಂತೆ ಇಸ್ರೇಲ್ ಮೇಲೆರಗಿದವು. ಇಸ್ರೇಲ್ ಮೇಲೆ ಬಿದ್ದವರನ್ನು ಧೂಳು ಕೊಡವಿದಂತೆ ಕೊಡವಿ ಹಾಕಿತ್ತು. ಮಾನವ ಹಕ್ಕುಗಳ ಸಂಘಟನೆಯ ಅಂದಾಜು ಪ್ರಕಾರ 1936ರಿಂದ ಇಲ್ಲಿಯವರೆಗೆ ಇಪ್ಪತ್ತು ಲಕ್ಷ ಪ್ಯಾಲೆಸ್ಟಿನ್ನರು ಜಿಯೋನಿಸ್ಟರ, ಇಸ್ರೇಲಿ ಸರ್ಕಾರದ ಹಾಗೂ ಅವರ ಬೆಂಬಲಿಗರ ದಾಳಿಗಳಿಂದ ಸತ್ತಿದ್ದಾರೆ. ಕೆಲವರು ಆಕ್ರಮಣದಿಂದ, ಹಲವರು ನಿರಾಶ್ರಿತರಾಗಿ ಪರೋಕ್ಷ ಹಿಂಸಾಚಾರದಿಂದ ನರಳಿ ಸತ್ತಿದ್ದಾರೆ.
ಇಸ್ರೇಲ್ ದಾಳಿಗಿಳಿದ ನಂತರ ಸುಮಾರು 70 ಪ್ಯಾಲೆಸ್ತೀನಿಯರು ನಿರಾಶ್ರೀತರಾದರು. 41 ಲಕ್ಷ ಜನರು ಎಲ್ಲಾ ರೀತಿಯ ಮಾನವ ಹಕ್ಕುಗಳಿಂದ ವಂಚಿತರಾದರು. 9 ಲಕ್ಷ ಮಕ್ಕಳು ಗಾಜಾ ಎಂಬ ಮೆಗಾ ಕ್ಯಾಂಪಿನಲ್ಲಿ ಬಂಧಿತರಾಗಿದ್ದಾರೆ. ಗಾಜಾ ಪಟ್ಟಿ ಪ್ರದೇಶ 1991ರಿಂದಲೇ ಇಸ್ರೇಲಿ ನಿರ್ಬಂಧಕ್ಕೆ ಒಳಗಾಗಿದೆ. 2007ರಿಂದ ಪೂರ್ಣ ದಿಗ್ಬಂಧನಕ್ಕೆ ಒಳಗಾಗಿದೆ. 2008ರಿಂದ ಮೂರು ಬಾರಿ ಇಸ್ರೇಲಿ ಮಿಲಿಟರಿ ದಾಳಿಗೆ ಒಳಗಾಗಿದೆ. 2014ರ ಜುಲೈ ಮತ್ತು ಆಗಸ್ಟ್ನಲ್ಲಿ ಐವತ್ಮೂರು ದಿನಗಳ ಕಾಲ ನಡೆದ ದಾಳಿ ಭೂಮಂಡಲದ ದಾಳಿಗಳಲ್ಲೇ ಅತ್ಯಂತ ಭೀಕರವೆನ್ನಲಾಗಿದೆ.
ಗಾಜಾದ 365 ಚದರ ಕಿಲೋಮೀಟರ್ ಪ್ರದೇಶದಲ್ಲಿ ಇರುವ ಜನಸಂಖ್ಯೆ 17 ಲಕ್ಷ. ಅವರಲ್ಲಿ ಶೇಕಡಾ ನಲವತ್ಮೂರರಷ್ಟು 14 ವರ್ಷಕ್ಕಿಂತ ಕೆಳಗಿನ ಮಕ್ಕಳಿದ್ದಾರೆ. ಶೇಕಡಾ 38 ಮಂದಿ ಬಡತನ ರೇಖೆಗಿಂತ ಕೆಳಗಿದ್ದಾರೆ. ಇಂತಹ ಪ್ರದೇಶದ ಮೇಲೆ ಇಸ್ರೇಲ್ ಸತತ ಐವತ್ತಮೂರು ದಿನಗಳ ಕಾಲ ದಾಳಿ ನಡೆಸಿತ್ತು. ಲೋಡುಗಟ್ಟಲೇ ಬಾಂಬ್ಗಳನ್ನು ಸುರಿಸಿತ್ತು. ಐವತ್ತು ಸಾವಿರಕ್ಕಿಂತ ಹೆಚ್ಚು ಶೆಲ್ಗಳನ್ನು ಉಡಾಯಿಸಿತ್ತು. ಈ ದಾಳಿಗೆ ಅಂದಾಜು ಎರಡು ಸಾವಿರದ ನೂರ ನಲವತ್ತೈದು ಪ್ಯಾಲೆಸ್ತೀನರು ಸತ್ತರು. ಅವರಲ್ಲಿ ಶೇಕಡಾ ಮೂವತ್ತಕ್ಕೂ ಹೆಚ್ಚು ಮಕ್ಕಳು ಇಸ್ರೇಲ್ ಕ್ರೌರ್ಯಕ್ಕೆ ಸಾಕ್ಷಿಯಾಗಿ ಸತ್ತರು.
