*ಯಾ ಅಲ್ಲಾಹ್!!!*
*ಹಸಿವಿನಿಂದ ಸಾಯುತ್ತಿರುವ ಯೆಮೆನ್ ನ ಮಕ್ಕಳಿಗೆ ಆಹಾರ ಕೊಡು*.
*ತಟ್ಟೆಯಲ್ಲಿ ಆಹಾರ ವೇಸ್ಟ್ ಮಾಡುತ್ತಿರುವ ನಮಗೆ ಬುದ್ಧಿ ಕೊಡು.*

✒️ ರಫೀಕ್ ಮಾಸ್ಟರ್

ಯೆಮನ್ ದೇಶದಲ್ಲಿ ಈ ವರ್ಷ 5 ವರ್ಷದ ಕೆಳಗಿನ ಅಂದಾಜು 4 ಲಕ್ಷ ಮಕ್ಕಳು ಹಸಿವೆಯಿಂದ ಸಾಯಲಿದ್ದಾರೆ ಎಂದು ವಿಶ್ವಸಂಸ್ಥೆಯ ಏಜೆನ್ಸಿ ವರದಿ ಮಾಡಿದೆ. ಯುದ್ಧಪೀಡಿತ ಯೆಮನ್ ನಲ್ಲಿ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಆಹಾರದ ಕೊರತೆಯಿಂದ ಸಾಯುತ್ತಿದ್ದಾರೆ. ಜಗತ್ತಿಗೆ ರಿಝ್ಕ್ ಕೊಡುವ ರಾಝಿಕ್ ಆದ ಅಲ್ಲಾಹನೇ!! ಆ ಎಲ್ಲಾ ಮಕ್ಕಳಿಗೆ ಆಹಾರವನ್ನು ಕೊಡು. ಈ ಜಗತ್ತಿನಲ್ಲಿ ಯಾವುದೇ ಮಗು ಕೂಡ ಹಸಿವೆಯಿಂದ, ಅಪೌಷ್ಟಿಕತೆಯಿಂದ ಸಾಯಬಾರದು. ನಮ್ಮ ಕಣ್ಣ ಮುಂದೆ ಇಂತಹ ಘಟನೆಗಳು ನಡೆಯುತ್ತಿದ್ದರೂ ನಾವಿನ್ನೂ ಎಚ್ಚೆತ್ತುಕೊಂಡಿಲ್ಲ. ನಮ್ಮ ಆಹಾರ ಸ್ವಲ್ಪ ಹೊಟ್ಟೆಗೆ, ಜಾಸ್ತಿ ತೊಟ್ಟಿಗೆ ಸೇರುತ್ತಿದೆ.

ಇತ್ತೀಚೆಗೆ ನಾನೊಂದು ಮದುವೆ ಹಾಲ್ ನಲ್ಲಿ ನೋಡಿದ ಘಟನೆ. ಒಬ್ಬ ತಂದೆ ತನ್ನ ಪ್ಲೇಟ್ ನಲ್ಲಿ ವಿವಿಧ ಬಗೆಯ ಆಹಾರವನ್ನು ತಂದರು. ತನ್ನ ಪುಟ್ಟ ಮಗುವಿಗೆ ಇನ್ನೊಂದು ಪ್ಲೇಟ್ ನಲ್ಲಿ ಅಷ್ಟೇ ಆಹಾರವನ್ನು ತಂದರು. ಮಗು ಅದರಲ್ಲಿ ಕೇವಲ ಒಂದು ಐಟಂ ತಿಂದು ಹಾಗೇ ಬಿಟ್ಟಿತು. ತಂದೆಗಂತೂ ತನ್ನ ಪ್ಲೇಟನ್ನೇ ಮುಗಿಸುವುದು ಕಷ್ಟಕರವಾಗಿತ್ತು . ಕೊನೆಗೆ ಮಗುವಿನ ಪ್ಲೇಟ್ ನಲ್ಲಿರುವ ಆಹಾರ ತೊಟ್ಟಿ ಸೇರಿತು. ಇದು ನಮ್ಮ ಪ್ರತಿ ಮದುವೆಯಲ್ಲಿ ಕಂಡುಬರುವ ಸಾಮಾನ್ಯ ದೃಶ್ಯ. ಅದೆಷ್ಟೋ ಮಂದಿ ಮದುವೆಯಲ್ಲಿ ವಿತರಿಸುವ ಹತ್ತಿಪ್ಪತ್ತು ಬಗೆಯ ಐಟಮ್ ಗಳನ್ನು ಪ್ಲೇಟಲ್ಲಿ ತುಂಬಿಸಿ ಅದರಲ್ಲಿ ಕೆಲವಷ್ಟು ತಿಂದು, ಉಳಿದುದನ್ನು ತೊಟ್ಟಿಗೆ ಬಿಸಾಡುವ ನಮಗೆ ನಮ್ಮ ಭಾರತದ, ಯೆಮನಿನ, ಸುಡಾನಿನ ಹಸಿವೆಯಿಂದ ಸಾಯುತ್ತಿರುವ ಮಕ್ಕಳು ಕಾಣುವುದಿಲ್ಲ ಏಕೆ?

