UPCL ಪರಿಶೀಲನೆಗೆ ಬಂದಿರುವ
ತಜ್ಞರ ಸಮಿತಿಗೆ
ಬಹಿರಂಗ ಪತ್ರ
– – – – – – – – – —
ಸಾರ್ವಜನಿಕರಿಗೆ ಸಕಾಲದಲ್ಲಿ ಸುದ್ದಿಕೊಡದೆ, ಹಠಾತ್ತಾಗಿ ಉಡುಪಿಗೆ ಬಂದಿಳಿದಿರುವ UPCL ಪರಿಸರ ಹಾನಿ ಅಂದಾಜು ಮಾಡುವ ಪರಿಣತರ ಸಮಿತಿಗೆ ನಾನು ಈ ಪತ್ರವನ್ನು ಬರೆದಿದ್ದು, ಕೇಂದ್ರ ಪರಿಸರ ಮಾಲಿನ್ಯ ಮಂಡಳಿಯ ಪ್ರಾದೇಶಿಕ ನಿರ್ದೇಶಕರಿಗೆ ಇಮೇಲ್ ಮಾಡುವ ಮೂಲಕ ಪತ್ರವನ್ನು ಸಮಿತಿಗೆ ತಲುಪಿಸುತ್ತಿದ್ದೇನೆ.
ಉಡುಪಿ ಜಿಲ್ಲೆಯ ನಾಗರಿಕರು ಮತ್ತು ಸಾಧ್ಯವಾದವರು ಈ ಪತ್ರವನ್ನು ಅಥವಾ ತಮ್ಮ ಹೆಚ್ಚುವರಿ ಅಹವಾಲುಗಳಿದ್ದರೆ ಅವುಗಳನ್ನೂ ಸೇರಿಸಿದ ಪತ್ರವನ್ನು ಅವರಿಗೆ ಇಮೇಲ್ ಮೂಲಕ ಕಳುಹಿಸಿಕೊಡಬೇಕು ಮತ್ತು ಉಡುಪಿ ಜಿಲ್ಲೆಯನ್ನು ಮಾನವ ವಾಸ ಯೋಗ್ಯ ಜಿಲ್ಲೆಯಾಗಿ ಉಳಿಸಿಕೊಳ್ಳುವಲ್ಲಿ ನಿಮ್ಮ ಕೊಡುಗೆಯನ್ನು ನೀಡಬೇಕು ಎಂದು ವಿನಂತಿ ಮಾಡಿಕೊಳ್ಳುತ್ತಿದ್ದೇನೆ.
ಆಸಕ್ತರು ಇಮೇಲ್ ಕಳುಹಿಸಿಕೊಡಬಹುದಾದ ಪ್ರಾದೇಶಿಕ ನಿರ್ದೇಶಕರ ಇಮೇಲ್ ವಿಳಾಸ: cpcbsuresh@gmail.com ; zobangalore.cpcb@nic.in
– – – – – –
ರಾಷ್ಟ್ರೀಯ ಹಸಿರು ಪೀಠ ನೇಮಿಸಿರುವ ತಜ್ಞರ ಸಮಿತಿಗೆ:
ಮಾನ್ಯರೆ,
ನಿನ್ನೆ (ದಿನಾಂಕ 06-12-2020 ರ) ದಿನಪತ್ರಿಕೆ ವರದಿಗಳಿಂದಾಗಿ ತಾವು ಪರಿಣತರ ಸಮಿತಿಯು UPCL ಸಂಸ್ಥೆಯ ಪರಿಸರ ಉಲ್ಲಂಘನೆಗಳಿಂದ ಉಂಟಾಗಿರುವ ಹಾನಿಯ ಬಗ್ಗೆ ವಿಶ್ಲೇಷಣೆ ನಡೆಸಲು ಡಿಸೆಂಬರ್ 07ರಿಂದ 09ರ ತನಕ ಉಡುಪಿಗೆ ಬೇಟಿ ನೀಡುವಿರಿ ಎಂದು ಗೊತ್ತಾದ ಹಿನ್ನೆಲೆಯಲ್ಲಿ ಈ ಪತ್ರವನ್ನು ಬರೆಯುತ್ತಿದ್ದೇನೆ.