ಈ ದಾಳಿಯಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಮಂದಿ ವಾಸಿಯಾಗದ ಅಂಗವೈಕಲ್ಯಕ್ಕೆ ತುತ್ತಾದರು. ಅಷ್ಟೇ ಪ್ರಮಾಣದ ಮನೆಗಳನ್ನು ಅಲ್ಲಿನ ನಿವಾಸಿಗಳು ಕಳೆದುಕೊಂಡರು. ಐವತ್ತು ಸಾವಿರಕ್ಕೂ ಹೆಚ್ಚು ಮನೆಗಳು ನಾಶವಾದರೇ, ಶೇಕಡಾ ಮೂವತ್ತಕ್ಕೂ ಹೆಚ್ಚು ಶಾಲೆಗಳು ನಾಶವಾಗಿ ನಾಲ್ಕು ಮುಕ್ಕಾಲು ಲಕ್ಷ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಆಸ್ಪತ್ರೆಗಳು ನೆಲಸಮವಾಗಿದೆ. ಶೇಕಡಾ ನಲವತ್ಮೂರಕ್ಕೂ ಹೆಚ್ಚು ಜನರು ನಿರುದ್ಯೋಗಿಗಳಾಗಿದ್ದಾರೆ. ಮಾನವ ಬದುಕಿನ ಕರಾಳ ಅದ್ಯಾಯ ಬರೆದ ಇದೇ ಇಸ್ರೇಲ್ ಇವತ್ತು ನಮ್ಮ ದೇಶದ ಸ್ಪೂರ್ತಿ ಎಂದು ಪ್ರಧಾನಿ ಮೋದಿ ಹೇಳುತ್ತಾರೆ. ಅವರು ಇತಿಹಾಸವನ್ನು ಅರಿಯದಿದ್ದರೂ, ಒಂದೆರಡು ದಶಕಗಳ ವಿದ್ಯಮಾನವನ್ನಾದರೂ ನೆನಪು ಮಾಡಿಕೊಳ್ಳಬೇಕಿತ್ತು.
ಪ್ಯಾಲೆಸ್ತೀನರನ್ನು ಬುಡಸಮೇತ ನಾಶಮಾಡಿ ಆ ಜಾಗದಲ್ಲಿ ಯಹೂದಿ ಸಾಮ್ರಾಜ್ಯವನ್ನು ವಿಸ್ತಾರಗೊಳಿಸುವುದು ಇಸ್ರೇಲ್ನ ಮಹತ್ವಾಕಾಂಕ್ಷೆಯಾಗಿದೆ. ಅದಕ್ಕಾಗಿ ತನ್ನ ಶಸ್ತ್ರಕೋಟೆಯನ್ನು ಭದ್ರಪಡಿಸಿಕೊಂಡಿದೆ. ನಿಸ್ಸಂಶಯವಾಗಿ ಅಮೆರಿಕಾ ಸಾಥ್ ಕೊಟ್ಟಿದೆ. ವಿಶ್ವಸಂಸ್ಥೆ ಜಗತ್ತಿನ ಕಣ್ಣೊರೆಸೋ ಕೆಲಸವನ್ನಷ್ಟೇ ಮಾಡುತ್ತಿದೆ. ಹೀಗಾಗಿ ನಿಂತ ನೆಲದಲ್ಲಿ ನ್ಯಾಯ ಹುಡುಕಲು ಗುಂಪುಗಳು ಹುಟ್ಟಿಕೆಂಡವು. ಪ್ಯಾಲೆಸ್ತೀನ್ಗಾಗಿ ಲೆಬನಾನ್, ಜೋರ್ಡಾನ್, ಸಿರಿಯ, ಈಜಿಪ್ಟ್ ಸುತ್ತಮುತ್ತಲ ದೇಶಗಳ ಬಂಡುಕೋರರು ಸಿಡಿದುನಿಂತರು. ರಕ್ತಕ್ಕೆ ರಕ್ತವೇ ಉತ್ತರ ಎಂಬ ನಿರ್ಧಾರಕ್ಕೆ ಬಂದರು. ಯಾಸಿರ್ ಅರಾಫತ್ಗೆ ಸಿಕ್ಕಿದ ನೊಬೆಲ್ ಪಾರಿತೋಷಕಕ್ಕೂ ರಕ್ತ ಮೆತ್ತಿಕೊಂಡಿತ್ತು.