ಹಸಿವು ಎಂಬುದು ಎಷ್ಟೊಂದು ಭಯಾನಕ ಎಂಬುದನ್ನು ನಿಮ್ಮ ಮುಂದಿಡುತ್ತಿದ್ದೇನೆ.

ಒಂದು ವಿಮಾನ ಅಪಘಾತವಾಗಿ ಅಜ್ಞಾತ ಸ್ಥಳದಲ್ಲಿ ಬಿದ್ದಿತ್ತು. ಕೆಲವರು ಬದುಕಿ ಉಳಿದಿದ್ದರು. ಅವರಿಗೆ ತಿನ್ನಲು ಏನೂ ಇಲ್ಲ. ಕೊನೆಗೆ ಹಸಿವನ್ನು ತಾಳಲಾರದೆ ವಿಮಾನ ಅಪಘಾತದಲ್ಲಿ ಸತ್ತು ಬಿದ್ದಿರುವ ಸಹ ಪ್ರಯಾಣಿಕರ ಮೃತದೇಹವನ್ನೇ ಕೊಯ್ದು ತಿಂದರು. ಹಸಿವು ಎಂಬುದು ಅಷ್ಟೊಂದು ಭಯಾನಕವಲ್ಲವೇ?

ಜಗತ್ತಿನ ಶ್ರೇಷ್ಠ ಫೋಟೋಗ್ರಫರ್ *ಕೆವಿನ್ ಕಾರ್ಟರ್* ಗೆ ಪುಲಿಟ್ಜರ್ ಪ್ರಶಸ್ತಿ ತಂದುಕೊಟ್ಟ ಒಂದು ಫೋಟೋಗ್ರಫಿ. ಅದೇ ಹಸಿವೆಯಿಂದ ನಡೆಯಲಾಗದೆ ತೆವಳಿಕೊಂಡೇ ಆಹಾರ ಹುಡುಕಿಕೊಂಡು ಶಿಬಿರದತ್ತ ಹೋಗುತ್ತಿರುವ ಸುಡಾನಿನ ಮಗು, ಇನ್ನೊಂದೆಡೆ ಆ ಮಗುವನ್ನೇ ಆಹಾರಕ್ಕಾಗಿ ಕಾಯುತ್ತಿರುವ ರಣಹದ್ದು. ಈ ಎರಡು ದೃಶ್ಯಗಳನ್ನು ಏಕಕಾಲಕ್ಕೆ ಸೆರೆಹಿಡಿದ ಆ ಅದ್ಭುತ ಫೋಟೋಗ್ರಫಿಗೆ ಪುಲಿಟ್ಜರ್ ಪ್ರಶಸ್ತಿ ಬಂತು. ತನಗೆ ಇಷ್ಟೊಂದು ಕೀರ್ತಿ ತಂದುಕೊಟ್ಟ ಮಗುವಿಗೆ ಏನಾಯಿತು ಎಂದು ಕೆವಿನ್ ಕಾರ್ಟರ್ ಎಲ್ಲೆಡೆ ಹುಡುಕಿದರು. ಮಗು ಎಲ್ಲೂ ಸಿಗಲಿಲ್ಲ. ಆ ಮಗುವನ್ನು ಬದುಕಿಸಲಾಗಲಿಲ್ಲ ಎಂಬ ವ್ಯಥೆಯಿಂದ ಮಾನಸಿಕ ಖಿನ್ನತೆಗೊಳಗಾದರು. ಕೊನೆಗೆ ಆತ್ಮಹತ್ಯೆಗೆ ಶರಣಾದರು.

*ಅಕ್ಷಯ ಟ್ರಸ್ಟ್* ಎಂಬ ಸಂಸ್ಥೆಯನ್ನು ಸ್ಥಾಪಿಸಿ ನೂರಾರು ಮಂದಿ ಮಾನಸಿಕ ಅಸ್ವಸ್ಥರಿಗೆ, ನಿರ್ಗತಿಕರಿಗೆ ಆಶ್ರಯ ಕೊಟ್ಟವರು ನಾರಾಯಣನ್ ಕೃಷ್ಣನ್. ಅವರ ಬದುಕನ್ನು ಬದಲಾಯಿಸಿದ ಒಂದು ದೃಶ್ಯ. ಅದೇ ಒಬ್ಬ ವಯಸ್ಸಾದ ವ್ಯಕ್ತಿ ಹಸಿವೆಯನ್ನು ತಾಳಲಾರದೆ ತನ್ನದೇ ಮಲ ತಿನ್ನುತ್ತಿರುವುದು. ಇದನ್ನು ನಿಮಗೆ ನಂಬಲು ಕಷ್ಟವಾಗಬಹುದು. ಆದರೂ ಇದು ಸತ್ಯ.