ತಮ್ಮ ಸಂಪರ್ಕ ವಿವರಗಳು ತಿಳಿದಿರದಿರುವುದರಿಂದ, ತಮ್ಮ ಈ ಭೇಟಿಯನ್ನು ಸಂಘಟಿಸಿರುವ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ನಿರ್ದೇಶಕರ ಮೂಲಕ ತಮಗೆ ಈ ಪತ್ರವನ್ನು ತಲುಪಿಸಲು ಪ್ರಯತ್ನಿಸುತ್ತಿದ್ದೇನೆ. ಉಡುಪಿಯ ಒಬ್ಬ ನಾಗರಿಕನ ನೆಲೆಯಲ್ಲಿ ನನ್ನ ಕಳವಳಗಳನ್ನು ಈ ಮೂಲಕ ತಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

೧.ಈ ಹಿಂದೆ, ರಾಷ್ಟ್ರೀಯ ಹಸಿರು ಪೀಠವು ದಿನಾಂಕ 14-03-2019ರ ತೀರ್ಪಿನಲ್ಲಿ UPCLನಿಂದ ಪರಿಸರ ಹಾನಿ ಆಗಿರುವುದು ಹೌದೆಂದು ಹೇಳಿದ್ದಲ್ಲದೇ, ಪರಿಸರ ಹಾನಿಗೆ “ಮಾಲಿನ್ಯ ಮಾಡಿದವರೇ ಭರಿಸಬೇಕು” (Polluter pays) ತತ್ವದ ಆಧಾರದಲ್ಲಿ UPCL ಐದು ಕೋಟಿ ರೂಗಳನ್ನು ಮುಂದಾಗಿ ಠೇವಣಿ ಇರಿಸಬೇಕು ಎಂದಿತ್ತು, ಅಲ್ಲದೇ ಆಗಿರುವ ಪರಿಸರ ಹಾನಿಯನ್ನು ಅಂದಾಜಿಸಲು ತಜ್ಞರ ಸಮಿತಿಯೊಂದನ್ನು ರಚಿಸಲು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸೂಚಿಸಿತ್ತು. ಅದರ ಅನ್ವಯ, ಪರಿಸರದ ಸಮೀಕ್ಷೆ ನಡೆಸಿದ ಪರಿಣತರ ಸಮಿತಿಯು, ಆಗಿರುವ ಪರಿಸರ ಹಾನಿಯ ಒಟ್ಟು ಮೊತ್ತ ಕೇವಲ 4.89 ಕೋಟಿ ರೂ.ಗಳೆಂದು ಹೇಳಿತ್ತು. ಇದು ತೀರಾ ಅವೈಜ್ಞಾನಿಕವಾದ ತೀರ್ಮಾನ ಎಂಬುದು ನನ್ನ ಸ್ಪಷ್ಟ ಅಭಿಪ್ರಾಯ.

೨. ಮೇಲೆ ಉಲ್ಲೇಖಿಸಿರುವ 4.89 ಕೋಟಿ ರೂ. ಮೌಲ್ಯದ ಹಾನಿಯನ್ನು ಪರಿಶೀಲಿಸಲು 06-06-2019ರಂದು ಕಾರ್ಖಾನೆಯ ಪರಿಸರಕ್ಕೆ ಭೇಟಿ ನೀಡಿರುವ ಪರಿಣತರ ಸಮಿತಿಯು ಕಾರ್ಖಾನೆಯಿಂದ ಸುತ್ತ 10ಕಿಮೀ ದೂರದ ಪರಿಧಿಯಲ್ಲಿರುವ 29 ಹಳ್ಳಿಗಳಲ್ಲಿ ಪರಿಸರ ಮಾಲಿನ್ಯ ಆಗಿರುವ ಕುರಿತು ಪರಿಶೀಲಿಸಿರುವುದಾಗಿ ತಮ್ಮ ವರದಿಯಲ್ಲಿ ಹೇಳಿದ್ದಾರೆ. ಆದರೆ ವಾಸ್ತವ ಇದಕ್ಕಿಂತ ಭೀಕರವಾಗಿರುವುದನ್ನು ನಾನು ತಮ್ಮ ಗಮನಕ್ಕೆ ತರಬಯಸುತ್ತೇನೆ.