ಅರಬ್ ದೇಶಗಳಲ್ಲಿ ಸಾಮ್ರಾಜ್ಯಶಾಹಿ-ವಿರೋಧಿ ಅರಬ್ ರಾಷ್ಟ್ರೀಯವಾದಿ ಸರ್ಕಾರಗಳು ಪ್ಯಾಲೆಸ್ತೀನರ ಹೋರಾಟವನ್ನು ಬೆಂಬಲಿಸಿದವು. 1964ರಲ್ಲಿ ಆಗ ರಾಷ್ಟ್ರೀಯವಾದಿ ಅರಬ್ ಲೀಗ್ ಎಲ್ಲಾ ಪ್ಯಾಲೆಸ್ತೀನಿ ರಾಜಕೀಯ-ಗೆರಿಲ್ಲಾ ಗುಂಪುಗಳ ಸಭೆ ಕರೆದು ಪ್ಯಾಲೆಸ್ತೀನ್ ವಿಮೋಚನಾ ಸಂಘಟನೆ ಸ್ಥಾಪಿಸಿತು. ಇದರ ಮುಖ್ಯ ಗುಂಪು ಫತಾ ಎಂಬ ಯಾಸೆರ್ ಅರಾಫತ್ ನಾಯತ್ವದ ಗುಂಪಾಗಿತ್ತು. ಅದರ ಜೊತೆಗೆ ಹಲವು ರಾಷ್ಟ್ರೀಯವಾದಿ, ಎಡ, ಕಮ್ಯುನಿಸ್ಟ್ ಗುಂಪುಗಳು ಸೇರಿಕೊಂಡವು. ಸೋವಿಯತ್ ಒಕ್ಕೂಟ ಕೂಡ ಸೆಕ್ಯುಲರ್ ಗುಂಪುಗಳಿಗೆ ಸಾಥ್ ಕೊಟ್ಟಿತ್ತು.
ಪ್ಯಾಲೆಸ್ತೀನ್ ಗರ್ಭದಲ್ಲಿ ಹುಟ್ಟಿದ್ದರಿಂದ ಇಸ್ರೇಲ್ಗೆ ಯಹೂದಿ ದೇಶವಾಗಿ ಮಾನ್ಯ ಮಾಡಲಿಕ್ಕೆ ಪ್ಯಾಲೆಸ್ತೀನ್ ವಿಮೋಚನಾ ಸಂಘಟನೆ, ಪಿಎಲ್ಓ ಸಿದ್ಧವಿರಲಿಲ್ಲ. ಅದು 1946ರವರೆಗೆ ಇದ್ದ ಬ್ರಿಟೀಷ್ ಮ್ಯಾಂಡೇಟಿನ ಗಡಿಗಳಿರುವ ಸ್ವತಂತ್ರ ಅವಿಭಜಿತ ಪ್ಯಾಲೆಸ್ತೀನ್ ದೇಶಕ್ಕಾಗಿ ಒತ್ತಾಯಿಸುತ್ತಿತ್ತು. ಅದನ್ನು ಸಶಸ್ತ್ರ ಹೋರಾಟದಿಂದ ಪಡೆಯುವುದು ಅದರ ಗುರಿಯಾಗಿತ್ತು. ಗಮನಿಸಿ, ಈ ಸಂಘಟನೆಗಳು ಶಾಂತಿಯುತ ಹೋರಾಟದ ಮೂಲಕ ಪ್ಯಾಲೇಸ್ತೀನ್ ವಿಮೋಚನೆಗಾಗಿ ರಂಗೇರಿದ್ದವು. ಆದರೆ ಇಸ್ರೇಲ್ ಶಸ್ತ್ರಗಳ ಮೂಲಕ ದಮನಕಾರಿ ಮಾರ್ಗಗಳನ್ನು ಹುಡುಕಿಕೊಂಡಿತ್ತು. ಹೂನೆಲದಲ್ಲಿ ನೆತ್ತರು ಹರಿಸಿತ್ತು. ರಕ್ತಕ್ಕೆ ರಕ್ತವೇ ಉತ್ತರವಾದರೇ ಅದಕ್ಕೂ ಸಿದ್ದ ಎಂದು ಈ ಸಂಘಟನೆಗಳು ಭಾವಿಸಿದ್ದು ತೀರಾ ಇತ್ತೀಚೆಗೆ..! ಪುರಾಣ, ಇತಿಹಾಸಗಳು ಯಹೂದಿ ಸಾಮ್ರಾಜ್ಯ ಅವನತಿಗೆ ಕಾರ್ಯಪೃವೃತ್ತವಾಗಿದ್ದಕ್ಕೆ ಕಾರಣಗಳಿತ್ತು. ವಾಸ್ತವದಲ್ಲಿ ಇಸ್ರೇಲಿಗಳ ಪಶುತ್ವದ ದಿಗ್ದರ್ಶನವಾಗುತ್ತಿದೆ.
1948ರ ಯುದ್ಧದ ನಂತರ ದೇಶಬಿಟ್ಟ ಲಕ್ಷಾಂತರ ಪ್ಯಾಲೆಸ್ತೀನರು ದೇಶಕ್ಕೆ ಮರಳಿ ಅವರ ಭೂಮಿಯಲ್ಲಿ ವಾಸಿಸುವುದು ಅವರ ಹಕ್ಕು ಪಿಎಲ್ಓ ಪ್ರತಿಪಾದಿಸುತ್ತಿತ್ತು. 1960, 70, 80ರ ದಶಕದಲ್ಲಿ ಅದು ಸುಮಾರು ಮೂವತ್ತು ಸಾವಿರ ಗೆರಿಲ್ಲಾ ಪಡೆಗಳನ್ನು ಹೊಂದಿತ್ತು. 1967 -1972 ರವರೆಗೆ ಜೋಡರ್ಾನಿನಲ್ಲಿ, 1972-1982 ವರೆಗೆ ಲೆಬನಾನಿನಲ್ಲಿ 1982-1993ರವರೆಗೆ ಟುನಿಶಿಯಾದಲ್ಲಿ ಮುಖ್ಯ ಕಚೇರಿ ಹೊಂದಿತ್ತು. ಪಿಎಲ್ಓವನ್ನು ಪ್ಯಾಲೆಸ್ತೀನ್ನರ ಏಕಮಾತ್ರ ಕಾನೂನುಬದ್ಧ ಪ್ರತಿನಿಧಿಯಾಗಿ ನೂರಕ್ಕೂ ಹೆಚ್ಚು ದೇಶಗಳು ಮಾನ್ಯ ಮಾಡಿದ್ದವು ಇಸ್ರೇಲಿ ಆಕ್ರಮಿತ ಪ್ರದೇಶದಲ್ಲಿ 1987-1993ರ ಅವಧಿಯಲ್ಲಿ ಪಿಎಲ್ಓಯೇತರ ನಾಲ್ಕು ಗುಂಪುಗಳು ಇಸ್ರೇಲ್ ಪ್ರಭುತ್ವ ವಿರುದ್ಧ ಮಹಾಹೋರಾಟ ನಡೆಸಿ ವಿಶ್ವದ ಗಮನಕ್ಕೆ ತಂದಿತ್ತು. ಇನ್ನೇನು ಇಸ್ರೇಲಿಗಳ ಹರಕತ್ತು ಮುಗಿಯಿತೆನ್ನುವಾಗ ಅರಬ್ ದೇಶಗಳಲ್ಲಿ ರಾಷ್ಟ್ರೀಯವಾದಿ ಸಾಮ್ರಾಜ್ಯಶಾಹಿ-ವಿರೋಧಿ ಶಕ್ತಿಗಳಿಗೆ ಹಿನ್ನಡೆಯಾಗಿತ್ತು. ಅರಬ್ ಆರ್ಥಿಕ-ಮಿಲಿಟರಿ ಬೆಂಬಲ ಕ್ಷೀಣಿಸಿತ್ತು. ಈ ವೈಫಲ್ಯವನ್ನು ಮೊದಲ ಇಂತಿಫದಾ ವೈಫಲ್ಯವೆನ್ನಲಾಗುತ್ತದೆ.