ಹಸಿವು ಅಷ್ಟೊಂದು ಭಯಾನಕ. ಅಲ್ಲಾಹನು ಅದನ್ನು ಚೆನ್ನಾಗಿ ಬಲ್ಲವನು. ಆ ಕಾರಣಕ್ಕಾಗಿಯೇ ನಿಷಿದ್ಧಗೊಳಿಸಿದ (ಹರಾಂ) ಹಂದಿ ಮಾಂಸವನ್ನು ಹಸಿವೆಯಿಂದ ಸಾಯುತ್ತಿರುವವರಿಗೆ ತಿನ್ನಲು ಅನುಮತಿಸಿದ. ಹಸಿವನ್ನು ತಿಳಿಯುವ ಸಲುವಾಗಿ ಉಪವಾಸವನ್ನು ಕಡ್ಡಾಯಗೊಳಿಸಿದ. ಉಪವಾಸ ಎಂಬುದು ಇಲ್ಲದಿರುತ್ತಿದ್ದರೆ ಈ ಜಗತ್ತಿನ ಶ್ರೀಮಂತರಿಗೆ ಹಸಿವು ಅಂದರೆ ಏನು ಎಂಬ ಕಲ್ಪನೆಯೇ ಇರುತ್ತಿರಲಿಲ್ಲ.

ಇಸ್ಲಾಮಿನ ಬಗ್ಗೆ, ಪ್ರವಾದಿ ಮುಹಮ್ಮದರ (ಸ.ಅ) ಜೀವನದ ಬಗ್ಗೆ ಬಹಳಷ್ಟು ಅಧ್ಯಯನ ಮಾಡಿ, ಪ್ರಶಂಸೆಯ ಮಾತುಗಳನ್ನಾಡುವ ಕೇರಳದ ಸ್ವಾಮಿಯೊಬ್ಬರ ಒಂದು ವೀಡಿಯೋ ನೋಡಿದೆ. ಅವರೇ ಹೇಳುವಂತೆ ” ಪ್ರವಾದಿ ಮುಹಮ್ಮದರು(ಸ.ಅ) ಊಟಕ್ಕೆ ಕುಳಿತುಕೊಳ್ಳುವಾಗ ಒಂದು ಸೂಜಿ ಮತ್ತು ಒಂದು ನೀರಿನ ಪಾತ್ರೆ ಹತ್ತಿರ ಇಟ್ಟುಕೊಳ್ಳುತ್ತಿದ್ದರು. ಪ್ರವಾದಿ ವರ್ಯರು ತಿನ್ನುವಾಗ ಬಹಳಷ್ಟು ಸೂಕ್ಷ್ಮತೆಯನ್ನು ಪಾಲಿಸುತ್ತಿದ್ದರು. ಒಂದಿಷ್ಟು ಕೂಡ ಕೆಳಗೆ ಬೀಳುತ್ತಿರಲಿಲ್ಲ. ಇನ್ನು ಆ ಸೂಜಿ ಮತ್ತು ಪಾತ್ರೆ ಯಾಕೆಂದರೆ ಒಂದು ವೇಳೆ ಅಪ್ಪಿತಪ್ಪಿ ಏನಾದರು ಕೆಳಗೆ ಬಿದ್ದರೆ ಅದನ್ನು ಸೂಜಿಯಿಂದ ಚುಚ್ಚಿ ನೀರಿನ ಪಾತ್ರೆಯಲ್ಲಿ ಮುಳುಗಿಸಿ ಸ್ವಚ್ಚಗೊಳಿಸಿ ತಿನ್ನುವುದಕ್ಕಾಗಿತ್ತು”. ಆ ಸೂಕ್ಷ್ಮತೆಯನ್ನು ನನ್ನ ಆಶ್ರಮದಲ್ಲಿ ಪಾಲಿಸುತ್ತಿದ್ದೇನೆ ಎಂದು ಆ ಸ್ವಾಮೀಜಿಯವರು ಹೇಳಿದ್ದರು.

ಹೊಟ್ಟೆ ತುಂಬ ತಿನ್ನುವ ಹಕ್ಕು ನಮಗಿದೆ. ಆದರೆ ತೊಟ್ಟಿಗೆ ಬಿಸಾಡುವ ಹಕ್ಕು ನಮಗಿಲ್ಲ.
ಹಣ ನಿಮ್ಮದು. ಆದರೆ ಸಂಪನ್ಮೂಲ ನಮ್ಮದು. ನಮ್ಮ ದೇಶದ್ದು.
ಅವತ್ತು ಶಿರಾಡಿ ಘಾಟಿಯಲ್ಲಿ ಬ್ಲಾಕಲ್ಲಿ ಸಿಲುಕಿಕೊಂಡವರ ಕಿಸೆಯಲ್ಲಿ ಲಕ್ಷಗಟ್ಟಲೆ ಹಣ ಇದ್ದಿರಬಹುದು. ಆದರೆ ಆ ಹಣ ತಿನ್ನಲಿಕ್ಕಾಗಲ್ಲ. ಸಿಲುಕಿಕೊಂಡವರಿಗೆ ಸ್ವಯಂಸೇವಕರು ತಂದುಕೊಟ್ಟ ಬನ್, ಬ್ರೆಡ್ಡು, ಬಿಸ್ಕಿಟ್ಟೇ ಆಹಾರವಾಗಿತ್ತು. ಕೆಲವೊಮ್ಮೆ ಕೈತುಂಬ ಹಣ ಇದ್ದರೂ ನಾವು ಏನೂ ಮಾಡದ ಅಸಹಾಯಕರಾಗುತ್ತೇವೆ.

ನಮ್ಮ ಮಕ್ಕಳಿಗೆ ಆಹಾರದ ಮಹತ್ವವನ್ನು ಹೇಳಿಕೊಡೋಣ. ಅದನ್ನು ಬೆಳೆಯುವ ರೈತನನ್ನು ಗೌರವಿಸೋಣ. ನಮ್ಮ ಮಕ್ಕಳಿಗೆ ನಾವು ಮಾದರಿಯಾಗೋಣ. ಹಸಿವಿನಿಂದ ಸಾಯುತ್ತಿರುವ ಮಕ್ಕಳ ಕಣ್ಣೀರ ಕಥೆಗಳನ್ನು ಅವರಿಗೆ ಹೇಳೋಣ. ನಮ್ಮ ಮನೆಯಲ್ಲಿ, ಮದುವೆ ಮನೆಗಳಲ್ಲಿ ಆಹಾರ ಪೋಲು ಮಾಡದಂತೆ ಎಚ್ಚರಿಕೆ ವಹಿಸೋಣ. ಪ್ರತಿಷ್ಠೆಗೋಸ್ಕರ ಹತ್ತಿಪ್ಪತ್ತು ಐಟಂ ಗಳನ್ನು ಮಾಡಿ ಅರ್ಧಂಬರ್ಧ ತಿಂದು ಒಂದಷ್ಟು ಪೋಲು ಮಾಡಿ ಪಾಪಕ್ಕೆ ಗುರಿಯಾಗದಿರೋಣ. ಬದಲಿಗೆ ಒಂದೆರಡು ಐಟಮ್ ಗಳನ್ನು ಮಾಡಿ ಹೊಟ್ಟೆ ತುಂಬ ತಿನ್ನಿಸಿ ಪೋಲು ಮಾಡದೆ ಪುಣ್ಯ ಕಟ್ಟಿಕೊಳ್ಳೋಣ.

ಆಹಾರದ ಸಂಪನ್ಮೂಲವನ್ನು ವೃಥಾ ಪೋಲು ಮಾಡಿದರೆ ಯೆಮನಿನ ಮಕ್ಕಳ ಪರಿಸ್ಥಿತಿ ನಮ್ಮ ಮಕ್ಕಳಿಗೂ ಬರಬಹುದು. ಅಲ್ಲಾಹನ ಪರೀಕ್ಷೆ ನಮಗೂ ಎರಗಬಹುದು. ಅಲ್ಲಾಹನು ಜಗತ್ತಿನ ಎಲ್ಲರಿಗೂ ಆಹಾರ ಕೊಡಲಿ. ಆರೋಗ್ಯ ಕೊಡಲಿ. ಆಮೀನ್.

*ಕೊನೆಯದಾಗಿ*

*ಪ್ರತೀ ಸಲ ಊಟಕ್ಕೆ ತಟ್ಟೆ ಹಿಡಿಯುವಾಗ ಹಸಿವಿನಿಂದ ಸಾಯುತ್ತಿರುವ ಮುದ್ದು ಮಕ್ಕಳ ಮುಖ ಆ ತಟ್ಟೆಯಲ್ಲಿ ನಮಗೆ ಕಾಣಲಿ*.