೩. ಕಾರ್ಖಾನೆಯ ಸ್ಥಳದಿಂದ ಅಂದಾಜು 30 ಕಿ.ಮಿ. ದೂರದಲ್ಲಿರುವ ಉಡುಪಿ ನಗರದ ಆಸುಪಾಸಿನಲ್ಲಿ, 03-08-2018 ಮತ್ತು 04-08-2018 ರಂದು ಮಳೆಯ ಜೊತೆ ಬೂದಿಯಂತಹ ವಸ್ತು ಉದುರಿದ್ದು, ಅದನ್ನು ಸುರತ್ಕಲ್ ನ ಪ್ರತಿಷ್ಠಿತ NITK ಸಂಸ್ಥೆ ವಿಶ್ಲೇಷಿಸಿ, ಅದರಲ್ಲಿ ಬೂದಿಯ ಅಂಶ ಇರುವುದನ್ನು ತನ್ನ 14-08-2018ರ ChE/T&C/KSPCB/2018-19 ತಪಾಸಣಾ ವರದಿಯ ಮೂಲಕ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಉಡುಪಿ ಕಚೇರಿಗೆ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಕನಿಷ್ಟ ಐವತ್ತು ಕಿಲೋಮೀಟರ್ ಪರಿಧಿಯ ಒಳಗೆ ಕಾರ್ಖಾನೆಯ ಮಾಲಿನ್ಯದ ಇಲ್ಲಿಯ ತನಕದ ಪ್ರಭಾವವನ್ನು ಅಮೂಲಾಗ್ರವಾಗಿ ವಿಶ್ಲೇಷಿಸುವುದು ಅಗತ್ಯ ಮತ್ತು ಆಗ ಮಾತ್ರ ಆಗಿರುವ ಪರಿಸರ, ಸಾಮಾಜಿಕ ಹಾನಿಗಳ ಸ್ಪಷ್ಟ ಚಿತ್ರಣ ದೊರೆಯುತ್ತದೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ನಾನು ಆಗ್ರಹಪೂರ್ವಕವಾಗಿ ತಮ್ಮನ್ನು ವಿನಂತಿಸುತ್ತೇನೆ.

೪. UPCLಕಾರ್ಖಾನೆಯು 19-12-2012ರಿಂದೀಚೆಗೆ ವಾಣಿಜ್ಯ ಉತ್ಪಾದನೆ ನಡೆಸುತ್ತಿದ್ದು, ಅಲ್ಲಿಂದೀಚೆಗೆ ಕಾರ್ಖಾನೆಯಿಂದ 50ಕಿಲೋಮೀಟರ್ ಪರಿಧಿಯ ಒಳಗೆ ಚರ್ಮ ರೋಗಗಳು, ಅಲರ್ಜಿ, ಆಸ್ತಮಾದಂತಹ ಶ್ವಾಸಕೋಶದ ದೀರ್ಘಕಾಲಿಕ ತೊಂದರೆಗಳು ಮತ್ತು ಮಾಲಿನ್ಯ ಮೂಲದ ಕ್ಯಾನ್ಸರ್ ಕಾಯಿಲೆಯ ಪ್ರಮಾಣ ತೀವ್ರವಾಗಿ ಹೆಚ್ಚಿದ್ದು, ಈ ಬಗ್ಗೆ ಈ ತನಕ ಯಾವುದೇ ವ್ಯವಸ್ಥಿತ ವಿಶ್ಲೇಷಣೆ ನಡೆದಿಲ್ಲ. ಇಂತಹದೊಂದು ವಿಶ್ಲೇಷಣೆ ನಡೆದಲ್ಲಿ, ಸಾವಿರಾರು ಕುಟುಂಬಗಳಿಗೆ ಕಾರ್ಖಾನೆಯ ಮಾಲಿನ್ಯದಿಂದ ಉಂಟಾಗಿರುವ ಹಾನಿ ತಮ್ಮ ಗಮನಕ್ಕೆ ಬರಲಿದೆ. ಈ ಅಂಶವನ್ನು ಪರಿಗಣನೆಗೆ ತೆಗೆದುಕೊಳ್ಳದೇ ಮಾಲಿನ್ಯದ ಹಾನಿಯ ಅಂದಾಜನ್ನು ಲೆಕ್ಕಾಚಾರ ಮಾಡಲು ಹೊರಡುವುದು ತೀರಾ ಹಾಸ್ಯಾಸ್ಪದ ಎನ್ನಿಸುತ್ತದೆ.

