9ನೇ ಅಧಿವೇಶನದ ಕಾರ್ಯಕಲಾಪಗಳ ಸಂಕ್ಷಿಪ್ತ ವರದಿ

ಬೆಂಗಳೂರು, ಫೆಬ್ರವರಿ 05 : 28ನೇ ಜನವರಿಯಿಂದ 05ನೇ ಫೆಬ್ರವರಿ, 2021 ರವರೆಗೆ 7 ದಿನಗಳ ಕಾಲ 33 ಗಂಟೆ 50 ನಿಮಿಷಗಳ ಕಾಲ ಕಾರ್ಯಕಲಾಪ ನಡೆಸಲಾಗಿದೆ.
ದಿನಾಂಕ: 28-01-2021 ರಂದು ರಾಜ್ಯಪಾಲರು ವಿಧಾನಮಂಡಲದ ಉಭಯ ಸದನಗಳ ಸದಸ್ಯರನ್ನುದ್ದೇಶಿಸಿ ಭಾಷಣ ಮಾಡಿರುತ್ತಾರೆ. ವಂದನಾ ನಿರ್ಣಯದ ಮೇಲೆ 20 ಸದಸ್ಯರು 12 ಗಂಟೆ 34 ನಿಮಿಷಗಳ ಕಾಲ ಚರ್ಚಿಸಿದ್ದು, ವಂದನಾ ನಿರ್ಣಯದ ಪ್ರಸ್ತಾವವನ್ನು ದಿನಾಂಕ: 5-2-2021 ರಂದು ಅಂಗೀಕರಿಸಲಾಯಿತು.
ಇತ್ತೀಚೆಗೆ ನಿಧನ ಹೊಂದಿರುವ ವಿಧಾನ ಪರಿಷತ್ತಿನ ಹಾಲಿ ಉಪ ಸಭಾಪತಿಯಾಗಿದ್ದ ಎಸ್.ಎಲ್.ಧರ್ಮೇಗೌಡ, ಹಾಲಿ ವಿಧಾನಸಭೆ ಸದಸ್ಯರು ಹಾಗೂ ಮಾಜಿ ಸಚಿವರಾದ ಮಲ್ಲಪ್ಪ ಚನ್ನವೀರಪ್ಪ ಮನಗೂಳಿ, ಮಾಜಿ ವಿಧಾನಸಭೆ ಸದಸ್ಯರುಗಳಾದ ಶ್ರೀಮತಿ ರೇಣುಕಾ ರಾಜೇಂದ್ರನ್, ಪ್ರೇಮಾನಂದ ಜೈವಂತ ಸುಬ್ರಾಯ, ಬಸವಂತರೆಡ್ಡಿ ಪಾಟೀಲ ಮೋತಕಪಲ್ಲಿ, ಕೇಂದ್ರದ ಮಾಜಿ ಸಚಿವರಾಗಿದ್ದ ಬೂಟಾ ಸಿಂಗ್, ಉದ್ಯಮ ಸಮೂಹಗಳ ಸ್ಥಾಪಕರಾಗಿದ್ದ ಡಾ: ಆರ್.ಎನ್.ಶೆಟ್ಟಿ, ಹಿರಿಯ ತತ್ವಶಾಸ್ತ್ರ ವಿದ್ವಾಂಸರಾಗಿದ್ದ ಡಾ: ಬನ್ನಂಜೆ ಗೋವಿಂದಾಚಾರ್ಯ, ರಾಮಕೃಷ್ಣ ಆಶ್ರಮದ ಅಧ್ಯಕ್ಷರಾಗಿದ್ದ ಹರ್ಷಾನಂದ ಸ್ವಾಮೀಜಿ ಹಾಗೂ ಖ್ಯಾತ ವೈಮಾನಿಕ ವಿಜ್ಞಾನಿ ಡಾ: ರೊದ್ದಂ ನರಸಿಂಹ ಅವರುಗಳಿಗೆ ಸಂತಾಪ ಸೂಚನಾ ನಿರ್ಣಯವನ್ನು ಮಂಡಿಸಿ, ಅಂಗೀಕರಿಸಲಾಗಿದೆ.