1980ರ ದಶಕದಲ್ಲಿ ಇಸ್ಲಾಮಿಕ್ ಉಗ್ರವಾದಿ ಧೋರಣೆಗಳು ಮತ್ತು ಗುಂಪುಗಳು ಪ್ಯಾಲೆಸ್ತೀನ್ನರಲ್ಲೂ ಬೆಂಬಲ ಪಡೆದವು. ಪಿಎಲ್ಓವನ್ನು ವಿರೋಧಿಸಿದವು. ಅವುಗಳಿಗೆ ಲೆಬನಾನಿನ ಇಸ್ಲಾಮಿಕ್ ಗುಂಪುಗಳ ಬೆಂಬಲವಿತ್ತು. ಸೆಕ್ಯುಲರ್ ಪಿಎಲ್ಒವನ್ನು ಮಣಿಸುವುದು ಅಮೆರಿಕ-ಇಸ್ರೇಲಿ ತಂತ್ರವೂ ಆಗಿತ್ತು. ಮೊದಲ ಇಂತಿಫದಾದ ವೈಫಲ್ಯದ ನಂತರ ಅರಾಫತ್ ಮತ್ತು ಫತಾ ರಹಸ್ಯ ಮಾತುಕತೆಗಳನ್ನು ನಡೆಸಿ 1993 ಒಸ್ಲೊ ಒಪ್ಪಂದವಾಯಿತು. 1996ರಲ್ಲಿ ಪ್ಯಾಲೆಸ್ತೀನಿ ಪ್ರದೇಶಗಳಿಗೆ ಸರ್ಕಾರ ರಚನೆಯಾಯಿತು. ಯಾಸಿರ್ ಅರಾಫತ್ ಅಧ್ಯಕ್ಷರಾದರು.
ಈ ಅವಧಿಯಲ್ಲಿ ಆರಂಭವಾಗಿದ್ದು ಎರಡನೇ ಇಂತಿಫದಾ. ಈ ಹಂತದಲ್ಲಿ ರಾಜಕೀಯ ಮಿಲಿಟರಿ ಬಲ ಕಡಿಮೆಯಾಗಿ ಇಸ್ಲಾಮಿಕ್ ಉಗ್ರಗುಂಪುಗಳ ಬಲ ಹೆಚ್ಚುತ್ತಾ ಹೋಯಿತು. ಹಾಮಾಸ್ ತೀವ್ರಗಾಮಿ ನಡೆಯಿಂದ ಇಸ್ರೇಲಿಗಳ ವಿರುದ್ಧ ಜಿಹಾದಿಗಿಳಿಯಿತು. ಈ ಅವಧಿಯಲ್ಲಿ ಇಸ್ರೇಲ್ ಆರಂಭಿಸಿದ ದೀರ್ಘ ಎತ್ತರದ ಗೋಡೆ ನಿರ್ಮಾಣ ಪ್ಯಾಲೆಸ್ತೀನ್ನರನ್ನು ಇನ್ನಷ್ಟು ಕೆರಳಿಸಿತು. ಈ ಗೋಡೆ ಪ್ಯಾಲೆಸ್ತೀನ್ ಪ್ರದೇಶಗಳ ಮೇಲೆ ಅಂತರ್ರಾಷ್ಟ್ರೀಯ ನಿಯಮಗಳಿಗೆ ವಿರುದ್ಧವಾಗಿ ಕಟ್ಟಿದ್ದಾಗಿತ್ತು. ಲಕ್ಷಾಂತರ ಪ್ಯಾಲೆಸ್ತೀನ್ನರು ಈ ಗೋಡೆಗಳ ಹಿಂದೆ ಪ್ರತ್ಯೆಕ ಶಿಬಿರಗಳಲ್ಲಿ ವಸತಿರಹಿತ ಜಾಗಗಳಲ್ಲಿ ಜೀವಿಸುತ್ತಿದ್ದಾರೆ. ಸುಮಾರು ಎರಡು ಲಕ್ಷಕ್ಕೂ ಮೀರಿದ ಪ್ಯಾಲೇಸ್ತೀನ್ ರೈತರನ್ನು ಅವರು ಸಾಗುವಳಿ ಮಾಡುತ್ತಿದ್ದ ಭೂಮಿಯಿಂದ ಹೊರಹಾಕಲಾಗಿದೆ. ಪ್ಯಾಲೆಸ್ತೀನರು ಈ ಗೋಡೆಯಿಂದಾಗಿ ದಿನನಿತ್ಯವೂ ತಮ್ಮ ಐಡೆಂಟಿಟಿಗಾಗಿ ಹೆಣಗಬೇಕಾಗಿದೆ. ತೀವ್ರ ತಪಾಸಣೆಗೊಳಪಡುತ್ತಿದ್ದಾರೆ. ಅವಹೇಳನದಿಂದ ತತ್ತರಿಸುತ್ತಿದ್ದಾರೆ. ಸಾವುನೋವುಗಳು ಸಾಮಾನ್ಯವಾಗಿದೆ. ಎಲ್ಲಾ ಮಾನವಹಕ್ಕುಗಳನ್ನು ಉಲ್ಲಂಘಿಸುವ ಗೋಡೆಯ ಆಚೆಗೆ ಹೆಣಗಾಟ, ಈಚೆಗೆ ಚಿದ್ವಿಲಾಸ ಕೇಳಿಬರುತ್ತಿದೆ.
2006ರಲ್ಲಿ ನಡೆದ ಚುನಾವಣೆಯಲ್ಲಿ ಪಿಓಎಲ್ ಅನ್ನು ಮಕಾಡೆ ಬೀಳಿಸಿದ ಹಾಮಾಸ್ ಅಧಿಕಾರಕ್ಕೇರಿತು. ಮಂದಗಾಮಿ ನಿಲುವಿಗಿಂತ ತೀವ್ರಗಾಮಿ ನಿಲುವೇ ಸೂಕ್ತ ಎಂದು ಪ್ಯಾಲೇಸ್ತೀನರು ಭಾವಿಸಿದ್ದರು. ಆದರೆ ಹಾಮಾಸ್ ಅಧಿಕಾರಕ್ಕೇರುತ್ತಿದ್ದಂತೆ ಇಸ್ರೇಲ್ ಮೈಕೊಡವಿ ಎದ್ದುನಿಂತಿತ್ತು. ಗಾಜಾಪಟ್ಟಿಯ ಮೇಲೆ ದಾಳಿ ಮಾಡಿತ್ತು. ಸಾವಿರಾರು ಜನರು ಸತ್ತರು. ಲಕ್ಷಾಂತರ ಜನರು ಅತಂತ್ರರಾದರು. ಸಾವಿನ ಮೇಲೆ ಸಾಮ್ರಾಜ್ಯ ಕಟ್ಟಿದ, ಕಟ್ಟುತ್ತಿರುವ ಇಸ್ರೇಲ್ ನಮ್ಮ ದೇಶಕ್ಕೆ ಸ್ಪೂರ್ತಿ ಎಂದಿದ್ದು ನಮ್ಮದೇಶದ ಬಫೂನ್. ಕಿಂಗ್ ಡೇವಿಡ್ ಹೋಟೆಲ್ ಕೋಣೆಯಲ್ಲಿ ಸುಖದ ನರಳಿಕೆಯಲ್ಲಿರುವ ಮಾಧ್ಯಮಗಳಿಗೆ ಈ ಸತ್ಯಗಳು ಬೇಕಿರಲಿಲ್ಲ.
ಈಗ ಮತ್ತೆ ಹೂನೆಲದಲ್ಲಿ ಬೆಂಕಿ ಹೊತ್ತಿದೆ. ಅಗ್ನಿಸ್ಪರ್ಶ ಮಾಡಿದ ಇಸ್ರೇಲ್ ಬುಡಕ್ಕೇ ಬೆಂಕಿ ಬಿದ್ದಿದೆ.
– ರಾ ಚಿಂತನ್