೫. ಕಾರ್ಖಾನೆಯ ತೀವ್ರ ಪರಿಣಾಮಗಳಿರುವ ಅಂದಾಜು 15ಕಿಲೋಮೀಟರ್ ಪರಿಧಿಯಲ್ಲಿ, ಜೀವನ ಗುಣಮಟ್ಟ ಕುಸಿದಿರುವುದರಿಂದಾಗಿ, ಅಲ್ಲಿ ಗದ್ದೆ-ತೋಟ-ಆಸ್ತಿ ಹೊಂದಿರುವ ಹಲವಾರು ಕುಟುಂಬಗಳು ಅಲ್ಲಿಂದ ಉಡುಪಿ-ಮಂಗಳೂರು ನಗರಗಳಿಗೆ ವಲಸೆ ಹೋಗಿದ್ದಾರೆ. ಇದರ ಪರಿಣಾಮವಾಗಿ ಆ ಪ್ರದೇಶದಲ್ಲಿ ರಿಯಲ್ ಎಸ್ಟೇಟ್ ಮೌಲ್ಯ ತೀವ್ರವಾಗಿ ಕುಸಿದಿದೆ. ಈ ಹಿನ್ನೆಲೆಯಲ್ಲಿ ಆ ಪ್ರದೇಶದಲ್ಲಿ ಆಸ್ತಿ ಮಾರಾಟ ಆಗಿರುವ ಪ್ರಮಾಣ, ಅಲ್ಲಿಂದ ಉಡುಪಿ-ಮಂಗಳೂರು ನಗರಗಳಿಗೆ ವಲಸೆ ಬಂದಿರುವ ಕುಟುಂಬಗಳ ಪ್ರಮಾಣ ಮತ್ತು ಈ ವಲಸೆಯಿಂದಾಗಿ ಹಾಳುಬಿದ್ದಿರುವ ಗದ್ದೆ, ತೋಟ, ನಷ್ಟವಾಗಿರುವ ಜಾನುವಾರುಗಳ, ಕೊರೋಷನ್ ನಿಂದಾಗಿ ಹಾನಿಯಾಗಿರುವ ಖಾಸಗಿ ವಾಹನಗಳ ಪ್ರಮಾಣದ ವ್ಯವಸ್ಥಿತ ಅಧ್ಯಯನ ನಡೆದರೆ, ಆಗಿರುವ ಸಾಮಾಜಿಕ ನಷ್ಟ ಸ್ಪಷ್ಟವಾಗಿ ಬೆಳಕಿಗೆ ಬರಲಿದೆ. ಈ ಕುರಿತು ಅಧ್ಯಯನ ನಡೆಸದೆ ಕಾರ್ಖಾನೆ ಮಾಡಿರುವ ಪರಿಸರ ಹಾನಿಯ ಪ್ರಮಾಣವನ್ನು ಅಂದಾಜಿಸುವುದು ತೀರಾ ಅವೈಜ್ಞಾನಿಕ ಅನ್ನಿಸುತ್ತದೆ.

೬. ಕಾರ್ಖಾನೆಯ ಮಲಿನ ನೀರನ್ನು ಸಮುದ್ರಕ್ಕೆ ಬಿಡಲಾಗುತ್ತಿದ್ದು, ಕಳೆದ ಎಂಟು ವರ್ಷಗಳಲ್ಲಿ, ಈ ಪರಿಸರದ ಮೀನುಗಾರಿಕೆಯಲ್ಲಿ ಆಗಿರುವ ಏರಿಳಿತಗಳ ಅಧ್ಯಯನ ನಡೆಸದೆ ಪರಿಸರಕ್ಕಾಗಿರುವ ಹಾನಿಯನ್ನು ಅಂದಾಜಿಸುವುದು ಸಮಂಜಸವಾಗುವುದಿಲ್ಲ. ಯಾಕೆಂದರೆ, ಕಳೆದ ಕೆಲವು ವರ್ಷಗಳಿಂದ ಕರಾವಳಿಯ ಸಾಗರ ತೀರದಲ್ಲಿ ಅಸಹಜ ಪರಿಸರ ಬದಲಾವಣೆಗಳು, ಸಾಗರೋತ್ಪನ್ನಗಳ ಪ್ರಮಾಣದಲ್ಲಿ ಭಾರೀ ಕುಸಿತ ಉಂಟಾಗಿರುವುದನ್ನು ಪತ್ರಿಕೆಗಳಲ್ಲಿ ಓದಿದ್ದೇನೆ. ಅದಕ್ಕೆ ಕಾರಣಗಳಲ್ಲಿ ಕಾರ್ಖಾನೆಯ ಮಾಲಿನ್ಯದ ಪಾತ್ರ ಇದೆಯೇ ಎಂಬುದನ್ನು ಕಂಡುಕೊಳ್ಳುವುದು ತಮ್ಮ ಸಮಿತಿಯ ಜವಾಬ್ದಾರಿ ಎಂದು ನಾನು ಭಾವಿಸಿದ್ದೇನೆ.