ಗಣರಾಜ್ಯೋತ್ಸವದ ಸಂದರ್ಭದಲ್ಲಿ ನಮ್ಮ ರಾಜ್ಯದ ಖ್ಯಾತ ವೈದ್ಯ ವಿಜ್ಞಾನಿ, ಹೃದ್ರೋಗ ತಜ್ಞ ಡಾ. ಬಿ.ಎಂ.ಹೆಗಡೆರವರಿಗೆ ಪದ್ಮವಿಭೂಷಣ, ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಸಾಹಿತಿ ಡಾ:ಚಂದ್ರಶೇಖರ ಕಂಬಾರ ರವರಿಗೆ ಪದ್ಮಭೂಷಣ ಮತ್ತು ರಾಜ್ಯದ ಜಾನಪದ ಅಕಾಡೆಮಿ ಅಧ್ಯಕ್ಷೆ ಮಾತಾ ಮಂಜಮ್ಮ ಜೋಗತಿ, ವೇದವಿಜ್ಞಾನಿ ಡಾ: ಆರ್.ಎಲ್.ಕಶ್ಯಪ್, ಕ್ರೀಡಾಪಟು ಕೆ.ವೈ.ವೆಂಕಟೇಶ್ ಇವರುಗಳು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವ ಬಗ್ಗೆ ಹಾಗೂ ಖ್ಯಾತ ಹಿನ್ನೆಲೆ ಗಾಯಕರಾಗಿದ್ದ ದಿವಂಗತ ಡಾ: ಎಸ್.ಪಿ.ಬಾಲಸುಬ್ರಮಣ್ಯಂ ರವರಿಗೆ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡಿ, ಗೌರವಿಸಲಾಗಿರುವ ಬಗ್ಗೆ ಸದನದ ಪರವಾಗಿ ಅಭಿನಂದನೆಯನ್ನು ಸಲ್ಲಿಸಲಾಗಿದೆ.
ರಾಜ್ಯಪಾಲರಿಂದ ಒಪ್ಪಿಗೆ ಪಡೆದ ವಿಧೇಯಕಗಳ ಬಗ್ಗೆ ಕಾರ್ಯದರ್ಶಿಯವರ ವರದಿಯನ್ನು ಮಂಡಿಸಲಾಗಿದೆ.
ಭಾರತ ಸಂವಿಧಾನದ 151(2)ನೇ ಅನುಚ್ಛೇದದ ಮೇರೆಗೆ, ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರು ನೀಡಿರುವ ಮಾರ್ಚ್ 2019ಕ್ಕೆ ಕೊನೆಗೊಂಡ ವರ್ಷದ ಸಾರ್ವಜನಿಕ ವಲಯ ಉದ್ಯಮಗಳ ಮೇಲಿನ ವರದಿಯನ್ನು (2020ನೇ ವರ್ಷದ ವರದಿ ಸಂಖ್ಯೆ – 5) ಸದನದಲ್ಲಿ ಮಂಡಿಸಲಾಗಿದೆ.
ಕರ್ನಾಟಕ ವಿಧಾನಸಭೆಯ ಭರವಸೆ ಸಮಿತಿಯ 8ನೇ ವರದಿ ಮತ್ತು 11 ಅಧಿಸೂಚನೆಗಳು, 03 ಆಧ್ಯಾದೇಶಗಳು, 42 ವಾರ್ಷಿಕ ವರದಿಗಳು, 20 ಲೆಕ್ಕ ಪರಿಶೋಧನಾ ವರದಿಗಳು, 02 ಅನುಷ್ಠಾನ ವರದಿಗಳು, 02 ತಪಾಸಣಾ ವರದಿಗಳು ಹಾಘೂ 01 ವಿಶೇಷ ವರದಿಯನ್ನು ಮಂಡಿಸಲಾಗಿದೆ. 02 ಅರ್ಜಿಗಳನ್ನು ಒಪ್ಪಿಸಲಾಗಿದೆ. ಈ ಅಧಿವೇಶನದಲ್ಲಿ 14 ವಿಧೇಯಕಗಳನ್ನು ಮಂಡಿಸಲಾಗಿದ್ದು, ಕಳೆದ ಅಧಿವೇಶನದಲ್ಲಿ ಬಾಕಿ ಇದ್ದ 01 ವಿಧೇಯಕವು ಸೇರಿ, ಒಟ್ಟು 14 ವಿಧೇಯಕಗಳನ್ನು ಅಂಗೀಕರಿಸಲಾಗಿದೆ. ನಿಯಮ 60 ರಡಿಯಲ್ಲಿ ನೀಡಿದ್ದ 01 ನಿಲುವಳಿ ಸೂಚನೆಯನ್ನು ನಿಯಮ 69ಕ್ಕೆ ಪರಿವರ್ತಿಸಿ ಚರ್ಚೆಗೆ ಅವಕಾಶ ನೀಡಲಾಗಿದೆ.