೭. ಇಲ್ಲಿ ಕಾರ್ಖಾನೆ ಆರಂಭ ಮಾಡಿದಾಗ, ಪರಿಸರಕ್ಕೆ ಹಾನಿ ತೀರಾ ಕಡಿಮೆ ಪ್ರಮಾಣದಲ್ಲಿ ಇರಿಸುವುದಕ್ಕಾಗಿ ತೊಳೆದು ಶುಚಿಗೊಳಿಸಲಾದ ಕಲ್ಲಿದ್ದಲು ಬಳಸಲಾಗುತ್ತದೆ ಎಂದು ಕಾರ್ಖಾನೆಯೆ ಕಡೆಯಿಂದ ಬಂದ ಹೇಳಿಕೆಯನ್ನು ಪತ್ರಿಕೆಗಳಲ್ಲಿ ಗಮನಿಸಿದ್ದೇನೆ. ಆದರೆ ಇತ್ತೀಚೆಗೆ, ಕೇಂದ್ರ ಸರ್ಕಾರವು ದೇಶೀ ಕಲ್ಲಿದ್ದಲು ಬಳಕೆಗೆ ತನ್ನ ನೀತಿಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡಿದ್ದು, ಕಲ್ಲಿದ್ದಲನ್ನು ತೊಳೆದು ಬಳಸುವ ನೀತಿಯನ್ನು ಸಡಿಲಿಸಿದೆ ಎಂಬುದು ತಮ್ಮ ಗಮನಕ್ಕೆ ಬಂದಿದೆ ಎಂದುಕೊಂಡಿದ್ದೇನೆ. ಈ ಹಿನ್ನೆಲೆಯಲ್ಲಿ ಇಡಿಯ ಕಾರ್ಖಾನೆಯ ಒಟ್ಟು ಕಾರ್ಯ ಸಾಮರ್ಥ್ಯ ಮತ್ತು ಈ ಪರಿಸರದ ಧಾರಣ ಸಾಮರ್ಥ್ಯವನ್ನು ಹೊಸದಾಗಿ ಪರಿಗಣನೆಗೆ ತಗೆದುಕೊಳ್ಳಬೇಕಾಗುತ್ತದೆ.

೮. ಉಡುಪಿ ನಗರಕ್ಕೆ ಈಗಾಗಲೇ ಕುಡಿಯುವ ನೀರಿನ ಕೊರತೆ ತೀವ್ರವಾಗಿದ್ದು, ಪರ್ಯಾಯ ವ್ಯವಸ್ಥೆಗಳಿಗಾಗಿ ಆಡಳಿತ ವ್ಯವಸ್ಥೆ ತಡಕಾಡುತ್ತಿದೆ. ಇಂತಹ ಸನ್ನಿವೇಶದಲ್ಲಿ ಕಾರ್ಖಾನೆ ದೊಡ್ಡ ಪ್ರಮಾಣದಲ್ಲಿ ನೀರನ್ನು ತನ್ನ ಉತ್ಪಾದನೆಗಾಗಿ ವಿನಿಯೋಗಿಸುತ್ತಿದೆ. ಇದು ಕೂಡ ಈ ಪರಿಸರಕ್ಕಾದ ನಷ್ಟ ಎಂದೇ ಪರಿಗಣಿತವಾಗಬೇಕು. ಅಲ್ಲದೇ ಈ ಪ್ರದೇಶದ ಪರಿಸರ ಧಾರಣಾ ಸಾಮರ್ಥ್ಯದ ಸವಿವರ ಅಧ್ಯಯನ ಆಗದೆ, ಕಾರ್ಖಾನೆಯ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವ, ಗಾತ್ರವನ್ನು ಹಿಗ್ಗಿಸುವ ಯಾವುದೇ ಯೋಜನೆಗಳಿಗೆ ಖಂಡಿತಕ್ಕೂ ಅವಕಾಶ ಕೊಡಬಾರದು.

ಇಂತಹ ಹಲವು ಆಯಾಮಗಳಿರುವ ಸಮಸ್ಯೆಯೊಂದನ್ನು ವಿಶ್ಲೇಷಿಸಲು ತಮ್ಮ ಸಮಿತಿ ಉಡುಪಿಗೆ ಭೇಟಿ ನೀಡುವ ಉದ್ದೇಶ ಇದ್ದಾಗ, ಅದನ್ನು ಬಹಳ ಮುಂಚಿತವಾಗಿ ಪ್ರಚಾರಪಡಿಸಿ, ಎಲ್ಲಸ್ಟೇಕ್ ಹೋಲ್ಡರ್ ಗಳ ಗಮನಕ್ಕೆ ಈ ವಿಚಾರವನ್ನು ತಂದು, ಬಳಿಕ ಭೇಟಿ ನೀಡಬೇಕಿತ್ತು. ಆದರೆ, ಇದನ್ನೆಲ್ಲ ಮುಚ್ಚಿಟ್ಟು, ಕೊನೆಯ ಕ್ಷಣದಲ್ಲಿ ತಮ್ಮ ಭೇಟಿಯನ್ನು ಮಾಧ್ಯಮಗಳಿಗೆ ಬಹಿರಂಗಪಡಿಸುವ ಉದ್ದೇಶ ಸ್ಪಷ್ಟವಾಗಲಿಲ್ಲ. ಅದಲ್ಲದೇ ಸಾರ್ವಜನಿಕರಿಗೆ ತಾವು ಎಲ್ಲಿ ಲಭ್ಯರಿರುತ್ತೀರಿ, ಯಾವ ಯಾವ ಪ್ರದೇಶಗಳಲ್ಲಿ ಪ್ರವಾಸ ಮಾಡಲಿದ್ದೀರಿ, ಏನನ್ನೆಲ್ಲ ಪರಿಶೀಲಿಸಲಿದ್ದೀರಿ ಎಂಬ ವಿಚಾರಗಳಾಗಲೀ, ಈ ಪ್ರವಾಸದ ವೇಳೆ ತಮ್ಮ ಕಾರ್ಯಕ್ರಮಗಳೇನು ಎಂಬುದಾಗಲೀ ಸಾರ್ವಜನಿಕರಿಗೆ ಲಭ್ಯವಿಲ್ಲದ ಕಾರಣದಿಂದಾಗಿ ನಾನು ತಮಗೆ ಈ ಪತ್ರವನ್ನು ಬರೆಯುತ್ತಿದ್ದೇನೆ. ಈ ವಾಸ್ತವಗಳ ಹಿನ್ನೆಲೆಯಲ್ಲಿ ತಾವು ಮತ್ತೊಮ್ಮೆ ಉಡುಪಿಗೆ ಸಾರ್ವಜನಿಕ ತಿಳಿವಳಿಕೆ ನೀಡಿ ಭೇಟಿ ಕೊಡಬೇಕೆಂಬುದು ಉಡುಪಿಯ ನಾಗರಿಕರ ಪರವಾಗಿ ನನ್ನ ಆಗ್ರಹಪೂರ್ವಕ ಕೋರಿಕೆ. ತಾವು ತಮ್ಮ ಈ ಅಧ್ಯಯನ ಪ್ರವಾಸ ಮತ್ತು ಆ ಬಳಿಕದ ವಿಶ್ಲೇಷಣಾ ಪರಿಗಣನೆಗಳ ವೇಳೆಯಲ್ಲಿ ಈ ಎಲ್ಲ ವಿಚಾರಗಳನ್ನು ಪರಿಗಣಿಸಿ ನಿರ್ಧಾರ ತೆಗೆದುಕೊಳ್ಳಬೇಕು ಮತ್ತು ಗೌರವಾನ್ವಿತ ರಾಷ್ಟ್ರೀಯ ಹಸಿರು ಪೀಠದ ಅವಗಾಹನೆಗೆ ಈ ವಿಚಾರಗಳನ್ನೆಲ್ಲ ತರಬೇಕು ಎಂದು ಕೋರಿಕೊಳ್ಳುತ್ತಿದ್ದೇನೆ.

ವಿಶ್ವಾಸಗಳೊಂದಿಗೆ,
ರಾಜಾರಾಂ ತಲ್ಲೂರು
#ಉಡುಪಿಪಾಡು #ಆಪತ್ತಿನಕಥೆಗಳು #ಬೂದಿಮಳೆ