ಒಟ್ಟು 1320 ಪ್ರಶ್ನೆಗಳನ್ನು ಸ್ವೀಕರಿಸಲಾಗಿದ್ದು, ಸದನದಲ್ಲಿ ಉತ್ತರಿಸಬೇಕಾಗಿದ್ದ 88 ಪ್ರಶ್ನೆಗಳಿಗೆ ಉತ್ತರಿಸಲಾಗಿದೆ. ಲಿಖಿತ ಮೂಲಕ ಉತ್ತರಿಸುವ 897 ಪ್ರಶ್ನೆಗಳ ಉತ್ತರಗಳನ್ನು ಮಂಡಿಸಲಾಗಿದೆ. ನಿಯಮ 351 ರಡಿಯಲ್ಲಿ 50 ಸೂಚನೆಗಳನ್ನು ಅಂಗೀಕರಿಸಿದ್ದು, 30 ಸೂಚನೆಗಳ ಉತ್ತರಗಳನ್ನು ಸ್ವೀಕರಿಸಲಾಗಿದೆ.
ಗಮನ ಸೆಳೆಯುವ 168 ಸೂಚನೆಗಳ ಪೈಕಿ 69 ಸೂಚನೆಗಳನ್ನು ಚರ್ಚಿಸಲಾಗಿದೆ. ಉತ್ತರಗಳನ್ನು ಮಂಡಿಸಲಾಗಿದೆ. ಶೂನ್ಯ ವೇಳೆಯಲ್ಲಿ ಒಟ್ಟು 13 ಸೂಚನೆಗಳನ್ನು ಚರ್ಚಿಸಲಾಗಿದೆ.
ಈ ಅವಧಿಯಲ್ಲಿ ಸದನವು ಶೇಕಡ 90ಕ್ಕಿಂತ ಹೆಚ್ಚಿನ ಕಾರ್ಯಕಲಾಪಗಳನ್ನು ಪೂರ್ಣಗೊಳಿಸಿರುತ್ತದೆ ಎಂಬುದನ್ನು ತಿಳಿಸಲು ಹರ್ಷವಾಗುತ್ತದೆ.
ಸದನ ನಡೆಸಲು ಸಹಕರಿಸಿದ ಸಭಾ ನಾಯಕರಾದ ಮುಖ್ಯಮಂತ್ರಿಯವರಿಗೆ, ವಿರೋಧ ಪಕ್ಷದ ನಾಯಕರಿಗೆ, ಸಚಿವ ಸಂಪುಟದ ಸದಸ್ಯರಿಗೆ, ಉಪ ಸಭಾಧ್ಯಕ್ಷರಿಗೆ, ಸರ್ಕಾರಿ ಹಾಗೂ ವಿರೋಧ ಪಕ್ಷದ ಮುಖ್ಯ ಸಚೇತಕರಿಗೆ, ಎಲ್ಲಾ ಸದಸ್ಯರುಗಳಿಗೆ, ಮಾಧ್ಯಮ ಪ್ರತಿನಿಧಿಗಳಿಗೆ, ಇಲಾಖಾ ಮೂಖ್ಯಸ್ಥರು, ಅಧಿಕಾರಿ-ಸಿಬ್ಬಂದಿಯವರಿಗೆ, ವಿಧಾನಸಭೆ ಸಚಿವಾಲಯದ ಅಧಿಕಾರಿ ಹಾಗೂ ಸಿಬ್ಬಂದಿಯವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.
ಈಗ ರಾಷ್ಟ್ರಗೀತೆಯೊಂದಿಗೆ ಸದನವನ್ನು ಅನಿರ್ದಿಷ್ಟ ಅವಧಿಗೆ ಮುಂದೂಡುತ್ತಿದ್ದೇನೆ.